Sunday, 15th December 2024

ತಾನಾರೆಂದು ತಿಳಿದೊಡೆ – 38

ಕ್ಷಿತಿಜ್ ಬೀದರ್

ನಾನು ಹೇಳುವ ‘ಮನತುಂಬಿ’ ಭಾವಪ್ರಜ್ಞೆಯೂ ಸಾಕ್ಷಿದಾರನಾಗುವ ದಿಸೆಯಲ್ಲಿದೆ. ಮನತುಂಬಿ ಭಾವವೂ ಕನ್ನಡಿಯಂತೆ! ವರ್ತಮಾನದಲ್ಲಿ ನಡೆಯುವ ವಿದ್ಯಮಾನವನ್ನು ಪ್ರತಿಫಲಿಸುವುದೇ ಅದರ ಕೆಲಸ. ಇದೊಂದು ಅನಿರ್ಣಯ ನಿರಪಕ್ಷಪಾತ
ವೀಕ್ಷಣೆ!

ಯಾವುದೇ ಟೀಕೆ ವಿಮರ್ಶೆ ಇಲ್ಲದೆ ಗಮನಹರಿಸುವ ಮನಸ್ಥಿತಿಯಾಗಿರುತ್ತದೆ. ನಿರ್ಲಿಪ್ತ ಭಾವ ಎನ್ನಬಹುದು. ಪರದೆ ಮೇಲೆ  ಮೂಡುವ ಬಣ್ಣದ ಸಿನಿಮಾ ಮುಗಿದ ಮೇಲೂ ಪರದೆ ಬಣ್ಣವಾಗಿರದೆ ಬಿಳಿಯಾಗಿಯೇ ಇದ್ದು ಬಿಡುವುದಲ್ಲವೇ? ಯಾವುದೇ ವಿಚಾರಗಳಿಗೆ, ಅಭಿಪ್ರಾಯಗಳಿಗೆ ಆಸ್ಪದ ನೀಡದೆ ನಿರ್ಭಾವುಕರಾಗಿ ವಿದ್ಯಮಾನವನ್ನು ಅವಲೋಕಿಸುವ ಮನಸ್ಥಿತಿಯನ್ನೇ ‘ಮನತುಂಬಿ’ ಭಾವಪ್ರಜ್ಞೆ ಎನ್ನಬಹುದು. ಮನಸ್ಸು ಖಾಲಿಯಾಗಿ ಇರುವುದಲ್ಲ. ಅದು ಪೂರ್ಣ ತುಂಬಿಕೊಂಡು ಸಂತೃಪ್ತ ಭಾವ
ದಲ್ಲಿ ಪ್ರಶಾಂತವಾಗಿರಬೇಕು. ಎಲ್ಲವನ್ನೂ ಅನುಭವಿಸಿದ ರೀತಿಯಲ್ಲಿ ಯಾವುದೇ ಕುತೂಹಲ ಕಾಮನೆ ಇರದ ಸ್ಥಿತಿಯನ್ನೇ ನಾನು ‘ಮನತುಂಬಿ’ ಭಾವ ಪ್ರಜ್ಞೆ ಎಂದು ಕರೆಯುತ್ತೇನೆ. ಉದಾಹರಣೆಗೆ, ಒಂದು ವಸ್ತು ಅಥವಾ ಒಬ್ಬಳು ಸುಂದರ ಸ್ತ್ರೀ ಕಂಡರೆ ಮನ
ತುಂಬಿ ಭಾವ ಪ್ರಜ್ಞೆಯಲ್ಲಿ ‘ದೇವರು ಸುಂದರವಾಗಿ ನಿರ್ಮಿಸಿದ್ದು, ಅವಳ ಪಾಡಿಗೆ ಅವಳು ಸುಖವಾಗಿ ಇದ್ದು ಬಿಡಲಿ’ ಎಂದು ನಿರ್ಲಿಪ್ತತೆಯಲ್ಲಿ ಶುಭವನ್ನೇ ಹಾರೈಸಿ ಸಾಕ್ಷಿದಾರನಾಗಿದ್ದು ಬಿಡಬೇಕು.

