Saturday, 14th December 2024

ಜಲತರಂಗ ಕಲಾವಿದೆ ಶಶಿಕಲಾ ದಾನಿ

ಜಲತರಂಗ ವಾದನದಲ್ಲಿ ಸಂಗೀತವನ್ನು ನುಡಿಸುವ ಕಲಾವಿದರು ಇಂದು ಬಹು ವಿರಳ. ಮಧುರ ಸಂಗೀತವನ್ನು ಹೊರಡಿಸಬಲ್ಲ ಜಲತರಂಗದಲ್ಲಿ ಸಾಧನೆ ಮಾಡಿರುವ ವಿದುಶಿ ಶಶಿಕಲಾ ದಾನಿಯವರು, ಆ ಕಲೆಯನ್ನು ಮಕ್ಕಳಿಗೂ
ಪರಿಚಯಿಸುತ್ತಿರುವುದು ವಿಶೇಷ.

ಸುರೇಶ ಗುದಗನವರ

ಪಿಂಗಾಣಿಯ ಬಟ್ಟಲುಗಳಲ್ಲಿ ನೀರು ತುಂಬಿ ಅವುಗಳಿಂದ ಸಂಗೀತದ ಸ್ವರಗಳನ್ನು ಹೊರಹೊಮ್ಮಿಸುವ ಮೂಲಕ ಅಪರೂ
ಪದ ಕಲೆಯನ್ನು ಜನರಿಗೆ ಪರಿಚಯಿಸುವಲ್ಲ ಕಲಾವಿದೆಯೊಬ್ಬರು ತೊಡಗಿಕೊಂಡಿದ್ದಾರೆ. ಅದುವೆ ಜಲತರಂಗ ಕಲೆ. ನಮ್ಮ
ದೇಶದಲ್ಲಿ ಅತ್ಯಪರೂಪ ಎನಿಸಿರುವ ಜಲತರಂಗ ವಾದ್ಯ ನುಡಿಸುವ ಕಲಾವಿದರಲ್ಲಿ ಹುಬ್ಬಳ್ಳಿಯ ಶಶಿಕಲಾ ದಾನಿಯವರು
ಕೂಡಾ ಒಬ್ಬರು.

ಮೂಲತಃ ಧಾರವಾಡ ಜಿಲ್ಲೆಯ ಕಲಘಟಗಿಯವರಾದಶಶಿಕಲಾರವರಿಗೆ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ. ತಂದೆ ಧೋಂಡುಬಾ ವಾರಂಗ್, ತಾಯಿ ರುಕ್ಮಿಣಿಯವರು. ತಂದೆಯವರು ಹಲವು ವಾದನಗಳನ್ನು ನುಡಿಸುತ್ತಿದ್ದ ಅಪ್ರತಿಮ ಕಲಾ ವಿದರು. ಸಿತಾರ, ಜಲತರಂಗ, ವಯೋಲಿನ್, ತಬಲಾ,  ಹಾರ್ಮೋನಿಯಂ, ಬುಲ್‌ಬುಲ್ ಹೀಗೆ ಹಲವು ವಾದ್ಯಗಳಲ್ಲಿ ಪರಿಣಿತ ರಾಗಿದ್ದ ಅವರು ಮನೆಯಲ್ಲಿ ಸಂಗೀತ ಪಾಠಶಾಲೆ ನಡೆಸುತ್ತಿದ್ದರು.

ತಂದೆಯ ಗರಡಿಯಲ್ಲಿ ಹಾರ್ಮೋನಿಯಂ, ಸಿತಾರ್, ತಬಲಾ ಮೊದಲಾದ ವಾದ್ಯಗಳ ಅಭ್ಯಾಸ ಆರಂಭಿಸಿದ ಶಶಿಕಲಾರವರು, ಅಂತಿಮವಾಗಿ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದು ಜಲತರಂಗದ ಮೇಲೆ. ಹತ್ತನೆಯ ವಯಸ್ಸಿ ನಲ್ಲಿಯೇ ಜಲತರಂಗ ಕಲಿಕೆ ಯನ್ನು ಆರಂಭಿಸಿದ ಶಶಿಕಲಾರವರು ಹದಿನೇಳ ನೆಯ ವಯಸ್ಸಿನಲ್ಲಿಯೇ ಸಾರ್ವಜನಿಕ ಪ್ರದರ್ಶನ ನೀಡಿ ಸೈ ಎನಿಸಿಕೊಂಡರು.

