ರಸವೆ ಜನನ, ವಿರಸ ಮರಣ, ಸಮರಸವೇ ಜೀವನ.
ನಾಗೇಶ್ ಜೆ. ನಾಯಕ ಉಡಿಕೇರಿ
ಇಂದಿನ ದಿನಮಾನದಲ್ಲಿ ಮನುಷ್ಯ ಮನುಷ್ಯರ ನಡುವೆ ಹೊಂದಾಣಿಕೆಯ ಕೊರತೆಯನ್ನು ನಾವು ಎದ್ದು ಕಾಣುತ್ತೇವೆ. ಹೊಂದಾಣಿಕೆಯೆಂಬುದು ಬಲು ಕಷ್ಟ. ಹೊಂದಿಕೆಯ ಗುಣದಿಂದ ಆಗುವ ಲಾಭದ ಪಾಲು ಅಧಿಕ. ಆದರೆ ಧಾವಂತದ ಬದುಕಿ ನಲ್ಲಿ ಈ ಗುಣವನ್ನು ನಾವು ಮೈಗೂಡಿಸಿಕೊಳ್ಳುವುದು ತುಂಬಾ ಕಷ್ಟಕರವಾಗುತ್ತಿದೆ.
ಇನ್ನೊಬ್ಬರಿಂದ ನಾವು ಬಯಸುವ ಪ್ರತಿಲಾಪೇಕ್ಷೆ, ಇಟ್ಟುಕೊಳ್ಳುವ ಬಹಳಷ್ಟು ನಿರೀಕ್ಷೆಗಳು, ಅಹಮಿಕೆ, ಸ್ವಾರ್ಥಪರ ಚಿಂತನೆ,
ಅನಗತ್ಯ ಕೋಪ-ಮುನಿಸು, ಮನಸಿನ ತೀರಾ ಸಣ್ಣತನ, ನನ್ನದೇ ಸರಿ ಎಂಬ ಹಠ ಇವೆಲ್ಲವೂ ಇಂದು ಹೊಂದಾಣಿಕೆಯ ಶತ್ರು ಗಳಾಗಿವೆ. ರಾಷ್ಟ್ರಕವಿ ಜಿ.ಎಸ್.ರುದ್ರಪ್ಪನವರು ತಮ್ಮ ಒಂದು ಕವಿತೆಯಲ್ಲಿ ‘‘ಹತ್ತಿರವಿದ್ದರೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ’’ ಎಂದು ಹೊಂದಾಣಿಕೆಯ ಕೊರತೆಯ ಬಗ್ಗೆ ಅರ್ಥ ಪೂರ್ಣವಾಗಿ ವರ್ಣಿಸಿದ್ದಾರೆ.
ಎನಗಿಂತ ಕಿರಿಯರಾರಿಲ್ಲವಯ್ಯಾ ಎಂಬ ಬಸವಣ್ಣನವರ ವಾಣಿ ನಮ್ಮನ್ನು ಇನ್ನಷ್ಟು ಎತ್ತರಕ್ಕೇರಿಸಿಬಲ್ಲದು. ಆದರೆ ನಾವೇ ಶ್ರೇಷ್ಠ ಎನ್ನುವ ಅಹಂಭಾವ ನಮ್ಮನ್ನು ಮಣ್ಣಹುಡಿಯನ್ನಾಗಿಸುತ್ತದೆ. ಸಣ್ಣವರಾಗುವದರಲ್ಲಿಯೇ ಬದುಕಿನ ಶ್ರೇಷ್ಠತೆಯ ತತ್ವ ಅಡಗಿದೆ. ಇದು ಹೊಂದಾಣಿಕೆಯ ಮೂಲಮಂತ್ರದಂತೆ ಕೆಲಸ ಮಾಡುತ್ತದೆ.
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ,
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ
ಎಂದು ಡಿ.ವಿ.ಜಿ. ಅವರು ತಮ್ಮ ಕಗ್ಗದಲ್ಲಿ ನುಡಿಯುತ್ತಾರೆ. ಬೆರೆತು ಬಾಳುವುದೇ ಬಾಳಿನ ಹಿರಿಮೆಯ ಲಕ್ಷಣ. ಗಂಧದ ಸಂಪರ್ಕಕ್ಕೆ ಬಂದ ಸರ್ಪ ಸುಗಂಧವನ್ನೇ ಹೊತ್ತು ನಡೆವಂತೆ, ವಿಷಭಾವನೆ ಹೊಂದಿದ ಜನ ನಮ್ಮ ಸುಪರ್ದಿಗೆ ಸಿಲುಕಿ ಮೂಲ ಗುಣವನ್ನೇ ಮಾರ್ಪಾಡು ಮಾಡಿಕೊಳ್ಳುವಂತೆ ಬದುಕಿ ತೋರಿಸಬೇಕಿದೆ. ಅದಕ್ಕಾಗಿ ತಾಳ್ಮೆ, ಸಹನೆ, ಪ್ರೀತಿ ನಮ್ಮ ಸದ್ಗುಣಗಳಾಗಿರಬೇಕು. ಕೇಡು ಬಗೆದವನಿಗೂ ಒಳಿತು ಉಂಟು ಮಾಡುವ ಕರುಣೆಯ ಕಣ್ಣು ನಮ್ಮದಾಗಬೇಕು.
ಪರಿಸರಕ್ಕೆ ಹೊಂದಿಕೆಯಾಗದ ಜೀವಿ ಸರ್ವನಾಶವಾಗುತ್ತದೆ ಎಂದು ವಿಜ್ಞಾನ ಸ್ಪಷ್ಟಪಡಿಸುತ್ತದೆ. ನಾವು ಮೊದಲು ನಮ್ಮ
ಮನೆಯ ಸದಸ್ಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಕಲಿಯಬೇಕು. ಅನಂತರ ಸಮಾಜದ ಜೊತೆ ಹೊಂದಾಣಿಕೆ ಏರ್ಪಡಬೇಕು. ಪ್ರತಿಯೊಬ್ಬರ ಸ್ವಭಾವಗಳು ಒಂದೇಯಾಗಿರುವುದಿಲ್ಲ. ಭಿನ್ನತೆ ಸ್ವಭಾವದ ಹುಟ್ಟುಗುಣ. ಸಿಡುಕು, ಮುಂಗೋಪ,
ಹಾಸ್ಯ ಪ್ರವೃತ್ತಿ, ಸಂಕೋಚ, ವಾಚಾಳಿತನ, ದುಡುಕು, ಕೆಡುಕು ಇನ್ನೂ ಅನೇಕ ರೀತಿಯ ಸ್ವಭಾವದ ಜನರನ್ನು ನಮ್ಮ ಮಧ್ಯೆ ಕಾಣುತ್ತೇವೆ.
ಅವರೊಂದಿಗೆ ಬೆರೆಯುವ ಸಂದರ್ಭಗಳು ಸಾಕಷ್ಟು ಬರುತ್ತವೆ. ಸಹಜವಾಗಿ ಅವರ ಜೊತೆ ಬೆರೆತರೆ ವೈಮನಸ್ಸಿನ ಪ್ರಶ್ನೆಯೇ
ಉದ್ಭವಿಸುವುದಿಲ್ಲ. ತಾಳಿಕೊಳ್ಳುವ, ಸಹಿಸಿಕೊಳ್ಳುವ ಗುಣ ನಮ್ಮದಾಗಿರಲಿ.