Saturday, 14th December 2024

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

ಎಂ.ಎಸ್.ಹೆಬ್ಬಾರ್

ಈ ಒಂದು ಗೀತೆಯು ಕನ್ನಡಗರ ಮನವನ್ನು ಅದ್ಯಾವ ಪರಿ ಗೆದ್ದಿದೆ ಎಂದರೆ, ಇಂದಿನ ಆಧುನಿಕ ಜೀವನದ ಒತ್ತಡ ಭರಿತ ದಿನಚರಿಯಿಂದ ಹೊರಬಂದು ನೆಮ್ಮದಿ ಕಂಡುಕೊಳ್ಳಲೆಂದೇ ಅದೆಷ್ಟೋ ಜನ ಇದನ್ನು ಕೇಳುತ್ತಾರೆ, ಪ್ರತಿದಿನ ಇದನ್ನು ಭಜನೆಯ ರೂಪದಲ್ಲಿ ಹಾಡುತ್ತಾರೆ. ಯುಟ್ಯೂಬ್‌ನಲ್ಲಿ ಇದನ್ನು ಸುಮಾರು ಎರಡು ಕೋಟಿ ಜನ ವೀಕ್ಷಿಸಿ ದ್ದಾರೆ! ಅಚ್ಚರಿ ಎಂದರೆ, ಈ ಜನಪ್ರಿಯ ಗೀತೆಯನ್ನು ರಚಿಸಿದವರು, ಕೆಪಿಟಿಸಿಎಲ್‌ನ ನಿವೃತ್ತ ಅಧಿಕಾರಿ ಗಜಾನನ ಶರ್ಮ ಎಂದು ಅದೆಷ್ಟೊ ಜನಕ್ಕೆ ತಿಳಿದಿಲ್ಲ!

ಸುಮಾರು ಹತ್ತು ವರ್ಷಗಳ ಹಿಂದಿನ ಒಂದು ದಿನ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಅಧಿಕಾರಿಯಾಗಿದ್ದ ಗಜಾನನ ಶರ್ಮ ಅವರು ಕೇರಳದ ರೆಸಾರ್ಟ್ ಒಂದರಲ್ಲಿದ್ದರು. ತಮ್ಮ ಇಲಾಖೆಯ ಒಂದು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು.

ಸುತ್ತಲೂ ದಟ್ಟ ಕಾಡು, ನಡುವೆ ತರಬೇತಿ ಶಾಲೆ. ತರಬೇತಿಯ ನಡುವೆ ಮಧ್ಯಂತರ ಬಿಡುವಿನ ವೇಳೆ ಹೊರಬಂದಾಗ, ಅವರ ಗಮನ ಸೆಳೆಯಿತು ಒಂದು ಜಾಹಿರಾತು ಫಲಕ. ‘ಎ ದಿಲ್ ಮಾಂಗೆ ಮೋರ್’ ಎಂದು ತಂಪು ಪಾನೀಯವನ್ನು ಹೆಚ್ಚು ಹೆಚ್ಚು ಕುಡಿಯುವಂತೆ ಜನರನ್ನು ಪ್ರಚೋದಿ ಸುವ ಜಾಹಿರಾತು ಅದು. ಆ ಜಾಹಿರಾತಿನ ಮೇಲು ನೋಟದ ಸಂದೇಶವು ಗಜಾನನ ಶರ್ಮ ರಲ್ಲಿದ್ದ ಕವಿಹೃದಯವನ್ನು ಪ್ರಚೋದಿಸುತ್ತದೆ, ಸ್ಫೂರ್ತಿ ನೀಡುತ್ತದೆ.

