Thursday, 12th December 2024

ಅಡ್ಡಿ ಆತಂಕಗಳೇ ಸಾಧನವಾದರೆ!

ಬೇಲೂರು ರಾಮಮೂರ್ತಿ

ನಾವು ಮಾಡುವ ಕೆಲಸಗಳಲ್ಲಿ ಅನೇಕ ಸಾರಿ ನಮಗೆ ತಿಳಿಯದೇ ಅಡ್ಡಿ ಆತಂಕಗಳು ಒದಗಿಬರುತ್ತವೆ. ಅದರಿಂದ ಮೊದಲಿಗೆ
ನಮಗೆ ನಿರಾಸೆಯಾದರೂ ಕಡೆಯಲ್ಲಿ ಅಡ್ಡಿಯಾದದ್ದೇ ಒಳ್ಳೆಯದಾಯಿತು ಅನಿಸಿ ದಾಸರ ವಾಣಿ ‘ಆದದ್ದೆೆಲ್ಲ ಒಳಿತೇ ಆಯಿತು’ ಎನ್ನುವುದು ನೆನಪಾಗುತ್ತದೆ.

ಅಂದುಕೊಂಡ ಒಂದು ಮಹತ್ಕಾರ್ಯ ಸಾಧನೆಯಾಗಲಿಲ್ಲವಲ್ಲ ಎನಿಸಿ ಸಂಕಟಪಟ್ಟರೆ ಮರುಕ್ಷಣವೇ ಸಾಧನೆಯಾಗದಿದ್ದುದೇ
ಒಳ್ಳೆಯದಾಯಿತಲ್ಲ ಅನಿಸುತ್ತದೆ. ಈ ರೀತಿಯ ಸಂದರ್ಭಗಳು ನಮಗೆ ಪುರಾಣಗಳಲ್ಲಿ ಯಥೇಚ್ಚವಾಗಿ ದೊರೆಯುತ್ತದೆ. ಸಾಕ್ಷಾತ್ ವಿಷ್ಣುಸ್ವರೂಪಿಯಾದ ಪೃಥು ಚರ್ಕವರ್ತಿ ರಾಜ್ಯಾಭಿಷೇಕ ಮಾಡಿಕೊಂಡಾಗ ದೇವಪ್ರಮುಖರು ಬಂದು ಅವನನ್ನು ಅಭಿನಂದಿಸಿ
ದರು.

ಯಾರ ಹೊಗಳಿಕೆಗೂ ಕುಗ್ಗದೇ ಜಗ್ಗದೇ ನ್ಯಾಯ ನೀತಿಯಿಂದ ರಾಜ್ಯಭಾರ ಮಾಡುತ್ತಿದ್ದುದನ್ನು ಕಂಡು ದೇವತೆಗಳೇ ಮೆಚ್ಚಿದರು.
ಕಾಲಾಂತರದಲ್ಲಿ ಪೃಥುವು ಒಂದು ನೂರು ಯಜ್ಞಗಳನ್ನು ಮಾಡಬೇಕೆಂದು ಸಂಕಲ್ಪಿಸಿದನು. ದೇವತೆಗಳ ಸಂತುಷ್ಟಿಗೆ ಮಾಡಲು ಸಂಕಲ್ಪಿಸಿದ ಯಾಗವಾದ್ದರಿಂದ ಮಹಾವಿಷ್ಣುವಿನ ಅಂಶವಾದ ಅರಸನಿಗೆ ದಿಕ್ಪಾಲರಾದಿಯಾಗಿ ಸಮಸ್ತ ದೇವತೆಗಳೂ ಯಜ್ಞಕ್ಕೆ
ಬೇಕಾದ ವಸ್ತುಗಳನ್ನು ಹೇರಳವಾಗಿ ತಂದುಕೊಟ್ಟರು.