ಆ ಸುಂದರತೆ ಶಾಶ್ವತವಲ್ಲ ಎಂಬ ಇನ್ನೊಂದು ಪ್ರತಿಧ್ವನಿ ಒಳಗಿನಿಂದ ಬರುವಂತಿರಬೇಕು. ಇದನ್ನೇ ನಾನು ‘ಮನತುಂಬಿ ತತ್ವ’ ಎಂದು ಕರೆಯುತ್ತೇನೆ. ಮನಸ್ಸಿನ ಬ್ರಹ್ಮಾಂಡವನ್ನೇ ಪ್ರತ್ಯೇಕವಾಗಿ ಅವಲೋಕಿಸುವುದು, ಮನಸ್ಸೇ ಮನಸ್ಸಿನ ಹಾವ ಭಾವ ಗಮನಿಸುವ ವಿದ್ಯಮಾನವಿದು. ಮನತುಂಬಿ ಭಾವ ಪ್ರಜ್ಞೆಯಲ್ಲಿ ಪ್ರಮುಖವಾಗಿ ಮೂರು ವಿಧದ ಕಾರ್ಯವೈಖರಿಯನ್ನು ಗುರು ತಿಸಬಹುದು. ಮೊದಲನೆಯದಾಗಿ, ನಾವೇನು ಮಾಡುತ್ತಿದ್ದೇವೆ ಎನ್ನುವುದನ್ನು ನೆನಪಿಸಿಕೊಳ್ಳುವುದು. ಎರಡನೆಯದು, ವಸ್ತು ಸ್ಥಿತಿಯನ್ನು ಇದ್ದ ಹಾಗೆ ಗ್ರಹಿಸುವುದು.

ಮೂರನೆಯದು, ಪ್ರಕೃತಿಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಮತ್ತು ಆಳವಾಗಿ ಚಿಂತಿಸುವುದು. ಪ್ರಾರಂಭಕ್ಕೆ ಧ್ಯಾನದಲ್ಲಿ ತಲ್ಲೀನರಾದಾಗ ಮನಸ್ಸು ಎತ್ತೆತ್ತಲೋ ಹರಿಯತೊಡಗುತ್ತದೆ. ‘ನೀನೇನು ಯೋಚನೆ ಮಾಡುತ್ತಿದ್ದೀಯಾ? ನೀನೇನು ಮಾಡ ಬೇಕಾಗಿತ್ತು’ ಎಂದು ನೆನಪಿಸಿಕೊಳ್ಳುವ ಮೂಲಕ ಮನಸ್ಸನ್ನು ಪುನಃ ಧ್ಯಾನಕ್ಕೆ ತಂದು ನಿಲ್ಲಿಸಬೇಕು. ಇದು ಮನತುಂಬಿ ಭಾವ ಪ್ರಜ್ಞೆಯ ಮೊದಲ ಕಾರ್ಯ. ಸದ್ದಿಲ್ಲದೇ ಕ್ಷಣಾರ್ಧದಲ್ಲಿ ನಡೆದು ಹೋಗುವ ಕ್ರಿಯೆ.

ಯಾವುದೋ ಚಿಂತೆಯಲ್ಲಿ ನೇತಾಡುತ್ತಾ ಧ್ಯಾನ ಮರೆಯುವುದು ಸಹಜ. ಸತತ ಅಭ್ಯಾಸದಿಂದ ಮನ ತುಂಬಿ ಭಾವ ಪ್ರಜ್ಞಯು ಚಿಂತೆಗಳಿಂದ ಮುಕ್ತಗೊಳಿಸುತ್ತದೆ. ವಸ್ತುವನ್ನು ಇದ್ದ ಹಾಗೆ ಗ್ರಹಿಸದೇ ಇನ್ನೇನೋ ಕಲ್ಪನೆ ಮಾಡುವುದನ್ನು ಕಾಣುತ್ತೇವೆ. ಯಾವುದೇ ಕಲ್ಪನೆಗೆ ಮಣಿಯದೆ ಏಕಾಗ್ರಚಿತ್ತ ಹೊಂದಿ ಇರುವುದನ್ನು ಇದ್ದಹಾಗೆ ಬರಮಾಡಿಕೊಳ್ಳುವ ಮುಗ್ಧತೆ ಬೆಳೆಸಿಕೊಳ್ಳ ಬೇಕು. ಮಗುವಿನ ಮುಂದೆ ಬೆಂಕಿಯಿಟ್ಟರೆ ಮುಗ್ಧತೆಯಲ್ಲಿ ಮುಟ್ಟಿ ಬಿಡುತ್ತದೆಯಲ್ಲವೇ? ಅದಕ್ಕೆ ಯಾವುದೇ ಕಲ್ಪನೆ ಇರುವು ದಿಲ್ಲ.

