Saturday, 14th December 2024

ಶಬ್ದ ಗುರುವಿಗೆ ಅಕ್ಷರ ನಮನ

ಡಾ.ಕೆ.ಎಸ್‌.ಪವಿತ್ರಾ

ಜೀವಿ ಎಂದ ತಕ್ಷಣ ಕನ್ನಡಿಗರ ಮೈ ರೋಮಾಂಚನಗೊಳ್ಳುತ್ತದೆ. ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಕೆಲಸ ವನ್ನು, ಸಾಧನೆಯನ್ನು ಮಾಡಿರುವ ಈ ಹಿರಿಯ ಜೀವಿ, ಸೌಜನ್ಯತೆಯ ಮಹಾ ಮೂರ್ತಿ. ಅಪಾರ ಸಾಧನೆಯ ಮಾಡಿ, ಪ್ರಸಿದ್ಧಿಯ ಶಿಖರ ದಲ್ಲಿದ್ದಾಗಲೂ, ಅತಿ ಕಿರಿಯರನ್ನೂ ಬಹು ಗೌರವದಿಂದ, ವಿನಯದಿಂದ ಮಾತನಾಡಿಸುವ ಸಂಸ್ಕಾರವಂತರು. ಇಗೋ ಕನ್ನಡ ಎಂಬ ಮಾಲಿಕೆಯ ಮೂಲಕ, ಪ್ರತಿ ವಾರ ನಾಡಿನ ಮೂಲೆ ಮೂಲೆಯ ಆಸಕ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, ಕನ್ನಡದ ಕುರಿತು ಜನಸಾಮಾನ್ಯರಲ್ಲೂ ಅಪಾರ ಕುತೂಹಲ ಹುಟ್ಟಿಸುವಂತೆ ಮಾಡಿದ ವಿದ್ವಾಂಸರು ಇವರು. ಅವರ ‘ಇಗೋ ಕನ್ನಡ’ ಮಾಲಿಕೆ ಯು ನಾಲ್ಕು ಸಂಪುಟಗಳಲ್ಲಿ ಪ್ರಕಟಗೊಂಡು ಇಂದಿಗೂ ಜನಸಾಮಾನ್ಯರ ಮತ್ತು ವಿದ್ವಾಂಸರ ಕಣ್ಮಣಿ ಎನಿಸಿದ್ದು, ಜ್ಞಾನದಾಹ ತಣಿಸುತ್ತಿದೆ ಎಂದರೆ, ಅವರ ಪಾಂಡಿತ್ಯದ ಅರಿವಾದೀತು. ತಮ್ಮಂತಹ ವಿದ್ವಾಂಸರಲ್ಲಿರುವ ಜ್ಞಾನವು ಜನ ಸಾಮಾನ್ಯರನ್ನು ತಲುಪಬೇಕೆಂಬ ಅವರ ತುಡಿತ, ನಡೆ ಅನುಕರಣೀಯ. ಜಿ.ವಿ. ಅವರ ಸಜ್ಜನಿಕೆಯನ್ನು,  ನಯವಂತಿಕೆಯನ್ನು, ಕಿರಿಯರನ್ನೂ ಗೌರವದಿಂದ ಕಾಣುವ ರೀತಿ ಯನ್ನು ಹತ್ತಿರದಿಂದ ಕಂಡವರೊಬ್ಬರು ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ನಿಘಂಟು ಶಾಸ್ತ್ರದಲ್ಲಿ, ನಿಘಂಟು ರಚನೆಯಲ್ಲಿ ಅಪಾರ ಸಾಧನೆ ಮಾಡಿರುವ ಹಿರಿಯ ‘ಜೀವಿ’ ಇನ್ನಿಲ್ಲ. ಸಾರ್ಥಕ ಜೀವನ ನಡೆಸಿ, ಮರಿ ಮಕ್ಕಳನ್ನೂ ನೋಡಿ, 108 ವರ್ಷಗಳ ಬದುಕು ಮುಗಿಸಿದ್ದು ಸುಲಭದ ಮಾತಲ್ಲ. ಹಲವು ಶಬ್ದಕೋಶಗಳನ್ನು ರಚಿಸಿ, ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಅವರು ಮಾಡಿದ ವಿಚಾರವಂತೂ ಅಭೂತಪೂರ್ವ. ಹಾಗಾಗಿ ನನ ಗನ್ನಿಸುವಂತೆ ‘ಅಯ್ಯೋ, ಹೋದರಲ್ಲ’ ಎಂದು ವಿಷಾದ ಪಡುವುದಕ್ಕಿಂತ, ಇದು ಅವರ ಬಗ್ಗೆ ಹೆಮ್ಮೆ ಪಡುವ, ಅವರ ಕೆಲಸಗಳನ್ನು ಅನುಸರಿಸುವ ಹಲವು ವಿಧಾನಗಳನ್ನು ಹುಡುಕುವ ಸಂದರ್ಭ ಇದು.

