ಲಕ್ಷ್ಮೀಕಾಂತ್ ಎಲ್.ವಿ
ಹರೆಯದ ಗುಂಗಲ್ಲಿ ಎಲ್ಲವೂ ಸುಂದರವಾಗಿ ಕಾಣುವಂತೆ ನನ್ನ ಮನದಲ್ಲಿ ಮೂಡಿದ್ದ ಪ್ರೀತಿ ಕಾಮನಬಿಲ್ಲಿನಂತೆ ಕಂಗೊಳಿಸುವ ಮುನ್ನವೇ ಬದುಕೆಲ್ಲವೂ
ಮಿಥ್ಯ ಎನ್ನುವ ಸತ್ಯದ ಅರಿವಾಗಿತ್ತು.
ಒಲವಗೀತೆ ಶುರುವಾಗಿ ವರುಷಗಳೇ ಉರುಳಿವೆ. ನಿನ್ನನ್ನು ಕಂಡ ಆ ದಿನವೇ ನನ್ನ ಹೃದಯಪಕ್ಷಿ ಪುಟ್ಟದನಿಯಲ್ಲಿ ಈ ಮನಸ್ಸಿನ ಸಾಮ್ರಾಜ್ಯಕ್ಕೆ ಇವಳೇ ಒಡತಿ ಎಂದು ಉಲಿದಿತ್ತು. ಪ್ರೀತಿಸಿದ ಮನಸುಗಳು ಜಗದ ರೀತಿಗಳನ್ನೆಲ್ಲಾ ಮರೆತುಬಿಡುವ ರೀತಿ ನನ್ನ ಮನದ ತುಂಬೆಲ್ಲಾ ನಿನ್ನದೇ ಕನವರಿಕೆ ಶುರುವಾಗಿಬಿಟ್ಟಿತ್ತು. ನನ್ನೊಳಗಿನ ಕವಿಮನಸ್ಸು ನಿನ್ನ ನೋಡುತ್ತ, ಮಾನಸಿಕವಾಗಿ ಕನವರಿಸತೊಡಗಿತು, ಹನಿಗವನಗಳನ್ನು ಸೃಜಿಸತೊಡಗಿತು.
ನಾನು ನಿಜಕ್ಕೂ ಪ್ರೀತಿಗೊಳದಲ್ಲಿ ಏಕಾಏಕಿ ಬಿದ್ದಿದ್ದೆ. ದುಂಡು ಮೊಗದ ಚೆಲುವೆಯ ಪ್ರಣಯಾರ್ಥಿಯಾಗಿದ್ದೆ. ಕೈಗಳಲ್ಲಿ ಕಿಣಿಕಿಣಿಸುವ ಬಣ್ಣದ ಬಳೆ, ಹಾಲು ಹುಣ್ಣಿಮೆಯ ಕೆನ್ನೆಯ ಮೇಲೆ ಇಳಿಬಿದ್ದ ಆ ಮುಂಗುರುಳು ನಿಜಕ್ಕೂ ನನ್ನೆದೆಯಲ್ಲಿ ಹುಚ್ಚೆದ್ದು ಒಲವ ರಾಗ ಮೂಡಿಸಿ ಕಾಡಿದ್ದವು. ಮೌನ ಮುರಿದು ಮಾತು ಚಿಗುರಿ ಪ್ರಣಯ ಗೀತೆ ಹಾಡುವ ಆಸೆಗಳೆಲ್ಲ ಗರಿಗೆದರಿದ್ದವು. ತೆರೆದಿಟ್ಟಿರುವ ಎದೆಗೂಡಿನೊಳಗೆ ಮಲ್ಲಿಗೆ ಹೂವಿನಷ್ಟು ಹಗುರವಾಗಿ ಹೆಜ್ಜೆ ನೋಯದಂತೆ, ಕಾಲ್ಗೆಜ್ಜೆ ಉಲಿಯುತ್ತಲೇ ಇರುವಂತೆ, ಬೆಳದಿಂಗಳ ನಗೆ ಮಾಸದಂತೆ ಪ್ರೀತಿಯಿಂದ ಬಚ್ಚಿಟ್ಟು ಕೊಳ್ಳುವ ಸಾವಿರ ಕನಸುಗಳು ಚಿಗುರಿದ್ದು, ಜೀವನದುದ್ದಕ್ಕೂ ಹೆಜ್ಜೆಹಾಕುವ ಆಸೆ ಮೂಡಿದ್ದು ಆಗಲೆ.
