Tuesday, 10th December 2024

ತೌಕ್ತೇ ತಂದ ಅನಪೇಕ್ಷಿತ ಅತಿಥಿ !

ಎ.ಎಸ್‌.ಎನ್‌.ಹೆಬ್ಬಾರ್‌

ಒಳಗೆ ಬಂದು, ಸಿಕ್ಕಿಹಾಕಿಕೊಂಡ ಆ ಅನಪೇಕ್ಷಿತ ಅತಿಥಿ ಹೊರಗೆ ಹೋದದ್ದಾದರೂ ಹೇಗೆ?

ಈಚೆಗೆ ಬೀಸಿದ ತೌಕ್ತೇ ಚಂಡಮಾರುತ ಎಲ್ಲ ಏನೆಲ್ಲ ಅನಾಹುತ ಮಾಡಿತು ಎಂತ ಟಿವಿಯಲ್ಲಿ ನೋಡಿ ಓದಿದ್ದೇವೆ. ಆದರೆ
ನುಡಿ ತೋಟಕ್ಕೆ ಪಂಜೆಯವರ ‘ತೆಂಕಣ ಗಾಳಿಯಾಟ’ದಲ್ಲಿದ್ದಂತೆ ಬುಸುಗುಟ್ಟುವ ಪಾತಾಳದ ಹಾವೋ, ಹಸಿವಿನ ಭೂತವು
ಕೂಗುವ ಕೂವೋ ಎಂಬ ರೀತಿ ಕೂಗೆಬ್ಬಿಸಿ, ಮನೆ ಮನೆ ತೋಟವ ಅಡಿಮೇಲಾಗಿಸಿ, ತೆಂಗನು ಲಾಗಿಸಿ, ಅಡಕೆಯ ಬಾಗಿಸಿ, ಪನೆ ಇಬ್ಭಾಗಿಸಿ, ಬುಡದೂಟಾಡಿಸಿ, ತಲೆ ತಾಟಾಡಿಸಿ….. ಗಿಡ ಗಿಡದಿಂ – ಚೆಲುಗೊಂಚಲು ಮಿಂಚಲು- ಮಿಡಿಯನು ಹಣ್ಣನು, ಉದುರಿಸಿ ಕೆದರಿಸಿ, ಎಡದಲಿ ಬಲದಲಿ ಕೆಲದಲಿ ನೆಲದಲಿ,….. ಬಂತೈ ಬೀಸುತ! ಬೀಸುತ ಬಂತೈ!..

ತೆಂಕಣ (ತೌಕ್ತೇ) ಗಾಳಿಯು ಕೊಂಕಣ ಸೀಮೆಗೆ ಬಂತೈ ಬಂತೈ ಬಂತೈ ಬಂತೈ! ಎಂಬಂತೆ ಬಂದು ಹೋಯಿತು. ನಮ್ಮ ಆದೆಷ್ಟೋ ಗಿಡಗಳುರುಳಿದುವು. ಅದಿರಲಿ. ಈ ತೌಕ್ತೇ ಮಾಡಿದ ಭಾರೀ -ಜೀತಿ – ಅನಪೇಕ್ಷಿತ ಅತಿಥಿಯನ್ನು ನುಡಿ ಮನೆ ಪ್ರವೇಶ ಮಾಡುವಂತೆ ಮಾಡಿ ರಾತ್ರಿ  ಒಂದಷ್ಟು ಕಾಲ ನನ್ನ ಬೆವರಿಳಿಸಿದ್ದು! ಅದನ್ನು ನೆನೆದರೇ ಮೈ ಈಗಲೂ ಜುಂ ಅನ್ನುತ್ತದೆ. ಆ ರಾತ್ರಿಯ ನನ್ನ ಹೆಣಗಾಟ, ಸೆಣಸಾಟದಿಂದ ಎರಡು ದಿನ ಕಾಲ ಹೈರಾಣಾಗಿ ಹೀಗೆ ಬರೆಯಲಿಕ್ಕೇ ಆಗಿರಲಿಲ್ಲ. ಈಗ ಸ್ವಲ್ಪ ಸುಧಾರಿಸಿಕೊಂಡ ಬಳಿಕ ಘಟನೆ ಬಿತ್ತರಿಸುತ್ತಿದ್ದೇನೆ.

