ಹೊಸ ಕಥೆ
ಲಕ್ಷ್ಮೀಕಾಂತ್ ಎಲ್.ವಿ
ಅವರ ಎದೆನೆಲದಲ್ಲಿ ನೆಮ್ಮದಿಯ ಹಸಿರು ಚಿಗುರೊಡೆಯುವುದೆಂದು? ಮಂದಹಾಸದ ಮೊಗ್ಗೊಂದು ಮತ್ತೆ ಅರಳುವುದೆಂದು? ಪರಿಧಿಗಳ ಮೀರಿ ನಾಟುವ ಈ ಜೀವವಿಹಗದ ಕೂಗು ಆ ದೇವನ ಕೇಳುವುದೆಂದು?
ಮಬ್ಬಡರಿದ ಬೆಳಕು ಕವಿದ ಆ ಸಂಜೆಗತ್ತಲಲ್ಲಿ ಅದೇನೋ ಒಂದು ಒಂದು ಉನ್ಮಾದ ಕಾಣುತ್ತಿದೆ. ಮೂಲೆಗಂಟಿ ನಿಂತವರ ಸುತ್ತಲೂ ಘಮ್ಮೆನ್ನುವ ಸೆಂಟಿನ ಘಾಟು; ಸೀಸೆಗಳಲ್ಲಿ ತುಂಬಿಟ್ಟ ಬಣ್ಣದ ನಶೆಪಾನ ಕಣ್ಕುಕ್ಕುತ್ತಿದೆ. ಅಲ್ಲಿ ಜೀವದ ಉನ್ಮಾದವೊಂದು ಕಣ್ಮುಚ್ಚಿ ತವಕಿಸುತ್ತಿದೆ. ಇತ್ತ ಸೆಂಟಿನ ಘಾಟು ಪರಿಮಳವೂ ಉಸಿರುಗಟ್ಟಿಸುತ್ತಿದೆ. ಬೆಳಕಂತೂ ಮೊದಲೇ ಮಬ್ಬುಗಟ್ಟಿದೆ. ನಗರದ ಕೃತಕ ದೀಪಗಳ ಬೆಳಕಲ್ಲಿ ತಾರೆಗಳ ಹೊಳಪೇ ಮರೆಯಾಗಿದೆ. ರಾತ್ರಿ ಪಾಳಿಯ ಮುಗಿಸಿ ಮೈಮುರಿಯುತ್ತಾ ಕೈಲೊಂದು ದುಬಾರಿ ಸಿಗರೇಟ್ ಸುಡುತ್ತಾ ಬರುವ ಅವನಿಗೂ ರಾತ್ರಿಯೇ ಹಗಲಾಗಿಬಿಟ್ಟಿದೆ.
ಗಾಂಧಿ ನೋಟೊಳಗೆ ಗಾಂಧಿಯು ನಗುತ್ತಿದ್ದರೆ, ಇತ್ತ ಆ ನೋಟಿಗಾಗಿ ಮೈಮುರಿದು ದುಡಿಯಬೇಕಾದ ಅನಿವಾ ರ್ಯತೆ. ನಶೆತುಂಬಿ ದಾನವತೆಯೇ ಮರೆಯಾಗಿರುವ ಕೊಳಕು, ನಗರದ ಬೆಳಕನ್ನೇ ಮುಚ್ಚಿಬಿಟ್ಟಿದೆ. ಕೊಳೆತ ಮನಸುಗಳಲ್ಲಿನ ತುಂಬಿರುವ ಘಾಟು ತೆಗೆಯುವುದಕ್ಕಾಗಿ ಶೀಷೆಯಲಿ ಸೆಂಟು ತುಂಬಿ ಉನ್ಮಾದ ಬರಿಸುವ ಆ ನಡುಗತ್ತಲಲ್ಲಿ ಮುಖ ನೋಡಲಾರದ ಕಣ್ಣುಗಳಿಗೆ ಮುಖವಾಡಗಳ ಬಣ್ಣ ವಿಷಾದ ತರಿಸಿದೆ.
