Thursday, 12th December 2024

ಆಕೆ ಅಂಥವಳಲ್ಲ !

ಕವಿತಾ ಭಟ್

ಆಕೆಯದ್ದೇ ಸ್ನೇಹಿತರ ಆಪ್ತ ಜಗತ್ತನ್ನು ಕಟ್ಟಿಕೊಳ್ಳಲು ಬಿಟ್ಟುಬಿಡಿ. ಆಕೆಯನ್ನು ಯಾರೊಂದಿಗೋ ಕಂಡರೆ ನಿಮ್ಮ
ನೋಟವೂ ಬದಲಾಗಲಿ. ಸರಿಯಾಗಿ ಗೊತ್ತಿರದೇ ಆಕೆಯ ವ್ಯಕ್ತಿತ್ವವನ್ನು ನಿಮಗೆ ಬೇಕಾದಂತೆ ಆರೋಪಿಸಿ ತುಳಿಯ ಬೇಡಿ. ಎಲ್ಲರೊಂದಿಗೂ ನಗುನಗುತ್ತಾ ಮಾತಾಡುತ್ತಾಳೆಂದಾಕ್ಷಣ ಅವಳು ಅಂಥವಳಲ್ಲ.

ನೀವೊಬ್ಬ ವಿವಾಹಿತ ಮಹಿಳೆ. ಒಂದು ದಿನ ನಿಮ್ಮ ಗೆಳೆಯನ ಬೈಕಿನಲ್ಲಿ ಬಂದು ಮನೆಯೆದುರು ಇಳಿದ ಕೂಡಲೇ ಅಕ್ಕಪಕ್ಕದ ಮನೆಯ ಹೆಂಗಸರು ನಿಮ್ಮನ್ನು ನೋಡಿ ಗುಸುಗುಸು ಮಾತಾಡಿಕೊಳ್ಳುತ್ತಿರುವುದು ಕಿವಿಗೆ ಬೀಳುತ್ತದೆ.

ಡ್ರಾಪ್ ಕೊಡುವುದಾಗಿ ಆಹ್ವಾನಿಸಿದ ಸಹೋದ್ಯೋಗಿಯ ಕಾರನ್ನು ನೀವು ಹತ್ತಿದ ಕೂಡಲೇ ಅಲ್ಲಿಗೆ ಬಂದ ಮತ್ತೊಂದಿಬ್ಬರು ಸಹೋದ್ಯೋಗಿಗಳು ಒಬ್ಬರಿಗೊಬ್ಬರು ಕಣ್ಣು ಮಿಟುಕಿಸಿಕೊಂಡು ನಗುತ್ತಿರುವ ವಿಚಾರ ನಿಮ್ಮ ಬೆನ್ನಿಗೆ ಬಂದು ಅಪ್ಪಳಿಸುತ್ತದೆ. ರಸ್ತೆಯ ತಿರುವಿನಲ್ಲೆಲ್ಲೋ ಬಾಲ್ಯದ ಗೆಳೆಯ ಅನೇಕ ವರ್ಷಗಳ ನಂತರ ಎದುರಾದಾಗ ಮನೆಗೆ ಕರೆಯುವುದನ್ನೂ ಮರೆತು ಸಂಭ್ರಮದಿಂದ ಮಾತಾಡುತ್ತಿರುತ್ತೀರಿ. ಅದನ್ನು ನೋಡಿದ ಸಂಬಂಧಿಯೊಬ್ಬರು ಇನ್ನೊಂದು ರೀತಿಯಲ್ಲಿ ಅರ್ಥೈಸಿಕೊಂಡು
ಅದನ್ನು ಮತ್ಯಾರಿಗೋ ತಲುಪಿಸಿರುವುದೂ ಉಂಟು!

