Sunday, 15th December 2024

ಪ್ರವಾಸದಲ್ಲಿ ಪ್ರಯಾಸ

ವಾಣಿ ಹುಗ್ಗಿ

ಬಾದಾಮಿಯ ಗುಹೆಗಳು ವಿಶ್ವ ಪ್ರಸಿದ್ಧ. ಇಲ್ಲಿನ ವಾಸ್ತುಶಿಲ್ಪಗಳ ನಡುವೆ ವಾಸಿಸುತ್ತಾ ಅಲ್ಲೆಲ್ಲಾ ನೆಗೆದು ಕುಣಿವ ಮಂಗಣ್ಣಗಳು ಪ್ರವಾಸಿಗಳನ್ನು ಗೋಳು ಹೊಯ್ದುಕೊಳ್ಳುವುದೂ ಇದೆ!

ಬಾದಾಮಿಯ ಬನಶಂಕರಿದೇವಿ ನಮ್ಮ ಮನೆಯ ದೇವರು. ಪ್ರತಿ ವರ್ಷ ಬನದ ಹುಣ್ಣಿಮೆಯಂದು ರಥೋತ್ಸವವಿರುತ್ತದೆ.
ಸುಮಾರು ಒಂದು ತಿಂಗಳವರೆಗೆ ಅದ್ಧೂರಿ ಜಾತ್ರೆ ನಡೆಯುತ್ತದೆ. ತುಂಬಾ ವರ್ಷಗಳಿಂದ ಜಾತ್ರೆ ನೋಡಿರಲಿಲ್ಲ. ಹೋದ ವರ್ಷ
ಜಾತ್ರೆಗೆ ಒಂದು ಭಾನುವಾರ ಬೆಳಿಗ್ಗೆ ಹೊರಟೆವು.

ವಿಪರೀತ ಜನಜಂಗುಳಿ. ರಸ್ತೆಯ ಇಕ್ಕೆಲಗಳಲ್ಲೂ ತೆರೆದ ಅಂಗಡಿಗಳು. ನನಗೋ ಈ ಜಾತ್ರೆಯಲ್ಲಿ ನಾನೇ ಕಳೆದು ಹೋದರೆಂಬ ಭಯ. ಸರಸ್ವತಿ ಹಳ್ಳದಲ್ಲಿ ಕಾಲ್ತೊಳೆದು ಗುಡಿಗೆ ಬಂದೆವು. ಎರಡು ಗಂಟೆಗಳ ಕಾಲ ಸರತಿಯಲ್ಲಿ ನಿಂತ ಬಳಿಕ ದೇವಿ ದರ್ಶನ ಪ್ರಾಪ್ತವಾಯಿತು. ನಿಂಬೆಹಣ್ಣಿನ ದೀಪ ಬೆಳಗಿ, ನಮಸ್ಕರಿಸಿ ದೇವಸ್ಥಾನದ ಹೊರಗೆ ಬಂದಾಗ ಮನಸ್ಸು ನಿರಾಳವಾಗಿತ್ತು.

ಜಾತ್ರೆಯಲ್ಲಿ ನಾಟಕಗಳ ಭರಾಟೆ. ರಸ್ತೆ ಎರಡು ಬದಿ ಗೃಹೋಪಯೋಗಿ ವಸ್ತು ಗಳಿರುವ ಅಂಗಡಿಗಳು. ಜಾತ್ರೆಯಲ್ಲಿ ಅಡ್ಡಾಡಿ ಅದು-ಇದು ಖರೀದಿ ಮಾಡಿ ಯಾಯಿತು. ಮಹಾಕೂಟ, ಶಿವಯೋಗಿ ಮಂದಿರ, ಮೇಣ ಬಸದಿ ಇವು ಬನ ಶಂಕರಿಗೆ ಸಮೀಪವಿರುವ ಪ್ರವಾಸಿ ಕೇಂದ್ರಗಳು. ಇನ್ನೂ ಸಮಯವಿತ್ತು, ಈಗೇನು ಮಾಡೋದೆಂದಾಗ ಮಗ ಬಾದಾಮಿಯ ಗುಹೆಗಳಿಗೆ ಹೋಗೋಣವೆಂದ. ಸರಿ ಎಂದು ಮೇಣ ಬಸತಿಗೆ ಹೊರಟೆವು.