ಮೊನ್ನೆ ರಾತ್ರಿ ಹತ್ತು ಗಂಟೆ. ಎಂದಿನಂತೆ ಹಾಲಿಗೆ ಕೂಪನ್ ಇಟ್ಟು ಚೀಲವನ್ನು ಹೊರ ಜಗಲಿಯ ಗೂಟಕ್ಕೆ ನೇತುಹಾಕಿ, ಬಾಗಿಲು ಭದ್ರಪಡಿಸುವ ಕ್ರಮದಂತೆ, ಚೀಲ ಹಿಡಿದು ಹಾಲ್ ದಾಟಿ ಹೊರಗಿನ ಕೋಣೆ ಮುಟ್ಟುತ್ತಿದ್ದಂತೆ ಬಾಗಿಲ ಬಳಿ ಏನೋ ನೆರಳು  ಫಕ್ಕನೇ ಸುಳಿದು ಹೋದಂತಾಯಿತು. ಇಂತದರಲ್ಲ ನಾನು ಸೂಕ್ಷ್ಮ. ಅನುಮಾನ ಬಂದ ಮೇಲೆ ಸಾಲ್ಜಾಡ್ ಆಗಲೇಬೇಕು. ಖಂಡಿತ ಏನೋ ಉಂಟು ಅನ್ನಿಸಿ ಲೈಟು ಹಾಕಿದೆ.

ತಕ್ಷಣ ಸರಕ್ಕಂತ ಮತ್ತೆ ನೆರಳು ಓಡಿದಂತಾಯಿತು. ನೆರಳಿನತ್ತ ತಿರುಗಿ ನಿಟ್ಟಿಸಿ ನೋಡಿದಾಗ ಮೈ ಬೆವರಿತು. ಇದೆಂತಾ ಗ್ರಾಚಾರ!
ಒಂದು ಹೆಗ್ಗಣ ಹೇಗೋ ಮನೆಯೊಳ ಪ್ರವೇಶ ಪಡಕೊಂಡಿತ್ತು. ಲೈಟು ಹಾಕುತ್ತಲೂ ಹೆದರಿ ಕಪ್ಪು ಕರಿ ಹೆಗ್ಗಣ ಮನೆತುಂಬ
ಓಡಾಡಲಾರಂಭಿಸಿತ್ತು. ‘ಸುಧಾ,ಹೆಗ್ಗಣ ಬಂದಿತ್’ ಎಂದು ನಾನು ಎನ್ನುತ್ತಿದ್ದಂತೆ ‘ಅಯ್ಯೋ, ನಾನು ಕೋಣೆಗೆ ಹೋಗ್ತೆ’ ಎಂತ ಅವಳೆನ್ನುತ್ತಿರಬೇಕಾದರೆ, ನಾನು ಕೈಯಲ್ಲಿ ಕೋಲು ಹಿಡಕೊಂಡು ಬೆನ್ನತ್ತಿದ್ದೇ ತಡ ಅದು ಹಾಲ್‌ಗೆ ನುಗ್ಗಿ ಸೋಫಾದ ಮೇಲೆ ಕೂತಿದ್ದ ಅವಳ ಕಾಲಮೇಲಿಂದಲೇ ಸರಿದು ಹೋಗಿ ಭಯ ಹುಟ್ಟಿಸಿತ್ತು. ಅಲ್ಲಿಂದ ಅದು ದೇವರ ಕೋಣೆಯತ್ತ ದೌಡಾಯಿಸಿದಾಗ ನಾನು ಕೋಲಿನಿಂದ ಬಡಿದೆ. ಪೆಟ್ಟು ಬಾಲಕ್ಕೆ ಬಿದ್ದರೂ ಭಯಭೀತ ಪ್ರಾಣಿ ಮತ್ತೆ ಹೊರಗಿನ ಕೋಣೆಗೆ ಓಟ ಕಿತ್ತದ್ದೇ!