ಆದರೆ, ಕನಸು ದಟ್ಟವಾಗುವ ಮುನ್ನವೇ ನನ್ನೆಲ್ಲ ಕನಸುಗಳು ಕರಗಿಹೋಗಿದ್ದವು. ಹೃದಯದ ಒಳಮಿಡಿತ ತಾಳ ತಪ್ಪಿದ್ದು ಅರಿವಿಗೆ ಬಾರದೇ ಹೋಗಿತ್ತು. ಅದಮ್ಯ ತುಡಿತ, ಬಾಳಿನ ಸೆಲೆ ಎಲ್ಲವೂ ಮುದುಡಿ ಆಗಸದಲ್ಲಿ ತೇಲಾ ಡುವ ಮುಗಿಲಿಗೆ ಕಾರ್ಮೋಡ ಕವಿದದ್ದು ತಿಳಿಯಲಿಲ್ಲ ಗೆಳತಿ. ಲೆಕ್ಕವಿಲ್ಲದಷ್ಟು ಹೆಣೆದ ಕನಸಿನ ನವಿರುಬಲೆ ನಿನಗೆ ತಿಳಿಸುವ ಮುನ್ನವೇ ಬದುಕಿನ ಬಾಗಿಲಿನ ಕೀಲಿಕೈ ಕಳೆದುಹೋಗಿತ್ತು. ಬರಡು ಎದೆಯಲ್ಲಿ ಮೇಘ ಸಿಂಚನವಾದ ನಿನ್ನ ಪ್ರೀತಿ ಇಂದು ಎದೆ ಯನ್ನೆಲ್ಲ ಬರಡಾಗಿಸಿಬಿಟ್ಟಿದೆ. ಒಬ್ಬಂಟಿಯಾಗಿ ಪಯಣಿಸುವಾಗ ಹೊಸತೊಂದು ಲೋಕವನ್ನೇ ಸೃಷ್ಟಿಸಿದ್ದ ಮೇಘ ಸಂದೇಶಗಳು ನನ್ನ ಬದುಕಿನಲ್ಲಿ ಪ್ರೇಮವನ್ನು ಗಟ್ಟಿಗೊಳಿಸುತ್ತಲೇ ಸಾಗಿದ್ದವು. ಆದರೆ ಆ ಸುಮಧುರ ಪಯಣದ ಕಾವ್ಯ ಕನ್ನಿಕೆ ಅಕ್ಷರದಲ್ಲಷ್ಟೇ ಉಳಿದುಬಿಟ್ಟಿದ್ದು ನನ್ನರಿವಿಗೇ ಬಾರ ದಂತಾಗಿತ್ತು.
ಹರೆಯದಲ್ಲಿ ಎಲ್ಲವೂ ಚಂದ
ನೆನಪಾದರೆ ಸಾಕು ಹುಚ್ಚಾಗಿ ಬಿರಿದೇ ಹೋಗುವ ಹೃದಯ, ಏನೂ ಮಾಡಲಾಗದ ಮನಸ್ಥಿತಿ ಒಲವ ಪ್ರೀತಿಗೆ ಮುದ್ರೆ ಬೀಳದ ಸ್ಥಿತಿ, ಅನಿರೀಕ್ಷಿತ ತಿರುವುಗಳಿಂದ ಕೂಡಿದೆಲ್ಲವನ್ನೂ ಇಳಿಯುವ ಸೂರ್ಯನಿಗೆದುರಾಗಿ ಮರಳದಿನ್ನೆಯ ಮೇಲೆ ಗೀಚಿದ್ದ ಸಾಲುಗಳು ಈಗಲೂ ಕಾಡುತ್ತಲೇ ಇದೆ. ಹರೆಯದ ಗುಂಗಲ್ಲಿ ಎಲ್ಲವೂ
