ಬಸವರಾಜ ರಾ ಅಗಸರ
ವ್ಯಂಗ್ಯ ಚಿತ್ರ ರಚನೆಯಲ್ಲಿ ಕೌಶಲ ತೋರುತ್ತಿರುವ ಈ ಕಲಾವಿದನ ಸಾಧನೆ ಗಮನಾರ್ಹ.
ಬದುಕಿನಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತದೆ, ಜೀವನದಲ್ಲಿ ಉತ್ಸಾಹವಿದ್ದರೆ ಕನಸನ್ನು ನನಸಾಗಿಸುವ ಭಾಗಿಲು ತಾನಾಗೆ ತೆರೆಯುತ್ತದೆ ಎನ್ನುವದಕ್ಕೆ ಜೀವಂತ ಸಾಕ್ಷಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸುಕ್ಷತ್ರ ಗೋಲಗೇರಿ ಗ್ರಾಮದ ಈ ಕಲಾವಿದ. ಆಕಾರದಲ್ಲಿ ವಾಮನ ಮೂರ್ತಿಯಾದರೂ ಸಾಧನೆಯಲ್ಲಿ ತ್ರಿವಿಕ್ರಮನಾಗಿರುವ ಶರಣು ಚಟ್ಟಿ ಅವರು ಗೋಲಗೇರಿಯ ಗೊಳಪ್ಪ -ಗಂಗಾಬಾಯಿ ಎಂಬ ಶರಣ ದಂಪತಿಗಳ ಉದರದಲ್ಲಿ 21 ಅಕ್ಟೋಬರ್ 1987 ರಲ್ಲಿ ಜನಿಸಿದರು.
ಶರಣು ಚಟ್ಟಿ ಅವರು ನೋಡಲು ದೇಹದ ಗಾತ್ರದಲ್ಲಿ ಕಡಿಮೆ ಇದ್ದರೂ, ಅವರು ವ್ಯಂಗ್ಯ ಚಿತ್ರ ಲೋಕದಲ್ಲಿ ತಮ್ಮದೇ ಆದ ನೆಲೆಯನ್ನು ಕಂಡು ಕೊಂಡಿದ್ದಾರೆ, ದೈತ್ಯರೂಪಿಯಾಗಿ ಬೆಳೆಯುತ್ತಿದ್ದಾರೆ. ಹವ್ಯಾಸಿ ಚಿತ್ರ ರಚನಾಕಾರನಾಗಿ ವೃತ್ತಿಯಲ್ಲಿ ಶಿಕ್ಷಕರಾದರೂ, ಪ್ರವೃತಿಯಲ್ಲಿ ವ್ಯಂಗ್ಯ ಚಿತ್ರ ರಚನೆಗೆ ತನ್ನನ್ನು ತಾನು
ಸಮರ್ಪಿಸಿಕೊಂಡ ಶರಣು ಚಟ್ಟಿಯವರು ಸಾಹಿತ್ಯ ಬರವಣಿಗೆ ಜೊತೆಗೆ ಉತ್ತಮ ಕಲಾವಿದನಾಗಿ ಹೊರ ಹೊಮ್ಮುತ್ತಿದ್ದಾರೆ. ಚುಟುಕು ಸಾಹಿತ್ಯದಿಂದ ಹಿಡಿದು ನಾಡಿನ ಹಲವು ಪತ್ರಿಕೆಗಳಲ್ಲಿ ಸುಮಾರು 5000ಕ್ಕಿಂತ ಅಧಿಕ ವ್ಯಂಗ್ಯ ಚಿತ್ರಗಳನ್ನು ರಚಿಸಿ, ಪ್ರಕಟಿಸಿದ್ದಾರೆ.