ಇದರಲ್ಲಿ ನಾನು ವೀರ
ಈಗ ನಾನು ಶಾಂತನಾಗಿ ಯೋಚಿಸಿ, ಅಡುಗೆ ಕೋಣೆ ಸಹಿತ ಎಲ್ಲ ಕೋಣೆಗಳ ಬಾಗಿಲು ಭದ್ರಪಡಿಸಿದೆ. ಹಾಲ್ ಬಿಟ್ಟರೆ ಅದು
ಮತ್ತೆಲ್ಲಿಗೂ ನುಗ್ಗದಂತೆ ಎಚ್ಚರ ವಹಿಸಿದೆ. ಇನ್ನು, ಅದನ್ನು ಹೊಡೆದು ಹಾಕಿದರೆ (ಕರೋನಾ ಕಾಲದಲ್ಲಿ) ಶವ ಸಾಗಾಟದ
ಸಮಸ್ಯೆಯೇ ಬೇಡ ಎಂತ ಅದು ಸೀದಾ ನಿಷ್ಕ್ರಮಿಸಲು ಅನುಕೂಲಿಸಿ ಮನೆಯ ಹೊರ ಬಾಗಿಲುಗಳನ್ನು ತೆರೆದಿಟ್ಟೆ.

ಅಷ್ಟರಲ್ಲಿ ಆ ಪ್ರಾಣಿ ಉಪ್ಪರಿಗೆ ಮೆಟ್ಟಲ ಕೆಳಗಿದ್ದ ಸಾಮಗ್ರಿಗಳ ಚಡಿ ಸೇರಿಕೊಂಡು ನನಗೆ ಪಂಥಾಹ್ವಾನ ಹಾಕಿತು. ನಾನು
ಹಳೇಮನೆಯಲ್ಲಿರುವಾಗ ಇಲಿ ಹೊಡೆಯುವುದರಲ್ಲಿ ವೀರ. ಹುಲಿ ಹೊಡೆಯದಿದ್ದರೂ ಸಾಕಷ್ಟು ಇಲಿ ಹೊಡೆದವ. ಈ
ಹೊಸಮನೆಗೆ ಇಲಿ, ಹೆಗ್ಗಣ ಬರುವ ಛಾನ್ಸೇ ಇಲ್ಲ! ಇದು ಹೇಗಪ್ಪಾ ಬಂತು ಎಂತ ಕಣ್ಣು ಹೊರಳಿಸಿ ನಿರುಕಿಸಿದಾಗ, ‘ಓಹೋ, ಇದು ತೌಕ್ತೇ ಕೃತ್ಯವೇ’ ಎಂದು ಮಂದಟ್ಟಾಯಿತು.

ಹೇಗೆಂದರೆ, ತೌಕ್ತೇಯ ಭಾರೀ ಗಾಳಿಯಿಂದಾಗಿ ಹೊರಕೋಣೆಯ ಕಿಟಿಕಿಯೊಂದರ ಕದ ತೆರೆದು ಹೋಗಿತ್ತು. ಮಳೆ, ಗಾಳಿಗೆ ಬಹುಶಃ ಕಂಗಾಲಾದ ಈ ಹೆಗ್ಗಣ ಮಹಾಶಯ ಕಂಡಿಯೊಳಗೆ ಇಣುಕಿ, ತನಗಿದು ಸುರಕ್ಷಿತ ತಾಣ ಎಂದು ನುಗ್ಗಿ ಬಂದು ಬೆಚ್ಚಗೆ ಮೂಲೆ ಹಿಡಿದು ಕೂತಿರಬೇಕು. ಇಲಿ, ಹೆಗ್ಗಣಗಳ ಒಂದು ಚರ್ಯೆ ಎಂದರೆ ಅವಕ್ಕೇ ಒಂದು ಬಂದು ಹೋಗುವ ನಿರ್ದಿಷ್ಟ ದಾರಿಯಿರುತ್ತದೆ. ಆ ದಾರಿಯ ಬರುವುದು, ಹೋಗುವುದು ಹೊರತು ಸುತರಾಂ ಅವು ಬೇರೆ ದಾರಿಯಲ್ಲಿ ಸಂಚರಿಸುವುದಿಲ್ಲ. ಇಲ್ಲೂ ಹೀಗೇ ಆಯಿತು.

