Sunday, 15th December 2024

ಕೋಪಕ್ಕೆ ತುತ್ತಾದವರ ಕಥೆ

ಬೇಲೂರು ರಾಮಮೂರ್ತಿ

ಕೋಪ ಮನುಷ್ಯನನ್ನು ಅಧಃಪತನಕ್ಕೆ ತಳ್ಳುವ ಸಾಧನ. ಸಾಮಾನ್ಯವಾಗಿ ನಮಗೆ ಕೋಪ ಬರುವುದು ಯಾವಾಗ ಎಂದರೆ ಯಾರಾದರೂ ನಮ್ಮನ್ನು ಹೀನಾಯವಾಗಿ ನೋಡಿದಾಗ, ಅವಮಾನ ಮಾಡಿದಾಗ, ನಮ್ಮನ್ನು ಸರಿಯಾಗಿ ಗೌರವಿಸದೇ ಇದ್ದಾಗ,
ನಮ್ಮ ಬಗ್ಗೆ ಅಸಡ್ಡೆ ಮಾಡಿದಾಗ.

ಇಂಥಾ ಸಂದರ್ಭಗಳಲ್ಲೂ ಕೋಪ ಮಾಡಿಕೊಳ್ಳದೇ ಇದ್ದರೆ ಅವನೇ ದೇವಮಾನವ ಎಂದು ಹೇಳಬಹುದು. ಒಂದು ಸಾರಿ ಮರೀಚಿ ಮೊದಲಾದ ಋಷಿಗಳು ಸೇರಿ ಮಾಡುತ್ತಿದ್ದ ಯಾಗಕ್ಕೆ ಸಮಸ್ತ ದೇವತೆಗಳೂ ಬಂದಿದ್ದರು. ಅಲ್ಲಿಗೆ ಬಂದ ದಕ್ಷಬ್ರಹ್ಮನನ್ನು ಎಲ್ಲ ದೇವತೆಗಳೂ ಎದ್ದು ಗೌರವ ತೋರಿಸಿ ಸ್ವಾಗತಿಸಿದರೆ ಅಳಿಯನಾದ ಶಿವ ಕೂತಿದ್ದ ಜಾಗ ಬಿಟ್ಟೇಳಲಿಲ್ಲ. ಇದರಿಂದ ದಕ್ಷಬ್ರಹ್ಮನಿಗೆ ತುಂಬಾ ಕೋಪ ಬಂತು. ಕೋಪಕ್ಕೆ ಬುದ್ಧಿಕೊಟ್ಟವನು ಸ್ವತಃ ಹೆಣ್ಣು ಕೊಟ್ಟ ಮಾವನಾದ ಕೈಲಾಸಾಧಿಪತಿಯಾದ ಶಿವನನ್ನು ವಿಧವಿಧವಾಗಿ ನಿಂದಿಸಿದನು. ಇದರಿಂದ ಕೋಪಗೊಂಡ ಶಿವ ಏನೂ ಮಾತಾಡದೇ ಕೈಲಾಸಕ್ಕೆ ಹೊರಟುಹೋದನು.

ಕೆಲ ಕಾಲದ ನಂತರ ದಕ್ಷ ತಾನು ಆಯೋಜಿಸಿದ ಯಾಗಕ್ಕೆ ಎಲ್ಲ ದೇವತೆಗಳಿಗೂ ಆಹ್ವಾನ ಕೊಟ್ಟರೂ ಶಿವನಿಗೆ ಕೊಡಲಿಲ್ಲ. ಶಿವ ಏನೂ ಅಂದುಕೊಳ್ಳದೇ ಹೋದರೂ ಸತಿ ದಾಕ್ಷಾಯಿಣಿಗೆ ತಂದೆಯ ಮೇಲೆ ಕೋಪ ಬಂತು. ‘ಅದು ನನ್ನ ತವರು ಮನೆ ಕರೆಯದಿದ್ದರೂ ಹೋಗುವ ಅಽಕಾರ ನನಗಿದೆ, ನೀವೂ ಬನ್ನಿ’ ಎಂದು ಶಿವನನ್ನು ಕರೆದಳು. ಶಿವ ‘ಅದು ನಿನಗೆ ತವರು ಮನೆ ನನಗಲ್ಲ. ಕರೆಯದೇ ಹೋದರೆ ನನಗೆ ವಮಾನವಾಗುತ್ತೆ. ನೀನು ಹೋಗಿಬಾ’ ಅಂದ.

