Sunday, 24th November 2024

ಎರಡನೇ ಆಂಗ್ಲೋ ಮೈಸೂರು ಯುದ್ದ

ಡಾ.ಉಮೇಶ್ ಪುತ್ರನ್

(ಸ್ವಾತಂತ್ರ‍್ಯದ ಆ ಕ್ಷಣಗಳು) – ಭಾಗ – 6

ಎರಡನೇ ಆಂಗ್ಲೋ – ಮೈಸೂರು ಯುದ್ಧದ ಸಂದರ್ಭದಲ್ಲಿ ಗುಂಟೂರಿನಲ್ಲಿ ನಡೆದ ಬ್ರಿಟೀಷ್ ಸೈನಿಕರ ಮಾರಣ ಹೋಮದಿಂದ ಎಚ್ಚೆತ್ತುಕೊಂಡ ಇಂಗ್ಲಿಷರು, ಸೇನಾಧಿಪತಿ ಐರ್ ಕೂಟ್ ನೇತೃತ್ವದಲ್ಲಿ ಸೇನೆಯನ್ನು ಮದ್ರಾಸಿಗೆ ಕಳುಹಿಸಿಕೊಟ್ಟರು.

ಕೆಲವು ಕಡೆ ಹೈದರಾಲಿ ಸೋತರೂ ಕೂಡ, ಟಿಪ್ಪು ತಂಜಾವೂರನ್ನು ಬ್ರಿಟಿಷರಿಂದ ವಶಪಡಿಸಿಕೊಂಡ. 1782 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಸೇನೆಯನ್ನು
ಕೇರಳದ ತಲಶೇರಿಗೆ ಕಳುಹಿಸಿ, ಅಲ್ಲಿಂದ ಹೈದರ್ ಆಲಿ ಮೇಲೆ ಆಕ್ರಮಣ ಮಾಡುವ ಸಿದ್ಧತೆಯನ್ನು ಬ್ರಿಟಿಷರು ಮಾಡಿದರು. ಇದನ್ನು ಅರಿತ ಟಿಪ್ಪುಸುಲ್ತಾನ ತನ್ನ ಸೇನೆಯೊಂದಿಗೆ ತಲಶೇರಿಗೆ ಆಗಮಿಸಿದ. ಆದರೆ ಅಷ್ಟರ ಹೈದರ್ ಆಲಿ ಕ್ಯಾನ್ಸರ್‌ನಿಂದ ಮರಣಹೊಂದಿದ ಸುದ್ದಿ ಬಂತು. ಟಿಪ್ಪು ಶ್ರೀರಂಗಪಟ್ಟಣಕ್ಕೆ ವಾಪಸಾದ.
ಇದನ್ನು ತಿಳಿದ ಜನರಲ್ ರಿಚರ್ಡ್ ಮ್ಯಾಥ್ಯು ತನ್ನ ಸೇನೆಯೊಂದಿಗೆ ಶ್ರೀರಂಗಪಟ್ಟಣದ ಮೇಲೆ ಆಕ್ರಮಣ ಮಾಡಲು ಬಂದ. ಬಿದನೂರಿನ ಸಮೀಪ ಆತನ ಸೇನೆಯನ್ನು ಸೋಲಿಸಿ, ಅವನ ಸಮೇತ ಸುಮಾರು ಇಪ್ಪತ್ತು ಸೇನಾಧಿಕಾರಿಗಳನ್ನು ಸೆರೆಹಿಡಿದು, ಜೈಲಿಗೆ ತಳ್ಳಿ, ಅಲ್ಲಿ ಅವರಿಗೆ ವಿಷವುಣಿಸಿ ಸಾಯಿಸಲಾಯಿತು.

1783ರ ಮಾರ್ಚ್‌ನಲ್ಲಿ ಇಂಗ್ಲೀಷ್ ಸೇನೆ ಮಂಗಳೂರನ್ನು ವಶಪಡಿಸಿಕೊಂಡಿತು. ಕೂಡಲೇ ಟಿಪ್ಪು ತನ್ನ ಸೇನೆ ಯನ್ನು ತೆಗೆದುಕೊಂಡುಹೋಗಿ ಪುನಹ ಮಂಗಳೂರನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ. ಸುಮಾರು ಎಂಟು ತಿಂಗಳ ಕಾಲ ಇಂಗ್ಲಿಷ್ ಸೇನೆಯನ್ನು ಸೆರೆ ಹಿಡಿದ. ಪ್ರಾರಂಭದಲ್ಲಿ ಇದ್ದ 3000 ಸೈನಿಕರಲ್ಲಿ ಕಡೆಗೆ ಉಳಿದವರು ೮೫೦ ಮಂದಿ ಮಾತ್ರ. ಉಳಿದವರು ಹಸಿವೆಯಿಂದ ಮತ್ತು ಸ್ಕರ್ವಿ ರೋಗದಿಂದ ಸತ್ತರು.