ತಕ್ಷಣ ಹೊಳೆದ ಸಾಲು ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’. ಇಂದು ಕರ್ನಾಟಕದಾದ್ಯಂತ ಪ್ರಸಿದ್ಧವಾಗಿರುವ,  ಇತರ ರಾಜ್ಯಗಳಲ್ಲೂ ಜನಪ್ರಿಯವಾಗಿರುವ, ಹೊರದೇಶದಲ್ಲೂ ಜನರ ಗಮನ ಸೆಳೆದಿಳಿರುವ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಗೀತೆಯನ್ನು ಕವಿ ಗಜಾನನ ಶರ್ಮರು ರಚಿಸಿದ ಹಿನ್ನೆಲೆ ಕುತೂಹಲಕಾರಿಯಾಗಿದೆ. ಗಜಾನನ ಶರ್ಮ ಅವರು ಕೇರಳದಲ್ಲಿ ದ್ದಾಗ ಆ ಒಂದು ಮೊದಲ ಸಾಲು ಹೊಳೆಯಿತು, ಅದೇ ರಾತ್ರಿ ಇನ್ನೆರಡು ಸಾಲುಗಳನ್ನು ತಮ್ಮ ಪತ್ನಿಯವರ ಸಮಾಲೋಚನೆ ಯೊಂದಿಗೆ ಅವರು ಬರೆದರು. ನಂತರ ಗುರುಗಳು ಅದಕ್ಕೆ ಕೆಲವು ಸಲಹೆ ನೀಡಿದರು. ಆದರೆ, ಆ ಒಂದು ಗೀತೆ ಬರೆಯಲು ಹಲವು ತಿಂಗಳುಗಳ ಹಿಂದೆಯೇ ಅವರ ಗುರುಗಳು ಸೂಚಿಸಿದ್ದರು.

ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ನಡೆಸುತ್ತಿದ್ದ ರಾಮ ಕಥಾ ಸಂಗೀತ ರೂಪಕಕ್ಕೆ ಶರ್ಮ ಅವರು ಹಲವು ಕವನಗಳನ್ನು, ಗೀತೆಗಳನ್ನು, ಸನ್ನಿವೇಶಗಳನ್ನು ಬರೆದುಕೊಟ್ಟಿದ್ದರು. ಅದನ್ನು ಕಂಡ ರಾಘವೇಶ್ವರ ಶ್ರೀಗಳು, ರಾಮ ಭಕ್ತಿಯ ಕುರಿತು ಒಂದು ಗೀತೆ ಬರೆಯಿರಿ ಎಂದು ಶರ್ಮ ಅವರಿಗೆ ಹೇಳಿದ್ದರು. ಆದರೆ ಬಹುದಿನಗಳ ತನಕ ಅದಕ್ಕೆ ಕಾಲ ಕೂಡಿ ಬಂದಿರ ಲಿಲ್ಲ. ಕೇರಳದಲ್ಲಿ ಕಂಡ ಆ ಒಂದು ಜಾಹಿರಾತಿನ ಸಾಲು, ಈ ಪ್ರಸಿದ್ಧ ಹಾಡಿನ ರಚನೆಗೆ ಸ್ಫೂರ್ತಿ ನೀಡಿತು.

ಚಾತುರ್ಮಾಸ್ಯದಲ್ಲಿ ಮೊದಲು ಹಾಡಿದ್ದು ಅಂದು ಊರಿಗೆ ವಾಪಸಾದ ಕೂಡಲೆ, ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡನ್ನು ಪೂರ್ತಿ ಬರೆದರು. ಮೊದಲಿಗೆ ಗುರುಗಳ ಚಾತುರ್ಮಾಸ್ಯದ ಸಮಯದಲ್ಲಿ ಪ್ರತಿದಿನ ಶರ್ಮ ಅವರ ಪತ್ನಿ ಮತ್ತು ಅವರ ಗೆಳತಿಯರು ಈ ಹಾಡನ್ನು ಮಠದಲ್ಲಿ ಹಾಡುತ್ತಿದ್ದರು. ಆ ಗೀತೆಯ ಸರಳತೆ, ಅದರಲ್ಲಿದ್ದ ಸಂದೇಶ, ಸಮರ್ಪಣಾ ಭಾಗ, ಲೌಕಿಕ ಲಾಭ ವನ್ನು ಏನನ್ನೂ ಕೇಳದೆ, ಕೇವಲ ನೆಮ್ಮದಿಯನ್ನು ಯಾಚಿಸುವ ಭಾವ ಎಲ್ಲವೂ ಜನರನ್ನು ಮೋಡಿ ಮಾಡಿತು. ಸಂಗೀತ ಶಾಲೆಗಳಲ್ಲಿ ಮಕ್ಕಳು ಕಲಿಯತೊಡಗಿದರು. ಮನೆಮನೆಗಳಲ್ಲಿ ಜನರು ಹಾಡತೊಡಗಿದರು.

