Sunday, 15th December 2024

ಬೆಂಗಳೂರಿನಲ್ಲಿ ವೀರಪ್ಪನ್

ನಿವೃತ್ತ ಡಿ.ಜಿ.ಪಿ., ಡಾ. ಡಿ.ವಿ.ಗುರುಪ್ರಸಾದ್ ವಿರಚಿತ ‘ದಂತಕತೆಯಾದ ದಂತಚೋರ’

(ಸಪ್ನ ಬುಕ್ ಹೌಸ್ ಪ್ರಕಟಣೆ, 340 ಪುಟಗಳು ಬೆಲೆ ರೂ.250)

ಪುಸ್ತಕದ ಆಯ್ದ ಭಾಗ.

ಮಾದಯ್ಯ-ತಂಗವೇಲುರ ಭೀಕರ ಕೊಲೆಯ ನಂತರ ನರಹಂತಕನೆಂದು ಕುಖ್ಯಾತಿ ಹೊಂದಿದ್ದ ವೀರಪ್ಪನ್ ಪರಾರಿಯಾಗಿದ್ದ. ಅವನನ್ನು ಬಂಧಿಸಲು ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಎಡಬಿಡದೇ ಪ್ರಯತ್ನಗಳನ್ನು ಮಾಡುತ್ತಿದ್ದರು.

ಆ ಸಮಯದಲ್ಲಿ ಸಿ.ಐ.ಡಿ. ಅರಣ್ಯ ಘಟಕದ ಡಿ.ಐ.ಜಿ. ಬೋರ್ಕರ್‌ರನ್ನು ಭೇಟಿಯಾದ ಮಾಹಿತಿದಾರನೊಬ್ಬ ವೀರಪ್ಪನ್ ಮದ್ದುಗುಂಡುಗಳನ್ನು ಖರೀದಿಸಲು ಬೆಂಗಳೂರಿಗೆ ಬರುತ್ತಿರುವುದಾಗಿಯೂ ತಾನೂ ಅವನೊಡನೆ ಬರುತ್ತಿರುವುದಾಗಿ ಮಾಹಿತಿ ಯನ್ನು ನೀಡಿದ. ಈ ಮಾಹಿತಿಯ ಮೇರೆಗೆ ಬೋರ್ಕರ್ ವೀರಪ್ಪನ್‌ನ ಬಂಧನಕ್ಕಾಗಿ ಬಲೆ ಬೀಸಿದರು.

ಈ ಕಾರ್ಯಾಚರಣೆಯನ್ನು ನಡೆಸಿದ ಅಧಿಕಾರಿಗಳು ಹೇಳಿದ್ದು ಹೀಗೆ:

ಎಂ.ಕೆ.ಉತ್ತಪ್ಪ: ‘ನಾನು ಆಗ ಬೆಂಗಳೂರಿನ ಉಪ್ಪಾರಪೇಟ್ ಪೊಲೀಸ್‌ಠಾಣೆಯ ಸಬ್‌ಇನ್ಸಪೆಕ್ಟರ್ ಆಗಿದ್ದೆ. 1986ರ  ಅಕ್ಟೋಬರ್ ತಿಂಗಳ ದಿನಾಂಕ 16 ಅಥವಾ 17 ರಂದು ಸಿ.ಐ.ಡಿಯ ಅರಣ್ಯ ಘಟಕದ ಡಿವೈಎಸ್ಪಿ ಮಹದೇವಸ್ವಾಮಿ ಡಿ.ಐ.ಜಿ. ಬೋರ್ಕರ್ ಜತೆಗೆ ನಮ್ಮ ಠಾಣೆಗೆ ಆಗಮಿಸಿ ವೀರಪ್ಪನ್ ಎಂಬ ಒಬ್ಬ ಕುಖ್ಯಾತ ಕಾಡುಗಳ್ಳ ದಂತಗಳನ್ನು ಮಾರಲು, ಇಲ್ಲವೇ ಮದ್ದುಗುಂಡುಗಳನ್ನು ಖರೀದಿಸಲು ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿಸಿ ಅವನನ್ನು ಬಂಧಿಸಲು ನಮ್ಮ ನೆರವನ್ನು ಕೋರಿದರು.