ಯಜ್ಞ ಪ್ರಾರಂಭವಾಯಿತು. ಪೃಥುವು ಒಂದಾದ ಮೇಲೊಂದರಂತೆ ಯಜ್ಞಗಳನ್ನು ಮಾಡುತ್ತಾ ಬಂದನು. ಎಲ್ಲ ದೇವತೆಗಳೂ ಈ ಯಜ್ಞಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದರೆ ಇಂದ್ರ ಮಾತ್ರ ಪೃಥು ನೂರು ಯಜ್ಞಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಿದರೆ ಎಲ್ಲಿ ನನ್ನ ಪದವಿಗೆ ಸಂಚುಕಾರ ಬರಬಹುದೋ ಎನ್ನುವ ಅಂಜಿಕೆಯಿಂದ, ವೇಷ ಮರೆಸಿಕೊಂಡು ಬಂದು ಪೃಥುವಿನ ನೂರನೇ ಯಜ್ಞದ ಕುದುರೆಯನ್ನು ಕದ್ದುಕೊಂಡು ಹೋದ.

ಇದನ್ನು ಕಂಡ ಅತ್ರಿ ಮಹರ್ಷಿಗಳು ಪೃಥುವಿಗೆ ‘ರಥದಲ್ಲಿ ಹೋಗಿ ಕುದುರೆಯನ್ನ ಬಿಡಿಸಿಕೊಂಡು ಬಾ’ ಎಂದರು. ಆದರೆ ಯಜ್ಞದೀಕ್ಷೆ ತೊಟ್ಟಿದ್ದರಿಂದ ಪೃಥು ಹೋಗುವಂತಿರಲಿಲ್ಲ. ಪೃಥುವಿನ ಮಗ ಕುದುರೆಗಳ್ಳನನ್ನು ಬೆನ್ನಟ್ಟಿದನು. ದಾರಿಯಲ್ಲಿ ಇಂದ್ರನು ಕುದುರೆಯನ್ನು ಬಿಟ್ಟೋಡಿದನು. ಕುದುರೆಯನ್ನು ಗೆದ್ದು ಬಂದದ್ದರಿಂದ ಪೃಥುವಿನ ಮಗನಿವೆ ವಿಜಿತಾಶ್ವ ಎಂದು ಹೆಸರಿಟ್ಟರು. ಇಂದ್ರ ಕುದುರೆಯನ್ನು ಅಪಹರಿಸುವುದು, ವಿಜಿತಾಶ್ವ ಅವನನ್ನು ಬೆನ್ನಟ್ಟುವುದು ನಡೆದೇ ಇತ್ತು. ಮುಂದಿನ ಸಾರಿ ಇಂದ್ರ ಬಂದಾಗ ಪೃಥು ಈ ಸಾರಿ ನಾನೇ ಅವನನ್ನು ಬೆನ್ನಟ್ಟುತ್ತೇನೆ ಎಂದ.

ಆಗ ಋಷಿಗಳು ನೀನು ಹೋಗುವಂತಿಲ್ಲ. ನಾವೇ ಹೋಗಿ ಇಂದ್ರನನ್ನು ತಂದು ಹೋಮಕುಂಡದಲ್ಲಿ ಹಾಕುತ್ತೇವೆ ಎಂದರು. ಆಗ ಅತ್ರಿ ಮುನಿಗಳು ‘ಯಜ್ಞ ಭಗವದ್ಪ್ರೀತಿಗಾಗಿಯೇ ನಡೆಯಬೇಕೇ ಹೊರತು ಯಾವುದೇ ವಧೆ ಸರಿಯಲ್ಲ. ಅದರಲ್ಲೂ ಇಂದ್ರವಧೆ ದೇವತೆಗಳಿಗೆ ಪ್ರಿಯಕರವಲ್ಲ. ನೀವು ಅಧರ್ಮದ ದಾರಿಯನ್ನು ತುಳಿಯಬಾರದು’ ಎಂದರು. ಆದರೆ ಯಜ್ಞ ಪೂರ್ತಿಯಾಗಲೇ
ಬೇಕಲ್ಲವೇ. ಅದಕ್ಕೆ ಪೃಥು ಬ್ರಹ್ಮನಲ್ಲಿ ತನ್ನ ತೊಂದರೆಯನ್ನು ಹೇಳಿಕೊಂಡ. ಆಗ ಬ್ರಹ್ಮ ಪೃಥು ‘ನಿನ್ನ ಯಜ್ಞಗಳನ್ನು ಇಲ್ಲಿಗೇ
ನಿಲ್ಲಿಸಿಬಿಡು ಸಾಕು. ಹೇಗೂ ನಿನ್ನ ಯಜ್ಞ ಮೂರುಲೋಕಗಳಲ್ಲಿಯೂ ಪ್ರಸಿದ್ಧವಾಗಿದೆ. ಸ್ವಯಂ ಇಂದ್ರನೇ ನಿನ್ನ ಯಜ್ಞವನ್ನು ಕೆಡಿಸಲು ಅಸಹಾಯಕನಾದ ಎಂದರೆ ನಿನ್ನ ಯಜ್ಞ ಎಷ್ಟು ಮಹತ್ವದ್ದಾಗಿದೆ ಎಂದು ಅರಿವಾಗುತ್ತದೆ. ನೀನು ಈಗಾಗಲೇ ಭಗವಂತನ ಪ್ರೀತಿಗೆ ಪಾತ್ರನಾಗಿದ್ದೀಯ. ಯಾಗಭಂಗ ಮಾಡಿದ ಇಂದ್ರನ ಮೇಲೆ ದ್ವೇಷ ಸಾಧಿಸಬೇಡ’ ಎಂದನು.

