Thursday, 12th December 2024

ಪರಿಸರ ಉಳಿಸಲು ಈ ಹಳ್ಳಿ ಕಟಿಬದ್ಧ !

ಕಮಲಾಕರ ಕೆ.ಎಲ್‌.ತಲವಾಟ

ಹಸಿರು ರಕ್ಷಿಸಿದ ಯಶಸ್ವೀ ಉದಾಹರಣೆ

ಅಜ್ಞಾನದಿಂದಲೋ, ನಿರ್ಲಕ್ಷ್ಯದಿಂದಲೋ, ದುರಾಸೆಯಿಂದಲೋ, ಸರಕಾರದ ತಪ್ಪು ಹೆಜ್ಜೆಯಿಂದಲೋ ನಮ್ಮ ನಾಡಿನ ಪರಿಸರ ಸಾಕಷ್ಟು ನಲುಗಿದೆ. ಕಾಡುಮರಗಳು ಮನುಷ್ಯನ ಸ್ವಾರ್ಥಕ್ಕೆ ಬಲಿಯಾಗಿ, ಬೋಳು ಗುಡ್ಡಗಳು ಸೃಷ್ಟಿಯಾಗಿವೆ. ಇದನ್ನು ಕಂಡ ಪರಿಸರ ಪ್ರೇಮಿಗಳು, ಪ್ರಾಜ್ಞರು, ಪರಿಸರ ರಕ್ಷಿಸಬೇಕು ಎಂದು ಮನಸ್ಸು ಮಾಡಿದರೆ, ಆ ಕೆಲಸ ಹೇಗೆ ಮುಂದುವರಿಯಬೇಕು? ನಾಶಗೊಂಡ ಪರಿಸರವನ್ನು ಪುನಃ ಕಟ್ಟಿ ನಿರ್ಮಿಸಲು ಊರಿನವರೇ ನಿರ್ಣಯ ಕೈಗೊಂಡರೆ, ಯಾವ ರೀತಿಯಲ್ಲಿ ಮುಂದು ವರಿಯಬೇಕು? ಇಂತಹ ಕೆಲಸ ಕೈಗೊಂಡು, ಗುಡ್ಡವನ್ನು ಹಸಿರಿನಿಂದ ತುಂಬಿಸಿದ ಹಳ್ಳಿಗಳ ಉದಾಹರಣೆ ಅಲ್ಲಲ್ಲಿದೆ. ಊರಿನವರು ಕೈಜೋಡಿಸಿದರೆ, ಸರಕಾರದ ಇಲಾಖೆಗಳು ಸಹ ನಾಡಿನ ಹಸಿರೀಕರಣಕ್ಕೆ ನಾಂದಿ ಹಾಡಬಲ್ಲವು ಎಂಬುದನ್ನು ತೋರಿಸಿಕೊಡುವ ಕಥನವೊಂದು ಇಲ್ಲಿದೆ. ಮರಗಿಡಗಳನ್ನು ಬೆಳೆಸುವ ಇಂತಹ ಪ್ರಯತ್ನ ನಿಮ್ಮಲ್ಲೂ ನಡೆದಿದೆಯೆ? ಬರಡುಭೂಮಿಯನ್ನು ಹಸಿರೀಕರಣಗೊಳಿಸಬೇಕೆಂಬ ಕಾಳಜಿ ಯಿಂದ ನೆಟ್ಟ ಗಿಡಗಳು ಕಾಡಿನ ಸ್ವರೂಪ ಪಡೆದಿವೆಯೆ? ಪ್ರತಿಕ್ರಿಯಿಸಿ: viramapost@gmail.com

ಪರಿಸರ ರಕ್ಷಣೆ ಎಂದರೆ ಕೇವಲ ಸರಕಾರದ ಕೆಲಸವೆ? ಅಥವಾ ಜನಸಾಮಾನ್ಯರು ಭಾಗವಹಿಸುವಂತಹ ಸಾಮೂಹಿಕ ಮತ್ತು ಪವಿತ್ರ ಯಜ್ಞವೆ! ಇದಕ್ಕೆ ಉತ್ತರ ಸರಳ. ಪರಿಸರವನ್ನು ರಕ್ಷಿಸಲು ನಾವು, ನೀವು, ಸರಕಾರ, ಅಧಿಕಾರ ಶಾಹಿ ಎಲ್ಲರೂ ಗಮನ ವಹಿಸಬೇಕು. ಅದರಲ್ಲಿ ಎರಡು ಮಾತಿಲ್ಲ.

ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕೈತೋಟ, ಸಿದ್ದನಕೈ ಹಳ್ಳಿಗಳ ಜನರ ಕೆಲಸ ಒಂದು ಮಾದರಿ ಎನಿಸಿದೆ. ಊರಿಗೆ ಹೊಂದಿಕೊಂಡಂತೆ ಇರುವ ಗೋಮಾಳದಲ್ಲಿ ಸರ್ಕಾರದ ಜಲಾನಯನ ಇಲಾಖೆಯ ಸಹಭಾಗಿತ್ವ ದಲ್ಲಿ ಸುಮಾರು 25 ಎಕರೆಯಷ್ಟು ಗುಡ್ಡಕ್ಕೆ ಹಸಿರು ಹಚ್ಚುವ ಕಾರ್ಯವನ್ನು 2018ರಲ್ಲಿ ಸ್ಥಳೀಯರೇ ಪ್ರಾರಂಭಿಸಿದರು.

ಗುಡ್ಡದ ಇಳಿಜಾರಿನಲ್ಲಿ ತೋಡಿದ ಇಂಗುಗುಂಡಿ ಮತ್ತು ಇದರ ಸುಮಾರು ಒಂದು ಕಿಲೋಮೀಟರ್ ದೂರದ ಹಕ್ರೆ ಎಂಬ ಹಳ್ಳಿಗೆ ಹೋಗುವ ದಾರಿಯಲ್ಲಿ ರುವ, ಹೂಳು ತುಂಬಿದ್ದ ಪುರಾತನ ಕೆರೆಗೆ ಕಾಯಕಲ್ಪ ನೀಡಿ ಮತ್ತೆ ಜಲ ಶೇಖರಣೆ ಮಾಡಿದ ಹಳ್ಳಿಯ ಯಶೋಗಾಥೆ ಇಲ್ಲಿದೆ. ಈ ಹಳ್ಳಿಗಳು ಶರಾವತಿ ನದಿಯ ಹಿನ್ನೀರಿನ ಪ್ರದೇಶಗಳು.

ಬೋಳು ಗುಡ್ಡದತ್ತ ಹಸಿರಿನ ಚಿತ್ತ
ಈಚಿನ ಹಲವು ವರ್ಷಗಳಿಂದ ಇದೊಂದು ಬೋಳು ಗುಡ್ಡವಾಗಿತ್ತು. ಕುರುಚಲು ಸಸ್ಯಗಳಾದ ಬಿಕ್ಕೆಗಿಡ, ಮುಳ್ಳಿನಿಂದ ಕೂಡಿದ ಕೌಳಿಮಟ್ಟಿ, ಪರಿಗೆ ಮಟ್ಟಿ , ಕಾರೆ ಮುಳ್ಳು ಮುಂತಾದ ಸಣ್ಣಪುಟ್ಟ ಗಿಡಗಳಿಂದ ತುಂಬಿದ ಜಾಗ. ಮಳೆಗಾಲದಲ್ಲಿ ಹಸಿರು ಹುಲ್ಲು ಬೆಳೆದು ಜಾನುವಾರುಗಳಿಗೆ ಮೇವಿಗೆ ಹುಲುಸಾದ ಜಾಗ.  ಆದರೆ ಮಳೆಗಾಲ ಮುಗಿದು ಬೇಸಿಗೆ ಪ್ರಾರಂಭವಾಯಿತೆಂದರೆ
ಹುಲ್ಲೆಲ್ಲಾ ಒಣಗಿ ಗುಡ್ಡ ಬರಡು ಬರಡು.

