Thursday, 12th December 2024

ಬದುಕಿನಲ್ಲಿ ಮರು ಸಾಂಗತ್ಯ

ಸಂಗಾತಿಯನ್ನು ಆಕಸ್ಮಿಕವಾಗಿ ಕಳೆದುಕೊಳ್ಳುವ ವ್ಯಕ್ತಿಗೆ ಮರುಮದುವೆಯ ಆಯ್ಕೆ ಇದ್ದರೂ, ಆ ನಿರ್ಧಾರ ತೆಗೆದು ಕೊಳ್ಳಲು ನಮ್ಮ ಸಮಾಜ ಯಾವ ಮಟ್ಟದಲ್ಲಿ ಸಹಕರಿಸುತ್ತಿದೆ?

ಡಾ.ಕೆ.ಎಸ್. ಪವಿತ್ರ

ದಿನಗಳು ಬದಲಾಗುತ್ತಿವೆ. ದಿನಗಳು ಕಳೆದಂತೆ, ಕಾಲ ಬದಲಾದಂತೆ ನಮ್ಮ ಧೋರಣೆಗಳೂ ಬದಲಾಗುತ್ತಿವೆ. ಯಾವುದರ ಬಗೆಗೆ? ಉಡುಗೆ, ತೊಡುಗೆ, ಎಲ್ಲದರಲ್ಲಿಯೂ. ಜೊತೆಗೇ ಮರು ಮದುವೆಯ ಬಗೆಗೂ! ಇತ್ತೀಚೆಗೆ ನನ್ನ ಸಂಬಂಧಿಯೊಬ್ಬರು ತಮ್ಮ 50ನೆಯ ವಯಸ್ಸಿನಲ್ಲಿ ಪತ್ನಿಯನ್ನು ಅಪಘಾತವೊಂದರಲ್ಲಿ ಕಳೆದುಕೊಂಡರು.

ಒಬ್ಬ ಬೆಳೆದು ನಿಂತ ಮಗ. ಆತನೂ ಓದಲು ಮನೆಯಿಂದ ದೂರ. ಈ ವ್ಯಕ್ತಿ ಮಾಡಿದ ಮಹತ್ವದ ನಿರ್ಧಾರವೆಂದರೆ, ಪತಿಯನ್ನು ಕಳೆದುಕೊಂಡ ಮಧ್ಯ ವಯಸ್ಸಿನ, ಬೆಳೆದ ಮಗಳಿರುವ ಮಹಿಳೆಯೋರ್ವರನ್ನು ಮದುವೆಯಾದದ್ದು. ಸಂಬಂಧಿಕರೆಲ್ಲರೂ ಈ ವಿಷಯದ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಸಂಗಾತಿಯ ಮರಣಾ ನಂತರ ನಡೆಯುವ ವಿವಾಹಗಳು ಹೆಚ್ಚಿದಂತೆಯೇ,
ವಿಚ್ಛೇದನಾನಂತರದ ವಿವಾಹಗಳೂ ಭಾರತೀಯ ಸಮಾಜದಲ್ಲಿ ಹೆಚ್ಚುತ್ತಿವೆ.

