Sunday, 15th December 2024

ಯಹೂದ್ಯರ ನೆನಪಿನ ಯುಡೆನ್‌ ಹೊಫ್‌

ಡಾ.ಉಮಾಮಹೇಶ್ವರಿ ಎನ್‌.

ಕೆಲವು ನೂರು ವರ್ಷಗಳ ಹಿಂದೆ ಇಲ್ಲಿ ಯಹೂದ್ಯರ ಹತ್ಯೆ ನಡೆದಿತ್ತು, ಅವರನ್ನು ಅಲ್ಲಿಂದ ಓಡಿಸಲಾಗಿತ್ತು. ಅಂತಹ ನೆನಪುಗಳೇ ಇಂದು ಪ್ರವಾಸಿ ಆಕರ್ಷಣೆ ಎನಿಸಿದೆ.

ಜರ್ಮನಿಯ ಪುರಾತನ ಸುಂದರ ನಗರಗಳಲ್ಲಿ ಜಷ್ಪೆಯರ್ ನಗರವೂ ಒಂದು. ಇಲ್ಲಿನ ಯುನೆಸ್ಕೋ ಮಾನ್ಯತೆ ಪಡೆದ ಕ್ಯಾಥೆ ಡ್ರಲ್‌ಗಳಲ್ಲದೆ ಯಹೂದ್ಯರಿಗೆ ಸಂಬಂಧಿಸಿದ ಕೆಲವು ಅವಶೇಷಗಳೂ ಪ್ರೇಕ್ಷಣೀಯ. ಯುಡೆನ್ ಹೊಫ್ ಎಂಬ ಹೆಸರಿನ ಈ
ಸಮುಚ್ಚಯ ಮೂರು ಮುಖ್ಯ ವಿಭಾಗಗಳನ್ನು ಹೊಂದಿದೆ.

1. ಪುರಾತನ ಪ್ರಾರ್ಥನಾ ಮಂದಿರ
2. ಪವಿತ್ರಸ್ನಾನಗೃಹ
3. ಷ್ಪಿರಾ ಮ್ಯೂಸಿಯಂ

ಹನ್ನೊಂದನೆಯ ಶತಮಾನದಿಂದಲೇ ಜಷ್ಪೆಯರ್ ಪಟ್ಟಣ ಯಹೂದ್ಯರ ವಾಸಸ್ಥಾನವಾಗಿತ್ತು. ಇಟಲಿ ಮತ್ತು ಫ್ರಾನ್ಸ್ ನಿಂದ
ವ್ಯಾಪಾರಸ್ಥರಾಗಿ ಬಂದಿದ್ದರು. 1084 ರಲ್ಲಿ ಮೈನ್ಜ್ ನಗರದಿಂದ ನಿರಾಶ್ರಿತ ಯಹೂದ್ಯರು ಜಷ್ಪೆಯರ್ ನಗರಕ್ಕೆ ಬಂದಾಗ ಇಲ್ಲಿನ ಬಿಷಪ್ ಅವರಿಗೆ ರಕ್ಷಣೆ ಮತ್ತು ವಿಶೇಷ ಸ್ಥಾನಮಾನಗಳನ್ನು ಇತ್ತು. ಯಹೂದ್ಯರ ಸಂತತಿ ಇಲ್ಲಿ ನೆಲೆಯೂರುವಂತೆ ಮಾಡಿದರು.

ಷ್ಪಿರಾ ಎಂಬುದು ಹೀಬ್ರೂ ಭಾಷೆಯಲ್ಲಿ ಜಷ್ಪೆಯರ್ ನಲ್ಲಿರುವ ಯಹೂದ್ಯರ ಸಮಾಜದ ನಾಮಧೇಯ. ಮುಂದಿನ ಸುಮಾರು
400 ವರ್ಷಗಳ ಕಾಲ ಯಹೂದ್ಯರ ಮತ್ತು ಕ್ರಿಶ್ಚಿಯನರ ಸಂಬಂಧ ಶಾಂತಿಯುತವಾಗಿಯೇ ಇತ್ತು. ತದನಂತರ ಯಹೂದ್ಯರ
ವಿರುದ್ಧ ಅದೇಕೋ ಕ್ರಿಶ್ಚಿಯನ್ನರಿಗೆ ಅಸಮಾಧಾನ ಉಂಟಾಯಿತು. 1500ರ ಸುಮಾರಿಗೆ ಇಲ್ಲಿನ ಯಹೂದ್ಯ ಸಂತತಿ ಪೂರ್ತಿ
ಯಾಗಿ ಅಳಿಸಿ ಹೋಯಿತು. 16 ನೇ ಶತಮಾನದ ಮೊದಲಾರ್ಧದಲ್ಲಿ ಇವರ ಪ್ರಾರ್ಥನಾಸ್ಥಳ ಶಸ್ತ್ರಾಸ್ತ್ರಗಳ ಸಂಗ್ರಹಾಲ
ಯವಾಯಿತು. 17 ನೇ ಶತಮಾನದ ಕೊನೆಯಲ್ಲಿ ನಡೆದ ಯುದ್ಧದ ಸಮಯದಲ್ಲಿ ಪ್ರಾರ್ಥನಾ ಸ್ಥಳ ನಾಶವಾಗಿ ಅವಶೇಷ ಗಳಷ್ಟೇ ಉಳಿದುಕೊಂಡವು.