ತಂದೆಯ ಯಾಗಕ್ಕೆ ಹೋದ ಮಗಳು ದಾಕ್ಷಾಯಿಣಿಯನ್ನು ಸ್ವಾಗತಿಸುವುದು ಹೋಗಲಿ ಸರಿಯಾಗಿ ಮಾತೂ ಆಡಿಸಲಿಲ್ಲ. ಇದರಿಂದ ದಾಕ್ಷಾಯಿಣಿ ಕೋಪಗೊಂಡು ‘ನನ್ನ ಗಂಡನನ್ನು ಅವಮಾನ ಮಾಡಿದ್ದೂ ಅಲ್ಲದೇ ನನ್ನನ್ನೂ ಅವಮಾನ
ಮಾಡಿದ ನೀನು ಕೊಟ್ಟ ಈ ಶರೀರ ನನಗೆ ಬೇಡ’ ಎಂದು ತಂದೆ ಮಾಡುತ್ತಿದ್ದ ಯಾಗಮಂಟಪಕ್ಕೆ ಬಿದ್ದು ಸತ್ತಳು. ಈ ವಿಚಾರ ತಿಳಿದ ಶಿವನಿಗೆ ಕೋಪ ಬಂದು ತನ್ನ ಜಟೆಯನ್ನು ನೆಲಕ್ಕೆ ಅಪ್ಪಳಿಸಿದಾಗ ವೀರಭದ್ರನ ಜನನವಾಯಿತು.

ವೀರಭದ್ರನು ತನ್ನ ಭಟರೊಂದಿಗೆ ಬಂದು ಎಲ್ಲ ದೇವತೆಗಳನ್ನೂ ಗಾಯಗೊಳಿಸಿ ಅವರೆಲ್ಲ ಯಾಗಮಂಟಪ ಬಿಟ್ಟೋಡುವಂತೆ ಮಾಡಿ ತಮ್ಮ ಕೆಲಸ ಪೂರ್ತಿಯಾದ ಮೇಲೆ ಕೈಲಾಸಕ್ಕೆ ಹೋದ. ಎಲ್ಲ ದೇವತೆಗಳೂ ಬ್ರಹ್ಮನ ಬಳಿ ಹೋಗಿ ತಮ್ಮ ಅಳಲನ್ನು ತೋಡಿಕೊಂಡರು. ಬ್ರಹ್ಮ ನೀವೆಲ್ಲ ಎಂಥಾ ಅಚಾತುರ್ಯ ಮಾಡಿದ್ದೀರಿ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನನ್ನು ಅವಮಾನ ಮಾಡಬಹುದೇ. ಅವನ ಕೋಪ ಎಂಥದು ಎಂದು ಅವನು ತೋರಿಸಿದ್ದಾನೆ.

ನೀವೆಲ್ಲಾ ಹೋಗಿ ಅವನನ್ನೇ ಕ್ಷಮೆ ಕೇಳಿ ಎಂದನು. ಮತ್ತೆ ಎಲ್ಲರೂ ಬಂದು ಶಿವನನ್ನು ಕ್ಷಮೆ ಕೇಳಿ ದಕ್ಷಬ್ರಹ್ಮನಿಗೆ ಮರುಜೀವ ಕೊಟ್ಟು ಅವನು ಮಾಡುತ್ತಿದ್ದ ಯಜ್ಞ ಸಂಪೂರ್ಣವಾಗುವಂತೆ ಮಾಡು ಎಂದು ಕೇಳಿದರು. ಆದರೆ ದಾಂಧಲೆಯಲ್ಲಿ ದಕ್ಷಬ್ರಹ್ಮನ ತಲೆ ಬೆಂದುಹೋಗಿದ್ದರಿಂದ ಶಿವ ಅವನಿಗೆ ಆಡಿನ ತಲೆಯನ್ನು ಜೋಡಿಸಿ ಮರಜೀವ ಕೊಟ್ಟ. ಮತ್ತೊಮ್ಮೆ ಎಲ್ಲರೂ ಶಿವನಿಗೆ ದೀರ್ಘದಂಡ ನಮಸ್ಕಾರ ಮಾಡಿ ತಮ್ಮ ತಪ್ಪುಗಳನ್ನು ಮನ್ನಿಸಿ ದಕ್ಷಬ್ರಹ್ಮನು ಮಾಡುವ ಯಜ್ಞಕ್ಕೆ ಬರಬೇಕೆಂದು ಆಹ್ವಾನಿಸಿ ದರು.

ಅಳಿಯನನ್ನು ಗೌರವಿಸದೇ ದಕ್ಷಬ್ರಹ್ಮ ಶಿವನ ಕೋಪಕ್ಕೆ ತುತ್ತಾದ. ಮಗಳನ್ನು ಸರಿಯಾಗಿ ಗೌರವಿಸದಿದ್ದಕ್ಕೆ ಮಗಳು ಕೋಪ ಗೊಂಡಳು. ಅದರಿಂದಾಗಿ ದಕ್ಷಬ್ರಹ್ಮ ತನ್ನ ಮಗಳನ್ನೇ ಕಳೆದುಕೊಂಡ. ಹೆಂಡತಿಯನ್ನು ಕಳೆದುಕೊಂಡ ಕೋಪಕ್ಕೆ ತುತ್ತಾದ ಶಿವನ ಕೋಪಕ್ಕೆ ಸಮಸ್ತ ದೇವಗಣವೇ ತತ್ತರಿಸಿಹೋಯಿತು. ಹೀಗೆ ಒಬ್ಬರ ಕೋಪ ಮತ್ತೊಬ್ಬರ ವಿನಾಶಕ್ಕೆ ಹೇಗೆ ಕಾರಣವಾಯಿ ತೆಂದು ನಾವು ಪುರಾಣಗಳಿಂದ ಓದಿ ತಿಳಿದುಕೊಳ್ಳಬಹುದು.