Monday, 4th November 2024

ವಿಶ್ವಕೋಶ ರಚಿಸಿದ ಸ್ವಾಮಿ ಹರ್ಷಾನಂದಜಿ

ಡಾ.ಆರೂಢಭಾರತೀ ಸ್ವಾಮೀಜಿ

ಚಿನ್ನದ ಪದಕದೊಂದಿಗೆ ಇಂಜನಿಯರಿಂಗ್ ಪದವಿ ಪಡೆದ ಸ್ವಾಮಿ ಹರ್ಷಾನಂದಜಿ, ಮನಸ್ಸು ಮಾಡಿದ್ದರೆ, ಉತ್ತಮ ವೇತನ ದೊರೆಯುವ ಸಂಸ್ಥೆಯಲ್ಲಿ ವೃತ್ತಿ ನಿರ್ವಹಿಸಬಹುದಿತ್ತು. ತಮ್ಮ ಪ್ರತಿಭೆಯ ಸಹಾಯದಿಂದ ಸರಕಾರ ಅಥವಾ ಖಾಸಗಿ ಸಂಸ್ಥೆಯ ಉನ್ನತ ಹುದ್ದೆಯನ್ನು ಅಲಂಕರಿಸಬಹುದಿತ್ತು. ಆದರೆ ಅಧ್ಯಾತ್ಮದ ತುಡಿತವು ಅವರನ್ನು ರಾಮಕೃಷ್ಣ ಮಠದ ಸಂಪರ್ಕಕ್ಕೆ ತಂದಿತು. ಹಿಂದೂ ಧರ್ಮದ ಕುರಿತು ಅವರು ಇಂಗ್ಲಿಷ್‌ನಲ್ಲಿ ರಚಿಸಿದ ವಿಶ್ವಕೋಶವು ಅವರ ಅಪಾರ ಪಾಂಡಿತ್ಯಕ್ಕೆ ಒಂದು ನಿದರ್ಶನ.

ಬೆಂಗಳೂರು ಬಸವನಗುಡಿಯ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಹರ್ಷಾನಂದಜಿ ಮಹಾರಾಜ್(91) ಅವರು ಮೊನ್ನೆ ಮಧ್ಯಾಹ್ನ 1.05 ಘಂಟೆಗೆ ಬ್ರಹ್ಮಲೀನರಾದರು. ರಾಮಕೃಷ್ಣ ಮಠ ಹಾಗೂ ಮಿಷನ್‌ನ ಹಿರಿಯ ಸಂನ್ಯಾಸಿ ಗಳಾಗಿದ್ದ ಅವರು ಕನ್ನಡ, ಸಂಸ್ಕೃತ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದರು.

ಬೆಂಗಳೂರು ಮೂಲದ ಸ್ವಾಮೀಜಿ ಚಿಕ್ಕಂದಿನಲ್ಲಿಯೇ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳಿಗೆ ಮಾರುಹೋದರು. ತಮ್ಮ ಹದಿನೈದನೇ ವಯಸ್ಸಿನಲ್ಲಿ ಬೆಂಗಳೂರಿನ ರಾಮಕೃಷ್ಣಾಶ್ರಮದ ಸಂಪರ್ಕ ಹೊಂದಿ, ಸ್ವಾಮಿ ವಿರಜಾನಂದರಿಂದ ಮಂತ್ರದೀಕ್ಷೆ ಯನ್ನು ಪಡೆದರು. ಚಿನ್ನದ ಪದಕಗಳೊಂದಿಗೆ ಮೆಕಾನಿಕಲ್ ಇಂಜನಿಯರ್ ಪದವಿ ಗಳಿಸಿ, 1954 ರಲ್ಲಿ ಬೆಂಗಳೂರಿನ ರಾಮ ಕೃಷ್ಣಾಶ್ರಮವನ್ನು ಸೇರಿದರು.

1962 ರಲ್ಲಿ 31 ನೇ ವಯಸ್ಸಿನಲ್ಲಿ ಸ್ವಾಮಿ ವಿಶುದ್ಧಾನಂದರಿಂದ ಸಂನ್ಯಾಸದೀಕ್ಷೆ ಪಡೆದರು. ಮಂಗಳೂರು, ಮೈಸೂರು, ಅಲಹಾ ಬಾದ್‌ನ ರಾಮಕೃಷ್ಣ ಮಠಗಳಲ್ಲಿ ಸೇವೆ ಸಲ್ಲಿಸಿದರು. ಕೋಲ್ಕತ್ತಾ ಬಳಿಯ ರಾಮಕೃಷ್ಣ ಮಠದ ಬ್ರಹ್ಮಚಾರಿಗಳಿಗೆ ನೀಡುವ ನೈತಿಕ, ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಶಿಕ್ಷಣ ತರಬೇತಿ ಕೇಂದ್ರದ ಆಚಾರ್ಯರಾಗಿ ಸೇವೆ ಸಲ್ಲಿಸಿದರು.