ಸಿನಗಾಗ್
ಪ್ರಾರ್ಥನಾ ಸ್ಥಳ ಅಥವಾ ಸಿನಗಾಗ್ ಈ ಸಮೂಹದ ಪ್ರಮುಖ ಸ್ಥಳವಾಗಿತ್ತು. ಪ್ರಾರ್ಥನೆ, ಪ್ರವಚನ, ಶಿಕ್ಷಣ, ನ್ಯಾಯನಿರ್ಣಯ,
ಸಭೆ ಸಮಾರಂಭಗಳು ನಡೆಯುವ ಪ್ರಮುಖ ಸ್ಥಳವಾಗಿತ್ತು. ಕ್ರಿಶ್ಚಿಯನ್ ಕುಶಲಕರ್ಮಿಗಳಿಂದ 1100 ರಿಂದ 1104ರ ಮಧ್ಯ
ದಲ್ಲಿ ರೋಮನ್ ಶೈಲಿಯಲ್ಲಿ ನಿರ್ಮಿತವಾಗಿತ್ತು.

1250ರಲ್ಲಿ ಗೋಥಿಕ್ ಶೈಲಿಯಲ್ಲಿ ಮರುನಿರ್ಮಾಣಗೊಂಡಿತು. ಈ ಸಂದರ್ಭದಲ್ಲಿ ಮಹಿಳೆಯರ ಪ್ರಾರ್ಥನಾ ಸ್ಥಳವೂ ಅಸ್ತಿತ್ವಕ್ಕೆ ಬಂತು. ಈಗ ಈ ಸ್ಥಳದಲ್ಲಿ ಹಳೆಕಟ್ಟಡದ ಕೆಲವು ಅವಶೇಷಗಳಷ್ಟೇ ಉಳಿದಿವೆ. ಯಹೂದ್ಯರ ಪವಿತ್ರಸ್ನಾನಗೃಹ ಈ ಪ್ರದೇಶದಲ್ಲಿರುವ ಪುರಾತನ ಸ್ನಾನಗೃಹ, ಪ್ರಾರ್ಥನಾ ಸ್ಥಳದಿಂದ ಅನತಿ ದೂರದಲ್ಲಿದೆ.

ಯಹೂದ್ಯರು ಪವಿತ್ರಸ್ನಾನಕ್ಕೆ ಬಳಸುತ್ತಿದ್ದುದು ನದಿ, ಚಿಲುಮೆ, ಮಳೆ, ಭೂಮಿಯಿಂದ ಪುಟಿಯುವ ಒರತೆಯ ನೀರು. ಉಪ ಯೋಗಿಸುತ್ತಿದ್ದ ಸ್ನಾನದ ಕೊಳ ನೆಲಮಟ್ಟದಿಂದ ಹತ್ತು ಮೀಟರ್ಆಳದಲ್ಲಿದೆ. ಕಲ್ಲಿನ ಮೆಟ್ಟಲುಗಳನ್ನು ಇಳಿದು ಕೊಳದವರೆಗೆ ಹೋಗಬಹುದು. ಈ ಕೊಳವು ಮಳೆನೀರು ಹಾಗೂ ಭೂಮಿಯ ಒರತೆಯಿಂದ ಸಂಗ್ರಹವಾಗುತ್ತದೆ. ಈ ಜಾಗದಲ್ಲಿರುವ ಕಂಬ, ಕಿಟಕಿಗಳ ನಿರ್ಮಾಣ ರೋಮನ್ ವಾಸ್ತು ಶೈಲಿಯಲ್ಲಿದೆ.

ಷ್ಪಿರಾ ಮ್ಯೂಸಿಯಂನಲ್ಲಿರುವ ಸಂಗ್ರಹಗಳು ಸಿನಗಾಗ್, ಸಮಾಧಿಗಳು ಹಾಗೂ ಸ್ನಾನಗೃಹಕ್ಕೆ ಸಂಬಂಧಪಟ್ಟವು. ಯಹೂದ್ಯರ ಸಮಾಧಿಗಳು ಹಾಗೂ ವಸತಿ ಪ್ರದೇಶಗಳು ಕಾಲಾಂತರದಲ್ಲಿ ಪೂರ್ತಿಯಾಗಿ ನಾಶವಾದವು. ಸಮಾಧಿ ಸ್ಥಳವು ಬೇರೆ ವಸತಿಗಳ ಜಾಗವಾಯಿತು. ಸಮಾಧಿ ಕಲ್ಲುಗಳು ಕಟ್ಟಡ ನಿರ್ಮಾಣದಲ್ಲಿ ಬಳಕೆಯಾದವು. ನಗರದ ಆಡಳಿತ ಮಂಡಳಿ ಯಹೂದ್ಯರಿದ್ದ ಕೆಲವು ಜಾಗಗಳನ್ನು ವಶಪಡಿಸಿಕೊಂಡು, ಅವರಿಗೆ ಸಂಬಂಧಿತ ವಸ್ತುಗಳನ್ನು (ಬೇರೆ ಮ್ಯೂಸಿಯಂಗಳಲ್ಲಿ ಇದ್ದ) ತರಿಸಿಕೊಂಡು 2010 ರಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಿಸಿದೆ.