ಪ್ರಕೃತಿಯ ಚಮತ್ಕಾರವನ್ನು ಬೆರಗು ಕಣ್ಣಿನಲ್ಲಿ ವೀಕ್ಷಿಸುವುದು. ಇಡೀ ಭೂ ಪ್ರದೇಶದ ಮೇಲೆ ಸುರಿಯುವ ಮಳೆ ನೀರು, ಅಗಾಧ ಸಮುದ್ರ ನೀರು, ಆಕಾಶದಲ್ಲಿ ತೇಲಾಡುವ ಗ್ರಹಗಳು ಹೊರಜಗತ್ತಿನ ವಿಸ್ಮಯಗಳಾದರೆ ಒಂದು ಸೆಕೆಂಡು ವಿರಾಮವಿಲ್ಲದೆ 60-70 ವರ್ಷಗಳ ತನಕ ಬಡಿದುಕೊಳ್ಳುವ ಹೃದಯ! ಉಸಿರಾಟ, ನೋಡುವ ಕಣ್ಣು ಅಚ್ಚರಿಯಲ್ಲವೇ? ಪ್ರತಿ ಯೊಂದು ವಸ್ತು ಹುಟ್ಟುವ ಸಾಯುವ ಹಂತವನ್ನು ಕೌತುಕದಲ್ಲಿ ಗಮನಿಸಬೇಕು. ಇದನ್ನು ಪರಿಶೀಲಿಸುವಾಗ ನಿರಾಸಕ್ತಿ ಮತ್ತು ನಿರ್ಮೋಹ ಭಾವ ಹೊಂದಿರ ಬೇಕು. ಪರಿವರ್ತನೆಯೇ ಜಗದ ನಿಯಮ ಎಂಬ ತತ್ವವನ್ನು ಭೌತಿಕ ವಸ್ತುಗಳಲ್ಲಿ ಕಾಣಬೇಕು. ಇಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಸತ್ಯವನ್ನು ಉದಾರತೆಯಲ್ಲಿ ಬರಮಾಡಿಕೊಂಡು ಸಾವಿಗೆ ದಾರಿ ಮಾಡಿಕೊಡಬೇಕು.

ಪ್ರೀತಿಸುವ ಗಂಡ ಸತ್ತರೆ ತಿರುಗಿ ಬರಲಾರ. ಒಮ್ಮೆ ಹೋದರೆ ಮುಗಿಯಿತು. ಅದು ಅಲ್ಲಿಯೇ ಅಂತ್ಯ. ಬದುಕಿರುವಾಗ ಗೋಳು ಹೊಯ್ದುಕೊಂಡ ಹೆಂಡತಿ ಕಾಯಂ ಗಂಡನನ್ನು ಕಳೆದುಕೊಂಡಂತೆಯೇ. ಕ್ಷಮೆ ಕೇಳಬೇಕೆಂದರೂ ಸಿಗದ ಕಾಯ. ಪಂಚಭೂತ ಗಳಲ್ಲಿ ಲೀನವಾದ ಆ ಶರೀರ ಇನ್ನೆಲ್ಲಿ ಸಿಗಬೇಕು? ಹೀಗಿರುವಾಗ ವ್ಯಕ್ತಿಯನ್ನು ತೀರಾ ಕನಿಷ್ಠವಾಗಿ ಕಾಣುವ, ಅಳೆಯುವ ಧೋರಣೆ ನಮ್ಮಲ್ಲಿ ಕಾಣಸಿಗುತ್ತಿದೆ. ಇದು ಸರಿಯೇ? ವ್ಯಕ್ತಿ ಶಕ್ತಿಯ ರೂಪವಲ್ಲವೇ? ದೇವರ ಅಂಶವಾಗಿ ಅವತರಿಸಿದ ವ್ಯಕ್ತಿಯ ನಿಗೂಢತೆ ಯನ್ನು ಅರ್ಥೈಸಬೇಕಲ್ಲವೇ? ಅಪರೂಪದ ವಸ್ತು ಎನ್ನುವಂತೆ ವ್ಯಕ್ತಿಯ ಅಸ್ತಿತ್ವವನ್ನು ಮನಗಾಣಬೇಕಿದೆ. ಕೆಲವು ಸಾಮಾನ್ಯ ದೃಶ್ಯಗಳಲ್ಲಿ ವ್ಯಕ್ತಿತ್ವವನ್ನು ಕಡೆಗಣಿಸುವ ವಿದ್ಯಮಾನವನ್ನು ನಾನಿಲ್ಲಿ ಗಮನಕ್ಕೆ ತರಬಯಸುತ್ತೇನೆ.

ದೃಶ್ಯ 1: ಕಾಫಿ ಕುಡಿಯುವಾಗ ಲೋಟ ಜಾರಿ ಬಿದ್ದು ಒಡೆದು ಹೋಯ್ತು ಅನ್ನಿ. ಮಡದಿ ಸಿಕ್ಕಾಪಟ್ಟೆ ಗಂಡನಿಗೆ ಬೈಯುತ್ತಾಳೆ. ಬೇರೆ ಕಾಫಿ ಕೊಡುವುದಿಲ್ಲ. ಬೇರೆ ಕಾಫಿ ಕೇಳದೆ ಗಂಡ ಅವಸರವಾಗಿ ಕಚೇರಿಗೆ ಓಡುತ್ತಾನೆ.