ಹಾಗಿದ್ದರೆ ಮನಸ್ಸಿಗಿರುವ ‘ಸಾಂಗತ್ಯ’ದ ಅವಶ್ಯಕತೆಯೇ ಮರು ಮದುವೆಗಳಿಗೆ ತಳಹದಿಯೇ? ನಮ್ಮ ಸಮಾಜ ಯಾವ ರೀತಿಯಲ್ಲಿ ಇವುಗಳಿಗೆ ಸಕಾರಾತ್ಮಕವಾಗಿ ತೆರೆದುಕೊಳ್ಳಬೇಕು? ಒಂದಷ್ಟು ಚಿಂತನೆ ಇಲ್ಲಿದೆ. ಹಿಂದೆ, ಭಾರತದಲ್ಲಿ ಬಾಲ್ಯ ವಿವಾಹಗಳು
ನಡೆಯುತ್ತಿದ್ದವು. ಆರೋಗ್ಯದ ಸಮಸ್ಯೆಗಳಿಂದ, ವಿವಿಧ ಕಾರಣಗಳಿಂದ ಒಬ್ಬ ಸಂಗಾತಿ ಬೇಗನೆ ಸಾಯುವ ಸಾಧ್ಯತೆಯಿರುತ್ತಿತ್ತು. ಬಾಲವಿಧವೆಯರು ಒಂಟಿತನದಲ್ಲಿ ತಮ್ಮ ಜೀವನ ಸವೆಸುತ್ತಿದ್ದರು. ಪತ್ನಿ ಸತ್ತರೆ, ವಿಧುರರು ಮತ್ತೊಂದು ಮದುವೆಯಾಗುವುದು, ಎಷ್ಟೋ ಬಾರಿ ಸತ್ತ ಮಹಿಳೆಯ ತಂಗಿಯನ್ನೇ ಮದುವೆ ಯಾಗುವುದು ರೂಢಿಯಾಗಿತ್ತು.

ಆದರೆ ಇವೆಲ್ಲವೂ ಅನುಕೂಲದ ಮದುವೆಗಳಾಗಿರುತ್ತಿದ್ದವು. ಇವು ಪ್ರಾಥಮಿಕವಾಗಿ ಮಕ್ಕಳ ಪಾಲನೆ-ಸಂಸಾರ ನಿರ್ವಹಣೆಗೆ ಸಂಬಂಧ ಪಟ್ಟಿರುತ್ತಿದ್ದವು ಎಂಬುದು ಗಮನಾರ್ಹ. ಬ್ರಹ್ಮಸಮಾಜ -ಆರ್ಯ ಸಮಾಜದಂತಹ ಚಳುವಳಿಗಳು ‘ವಿಧವಾ
ವಿವಾಹ’ ವನ್ನು ಜಾರಿಗೆ ತಂದವು, ನಿಜ. ಆದರೆ ವಿಧವೆಗೆ ಮಕ್ಕಳಿದ್ದಾಗ, ಆ ಮಕ್ಕಳನ್ನೂ ಪುರುಷ ತನ್ನವೆಂದು ಒಪ್ಪಿ ಸ್ವೀಕರಿಸುವ ಮನೋಭಾವ ನಮ್ಮ ಸಮಾಜದಲ್ಲಿದ್ದದ್ದು ಕಡಿಮೆಯೇ.

ಫಣಿಯಮ್ಮನ ಸಮಸ್ಯೆಗಳು
ಕನ್ನಡ ಸಾಹಿತ್ಯದ ಕಾದಂಬರಿಗಳನ್ನು ಗಮನಿಸಿದರೂ ಈ ಸಂಗತಿಗಳು ಕಾಣುತ್ತವೆ. ‘ಪಣಿಯಮ್ಮ’ ಎಂಬ ಎಂ.ಕೆ.ಇಂದಿರಾರವರ ಕಾದಂಬರಿ ಬಾಲವಿಧವೆಯರ ಸಮಸ್ಯೆಯ ಬಗ್ಗೆ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತದೆ. ಎಸ್.ಎಲ್.ಭೈರಪ್ಪನವರ ‘ದಾಟು’ ಮತ್ತು ‘ಕವಲು’ ಕಾದಂಬರಿಗಳಲ್ಲಿ ಪತ್ನಿಯನ್ನು ಕಳೆದುಕೊಂಡ ಪತಿಯ ಲೈಂಗಿಕ ಅಗತ್ಯಗಳ ಬಗೆಗೆ ಹಲವು ಅಂಶಗಳನ್ನು ನಾವು ಕಾಣಬಹುದು. ತ್ರಿವೇಣಿಯವರ ‘ಹಣ್ಣೆಲೆ ಚಿಗುರಿದಾಗ’ ವಿಧವಾ ವಿವಾಹದ ಬಗೆಗೆ ’ರೊಮ್ಯಾಂಟಿಕ್’ ರೀತಿಯಲ್ಲಿ ಚಿತ್ರಿಸುತ್ತದೆ.