ಬಳಿಕ, 1989ರಲ್ಲಿ ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾಗಿ ನೇಮಕಗೊಂಡು 31 ವರ್ಷಗಳ ನಿರಂತರ ಸೇವೆ ಸಲ್ಲಿಸಿ ಮಠದ ಕೀರ್ತಿಯನ್ನು ಅಂತಾರಾಷ್ಟ್ರಮಟ್ಟದಲ್ಲಿ ಬೆಳಗಿದರು. ಕಲಾಂ ಬಿಡುಗಡೆ ಮಾಡಿದ ವಿಶ್ವಕೋಶ ಶ್ರೇಷ್ಠ ಬರಹಗಾರ ರಾಗಿದ್ದ ಶ್ರೀಗಳು ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ನೂರಾರು ಕೃತಿಗಳನ್ನು ರಚಿಸಿದ್ದಾರೆ.

ಹಿಂದುಧರ್ಮದ ಸಮಗ್ರ ಮಾಹಿತಿ ನೀಡುವ ‘ಎ ಕಾನ್ಸೈಸ್ ಎನ್‌ಸೈಕ್ಲೊಪಿಡಿಯಾ ಆಫ್ ಹಿಂದುಯಿಸಂ’ (ಹಿಂದು ವಿಶ್ವಕೋಶ) ಮೂರು ಸಂಪುಟಗಳ ಮೇರು ಕೃತಿ, ಶ್ರೀಗಳ 30 ವರ್ಷಗಳ ಜ್ಞಾನ ತಪಸ್ಸಿನ ಫಲ! 2008 ರಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಈ ಕೃತಿಯನ್ನು ವಿಶ್ವಾರ್ಪಣೆ ಮಾಡಿದರು. ವ್ಯಾಸರ ಬ್ರಹ್ಮಸೂತ್ರಗಳಿಗೆ ಬರೆದ ವಿವೇಕ ಸೌರಭ ಸಂಸ್ಕೃತ ವ್ಯಾಖ್ಯೆ, ವಿವೇಕಾನಂದ ಕರ್ಮಯೋಗ ಸೂತ್ರ ಶತಕ ಸಂಸ್ಕೃತದ ಸ್ವತಂತ್ರ ಕೃತಿ, ಇವರಿಗಿದ್ದ ಆಳವಾದ ಸಂಸ್ಕೃತ ವಿದ್ವತ್ತನ್ನು ಪರಿಚ ಯಿಸುತ್ತವೆ.

ಪ್ರಶ್ನೋತ್ತರ ರೂಪದಲ್ಲಿ ಹಿಂದು ಧರ್ಮ, ಯುವಜನ ಶಕ್ತಿ ಜಾಗೃತವಾಗಲಿ, ಬ್ರಹ್ಮಚರ್ಯಜೀವನ ಮೊದಲಾದ ಕೃತಿಗಳು ಜನಜನಿತ. ಇವರ ಹಲವಾರು ಕೃತಿಗಳು ವಿದೇಶೀ ಭಾಷೆಗಳಲ್ಲಿ ಅನುವಾದಗೊಂಡಿವೆ. ಇವರ ಅನೇಕ ಮೌಲಿಕ ಕೃತಿಗಳನ್ನು ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿದೆ. ದೂರದರ್ಶನದಲ್ಲಿ ಅನೇಕ ಉಪನ್ಯಾಸ ನೀಡಿದ ಶ್ರೀಗಳು ಅಂಕಣಕಾರರಾಗಿ
ಭಗವದ್ಗೀತೆಯ ಮೇಲೆ ಕನ್ನಡ ದಿನಪತ್ರಿಕೆಯಲ್ಲಿ ಸರಣಿ ಲೇಖನಗಳನ್ನು ಪ್ರಕಟಿಸಿದ್ದಾರೆ.

ನಾರದ ಭಕ್ತಿಸೂತ್ರಗಳಿಗೆ ಕನ್ನಡದಲ್ಲಿ ಭಕ್ತಿ ಕೌಮುದೀ ವ್ಯಾಖ್ಯೆ ರಚಿಸಿ ಡಾ. ಎಂ. ಈ. ರಂಗಾಚಾರ್ಯರಿಂದ ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. ತಮ್ಮ ಸಂಸ್ಕೃತದ ವಿವೇಕಾನಂದ ಕರ್ಮಯೋಗ ಸೂತ್ರ ಶತಕವನ್ನು ಹಾಗೂ ಸಂಸ್ಕೃತದ ಶ್ರೀರಾಮಕೃಷ್ಣ ಭಾಗವತವನ್ನು ಡಾ.ಆರೂಢ ಭಾರತೀ ಸ್ವಾಮಿಯಾದ ನನ್ನಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ.