ಅವನಂತೂ ದಿನನಿತ್ಯ ಈ ಬಣ್ಣದ ವೇಷದ ಮುಖವಾಡಗಳ ನಡುವೆ ನಗರದ ಕತ್ತಲ ಲೋಕದಲ್ಲಿ ನಲುಗಿ ಹೋಗಿದ್ದ. ರಾತ್ರಿ ಪಾಳಿ ಮುಗಿಸಿ ಹೊರಬಂದು ಅದೇ ಬೀಡಾ ಅಂಗಡಿಯ ಮುಂದೆ ಸಿಗರೇಟ್ ಹಚ್ಚಿ, ಜೋರಾಗಿ ಧಮ್ ಎಳೆದೆಳೆದು ಬಿಡುತ್ತಿದ್ದರೆ, ಅತ್ತ ಗೋಡೆಗಂಟಿ ಬದುಕಿನ ಹೊಟ್ಟೆಗಾಗಿ ಸೆಂಟಿನ ಘಾಟಿನೊಂದಿಗೆ ಬಂದು ನಿಲ್ಲುವ ಆ ಲಲನೆಯರ ಬದುಕೇ ಒಂಥರಾ..? ಎಂದೆನಿಸಿಬಿಟ್ಟಿತ್ತು. ಅವರ ಬದುಕಿನ ಮುಂದೆ ನನ್ನ ಬದುಕು ಏನೂ ಅಲ್ಲ ಎಂದೆನಿಸಿತು. ಆದರೂ ಗಗನಚುಂಬಿ ಕಟ್ಟಡಗಳ ನಗರಜೀವನ ಬೇಸತ್ತಿ ಹಸಿರು ಹೊನಲಿನ ಧಾರೆಯೊಂದನು ಹುಡುಕಿ ಹೊರಡಬೇಕೆನಿಸಿದೆ. ಭುವಿಯ ದಾರಿಯಲ್ಲದ ದಾರಿಯಲ್ಲಿ ದಾರಿ ಮಾಡಿಕೊಂಡು ಪಯಣ ಸಾಗಲು ನಿರ್ಧರಿಸಿದ್ದಾನೆ. ಪ್ರಾರ್ಥಿಸುವ ಹೊತ್ತಿನ ಪರಿವೆಯೇ ಇಲ್ಲದೆ ಕೂತು ಬಿಡುವ ಅವನು ಅದೇಕೋ ಎಲ್ಲ ಪರಿಧಿಗಳ ಮೀರಿ ಹೂಗಳ ಸಂತೆಗೆ ಬಂದ ಅಲೆಮಾರಿಯಾಗಿ ಸಾಗುತ್ತಿದ್ದಾನೆ.
ಅಲ್ಲೆಲ್ಲೋ ಬದುಕು ಸಾಗುವ ಬೀದಿಗಳಲ್ಲಿ ನೂರಾರು ತಿರುವುಗಳು. ಅಲ್ಲಿ ಅವನದಲ್ಲದ ಮನಸುಗಳು; ತಪ್ಪಿದ ದಾರಿಯ ಅರಿವಾದಾಗ ಮರಳಲೇಬೇಕು, ಒಂದಿಷ್ಟು ನರಳಲೇಬೇಕು, ಹಾಗೆಯೇ ಹೊಸ ಕುತೂಹಲದೊಂದಿಗೆ ಮತ್ತೆ ಅರಳಲೇಬೇಕು ಎಂಬುದನ್ನು ಮರೆಯದ ಅವನು ಮತ್ತೆ ತಲುಪಿದ್ದು ಅದೇ ಘಾಟು ಸೆಂಟಿನ ಪರಿಽಯೊಳಗೆ. ಕೊಳಕು ನಗರದಲ್ಲಿ ನಲುಗಿ ನಾಳೆ ಎಂಬ ಕಾಣದ ಕಡಲೊಂದು ಕಟ್ಟಿಹಾಕಿದೆ ಅವನ ಬದುಕಿನ ನೌಕೆಯ! ದಿನಗಳು ಹುಟ್ಟುತ್ತಿವೆ, ಸಾಯುತ್ತಿವೆ. ಏನೂ ಬದಲಾಗುತ್ತಿಲ್ಲ ಎನಿಸಿದರೂ ಎಲ್ಲವೂ ಬದಲಾಗುತ್ತಿದೆ. ಬಯಕೆಗಳ ಅಲೆಗಳಂತೂ ಬಂದು ಬಂದು ಅಪ್ಪಳಿಸಿ ಹೋಗು ತ್ತಿವೆ. ಅವನೆದೆಯ ಅಪ್ಪಳಿಸಿದ ಆ ಕ್ಷಣ ಮಾತ್ರ ನೆಮ್ಮದಿಗೆಡಿಸಿತ್ತು. ಒಣ ಗಾಳಿ ಬೀಸುವ ಆ ಮಬ್ಬುಗತ್ತಲೆಯೊಳಗೆ ಆಗಾಗ ಬಂದ ನಿದಿರೆಯೊಂದು ಕಣ್ಣಿಗೆ ಸವರಿ ಸಂತೈಸುತ್ತದೆ. ಬದುಕ ಕಟ್ಟಿಹಾಕಿರುವ ಬಳ್ಳಿಗಳ ಬಂಧನವ ಕಳಚಿ, ಕಾಣುವ ಕಡಲಿನ ಆಚೆತುದಿಯರಸುವ ಆಸೆ ಮಾತ್ರ ನಿರಂತರ. ಮನದ ಹೊಸ್ತಿಲಿಗೆ ಬಡಿದು ಹಿಂದೆ ಹೋಗುವ, ಬಯಕೆಯ ಅಲೆಗಳ ಬೆನ್ನತ್ತಿ ಹೋಗಿಬಿಡಬೇಕೆನಿಸುತ್ತದೆ.