ಇದರ ಸಾಲುಗಳು ಸರಳ, ಆದ್ದರಿಂದ ಮಕ್ಕಳು ಬಹುಬೇಗನೆ ಕಲಿತರು. ಇದರ ಭಾವವು ಹೃದಯದಲ್ಲಿ, ಮನಸ್ಸಿನಲ್ಲಿ ನೆಮ್ಮದಿ ಯನ್ನು ಮೂಡಿಸುವಂತಹದ್ದು. ಆದ್ದರಿಂದ ದೊಡ್ಡವರು, ಹಿರಿಯರು, ಯುವಜನರು ಬಹುವಾಗಿ ಇದನ್ನು ಕೇಳಿದರು, ಹಾಡಿದರು, ಮನನ ಮಾಡಿಕೊಂಡರು. ಈ ಗೀತೆಯ ಭಾವವನ್ನೇ ಸ್ಫೂರ್ತಿ ಮಾಡಿ ಕೊಂಡು ಜೀವನ ನಡೆಸುವವರೂ ಇದ್ದಾರೆ!
ಯುಟ್ಯೂಬ್‌ನಲ್ಲಿ ಎರಡು ಕೋಟಿ ವೀಕ್ಷಣೆ ಗಜಾನನ ಶರ್ಮ ಅವರ ಮಗ ಸಾಕೇತ ಶರ್ಮ ಅವರು ಸಂಗೀತದಲ್ಲಿ ಸಾಕಷ್ಟು ಪರಿಶ್ರಮ ಉಳ್ಳವರು.

ಅವರನ್ನು ಒತ್ತಾಯಿಸಿ, ಅದಕ್ಕೊಂದು ರಾಗಸಂಯೋಜನೆ ಮಾಡಿಸಿದರು. ರಾಮಚಂದ್ರಾಪುರ ಮಠದ ಅಧಿಕೃತ ಗೀತೆಯನ್ನಾಗಿ ಇದು ಆಯ್ಕೆಯಾಯಿತು. ಸಾಕೇತ ಶರ್ಮ ಅವರು ಸಂಗೀತ ಸಂಯೋಜನೆ ಮಾಡಿ, ಹಾಡಿದ ಹಾಡು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದ್ದು, ಐದು ಲಕ್ಷ ಜನ ಅದನ್ನು ನೋಡಿ ದ್ದಾರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಸಹ ಇದನ್ನು ಹಾಡಿ ಯುಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಮೈಸೂರಿನ ಗಾಯಕಿ ಸುಪ್ರಭಾ ಕೆ.ವಿ. ಅವರು ಇದನ್ನು ಹಾಡಿದ್ದು, ಸಾಕೇತ ಶರ್ಮ ಅವರ ಸಂಗೀತ ಸಂಯೋಜನೆಯನ್ನೇ ಉಪಯೋಗಿಸಿದ್ದು, ಯುಟ್ಯೂಬ್ನಲ್ಲಿ ಅದನ್ನು ಒಂದು ಕೋಟಿ ಐವತ್ತು ಲಕ್ಷ ಜನ ವೀಕ್ಷಿಸಿದ್ದಾರೆ. ಆದರೆ ಸುಪ್ರಭಾ ಅವರು ಗಜಾನನ ಶರ್ಮ ಅವರ ಅನುಮತಿ ಪಡೆಯದೇ, ಅವರ ಗೀತೆಯನ್ನು ಮತ್ತು ಅವರ ಮಗನ ಸಂಗೀತ ಸಂಯೋಜನೆಯನ್ನು ಉಪಯೋಗಿಸಿದ್ದಾರೆ!

ಕವಿಗೆ, ಮೂಲ ಸಂಗೀತ ಸಂಯೋಜಕರಿಗೆ ಗೌರವ ನೀಡದೇ ಬೇರೊಬ್ಬರು ಹಾಡಿದ ಈ ವಿಚಾರ ಶರ್ಮ ಅವರಿಗೆ ಸಣ್ಣ ಬೇಸರ ತಂದಿದ್ದೂ ಉಂಟು. ಆದರೆ, ಸುಮಾರು ಎರಡು ಕೋಟಿ ಜನರು ಕೇಳಿರುವ ಈ ಗೀತೆಯು, ಅಷ್ಟು ಜನರಿಗೆ ಇಷ್ಟವಾಗಿದ್ದು, ಅವರಲ್ಲಿ ಮಾನಸಿಕ ನೆಮ್ಮದಿಯನ್ನು ತುಂಬಿದ್ದರೆ, ಅದಕ್ಕಿಂತ ಹೆಚ್ಚಿನ ಸಂತೋಷ ತನಗಿಲ್ಲ ಎಂದಿದ್ದಾರೆ ಗಜಾನನ ಶರ್ಮ.

