ಸಂಡೆ ಸಮಯ
ಸೌರಭ ರಾವ್
ಬಾಳ್ವೆ ಮೇಲಿನ ಭಕ್ತಿಯ ಕರೆ – ವಿರಕ್ತಿಯ ಕರೆಯ ನಡುವೆ ಸಿಲುಕಿ ತೊಳಲಾಡುವ ಮೌನ. ಅನುಭವ ಶೋಧನೆಯ ಅಂತ ರ್ಮುಖತೆಯ ಮೌನ. ಅಡಿಗರ ಯಾವ ದಿವ್ಯದ ಯಾಚನೆ? ಪ್ರಶ್ನೆೆಯ ಮೌನ. ಕಡಲಿನ ಮಹಾಮೊರೆತವನ್ನೂ ಮರೆಯಿಸ ಬಲ್ಲ ಮೌನ, ಅದರ ಅನವರತ ಮೊರೆತದ ಮುಂದೆಯೇ ತೀರದ ತೀರದ ಮೌನ. ಸಹಜತೆಯ ಸರಳತೆಯ ಮೌನ. ಜಂಭವಿರದ ಜಿಜ್ಞಾಸೆಯ ಮೌನ.
ಗಂಟಲು ಬತ್ತಿಹೋಗಿ ಕಣ್ಣೀರೊಡೆವ ಕ್ಷಣದ ಮೌನ. ವೇದನೆ- ಬೇಗುದಿಗಳ ಆಳವನ್ನು ಮೆಟ್ಟಿ ಜಿಗಿದು ರೆಕ್ಕೆ ಬಡಿದು ಹಾರುವ
ಜೀವನೋತ್ಸಾಹದ ಮೌನ. ಅಪರಿಚಿತರ ಮುಗುಳ್ನಗೆಯ ಮೌನ. ನೆತ್ತರು-ಧಮನಿಗಳಲ್ಲಿ ಹೆಸರೊಂದು ಕರಗಿ ಹರಿಯುವ ಮೌನ. ಅಕ್ಕರೆಯಲ್ಲಿ ತೊಯ್ದು ಯಾರ ಕಣ್ಣಿಗೂ ಕಾಣದಂತೆ ಕಂಪಿಸುವ ಮೌನ. ಮುಗುಳ್ನಗೆಯ ಮೌನ.
ನೆನಪುಗಳ ಮೌನ. ಮುತ್ತಿಗೆ ಮತ್ತೇರುವ ಮೌನ. ಮಗುವೊಂದರ ಕನಸಿನಂಥಾ ಮಂದಹಾಸದ ಮೌನ. ಒಬ್ಬರ ಸಂತಸ ಮತ್ತೊಬ್ಬರಲ್ಲಿ ಇಮ್ಮಡಿಯಾಗುವ ಮೌನ. ಹಂಚಿಕೊಳ್ಳದ ನೋವಿನ ಮೌನ. ಕನ್ನಡಿಯ ನಿರ್ವಿಕಾರದ ಮೌನ. ತಂತಿಮಿಡಿ ಯದೇ ಬೆರಳುಗಳ ಸ್ಪರ್ಶಕ್ಕೆ ಕಾದುಕೂತ ವೀಣೆಯ ಮೌನ. ಸ್ವಪ್ನಹೀನ ಕಟ್ಟಲುಗಳ ಮೌನ. ಗಡಿಯಾರದ ಮುಳ್ಳುಗಳು ಚಲನೆ ಮರೆತುಬಿಡುವ ಮೌನ. ಕಳೆದುಹೋದ ಪತ್ರಗಳ ಮೌನ. ಶಾಯಿಯಲ್ಲಿ ಸುಪ್ತವಾಗಿಹ ಕವಿತೆಯ ಮೌನ, ಕವಿತೆ ಹುಟ್ಟಿಸುವ ಬೆರಗಿನ ಮೌನ.
ಪದಗಳು ಜೊತೆಜೊತೆಯಾಗಿ ಹಾಗೇ ಕಥೆಯಾಗಿಬಿಡುವ ಮೌನ. ಭೂಗಂಧದ ಮೌನ. ದೂರಬೆಟ್ಟದ ನೆತ್ತಿಯ ಮೇಲೆ ಇಬ್ಬನಿ ಯಿಂಚರದ ಮೌನ. ಬಿದಿರ್ಮರದ ಹಿಂದೆ ಚಂದ್ರ ಚದುರಿಹೋಗುವ ಮೌನ. ಪುಷ್ಕರಿಣಿಯ ನೀರನ್ನು ಬೆರಳತುದಿಯಿಂದ ಸ್ಪರ್ಶಿಸಿ ತರಂಗಗಳ ಸೃಷ್ಟಿಸುವ ಮೌನ. ಮಳೆ ನಿಂತ ಕ್ಷಣದ ನೀರವದ ನಿರಂತರತೆಯ ಮೌನ. ಎಣ್ಣೆ, ಬತ್ತಿ ಉರಿದುರಿದು ಬೆಳಕಾಗಿ ಕರಗಿಹೋಗುವ ಮೌನ.
