Sunday, 24th November 2024

ಬೇಕಿದೆ ಬೇಷರತ್ ಪ್ರೀತಿ

ರಶ್ಮಿ ಹೆಗಡೆ ಮುಂಬೈ

ವೃದ್ಧನೋರ್ವ ಅಲ್ಜಾಯ್ಮರ್ ಎನ್ನುವ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ಪತ್ನಿಯನ್ನು ಹೆಚ್ಚಿನ ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ದಾಖಲಿಸಿದ್ದ. ಹಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದ ಪತ್ನಿಯನ್ನು ಪ್ರತಿದಿನ ತಪ್ಪದೆ ಹೋಗಿ ನೋಡಿ ಬರುತ್ತಿದ್ದ. ಅವಳಿಗೆ ಮಾತ್ರ ಅವನು ಯಾರೆನ್ನುವುದೂ ನೆನಪಿರಲಿಲ್ಲ. ಆ ಕಾಯಿಲೆ ಇದ್ದವರೇ ಹಾಗೆ. ಈ ಕ್ಷಣಕ್ಕೆ ಮಾತನಾಡಿದ್ದು, ಕಂಡಿದ್ದು, ಕೇಳಿದ್ದನ್ನು ಮರು ಕ್ಷಣಕ್ಕೆೆ ಮರೆಯಲೂಬಹುದು.

ಆತ ಒಂದು ದಿನ ಮಾರ್ಕೆಟಿನಿಂದ ತರಕಾರಿ ತರಬೇಕಾದರೆ ಚಿಕ್ಕ ಅಪಘಾತವಾಗಿ ದೇಹಕ್ಕೆ ಸಣ್ಣಪುಟ್ಟ ಗಾಯಗಳಾದವು.
ತಕ್ಷಣವೇ ಚಿಕಿತ್ಸೆ ಪಡೆಯಲೋಸುಗ ಹತ್ತಿರದಲ್ಲಿದ್ದ ಆಸ್ಪತ್ರೆಗೆ ನಡೆದ. ಅಲ್ಲಿದ್ದ ನರ್ಸ್ ಹತ್ತಿರ ಪದೇಪದೇ ಸಮಯವೆಷ್ಟೆಂದು
ಕೇಳತೊಡಗಿದ, ತಾಳ್ಮೆ ಇಲ್ಲದವನಂತೆ ವರ್ತಿಸತೊಡಗಿದ. ಅವನ ಗಡಿಬಿಡಿಯನ್ನು ಗಮನಿಸಿದ ಆಕೆ, ಯಾಕೆ ಸರ್, ಇಷ್ಟು
ಗಡಿಬಿಡಿಯಲ್ಲಿದ್ದೀರಿ? ಮೊದಲು ನಿಮಗಾಗಿರೋ ಗಾಯಗಳಿಗೆ ಡ್ರೆಸ್ಸಿಂಗ್‌ ಮುಗಿಬೇಕು. ಆ ನಂತರ ಮನೆಗೆ ಹೋಗಿ. ಈಗ ತಾಳ್ಮೆ ಯಿಂದ ಆರಾಮಾಗಿ ಮಲಗಿಎಂದು ತಿಳಿ ಹೇಳಿದಳು.