ದೃಶ್ಯ 2: ಮಗ ಚಿತ್ರ ಬಿಡಿಸುವಾಗ ಒಂದಿಷ್ಟು ಬಣ್ಣ ಅಂಗಿಗೆ ತಗುಲಿ ಕಲೆಯಾಯಿತು ಅನ್ನಿ. ಮೇಜು ಬಣ್ಣವಾಯಿತು. ಅಮ್ಮ ನೋಡಿದವಳೇ ಹುಡುಗನ ಕಪಾಳಕ್ಕೆ ಹೊಡೆಯುತ್ತಾಳೆ. ಹುಡುಗ ಅಳುತ್ತಾ ಹೊರಗೆ ಓಡುತ್ತಾನೆ.

ದೃಶ್ಯ 3: ಹೂವಿನ ಕುಂಡ ಎತ್ತಿಡಲು ಆಳಿಗೆ ಆದೇಶಿಸುತ್ತಾಳೆ ಯಜಮಾನತಿ. ಎತ್ತಿಡುವಾಗ ಒಂದು ಗುಲಾಬಿ ಹೂ ಮುರಿದು ಕೆಳಗೆ
ಬೀಳುತ್ತದೆ. ಹೊಟ್ಟೆೆ ಉರಿದುಕೊಂಡ ಯಜಮಾನತಿ ಕೂಲಿಯವನಿಗೆ ಸಿಕ್ಕಾಪಟ್ಟೆ ಬಯ್ಯುತ್ತಾಳೆ. ಅವನು ಅವಮಾನಿತನಾಗಿ
ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ.

ದೃಶ್ಯ 4: ಒರೆಸುತ್ತಿದ್ದ ನೆಲದ ಮೇಲೆ ಮಗಳು ಕಾಲಿರಿಸಿ ಭರಭರನೆ ತನ್ನ ಕೋಣೆಗೆ ಹೋಗುತ್ತಾಳೆ ಅನ್ನಿ. ಅಯ್ಯೋಯ್ಯೋ…
ಎಂದು ತಾಯಿ ಕೂಗಿ ಸಹಸ್ರ ನಾಮಾರ್ಚನೆ ಮಾಡುತ್ತಾಳೆ. ಬೇಸರಿಸಿಕೊಂಡ ಮಗಳು ಹೊರ ನಡೆಯುತ್ತಾಳೆ.

ದೃಶ್ಯ 5: ಸ್ಕೂಟರ್ ಧೂಳು ಒರೆಸಲು ಗಂಡ ಯಾವುದೋ ಬಟ್ಟೆ ತುಂಡು ತೆಗೆದುಕೊಂಡು ಸ್ವಚ್ಛ ಮಾಡುವುದನ್ನು ಗಮನಿಸಿದ ಮಡದಿ ‘‘ಬುದ್ಧಿ ಇದೆಯಾ? ಈ ಬಟ್ಟೆ ಯಾಕೆ ತಗೊಂಡ್ರೀ?’ ಎಂದು ವಾಗ್ಝರಿ ಹರಿಸುತ್ತಾಳೆ. ಅವಳ ಬಿರು ನುಡಿಗೆ ಗಂಡ ತಲೆ ತಗ್ಗಿಸಿ ಚಿಂದಿ ಬಟ್ಟೆೆ ಅಲ್ಲೇ ಬಿಸಾಡಿ ಹೊರ ನಡೆಯುತ್ತಾನೆ.

ದೃಶ್ಯ 6: ಫಿನೈಲ್ ನೀರಿನಲ್ಲಿ ಸ್ನಾನದ ಮನೆಯನ್ನು ನಾರುಕೋಲಿನಲ್ಲಿ ಒರೆಸುತ್ತಿದ್ದ ಗಂಡನನ್ನು ಕಂಡ ಹೆಂಡತಿ ಸಹನೆಯಲ್ಲಿ ‘ಅದು 200 ರೂ. ಕೊಟ್ಟು ತಂದಿದ್ದೇನೆ. ವರಿಸಿ ತೊಳೆದಿಡಬೇಕು. ತಿಳಿತಾ?’ ಎಂದು ದಬಾಯಿಸುತ್ತಾಳೆ. ಐಎಎಸ್ ಗಂಡ ಅಂತರ್ಮುಖಿಯಾಗುತ್ತಾನೆ.