Sunday, 15th December 2024

ಬುಡಕಟ್ಟು ಜನರ ಪ್ರತಿಬಿಂಬ

ಮಂಜುನಾಥ್ ಡಿ.ಎಸ್

ಷಿಲ್ಲಾಂಗ್‌ನಲ್ಲಿರುವ ಡಾನ್ ಬಾಸ್ಕೊ ಮ್ಯೂಸಿಯಂ ಕೇವಲ ವಸ್ತು ಸಂಗ್ರಹಾಲಯವಾಗಿರದೆ, ಬುಡಕಟ್ಟು ಜನರ ಕುರಿತ
ಅಧ್ಯಯನ, ಸಂಶೋಧನೆ, ಮತ್ತು ಪ್ರಕಟಣಾ ವಿಭಾಗಗಳನ್ನೂ ಒಳಗೊಂಡು ಜ್ಞಾನ ವಿನಿಮಯ ಕೇಂದ್ರವೂ ಆಗಿದೆ.

ಸಪ್ತ ಸೋದರಿಯರೆಂದು ಕರೆಯಲ್ಪಡುವ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ್, ಮಿಜೋರಾಂ,
ನಾಗಾಲ್ಯಾಂಡ್, ತ್ರಿಪುರ ಜತೆ ಸಿಕ್ಕಿಂ ಸೇರಿ ಎಂಟು ಈಶಾನ್ಯ ರಾಜ್ಯಗಳು 145 ಬುಡಕಟ್ಟು ಜನಾಂಗಗಳಿಗೆ ತವರಾಗಿವೆ.

ಈಶಾನ್ಯ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಬುಡಕಟ್ಟು ಜನಾಂಗಗಳು ಸುಮಾರು ಶೇ.25ರಷ್ಟಿವೆ. ಈ ಎಂಟೂ ರಾಜ್ಯಗಳ ಪ್ರಮುಖ ಬುಡಕಟ್ಟು ಜನಾಂಗಗಳ ಜೀವನ ಕ್ರಮವನ್ನು ಬಿಂಬಿಸಿರುವ ತಾಣವೆಂದರೆ ಷಿಲ್ಲಾಂಗ್ ನಲ್ಲಿರುವ ಡಾನ್ ಬಾಸ್ಕೊ ಮ್ಯೂಸಿಯಂ. ವಿಶ್ವ ದರ್ಜೆಯ ಈ ಮ್ಯೂಸಿಯಂ ನಲ್ಲಿ ವಸ್ತ್ರಗಳು, ಪೋಷಾಕುಗಳು, ಶಸ್ತ್ರಗಳು, ಆಭರಣಗಳು, ಅಪರೂಪದ
ಛಾಯಾಚಿತ್ರಗಳು, ವರ್ಣಚಿತ್ರಗಳು, ದಿನಬಳಕೆಯ ವಸ್ತುಗಳು, ವಿವಿಧ ಪ್ರದೇಶಗಳ ಜೀವನ ಕ್ರಮ ಹಾಗು ವೃತ್ತಿಗಳನ್ನು ಪರಿಚಯಿ ಸುವ ಪ್ರತಿಕೃತಿಗಳು, ಮುಂತಾದುವುಗಳ ಅಪಾರ ಸಂಗ್ರಹವಿದೆ.