ನಿಮಗೆ ಆಸಕ್ತಿಯಿರುವ ವಿಷಯಗಳ ಬಗ್ಗೆೆ ಗೆಳೆಯರ ಜೊತೆಗೆ ಗಂಟೆಗಟ್ಟಲೇ ಫೋನಿನಲ್ಲಿ ಹರಟುತ್ತಿರುವುದಕ್ಕೆ ಇನ್ಯಾರದ್ದೋ ಕುತೂಹಲದ ಕಿವಿ ನಿಮ್ಮ ಮಾತಿಗೆ ತೆರೆದಿರುತ್ತದೆ. ಆಗೆಲ್ಲ ನಿಮಗೆ ಅವನು ಕೇವಲ ನನ್ನ ಸ್ನೇಹಿತನಷ್ಟೇ, ಅವನು ಕೇವಲ ನನ್ನ ಸಹೋದ್ಯೋಗಿಯಷ್ಟೇ, ಸಂಬಂಧಿಯಷ್ಟೇ, ಪರಿಚಿತನಷ್ಟೇ ಎಂದು ಕಿರುಚಿ ಎಲ್ಲರಿಗೂ ಹೇಳಬೇಕೆನ್ನಿಸುತ್ತದಲ್ಲ? ಹಾಗಿದ್ದರೆ ತಡೆಯಿರಿ, ಅವನು ನಿನಗೇನಾಗಬೇಕು ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಂಡು ಉತ್ತರಿಸಿಕೊಂಡಿದ್ದೀರೆಂದಾದರೆ, ಸ್ನೇಹ
ಮತ್ತು ಆಕರ್ಷಣೆಯ ನಡುವಿನ ಕೂದಲೆಳೆಯ ಅಂತರದ ಬಗ್ಗೆ ನಿಮಗೆ ಸ್ಪಷ್ಟ ಅರಿವಿದೆಯೆಂದಾದರೆ ನೀವು ಬೇರೆ ಯಾರಿಗೂ ಕೂಗಿ ಹೇಳುವ ಮೂರ್ಖತನವೇ ಮಾಡಬೇಡಿ.

ಸ್ಥಾಯಿಯಾಗುತ್ತಿರುವ ಆಕರ್ಷಣೆ

ಹೌದು, ಈಗ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ. ದಾಂಪತ್ಯದಲ್ಲಿ ಮೊದಲು ಕಾಣುತ್ತಿದ್ದ ಒಲವು, ಹೊಂದಾಣಿಕೆ, ಆರಾಧನೆ ಮುಂತಾದ ನವಿರಾದ ಭಾವಗಳು ಬದಲಾಗಿ ಕೇವಲ ಅಗತ್ಯ ಮತ್ತು ಆಕರ್ಷಣೆಗಳೇ ಸ್ಥಾಯಿಯಾಗಿದೆ. ಹೀಗಾಗಿ ಅವಳ ನಿಷ್ಠೆ ಯಾವಾಗ ಬೇಕಾದರೂ ಕಳಚಿ ಬೀಳಬಹುದು ಎಂದಂದುಕೊಳ್ಳುವುದರಲ್ಲಿ ತಪ್ಪಿಲ್ಲ. ಯಾರು ಏನಂದುಕೊಂಡರೆ ನನಗೇನು ಎನ್ನುವಂತ ದಾರ್ಷ್ಟ್ಯದ ಹೆಣ್ಣುಮಕ್ಕಳ ಬಗ್ಗೆ, ದಿನಕೊಬ್ಬರ ಜೊತೆಗೆ ಸುತ್ತುವುದೇ ಜೀವನ, ಆಧುನಿಕತೆಯ ಪರಾಕಾಷ್ಠೆೆ ಎಂದಂದುಕೊಂಡ ಬೆರಳೆಣಿಕೆಯಷ್ಟು ಹೆಂಗಸರ ಬಗ್ಗೆ ಮಾತಾಡುವುದೇ ಬೇಡ. ಇವೆಲ್ಲಕ್ಕೂ ಅಪವಾದವಾದ ಸ್ನೇಹಪರತೆಯ ಹೆಣ್ಣು ಮಕ್ಕಳ ಬಗ್ಗೆ ಯೋಚಿಸುವ.

ಅವಳು ಯಾರ ಜೊತೆಗಾದರೂ ಆತ್ಮೀಯತೆಯಿಂದ ವರ್ತಿಸಿದಾಗ, ಒಡನಾಡಿದಾಗ ಆಕೆ ಅಂತವಳೆಂದು ತಿಳಿಯುವವರಲ್ಲಿ ಪ್ರಬುದ್ಧರು, ತಿಳುವಳಿಕೆಯುಳ್ಳವರೂ ಹಿಂದೆಗೆಯುವುದಿಲ್ಲ. ತಮ್ಮ ಮಕ್ಕಳು ಯಾರನ್ನು ಸ್ನೇಹಿತರೆಂದು ತೋರಿಸಿದರೂ ನಂಬುವ ಜನ ಇತರರ ವಿಷಯದಲ್ಲಿ ಮಾತ್ರ ಬಿಲ್ಕುಲ್ ಅನಿಮಾನಿಸುವುದನ್ನು ಬಿಡುವುದಿಲ್ಲ.