ಮಧ್ಯಾಹ್ನ ಊಟದ ಸಮಯವಾಗಿದೆ. ನಾನು ನನ್ನ ಪತ್ನಿ ಇದ್ದಲ್ಲಿ ಹೋಗಲೇಬೇಕು. ಆಸ್ಪತ್ರೆಯಲ್ಲಿ ನನ್ನ ಹೆಂಡತಿ ಒಂದು ತಿಂಗಳಿಂದ ’ಅಲ್ಜಾಯ್ಮರ್’ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗೆ ನಾನು ಯಾರೆಂದು ನೆನಪಿಲ್ಲ, ಎಲ್ಲವನ್ನೂ ಮರೆತಿ ದ್ದಾಳೆ. ಮೊದಲಿಂದಲೂ ಆಕೆಯ ಜೊತೆ ಕುಳಿತು ಊಟ ಮಾಡಿ ಅಭ್ಯಾಸ. ಅದಕ್ಕೇ ಪ್ರತಿದಿನ ಮಧ್ಯಾಹ್ನ ಊಟದ ಹೊತ್ತಿಗೆ ಮನೆಯಿಂದ ಊಟ ಕಟ್ಟಿಕೊಂಡು ಹೋಗಿ ಅವಳ ಪಕ್ಕದಲ್ಲಿ ಕುಳಿತು ಊಟ ಮಾಡುತ್ತೇನೆ, ಆಕೆಗೂ ಉಣಿಸುತ್ತೇನೆ. ಹಾಗೆ
ಮಾಡಿದರೇನೇ ನನಗೆ ಸಮಾಧಾನ. ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರೆಲ್ಲ ನನ್ನ ಈ ನಡೆಯನ್ನು ಕಂಡು ಚೇಷ್ಟೆ ಮಾಡು
ತ್ತಾರೆ. ಆದರೆ ನಾನು ಮಾತ್ರ ನನ್ನಾಕೆಯ ಜತೆ ಮಧ್ಯಾಹ್ನದ ಊಟ ಮಾಡುವುದನ್ನು ಮಾತ್ರ ತಪ್ಪಿಸೋದಿಲ್ಲಎಂದಾಗ ಆತನ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು.

ನರ್ಸ್ ಆಶ್ಚರ್ಯದಿಂದ, ನಿಮ್ಮಾಕೆಗೆ ನೀವು ಯಾರೆನ್ನೋದೂ ನೆನಪಿಲ್ಲ, ನಿಮ್ಮನ್ನ ಗುರುತಿಸೋದೂ ಇಲ್ಲ. ಅಷ್ಟೇ ಯಾಕೆ,
ಅವರ ಜೊತೆ ಕುಳಿತು ಊಟಮಾಡಲೆಂದು ನೀವು ಅಷ್ಟು ದೂರದಿಂದ ಪ್ರತಿದಿನ ಕಷ್ಟಪಟ್ಟು ಹೋಗುವ ನಿಮ್ಮ ಪ್ರೀತಿ, ಕಾಳಜಿ ಯನ್ನು ಅನುಭವಿಸಿ, ಪ್ರತಿಕ್ರಿಯಿಸುವ ಶಕ್ತಿಯೂ ಅವರಲ್ಲಿಲ್ಲ ಎಂದಮೇಲೆ ನಿಮ್ಮ ಪ್ರೀತಿ, ಕಾಳಜಿ ವ್ಯರ್ಥವಾದಂತಲ್ಲವೇ? ಎಂದು ಪ್ರಶ್ನಿಸಿದಳು.

ನನಗೆ ಆಕೆ ನೆನಪಿದೆ ಆ ಪ್ರಶ್ನೆಗೆ ವೃದ್ಧನ ಉತ್ತರ ಏನಿತ್ತು ಗೊತ್ತೇ? ಹೌದಮ್ಮಾ,,ಅವಳು ನನ್ನನ್ನು ಗುರುತಿಸಿ, ನನಗೆ ಪ್ರತಿಕ್ರಿಯೆ
ನೀಡೋದಿಲ್ಲ. ನಾನಾರೆನ್ನುವುದೇ ಅವಳಿಗೆ ಮರೆತುಹೋಗಿದೆ. ಆದರೆ ಆಕೆ ಯಾರೆನ್ನುವುದು ನನಗೆ ನೆನಪಿದೆ. ಅಷ್ಟು ಸಾಕಲ್ವೆ!
ಜೀವನದುದ್ದಕ್ಕೂ ನನ್ನ ಕಷ್ಟ ಸುಖದಲ್ಲಿ ಭಾಗಿಯಾದವಳು, ನಾನು ಕಾಯಿಲೆ ಬಿದ್ದು ನರಳಿದಾಗ ತಾಯಿಯಂತೆ ಆರೈಕೆ ಮಾಡಿ ದವಳು, ಒಬ್ಬ ಸ್ನೇೇಹಿತೆಯಾಗಿ ನೋವು ನಲಿವನ್ನು ಹಂಚಿಕೊಂಡವಳು. ಅಂಥವಳು ನನ್ನನ್ನು ಮರೆತರೇನಂತೆ, ನನಗೆ ಆಕೆಯ ಪ್ರೀತಿಯ ಪರಿ ಇನ್ನೂ ನೆನಪಿದೆ. ಅಷ್ಟು ಸಾಕು ಆಕೆಯನ್ನು ಪ್ರೀತಿಸೋಕೆ. ಇಷ್ಟು ವರ್ಷ ನನ್ನಿಂದ ಏನನ್ನೂ ಬಯಸದೆ, ನಿಸ್ವಾರ್ಥವಾಗಿ ಪ್ರೀತಿಸಿದ ಆಕೆಯಿಂದ ನಾನು ಏನನ್ನೂ ಬಯಸುವುದಿಲ್ಲ ಎಂದ ವೃದ್ಧನ ಮಾತಿಗೆ, ಆತನ ಪ್ರೀತಿಯ ರೀತಿಗೆ ನರ್ಸ್ ತಲೆಬಾಗಿದ್ದಳು.