ನಿಜಸ್ಥಿತಿಯ ಬಗೆಗೆ ಸ್ವಲ್ಪ ವಿವರವಾಗಿ ನೋಡೋಣ. ಸಂಗಾತಿಯನ್ನು ಕಳೆದುಕೊಂಡ ವಯಸ್ಸಿಗನುಗುಣವಾಗಿ ಹಲವು ವಿಭಿನ್ನ ಸಮಸ್ಯೆಗಳು ಪುರುಷ -ಮಹಿಳೆಯರಿಬ್ಬರನ್ನೂ ಕಾಡುತ್ತವೆ. ಜೀವನ ಸಂಗಾತಿ ಸತ್ತ ತಕ್ಷಣದ ಆಘಾತ-ಶೋಕಗಳು ಅವರನ್ನು ಕಂಗೆ ಡಿಸುತ್ತವೆ.

ಆದರೆ ಆಘಾತ- ಶೋಕಗಳ ಜೊತೆಗೇ ಪ್ರಾಯೋಗಿಕವಾಗಿ ಆರ್ಥಿಕತೆ, ಮನೆಯಲ್ಲಿ ಅಡುಗೆಯ ಜವಾಬ್ದಾರಿ, ಮಕ್ಕಳನ್ನು ನಿಭಾಯಿ ಸುವುದು, ವೃದ್ಧರ ಜವಾಬ್ದಾರಿ, ಇವೆಲ್ಲವೂ ಬೇರೆ ಬೇರೆ ವಿಧಗಳಲ್ಲಿ ‘ಭಾರೀ’ ಎನಿಸಬಹುದು. ಇವೆಲ್ಲದವರೊಂದಿಗೆ ಬಹು ಜನ ಮಾತನಾಡದ, ಯಾರೊಡನೆಯೂ ಹೇಳಿಕೊಳ್ಳಲಾಗದ ಸಂಗತಿಗಳು ಲೈಂಗಿಕ ಅಗತ್ಯಗಳು ಮತ್ತು ಭಾವನಾತ್ಮಕ ಒಡನಾಟ. ಇವು ಬೇರೆಲ್ಲಾ ಜವಾಬ್ದಾರಿಗಳನ್ನು ಇನ್ನಷ್ಟು ಕಷ್ಟ ಎನಿಸುವಂತೆ ಮಾಡಬಹುದು.

ಇಂತಹ ಸಮಯದಲ್ಲಿ ‘ಮರುಮದುವೆ’ ಎನ್ನುವುದು ಒಂದು ಮುಖ್ಯ ಆಯ್ಕೆ ಎನಿಸುತ್ತದೆ. ಆದರೆ ‘ಮರುಮದುವೆ’ಯ ಆಯ್ಕೆ ಬಹು ಜನರಿಗೆ ಸುಲಭವಾದುದೇನಲ್ಲ. ಅವರನ್ನು ‘‘ಮರುಮದುವೆಯೆಂದರೆ ತನ್ನ ಇಲ್ಲಿಯವರೆಗಿನ ಜೀವನ ಸಂಗಾತಿಯನ್ನು ಮರೆತಂತೆ’’ ಎಂಬ ಪಾಪ ಪ್ರಜ್ಞೆ ಕಾಡಬಹುದು. ಜನರು -ಸಂಬಂಧಿಗಳು ಏನೆನ್ನುವರೋ ಎಂಬ ಭಯ ಕಾಡಬಹುದು. ಸತ್ತ ಸಂಗಾತಿಯ ಆತ್ಮಕ್ಕೆ ನೋವುಂಟಾಗಿ, ಅದು ತನಗೆ ಕೇಡುಂಟು ಮಾಡಿದರೆ ಎಂಬ ನಂಬಿಕೆ ಎದುರಾಗಿ ಹೆದರಿಸಬಹುದು. ಈ ಭಯ-ಪಾಪ ಪ್ರಜ್ಞೆಗಳಿಗಿಂತಲೂ ಮಿಗಿಲಾದ ಸಂಗತಿಯೆಂದರೆ ಮಕ್ಕಳ ವಯಸ್ಸಿಗನುಗುಣವಾಗಿ ಅವರನ್ನು ಈ ಮರುಮದುವೆಗೆ ಒಪ್ಪಿಸುವುದು. ಸಹಜವಾಗಿ ಇದು ಸುಲಭವಲ್ಲ.