ವೀರಪ್ಪನ್‌ನನ್ನು ಗುರುತಿಸುವ ಮಾಹಿತಿದಾರನೊಬ್ಬನನ್ನು ನಮಗೆ ಪರಿಚಯ ಮಾಡಿಕೊಟ್ಟರು. ‘ವೀರಪ್ಪನ್ ನಮ್ಮ ಠಾಣೆಯ ವ್ಯಾಪ್ತಿಯಲ್ಲಿ ಬರುವ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಲಾರ್ಡ್‌ಸ್‌ ಬಾರ್ ಎಂಬಲ್ಲಿಗೆ ಬರಬಹುದೆಂದು ಆ ಮಾಹಿತಿದಾರ ನಮಗೆ ತಿಳಿಸಿದ. ಆ ಬಾರನ್ನು ಕೊಡಗಿನ ಮೂಲದ ವ್ಯಕ್ತಿಯೊಬ್ಬರು ನಡೆಸುತ್ತಿದ್ದು ಅಲ್ಲಿ ಮಾಡುವ ಪಂದಿ ಕರಿ ಬಹಳ ಹೆಸರುವಾಸಿ ಯಾಗಿದ್ದ ಬಗ್ಗೆ ನನಗೆ ಅರಿವಿತ್ತು.

‘ಆ ದಿನ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಯ ಸಮಯಕ್ಕೆ ನಾನು ನನ್ನ ಠಾಣೆಯ ಇಬ್ಬರು ಪೊಲೀಸ್ ಕಾನ್ಸ್ಟೇಬಲ್‌ ಗಳನ್ನು ಕರೆದುಕೊಂಡು ಪೊಲೀಸ್ ಸಮವಸ್ತ್ರವನ್ನು ಧರಿಸದೆ ಲಾರ್ಡ್ಸ್ ಬಾರ್‌ಗೆ ಹೋದೆ. ಒಂದು ಟೇಬಲ್‌ನಲ್ಲಿ ವೀರಪ್ಪನ್ ನಮ್ಮ ಮಾಹಿತಿದಾರನ ಜತೆಗೆ ಕುಳಿತು ಊಟವನ್ನು ಮಾಡುತ್ತಿದ್ದ. ಜತೆಗಿದ್ದ ಮಾಹಿತಿದಾರ ಕಣ್ಸನ್ನೆಯ ಮೂಲಕ ಇವನೇ ವೀರಪ್ಪನ್ ಎಂದು ತೋರಿಸಿದ ಕೂಡಲೇ ನಾನು ಆ ಟೇಬಲ್‌ನತ್ತ ಹೋಗಿ, ನಾನು ಉಪ್ಪಾರಪೇಟೆಯ ಪೊಲೀಸ್ ಸಬ್ ‌ಇನ್ಸ್‌‌ಪೆಕ್ಟರ್, ನೀನು ಕೂಡಲೇ ನನ್ನ ಜೊತೆ ಠಾಣೆಗೆ ಬರಬೇಕು, ವಾಡಾ ಎಂದೆ.

‘ಆತ ಯಾವುದೇ ಪ್ರತಿರೋಧವನ್ನು ಒಡ್ಡದೆ ಎದ್ದು ಬಂದ. ಅಲ್ಲಿಂದ ನಮ್ಮ ಪೊಲೀಸ್ ಠಾಣೆ ಕೇವಲ 500 ಮೀಟರ್ ದೂರ ದಲ್ಲಿದ್ದ ಕಾರಣ ಅವನನ್ನು ಠಾಣೆಗೆ ನಡೆಸಿಕೊಂಡೇ ಕರೆದುಕೊಂಡು ಹೋದೆವು. ಸ್ವಲ್ಪ ಸಮಯದ ನಂತರ ಡಿ.ಐ.ಜಿ. ಬೋರ್ಕರ್ ಠಾಣೆಗೆ ಆಗಮಿಸಿ ವೀರಪ್ಪನ್‌ನನ್ನು ಕಂಡು ಖುಷಿಯಾದರು. ನಿಮ್ಮ ಒಳ್ಳೆಯ ಕೆಲಸಕ್ಕೆ ಬಹುಮಾನವನ್ನು ಕೊಡಿಸುತ್ತೇನೆ ಎಂದು ಹೇಳಿ ಅವನನ್ನು ನಮ್ಮ ಪೊಲೀಸ್ ಠಾಣೆಯ ಲಾಕಪ್‌ನಲ್ಲಿಯೇ ಇಟ್ಟುಕೊಂಡಿರಲು ಹೇಳಿದರು.

