Wednesday, 11th December 2024

ಶಾಂತಿ ಕಳೆದುಕೊಳ್ಳಬೇಡಿ ಎಂದ ಹೊಸಬರ ತಂಡ

ಮೂರು ಕಥೆ, ಮೂರು ನಿರ್ದೇಶಕರ ಹೊಸ ಸಿನಿಮಾ ಸದ್ದಿಲ್ಲದೇ ಸೆಟ್ಟೇರಿದೆ. ಒಂದೇ ಕಥೆಯಲ್ಲಿ ಮೂರು ಸಂದೇಶ ಇರುವ
ಕಥೆಗಳನ್ನು ಒಗ್ಗೂಡಿಸಿ ಶಾಂತಿಯನ್ನು ಕಳೆದುಕೊಳ್ಳಬೇಡಿ ಎಂಬ ಶೀರ್ಷಿಕೆಯಲ್ಲಿ ಚಿತ್ರ ಮೂಡಿಬರಲಿದೆ.

ಹೊಸಬರ ತಂಡ ಈ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಚುಕ್ಕಿ, ಮೀರಾ ಮಾಧವ, ಮೇಘ ಮೈಯೂರಿ ,ಅಂಬಾರಿ’ಯಂತಹ ಧಾರಾವಾಹಿಗಳು ಹಾಗೂ ಕೆಲವು ಸಿನಿಮಾಗಳಲ್ಲಿ ಸಹ-ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಅನುಭವ ಇರುವ ವಿಘ್ನೇಶ್ ಶೇರೆಗಾರ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣ ನಿರ್ದೇಶಕರಾಗಿದ್ದಾರೆ.

ವಿಘ್ನೇಶ್ ನಿರ್ದೇಶನದ ಮೊದಲ ಭಾಗದ ಕಥೆ ಮಾನವನ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಎರಡನೇ ಭಾಗದ ಕಥೆಯನ್ನು ಬಾಸುಮ ಕೊಡಗು ನಿರ್ದೇಶಿಸುತ್ತಿದ್ದು ಇದರಲ್ಲಿ ತಾಯಿ ಮಗುವಿನ ಸಂಬಂಧದ ಬಗ್ಗೆ ಹೇಳಿದ್ದಾರೆ. ಮೂರನೇ ಕಥೆ, ಕೆಲಸ ಹುಡುಕಿ ಕೊಂಡು ಬೆಂಗಳೂರಿಗೆ ಬರುವ ಹುಡುಗನೊಬ್ಬ ಹ್ಯಾಕರ್ ಆಗಿ ಬದಲಾಗುವ ಕುರಿತಾಗಿದೆ. ಇದನ್ನು ಶಿವ ನಿರ್ದೇಶಿಸುತ್ತಿದ್ದಾರೆ.

ನಾಯಕನಾಗಿ ಕಾರ್ತಿಕ್ ಹಾಗೂ ನಾಯಕಿಯಾಗಿ ಹರ್ಷಿತಾ ಅಭಿನಯಿಸುತ್ತಿದ್ದಾರೆ. ಜಿ.ಕೆ.ಶಂಕರ್, ರಾಜಣ್ಣ, ಕಾರ್ತಿಕ್, ಇಂದ್ರಜಿತ್, ಹರ್ಷಿತಾ, ಸಂಗೀತಾ, ಚಂದ್ರಕಲಾ ಭಟ್, ರಾಕೇಶ್, ಸಂಪತ್ ಶಾಸ್ತ್ರಿ,ಕಾವ್ಯಾ ಕೊಡಗು ಮುಂತಾದವರು ಚಿತ್ರದ ತಾರಾಬಳಗ ದಲ್ಲಿದ್ದಾರೆ. ಪದ್ಮಾವತಿ ಸ್ಟುಡಿಯೋಸ್ ಮೂಲಕ ಚಿತ್ರ ನಿರ್ಮಾಣವಾಗುತ್ತಿದೆ.