Thursday, 12th December 2024

ಈ ಶಿಕ್ಷಕ ದ್ವಿಧ್ವನಿಯ ಗಾಯಕ

ಗಂಡು ಮತ್ತು ಹೆಣ್ಣು ಧ್ವನಿಯಲ್ಲಿ ಗಾಯನ ಮಾಡುವ ಕಲೆಯನ್ನು ರೂಢಿಸಿಕೊಂಡು, ಹಲವು ಕಾರ್ಯಕ್ರಮ ನೀಡಿರುವ
ಮರಿಯಪ್ಪ ಭಜಂತ್ರಿಯವರಿಗೆ, ಹಾಡುವುದು ಗಂಭೀರ ಹವ್ಯಾಸ.

ಎಸ್.ವಿ.ಜಿ. ರಾಮದುರ್ಗ

ಸಂಗೀತ ನೆಲೆಯೂರಿರುವುದೆ ಗ್ರಾಮೀಣ ಜನಜೀವನದಲ್ಲಿ. ಅದರಲ್ಲೂ ವಿಶೇಷವಾಗಿ ತಳಸಮುದಾಯಗಳು ಹಾಗೂ ಶ್ರಮಿಕ ವರ್ಗಗಳಲ್ಲಿ. ನಮ್ಮ ಜಾನಪದ ಪರಂಪರೆ ಹಾಗೂ ದೇಶಿ ಸಾಹಿತ್ಯದ ಸೊಬಗನ್ನು ಇಂದಿಗೂ ಹಳ್ಳಿಗಳಲ್ಲಿ ಜೀವಂತವಾಗಿ ಗುರುತಿಸ ಬಹುದು.

ಎಷ್ಟೋ ಜನ ಕಲಾವಿದರು ತಮ್ಮ ಸಾಹಿತ್ಯ ಹಾಗೂ ಕಲೆಯ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೂ ಉಳಿಸುವ ಸಲುವಾಗಿ ಬಡತನದ ಬೇಗೆಯಲ್ಲಿ ತಾವು ಬೆಂದು, ತಮ್ಮ ಕಲೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಗ್ರಾಮೀಣ ಪ್ರತಿಭೆಯಾದ ಮರಿಯಪ್ಪ ಭಜಂತ್ರಿಯವರಿಗೆ ಗಾಯನ ಕಲೆಯೇ ಬದುಕಿಗೆ ಹೆಸರು ತಂದುಕೊಟ್ಟಿರುವುದು ಮಾತ್ರವಲ್ಲದೇ ಅವರ ಬದುಕಿಗೆ
ವರವಾಗಿ ಪರಿಣಮಿಸಿತು.

ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳದವರಾದ ಮರಿಯಪ್ಪ ಜುಲೈ 31, 1986ರಂದು ಜನಿಸಿದರು. ತಂದೆ ಮಾರುತಿ ಭಜಂತ್ರಿ, ತಾಯಿ ಸರಸ್ವತಿ. ಮರಿಯಪ್ಪ ಬಾಲ್ಯದಿಂದಲೂ ಬಡತನದ ಬವಣೆಯಲ್ಲಯೇ ಬೆಳೆದುಬಂದವರು. ಮೂಲ ಕುಲಕಸುಬು ಬಿದಿರಿನ ಬುಟ್ಟಿ, ಕಸಬರಿಗೆ ತಯಾರು ಮಾಡಿ ಬಂದ ಆದಾಯದಲ್ಲೇ ಕುಟುಂಬದ ನಿರ್ವಹಣೆ ಮಾಡು ವದು.

ಇಂತಹ ಸಂದರ್ಭದಲ್ಲಿ ಹಣಕಾಸಿನ ತೊಂದರೆಯಿಂದಾಗಿ ಓದುವುದಕ್ಕೆ ಹಲವಾರು ತೊಂದರೆ ಗಳು ಎದುರಾದವು. ಕಟಕೋಳದ ಎಸ್.ಜಿ.ಕೆ. ಎಸ್ ಪೌಢಶಾಲೆಯಲ್ಲಿ ಎಸ್. ಎಸ್.ಎಲ್.ಸಿ. ತೇರ್ಗಡೆಯಾಗಿ, ಎಸ್.ಜಿ.ಟಿ ಜ್ಯೂನಿಯರ್ ಕಾಲೇಜಿನಲ್ಲಿ ಪಿ.ಯುಸಿ ಯನ್ನು ವಿಜ್ಞಾನದೊಂದಿಗೆ ತೇರ್ಗಡೆಯಾಗಿ ನಂತರ ಸರಕಾರ ಕೋಟಾದಡಿಯಲ್ಲಿ 2008ರಲ್ಲಿ ಡಿ.ಎಡ್.ನ್ನು ಪೂರೈಸುತ್ತಾರೆ.

ಮರಿಯಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ 2008 ರಿಂದ 2017ರವರೆಗೆ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ಸೇವೆ ಸಲ್ಲಿಸಿದ ಅವರು ಸಧ್ಯ ಚಿತ್ತಾಪುರದ ಬಂಕೂರು ಸಿ.ಆರ್.ಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮರಿಯಪ್ಪನವರು ಕಾಲೇಜಿ ನಲ್ಲಿದ್ದಾಗಲೇ ಗೆಳೆಯರ ಒತ್ತಾಯದಿಂದ ಕಾರ್ಯಕ್ರಮದಲ್ಲಿ ಭಾವಗೀತೆ ಹಾಡಿದ್ದರು. ಎಲ್ಲರೂ ಮೆಚ್ಚುಗೆ ಮಾತುಗಳನ್ನಾಡಿ ಪ್ರೋತ್ಸಾಹಿಸಿದರು. ಈ ಹಂತದಲ್ಲಿ ಇವರ ಕಂಠವನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದ ಶಿಕ್ಷಕರಿಂದ ಮರಿಯಪ್ಪನವರಿಗೆ ಮತ್ತಷ್ಟು ಬೆಂಬಲ ಹಾಗೂ ಆತ್ಮಸ್ಥೆರ್ಯ ಮೂಡಿತು.

ಅವರು ಬಿಡುವಿನ ವೇಳೆಯಲ್ಲಿ ಸಹದ್ಯೋಗಿಗಳ ಸಮ್ಮುಖದಲ್ಲಿ ಹಾಗೂ ಏಕಾಂತವಾಗಿರುವ ಸಮಯದಲ್ಲಿ ದ್ವಿಕಂಠದಲ್ಲಿ ಗಾಯನ ಕಲೆಯ ಪ್ರಯೋಗ ನಡೆಸುತ್ತಿದ್ದರು. ಬಾಲ್ಯದಿಂದಲೂ ಮಧುರವಾದ ಕಂಠವನ್ನು ಹೊಂದಿದ್ದ ಮರಿಯಪ್ಪನವರಿಗೆ ಇದು ಕಷ್ಟದ ಕೆಲಸ ಎನಿಸಲಿಲ್ಲ. ಅವರು ಗುರುವಿನ ಬಳಿ ಕಲಿಯದೇ ಸ್ವತಃ ತಾವೇ ಪ್ರಯೋಗ ನಡೆಸಿ ದ್ವಿಕಂಠ ಕಲೆಯಲ್ಲಿ ಪರಿಣ
ತಿಯನ್ನು ಸಾಽಸಿದರು. ಮರಿಯಪ್ಪನವರು ಶಾಸೀಯವಾಗಿ ಸಂಗೀತವನ್ನು ಕಲಿಯದಿದ್ದರೂ ಮಾಧುರ್ಯ ಪೂರ್ಣ ಮತ್ತು ಹೆಣ್ಣಿನ ಧ್ವನಿಯ ಮೂಲಕ ಗಮನಸೆಳೆದಿದ್ದಾರೆ.

ಅವರ ಗಾಯನವು ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಜಾನಕಿಯವರ ಧ್ವನಿ ಮರಿಯಪ್ಪನವರು ಕಲೆಯ ಮೂಲಕವಾಗಿ ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಲೇ ಕಲೆಯನ್ನು ಆಧುನಿಕ ಸಂದರ್ಭಕ್ಕೆ ತಕ್ಕಂತೆ ಪ್ರಗತಿಯತ್ತ ಮುನ್ನಡೆ ಸುತ್ತ ಬಂದಿದ್ದಾರೆ. ಇತ್ತೀಚೆಗೆ ಅವರು ಕುಟುಂಬದ ಸದಸ್ಯರೆಲ್ಲ ಕೂಡಿಕೊಂಡು ಸಿದ್ಧೇಶ್ವರ ಮ್ಯೂಸಿಕಲ್ ಬ್ಯಾಂಡ್‌ನ್ನು ಸ್ಥಾಪಿಸಿದ್ದಾರೆ. ಭಾವಗೀತೆ, ಜಾನಪದಗೀತೆ, ಭಕ್ತಿಗೀತೆ, ವಚನಗಾಯನ ಮತ್ತು ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ
ಮೆಚ್ಚುಗೆಯನ್ನು ಗಳಿಸಿದ್ದಾರೆ.

