Friday, 22nd November 2024

ಡಿಜಿಟಲ್‌ ಕಿರಿಕಿರಿಗೆ ಪರಿಹಾರವೇನು ?

ವಾಟ್ಸಾಪ್, ಇಮೇಲ್ ಮೊದಲಾದ ಸಂವಹನ ಮಾಧ್ಯಮಗಳ ಮೂಲಕ ಕಚೇರಿ ಕೆಲಸವನ್ನೂ ಮಾಡುವ ಕಾಲವಿದು. ಹೀಗಿರುವಾಗ, ಅಗತ್ಯವಿಲ್ಲದ ಮೇಲ್‌ಗಳು, ವಾಟ್ಸಾಪ್‌ಗಳು ಇನ್‌ಬಾಕ್ಸ್‌‌ನಲ್ಲಿ ತುಂಬಿ ಹೋದರೆ, ಅವಶ್ಯ ಎನಿಸುವ ಕೆಲಸಕ್ಕೇ ಕುಂದು ಬರಬಹುದು. ಅನವಶ್ಯಕ ಡಿಜಿಟಲ್ ಕಿರಿಕಿರಿಗೆ ಪರಿಹಾರ ನಿಮ್ಮ ಕೈಯಲ್ಲೇ ಇದೆ.

ಎಲ್.ಪಿ.ಕುಲಕರ್ಣಿ

ಟೆಕ್ ಸೈನ್ಸ್

ಈ ಕೊರೊನಾ ಕಾಲದಲ್ಲಿ ಕಚೇರಿ ಕೆಲಸ, ಆನ್‌ಲೈನ್ ಪಾಠ ಹೀಗೆ ಪ್ರತಿಯೊಂದೂ ಮನೆಯಿಂದಲೇ ಆಗುವಾಗ ಕಂಪ್ಯೂಟರ್, ಮೊಬೈಲ್, ವಾಟ್ಸ್ಯಾಪ್‌ಗಳ ಮೊರೆ ಹೋಗದಿರುವುದು ಅಸಾಧ್ಯ. ಆದರೆ ಕೆಲಸ, ಪಾಠದ ಮಧ್ಯೆ ಪದೇ ಪದೇ ಬರುವ  ಇಮೇಲ್ ‌ಗಳು, ಎಸ್ಸೆಮ್ಮೆಸ್ ಸಂದೇಶಗಳು, ಆ್ಯಪ್ ನೋಟಿಫಿಕೇಶನ್‌ಗಳು, ಅವುಗಳು ಬಂದಾಗಲೆಲ್ಲಾ ಮೊಳಗುವ ಟಣ್ ಟಣ್ ಸದ್ದುಗಳು –
ಇವುಗಳಿಂದ ಆಗಾಗ ಕಿರಿಕಿರಿ ಅನುಭವಿಸುತ್ತಿರುತ್ತೇವೆ.

ಕೆಲವೊಮ್ಮೆ ಇವುಗಳ ಕಿರಿಕಿರಿಯ ನಡುವೆ ಮತ್ತು ಸಾಲು ಸಾಲಾಗಿ ಬರುವ ಮೆಸೇಜ್‌ಗಳ ನಡುವೆ ಮುಖ್ಯವಾದ ಮೇಲ್ ಅಥವಾ ಮೆಸೇನ್‌ಗಳನ್ನು ಡಿಲೀಟ್ ಮಾಡಿ ಬಿಡುವ ಸಂದರ್ಭ ಒದಗಿಬಿಡುತ್ತದೆ. ಇದನ್ನು ಪರಿಹರಿಸಲು, ನಾವು ಕೆಲವು ಕ್ರಮ ಕೈಗೊಳ್ಳ
ಬೇಕು. ಡಿಜಿಟಲ್ ಸಂವಹನದ ಸಮಸ್ಯೆಗಳನ್ನು ಪರಿಹರಿಸಿ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ಬರುವಂತೆ ರೂಢಿಸಿಕೊಂಡರೆ ಕಿರಿಕಿರಿಯೂ ತಪ್ಪುತ್ತದೆ, ಅಲ್ಲದೇ ನಮ್ಮ ಯಾವುದೇ ಮಹತ್ವದ ಮಾಹಿತಿಗಳು ಅಳಿಸಿ ಹೋಗುವುದಿಲ್ಲ. ಡಿಜಿಟಲ್ ಕಿರಿಕಿರಿಯಿಂದ ಬಳಲುತ್ತಿದ್ದರೆ ಇಲ್ಲಿವೆ ಕೆಲವು ಸುಲಭ ಉಪಾಯಗಳು.