ನಾನು ವೀರಪ್ಪನ್‌ನನ್ನು ಠಾಣಾ ಲಾಕಪ್‌ಗೆ ಹಾಕಿದೆ. ‘ಉಪ್ಪಾರಪೇಟೆ ಠಾಣೆ ನಗರದ ಕೇಂದ್ರ ಭಾಗದಲ್ಲಿರುವುದರಿಂದಲೂ ಮತ್ತು ಜನನಿಬಿಡ ಠಾಣೆಯಾಗಿದ್ದರಿಂದಲೂ ಅಲ್ಲಿ ವೀರಪ್ಪನ್‌ನನ್ನು ಇಟ್ಟುಕೊಳ್ಳುವುದು ಬೇಡ ಎಂದು ಹಿರಿಯ ಅಧಿಕಾರಿಗಳು ತೀರ್ಮಾನಿಸಿ ಅದೇ ರಾತ್ರಿ ಆತನನ್ನು ಜಯನಗರ ಪೊಲೀಸ್ ಠಾಣೆಗೆ ವರ್ಗಾಯಿಸಲು ಹೇಳಿದರು.’’ ಅಂದಿನ ಜಯನಗರ ಪೊಲೀಸ್ ಠಾಣಾಧಿಕಾರಿ ಜಿ.ಬಿ.ಕವರಿ ಹೀಗೆಂದರು:

ಜಿ.ಬಿ.ಕವರಿ: ‘ನಾನು ಆ ರಾತ್ರಿ ವೀರಪ್ಪನ್‌ನನ್ನು ನನ್ನ ಜತೆಗೆ ಜೀಪಿನಲ್ಲಿ ಠಾಣೆಗೆ ಕರೆದುಕೊಂಡು ಹೋಗಿ ಪ್ರಶ್ನಿಸಿದಾಗ ತಾನು ಹೇಗೆ ಕಾಡುಗಳ್ಳನಾದೆ ಎಂದು ವಿವರವಾಗಿ ತಿಳಿಸಿದ. ತನಗೆ ಚಿಕ್ಕಂದಿನಿಂದಲೇ ಕೆಲವು ಕಾಡುಗಳ್ಳರ ಪರಿಚಯವಾಗಿದ್ದು ಅವರೇ ತನ್ನನ್ನು ಈ ದಂಧೆಯಲ್ಲಿ ತೊಡಗಿಸಿದರು ಹಾಗೂ ಈ ದಂಧೆಯನ್ನು ಮುಂದುವರೆಸಲು ಕೆಲವು ಅರಣ್ಯ ಅಧಿಕಾರಿಗಳು ತನಗೆ ಬೆಂಬಲವನ್ನು ನೀಡುತ್ತಿದ್ದರು ಎಂದ.