ಬ್ರಹ್ಮನ ಮಾತಿಗೆ ಸಮ್ಮತಿಸಿದ ಪೃಥುವನ್ನು ಕಂಡು ಮಹಾವಿಷ್ಣುವಿಗೆ ಮೆಚ್ಚುಗೆಯಾಯಿತು. ಇಂದ್ರನಿಗೆ ತಾನು ಮಾಡಿದ ತಪ್ಪಿನ ಅರಿವಾಯಿತು. ಪೃಥುವಿಗೆ ಅನುಗ್ರಹ ಮಾಡಲು ಹೊರಟ ವಿಷ್ಣುವಿನ ಜೊತೆ ಇಂದ್ರನೂ ಹೊರಟನು. ಪೃಥು ಬ್ರಹ್ಮನ ಮಾತಿನಂತೆ ಇಂದ್ರನನ್ನು ಕ್ಷಮಿಸಿಬಿಟ್ಟನು. ಇದನ್ನು ಕಂಡ ವಿಷ್ಣುವಿಗೆ ಸಂತಸವಾಗಿ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ನಿನಗೆ ಬೇಕಾದ ವರವನ್ನು ಕೇಳಿಕೊ ಎಂದನು.

ಆಗ ಪೃಥು ‘ಮಹಾ ಯೋಗಿ ಶ್ರೇಷ್ಠರಿಗೂ ದೊರೆಯದ ನಾರಾಯಣನ ದಿವ್ಯರೂಪ ನನಗೆ ದೊರೆತಿದೆ. ನನಗೆ ಹೃದಯ ತುಂಬಿ ಬಂದಿದೆ. ಇದಕ್ಕಿಂತ ಹೆಚ್ಚಿನದೇನನ್ನು ಬೇಡಲಿ’ ಎಂದನು. ಹೀಗೆ ನಾವು ಮಾಡುವ ಕೆಲಸದಲ್ಲಿ ನಮಗೆ ಶ್ರದ್ಧೆ, ನಿಷ್ಠೆೆ ಇದ್ದರೆ ಅದಕ್ಕೆ ಭಗವಂತನ ಕೃಪೆಯೂ ಇರುತ್ತದೆ. ಯಜ್ಞಕ್ಕೆ ತೊಂದರೆಯಾದರೂ ಬ್ರಹ್ಮನ ಕೃಪೆಯಿಂದ ಯಜ್ಞ ಸಂಪನ್ನವಾಯಿತು. ಇಂದ್ರ ತೊಂದರೆ ಮಾಡಿದ್ದರಿಂದಲೇ ಬ್ರಹ್ಮನ ಅನುಗ್ರಹವೂ ಆಯಿತು. ಜೊತೆಗೆ ನಾರಾಯಣನ ದಿವ್ಯ ದರ್ಶನವೂ ಆಯಿತು.

ಇದು ನನ್ನ ಬದುಕಿನಲ್ಲಿ ಅಡ್ಡಿಗಳು ತಂದುಕೊಟ್ಟ ಸಂತಸದ ಸಂಗತಿ ಎಂದು ಪೃಥು ತನ್ನ ಕಾರ್ಯಗಳಲ್ಲಿ ಮಗ್ನನಾದನು.