ಇನ್ನೂ ಕಲಿಕೆಯ ತುಡಿತ
ಅವರಿಗೆ ಆಳವಾದ ವಿದ್ವತ್ತಿದ್ದರೂ, ಇನ್ನಷ್ಟು ಕಲಿಯುವ ತುಡಿತ. ಈ ಇಳಿವಯಸ್ಸಿನಲ್ಲೂ, ಎರಡು ವರ್ಷಗಳ ಹಿಂದೆ ಕೆಲವು ದಿನ ನನ್ನಿಂದ ಪಾಣಿನಿಯ ಸಂಸ್ಕೃತ ವ್ಯಾಕರಣ ಕೇಳಿಸಿಕೊಂಡರು. ಇದು ಅವರ ವಿದ್ಯಾಪ್ರೀತಿಯ ಹಿರಿಮೆ ಗರಿಮೆಗೆ ಸಾಕ್ಷಿ. ಅವರ ಅಗಲಿಕೆ ಭಾರತೀಯ ಧಾರ್ಮಿಕ ಆಧ್ಯಾತ್ಮಿಕ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ, ಭರಿಸಲಾಗದ ನಷ್ಟ. ಅವರ ಆದರ್ಶ ಉತ್ಸಾಹ ಪ್ರೀತಿ ಕರುಣೆ ಅನುಕಂಪ ತಾಳ್ಮೆ ತ್ಯಾಗ ಶಿಸ್ತು ಕಷ್ಟಸಹಿಷ್ಣುತೆ ಅಪಾರ ವಿದ್ವತ್ತು, ಇನ್ನು ನೆನಪು ಮಾತ್ರ. ಸಾಹಿತ್ಯರೂಪ ದಲ್ಲಿ ಅವರು ಎಂದೆಂದಿಗೂ ಅಜರಾಮರ!

ವಿಶ್ವಕೋಶ ರಚನೆ
ಸ್ವಾಮಿ ಹರ್ಷಾನಂದರಿಗೆ ಬರವಣಿಗೆ ಎಂದರೆ ಎಲ್ಲಿಲ್ಲದ ಉತ್ಸಾಹ, ಪ್ರೀತಿ. ಇಂದಿನ ಜನರಿಗೆ ನಮ್ಮ ನಾಡಿನ ಸಂಸ್ಕೃತಿ ಮತ್ತು ಅಧ್ಯಾತ್ಮ ಪರಂಪರೆಯನ್ನು ಪರಿಚಯಿಸುವ ಹಲವು ಗ್ರಂಥಗಳನ್ನು ಅವರು ರಚಿಸಿದ್ದಾರೆ. ಅವುಗಳಲ್ಲಿ ಮೇರು ಕೃತಿ ಎಂದರೆ ‘ಎ ಕಾನ್ಸೈಸ್ ಎನ್ ಸೈಕ್ಲೊಪಿಡಿಯಾ ಆಫ್ ಹಿಂದೂಯಿಸಂ’. ಹಿಂದು ಧರ್ಮದ ಕುರಿತು ವಿಶ್ವಕೋಶದ ಸ್ವರೂಪ ಹೊಂದಿರುವ ಈ ಗ್ರಂಥವು ಮೂರು ಸಂಪುಟಗಳಲ್ಲಿ ಪ್ರಕಟಗೊಂಡಿದೆ. ಇದನ್ನು ಅವರು ರಚಿಸಲು ಆರಂಭಿಸಿದ್ದು 1975ರಲ್ಲಿ.

ಸುಮಾರು 2500 ಪುಟಗಳಿರುವ ಈ ಸಂಪುಟಗಳಲ್ಲಿ 3708 ವಿಷಯಗಳ ಕುರಿತು ವಿವರಗಳು ಇವೆ. 1975ರಲ್ಲಿ ಬರವಣಿಗೆ
ಆರಂಭಗೊಂಡು 2008 ರಲ್ಲಿ ಬಿಡುಗಡೆಯಾದ ಈ ಮೂರು ಸಂಪುಟಗಳು ನಮ್ಮ ನಾಡಿನ ಅಪೂರ್ವ ಗ್ರಂಥಗಳ ಸಾಲಿಗೆ ಸೇರಿವೆ. ತಮ್ಮ ಇಳಿಗಾಲದ ತನಕವೂ ಅವರು ಗ್ರಂಥ ರಚನೆ ಮುಂದುವರಿಸಿದ್ದರು. ಇದೇ ಜನವರಿ ಒಂದರಂದು ‘ಮೈನರ್ ಗೀತಾಸ್’ ಎಂಬ ಪುಸ್ತಕ ಬಿಡುಗಡೆಯಾಗಿತ್ತು. ಸ್ವಾಮಿ ಹರ್ಷಾನಂದರು ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತಗಳಲ್ಲಿ ಹಲವು ಗ್ರಂಥ
ರಚಿಸಿದ್ದಾರೆ.