ಏಳಂತಸ್ತಿನ ಕಟ್ಟಡದಲ್ಲಿ, 56000 ಚದರಡಿ ವಿಸ್ತೀರ್ಣದ ನೆಲ ಹಾಗು 15154 ಚದರಡಿ ವಿಸ್ತೀರ್ಣದ ಗೋಡೆಗಳ ಮೇಲೆ ಇವು ಪ್ರದರ್ಶನಗೊಂಡಿವೆ. ಕಲಾತ್ಮಕವಾಗಿ ವಿನ್ಯಾಸಗೊಳಿಸಿಲಾಗಿರುವ ಹದಿನಾರು ವಿಭಾಗಗಳು ಈ ಸಂಗ್ರಹಾಲಯದಲ್ಲಿವೆ. ಪ್ರತಿ ವಿಭಾಗದಲ್ಲೂ ಬಹುಮಾಧ್ಯಮ ನಿರೂಪಣಾ (ಮಲ್ಟಿಮೀಡಿಯ ಪ್ರಸೆಂಟೇಷನ್) ವ್ಯವಸ್ಥೆಯಿದೆ. ಪ್ರವೇಶ ಗ್ಯಾಲರಿಯ ಇಕ್ಕೆಲೆ ಗಳಲ್ಲಿರುವ, ಹಲವಾರು ಬುಡಕಟ್ಟು ಜನಾಂಗಗಳನ್ನು ಪ್ರತಿನಿಧಿಸುವ, ಸಾಲಂಕೃತ ಶಿಲ್ಪಗಳು ವೀಕ್ಷಕರನ್ನು ಸ್ವಾಗತಿಸುತ್ತವೆ.

ಛಾಯಾಚಿತ್ರಗಳ ವಿಭಾಗದಲ್ಲಿ ಸಹಸ್ರಾರು ಅಪರೂಪದ ಚಿತ್ರಗಳು ಪ್ರದರ್ಶನಗೊಂಡಿವೆ. ಪರಿಚಯ ಗ್ಯಾಲರಿಯಲ್ಲಿ ಈಶಾನ್ಯ ಭಾರತದ ಬುಡಕಟ್ಟು ಜನಾಂಗಗಳ ವಿವರವಾದ ಮಾಹಿತಿ ಸಿಗುತ್ತದೆ. ಮಾನವ ಜನಾಂಗ ಬೆಳೆದು ಬಂದ ಹಾದಿಯನ್ನು ಇತಿಹಾಸ ಪೂರ್ವ ವಿಭಾಗದಲ್ಲಿ ದಾಖಲಿಸಲಾಗಿದೆ. ವಿವಿಧ ವೃತ್ತಿಗಳ ಮಾಹಿತಿಗಾಗಿಯೇ ಮೀಸಲಾದ ಗ್ಯಾಲರಿ ಇಲ್ಲಿದೆ. ಕೃಷಿ ವಿಭಾಗದಲ್ಲಿ ಈ ಪ್ರದೇಶದಲ್ಲಿನ ವ್ಯವಸಾಯ ಪದ್ಧತಿಗಳ ಅನನ್ಯತೆಯನ್ನು ಚಿತ್ರಿಸಲಾಗಿದೆ.

ಸ್ಥಳೀಯವಾಗಿ ದೊರಕುವ ಪರ್ಣಗಳು, ಕೋಲುಗಳು, ಬಿದಿರು, ಮರದ ಹಲಗೆಗಳು, ಒಣಹುಲ್ಲು, ಮೃತ್ತಿಕೆ, ಇತ್ಯಾದಿಗಳನ್ನು ಬಳಸಿ ಕೊಂಡು ಬೆಟ್ಟಗಳ ಇಳಿಜಾರಿನಲ್ಲಿ ಹಾಗು ವೃಕ್ಷಗಳ ಮೇಲೆ ನಿರ್ಮಿಸಿದ ಮನೆಗಳ ಮಾದರಿಗಳನ್ನು ಗೃಹ ವಿಭಾಗದಲ್ಲಿ ನೋಡ ಬಹುದು.

ಬಿದಿರಿನ ಶ್ರೀಮಂತಿಕೆ
ಬಿದಿರು ಈ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತದೆ. ಹಾಗಾಗಿ ಇದನ್ನು ಟೋಪಿಗಳು, ಬುಟ್ಟಿಗಳು, ಗೃಹಬಳಕೆಯ ಪರಿಕರಗಳು, ಆಟಿಕೆಗಳು, ಕಲಾಕೃತಿಗಳು, ಮೀನು ಹಿಡಿಯುವ ಸಾಧನಗಳು, ಇತ್ಯಾದಿಗಳ ಉತ್ಪಾದನೆಯಲ್ಲಿ ಬಳಸುತ್ತಾರೆ. ಇವುಗಳನ್ನು ಇಲ್ಲಿನ ಗ್ಯಾಲರಿಯೊಂದರಲ್ಲಿ ಪ್ರದರ್ಶಿಸಿದ್ದಾರೆ.

