Thursday, 12th December 2024

ಸೈಕಲ್‌ ಮೂಲಕ ಜನಸೇವೆ

ಪ್ರತಿದಿನ ಸೈಕಲ್ ಮೂಲಕ ಹಳ್ಳಿ ತಲುಪಿ, ಗ್ರಾಮೀಣರಿಗೆ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವ ಈ ವೈದ್ಯರಿಗೆ ಈಗ 80ರ ಹರೆಯ.

ಸುರೇಶ ಗುದಗನವರ

ಕರೋನಾ ವೈರಸ್ ಸೋಂಕು ನಮ್ಮ ನಾಡಿಗೆ ತಂದ ಸಂಕಷ್ಟ ಅಷ್ಟಿಷ್ಟಲ್ಲ. ಲಾಕ್‌ಡೌನ್ ದಿನಗಳಲ್ಲಿ ಗ್ರಾಮಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಮರೀಚಿಕೆಯಾಗಿದ್ದವು.

ಅಂತಹ ಸಂಕಷ್ಟ ಸನ್ನಿವೇಶಗಳಲ್ಲಿಯೂ 80 ವರ್ಷದ ವೈದ್ಯರೊಬ್ಬರು ಸೈಕಲ್ ಮೂಲಕ ಹಳ್ಳಿಗಳಿಗೆ ಹೋಗಿ ಚಿಕಿತ್ಸೆ ನೀಡಿರುವ ಒಂದು ವಿದ್ಯಮಾಬನ ವಿಸ್ಮಯ ಮೂಡಿಸುತ್ತದೆ. ಆ ವೈದ್ಯರೇ ಮಹಾರಾಷ್ಟ್ರದ ಡಾ.ರಾಮಚಂದ್ರ ದಾಂಡೇಕರ ಅವರು.
ಮೂಲತಃ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಮುಲ್ ಪಟ್ಟಣದವರಾದ ರಾಮಚಂದ್ರ ದಾಂಡೇಕರ ಅವರು ವಾರ್ಧಾ ಜಿಲ್ಲೆಯ ಪೊಹನಾರದಲ್ಲಿ ಜನಿಸಿದರು. ರಾಮಚಂದ್ರ ಅವರು ನಾಗಪುರದ ಸ್ವಾವಲಂಬಿ ಶಾಲೆಯಲ್ಲಿ ಶಿಕ್ಷಣ ಪೂರೈಸಿದ ನಂತರ 1957ರಲ್ಲಿ ನಾಗಪುರದ ಹೋಮಿಯೋಪಥಿ ಕಾಲೇಜಿನಿಂದ ಹೋಮಿಯೋಪಥಿ ಶಿಕ್ಷಣ ಪಡೆದರು.

ನಂತರ ಒಂದು ವರ್ಷ ಕಾಲೇಜಿನಲ್ಲಿ ಉಪನ್ಯಾಸ ಕೆಲಸ ಮಾಡಿದರು. ಡಾ.ರಾಮಚಂದ್ರ ಅವರು ಚಂದ್ರಾಪುರದ ಪ್ರಸಿದ್ಧ ವೈದ್ಯರಾದ ಸಚ್ಚಿದಾನಂದ ಮತ್ತು ಅಂದಂಕರ ಅವರಲ್ಲಿ ತರಬೇತಿ ಪಡೆದರು. ಅವರು ಪ್ರಸಿದ್ಧ ವೈದ್ಯರಾದ ಬಾಬ್ಟೆಯವರಲ್ಲಿ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿದರು. 1959ರಲ್ಲಿ ಚಂದ್ರಾಪುರದ ಸುತ್ತಮುತ್ತಲಿನ ಹಳ್ಳಿಗಳು ನೆರೆಹಾವಳಿಗೆ ಒಳಪಟ್ಟು
ಹಾನಿಗೊಳಗಾದವು. ಇಂತಹ ಸಮಯದಲ್ಲಿ ಡಾ.ರಾಮಚಂದ್ರ ಅವರು ಸೈಕಲ್ ಮೂಲಕ ಹಳ್ಳಿಗಳಿಗೆ ತೆರಳಿ ಚಿಕಿತ್ಸೆ ನೀಡಲು ಪ್ರಾರಂಭಿಸಿದರು.

ಹೀಗೆ ಕಳೆದ 60 ವರ್ಷಗಳಿಂದಲೂ ಚಂದ್ರಾಪುರ ಜಿಲ್ಲೆಯ ಮುಲ್ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಿಗೆ ಅವರು ಪ್ರತಿದಿನ 10
ಕಿ.ಮೀ. ಸೈಕಲ್ ತುಳಿದು ಬಡವರಿಗೆ ಚಿಕಿತ್ಸೆ ನೀಡುವ ಮಾನವೀಯ ಕಾರ್ಯವನ್ನು ಮಾಡುತ್ತಿದ್ದಾರೆ. ಅವರು ಬೆಳಿಗ್ಗೆ 7 ಗಂಟೆಗೆ
ಎರಡು ಔಷಧಿಗಳ ಚೀಲ, ಪರೀಕ್ಷಾ ಕಿಟ್ ಹಿಡಿದು ಸೈಕಲ್ ಹತ್ತುತ್ತಾರೆ. ಹಳ್ಳಿಗಳಲ್ಲಿಯ ವೃದ್ಧ ರೋಗಿಗಳನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಿ ಮಧ್ಯಾಹ್ನ ತಮ್ಮ ಮನೆಗೆ ವಾಪಾಸ್ಸಾಗುತ್ತಾರೆ.