ಸುಂದರವಾಗಿ ಕಾಣುವಂತೆ ನನ್ನ ಮನದಲ್ಲಿ ಮೂಡಿದ್ದ ಪ್ರೀತಿ ಕಾಮನಬಿಲ್ಲಿನಂತೆ ಕಂಗೊಳಿಸುವ ಮುನ್ನವೇ ಬದುಕೆಲ್ಲವೂ ಮಿಥ್ಯ ಎನ್ನುವ ಸತ್ಯದ ಅರಿವಾಗಿತ್ತು. ಕಣ್ಣ ಹನಿಗೊಂದು ಉತ್ತರ ಹುಡುಕುವ ನಿಂತ ದನಿಗಿಂದು ಪ್ರಶ್ನೆಯ ಪರ್ವ ನಗುವಿನ ನಡುವೆಯೇ ತುಂಬಿಕೊಂಡಿದೆ. ಅರಿಯದ ಕಂಬನಿ ಕರುಣೆಯೇ ಇಲ್ಲದೆ ಜಾರುತ್ತಿದೆ. ಸೊಗಸಿನ ಮನ ಇಂದು ಮುಜುಗರದ ಮುಖ ಹೊತ್ತು ನಟಿಸಲು ಮುಂದಾಗಿದೆ. ಹುಡುಕಿದರೂ ಸಿಗದಷ್ಟು ಮಾರುಹೋಗಿರುವ ನನ್ನನ್ನು ಮತ್ತೆ ಹುಡುಕಿ ಕಡಿದಾದ ಹಾದಿಯಲ್ಲಿ ಮೌನದ ಜ್ಯೋತಿಯಾಗಿ ಉತ್ತರ ಹುಡುಕುವ ಮೌನ ಮನಸ್ಸು ನನ್ನದಾಗಿದೆ.
ಈ ಮನಸ್ಸಿನ ತೀರದ ಆಸೆಗೆ, ಸಾಗದ ಹಾದಿಗೆ, ಮೂಡಿ ಮರೆಯಾದ ಹೆಜ್ಜೆಯೊಂದು ಕಾಡಿದ ಕನಸಿಗೆ ನಂಟು ಕಾಣದ ಕಡಲಿನಂತೆ ಸಂಜೆಯೊಂದಿಗೆ ಮೆಲ್ಲನೆ ಜಾರುತ್ತಿದೆ. ಮರೆಯಾಗದ ಮೌನ ಸರಿದೂಗಬಹುದೆಂಬ ಹುಚ್ಚು ಬಯಕೆಯೊಂದಿಗೆ ಈ ಮನದ ಅಂಚೆಪೆಟ್ಟಿಗೆ ಕೈ ಚಾಚಿ ಕುಳಿತುಬಿಟ್ಟಿದೆ. ಸಾಗುವ ಹಾದಿಯಲ್ಲಿ
ಮೂಡಿದ ಕಂಬನಿ ಜಾರುವ ಮುನ್ನವೇ ಮಳೆಯಲ್ಲಿ ಬೆರೆತು ಕಾಣದ ಮನಸಿನ ಜೊತೆಯಾಗಿ ನಡೆದಿದೆ. ಮೌನದ ಭಾರ ಹೊತ್ತ ಸಾವಿರ ಕನಸಿನ ದಿಬ್ಬಣವಿಂದು ಕಾಣುವ ಜಗದಲ್ಲಿ ಮಬ್ಬು ಬೆಳಕಲ್ಲಿ ಹೊರಟಿದೆ. ಈ ಒಲವಿನ ಮನಸ್ಸು ಉತ್ತರ ಹುಡುಕುತ್ತಾ, ನೆನಪಿನೊಂದಿಗೆ ಭರವಸೆಯ ಜೊತೆಯಲ್ಲಿ ಸಾಗಲೇಬೇಕಾಗಿದೆ.
ಮೌನದ ತೆರೆ ಮೂಡಿ ನಗುತ್ತಿದ್ದ ಮನಸ್ಸಿನಲ್ಲಿ ಇದೀಗ ಬರೀ ನಿಶ್ಯಬ್ಧ. ಕಣ್ಣೀರ ಮರೆ ಮಾಚಿ ಮೇಲ್ನೋಟಕೆ ನಗು ತೋರಿ ನಿನ್ನ ದಾರಿ ಕಾಯುತ್ತಾ ಬದುಕಿದ್ದೇನೆ; ಒಮ್ಮೆಯಾದರೂ ಮರಳಿ ಬರುವೆಯೆಂದು. ನಿನಗಾಗಿ ಕಾಯುತ್ತಿರುವೆ.