ಆದರೇನು ಮಾಡುವುದು? ಈ ಸಿಗರೇಟೊಂದನ್ನು ಹಚ್ಚಿ ಉಫೆಂದು ಸುರುಳಿಯಾಗಿ ಹೊಗೆಬಿಡುವುದೊಂದನ್ನು ಬಿಟ್ಟು..! ಈ ಗೊಂದಲಗಳನ್ನು ಮೆಲುಕು ಹಾಕುತ್ತಿರುವಾಗಲೇ ಬಂತೊಂದು ಕಪ್ಪನೆಯ ಕಾರೊಂದು. ಎದುರು ರಸ್ತೆಯ ಬೀದಿ ದೀಪದ ನೆರಳಿನಲ್ಲಿ ಬಹುಹೊತ್ತಿನಿಂದ ಗೋಡೆಗಂಟಿ ಕೊಂಡಿದ್ದ ಲಲನೆಯೊಬ್ಬಳನ್ನು ಕಾರೊಳಗೆ ಕೂರಿಸಿಕೊಂಡು ಹೊರಟೇಬಿಟ್ಟಿತು. ಘಾಟು ಸೆಂಟಿನ ರಸ್ತೆಯ ಕಡೆ ನೋಡುತ್ತಾ ಕೈಬೆರಳ ಸುಟ್ಟಾಗಲೇ ವಾಸ್ತವದ ಅರಿವಾದದ್ದು. ಬದುಕ ಅರಸಿ ಬರುವ ಅದೆಷ್ಟು ನೊಂದ ಜೀವಗಳ ಬೆಂದ ಕಥೆಯೇ ಹೀಗೆ.
ಅವರ ಎದೆನೆಲದಲ್ಲಿ ನೆಮ್ಮದಿಯ ಹಸಿರು ಚಿಗುರೊಡೆಯುವುದೆಂದು? ಮಂದಹಾಸದ ಮೊಗ್ಗೊಂದು ಮತ್ತೆ ಅರಳುವುದೆಂದು? ಪರಿಧಿಗಳ ಮೀರಿ ನಾಟುವ ಈ ಜೀವವಿಹಗದ ಕೂಗು ಆ ದೇವನ ಕೇಳುವುದೆಂದೋ? ಅವರು ಸಾಗುವ ಹಾದಿಯ ತುಂಬ ಪ್ರೀತಿ ತುಂಬಿದ ಉತ್ಸಾಹ ಚೆಲ್ಲಬೇಕೆಂಬ ಆಸೆ ಅವನಿಗೆ. ಇಂತಹ ರಾಶಿ ರಾಶಿ ಕಥೆಗಳ ಜೋಳಿಗೆ ತುಂಬಬೇಕು; ಅಂತವರಿಗಾಗಿ ಒಂದೆರಡು ಬದುಕಿನ ಸಾಲುಗಳನ್ನು ಅಲ್ಲೇ ಬಿಟ್ಟು ಹೊರಡಬೇಕು. ಒಂದಿಷ್ಟು ಕನವರಿಕೆಯ ಕದ್ದು ತರಬೇಕು! ಮತ್ತೆ ಮತ್ತೆ ನೆನೆಯಬೇಕು, ಮುಗುಳ್ನಗಬೇಕು! ಎಷ್ಟೆಲ್ಲಾ ಆಸೆ ಅವನಿಗೆ.