ಇಂತಹ ಗುಡ್ಡಕ್ಕೆ ಹಸಿರ ಹೊದಿಕೆ ಹಚ್ಚುವ ಹುಚ್ಚು ಊರಿನ ಹಲವು ಪರಿಸರಾಸಕ್ತರಲ್ಲಿ ಮೂಡುತ್ತದೆ. ಸಂಪನ್ಮೂಲಕ್ಕೇನು
ಮಾಡುವುದು ಎಂಬ ಯೋಚನೆ ಬಂದಾಗ, ಸರಕಾರದ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದರು. ಸ್ಥಳೀಯ ಜಲಾನಯನ
ಇಲಾಖೆಯ ಸಿಬ್ಬಂದಿ ಇವರ ಬೆಂಬಲಕ್ಕೆ ನಿಂತರು. ಆ ಗುಡ್ಡಪ್ರದೇಶದಲ್ಲಿ ನೆಲ್ಲಿ, ಹೊಂಗೆ, ಹೊಳೆಮತ್ತಿ, ನೇರಳೆ, ಆಲ, ಮಹಾ ಘನಿ, ಹುಣಾಲು, ಕದಂಬ, ಕಾಡುಮಾವು, ಬಿದಿರು, ಹಲಸು, ಹೆಬ್ಬಲಸು ಮೊದಲಾದ ಸುಮಾರು 7000 ಗಿಡಗಳನ್ನು
ನೆಟ್ಟರು. ಜಾನುವಾರುಗಳ ಬಾಯಾರಿಕೆ ನೀಗಲು ಎರಡು ಗೋಕಟ್ಟೆಗಳನ್ನೂ ಕಟ್ಟಲಾಯಿತು.

ಒಂದು ಗಿಡ ನೆಡಲು ಆ ಮಣ್ಣಿಗೆ, ಅಲ್ಲಿಯ ವಾತಾವರಣಕ್ಕೆ, ಹೊಂದಿಕೊಳ್ಳುವ ಗಿಡ ತರಬೇಕು. ಗಿಡ ಭೂಮಿಯಲ್ಲಿ ಬೇರು ಬಿಡುವ ಮೊದಲ ಒಂದೆರಡು ವರ್ಷವಾದರೂ ಬೇಸಿಗೆಯಲ್ಲಿ ಸ್ವಲ್ಪ ನೀರುಣಿಸಬೇಕು. ಮನೆಯ ಹತ್ತಿರದ ಜಾಗದಲ್ಲಾದರೆ ಅಥವಾ ಹತ್ತಿರದಲ್ಲೇ ನೀರು ಸಾಕಷ್ಟು ದೊರೆಯುವ ಸ್ಥಳವಾದರೆ ಅಡ್ಡಿಯಿಲ್ಲ. ನಗರಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಾದರೆ ಸರ್ಕಾರದ ಇಲಾಖೆಗಳು ಬೇಸಿಗೆಯಲ್ಲಿ ಗಿಡಗಳು ದೊಡ್ಡದಾಗುವ ತನಕವಾದರೂ ನೀರು ಉಣಿಸುತ್ತಾರೆ. ಆದರೆ ಗುಡ್ಡದಲ್ಲೇನು ಮಾಡುವುದು? ಮನೆಗಳಿಂದಲೂ ಸಾಕಷ್ಟು ದೂರ.

ಗೋಮಾಳವಾದ್ದರಿಂದ ಹುಲ್ಲು, ಸೊಪ್ಪುಸದೆ ಮೇಯಲು ಊರಿನ ದನಕರುಗಳು ಬರುತ್ತವೆ. ಸಸಿಗಳು ಚಿಕ್ಕದಾಗಿದ್ದಾಗ ಕೆಲವು ಸಸ್ಯಗಳು ಇವುಗಳ ಬಾಯಿಗೆ ಆಹಾರವಾಗುತ್ತವೆ. ಎಳೆ ಸಸಿಗಳಾಗಿದ್ದರೆ ಬಾಯಿಂದ ಎಳೆದಾಗ ಇಡೀ ಗಿಡವೇ ಕಿತ್ತು ಬರಬಹುದು. ಅಥವಾ ಅವುಗಳ ಕಾಳ್ತುಳಿತಕ್ಕೆ ಸಿಕ್ಕು ಸಸಿಗಳು ಸಾಯಬಹುದು. ಜತೆಗೆ ಕಾಡುಪ್ರಾಣಿಗಳ ಉಪಟಳ. ಈ ಸಮಸ್ಯೆಯನ್ನು ಬಗೆಹರಿಸಲು ಗಿಡ ನೆಟ್ಟ ಜಾಗದ ಸುತ್ತ ಐಬೆಕ್ಸ್ ಬೇಲಿ ಮಾಡಿದ್ದಾರೆ. ಗುಡ್ಡದ ಪ್ರದೇಶಕ್ಕೆ ಊರವರೇ ಬೇಲಿ ಮಾಡಿದ ಅಪರೂಪದ ಉದಾಹರಣೆ ಇಲ್ಲಿದೆ!