ಶಶಿಕಲಾರವರು ಬಡನತದ ಪರಿಸ್ಥಿತಿಯಲ್ಲಿಯೇ ಶಿಕ್ಷಣವನ್ನು ಮುಂದುವರೆಸಿ ದರು. ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಹೈಸ್ಕೂಲ್ ನಿಂದ ಎಸ್.ಎಸ್.ಎಲ್.ಸಿ.ಯನ್ನು ತೇರ್ಗಡೆಯಾದ ಶಶಿಕಲಾರವರು ನಂತರ ವುಮೆನ್‌ಸ್‌ ಕಾಲೇಜ ನಿಂದ ಪದವಿಯನ್ನು ಪಡೆದರು. ಅವರು ಅಥ್ಲೆಟಿಕ್ಸ್‌‌ದಲ್ಲಿ ಯುನಿವರ್ಸಿಟಿಯ ಬ್ಲ್ಯೂ ಆಗಿ ಹೆಸರು ಗಳಿಸಿ ದರು. ನಂತರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಉದ್ಯೋಗಿಯಾಗಿ ವೃತ್ತಿಯನ್ನು ಪ್ರಾರಂಭಿಸಿದರು. ಅವರು ಹುಬ್ಬಳ್ಳಿಯ ಸುರೇಂದ್ರ ದಾನಿಯವರ ಮಗ ಅರುಣ ದಾನಿ ಅವರನ್ನು ಮದುವೆಯಾದರು.

ಬ್ಯಾಂಕ್ ಕನ್ನಡ ಬಳಗದಿಂದ ಪ್ರೋತ್ಸಾಹ ಶಶಿಕಲಾರವರಿಗೆ ಅತ್ತೆ ಮನೆಯ ಕಡೆಯಿಂದಲೂ ಪ್ರೋತ್ಸಾಹ ಸಿಕ್ಕಿದ್ದರಿಂದ ಅವರು ಜಲತರಂಗ ಕಲೆಯನ್ನು ಉದ್ಯೋಗದೊಂದಿಗೆ ಮುಂದುವರೆಸಿದರು. ಮನೆಯಲ್ಲಿ ಸಂಜೆಯ ವೇಳೆ ಜಲತರಂಗ, ಸಿತಾರ್, ತಬಲಾ, ಹಾರ್ಮೋನಿಯಂ, ಮತ್ತಿತರ ವಾದ್ಯಗಳನ್ನು ಕಲಿಸುವದರೊಂದಿಗೆ ಅವರು ಹಲವಾರು ಕಡೆಗೆ ಜಲತರಂಗ ಪ್ರದರ್ಶನವನ್ನು ನೀಡಿದ್ದಾರೆ. ನಂತರ ಕೈತುಂಬ ಸಂಬಳ ಬರುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದು, ಆ ನಂತರದ ದಿನಗಳಲ್ಲಿ ಪೂರ್ಣಪ್ರಮಾಣದ ಸಂಗೀತ ಸೇವೆಯಲ್ಲಿ ತೊಡಗಿಕೊಂಡರು.