ಚಹಾ ಮಾರುವ ಆ ಪುಟ್ಟ ಹುಡುಗನ ಕಣ್ಣಲ್ಲಿನ ಆ ಸಾವಿರ ಕನಸುಗಳು; ಅದೇ ನಾಲ್ಕನೇ ಕ್ರಾಸಿನ ಮೆಕಾನಿಕ್ ಶಾಪ್ನ ಹುಡುಗನ ಚತುರತೆ; ಘಾಟು ಸೆಂಟುಗಳ ನಡುವೆಯೇ ಮಲ್ಲಿಗೆ ಹೂ ಮಾರುವ ಹೂವಾಡಗಿತ್ತಿಯ ಸಾವಿರ ಕನಸುಗಳು ಅವನನ್ನು ದಿನವೂ ಕಾಡುತ್ತಲೇ ಇದೆ. ಈ ಬದುಕೇ ಹೀಗೆ. ತಿರುವುಗಳೇ ತುಂಬಿದ ರಸ್ತೆಯಲ್ಲಿನ ಪಯಣದಂತೆ; ಅಲ್ಲಿ ವೇಗಕ್ಕೇ ಮಹತ್ವ ಇಲ್ಲ; ಆದರೂ ಮುಗಿಯದ ಧಾವಂತ. ಎಲ್ಲರೂ ಆದಷ್ಟು ಬೇಗ ನಮ್ಮ
ಆಸೆಗಳೆಲ್ಲ ಈಡೇರಬೇಕು ಅಂದುಕೊಳ್ಳುತ್ತಾರೆ! ಆದರೆ ಬಹುಷಃ ಎಲ್ಲವೂ ಎಣಿಸಿದಂತೆಯೇ ನಡೆಯುತ್ತ ಹೋದರೆ, ಜೀವನ ಪ್ರೀತಿ ಎನ್ನುವುದನ್ನೇ ಕಳೆದುಕೊಂಡು ಬಿಡುತ್ತೇವೇನೋ ಅನಿಸುವುದು.
ಆಗಾಗ ಅನಿರೀಕ್ಷಿತ ತಿರುವುಗಳಿರಬೇಕು; ನಮಗಾಗಿ ಕಾಯುವ ಹೊಸತನದ ಬಗ್ಗೆ ಕುತೂಹಲವಿರಬೇಕು! ತಿರುವಿನಾಚೆ ಇಂಚಿಂಚಾಗಿ ಇದ್ದಕ್ಕಿದ್ದಂತೆ ಎದುರಾಗಿ ಅನಾವರಣ ಗೊಳ್ಳುವ ಹೊಸ ಹೊಸ ಮುಖಗಳು, ವಿಭಿನ್ನ ವ್ಯಕ್ತಿತ್ವಗಳ ಭೇಟಿಯ ಕುರಿತು ತವಕಗಳಿರಬೇಕು! ನಮ್ಮ ಈ ಭೂಮಂಡಲವೇ ಒಂದು ಅದ್ಭುತ ವಿಸ್ಮಯ ಲೋಕ. ಅನೇಕ ಮಾಯಜಾಲಗಳಿಗೆ ಸಾಕ್ಷಿಯಾದ ಒಂದು ಸುಂದರ ತಾಣ. ಇದರಲ್ಲಿ ಕೋಟ್ಯಂತರ ಪ್ರಾಣಿ ಮತ್ತು ಪಕ್ಷಿ ಸಂಕುಲಗಳು ಅಡಗಿ ತಮ್ಮದೇ ಆದ ಒಂದು ಸುಂದರ ಒಳ ಜಗತ್ತನ್ನು ಸೃಷ್ಟಿಸಿಕೊಂಡಿವೆ.
ಅಂತೆಯೇ, ಇವುಗಳ ಮಧ್ಯೆಯೂ ಸೆಂಟಿನ ಘಾಟು ಘಮಗುಟ್ಟುವ ನಾಲ್ಕನೇ ಕ್ರಾಸ್ ಕೂಡ ಇದೇ ಜಗತ್ತಲ್ಲಿ ಇದೆ ಎಂದು ಅವನಿಗನಿಸಿದ್ದು ಆಗಲೇ.
ಇಂತಹ ಮಬ್ಬುಗತ್ತಲ ಸರಿರಾತ್ರಿಯಲ್ಲಿ ಜನನಿಬಿಡ ಲೋಕದೊಳಗೆ ಇಣುಕಿರುವ ಅವನಿಗೆ ಓಡುವ ಮೋಡವನ್ನು ಹಿಡಿಯುವ ಆಸೆ. ನೆಮ್ಮದಿಗಾಗಿ ಪರಿತಪಿಸುತ್ತ ಸಿಗರೇಟಿನ ಘಾಟು ಹೊಗೆಯೊಳಗೆ ಎಳೆದು ಬಿಡುವ ಅವನ ಆ ಸಂತೋಷ ಬೇರಾವುದಕ್ಕೂ ನಿಲುಕದ ಒಂದು ಅವಿಸ್ಮರಣೀಯ ಸಂಗತಿ!