ಪರಿಪಕ್ವವೆನಿಸುವ, ನಿಸ್ವಾರ್ಥ ಪ್ರೇಮದ ಪರಿಚಯವಾಗುವುದು ಜೀವನದ ಮುಸ್ಸಂಜೆಯಲ್ಲಿ ಎನ್ನುವುದಕ್ಕೆ ಈ ಚಿಕ್ಕ ಕತೆ ಸಾಕ್ಷಿ.
ಪರಿಪೂರ್ಣ ವಿವಾಹವೆಂದರೆ ಕಷ್ಟದ ಪರಿಸ್ಥಿತಿಯಲ್ಲೂ ಒಬ್ಬರಿಗೊಬ್ಬರು ಬಿಟ್ಟುಕೊಡಲು ನಿರಾಕರಿಸುವ ಇಬ್ಬರು ಅಪರಿ ಪೂರ್ಣ ವ್ಯಕ್ತಿಗಳ ಸಮ್ಮಿಲನ. ಹೆಂಡತಿಗೆ ತನ್ನ ಗುರುತೇ ಸಿಗದಿದ್ದಾಗಲೂ ನಿಸ್ವಾರ್ಥವಾಗಿ ಪ್ರೀತಿಸುವ ಆ ವ್ಯಕ್ತಿಯ ಗುಣ ಜೀವನದ ಅನೇಕ
ನೀತಿಯನ್ನು ತಿಳಿಸುತ್ತದೆ. ಇನ್ನೊಬ್ಬರನ್ನು ಮೆಚ್ಚಿಸಲು ತೋರುವ ತೋರ್ಪಡಿಕೆಯ ಪ್ರೀತಿ ಹಾಗೂ ವರ್ತನೆ ಎಂದಿಗೂ ಒಳಿತಲ್ಲ.
ತಿಳಿನೀರಿನಂತಹ ನಿಷ್ಕಲ್ಮಶವಾದ ಪ್ರೀತಿಯಿದ್ದಾಗ ಅದ್ಯಾವ ಮುಚ್ಚುಮರೆಯ ಅವಶ್ಯಕತೆಯೂ ಇರಲಾರದು. ಪ್ರೀತಿಸುವಾಗ ಒತ್ತಡ ಸಲ್ಲದು ಸಾಮಾನ್ಯವಾಗಿ ಮದುವೆಯಾಗಿ ವರ್ಷಗಳು ಉರುಳಿದಂತೆಲ್ಲ ಪತಿ ಪತ್ನಿಯ ನಡುವಿನ ಪ್ರೀತಿ, ಸೆಳೆತ, ಆಸಕ್ತಿ ಕಡಿಮೆಯಾಗುತ್ತಾ ಬರುವುದು. ಇದಕ್ಕೆ ಕಾರಣ ಹಲವಾರು. ವಿವಾಹಾ ನಂತರದ ವೈಯಕ್ತಿಕ, ಸಾಮಾಜಿಕ ಹಾಗೂ ಮಾನಸಿಕ ಒತ್ತಡಗಳು ಗಂಡ ಹೆಂಡತಿಯರ ನಡುವೆ ಸ್ನೇೇಹ ಹಾಗೂ ಆಕರ್ಷಣೆಯನ್ನು ದೂರ ಮಾಡಲು ಪ್ರಯತ್ನಿಸುತ್ತವೆ. ಆ ಒತ್ತಡಗಳಿಗೆ ನಮ್ಮ ಮನಸ್ಸು ಮಣಿಯದಂತೆ ನೋಡಿಕೊಳ್ಳುವುದು ಪತಿ ಪತ್ನಿಯ ಜವಾಬ್ದಾರಿ.