ಅವರು ಮೈಸೂರ ದಸರಾ, ಹಂಪಿ ಉತ್ಸವ, ಧಾರವಾಡ ಜಿಲ್ಲಾ ಉತ್ಸವ, ವಿಜಯಪೂರ, ಬೆಂಗಳೂರು, ಗದಗ ಅಲ್ಲದೇ ಗೋವಾ, ರಾಜಸ್ಥಾನಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಇವರಿಗೆ ಉದ್ಯೋಗ ನೀಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮತ್ತು ಅಲ್ಲಿನ ಕನ್ನಡ ಬಳಗವು ಇವರ ಸಂಗೀತ ಕಲೆಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದು, ಇವರ ಸಂಗೀತ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದವು. ಮೈಸೂರು ಬ್ಯಾಂಕ್ ಕನ್ನಡ ಬಳಗ ನಡೆಸುತ್ತಿದ್ದ ರಾಜ್ಯೋತ್ಸವ ಕಾರ್ಯಕ್ರಮಗಳಲ್ಲೂ ಹಲವು ಬಾರಿ ಶಶಿಕಲಾ ದಾನಿಯವರು ಜಲತರಂಗ ವಾದವನ್ನು ಪ್ರದರ್ಶಿಸಿದ್ದಾರೆ.

ಸಿಹಿ ನೀರು ಸಂಗೀತಕ್ಕೆ ಉತ್ತಮ ರಾಗಕ್ಕೆ ಸರಿಯಾಗಿ ಕಪ್‌ಗಳನ್ನು ಹೊಂದಿಸಬೇಕಾಗುತ್ತದೆ. ಏಳು ಸ್ವರಗಳಿಗೆ ಇಪ್ಪತ್ತೊಂದು ಕಪ್‌ಗಳಿದ್ದರೆ ಒಳ್ಳೆಯದು. ಭೂಪ್ ರಾಗಕ್ಕೆ ಐದು ಸ್ವರಗಳು, ಹೀಗಾಗಿ ಇದನ್ನು ನುಡಿಸಲು ಹದಿನೈದು ಕಪ್‌ಗಳು ಸಾಕು ಎಂದು ವಿವರಿಸುವ ಶಶಿಕಲಾ ಅವರು ಕಪ್‌ಗಳನ್ನು ಅತೀ ಸುರಕ್ಷತೆಯಿಂದ ಕಾಪಾಡಿಕೊಳ್ಳಬೇಕಾಗುತ್ತದೆ. ಸ್ವಲ್ಪ ಮುಕ್ಕಾದರೂ ಸ್ವರ ಸರಿಯಾಗಿ ಹೊರಹೊಮ್ಮುವದಿಲ್ಲ. ಜಲತರಂಗ ನುಡಿಸುವಾಗ ಗಡಸು ನೀರು ಬಳಸದೇ ಸಿಹಿ ನೀರು ಬಳಸುವದು ಉತ್ತಮ ಎಂದು
ತಿಳಿಸುತ್ತಾರೆ. ಅವರು ಜಲತರಂಗದ ಮೂಲಕ ರಾಷ್ಟ್ರಗೀತೆ, ಜಾನಪದ ಗೀತೆ, ಶಿಶುನಾಳ ಶರೀಫರ ಭಕ್ತಿ ಗೀತೆಗಳನ್ನು ನುಡಿಸಿ
ಈಗ ಕರ್ನಾಟಕದ ಏಕೈಕ ಜಲತರಂಗದ ಕಲಾವಿದೆಯಾಗಿದ್ದಾರೆ.