ಇಂಗ್ಲೆಂಡಿನ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿಗಳಿಂದ ಯುದ್ಧವನ್ನು ನಿಲ್ಲಿಸಿ ಟಿಪ್ಪುವಿನೊಂದಿಗೆ ರಾಜಿ ಮಾಡಿಕೊಳ್ಳುವಂತೆ ಆದೇಶ ಬಂತು. ಇದರಂತೆ ಮಾರ್ಚ್ 11, 1784 ರಲ್ಲಿ ಮಂಗಳೂರು ಒಪ್ಪಂದ ಏರ್ಪಟ್ಟಿತು. ಭಾರತದ ಇತಿಹಾಸದಲ್ಲಿ ಈ ಒಪ್ಪಂದ ಬಹಳ ಪ್ರಮುಖವಾಗಿದೆ. ಏಕೆಂದರೆ ಮೊದಲೆಲ್ಲ ಒಪ್ಪಂದ ಏರ್ಪಡುವಾಗ ಷರತ್ತುಗಳನ್ನು ಬ್ರಿಟಿಷರೇ ಹಾಕುತ್ತಿದ್ದರು. ಆದರೆ ಈ ಬಾರಿ ಕೆಲವೊಂದು ಷರತ್ತುಗಳನ್ನು ಟಿಪ್ಪುವೇ ವಿಧಿಸಿ ತನ್ನ ಕೈ ಮೇಲಾಗುವಂತೆ ನೋಡಿಕೊಂಡ. ಹೀಗೆ ಎರಡನೇ ಆಂಗ್ಲೋ-ಮೈಸೂರು ಯುದ್ಧವು ೧೭೮೦ ರಿಂದ ೧೭೮೪ ರ ತನಕ ನಡೆಯಿತು.

ಮೂರನೇ ಆಂಗ್ಲೋ ಮೈಸೂರು ಯುದ್ಧ

ಮೂರನೇಯ ಆಂಗ್ಲೋ-ಮೈಸೂರು ಯುದ್ಧವು ೧೭೮೯ ರಿಂದ ೧೭೯೨ರ ಮಧ್ಯ ನಡೆಯಿತು. ಎರಡನೆಯ ಆಂಗ್ಲೋ ಮೈಸೂರು ಯುದ್ಧ ದಲ್ಲಿ ಸೆರೆ ಹಿಡಿದ ಇಂಗ್ಲೀಷ್ ಸೈನಿಕರನ್ನು ಒಪ್ಪಂದದ ಪ್ರಕಾರ ಟಿಪ್ಪು ಬಿಡಬೇಕಾಗಿತ್ತು. ಆದರೆ ಅವನು ಬಿಡಲಿಲ್ಲ. ಆದ್ದರಿಂದ ಈಸ್ಟ್ ಇಂಡಿಯಾ ಕಂಪನಿಯು ತನ್ನ ಮಿತ್ರರ ಪಟ್ಟಿಯಿಂದ ಟಿಪ್ಪುಸುಲ್ತಾನನ ಹೆಸರನ್ನು ಕೈಬಿಟ್ಟಿತು.

ಲಾರ್ಡ್ ಕಾರ್ನ್ವಾಲಿಸ್ ಆಗ ಭಾರತದ ಎರಡನೇ ಗವರ್ನರ್ ಜನರಲ್ ಹಾಗೂ ಈಸ್ಟ್ ಇಂಡಿಯಾ ಕಂಪನಿಯ ಕಮಾಂಡರ್ ಇನ್ ಚೀಫ್ ಆಗಿದ್ದ. ಈತನು ಅಮೆರಿಕಾದ ಸ್ವಾತಂತ್ರ್ಯ ಸಮರದಲ್ಲಿ ಭಾಗವಹಿಸಿದ ಅನುಭವಿ ನಾಯಕ. ಇದಲ್ಲದೇ ಟಿಪ್ಪು ಸುಲ್ತಾನನಿಗೆ -ಂಚರು ನಿರೀಕ್ಷಿಸಿದಷ್ಟು ಬೆಂಬಲವನ್ನು ನೀಡಲಿಲ್ಲ. ಮೂರು ವರ್ಷಗಳವರೆಗೆ ಅನೇಕ ಸರಣಿ ಯುದ್ಧಗಳು ನಡೆದವು. ಮರಾಠರು, ತಿರುವಾಂಕೂರು ರಾಜ ಮತ್ತು ಹೈದರಾಬಾದಿನ ನಿಜಾಮ ಬ್ರಿಟಿಷರಿಗೆ ಸಹಾಯ
ಮಾಡಿದರು.