ದೃಷ್ಟಿಕೋನದಲ್ಲಿರಲಿ ಪ್ರೀತಿ ವಿಫಲಗೊಳ್ಳುವ ವೈವಾಹಿಕ ಸಂಬಂಧಗಳಿಗೆ ಮುಖ್ಯ ಕಾರಣವೇ ಸ್ನೇೇಹ, ಪ್ರೀತಿ, ನಂಬಿಕೆಯ ಕೊರತೆ. ಸಂಗಾತಿಯಲ್ಲಿಯ ದೋಷ ಲೋಪಗಳನ್ನೇ ಹುಡುಕಲು ಮುಂದಾಗುತ್ತೇವೆಯೇ ಹೊರತು ಕ್ಷಮಿಸಲು ಮನಸ್ಸು ಮಾಡು ವುದೇ ಇಲ್ಲ. ಮದುವೆಯಾದ ಮೊದಲ ದಿನಗಳಲ್ಲಿ ಇಷ್ಟವಾಗುವ ಸಂಗಾತಿಯ ಗುಣಗಳು ನಂತರದಲ್ಲಿ ಅವಗುಣಗಳಾಗಿ ಕಾಣಿಸುತ್ತವೆ ಎಂದಾದರೆ ಲೋಪವಿರುವುದು ನಮ್ಮ ದೃಷ್ಟಿಿಕೋನದಲ್ಲಿ ಎಂದಾಯಿತು.

ಮೊದಲು ಅದನ್ನು ಬದಲಿಸಿಕೊಳ್ಳಬೇಕು. ಪತಿ ಪತ್ನಿ ಒಬ್ಬರಿಗೊಬ್ಬರು ’ಪುರಾತತ್ವ ಶಾಸ್ತ್ರಜ್ಞ’ರಂತೆ ಇರಬೇಕು, ಆಗಲೇ ವಯಸ್ಸಾ ದಂತೆಲ್ಲಾ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಕುತೂಹಲ, ಆಸಕ್ತಿ, ಆಕರ್ಷಣೆ, ಒಲವು ಹೆಚ್ಚುತ್ತ ಹೋಗುವುದು. ಪ್ರೀತಿಗೆ ವಯಸ್ಸಿನ ಪರಿಧಿಯಿಲ್ಲ, ಅದು ದುರ್ಬವಲ್ಲ. ವಿವಾಹವೆಂಬ ಸಂಸ್ಕಾರ ಅದನ್ನು ಪ್ರಬಲವಾಗಿಸುತ್ತದೆ. ಕುಟುಂಬದಲ್ಲಿ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ನೆರವಾದಾಗಲೇ ಅಲ್ಲವೇ ಬಾಂಧವ್ಯಗಳಿಗೆ ಬೆಲೆ!

ಕಾಲ ಯಾವುದೇ ಇರಲಿ, ಮನುಷ್ಯ ಅದೆಷ್ಟೇ ಆಧುನಿಕತೆಯತ್ತ ತೆರಳಿದರೂ, ಅದೆಷ್ಟೇ ವಿದ್ಯಾವಂತನಾದರೂ ದಾಂಪತ್ಯ,
ಸಂಸಾರ ಹಾಗೂ ಕುಟುಂಬದಿಂದ ದೂರವಿದ್ದು ಬದುಕಲಾರ ಎಂಬುದನ್ನು ಮರೆಯದೆ ಸಂಗಾತಿಯನ್ನು, ಕುಟುಂಬವನ್ನು
ಬೇಷರತ್ತಾಗಿ ಪ್ರೀತಿಸೋಣ.