ಆನೆಯನ್ನು ನೀನು ಹೇಗೆ ಕೊಲ್ಲುವೆ ಎಂದು ಪ್ರಶ್ನಿಸಿದಾಗ ನಾನು ಬಂದೂಕಿನಿಂದ ಆನೆಯ ತಲೆಗೆ ಗುಂಡಿಟ್ಟು ಹೊಡೆಯುತ್ತೇನೆ. ಆದರೆ ಆನೆ ಗುಂಡು ತಗುಲಿದ ಕೂಡಲೇ ಸಾಯುವುದಿಲ್ಲ, ಸುಮಾರು ಒಂದರಿಂದ ಎರಡು ಗಂಟೆಗಳ ಕಾಲ ಅದಕ್ಕೆ ಜೀವವಿರು ತ್ತದೆ. ಅಲ್ಲಿಯವರೆಗೆ ನಾವು ಕಾಯಬೇಕು. ಸತ್ತ ಆನೆಯಿಂದ ನೇರವಾಗಿ ದಂತವನ್ನು ತೆಗೆಯಲು ಸಾಧ್ಯವಿಲ್ಲ. ಏಕೆಂದರೆ ದಂತವು ಆನೆಯ ದವಡೆಯಲ್ಲಿ ಸುಮಾರು ಒಂದು, ಒಂದೂವರೆ ಅಡಿ ಆಳದಲ್ಲಿ ಇರುತ್ತದೆ. ಒಂದು ವೇಳೆ ಗರಗಸದಿಂದ ದಂತವನ್ನು ಕೊಯ್ಯಲು ಹೊರಟರೆ ದವಡೆಯಲ್ಲಿರುವ ದಂತ ಒಳಗಡೆಯೇ ಉಳಿದು ಬಿಡುತ್ತದೆ. ಇದರಿಂದಾಗಿ ಹಣ ನಷ್ಟವಾಗುತ್ತದೆ.

ಹೀಗಾಗಿ ನಾನು ಆನೆಯ ದಂತವನ್ನು ಸಂಪೂರ್ಣವಾಗಿ ಅದರ ಬಾಯಿಯಿಂದ ಹೊರಗೆ ತೆಗೆಯುವ ಹೊಸ ಅವಿಷ್ಕಾರವನ್ನೇ
ಮಾಡಿದೆ. ಆನೆ ಸತ್ತ ನಂತರ ಅದರ ಬಾಯಿಯಲ್ಲಿ ಸುಣ್ಣದ ಕಲ್ಲುಗಳನ್ನು ತುರುಕುತ್ತಿದ್ದೆ. ಸುಣ್ಣದ ಕಲ್ಲಿನ ಪ್ರಭಾವದಿಂದಾಗಿ
ಆನೆಯ ದವಡೆ ಸುಟ್ಟು ಮೃದುವಾಗುತ್ತಿತ್ತು. ಸುಮಾರು ಒಂದರಿಂದ ಒಂದೂವರೆ ಗಂಟೆಯ ಕಾಲ ಸುಣ್ಣದ ಕಲ್ಲನ್ನು ಆನೆಯ ದವಡೆಯಲ್ಲಿಟ್ಟು ದವಡೆ ಮೃದುವಾದ ನಂತರ ದಂತವನ್ನು ಜೋರಾಗಿ ಎಳೆಯುತ್ತಿದ್ದೆ. ಆಗ ಸಲೀಸಾಗಿ ದಂತ ಹೊರಬರುತ್ತಿತ್ತು. ಇದರಿಂದ ನನಗೆ ಇಡಿಯಾದ ದಂತ ಲಭಿಸುತ್ತಿತ್ತು ಎಂದು ತಿಳಿಸಿದಾಗ ನನಗೆ ಆಶ್ಚರ್ಯವಾಗಿತ್ತು.

‘ತಾನು ಮೂವತ್ತಮೂರು ಆನೆಗಳನ್ನು ಕೊಂದಿದ್ದೇನೆ ಎಂದ ವೀರಪ್ಪನ್ ತಾನು ಅಲ್ಲಿಯವರೆಗೆ ಸುಮಾರು 300 ಲಾರಿ
ಲೋಡ್ ‌ಗಳಷ್ಟು ಗಂಧದ ಮರಗಳನ್ನು ಕಡಿದು ಮಾರಾಟ ಮಾಡಿದ್ದೇನೆ ಎಂದ. ಆತನ ಇತರ ಕುಕೃತ್ಯಗಳ ಬಗ್ಗೆ ಕೇಳಿದಾಗ,
ಒಬ್ಬ ಅರಣ್ಯಾಧಿಕಾರಿಯ ಕೊಲೆಯನ್ನು ತಾನು ಮಾಡಿದ್ದೇನೆ ಎಂದು ಆತ ಹೇಳಿದ.’