ಟಿಪ್ಪು ಸುಲ್ತಾನ್ ಫ್ರೆಂಚರನ್ನು ಕೂಡಿಕೊಂಡು ಬ್ರಿಟಿಷರ ಅಧೀನದಲ್ಲಿರುವ ತಿರುವಾಂಕೂರು ಸಂಸ್ಥಾನದ ಮೇಲೆ ದಾಳಿ ಮಾಡಿದ. ಪ್ರಾರಂಭದಲ್ಲಿ ವಿಜಯೀ ಆದರೂ ಕೂಡ ನಂತರ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ೧೭೯೦ ರಲ್ಲಿ ೩೦ ಸಾವಿರ ಸೈನಿಕರು ಇರುವ ಮರಾಠರು, ಮೈಸೂರು ಪ್ರಾಂತ್ಯದ ಮೇಲೆ ದಂಡೆತ್ತಿ ಬಂದು ತುಂಗಭದ್ರ ನದಿ ತೀರದವರೆಗೆ ಬಂದರು. ೨೫ ಸಾವಿರ ಸೈನಿಕರು ಇರುವ ಈಸ್ಟ್ ಇಂಡಿಯಾ ಕಂಪನಿಯ ಸೈನಿಕರು ಪೂನಾದಿಂದ ಹೊರಟು ಕರ್ನೂಲಿಗೆ ಬಂದರು. ಇನ್ನೊಂದು ಕಡೆಯಿಂದ ಹೈದರಾಬಾದಿನ ನಿಜಾಮನ ಸೈನ್ಯ ಕೂಡ ಮೈಸೂರು ಪ್ರಾಂತ್ಯದ ಕಡೆ ದಂಡೆತ್ತಿ ಬಂತು.

ಕಾರ್ನವಾಲಿಸ್ ಮೊದಲು ಬೆಂಗಳೂರನ್ನು ವಶಪಡಿಸಿಕೊಂಡ. ನಂತರ ಅಲ್ಲಿಂದ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದ. ಆದರೆ ಕ್ಲಪ್ತ ಸಮಯದಲ್ಲಿ ಆತನಿಗೆ ಮರಾಠರ ಹಾಗೂ ನಿಜಾಮನ ಬೆಂಬಲ ಸಿಗಲಿಲ್ಲ. ಅವರು ಆಗಮಿಸುವುದು ತಡವಾಯಿತು. ಟಿಪ್ಪು ಸೈನ್ಯವು ಕಾರ್ನವಾಲಿಸ್ ಸೈನ್ಯವನ್ನು ಹಿಮ್ಮೆಟ್ಟಿತು. ಇದು ಇಂಗ್ಲಿಷ್ ಸೈನ್ಯದ ವಿಫಲ ಪ್ರಯತ್ನ ಎನಿಸಿತು. ೧೭೯೨ರ ಬ್ರವರಿ ೨೩ರಂದು ಪುನಹ ಇಂಗ್ಲಿಷ್ ಸೈನ್ಯ ಹಾಗೂ ಮರಾಠರು ಶ್ರೀರಂಗಪಟ್ಟಣದ ಮೇಲೆ ದಾಳಿ
ಮಾಡಿದರು. ಸೋಲು ಖಚಿತ ಎಂದು ಭಾವಿಸಿ ಟಿಪ್ಪು ಶಾಂತಿ ಒಪ್ಪಂದಕ್ಕೆ ತಯಾರಾದ. ಶ್ರೀರಂಗಪಟ್ಟಣ ಒಪ್ಪಂದವು ಮಾರ್ಚ್ ೧೭, ೧೭೯೨ರಲ್ಲಿ ನಡೆಯಿತು.
ಒಪ್ಪಂದವನ್ನು ಟಿಪ್ಪು ಪಾಲಿಸುವ ಸಲುವಾಗಿ ತನ್ನ ಇಬ್ಬರು ಮಕ್ಕಳನ್ನು ತಮಗೆ ಹಸ್ತಾಂತರಿಸಬೇಕೆಂದು ಇಂಗ್ಲೀಷರು ಬೇಡಿಕೆ ಇಟ್ಟರು. ಎರಡೂ ಸೇನೆಯ ಕಡೆಯಿಂದ ನಡೆದ ದೊಡ್ಡ ಸಮಾರಂಭದಲ್ಲಿ ಟಿಪ್ಪು ತನ್ನ ಮಕ್ಕಳಾದ ೧೩ ವರ್ಷ ಪ್ರಾಯದ ಫತೆ ಅಲಿ ಹಾಗೂ ೧೧ ವರ್ಷ ಪ್ರಾಯದ ಅಬ್ದುಲ್ ಖಾಲಿಕ್
ನನ್ನು ಲಾರ್ಡ್ ಕಾರ್ನವಾಲಿಸ್‌ಗೆ ಹಸ್ತಾಂತರಿಸಿದ.

ಇಡೀ ಮೈಸೂರು ಪ್ರಾಂತ್ಯವನ್ನು ಎರಡು ಭಾಗ ಮಾಡಲಾಯಿತು. ಒಂದು ಭಾಗವನ್ನು ಮರಾಠರು ಮತ್ತು ನಿಜಾಮರು ಹಂಚಿಕೊಂಡರು. ಬೆಂಗಳೂರಿನಿಂದ ತುಂಗಭದ್ರಾ ನದಿಯವರೆಗೆ ಮರಾಠರು, ಕೃಷ್ಣಾನದಿಯಿಂದ ಪೆನ್ನಾರ್ ನದಿಯವರೆಗೆ ನಿಜಾಮರು ಪಡೆದರು. ತಿರುವಾಂಕೂರಿನಿಂದ ಕಾಳಿ ನದಿಯವರೆಗಿನ ಪಶ್ಚಿಮ ಕರಾವಳಿ ಬ್ರಿಟಿಷರ ಪಾಲಿಗೆ ಬಂತು.