ವಾಗ್ಮಿ
ಕರ್ನಾಟಕ ಹಾಗೂ ಹಿಂದುಸ್ಥಾನಿ ಸಂಗೀತಜ್ಞರಾಗಿದ್ದ ಶ್ರೀಗಳು ಸುಶ್ರಾವ್ಯವಾಗಿ ಹಾಡುತ್ತಿದ್ದುದು ನಿಜಕ್ಕೂ ವಿಶೇಷ. ಪ್ರೌಢ ವಿದ್ವಾಂಸರೂ, ಉತ್ತಮ ವಾಗ್ಮಿಗಳೂ ಆಗಿದ್ದ ಇವರು ನಮ್ಮ ಪರಂಪರೆಯ ಕುರಿತು ಆಳವಾದ ಜ್ಞಾನವನ್ನು ಹೊಂದಿದ್ದರು ಮತ್ತು
ಅವರು ನೀಡುತ್ತಿದ್ದಕನ್ನಡ ಮತ್ತು ಆಂಗ್ಲ ಭಾಷೆಯ ವಿದ್ವತ್ಪೂರ್ಣ ಉಪನ್ಯಾಸಗಳು ಕೇಳುಗರ ಮನಸೂರೆಗೊಳ್ಳುತ್ತಿದ್ದವು.

ಸ್ವಾಮಿ ಹರ್ಷಾನಂದ ರಚಿಸಿದ ಕೆಲವು ಕೃತಿಗಳು
*ಮಹರ್ಷಿ ಪತಂಜಲಿಯ ಯೋಗಸೂತ್ರಗಳು
*ಹಿಂದೂ ಹಬ್ಬಗಳು ಮತ್ತು ಉತ್ಸವಗಳು
*ದ ಸಿಕ್ಸ್ ಸಿಸ್ಟಂಸ್ ಆಫ್ ಹಿಂದು ಫಿಲಾಸಫಿ
*ಶಾಂಡಿಲ್ಯ ಭಕ್ತಿ ಸೂತ್ರಾಸ್
*ಹಿಂದು ಫೆಸ್ಟಿವಲ್ಸ್ ಅಂಡ್ ಸೇಕ್ರೆಡ್ ಡೇಸ್
*ಹಿಂದು ಗಾಡ್ ಅಂಡ್ ಗಾಡೆಸಸ್
*ದ ಟೆನ್‌ಕಾರ್ಡಿನಲ್ ಉಪನಿಷತ್ಸ್
*ಎ ಕಾನ್ಸೈಸ್ ಎನ್‌ಸೈಕ್ಲೊಪಿಡಿಯಾ ಆಫ್ ಹಿಂದುಯಿಸಂ
*ಹಿಂದೂಯಿಸಂ ತ್ರೂಕ್ವೆಶ್ಚನ್ಸ್ ಅಂಡ್ ಆನ್ಸರ‍್ಸ್
*ದ ವಂಡರ್ ದಟ್ ವಾಸ್ ಶಾರದಾ ದೇವಿ
*ಶಾರದಾ ದೇವಿ : ದ ಗ್ರೇಟ್ ವಂಡರ್
*ತ್ರೀ ಸಿಸ್ಟಂಸ್ ಆಫ್ ವೇದಾಂತ : ಅನ್ ಇಂಟ್ರೊಡಕ್ಷನ್
*ಸಮ್ ಸೆಲೆಕ್ಷನ್ಸ್ ಫ್ರಂ ದ ಸ್ಕ್ರಿಪ್ಚರಸ್ ಆಫ್ ದ ವರ್ಲ್ಡ್ ರಿಲಿಜನ್ಸ್
*ತ್ರೀ ಜ್ಯುವೆಲ್ಸ್ ಆಫ್ ವೇದಾಂತ
*ಹಿಂದು ಪಿಲ್ಗ್ರಿಮ್ ಸೆಂಟರ್ಸ್
*ಶ್ರೀ ರಾಮಕೃಷ್ಣ ಉಪನಿಷತ್
*ಸ್ವಾಮಿ ಬ್ರಹ್ಮಾನಂದ ಇನ್ ಪಿಕ್ಚರ್ಸ್
*ನಾರದ ಭಕ್ತಿ ಸೂತ್ರಂ(ಸಂಸ್ಕೃತದಲ್ಲಿ)
*ಪುರುಷಸೂಕ್ತ(ಸಂಸ್ಕೃತ)