*ಕೆಲಸದ ಅವಧಿಯಲ್ಲಿ ಪದೇ ಪದೇ ಬರುವ ಅನಗತ್ಯ ನೋಟಿಫಿಕೇಷನ್‌ಗಳಿಂದಾಗುವ ಕಿರಿಕಿರಿ ತಪ್ಪಿಸಿಕೊಳ್ಳಲು ನೋಟಿಫಿಕೇ ಶನ್ ಆಫ್ ಮಾಡಿ ಇಡಿ ಅಥವಾ ಕೆಲಸ ಮುಗಿಯುವವರೆಗೂ ನಿಮ್ಮ ಮೊಬೈಲ್ ಇಲ್ಲವೇ ಮೊಬೈಲ್, ಕಂಪ್ಯೂಟರ್, ಲ್ಯಾಪ್‌ ಟಾಪ್‌ಗಳನ್ನು ಸೈಲೆಂಟ್ ಮೋಡ್ನಲ್ಲಿರಿಸಿ.

*ಮನೆಯಿಂದಲೇ ಕೆಲಸ ಮಾಡುವಾಗ ಡಿಜಿಟಲ್ ವೇಳಾಪಟ್ಟಿಯನ್ನು ಸಿದ್ಧ ಮಾಡಿಟ್ಟುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಕಚೇರಿಯ ಕರೆ, ಮಗುವಿನ ಆನ್‌ಲೈನ್ ಕ್ಲಾಸು, ವೈಯಕ್ತಿಕ ಕರೆ ಹಾಗೂ ಇಮೇಲ್ ಗಳನ್ನು ನೋಡುವುದು ಮೊದಲಾದ ಕೆಲಸಗಳ ನಡುವೆ ಒದ್ದಾಡಬೇಕಾಗುತ್ತದೆ. ಡಿಜಿಟಲ್ ವೇಳಾಪಟ್ಟಿಯಲ್ಲಿ ಪ್ರತಿ ಕೆಲಸವನ್ನು ನಿರ್ದಿಷ್ಟ ಸಮಯಕ್ಕೆ ನಿಭಾಯಿಸಲು ಸಾಧ್ಯ ವಾಗುತ್ತದೆ. ಯಾವ ಕೆಲಸ ಯಾವ ಸಮಯದಲ್ಲಿ ಮಾಡುವುದು ಎಂದು ಒಂದು ಪಟ್ಟಿ ಮಾಡಿಟ್ಟುಕೊಂಡು, ಸಾಧ್ಯವಾದಷ್ಟು ಅದನ್ನು ಅನುಸರಿಸಿದರೆ, ಗೊಂದಲಗಳನ್ನು ಕಡಿಮೆ ಮಾಡಿಕೊಳ್ಳಬಹುದು.

*ಕೆಲವರಿಗೆ ಇಮೇಲ್ ಗಳನ್ನು ನಿಭಾಯಿಸುವುದೇ ಒಂದು ದೊಡ್ಡ ಕೆಲಸ. ಹಲವು ಮೂಲಗಳಿಂದ, ಸಂಸ್ಥೆಗಳಿಂದ, ಗೆಳಯರಿಂದ ಒಂದರ ಹಿಂದೆ ಒಂದರಂತೆ ಇಮೇಲ್‌ಗಳೂ ಬರುತ್ತಲೇ ಇರುತ್ತವೆ. ಸಿಕ್ಕ ಸಿಕ್ಕ ಇಮೇಲ್‌ಗಳ ದೊಡ್ಡ ಪಟ್ಟಿಯ ನಡುವೆ, ಕೆಲವೊಮ್ಮೆ ಅವಶ್ಯವಿರುವ ತೀರಾ ವೈಯಕ್ತಿಕ ಇಮೇಲ್‌ಗಳು ಗಮನಕ್ಕೇ ಬರದಿರುವ ಅನುಭವ ಆಗಿರಬಹುದು. ತುರ್ತಾಗಿ ನೋಡಬೇಕಿದ್ದ, ಉತ್ತರಿಸಬೇಕಿದ್ದ ಮೇಲ್ ಗಳು, ಅದ್ಯಾವುದೋ ಮೂಲೆಯಲ್ಲಿ ಕೆಳಕೆಳಗೆ ಹೋಗಿ ಕೂತಿರುತ್ತವೆ. ಅದರಿಂದ ಮುಜುಗರವೂ ಆಗುವ ಸಾಧ್ಯತೆ ಇದೆ. ಆ ಕಾರಣಕ್ಕೆ ಬೇಡದ ಮೇಲ್‌ಗಳನ್ನು ಅನ್ ಸಬ್‌ಸ್ಕ್ರೈಬ್ ಮಾಡುವುದು ಉತ್ತಮ.

