Saturday, 14th December 2024

ಟೆಂಪರ್‌ ಸೂಪರ್‌ ಹಾಡುಗಳು

ಕನ್ನಡ ಚಿತ್ರರಂಗದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಸಾಹಿತಿಯಾಗಿ, ಸಂಗೀತ ಸಂಯೋಜಕರಾಗಿ ಕಾರ್ಯನಿರ್ವಸಿರುವ ಮಂಜುಕವಿ ‘ಟೆಂಪರ್’ ಚಿತ್ರದ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟಿದ್ದಾರೆ.

‘ಟೆಂಪರ್’ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿದೆ. ಮಾಸ್ ಲವ್‌ ಸ್ಟೋರಿಯ ಈ ಚಿತ್ರ, ಟೀಸರ್ ಮೂಲಕವೇ ಗಮನ  ಸೆಳೆದಿದ್ದು, ಈಗ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಕರ್ನಾಟಕ ಫಿಲ್ಮ್‌ ಚೇಂಬರ್ ಉಪಾಧ್ಯಕ್ಷ ಉಮೇಶ್‌ಬಣಕಾರ್
ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ನಾಯಕ ಬಾಲ್ಯದಿಂದಲೂ ಮುಂಗೋಪಿ, ತನ್ನನ್ನು ಕೆಣಕಿದವರಿಗೆ ಬಿಸಿಮುಟ್ಟಿಸಿಯೇ ತೀರುತ್ತಾನೆ. ಕಾರ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಆತನಿಗೆ ತನ್ನ ಗೆಳೆಯರೇ ಪ್ರಪಂಚ. ಹೀಗಿರುವಾಗಲೇ ಶ್ರೀಮಂತ ಯುವತಿಯ ಮೇಲೆ ಪ್ರೀತಿ ಮೂಡುತ್ತದೆ.

ಸಹಜವಾಗಿಯೇ ಇವರಿಬ್ಬರ ಪ್ರೀತಿಗೆ ಅಂತಸ್ತು ಅಡ್ಡಬರುತ್ತದೆ. ಈ ವೇಳೆ ನಾಯಕ ತನ್ನ ಪ್ರೀತಿಯನ್ನು ಹೇಗೆ ಪಡೆದುಕೊಳ್ಳುತ್ತಾನೆ ಎಂಬುದೇ ಚಿತ್ರದ ಒನ್‌ಲೈನ್ ಸ್ಟೋರಿ. ಈ ಚಿತ್ರದ ಮೂಲಕ ಆರ್ಯನ್ ಸೂರ್ಯ ನಾಯಕನಾಗಿ ಚಂದನವನಕ್ಕೆ ಪರಿಚಯ ವಾಗುತ್ತಿದ್ದಾರೆ.

ಇವರಿಗೆ ಜತೆಯಾಗಿ ನವ ಪ್ರತಿಭೆ ಕಾಶಿಮಾ ಬಣ್ಣಹಚ್ಚುತ್ತಿದ್ದಾರೆ. ಪತ್ರಕರ್ತ ಧನು, ನಾಯಕನ ಸ್ನೇಹಿತನಾಗಿ ನಟಿಸಿದ್ದಾರೆ.  ‘ಮಜಾಟಾಕೀಸ್’ ಖ್ಯಾತಿಯ ಪವನ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಬಾಲಾಜಿ ಎಂಟರ್‌ಪ್ರೈಸಸ್ ಮೂಲಕ ಬಿ.ಮೋಹನಬಾಬು ಹಾಗೂ ವಿನೋದ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ,  ಮಡಿಕೇರಿ, ಮಂಡ್ಯ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಇದೇ ತಿಂಗಳು ಚಿತ್ರದ ಟೀಸರ್ ಕೂಡ ರಿಲೀಸ್ ಆಗಲಿದೆ.