ಸ್ವಲ್ಪ ವರ್ಷಗಳ ನಂತರ ಗಿಡಗಳು ದೊಡ್ಡದಾದ ಮೇಲೆ ಈ ಬೇಲಿಯನ್ನು ತೆಗೆದು ಮತ್ತೆ ಊರಿನ ದನಕರುಗಳಿಗೆ ಮೇಯಲು
ಅವಕಾಶ ಒದಗಿಸುತ್ತೇವೆ ಎನ್ನುತ್ತಾರೆ. ಗಿಡ ನೆಟ್ಟ ಮೊದಲ ವರ್ಷ ಊರಿನವರೇ ಬಕೀಟು, ಕೊಡಗಳಲ್ಲಿ ನೀರು ಹೊತ್ತು ತಂದು
ನೀರುಣಿಸಿದ್ದಾರೆ. ಬೇಸಗೆಯ ಸಮಯದಲ್ಲಿ ಆ ಗುಡ್ಡದ ಗಿಡಗಳಿಗೆ ನೀರುಣಿಸಲು ಸ್ಥಳೀಯರು ಸಾಕಷ್ಟು ಶ್ರಮ ಪಟ್ಟಿದ್ದು
ಮೇಲ್ನೋಟಕ್ಕೇ ಕಾಣಿಸುತ್ತದೆ. ಆದರೂ ನೆಟ್ಟ ಗಿಡಗಳಲ್ಲಿ ಸುಮಾರು 1000-1500 ಸಸಿಗಳು ಬದುಕಲಿಲ್ಲವಂತೆ.

ಆದರೆ ಮಿಕ್ಕ ಗಿಡಗಳು ಬದುಕಿದವು, ಹೊಸ ಚಿಗುರನ್ನು ಹೊರಡಿಸಿದವು. ಆ ಗಿಡಗಳಿಗೂ ಅದೇನೋ ಸಂತಸ, ಚಂದದ ಪುಟಾಣಿ
ಎಲೆಗಳನ್ನು ಬಿಟ್ಟು ಎಲ್ಲೆಡೆ ಹಸಿರಿನ ಸಿರಿಯನ್ನು ಹರಡಿದವು! ಅಂದು ಬೋಳುಬೋಳಾಗಿದ್ದ ಗುಡ್ಡ ಇಂದು ನಿಧಾನವಾಗಿ
ಮರಗಿಡಗಳಿಂದ ತುಂಬಿ ಅಲ್ಲೆಲ್ಲಾ ಹಸಿರಿನ ಚಿತ್ತಾರ ಮೂಡುತ್ತಿದೆ.

ಅಶ್ವಿನಿ ವನ
ಗುಡ್ಡಕ್ಕೆ ಗಿಡಗಳನ್ನು ಬೆಳೆಸುವ ಕಾರ್ಯದ ಜತೆ ಇದೇ ಗೋಮಾಳದ ಸುಮಾರು ಒಂದುವರೆ ಎಕರೆ ಜಾಗದಲ್ಲಿ ಅಶ್ವಿನಿ ವನ ಬೆಳೆಸಲಾಗುತ್ತಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಔಷಧಿಯ ಸಸ್ಯಗಳ ಅಶ್ವಿನಿ ವನ ಬೆಳೆಸುವುದು ಸರ್ಕಾರದ ಉದ್ದೇಶ. ನಮ್ಮ ಪಾರಂಪರಿಕ ಔಷಧಿ ಸಸ್ಯಗಳನ್ನು ಬೆಳೆಸಿ ಉಳಿಸುವುದರ ಜೊತೆಗೆ ಔಷಧಿ ಸಸ್ಯಗಳಿಗಾಗಿ ಅರಣ್ಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಕೂಡ ಅದರ ಒಂದು ಆಶಯ.

ಕನಕಾಂಬ ಕೆರೆಗೆ ಕಾಯಕಲ್ಪ
ಕೈತೋಟ, ಸಿದ್ದಿನಕೈ ಊರಿಂದ ಪಕ್ಕದ ಊರಾದ ಹಕ್ರೆಗೆ ಹೋಗುವ ಮರಡುವಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಹೊನ್ನೆ, ಬೀಟೆ,
ನಂದಿ, ಬರಣಿ ಮುಂತಾದ ಮರಗಳಿಂದ ಆವೃತವಾದ ಕಾನನ ಇತ್ತು. ಈಗ ದೊಡ್ಡ ಮರಗಳು ಕಾಣುವುದಿಲ್ಲವಾದರೂ ಸಾಕಷ್ಟು
ಹಸಿರು ಹಾಗೆ ಉಳಿದುಕೊಂಡಿದೆ. ಆ ಭಾಗದ ರಸ್ತೆಯ ಪಕ್ಕದಲ್ಲಿ ಹಾಳುಬಿದ್ದ ಕೆರೆ ಇತ್ತು.