‘ಅಪ್ಪ’ ‘ಅಮ್ಮ’ ಎಂದು ಕರೆಯಲು ನಿರಾಕರಿಸುವುದು, ಬದುಕಿರುವ ‘ತನ್ನ ‘ಅಪ್ಪ’ ‘ಅಮ್ಮ’ ನನ್ನು ಇನ್ನೊಬ್ಬರು ಕಸಿದು ಕೊಂಡಂತೆ ಎಂದು ಭಾವಿಸುವುದು, ವಿರೋಧಿಸುವುದು ಇವೆಲ್ಲವೂ ಸಾಧ್ಯ.

ಲಾರಾ ತಾಯಿಯ ಮರು ಮದುವೆ

ಇವೆಲ್ಲದರ ನಡುವೆಯೂ ಜೀವನ ಮುಂದುವರೆ ಯಲು ಸಾಧ್ಯವಿದೆ. ಮರು ಮದುವೆಗಳು ಮರು ಸಾಂಗತ್ಯಗಳಾಗಿ ಯಶಸ್ವಿಯಾ ಗಲೂ ಸಾಧ್ಯವಿದೆ. ಇಂಗ್ಲಿಷ್ ನಲ್ಲಿರುವ ಮಕ್ಕಳ ಕಾದಂಬರಿಗಳ ಸರಣಿಯೊಂದರಲ್ಲಿ ಈ ಬಗೆಗಿನ ಚಿತ್ರಣ ನನ್ನ ಗಮನ ಸೆಳೆಯು ತ್ತದೆ. ಪ್ರಸಿದ್ಧ ಲಾರಾ ಇಂಗಲ್ಸ್  ವೈಲ್ಡರ್ ಸರಣಿಯಲ್ಲಿ ಲಾರಾಳ ಅಮ್ಮ ಕೆರೋಲಿನ್‌ಳ ಬಾಲ್ಯದ ಕಥೆಯಿದೆ. ರೈತ ಕುಟುಂಬದಲ್ಲಿ ಬೆಳೆಯುವ ಕೆರೋಲಿನ್ ತನ್ನ ತಂದೆಯನ್ನು 5ನೆಯ ವಯಸ್ಸಿನಲ್ಲಿ ಕಳೆದುಕೊಳ್ಳುತ್ತಾಳೆ.