ಪತಿರಾಯರು ಪರ್ಸ್ ಬೇಡವೆಂದರೂ, ಪರ್ಸ್ ಹಿಡಿದು ಗಾಡಿ ಇಳಿದೆ. ಅಲ್ಲಿದ್ದ ಗಾರ್ಡ್‌ಗಳು ಪರ್ಸ್ ಹುಶಾರು ಮಂಗಗಳಿವೆಂದರು. ಸರಿ ಎಂದು ಒಳಗೆ ನಡೆದೆವು. ತುಂಬಾ ಭವ್ಯವಾದ ನೋಟ ಎದುರಿಗಿತ್ತು. ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದೆ ರೂಪುಗೊಂಡ ಈ ಅದ್ಭುತ ವಾಸ್ತುಶಿಲ್ಪಕ್ಕೆ ಬಾದಾಮಿಯ ಚಾಲುಕ್ಯರಿಗೆ ಧನ್ಯವಾದ ಹೇಳಲೇಬೇಕು, ಕನ್ನಡಿಗರೆಲ್ಲರೂ ಋಣಿಯಾಗಿರಲೇಬೇಕು.

ಅಲ್ಲಿನ ಮೆಟ್ಟಿಲುಗಳನ್ನು ಹತ್ತಿಳಿಯಲು ಅವಶ್ಯವಾಗಿ ಶಕ್ತಿ ಬೇಕು. ಅಲ್ಲಲ್ಲಿ ಪಟಗಳನ್ನು ಸೆರೆಹಿಡಿದುಕೊಂಡೆವು.

ಮಂಗನ ಕೈಯಲ್ಲಿ ಪರ್ಸ್
ಕೆಳಗಡೆಯ ವಸ್ತು ಸಂಗ್ರಹಾಲಯ ನೋಡೋಣವೆಂದು ಮೆಟ್ಟಿಲಿಳಿಯುವಾಗ ದೊಡ್ಡದಾದ ಕೆಂಪು ಮೂತಿಯ ಮಂಗವೊಂದು ನನ್ನ ಸೀರೆ ಸೆರಗಿಡಿದು ಜಗ್ಗಿತು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಪರ್ಸ್ ಕಸಿದುಕೊಂಡು ಓಡಿ, ಇನ್ನೊಂದು ಬಂಡೆ

ಹೇಳಿದ್ವಿ. ಬೇಕಾದ್ರೆ ನೀವೇ ಬಂಡೆ ಹತ್ತಿ ತಗೊಳ್ಳಿ ಎಂದರು. ಪರ್ಸ್‌ನಲ್ಲಿ ಒಂದಿಷ್ಟು ನಗದು, ಎಟಿಎಮ್ ಕಾರ್ಡ್ ಮತ್ತು ಫೋನ್ ಇತ್ತು. ಅಷ್ಟರಲ್ಲಿ ಜಾಣ ಕಪಿ ಪರ್ಸ್ ಗುಂಡಿ ಕಿತ್ತು, ಒಳಗಿದ್ದ ಮೊಬೈಲ್ ಧರಾಶಾಯಿಯಾಯಿತು. ಮೊಬೈಲ್ ಡಿಸ್‌ಪ್ಲೇ ಚೂರುಚೂರಾಗಿತ್ತು, ಹಿಂಭಾಗ ಕಿತ್ತು ನೇತಾಡಲು ಶುರು ವಿಟ್ಟಿತು. ಪರ್ಸ್ ಕೆಳಗೆ ಹಾಕೆಂದು ಹೇಳಿದೆ.

ಪಾಪ ಕೋತಿಗೇನೂ ಅರ್ಥವಾಗಲಿಲ್ಲ. ಏನು ಮಾಡೊದೆಂದು ತಿಳಿಯದೆ ಮೂಕಳಾಗಿ ನೋಡುತ್ತ ನಿಂತೆ. ಮಂಗ ಎಟಿಎಮ್ ಕಾರ್ಡ್‌ನ್ನು ಕಚ್ಚಿತು, ತಿನ್ನೊ ವಸ್ತುವಲ್ಲವೆಂದು ಅರಿವಾಗಿತ್ತು. ಆದ್ರೆ ಕೆಳಗೆ ಬಿಸಾಕಲಿಲ್ಲ. ಮೇಲೆಯೆ ಕುಳಿತು ಎಲ್ಲವನ್ನು ನೋಡುತ್ತ ಮಜ ತೆಗೆದುಕೊಳ್ಳುತ್ತಿತ್ತು. ಜನ ಸೇರಿದರು, ಎಲ್ಲರೂ ನನ್ನ ಪರಿಸ್ಥಿತಿ ನೋಡಿ ಪಾಪ ಎಂದು ಲೊಚಗುಟ್ಟಿದರು. ಯಾರಾ ದರೂ ಬಂಡೆ ಹತ್ತಿ ಪರ್ಸ್ ತಗೊಳ್ಳಿ ಎಂದು ಸಲಹೆ ನೀಡಿದರು.