ನಾನು ಢಾಳಾಗಿ ತೆರೆದಿಟ್ಟ ಹೊರ ಬಾಗಿಲ ಕಡೆಗೆ ಎಷ್ಟು ಸಲ ಅಟ್ಟಿದರೂ ಆ ಹೆಗ್ಗಣ ಅದರ ಮೂಲಕ ಹೊರಹೋಗಲೊಲ್ಲದು. ಮತ್ತೆ ಮತ್ತೆ ಅಡಗುವುದು, ನಾನು ಟಾರ್ಚ್ ಹಿಡಿದು ಅದರ ಅಡಗುತಾಣ ಕಂಡುಹಿಡಿದು ಅಲ್ಲಿಂದ ಅಟ್ಟುವುದು, ಅದು ಮತ್ತೆ ಹಾಲ್‌ಗೆ ನುಗ್ಗಿ ನನ್ನನ್ನು ಪ್ರದಕ್ಷಿಣೆ ಹಾಕಿಸುವುದು, ಸುಧಾ ಕೋಣೆಯೊಳಗಿಂದ ‘ಹೋಯ್ತಾ ಮಾರಾಯ್ರೇ’ ಎಂತ ಕೇಳುತ್ತಿರುವುದು, ಹೀಗೇ ನಡೆದು ಓಡಿ ಓಡಿ ನಾನೂ ಸುಸ್ತು, ಹೆಗ್ಗಣವೂ ಸುಸ್ತು!

ಸ್ವಲ್ಪಕಾಲ ನಾವಿಬ್ಬರೂ ಯುದ್ಧ ವಿರಾಮ ಕ್ಕೆ ಒಪ್ಪಿ ವಿಶ್ರಾಂತಿ ಪಡೆದು ಮತ್ತೆ ಕದನಕ್ಕೆ ಶುರು ಮಾಡಿದಾಗ ಅದು ಹೇಗೋ
ತಾನು ಬಂದ ದಾರಿಯ ವಾಸನೆ ಹಿಡಿದ ಹೆಗ್ಗಣ ಏಕಾಏಕಿ ಪುಸ್ತಕದ ಕಪಾಟು ಏರಿ ಕುಳಿತಾಗ ನಾನು ಕೋಲು ಹಿಡಿದು ಹೊಡೆಯ ಬೇಕೆನ್ನುವಷ್ಟರಲ್ಲಿ ಪಕ್ಕದಲ್ಲಿ ತೆರೆದಿದ್ದ ಅದೇ ಕಿಟಿಕಿಯ ಕಂಡಿಯೊಳಗಿಂದ ಪರಾರಿಯೇ! ಅಂತೂ ಶತ್ರು ಸಂಹಾರವಾಗ ದಿದ್ದರೂ, ಶತ್ರು ಪಲಾಯನವೇ ನನಗೆ ಸಂದ ವಿಜಯ ಎಂದುಕೊಂಡು, ಚುನಾವಣೆ ಗೆದ್ದವರ ರೀತಿ ಎರಡು ಬೆರಳೆತ್ತಿ ಬಿಟ್ಟೆ!

ಗುಟ್ಟಿನ ಸಂಗತಿಯೆಂದರೆ ಈ ಘನ ಘೋರ ಸಮರದಲ್ಲಿ ಬಸವಳಿದು ಸಾಕಾಗಿ ಬದುಕಿದೆಯಾ ಬಡ ಜೀವವೇ ಎಂತ ನಾನು ಹೇಳಿಕೊಂಡೆನೋ, ಅದು ಹೇಳಿಕೊಂಡಿತೋ ಈಗ ನಿಮಗದು ಅಪ್ರಸ್ತುತ! ಅಂತೂ ತೌಕ್ತೇ ತಂದ ಈ ಅನಪೇಕ್ಷಿತ ಅತಿಥಿಯನ್ನು ಬೀಳ್ಕೊಟ್ಟು, ಮೈಯಿಡೀ ಬೆವರಿನಿಂದ ತೋಯ್ದು ಹೋದ ಕಾರಣ ಒಮ್ಮೆ ನೀರು ಹೊಯ್ದುಕೊಂಡು ಫ್ರೆಶ್ ಆಗಿ ಅಯ್ಯಬ್ಬ ಎಂದು ಬಂದು ಹಾಸಿಗೆಯಲ್ಲಿ ಬಿದ್ದುಕೊಂಡಾಗ ರಾತ್ರಿ ಹನ್ನೆರಡು. ‘ಹೋಯ್ತಾ ಮಾರಾಯ್ರೆ’ ಎಂತ ನಿದ್ದೆಗಣ್ಣಿನಲ್ಲಿ ಸುಧಾ ಕೇಳಿದಾಗ ಉತ್ತರ ಕೊಡುವ ಮುಂಚೇ ನಾನೂ ನಿದ್ದೆಗೆ ಜಾರಿದ್ದೆ!