ಅವರು ಗಾಯನಗಂಗಾ, ವೀರರಾಣಿ ಕಿತ್ತೂರ ಚೆನ್ನಮ್ಮ, ಕರ್ನಾಟಕ ಕಲಾಶ್ರೀ ಮುಂತಾದ ಪ್ರಶಸ್ತ್ರಿ-ಪುರಸ್ಕಾರಗಳಿಗೆ ಭಾಜನರಾಗಿ ದ್ದಾರೆ. ಧಾರವಾಡ ಆಕಾಶವಾಣಿಯ ಕಲಾವಿದೆಯಾಗಿರುವ ಶಶಿಕಲಾರವರು ಚಂದನವಾಹಿನಿಯಲ್ಲೂ ಜಲತರಂಗದ ಜಾದು ಮೂಡಿಸಿದ್ದಾರೆ. ಕರ್ನಾಟಕದ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯವೇತನಕ್ಕೆ ಎರಡು ಬಾರಿ ಆಯ್ಕೆಯಾಗಿರುವ ಅವರು ಚೆನ್ನೈ ನಲ್ಲಿ ನಡೆದ ರಾಷ್ಟ್ರೀಯ ಅಂತರ್ ಬ್ಯಾಂಕ್ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಕಳೆದ ಐದು ದಶಕಗಳಿಂದಲೂ ಜಲತರಂಗವನ್ನು ಒಡನಾಡಿಯಾಗಿ ಮಾಡಿಕೊಂಡಿರುವ ಶಶಿಕಲಾರವರು ಜಲತರಂಗವನ್ನು ನುಡಿಸುವ ಕರ್ನಾಟಕದ ಏಕೈಕ ಮಹಿಳೆ. ಬಹುಶಃ ಭಾರತದಲ್ಲಿ ಈ ವಾದನವನ್ನು ನುಡಿಸುವ ಮಹಿಳೆಯರ ಸಂಖ್ಯೆ ಬೆರಳೆಣಿಕೆ ಯಷ್ಟು ಮಾತ್ರ. ಇಂದು ಜಲತರಂಗ ಕಲಿಸುವವರ ಮತ್ತು ಕಲಿಯುವವರ ಕೊರತೆಯಿಂದ ಜಲತರಂಗ ವಾದನ ಕೇಳುವದು ಬಹಳ ಅಪರೂಪವಾಗಿದೆ.

ಜಲತರಂಗಕ್ಕೆ ಇನ್ನಷ್ಟು ಖ್ಯಾತಿ ತಂದುಕೊಡಬೇಕೆಂಬ ಕಲಾಸೇವೆಯಲ್ಲಿ ತೊಡಗಿರುವ ವಿದುಷಿ ಶಶಿಕಲಾ ದಾನಿಯವರಿಂದ ಈ ಅಪರೂಪದ ಜಲತರಂಗ ವಾದ್ಯದ ಕಂಪನ ರಾಷ್ಟ್ರವ್ಯಾಪಿ ಹರಡಲಿ. ಜಲತರಂಗವನ್ನು ಇನ್ನಷ್ಟು ಎತ್ತರಕ್ಕೇರಿಸುವ ಮಹದಾಸೆ ಯಿಂದ ಬ್ಯಾಂಕ್ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದಿರುವ ಅವರ ಕನಸು ನನಸಾಗಲಿ.

ಮಕ್ಕಳಿಗೆ ತರಬೇತಿ
ವಿದುಷಿ ಶಶಿಕಲಾರವರು ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಸ್ವರನಾದ ಸಂಗೀತ ವಿದ್ಯಾಲಯವನ್ನು ಪ್ರಾರಂಭಿಸಿ ಮಕ್ಕಳಿಗೆ
ಜಲತರಂಗ ಅಲ್ಲದೇ ಇನ್ನಿತರ ವಾದ್ಯಗಳನ್ನು ಕಲಿಸಿ ಕೊಡುತ್ತಿದ್ದಾರೆ. ಅವರು ಆನ್‌ಲೈನ್ ಮೂಲಕ ಸಹ ತಮ್ಮ ಕಲೆಯನ್ನು
ಹಂಚುತ್ತಿದ್ದಾರೆ. ಆ ಮೂಲಕ, ಜಲತರಂಗದಿಂದ ಶಾಸ್ತ್ರೀಯ ಸಂಗೀತವನ್ನು ನುಡಿಸುವ ಈ ಅಪರೂಪದ ಕಲೆಯನ್ನು ಹಲವರಿಗೆ ಹೇಳಿಕೊಡುತ್ತಿದ್ದಾರೆ. ಅವರ ಮಗ ಸುಜ್ಞಾನ ಕೂಡಾ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಂದ ತೇರ್ಗಡೆ ಯಾಗಿ, ಸ್ವಂತವಾಗಿ ಸಂಗೀತ ಕಛೇರಿಯನ್ನು ನಡೆಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಸ್ವರನಾದ ಸಂಗೀತ ವಿದ್ಯಾಲಯದ ಶಾಖೆಯನ್ನು ಪ್ರಾರಂಭಿಸಿದ್ದಾರೆ.