ಕಲಾ ಗ್ಯಾಲರಿಯಲ್ಲಿರುವ ಅಪರೂಪದ ಕರಕುಶಲ ವಸ್ತುಗಳು, ಬಿದಿರು ಶಿಲೆ ಲೋಹಗಳಿಂದ ರಚಿಸಿದ ಕಲಾಕೃತಿಗಳು, ಬುಡಕಟ್ಟು ಜನಾಂಗಗಳ ಆಭರಣಗಳು, ಚಿತ್ರಗಳು, ಪಾತ್ರೆಗಳು, ಉಪಕರಣಗಳು, ಇತ್ಯಾದಿ ಗಳು ಬೆರಗು ಮೂಡಿಸುತ್ತವೆ. ಸಂಗೀತ ವಾದ್ಯಗಳಿಗೆ,
ಶಸಗಳಿಗೆ, ಉಡುಪು ಮತ್ತು ಆಭರಣಗಳಿಗೆ, ಹಾಗು ಗೃಹ ವಿನ್ಯಾಸಗಳಿಗೆ ಪ್ರತ್ಯೇಕ ಗ್ಯಾಲರಿಗಳಿವೆ.

ಮಾನವರನ್ನು ಒಗ್ಗೂಡಿಸುವಲ್ಲಿ ಧರ್ಮ ಮತ್ತು ಸಂಸ್ಕೃತಿಯ ಪಾತ್ರವನ್ನು ವಿವರಿಸುವ ಗ್ಯಾಲರಿಯೂ ಈ ಸಂಗ್ರಹಾಲಯ ದಲ್ಲಿದೆ. ನಮ್ಮ ನೆರೆಹೊರೆ ವಿಭಾಗ ಹೊಸದಾಗಿ ಸೇರ್ಪಡೆಯಾಗಿದೆ. ಭಾರತದ ನೆರೆ ರಾಷ್ಟ್ರಗಳಾದ ನೇಪಾಳ, ಭೂತಾನ್, ಚೀನ, ಮ್ಯಾನ್ಮಾರ್, ಮತ್ತು ಬಾಂಗ್ಲಾದೇಶ ಕುರಿತ ಮಾಹಿತಿಯನ್ನು ಇಲ್ಲಿ ದಾಖಲಿಸಲಾಗಿದೆ. ಸಂಗ್ರಹಾಲಯದ ಶೃಂಗದಲ್ಲಿ ಸ್ಕೈ ವಾಕ್ ನಿರ್ಮಿಸಲಾಗಿದೆ. ಇಲ್ಲಿಂದ ಕ್ವೀನ್ ಸಿಟಿ ಷಿಲ್ಲಾಂಗ್ ನ ಸುಂದರ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಬಹುದು.

2010ರ ಮಾರ್ಚ್ ಐದರಂದು ಸೋನಿಯಾ ಗಾಂಧಿ ಲೋಕಾರ್ಪಣೆ ಮಾಡಿದ ಡಾನ್ ಬಾಸ್ಕೊ ಮ್ಯೂಸಿಯಂ ಇಂತಹ ಸಂಗ್ರಹಾ ಲಯಗಳಲ್ಲಿ ಏಷ್ಯಾದಲ್ಲಿಯೇ ಹಿರಿದಾದುದು ಎಂಬ ಕೀರ್ತಿಗೆ ಭಾಜನವಾಗಿದೆ. ದೇಶ ವಿದೇಶಗಳ ಗಣ್ಯರು ಇಲ್ಲಿಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದಾರೆ. ಸೋಮವಾರದಿಂದ ಶನಿವಾರ ಬೆಳಗಿನ ಒಂಬತ್ತರಿಂದ ಸಂಜೆ ಐದೂವರೆ ತನಕ ಈ ಸಂಗ್ರಹಾಲಯ ವನ್ನು ವೀಕ್ಷಿಸಬಹುದು. ಪ್ರವೇಶ ಶುಲ್ಕ ನೂರು ರುಪಾಯಿಗಳು.