ಆಕೆಗೂ ತನ್ನ ಸಂಸಾರದ ಬಗ್ಗೆ ಎಲ್ಲಿಲ್ಲದ ಹೆಮ್ಮೆಯಿದೆ, ಸಂಗಾತಿಯ ಬಗ್ಗೆೆ ಒಲವಿದೆ, ಮಕ್ಕಳ ಮೇಲೆ ಪ್ರೀತಿಯಿದೆ. ಕರ್ತವ್ಯ ಪ್ರಜ್ಞೆಯಿದೆ. ತಪ್ಪು, ಸರಿಗಳ ಬಗ್ಗೆ ಯೋಚಿಸುವ ವಿವೇಚನೆಯಿದೆ. ಎಲ್ಲಕ್ಕೂ ಮಿಗಿಲಾಗಿ ತನ್ನ ವ್ಯಕ್ತಿತ್ವವನ್ನು ಹೇಗೆ ರೂಪಿಸಿ ಕೊಳ್ಳಬೇಕೆಂಬ ಕನಸಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದ ಮನಸ್ಥಿತಿಯವರನ್ನು ಬದಲಾಯಿಸಲು ಸಾಧ್ಯವಾಗದಿದ್ದ ಮೇಲೆ ನಮ್ಮನ್ನು ನಾವು ಬೇರೆಯವರ ಮುಂದೆ ಸಮರ್ಥಿಸಿಕೊಳ್ಳುವ ಗೋಜಿಗೂ ಹೋಗಬಾರದು.

ಒಂದು ಸಂಸಾರದಲ್ಲಿರುವ ಯಾವ ಹೆಣ್ಣೂ ಎರಡು ದೋಣಿಯ ಮೇಲೆ ಕಾಲಿಡಲಾರಳು. ಒಂದನ್ನು ಬಿಡುವ ಅನಿವಾರ್ಯತೆ ಎದುರಾದಾಗ ಪೂರ್ತಿಯಾಗಿ ತೊರೆದುಕೊಂಡೇ ಮತ್ತೊಂದನ್ನು ಸ್ವೀಕರಿಸುತ್ತಾಳೆ. ಅವಳ ದೇಹ ಅರ್ಥವಾದಷ್ಟು ಮನಸ್ಸು ಯಾರಿಗೂ ಸುಲಭಕ್ಕೆ ಅರ್ಥವಾಗುವುದಿಲ್ಲ. ಹೀಗಾಗಿಯೇ ಆಕೆಯ ಬಗ್ಗೆ ಇಂಥದ್ದೊಂದು ಅನಗತ್ಯ ಗುಮಾನಿಯನ್ನು ಇಟ್ಟು ಕೊಂಡೇ ತಮ್ಮ ಬಾಯಿ ಚಪಲಕ್ಕೆ ಆಕೆಯನ್ನು ಮುಕ್ಕುತ್ತಿರುತ್ತಾರೆ.

ಇದರ ಪರಿಣಾಮ ಆಕೆ ಯಾರ ಜೊತೆಗಾದರೂ ಸ್ನೇಹ ಬೆಳೆಸಿದರೆ ಅದನ್ನು ಮುಚ್ಚಿಡುವುದಕ್ಕೋ ಇಲ್ಲ, ಅಂತದ್ದೇನಿಲ್ಲ ಎಂಬ ವಿವರಣೆ ಕೊಡುವುದರಲ್ಲಿಯೋ ನಿರಂತರವಾಗಿ ಹೆಣಗುತ್ತಿರುತ್ತಾಳೆ. ಅದರ ಬದಲಿಗೆ ಆಕೆ ಆಕೆಯದ್ದೇ ಸ್ನೇಹಿತರ ಆಪ್ತ ಜಗತ್ತನ್ನು ಕಟ್ಟಿಕೊಳ್ಳಲು ಬಿಟ್ಟುಬಿಡಿ. ಆಕೆಯನ್ನು ಯಾರೊಂದಿಗೋ ಕಂಡರೆ ನಿಮ್ಮ ನೋಟವೂ ಬದಲಾಗಲಿ. ಸರಿಯಾಗಿ ಗೊತ್ತಿರದೇ ಆಕೆಯ ವ್ಯಕ್ತಿತ್ವವನ್ನು ನಿಮಗೆ ಬೇಕಾದಂತೆ ಆರೋಪಿಸಿ ತುಳಿಯಬೇಡಿ. ಎಲ್ಲರೊಂದಿಗೂ ನಗುನಗುತ್ತಾ ಮಾತಾಡು ತ್ತಾಳೆಂದಾಕ್ಷಣ ಅವಳು ಅಂತವಳಲ್ಲ.