ತೆಲುಗಿಗೆ ಅನುವಾದ
‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡು ನೆರೆ ರಾಜ್ಯಗಳಲ್ಲೂ ಜನರ ಗಮನ ಸೆಳೆದಿದ್ದು, ತೆಲುಗು, ಮರಾಠಿ ಮೊದಲಾದ ಭಾಷೆಗಳಿಗೆ ಅನುವಾದಗೊಂಡಿದೆ. ತೆಲುಗಿನಲ್ಲೂ ಅದು ಬಹಳ ಜನಪ್ರಿಯ. ಅದಕ್ಕಿಂತ ಮಿಗಿಲಾಗಿ, ಈ ಹಾಡನ್ನು ಕೇಳಿದ ಅದೆಷ್ಟೋ ಜನರು ತಮ್ಮ ಮಾನಸಿಕ ಖಿನ್ನತೆಯಿಂದ ಹೊರಬಂದಿದ್ದಾರೆ. ಒಂದಿಬ್ಬರಂತೂ, ಈ ಹಾಡನ್ನು ಕೇಳಿ ತಮ್ಮ ಜೀವನಕ್ಕೆ ಮರುಜನ್ಮ ನೀಡಿಕೊಂಡಿದ್ದು, ಆ ವಿಚಾರವನ್ನು ಗಜಾನನ ಶರ್ಮ ಅವರಿಗೆ ಫೋನ್ ಮಾಡಿ ಹೇಳಿಯೂ ಇದ್ದಾರೆ.

ದಾಖಲೆ
ಗಜಾನನ ಶರ್ಮ ಅವರು ರಚಿಸಿದ ಈ ಗೀತೆಯು ರಾಮನ ಕುರಿತಾಗಿದ್ದರೂ, ಅದನ್ನು ಹಾಡಿದವರು, ಕೇಳಿದ ಹೆಚ್ಚಿನವರು
ಹೇಳಿದ್ದೇನೆಂದರೆ, ಅದು ಭಕ್ತಿಯನ್ನುಕ್ಕಿಸುವುದರ ಜತೆಯಲ್ಲೇ, ಮನಸ್ಸಿನಲ್ಲಿ ಅಗಾಧ ಪ್ರಮಾಣದ ನೆಮ್ಮದಿಯನ್ನು ಮೂಡಿಸು ತ್ತದೆ ಎಂದು. ಈಗ ವೃತ್ತಿಯಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲಸಿರುವ ಕವಿ, ಲೇಖಕ, ಗಜಾನನ ಶರ್ಮ ಅವರ ಲೇಖನಿ ಯಿಂದ ಮೂಡಿಬಂದ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಗೀತೆಯು ಆಧುನಿಕ ಯುಗದ ಭಜನೆಯ ರೂಪ ತಾಳಿದೆ, ಜನರ ಹೃದಯದಲ್ಲಿ ನೆಲೆಸಿದೆ, ಮನೆ ಮನೆಗಳಲ್ಲಿ ಅನುರಣನಿಸುತ್ತಿದೆ.

ಈ ಒಂದು ಗೀತೆಯು ಕನ್ನಡಗರ ಮನವನ್ನು ಅದ್ಯಾವ ಪರಿ ಗೆದ್ದಿದೆ ಎಂದರೆ, ಇಂದಿನ ಆಧುನಿಕ ಜೀವನದ ಒತ್ತಡಭರಿತ ದಿನಚರಿ ಯಿಂದ ಹೊರಬಂದು ನೆಮ್ಮದಿ ಕಂಡುಕೊಳ್ಳಲೆಂದೇ ಅದೆಷ್ಟೋ ಜನ ಇದನ್ನು ಕೇಳುತ್ತಾರೆ, ಪ್ರತಿದಿನ ಇದನ್ನು ಭಜನೆಯ
ರೂಪದಲ್ಲಿ ಹಾಡುತ್ತಾರೆ. ಯುಟ್ಯೂಬ್‌ನಲ್ಲಿ ಇದನ್ನು ಸುಮಾರು ಎರಡು ಕೋಟಿ ಜನ ವೀಕ್ಷಿಸಿದ್ದಾರೆ!

ಅಚ್ಚರಿ ಎಂದರೆ, ಈ ಜನಪ್ರಿಯ ಗೀತೆಯನ್ನು ರಚಿಸಿದವರು, ಕೆಪಿಟಿಸಿಎಲ್‌ನ ನಿವೃತ್ತ ಅಧಿಕಾರಿ ಗಜಾನನ ಶರ್ಮ ಎಂದು ಅದೆಷ್ಟೊ ಜನಕ್ಕೆ ತಿಳಿದಿಲ್ಲ!