ಕೆರೋಲಿನ್‌ಳ ತಾಯಿ ಚಾರ್ಲಟ್ ತನ್ನ ಬೆಳೆದ ಮೂರು ಮಕ್ಕಳು, ಉಳಿದ ಚಿಕ್ಕ ಮೂರು ಮಕ್ಕಳೊಂದಿಗೆ ನಡೆಸುವುದು, ಶ್ರಮದ, ಆದರೆ ನೈತಿಕತೆಯ ಜೀವನ. ಬಡತನ, ಬೆಳೆಯುತ್ತಿರುವ ಮಕ್ಕಳು, ಚಾರ್ಲಟ್‌ಳ ಮುಖವನ್ನು ಗಂಭೀರವಾಗಿಸುತ್ತವೆ. ಆರು ವರ್ಷದ ಕೆರೋಲಿನ್ ತಂದೆಯನ್ನು ನೆನೆಸಿಕೊಳ್ಳುವ, ತಾಯಿಗೆ ಕಷ್ಟ ನೀಡಬಾರದೆಂದು ದುಃಖವನ್ನು ತನ್ನೊಳಗೇ ಹುದುಗಿಸಿ  ಕೊಳ್ಳುವ ಚಿತ್ರಣ ಹೃದಯಂಗಮ ಎನಿಸುತ್ತದೆ. ಹೀಗಿರುವಾಗ ಮನೆಯ ಸುತ್ತಮುತ್ತ ಕೆಲಸಕ್ಕೆ ಬರುತ್ತಿದ್ದ ಒಳ್ಳೆಯ ರೈತ ‘ಮಿ. ಹಾಲ್‌ಬ್ರೂಕ್’ ತಾಯಿಯನ್ನು ತನ್ನನ್ನು ಮದುವೆಯಾಗಲು ಕೇಳುವುದನ್ನು ಮರೆಯಲ್ಲಿ ಕೆರೋಲಿನ್ ನೋಡುತ್ತಾಳೆ.

ಪುಟ್ಟ ಕೆರೋಲಿನ್‌ಗೆ ಈ ಗುಟ್ಟನ್ನು ಹೇಗೆ ನಿಭಾಯಿಸಬೇಕೆಂದು ಗೊತ್ತಾಗುವುದಿಲ್ಲ. ರಾತ್ರಿ ತಾಯಿ ಒಬ್ಬಳೇ ಕುಳಿತಿದ್ದಾಗ
ಕೆರೋಲಿನ್ ಅಮ್ಮನ ಬಳಿ ಹೋಗಿ ನಿಲ್ಲುತ್ತಾಳೆ. ಧರ್ಮ ಬೋಧನೆಯಲ್ಲಿ ಆ ದಿನ ಬೆಳಿಗ್ಗೆೆ ಕೇಳಿದ್ದ ‘ನೃತ್ಯ ಮಾಡುವುದೆಂದರೆ ಪಾಪವೇ?’ ಎಂದು ಕೇಳುತ್ತಾಳೆ. ಚಾರ್ಲಟ್ ಹೇಳುತ್ತಾಳೆ, ‘‘ಖಂಡಿತಾ ಅಲ್ಲ. ನಾನು ಬೆಳೆದು ಬಂದ ರೀತಿಯಲ್ಲಿ ನೃತ್ಯ ಪಾಪವಲ್ಲ. ನೃತ್ಯ ಬೇಡ ಎಂದರೆ ಸೂರ್ಯನ ಬೆಳಕನ್ನು ಬೇಡವೆಂದು ತಳ್ಳಿದ ಹಾಗೆ’’. ಆಗ ಕೆರೋಲಿನ್ ಕೇಳುವುದು ‘‘ಅಮ್ಮಾ, ಅಪ್ಪನಿಗೆ
ನೃತ್ಯವೆಂದರೆ ಇಷ್ಟವಾಗಿತ್ತೆ?’’ ತಾಯಿಯ ಮುಖ ನಗು-ಅಳುಗಳ ಮಿಶ್ರಣವಾಗುತ್ತದೆ. ಹೌದೆನ್ನುತ್ತಾಳೆ. ತತ್‌ಕ್ಷಣ ಕೆರೋಲಿನ್ ಬಾಯಿಂದ ‘‘ಮತ್ತೆ ಮಿ.ಹಾಲ್ ಬ್ರೂಕ್‌ಗೆ?’’ ಎಂಬ ಪ್ರಶ್ನೆ. ತಾಯಿ ಸ್ತಬ್ಧಳಾಗುತ್ತಾಳೆ.