ಹೀಗೆ ಪ್ರತಿದಿನವೂ ಹಳ್ಳಿಗೆ ತೆರಳಿ ನಗರಗಳಿಗೆ ಹೋಗಲಾರದ ರೋಗಿಗಳಿಗೆ ಚಿಕಿತ್ಸೆ ನೀಡುವುದು ಅವರ ದೈನಂದಿನ ಚಟುವಟಿಕೆ ಯಾಗಿದೆ. ಅವರು ವೈದ್ಯಕೀಯ ಸೇವೆಯಲ್ಲಿ ನುರಿತ ಅನುಭವವನ್ನು ಹೊಂದಿರುವುದರಿಂದ ರೋಗಿಗಳಿಗೆ ಹೋಮಿಯೋಪತಿ ಚಿಕಿತ್ಸೆಯನ್ನು ನೀಡುತ್ತಿರುವುದು ವಿಶೇಷವಾಗಿದೆ. ‘ನನಗೆ 80 ವಯಸ್ಸು, ಅದರೆ ಸುಸ್ತಾಗಿಲ್ಲ, ನನಗೆ ಆರಾಮ ಮಾಡಬೇಕೆಂದು ಅನಿಸುವುದಿಲ್ಲ, ಜನರ ಸೇವೆ ಮಾಡಲು ಬಯಸುತ್ತೇನೆ, ಅದು ನನಗೆ ಶಕ್ತಿಯನ್ನು ನೀಡುತ್ತದೆ’ ಎನ್ನುತ್ತಾರೆ ಡಾ.ರಾಮಚಂದ್ರ
ಅವರು. ಕರೋನಾ ಸಂಕಷ್ಟದಲ್ಲಿ ವೈದ್ಯರು ಬಡಜನರಿಗೆ ಚಿಕಿತ್ಸೆ ನೀಡಲು ಹೆದರುತ್ತಿದ್ದಾರೆ.

ಅದರೆ ನನಗೆ ಅಂತಹ ಯಾವುದೇ ಭಯವಿಲ್ಲ. ನಾವು ಸರಿಯಾದ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು ಎನ್ನುತ್ತಾರೆ ಅವರು. ಡಾ.ರಾಮಚಂದ್ರ ದಾಂಡೇಕರ ಅವರ ಹಿರಿಯ ಮಗ ಜಯಂತ ತಂದೆಯವರ ಕಾರ‌್ಯವನ್ನು ಶ್ಲಾಘಿಸುತ್ತ ‘ಎಂತಹ ವಾತಾವರಣ ವಿದ್ದರೂ ಅವರು ಹಳ್ಳಿಗಳಿಗೆ ಹೋಗುವುದನ್ನು ತಪ್ಪಿಸುವುದಿಲ್ಲ. ಕೆಲವು ಹಳ್ಳಿಗಳಿಗೆ ರಸ್ತೆಗಳೇ ಇಲ್ಲ. ಕೆಲವೊಂದು ಸಲ ಮಹಿಳೆ ಯರ ಹೆರಿಗೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ.

ಹಳ್ಳಿಗಳಿಂದ ವಾಪಸಾದ ನಂತರ, ಸಂಜೆಯ ಹೊತ್ತಿನಲ್ಲಿ ಮನೆಯಲ್ಲಿಯೇ ಕುಳಿತು ಚಿಕಿತ್ಸೆ ನೀಡುತ್ತಾರೆ. ಈಗಿನ ದಿನಗಳಲ್ಲಿ
ಅಪರೂಪದ ವೈದ್ಯರಾಗಿದ್ದಾರೆ’ ಎಂದು ಹೇಳುತ್ತಾರೆ. ಇಂದಿನ ಪೀಳಿಗೆಯ ವೈದ್ಯರಲ್ಲಿ ಕೆಲವರು ಹಣ ಸಂಪಾದನೆಯ ಆಸೆಯಿಂದ ವೈದ್ಯಕೀಯ ವೃತ್ತಿಗೆ ಬರುತ್ತಿದ್ದಾರೆ. ವೈದ್ಯರ ಮುಖ್ಯ ಗುರಿ ಜನರ ಸೇವೆ. ಅದನ್ನು ಗುರುತಿಸಿ ಎಲ್ಲರೂ ಕಾರ್ಯ ನಿರ್ವಹಿಸ ಬೇಕೆಂದು ಡಾ.ರಾಮಚಂದ್ರ ದಾಂಡೇಕರ್ ಹೇಳುತ್ತಾರೆ. ಇಳಿವಯಸ್ಸಿನಲ್ಲೂ ಜನ ಸೇವೆ ಮಾಡುತ್ತಿರುವ ಈ ಗ್ರಾಮೀಣ ವೈದ್ಯರು ಎಲ್ಲರಿಗೂ ಸ್ಫೂರ್ತಿಯಾಗಬೇಕು.