ಆಕಾಶವನ್ನೇ ಬಾಚಿ ತಬ್ಬಿ ಮುತ್ತಿಕ್ಕುತ್ತಿರುವ ಆ ಕಟ್ಟಡಗಳು ಓಡುತಿರುವ ಮೋಡಗಳನ್ನು ಹಿಡಿಯಲು ಹೆಣಗುತಿವೆ.
ಎಲ್ಲೆಲ್ಲೂ ತುಂಬಿರುವ ಸ್ವಾರ್ಥದ ವಿಷಗಾಳಿ ಹಣ, ಅಧಿಕಾರ ಎಂಬ ಭಯಂಕರ ಅಲೆಗಳು ಸುನಾಮಿಯೆಂತೆ ಮನುಕುಲವನ್ನು ನಾಶ ಮಾಡಲು ಸಿದ್ಧ ವಾಗಿರುವಾಗ ಇದನ್ನೆಲ್ಲ ತಡೆಯುವುದು ಅವನೊಬ್ಬನಿಂದ ಸಾಧ್ಯವೇ? ಪ್ರೀತಿ, ಪ್ರೇಮ, ಸಹನೆ, ವಿಶ್ವಾಸವೆಂಬ ಸಿಹಿಗಾಳಿಯನ್ನು ಸವಿಯಬೇಕಿರುವ
ಇವರೆಲ್ಲ, ಗೋಡೆಗಂಟಿ ಘಾಟು ಸೆಂಟು ಪರಿಮಳ ಚೆಲ್ಲುವ ಸ್ಥಿತಿ ಬಂದದ್ದಾರು ಹೇಗೆ..? ಮುದಗೊಳಿಸುವ ಕಾಮನೆಗಳ ಕಣ್ಣಾಮುಚ್ಚಾಲೆ ಆಟದ ಬಿಲ್ಲಿನ ಬಣ್ಣಗಳು ಎಷ್ಟೆಂಬ ಲೆಕ್ಕ ತೀರಿಸಲು ನಿಂತಿವೆಯೇನೋ ಅನಿಸುತ್ತಿದೆ! ಇಂದು ಅದೇಕೋ ಲೆಕ್ಕ ತಪ್ಪುತ್ತಿದ್ದಾನೆ ಅವನು! ನಲುಮೆಗಳ ನೌಕೆಯೊಂದು
ಅವನೆದೆಯ ತೀರದಲ್ಲಿ, ಅಂದಿನ ಬೆಳದಿಂಗಳ ರಾತ್ರಿಯೊಂದು ಕಳೆದೇ ಹೋಗಿದೆ ಇದೆಲ್ಲದರ ಹುಡುಕಾಟದ ಭರದಲ್ಲಿ; ಹಿಡಿಯುವ ನೆಪದಲ್ಲಿ. ಆ ಸಂಜೆಗತ್ತಲಲ್ಲಿ ಮತ್ತೊಂದು ಉನ್ಮಾದ ಕೇಳಲಾರಂಭಿಸಿದೆ.
ಎದೆಯ ಚಿಪ್ಪಿನ ಉಸಿರಾಟದ ಸದ್ದು ಕೂಡ ಪಿಸುಗುಡುವಂತೆ ಭಾಸವಾಗುತಿದೆ. ಬಹುಶಃ ಆ ಸಂಜೆಯ ಸಂತೆಯಲ್ಲಿ ಬೇಕಂತಲೇ ಕಳೆದುಕೊಂಡ ಮನಸು
ಅವನದಾಗಿತ್ತು ಅನಿಸುತ್ತಿದೆ. ಕೈಬೆರಳು ಚುರ್ರೆಂದಿತು. ನೋಡಿದರೆ ಸಿಗರೇಟು ಪೂರ್ತಿ ಸುಟ್ಟು ಅವನ ಬೆರಳ ನಡುವೆ ಬಿಸಿ ತಾಗತೊಡಗಿತ್ತು. ತಕ್ಷಣವೇ
ವಾಸ್ತವಕ್ಕೆ ಬಂದ ಅವನು ಸುತ್ತಲೂ ಕಣ್ಣಾಡಿಸಿ ಅಂಗಡಿಯನಿಗೆ ಹಣವನಿತ್ತು, ಮತ್ತದೇ ನಾಲ್ಕನೇ ಕ್ರಾಸ್ನ ಹಾದಿಗುಂಟ ಕಚೇರಿಯತ್ತ ರಾತ್ರಿ ಪಾಳಿಯ ಮುಂದುವರೆಸಲು ಹೊರಟು ನಿಂತ, ಮತ್ತದೇ ಘಾಟು ಸೆಂಟಿನ ಲೋಕದ ಸಂಜೆ ಮಬ್ಗುಗತ್ತಲ ಬುಗ್ಗೆಯೊಳಗೆ.