ಸ್ಥಳೀಯನೊಬ್ಬ ಬಂಡೆ ಏರಿ ಪರ್ಸ್, ಬ್ಯಾಗ್ ಗಳನ್ನು ಹಿಂತಿರುಗಿಸುವುದನ್ನೆ ಕಾಯಕವನ್ನಾಗಿಸಿಕೊಂಡಿದ್ದಾನೆ. ಆದ್ರೆ ಅವನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಗಾರ್ಡ್ ಗಳು ಬೈತಾರೆ, ಬಿದ್ದು ನನ್ನ ಜೀವಕ್ಕೇನಾದರೂ ಆದ್ರೆ? ನಾನ್ ಹತ್ತೊಲ್ಲ ಎಂದು ಸಬೂಬು ಹೇಳ್ತಾನೆ. ಅವನಿಗೆ ಭಕ್ಷೀಸು ಕೊಡ್ತೇವೆಂದು ಮನವೊಲಿಸಿ ಬಂಡೆ ಹತ್ತಿಸಿದ್ದಾಯಿತು.

ಸರಸರ ಎಂದು ಬಂಡೆ ಏರಿದ ಕೋತಿಗಳಿಗೆ ಬಿಸ್ಕಟ್ ಹಾಕಿ ಓಡಿಸಿದ. ಪರ್ಸ್ ಹಿಡಿದು ಕೆಳ ಬಂದ. ಅವನಿಗೆ ಭಕ್ಷೀಸು ಕೊಟ್ಟಾ ಯಿತು. ಪರ್ಸ್ ಹರಿದಿತ್ತು, ಎಟಿಎಮ್ ಕಾರ್ಡ್ ಹಾಳಾಗಿತ್ತು, ಫೋನ್ ಮೊದಲೇ ಕೆಳಗೆ ಬಿದ್ದು ಒಡೆದಿತ್ತು. ಆದ್ರೆ ನೋಟು ಹರಿದಿರ ಲಿಲ್ಲ, ದುಡ್ಡೆಲ್ಲವೂ ಸರಿಯಾಗಿತ್ತು. ಮರ್ಕಟಗಳ ಪ್ರಪಂಚದಲ್ಲಿ ಹಣಕ್ಕೆ ಬೆಲೆಯಿಲ್ಲ. ಈ ಗೋಳಿನಿಂದ ಪ್ರವಾಸದ ಆ ಖುಷಿಯ ಕ್ಷಣಗಳಲ್ಲಿ ಬೇಜಾರು ಮನೆ ಮಾಡಿತು.

ಯಜಮಾನರ ಸಿಟ್ಟಿನ ಮುಖ ನೋಡಿ ಹೆದರಿಕೆಯಾಯಿತು. ನಾಮಾರ್ಚನೆಯೂ ಆಯಿತು. ಈ ಅನಿರೀಕ್ಷಿತ ಘಟನೆಯಿಂದ ಇಂಗು
ತಿಂದ ಮಂಗ ನಾನಾಗಿದ್ದೆ. ಕೋತಿಗಳು ದಿನಕ್ಕೆ ಏಳೆಂಟು ಜನರ ಪರ್ಸ್‌ಗಳನ್ನು ಕಸಿದುಕೊಂಡು ಹೋಗುತ್ತವಂತೆ. ಪ್ರಯಾಣಿಕರ
ಹಿತದೃಷ್ಟಿಯಿಂದ ಕ್ರಮ ತೆಗೆದುಕೊಂಡು, ಇಂತಹ ಅವಾಂತರಗಳಿಗೆ ಕಡಿವಾಣ ಹಾಕಬೇಕು. ಮಂಗಗಳಿಗೆ ಗುಹೆಗಳು ಆಶ್ರಯ ತಾಣವೆಂದರೆ, ಮನುಷ್ಯರು ಕೈಯಲ್ಲಿ ಏನನ್ನೂ ಹಿಡಿದು ಒಳಹೋಗದಂತೆ ಕಟ್ಟುನಿಟ್ಟಿನ ನಿಯಮ ಹಾಕಬೇಕು. ಆಗ ಇಂತಹ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನು ನೋಡಲು ಬರುವವರಿಗೆ ಭದ್ರತೆಯ ಭಾವನೆ ಮೂಡುತ್ತದೆ.