ಬೇಲೂರು ರಾಮಮೂರ್ತಿ
ಒಬ್ಬ ವ್ಯಾಪಾರಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರೂ ಶತದಡ್ಡರು. ಅವರಿಗೆ ಉಪನಯನ ಮಾಡಿಸಬೇಕಿತ್ತು. ಹಿರಿಯರನ್ನು ‘ನೀವು ನನ್ನ ಮಕ್ಕಳಿಗೆ ಉಪನಯನ ಮಾಡಿಸಬೇಕು’ ಎಂದು ಬೇಡಿಕೊಂಡ. ಹಿರಿಯರು ‘ನೋಡಿ, ಉಪನಯನವನ್ನು ತಂದೆಯೇ ಮಾಡಬೇಕು ಮತ್ತು ಗಾಯತ್ರಿ ಮಂತ್ರವನ್ನು ಪ್ರಪ್ರಥಮ ಬಾರಿಗೆ ತಂದೆಯೇ ಬೋಧಿಸಬೇಕು’ ಎಂದರು.
ಆದರೆ ವ್ಯಾಪಾರಿ ‘ನನಗೆ ಗಾಯತ್ರಿ ಮಂತ್ರ ಮರೆತುಹೋಗಿದೆ’ ಎಂದು ಹಠ ತೆಗೆದ. ಆ ಹಿರಿಯರು ಕೊಟ್ಟ ಸಲಹೆ ಏನೆಂದರೆ ‘ಆರು
ತಿಂಗಳ ಕಾಲ ಅವರು ಆ ವ್ಯಾಪಾರಿಗೆ ಗಾಯತ್ರಿ ಮಂತ್ರವನ್ನು ಅನುಷ್ಠಾನ ಗೈಯುವುದು. ನಂತರ ಅವನು ತನ್ನ ಮಕ್ಕಳಿಗೆ
ಗಾಯತ್ರಿ ಮಂತ್ರ ಬೋಧಿಸುವುದು’ ಎಂದು. ಹಾಗೇ ಆಯಿತು. ಆರು ತಿಂಗಳು ವ್ಯಾಪಾರಿಯು ಗಾಯತ್ರಿ ಮಂತ್ರವನ್ನು ಕಲಿತು, ತನ್ನ ಮಕ್ಕಳಿಗೆ ಉಪನಯನ ಮಾಡಿದ.
ಈ ಘಟನೆ ನಡೆದು ಹಲವು ವರ್ಷಗಳ ನಂತರ ಅಚಾನಕ್ಕಾಗಿ ಆ ಹಿರಿಯರೂ ಮತ್ತು ಆ ವ್ಯಾಪಾರಿಯೂ ಮುಖಾಮುಖಿಯಾದರು.
ವ್ಯಾಪಾರಿಯು ಹಿರಿಯರನ್ನು ಗುರುತಿಸಿ ‘ನಾನು ನಿಮ್ಮನ್ನು ಹುಡುಕು ತ್ತಿದ್ದೆ ಮತ್ತು ನಿಮ್ಮನ್ನು ನನ್ನ ಮನೆಗೆ ಕರೆಯಬೇಕೆಂದು ಅಂದುಕೊಂಡಿದ್ದೆ, ಈಗ ಸಿಕ್ಕಿದ್ದೀರಿ. ಬನ್ನಿ ನನ್ನ ಮನೆಗೆ’ ಅಂದ. ಹಿರಿಯರು ಅವನನ್ನು ಕಿಚಾಯಸಲು, ‘ನೋಡಪ್ಪ ನನಗೆ ದಕ್ಷಿಣೆ ಕೊಡೋದಾದರೆ ನಿನ್ನ ಮನೆಗೆ ಬರ‍್ತೀನಿ’ ಅಂದರು.
ವ್ಯಾಪಾರಿಯು ‘ಅದಕ್ಕೇನು ಬನ್ನಿ’ ಎಂದು ಆ ಹಿರಿಯರನ್ನು ಮನೆಗೆ ಕರೆತಂದ. ಆತನ ಪತ್ನಿಯೂ ಹಿರಿಯರನ್ನು ನೋಡಿ ಸಂತಸ ಪಟ್ಟು, ಉತ್ತಮ ಅಡಿಗೆಯನ್ನು ಮಾಡಿ ಬಡಿಸಿದಳು. ಹಿರಿಯರು ಹೊರಡುತ್ತೇನೆ ಎಂದಾಗ, ವ್ಯಾಪಾರಿಯು ಒಂದು ನೋಟಿನ ಕಟ್ಟನ್ನುಹಿರಿಯರ ಮುಂದಿಟ್ಟು ‘ಸ್ವೀಕರಿಸಬೇಕು’ ಎಂದ. ಹಿರಿಯರು ನಗುತ್ತಾ ‘ನಾನು ತಮಾಷೆಗೆ ಹೇಳಿದ್ದು. ನಾನು ದಕ್ಷಿಣೆ ತಗೋಳೋಲ್ಲ’ ಅಂದರು.
ಆಗ ವ್ಯಾಪಾರಿ ಹೇಳಿದ ‘ನಾನು ನಿಮ್ಮ ಮನೆಗೆ ಬಂದಿದ್ದಾಗ ನನ್ನ ಇಬ್ಬರೂ ಮಕ್ಕಳು ದಡ್ಡರಾಗಿದ್ದರು. ನಿಮ್ಮ ಸಲಹೆಯಂತೆ ಅವರಿಗೆ ಗಾಯತ್ರಿ ಮಂತ್ರವನ್ನು ಉಪದೇಶಿಸಿದೆ. ಅವರು ಪ್ರತಿದಿನ ಗಾಯತ್ರಿ ಜಪ ಮಾಡುತ್ತಿದ್ದರು. ಹೀಗೆ ಮಾಡಿದ್ದರಿಂದಲೋ ಏನೋ ಕ್ರಮೇಣ ಅವರಲ್ಲಿದ್ದ ದಡ್ಡತನ ಮರೆಯಾಯಿತು. ಅವರು ಓದಿದರು. ಬುದ್ಧಿವಂತರಾದರು. ಇಬ್ಬರೂ ಸಿ.ಎ. ಮಾಡಿ ಜೀವನದಲ್ಲಿ ನೆಲೆನಿಂತಿ ದ್ದಾರೆ. ಅವರು ಗಳಿಸಿದ ಹಣದಿಂದಲೇ ನಿಮಗೆ ದಕ್ಷಿಣೆ ಕೊಡುತ್ತಿರುವುದು.
ನೀವು ತೋರಿದ ದಾರಿಯಲ್ಲಿ ಅವರು ನಡೆದು ಉನ್ನತ ಸ್ಥಾನ ಪಡೆದರು.’ ಮಕ್ಕಳನ್ನು ಕರೆದು ಹಿರಿಯರಿಗೆ ನಮಸ್ಕರಿಸುವಂತೆ
ಹೇಳಿದರು. ಹಿರಿಯರು ‘ಎಲ್ಲರೂ ಗಾಯತ್ರಿಯನ್ನು ಅನುಷ್ಠಾನ ಮಾಡಬೇಕು ಮತ್ತು ಅದರಿಂದ ಅನುಕೂಲವಾಗುತ್ತದೆ’ ಎಂದರು.