ಕೆರೋಲಿನ್‌ಳನ್ನೇ ದಿಟ್ಟಿಸಿ ನೋಡುತ್ತಾಳೆ. ‘‘ದೇವರೇ, ಇಷ್ಟು ಚಿಕ್ಕ ಹುಡುಗಿಗೆ ಎಷ್ಟೊಂದು ಚಿಂತೆಯ ಭಾರಗಳು’’ ಎಂದು ಉದ್ಗರಿಸುತ್ತಾಳೆ. ಹತ್ತಿರದ ಮೇಜಿನ ಬಳಿ ಕರೆದೊಯ್ದು ಮಗಳನ್ನು ಕುಳ್ಳಿರಿಸಿ ಮಾತನಾಡತೊಡಗುತ್ತಾ ಳೆ. ‘‘ನೋಡು ಕೆರೋಲಿನ್, ನಾಳೆ ಬೆಳಿಗ್ಗೆ ನಿಮ್ಮೆಲ್ಲರಿಗೆ ಹೇಳಬೇಕೆಂದಿದ್ದನ್ನು ಈಗ ನಿನಗೆ ಹೇಳುವೆ.

ಮಿ.ಹಾಲ್‌ಬ್ರಕ್ ನನ್ನನ್ನು ಮದುವೆಯಾಗಲು ಕೇಳಿರುವುದು ಹೌದು. ನಾನೂ ಒಪ್ಪಿದ್ದೇನೆ. ಆತ ಒಳ್ಳೆಯ ಮನುಷ್ಯ. ನಿಮ್ಮ ಸ್ವಂತ ತಂದೆಯ ಸ್ಥಾನ ಆತ ತುಂಬಲಾರ. ಆದರೆ ಆತ ನಿಮಗೆಲ್ಲರಿಗೂ ಒಳ್ಳೆಯ ತಂದೆಯಾಗಬಲ್ಲ ಎಂದು ನನಗನ್ನಿಸುತ್ತದೆ. ನಾನು-ನೀವು ಇಬ್ಬರೂ ಅಪ್ಪನ ನೆನಪುಗಳನ್ನು ಯಾವಾಗಲೂ ನಮ್ಮ ಹೃದಯದಲ್ಲಿ ಕಾಪಾಡಿಕೊಳ್ಳುತ್ತೇವೆ’’. ನಂತರದ ಘಟನಾವಳಿ ಗಳಲ್ಲಿ ಚಾರ್ಲಟ್ ಎಲ್ಲ ಮಕ್ಕಳಿಗೆ ಈ ವಿಷಯ ಹೇಳಿದಾಗ, ಅವರೆಲ್ಲರ ಮೌನದ ಪ್ರತಿಕ್ರಿಯೆ.

