Sunday, 15th December 2024

ರಾಬಿನ್ ಹುಡ್ ಹೊತ್ತು ತಂದ ಸಿಂಪಲ್ ಸುನಿ

ಅವತಾರ್ ಪುರುಷ ಚಿತ್ರದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಸಿಂಪಲ್ ಸುನಿ, ಮತ್ತೊಂದು ಸರ್‌ಪ್ರೈಸ್ ನೀಡಿದ್ದಾರೆ.

ಸುನಿ ತಮ್ಮ ಹುಟ್ಟಹಬ್ಬದಂದೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ರಾಬಿನ್ ಹುಡ್ ಶೀರ್ಷಿಕೆಯಲ್ಲಿ ಹೊಸ ಚಿತ್ರ ಮೂಡಿ ಬರಲಿದೆ. ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಕುತೂಹಲ ಹುಟ್ಟುಹಾಕಿದ್ದಾರೆ. ಫಸ್ಟ್ ‌‌ಲುಕ್ ನೋಡಿದರೆ ಇದೊಂದು ಆಕ್ಷನ್ ಚಿತ್ರ ಇರಬಹುದು ಅನ್ನಿಸುತ್ತದೆ. ಅಂದುಕೊಂಡಂತೆ ಇದು ಆಕ್ಷನ್ ಚಿತ್ರ ಎಂದು ಸುನಿ ಹೇಳಿದ್ದಾರೆ. ಆದರೂ ಚಿತ್ರದಲ್ಲಿ ಹೊಸ ವಿಶೇಷತೆ ಇದ್ದೇ ಇರುತ್ತದೆ.

ಯಾಕೆಂದರೆ ಸುನಿ ನಿರ್ದೇಶನದ ಚಿತ್ರಗಳೇ ಹಾಗೆ. ಇನ್ನು ಫಸ್ಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟ ಯಾರು ಎಂಬುದು ಇನ್ನೂ
ಬಹಿರಂಗವಾಗಿಲ್ಲ. ಸಿಂಪಲ್ ಸುನಿ ಹೊಸಬರಿಗೆ ಆದ್ಯತೆ ನೀಡುತ್ತಾರೆ. ಹಾಗೆಯೇ ಈ ಚಿತ್ರದಲ್ಲೂ ನವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ರಾಬಿನ್ ಹುಡ್ ಅವತಾರದಲ್ಲಿ ತುಮಕೂರು ಮೂಲದ ನವನಟನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ರಾಬಿನ್ ಹುಡ್ ನನ್ನ ಮತ್ತೊಂದು ಕನಸಿನ ಕೂಸು ಎಂದು ಸುನಿ ಬರೆದುಕೊಂಡಿದ್ದಾರೆ. ಇದನ್ನು ಗಮನಿಸಿದರೆ ಚಿತ್ರದಲ್ಲಿ ವಿಶೇಷತೆ ಇರುವುದು ಖಚಿತವಾಗಿದೆ.

ರಾಬಿನ್‌ಹುಡ್ ಚಿತ್ರಕ್ಕೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ಸುನಿ ಮತ್ತು ಪುಷ್ಕರ್ ಕಾಂಬಿನೇಷನ್‌ನಲ್ಲಿ ಅವತಾರ್ ಪುರುಷ ಚಿತ್ರ ನಿರ್ಮಾಣವಾಗುತ್ತಿದೆ. ಈಗ ಮತ್ತೆ ಇವರಿಬ್ಬರ ಕಾಂಬಿನೇಷನ್‌ನಲ್ಲಿಯೇ ರಾಬಿನ್ ಹುಡ್ ಸಿನಿಮಾ ಸೆಟ್ಟೇರುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಅವತಾರ್ ಪುರುಷ ಚಿತ್ರೀಕರಣ ಸಂಪೂರ್ಣ
ಮುಗಿದ ಬಳಿಕ ರಾಬಿನ್ ಹುಡ್ ಚಿತ್ರ ಸೆಟ್ಟೇರಲಿದೆ.