*ಇನ್ ಬಾಕ್ಸ್‌ನಲ್ಲಿ ಬರುವ ಪ್ರತಿ ಮೇಲ್‌ನ್ನು ಓದುತ್ತಾ ಕೂರುವ ಬದಲು ಲೇಬಲ್ ಮಾಡಿಕೊಂಡು ಆಯಾಯ ಲೇಬಲ್ ಫೋಲ್ಡರ್‌ನಲ್ಲಿ ಹಾಕಿಟ್ಟುಕೊಂಡು ಬಿಡುವಿನ ಸಮಯದಲ್ಲಿ ಓದುವುದು ಒಳಿತು. ಜೊತೆಗೆ ಕಳುಹಿಸುವವರು, ಸ್ವೀಕರಿಸುವವರು ಹಾಗೂ ವಿಷಯದ ಆಧಾರದ ಮೇಲೆ ಮೇಲ್ ಅನ್ನು ವಿಂಗಡಿಸಿಕೊಳ್ಳಬಹುದು ಅಥವಾ ಮಿತಿಗೊಳಿಸಿಕೊಳ್ಳಬಹುದು. ಆಟೊ ಮೆಟಿಕ್ ಮಾರ್ಕ್ ಇಟ್ ಆ್ಯಸ್ ರೀಡ್ ಫಿಲ್ಟರ್ ಕ್ರಿಯೇಟ್ ಮಾಡಿ ಇರಿಸಿಕೊಂಡರೆ ಅದು ಅರ್ಕೈವ್ನಲ್ಲಿ ಇರುತ್ತದೆ ಅಥವಾ ಲೇಬಲ್‌ನಲ್ಲಿ ಇರುತ್ತದೆ.

*ವೈಯಕ್ತಿಕ ವಿಷಯಗಳಿಗೆ ಹಾಗೂ ಕಚೇರಿ ಮೇಲ್ ಎರಡೂ ಒಂದೇ ವಿಳಾಸಕ್ಕೆ ಬಂದು ಗೊಂದಲ ಉಂಟು ಮಾಡುತ್ತಿದೆಯೇ? ಅಲ್ಲದೇ ಮುಖ್ಯವಾದ ಮೇಲ್ ಗಳು ಮಿಸ್ ಆಗುತ್ತಿವೆಯೇ? ಹಾಗಾದರೆ ಈ ಎರಡನ್ನೂ ಬೇರೆ ಬೇರೆ ಫೋಲ್ಡರ್‌ನಲ್ಲಿ ಸಿಗುವಂತೆ
ಮಾಡಬಹುದು. ಈ ಆಯ್ಕೆ ಇಮೇಲ್, ಔಟ್‌ಲುಕ್ ಎರಡಲ್ಲೂ ಲಭ್ಯವಿದೆ.

*ಮೀಟಿಂಗ್ ಆಯೋಜಿಸುವುದು, ಕ್ಯಾನ್ಸಲ್ ಮಾಡುವುದು ಮುಂತಾದವಕ್ಕೆ ಸಂಬಂಧಿಸಿ ಯುಕ್ಯಾನ್ ಬುಕ್ಮಿ, ಕ್ಯಾಲೆಂಡ್ಲಿಯಂತಹ ಶೇರ್ಡ್ ಕ್ಯಾಲೆಂಡರ್‌ಗಳನ್ನು ಬಳಸಬಹುದು. ಇದನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವುದರಿಂದ ಸುಲಭವಾಗಿ ಸಂವಹನ ಮಾಡಬಹುದು.