ಬೆಳಕಿನ ಮೌನ, ನೆರಳಿನ ಮೌನ. ಭೂಮಿಯ ಭ್ರಮಣೆಯ ಮೌನ. ಸೂರ್ಯ ಹೊತ್ತುರಿವ ಮೌನ. ಪೂರ್ಣಚಂದಿರ ಸವೆದು ಮರೆಯಾಗುವ ಮೌನ. ತಾರೆಗಳ ಮಿನುಗಿನ ಮೌನ. ಎಲ್ಲ ಜೀವಿಗಳ ಉಸಿರಿನ ಮೌನ. ಆದಿ-ಅಂತ್ಯವಿಲ್ಲದೆ ಅನಂತಕ್ಕೆ ಹರಡಿ ನಿಂತ ಆಗಸವೆಂಬ ಭ್ರಮೆಯ ಮೌನ.
ಸತ್ಯ-ಸೌಂದರ್ಯದ ಮೌನ. ಜಗದ ವರ್ಣಾನುವರ್ಣ ಸ್ವರಾನುಸ್ವರಗಳಲ್ಲಿ ಕರಗಿ ಲೀನವಾಗುವ ಮಹಾಮೌನ. ಕಾಲಬಿಂದುಗಳ ಹೊಸೆದು ನಮ್ಮದಾಗಿಬಿಡುವ, ನಮ್ಮ ಪಾಲಿಗೆ ದಕ್ಕುವ ಸಮಯದ ಮೌನ. ಸ್ವಂತ ಸಮಾಧಿಯಿಂದ ಮೆಲ್ಲಗೆ ಎಚ್ಚರಾಗುವಂತೆ ಅಹಂಕಾರ ತ್ಯಜಿಸಿದಾಗ ಆವರಿಸುವ ದಿವ್ಯಮೌನ. ಅರ್ಥಗಳಿಗೀಗ ಭಾಷೆಯ ಹಂಗಿಲ್ಲದ ಮೌನ. ಇದ್ದೂ ಇಲ್ಲದಂತಾಗಬಹು ದಾದ ಮೌನ.
ಭಾರವಾದ ಮೌನವಲ್ಲ, ಈ ಮೌನಕ್ಕೆ ಎಲ್ಲವನ್ನೂ ತಿಳಿದ, ತಿಳಿದರೂ ಸೊಕ್ಕಿಲ್ಲದ ತೂಕ. ತಮಗೆಂದೇ ಮೀಸಲಾಗಿರುವ
ನಿರ್ದಿಷ್ಟ ಕಪಾಟುಗಳಲ್ಲಿ ಹೊತ್ತಿಗೆಗಳು ತಂತಮ್ಮ ಖಾಸಗಿ ಏಕಾಂತಕ್ಕೆ ಧಕ್ಕೆ ತರದ ಮಧುರ ಸಾಂಗತ್ಯದಲ್ಲಿ ವಿರಮಿಸುತ್ತಾ,
ಒಳಗೆ ಸುಪ್ತವಾಗಿರುವ ಅಸಂಖ್ಯ ಕಥೆಗಳಿಗೆ ಬಿಡಾರವಾಗಿ ಭೂತ-ವರ್ತಮಾನ-ಭವಿಷ್ಯಗಳನ್ನು ಕತ್ತಲೆಯಲ್ಲೂ ಕಾಯುತ್ತಿವೆ.
ನಮ್ಮ ಪ್ರಜ್ಞೆಗೆ ನಿಲುಕಿದ ಎಲ್ಲ ವಿಷಯಗಳ ಜ್ಞಾನಭಂಡಾರವಾಗಿ ತನ್ನ ಪಾಡಿಗೆ ತಾನು ತೆಪ್ಪಗಿರುವ ಗ್ರಂಥಾಲಯದ ಮೌನ ಕ್ಕೆಷ್ಟು ಘನತೆ. ಮೆಲ್ಲಗೆ ಯಾವುದೋ ಮೂಲೆಯಿಂದ ಪುಸ್ತಕವೊಂದನ್ನು ತೆರೆದು ಪುಟ ತಿರುಗಿಸಿದರೆ ಅದರ ಪ್ರತಿಧ್ವನಿ
ಗ್ರಂಥಾಲಯದ ಮಿಕ್ಕೆಲ್ಲ ಮೂಲೆ-ತಿರುವುಗಳ ಸಂಚರಿಸಿ ಪುನಃ ತನ್ನ ನೆಲೆಗೆ ಮರಳುತ್ತದೆ. ಒಂದು ಪುಟ ಬೆಳಕಿನಲ್ಲಿ ತೆರೆದುಕೊಟ್ಟ ಕಥೆಯ ಮುಕ್ತಿಯಲ್ಲಿ ಎಲ್ಲ ಪುಸ್ತಕಗಳೂ ಸಾಮೂಹಿಕವಾಗಿ ನಿಟ್ಟುಸಿರಿಟ್ಟಂತೆ. ಭಾರವಾದ ಮೌನವಲ್ಲ, ಆದರೂ, ಹೊರನಡೆದು ಶಹರದ ಗಲಭೆಯಲ್ಲಿ ಬೆರೆತರೂ ಬೆಂಬಿಡದೆ ಕಾಡುತ್ತದೆ ಗ್ರಂಥಾಲಯದ ಮೌನ. ಒಳಗಿದ್ದಾಗ ಸುಮ್ಮನಿರುವ ಸ್ತಬ್ಧ ಮೌನ. ಹೊರಬರುತ್ತಿದ್ದಂತೆ ಏನನ್ನೋ ಕಲಕುವ ಮೌನ.