ಸುಮಾರು 50 ಸಮಾಧಿಗಳಿಗೆ (1112-1443) ಸಂಬಂಧಿಸಿದ ವಸ್ತುಗಳನ್ನು ಇದುವರೆಗೆ ಸಂಗ್ರಹಿಸಲಾಗಿದೆ. ಹಳೆಯ ಕಿಟಕಿಗಳು, ಸಮಾಧಿಕಲ್ಲುಗಳು, ನಾಣ್ಯಗಳು, ಹಲವು ಪಾತ್ರೆಗಳು ಇತ್ಯಾದಿ ಸಂಗ್ರಹದಲ್ಲಿವೆ. ಕ್ರಿಶ್ಚಿಯನ್ನರು ಮತ್ತು ಯಹೂದ್ಯರು ಹೆಚ್ಚಿನ ಸಮಯದಲ್ಲಿ ಶಾಂತಿಯುತವಾಗಿ ಬಾಳುವೆ ನಡೆಸುತ್ತಿದ್ದರೂ, ಸಮಾಜದಲ್ಲಿ ಯಾವುದೇ ತೊಂದರೆಗಳುಂಟಾದಾಗ ಅಲ್ಪ ಸಂಖ್ಯಾತರಾದ ಪ್ರತಿಷ್ಠಿತ ಯಹೂದ್ಯರು ವಿಪರೀತ ಶೋಷಣೆಗೆ ಒಳಗಾಗುತ್ತಿದ್ದರು (ಇವರ ಸಂಪತ್ತನ್ನು ದೋಚಿ ಹೊರ ಗೋಡಿಸುವುದರಿಂದ ತೊಡಗಿ ವಧೆಯ ವರೆಗೆ). 1349ರಲ್ಲಿ ಪ್ಲೇಗ್ ಮಾರಿ ಅಬ್ಬರಿಸುತ್ತಿದ್ದಾಗ ಅದಕ್ಕೆ ಯಹೂದ್ಯರು ಕಾರಣ ಎಂಬ ನೆಪ ಒಡ್ಡಿ, ಯಹೂದ್ಯರ ಬೃಹತ್ ಹತ್ಯಾಕಾಂಡವೇ ನಡೆಯಿತು.

ಆ ಸಮಯದಲ್ಲಿ ಯಹೂದ್ಯರು ದೋಚುವವರ ಕೈಗೆ ಸಿಗದಂತೆ ಭೂಮಿಯೊಳಗೆ ತಮ್ಮ ಸಂಪತ್ತನ್ನು ಹುಗಿದಿಟ್ಟಿದ್ದರು. ಅದನ್ನು
ಮತ್ತೆ ವಾಪಸ್ ತೆಗೆದುಕೊಳ್ಳಲು ಅವರಿಂದ ಸಾಧ್ಯವಾಗಲೇ ಇಲ್ಲ. ಲಿಂಗೆನ್ ಫೆಲ್ಡ್ ಟ್ರೆಶರ್ ಎಂದು ಕರೆಯಲ್ಪಡುವ ಕೆಲವು ವಸ್ತು ಗಳು ಹಾಗೂ ನಾಣ್ಯಗಳು ನೆಲದಲ್ಲಿ ಹಲವು ಕಡೆ ದೊರಕಿದ್ದು, ಅವೆಲ್ಲವೂ ಬಹುಶಃ ಈ ತರಹ ಹುಗಿದಿಟ್ಟವೇ. ಇವೂ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿವೆ.

500 ವರ್ಷಗಳಿಗಿಂತಲೂ ಹಿಂದೆ ವಾಸಿಸುತ್ತಿದ್ದ, ಸ್ಥಳೀಯವಾಗಿ ಪೂರ್ತಿನಾಶವಾದ ಅಲ್ಪಸಂಖ್ಯಾತ ಸಮಾಜ ಒಂದರ ಪುರಾತನ ಸ್ಥಳಗಳನ್ನು ಆಸ್ಥೆಯಿಂದ ಕಾಪಾಡಿಕೊಂಡು ಪ್ರದರ್ಶನಕ್ಕಿಟ್ಟಿರುವುದು ಪ್ರಶಂಸನೀಯ. ಷ್ಪೆಯರ್‌ನ ಮುಖ್ಯ ಕ್ಯಾಥೆಡ್ರಲ್ ನಿಂದ ಇಲ್ಲಿಗೆ ಕಾಲ್ನಡಿಗೆಯಲ್ಲಿ ತಲುಪಬಹುದು.