*ಪ್ರತಿಬಾರಿ ಮೇಲ್ ಟೈಪ್ ಮಾಡಿ ಸಮಯ ಹಾಳು ಮಾಡಿಕೊಳ್ಳುವ ಬದಲು ಟೆಂಪ್ಲೆಟ್‌ಗಳನ್ನು ಸೆಟ್ ಮಾಡಿಕೊಳ್ಳಬಹುದು.
*ಕೆಲವು ಬಾರಿ ಪರಿಚಯ ಇಲ್ಲದ, ಅಗತ್ಯ ಇಲ್ಲದ ಜಾಹೀರಾತು ಸಂಸ್ಥೆಗಳು, ಆ ಉದ್ದೇಶದ ವ್ಯಕ್ತಿಗಳು ಒಂದರ ಹಿಂದೆ ಒಂದರಂತೆ ಪ್ರಚಾರದ ಮೇಲ್‌ಗಳನ್ನು ಕಳುಹಿಸಬಹುದು. ಅವು ಬೇಡ ಎನಿಸಿದರೆ, ಸರಳವಾಗೆ ಆ ಮೇಲ್‌ಗಳನ್ನು ಬ್ಲಾಕ್ ಮಾಡಿಬಿಡಿ.
*ಕೆಲವರು ನಮ್ಮ ಫೋನ್‌ಗೆ ಕರೆ ಇಲ್ಲವೇ ಎಸ್ ಎಮ್ ಎಸ್ ಮಾಡಿ ‘ನಿಮ್ಮ ಮೊಬೈಲ್ ಸಂಖ್ಯೆಗೆ ಲಕ್ಕಿ ಬಹುಮಾನದ ರೂಪದಲ್ಲಿ ಇಷ್ಟು ಮೊತ್ತದ ಕಾರು ಬಂದಿದೆ.

ಕಾರಣ ನೀವು ನಿಮ್ಮ ಪೂರ್ಣ ಹೆಸರು ವಿಳಾಸದೊಂದಿಗೆ ಇ-ಮೇಲ್ ವಿಳಾಸವನ್ನು ಎಸ್ ಎಮ್ ಎಸ್ ಮಾಡಿ ಎಂದು ಬಂದಿರು ತ್ತದೆ. ದಯವಿಟ್ಟು ಅಂತಹ ಸಂದೇಶಕ್ಕೆ ಉತ್ತರಿಸುವುದು ಬೇಡ. ಇದು ಒಂದು ಮೋಸದ ಜಾಲ. ಅಂತಹ ದೂರವಾಣಿ ಸಂಖ್ಯೆ ಯನ್ನು ಬ್ಲಾಕ್ ಲಿಸ್ಟ್‌ ಮಾಡಿಬಿಡುವುದು ಉತ್ತಮ. ಇದರಿಂದ ಆ ನಂಬರ್‌ನಿಂದ ಪದೆ ಪದೆ ಆಗುವ ಕಿರಿಕಿರಿ ತಪ್ಪುತ್ತದೆ.

ಜತೆಗೆ, ಅಂತಹ ಸಂದೇಶ ಬಾರದಂತೆ ಮಾಡುವ ಸರಳ ವಿಧಾನವೂ ಮೊಬೈಲ್‌ನಲ್ಲಿ ಲಭ್ಯ. ಮನೆಯಿಂದ ಕೆಲಸ ಮಾಡುವ, ಮನೆಯಿಂದಲೇ ಮಕ್ಕಳ ತರಗತಿಗಳನ್ನು ನಿಭಾಯಿಸುವ ಈಗಿನ ಸನ್ನಿವೇಶ ಇನ್ನೂ ಕೆಲವು ಸಮಯ ಮುಂದುವರಿಯಬಹುದು.
ಆದ್ದರಿಂದ, ಮೇಲ್, ವಾಟ್ಸಾಪ್‌ಗಳನ್ನು ಸೂಕ್ತ ರೀತಿಯಿಂದ ನಿಭಾಯಿಸಿದರೆ, ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಂಡು, ಸುಗಮವಾಗಿ ಕೆಲಸಗಳನ್ನು ಮುಗಿಸಲು ಸಾಧ್ಯ.

ಪದೇ ಪದೇ ಬರುವ ನೋಟಿಫಿಕೇಶನ್‌ಗಳಿಗೆ ಉತ್ತರ ನೀಡುವ ಅಭ್ಯಾಸದಿಂದ ದೂರವಿರಿ. ಮೊಬೈಲ್‌ನಲ್ಲೂ ತಿಂಗಳಿಗೊಮ್ಮೆ ಬೇಡದ ಆ್ಯಪ್‌ಗಳನ್ನು ಡಿಲೀಟ್ ಮಾಡುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಬಳಕೆಯ ಸಮಯವನ್ನು ನೋಡಿಕೊಂಡು ಅವಶ್ಯ ವಿರುವುದನ್ನಷ್ಟೇ ಫೋನ್‌ನಲ್ಲಿ ಇರಿಸಿಕೊಳ್ಳಿ.