ಅದರ ಬಗ್ಗೆ ಗ್ರಾಮಸ್ಥರೊಬ್ಬರು ಹೇಳಿದ್ದು: ‘ …ಕೆರೆಯ ಮೂಲೆಯಲ್ಲಿ ಬೇಸಿಗೆಯ ದಿನಗಳಲ್ಲೂ ಸಣ್ಣಗೆ ಒಸರುವ ನೀರಿನ ಒರತೆ. ಕಳೆದ ನಾಲ್ಕಾರು ವರ್ಷಗಳಿಂದ ಈ ರಸ್ತೆಯಲ್ಲಿ ಹೋಗಿಬರುವಾಗ ಕೆರೆಯ ಸ್ಥಿತಿ ನೋಡಿ ಬೇಸರವಾಗುತ್ತಿತ್ತು. ಇರುವ ಸ್ವಲ್ಪ ಕೆಸರು ನೀರನ್ನು ಕುಡಿಯಲು ದನಕರುಗಳ ನಡುವೆ ಪೈಪೋಟಿ. ಹತ್ತಿರದಲ್ಲಿ ಬೇರೆ ನೀರಿನ ಆಶ್ರಯವಿಲ್ಲದ್ದರಿಂದ ಕಾಡು ಪ್ರಾಣಿಗಳೂ ನೀರು ಅರಸಿ ಪಕ್ಕದಲ್ಲಿರುವ ನಮ್ಮೂರ ತೋಟಕ್ಕೆ ನುಗ್ಗುವುದು ಸಾಮಾನ್ಯವಾಗಿತ್ತು.

ಜಲಾನಯನ ಇಲಾಖೆ, ಜಲಸಮೃದ್ಧಿಯೋಜನೆ ಅಡಿಯಲ್ಲಿ ಅನುಷ್ಠಾನಕ್ಕೆ ನಮ್ಮ ಪಂಚಾಯ್ತಿ ಮುಂದಾದಾಗ ನಮ್ಮೂ
ರಿನವರ ನಿರಂತರ ಶ್ರಮ, ಕಾನೂನಿನ ತೊಡಕನ್ನು ಮೆಟ್ಟಿನಿಂತು, ಕೆರೆಗೆ ಕಾಯಕಲ್ಪ ಕೊಡುವಲ್ಲಿ ಇಲಾಖೆ ಸಹಕರಿಸಿತು. 4-6
ದಿನಗಳಲ್ಲಿ ಹಿಟಾಚಿ ಯಂತ್ರದ ಸಹಾಯದಿಂದ ಕೆರೆಗೆ ಒಂದು ರೂಪ ಕೊಡುವಲ್ಲಿ ಯಶಸ್ವಿಯಾದೆವು.

ಈಗ ಕೆರೆಯಲ್ಲಿ 5-6 ಅಡಿ ನೀರು ನಿಂತಿದೆ. ನಮ್ಮ ಶ್ರಮದಿಂದಾಗಿ ಕನಸು ನನಸಾದ ಸಾರ್ಥಕ ಭಾವ ಮೂಡುತ್ತದೆ’. ಈ ಕನಕಾಂಬ ಕೆರೆ 7.3.2020ರಂದು ವರದಹಳ್ಳಿ ಶ್ರೀಧರ ಸ್ವಾಮಿಗಳ ಪಾದುಕಾ ಪೂಜೆಯೊಂದಿಗೆ ಮರು ಲೋಕಾರ್ಪಣೆ ಗೊಂಡಿತು. ಇಂದು ಈ ಕೆರೆ ಊರಿನ ಎಮ್ಮೆ, ದನಕರುಗಳಿಗೆ ಮತ್ತು ಕಾಡೆಮ್ಮೆ, ಕಾಡುಕೋಣ ಮುಂತಾದ ಕಾಡುಪ್ರಾಣಿಗಳಿಗೆ ಬಾಯಾರಿಸುವ ತಾಣವಾಗಿ ಮಾರ್ಪಟ್ಟಿದೆ.