ನಮ್ಮ ನಾಡಿನಲ್ಲಿ ನಡೆಯುವ ವಿನೋದಾತ್ಮಕ, ಹಾಸ್ಯಾತ್ಮಕ, ರಾಜಕೀಯ ವಿದ್ಯಮಾನಗಳ ಕುರಿತು ವ್ಯಂಗ್ಯ ಚಿತ್ರಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ಎತ್ತಿ ತೋರಿಸುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ಧಾರೆ. ಸಾಮಾಜಿಕ, ರಾಜಕೀಯ, ಆರೋಗ್ಯ ಮತ್ತು ಇತರ ಸಮಸ್ಯೆಗಳನ್ನೂ ಪರಿಣಾಮಕಾರಿಯಾಗಿ ವ್ಯಂಗ್ಯ ಚಿತ್ರ ಕಲೆ ಮೂಲಕ ವಿಡಂಬನೆಯ ಮೂಲಕ ಜನರಿಗೆ ತೋರುತ್ತ ಹಾಸ್ಯವನ್ನು ಸೃಜಿಸುವ ಸಮಯದಲ್ಲೇ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಬಿ ಎ (ಬಾಹ್ಯ) ಪದವಿ ಪಡೆದು ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಎಂ.ಎ(ಬಾಹ್ಯ) ಸ್ನಾತಕೋತ್ತರ ಪದವಿ ಪೂರೈಸಿ, ವೃತ್ತಿಯಲ್ಲಿ ಗೊಲಗೇರಿ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ದುಡಿಯುತ್ತಿದ್ದಾರೆ. ಇವರ ಬಾಳ ಸಂಗಾತಿ ರೂಪಾ ಚಟ್ಟಿ ಅವರೂ ಇವರ ಸಾಧನಾ ಪಯಣದಲ್ಲಿ ಜೊತೆಯಾಗಿ ಬೆಂಬಲನೀಡುತ್ತಿದ್ದಾರೆ.
ವಿವಿಧ ಕಡೆ ಪ್ರದರ್ಶನ
ಇವರು ರಚಿಸಿದ ವ್ಯಂಗ್ಯಚಿತ್ರಗಳು ಮತ್ತು ಕಲಾಕೃತಿಗಳು ಬೆಂಗಳೂರಿನ ಇಂಡಿಯನ್ ಕಾರ್ಟೂನ್ ಗ್ಯಾಲರಿ, ಉಡುಪಿ ಗೆರೆ ಬರೆ ಚಿತ್ರ ಕಲಾ ತರಬೇತಿ ಸಂಸ್ಥೆ, ಹುಬ್ಬಳ್ಳಿ ಚಿತ್ರ ಸಂತೆ, ಮುಂಬಯಿ ಕಾರ್ಟೂನಿಸ್ಟ್ ಕಂಬೈನ್, ಧಾರವಾಡದ ಆರ್ಟ್ ಗ್ಯಾಲರಿ ಮೊದಲಾದ ಕಡೆ ಪ್ರದರ್ಶನಗೊಂಡಿವೆ. ಟರ್ಕಿ, ನಾರ್ವೆ, ಕೆನಡಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ವ್ಯಂಗ್ಯ ಚಿತ್ರ ಸ್ವರ್ಧೆ ಹಾಗೂ ಪ್ರದರ್ಶನಗಳಲ್ಲೂ ಭಾಗವಹಿಸಿ ಜನ ಮನದಲ್ಲಿ ಮೆಚ್ಚಿಗೆ ಗಳಿಸಿದ್ದಾರೆ. ಚಂದನ ವಾಹಿನಿ,ಈ ಟಿವಿ ಕನ್ನಡ ಸೇರಿದಂತೆ ವಿವಿಧ ದೃಶ್ಯ ಮಾಧ್ಯಮಗಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಹಾಸ್ಯ ಸಂದರ್ಶನ ನೀಡಿದ್ದಾರೆ. ದೈಹಿಕ ಎತ್ತರ ಕಡಿಮೆಯಾ ದರೂ, ಕಲಾಕೃತಿ ರಚನೆಯಲ್ಲಿ ಉನ್ನತ ಸ್ಥಾನ ತಲುಪುತ್ತಿರುವ ಶರಣು ಚೆಟ್ಟಿಯವರ ಸಾಧನೆಯು ಹಲವರಿಗೆ ಸ್ಫೂರ್ತಿ ತುಂಬುವಂತಿದೆ.