ಹೃದಯಕ್ಕೆ ನೆಮ್ಮದಿ ತುಂಬುವ ಹಾಡು
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ
ರಾಮಾ ರಾಮಾ ರಾಮಾ ರಾಮಾ
ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ
ಕಷ್ಟಗಳ ಕೊಡಬೇಡ ಎನಲಾರೆ ರಾಮ
ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ
ಕಷ್ಟ ಸಹಿಸುವ ಸಹನೆ ಇನ್ನಷ್ಟು ರಾಮ
ಕಷ್ಟ ಸಹಿಸುವ ಸಹನೆ ನಿನ್ನಷ್ಟು ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ
ಒಳಿತಿನೆಡೆ ಮುನ್ನಡೆವ ಮನವ ಕೊಡು ರಾಮ
ಸೆಳೆತಕ್ಕೆ ಸಿಗದಂತೆ ಸ್ಥಿರತೆ ಕೊಡು ರಾಮ
ನಿನ್ನೆಗಳ ಪಾಪಗಳ ಸೊನ್ನೆಯಾಗಿಸು ರಾಮ
ನಾಳೆಗಳು ಪುಣ್ಯಗಳ ಹಾದಿಯಾಗಲಿ ರಾಮ
ನನ್ನ ಬಾಳಿಗೆ ನಿನ್ನ ಹಸಿವ ಕೊಡು ರಾಮ
ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ
ಕಣ್ಣು ಕಳೆದರು ನಿನ್ನ ಕನಸು ಕೊಡು ರಾಮ
ನನ್ನ ಹರಣಕೆ ನಿನ್ನ ಚರಣ ಕೊಡು ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ
ಕೌಸಲ್ಯೆಯಾಗುವೆನು ಮಡಿಲಲಿರು ರಾಮ
ವೈದೇಹಿಯಾಗುವೆನು ಒಡನಾಡು ರಾಮ
ಪಾದುಕೆಯ ತಲೆಯಲಿಡು ಭರತನಾಗುವೆ ರಾಮ
ಸಹವಾಸ ಕೊಡು ನಾನು ಸೌಮಿತ್ರಿ ರಾಮ
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ
ಮಡಿಲಲ್ಲಿ ಮರಣಕೊಡು ನಾ ಜಟಾಯುವು ರಾಮ
ಮುಡಿಯಲ್ಲಿ ಅಡಿಯನಿಡು ನಾ ಅಹಲ್ಯೆಯು ರಾಮ
ನಾ ವಿಭೀಷಣ ಶರಣುಭಾವ ಕೊಡು ರಾಮ
ನನ್ನೊಳಿಹ ರಾವಣಗೆ ಸಾವ ಕೊಡು ರಾಮ
ಕಣ್ಣೀರು ಕರೆಯುವೆನು ನನ್ನತನ ಕಳೆ ರಾಮ
ನಿನ್ನೊಳಗೆ ಕರಗುವೆನು ನಿರ್ಮೋಹ ಕೊಡು ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ
ಋತ ನೀನೆ ಋತು ನೀನೆ ಶೃತಿ ನೀನೆ ರಾಮ
ಮತಿ ನೀನೆ ಗತಿ ನೀನೆ ದ್ಯುತಿ ನೀನೆ ರಾಮ
ಆರಂಭ ಅಸ್ತಿತ್ವ ಅಂತ್ಯ ನೀ ರಾಮ
ಪೂರ್ಣ ನೀ ಪ್ರಕಟ ನೀ ಆನಂದ ರಾಮ
ಹರ ನೀನೆ ಹರಿ ನೀನೆ ಬ್ರಹ್ಮ ನೀ ರಾಮ
ಗುರಿ ನೀನೆ ಗುರು ನೀನೆ ಅರಿವು ನೀ ರಾಮ
ರಘುರಾಮ ರಘುರಾಮ ರಘುರಾಮ ರಾಮ
ನಗುರಮ ನಗರಾಮ ಜಗರಾಮ ರಾಮ
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ

ಗಜಾನನ ಶರ್ಮ

ರಾಗ ಹಾಕಲು ಮಗನಿಗೇ ಎಮೋಶನಲ್ ಬ್ಲಾಕ್ ಮೇಲ್
ಆಗ ನನ್ನ ಮಗ ಸಾಕೇತ ಶರ್ಮಾ ಆರ್ ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದ. ಆತ ಶಿವಮೊಗ್ಗದಲ್ಲಿ ಐದನೇ ವಯಸ್ಸಿನಿಂದ ಖ್ಯಾತ ಹಿಂದೂಸ್ತಾನೀ ಗುರು, ಗಾಯಕರಾದ ಹುಮಾಯೂನ್ ಹರ್ಲಾಪುರ್ ಅವರಲ್ಲಿ ಹದಿಮೂರು ವರ್ಷ
ಸಂಗೀತಾಭ್ಯಾಸ ಮಾಡಿದ್ದ.