ಮಕ್ಕಳು ಹೊಸ ಅಪ್ಪನನ್ನು ಏನೆಂದು ಕರೆಯಬೇಕು ಎಂದು ಚರ್ಚಿಸುವುದು, ಆತ ಎಲ್ಲಿ ಮಲಗುತ್ತಾನೆ ಎಂದು ಅಚ್ಚರಿ ಪಡುವುದು, ನಿಧಾನವಾಗಿ ಮಿ.ಹಾಲ್‌ಬ್ರೂಕ್ ಮಕ್ಕಳ ಶಿಸ್ತು-ಪ್ರೀತಿ-ಸುರಕ್ಷತೆಯಲ್ಲಿ ಭಾಗಿಯಾಗುವುದು ಇವು ತೆರೆದುಕೊಳ್ಳುತ್ತಾ ಸಾಗುತ್ತವೆ. ಇದೊಂದು ಹಳೆಯ ಅಮೆರಿಕದ ಕುಟುಂಬದ ಚಿತ್ರಣವೇ ಆದರೂ, ತಾಯಿಯಾಗಿ ಚಾರ್ಲಟ್ ದೃಢವಾಗಿ ತನ್ನ
ನಿರ್ಧಾರವನ್ನು ತಿಳಿಸುವುದು, ಬಾಲಕಿಯಾದರೂ ಕೆರೋಲಿನ್ ಕರುಣೆ-ಪ್ರೀತಿಗಳಿಂದ ತಾಯಿ-ಹೊಸ ಅಪ್ಪನ ಅಗತ್ಯಗಳನ್ನು ನೋಡುವುದು ಯಾವುದೇ ಸಂಸ್ಕೃತಿಗೂ ಅನ್ವಯವಾಗಬಲ್ಲ ಅಂಶಗಳೇ. ಮರುಮದುವೆ ಎಂಬುದು ಹಿಂದಿನ ಮದುವೆಯ ಮರೆವೆಯಾಗಬೇಕಿಲ್ಲ. ಹಿಂದಿನ ಸಾಂಗತ್ಯದಿಂದ ಪಡೆದ ಪ್ರಬುದ್ಧತೆಯಿಂದ ಜೀವನಕ್ಕೆ ಪ್ರೀತಿಯನ್ನು ಮರಳಿ ಪಡೆಯಬಲ್ಲ, ಹಂಚಬಲ್ಲ ಮರು ಸಾಂಗತ್ಯವೂ ಆಗಬಹುದು. ಭೂತಕಾಲದಲ್ಲಿ ಬದುಕಬೇಕಿಲ್ಲ, ಆದರೆ ಅದನ್ನು ಗೌರವಿಸಿ, ಪ್ರೀತಿಸಿಯೂ,
ಮುಂದುವರೆಯುವುದು ಸಾಧ್ಯ. ಜೀವನ ಸಂಗಾತಿಯನ್ನು ಕಳೆದುಕೊಂಡ ಪುರುಷ-ಮಹಿಳೆಯರಾಗಲೀ, ಅವರ ಮಕ್ಕಳಾಗಲೀ ಈ ಸಂಗತಿಗಳನ್ನು ಗಮನಿಸುವುದು ಮುಖ್ಯ.

ಮರುಮದುವೆ ಎನ್ನುವುದು ‘ಮರುಸಾಂಗತ್ಯ’ ವಾಗಲು, ಇಡೀ ಕುಟುಂಬವನ್ನು ಮತ್ತಷ್ಟು ಆರೋಗ್ಯಕರವಾಗಿ ಬೆಳೆಸಲು ಸಮಾಜವೂ ಅವಕಾಶ ನೀಡಬೇಕು.

 

ಮಲತಾಯಿ ಕೆಟ್ಟವಳೆ?
ನಮ್ಮ ಸಂಸ್ಕೃತಿಯಲ್ಲಿ ‘ಮರುಮದುವೆ’ಗೆ
ಇರಬಹುದಾದ ವಿರೋಧ ಬಲವಾಗುವುದು ‘ಮಲ
ತಂದೆ’ ‘ಮಲತಾಯಿ’ ಯರ ಬಗ್ಗೆೆ ನಮ್ಮಲ್ಲಿ
ಪ್ರಬಲವಾಗಿ ಬೇರೂರಿರುವ ಕಲ್ಪನೆಯಿಂದ. ಹೆಚ್ಚಿಿನ
ಕಾದಂಬರಿಗಳು ವಿಶೇಷವಾಗಿ ಮಲತಾಯಿ ಯನ್ನು
‘ಕೆಟ್ಟ’, ‘ಸದಾ ಸಂಚು ಹೂಡುವ ವ್ಯಕ್ತಿಿ’ ಯಾಗಿ
ಚಿತ್ರಿಿಸುತ್ತವೆ. ಮಕ್ಕಳು ‘‘ತನ್ನ ಸ್ವಂತ ತಾಯಿಯ
ಸ್ಥಾಾನವನ್ನು ಕಸಿದ ಮಹಿಳೆ’’ ಎಂಬ ರೀತಿಯಲ್ಲಿ
ನೋಡುವಂತೆ ಚಿತ್ರಿಿಸುತ್ತವೆ.