ವಿಶೇಷವೆಂದರೆ ಇನ್ನೂರಕ್ಕೂ ಅಧಿಕ ಗೀತೆಗಳು ಅವರ ಸ್ಮತಿಪಟಲದಲ್ಲಿವೆ. ಗಾಯಕಿ ಎಸ್. ಜಾನಕಿ ಅವರಂತೆಯೇ ಧ್ವನಿ ಹೊರಡಿಸುವ ಅವರು ಇಲ್ಲಿಯವರೆಗೆ ಸಾವಿರಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಆಗಾಗ ಫೇಸ್‌ಬುಕ್ ಲೈವ್ ಕಾರ್ಯಕ್ರಮ ಕೂಡಾ ಮಾಡುತ್ತಿರುತ್ತಾರೆ. ಮರಿಯಪ್ಪನವರು ಹಾಡುವುದು ಅಷ್ಟೇ ಅಲ್ಲ, ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಾರೆ.

ಮರಿಯಪ್ಪನವರಲ್ಲಿ ಅಂತರ್ಗತವಾಗಿರುವ ಈ ಗಾಯನ ಕಲೆಯು ವಂಶಪಾರಂಪರ್ಯವಾಗಿ ಬಂದ ಬಳುವಳಿಯಾಗಿದೆ. ಇವರ ತಂದೆಯೇ ಇವರಿಗೆ ಗುರುವಾದರು. ಏಕಕಾಲಕ್ಕೆ ಹೆಣ್ಣು ಮತ್ತು ಗಂಡಿನ ಸ್ವರವನ್ನು ವ್ಯಕ್ತಪಡಿಸುವುದು ಸುಲಭದ ಮಾತಲ್ಲ. ಅವರು ದ್ವಿಕಂಠ ಕಲೆಯಲ್ಲಿ ಸಿದ್ಧಿಯನ್ನು ಪಡೆದುಕೊಂಡು ನಾಡಿನಾದ್ಯಂತ ಹೆಸರು ಮತ್ತು ಕೀರ್ತಿಯನ್ನು ಗಳಿಸಿದ್ದಾರೆ. ಆ ಮೂಲಕವಾಗಿ ಸಂಗೀತದ ವಿವಿಧ ಪ್ರಕಾರಗಳನ್ನು ಹೊರ ರಾಜ್ಯಗಳಲ್ಲಿಯೂ ಪ್ರದರ್ಶಿಸಿ ಮೆಚ್ಚುಗೆಯನ್ನು ಗಳಿಸಿದ್ದಾರೆ.

ಮರಿಯಪ್ಪನವರು ಶಿಕ್ಷಕ ವೃತ್ತಿಯನ್ನು ತುಂಬಾ ಪ್ರೀತಿಸುವುದರೊಂದಿಗೆ ಗಾಯನವನ್ನು ಪ್ರವೃತ್ತಿಯನ್ನಾಗಿ ರೂಢಿಸಿಕೊಂಡು ಸಾಮಾನ್ಯ ಜನತೆಯ ನೋವಿಗೆ ಸ್ಪಂದಿಸುತ್ತ ಮುನ್ನಡೆದಿದ್ದಾರೆ. ಇದಕ್ಕೆ ಪ್ರತಿಫಲವಾಗಿ ಕರ್ನಾಟಕ ಕಲಾ ಚೇತನ, ಗಾನ ಗಂಧರ್ವ, ಗಾನ ಗಾರುಡಿಗ, ಕಲ್ಯಾಣ ಕರ್ನಾಟಕ ಸಾಧಕ ಶಿಕ್ಷಕ ಪ್ರಶಸ್ತಿಗಳು ಮರಿಯಪ್ಪನವರಿಗೆ ಲಭಿಸಿವೆ.

ಕೋಟ್‌

‘ಹಾಡುಗಾರಿಕೆ ಕಲೆ ಬದುಕು ನೀಡಿದೆ. ಈ ಕ್ಷೇತ್ರಕ್ಕೆ ಬರಲೇಬೇಡ ಎಂದು ಬಯಸಿದ್ದ ತಂದೆ-ತಾಯಿ ಕೂಡ ಬಳಿಕ ನನ್ನ ಕಲೆ
ಗೌರವಿಸಿದರು. ಗಾಯನ ಮತ್ತು ಶಿಕ್ಷಕ ವೃತ್ತಿಯನ್ನು ಎರಡನ್ನೂ ಹೆಮ್ಮೆಯಿಂದ ಮುಂದುವರೆಸುತ್ತೇನೆ’.

– ಮರಿಯಪ್ಪ ಭಜಂತ್ರಿ