ಗುರುಗಳು ಹೇಳಿದರೆಂದು ‘ಇನ್ನಷ್ಟು..’ ಗೀತೆಗೆ ರಾಗ ಹಾಕಲು ಅವನಿಗೆ ಹೇಳಿದೆ. ಇಂದು, ನಾಳೆ ಎಂದು ಮುಂದೂಡುತ್ತ ಬಂದಾಗ, ‘ಸರಿ, ಬೇಡ ಬಿಡು. ಈ ಒಂದು ಪುಟ್ಟ ಹಾಡಿಗೆ ರಾಗ ಹಾಕು ಎಂದರೆ ನೀನು ಹಾಕಲಿಲ್ಲವೆಂದಾದರೆ ನಮ್ಮ ಮಾತಿಗೆಷ್ಟು ಗೌರವ, ವಿದ್ಯೆಯ ಮೇಲೆಷ್ಟು ಪ್ರೀತಿ ಎಂಬುದು ತಿಳಿಯುತ್ತದೆ. ಬೇರೆ ಯಾರ ಬಳಿಯಾದರೂ ಬೇಡಿ ರಾಗ ಹಾಕಿಸುತ್ತೇನೆ’ ಎಂದು
ಹನಿದುಂಬಿದ ಕಣ್ಣಲ್ಲಿ ಹೇಳಿದೆ.

ಅವನಿಗೂ ದುಃಖ ಬಂತು. ಅಂದೇ ತನ್ನ ತಾಯಿಯೊಡನೆ ಸೇರಿ ಅದಕ್ಕೊಂದು ಅತ್ಯುತ್ತಮ ರಾಗ ಹಾಕಿದ. ಅದು ಗುರುಗಳಿಗೂ ಇಷ್ಟವಾ ದದ್ದಲ್ಲದೆ ಇಂದಿಗೂ ಉಳಿದಿದೆ. ಬಹುತೇಕ ಗಾಯಕರು, ಪ್ರಸಿದ್ಧ ಗಾಯಕಿ ಸುಪ್ರಭಾರವರೂ ಸೇರಿದಂತೆ ಹಾಡಿರುವುದು ಅದೇ ರಾಗದಲ್ಲಿ! ಎಷ್ಟೋ ಜನ ವೀಡಿಯೋ ಮಾಡಿದ್ದಾರೆ. ಆದರೆ ರಾಗ ಸಂಯೋಜಕರ ಹೆಸರು ಇಲ್ಲ. ರಚನಾಕಾರರ ಹೆಸರು ಹಾಕುವುದೂ ಅಪರೂಪ.

ಟಿ. ವಿ. ಧಾರಾವಾಹಿಯಲ್ಲಿ ಕೂಡ ಈ ಗೀತೆಯನ್ನು ಬಳಸಿದ್ದಾರೆ, ಆದರೆ ಕವಿಯಾದ ನನ್ನನ್ನು ಕೇಳುವ ಕನಿಷ್ಠ ಸೌಜನ್ಯವೂ ಇಲ್ಲದೆ. ಬಹಳಷ್ಟು ವಿದೇಶೀ ಕನ್ನಡ ಸಂಘಗಳು ಈ ಹಾಡ ನ್ನು ಸಾಮೂಹಿಕ ಪ್ರಾರ್ಥನೆ/ ಗೀತೆಯನ್ನಾಗಿ ಬಳಸಿದ್ದಾರೆ. ಇದನ್ನೇ ಅನುಕರಿಸಿ ಬೇರೆ ಬೇರೆಯವರು ತಮ್ಮದೇ ಗೀತೆ ರಚಿಸಿದ್ದಾರೆ. ರಾಮೋತ್ಸವ, ಜಾತ್ರೆಗಳಲ್ಲಿ ಬಳಸಿದ್ದಾರೆ. ಒಟ್ಟಿನಲ್ಲಿ ಈ ಹಾಡಿನಿಂದ
ನೆಮ್ಮದಿ ಪಡೆದವರ ಸಂಖ್ಯೆ ಅಗಣಿತ, ಅಸಂಖ್ಯ.
– ಗಜಾನನ ಶರ್ಮ