ಈ ತರಹದ ಕಾಡು ಬೆಳೆಸುವ ಕಾರ್ಯದಲ್ಲಿ ಸರ್ಕಾರ ಮತ್ತು ಸಮಾಜ ಇವೆರಡೂ ಕೈಜೋಡಿಸಿದರೆ ಅರಣ್ಯನಾಶವನ್ನು ಸ್ವಲ್ಪ
ಮಟ್ಟಿಗಾದರೂ ತಡೆದು ಪ್ರಗತಿಯನ್ನು ಕಾಣಬಹುದೇನೊ! ಕರೋನದ ಎರಡನೇ ಅಲೆಯಿಂದ ತತ್ತರಿಸಿರುವ ನಮ್ಮ ಸಮಾಜ
ಈಗಲಾದರೂ ಪಾಠ ಕಲಿಯುತ್ತವೆಯೆ? ಗೊತ್ತಿಲ್ಲ. ಈಗಿನ ಮಾಹಿತಿಯಂತೆ ಕಾಡುಪ್ರದೇಶದ ಬಾವಲಿಯ ವೈರಸ್ ಮೂಲಕವೇ ಕರೋನಾ ಹುಟ್ಟಿಕೊಂಡಿತಂತೆ; ಇದು ನಡೆದದ್ದು ಚೀನಾದಲ್ಲಾದರೂ, ಕರೋನಾದಂತಹ ವೈರಸ್‌ಗೂ, ಪರಿಸರ ನಾಶಕ್ಕೂ ಪರೋಕ್ಷ ಸಂಬಂಧ ಇರುವುದನ್ನು ಇಲ್ಲಿ ಗುರುತಿಸಬಹುದು. ಕರೋನ ಇಂದು ದೇಶವನ್ನೇ ಹಿಂಡಿ ಹಿಪ್ಪೆ ಮಾಡಿದೆ.

ಈ ನೆಪದಲ್ಲಾರೂ, ಅಭಿವೃದ್ಧಿಯ ಹೆಸರಲ್ಲಿ ಅರಣ್ಯನಾಶ, ಪರಿಸರ ನಾಶ, ಜಲಮೂಲಗಳನ್ನು ಬತ್ತಿಸುವ ಕಾರ್ಯಗಳಿಗೆ
ತುಸುವಾದರೂ ತಡೆಯೊಡ್ಡಿ, ಪ್ರಾಕೃತಿಕ ಸಂಪತ್ತನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು
ನೆನಪಿಸಿಕೊಳ್ಳಬೇಕಾಗಿದೆ.

ಇಂಗುಗುಂಡಿ
ಇದೇ ಗುಡ್ಡದ ಇನ್ನೊಂದು ಬದಿಯ ಇಳಿಜಾರಿನಲ್ಲಿ ಇಂಗುಗುಂಡಿ ತೋಡಿದ್ದಾರೆ. ಸ್ಥಳೀಯರು ಶ್ರಮದಾನ ಮಾಡುವುದರ ಜತೆಯಲ್ಲೇ, ಸರಕಾರದ ಇಲಾಖೆಗಳು ಯಂತ್ರಗಳನ್ನು ಒದಗಿಸಿಕೊಟ್ಟು, ಇಂಗುಗುಂಡಿ ರೂಪುಗೊಳ್ಳಲು ಕೈಜೋಡಿಸಿದವು.
ಕಳೆದ ಎರಡು ಮಳೆಗಾಲದಿಂದ ಈ ಗುಂಡಿಯಲ್ಲಿ ಮಳೆಗಾಲದಲ್ಲಿ ನೀರು ಸಾಕಷ್ಟು ಶೇಖರಣೆಯಾಗಿ ಭೂಮಿಯೊಳಗೆ ಇಂಗುತ್ತಿದೆ. ಈ ಇಂಗುಗುಂಡಿಯ ಪರಿಣಾಮವಾಗಿ ಊರಿನ ಬಾವಿಗಳಲ್ಲಿ ಜಲಸಂವರ್ಧನೆಯಾಗಿ ನೀರಿನ ಅಭಾವವೂ
ಕಡಿಮೆಯಾಗಿರುವುದಲ್ಲದೆ, ಗುಡ್ಡದ ಕೆಳಗಿನ ತೋಟದಲ್ಲಿ ನೀರಿನ ಹರಿವು ಹೆಚ್ಚಾಗಿದೆ.