ನಾನು ಪ್ರೊ. ಜಿ. ವೆಂಕಟಸುಬ್ಬಯ್ಯನವರನ್ನು 2003ರಿಂದಲೂ ಬಲ್ಲೆ. ಬಾಲ್ಯದಿಂದ ಅವರ ‘ಇಗೋ ಕನ್ನಡ’ದ ಅಭಿಮಾನಿ. ನನ್ನ ಮಹಾ ಪ್ರಬಂಧ ‘ಸೃಜನಶೀಲತೆ ಮತ್ತು ಮಾನಸಿಕ ಆರೋಗ್ಯ’ದ ಬಗ್ಗೆ ಸಂಶೋಧನೆ ನಡೆಸುವ ಸಮಯದಲ್ಲಿ ಅವರ, ಅವರ ಕುಟುಂಬದವರ ಜೊತೆ ನನ್ನ ವೈಯಕ್ತಿಕ ಪರಿಚಯ-ಬಾಂಧವ್ಯಗಳು ಬೆಳೆದವು. ಅವರು ಬಹು ಜನರಿಗೆ ಹೀಗೆ ಆತ್ಮೀಯರು. ಕೆಲವೇ ನಿಮಿಷಗಳಲ್ಲಿ ಬಹು ಕಾಲ ಉಳಿಯುವ ಬಾಂಧವ್ಯ ಬೆಳೆಸಿಕೊಳ್ಳುವ ಸಹೃದಯತೆ -ಪ್ರತಿಭೆ ಅವರು, ಅವರ ಕುಟುಂಬದವರಲ್ಲಿತ್ತು ಎನ್ನುವುದು ಬಹಳ ಜನರಿಗೆ ಗೊತ್ತು.

ಅವರ ಒಡನಾಟ ದೊರೆಯುವುದೇ ಒಂದು ಭಾಗ್ಯ. ಆ ಒಡನಾಟವು ನಮ್ಮ ಮೇಲೆ ಬೀರುವ ಪ್ರಭಾವ, ಸತಪರಿಣಾಮವನ್ನು ವಿವರಿಸುವುದೇ ಕಷ್ಟ. ಅವರ ಜತೆ ಮಾತನಾಡಿದ, ಮಾರ್ಗದರ್ಶನ ಪಡೆದ ಕೆಲವು ನೆನಪಿನ ತುಣುಕುಗಳನ್ನು ಅವರ ಬಗ್ಗೆ ಇಲ್ಲಿ ಹಂಚಿಕೊಂಡಿದ್ದೇನೆ. ಒಮ್ಮೆ ನಾನು ಮಾತನಾಡುವಾಗ ಅವರ ಹತ್ತಿರ ಹೇಳಿದ್ದೆ – ‘ಸರ್, ಕನ್ನಡದೊಳಗೆ ಹೊಸ ಹೊಸ ಪದವನ್ನೇ ಬೇರೆ ಭಾಷೆಯಿಂದ ತಂದು ಬಿಡ್ತಾರಲ್ಲ, ಇದು ತಪ್ಪಲ್ವಾ?’. ಆಗ 92ರ ಜಿ.ವಿ. ಹೇಳಿದ್ದರು – ‘ಪವಿತ್ರ, ಅದು ಹಾಗಲ್ಲ! ಭಾಷೆ
ಬೆಳೆಯುತ್ತ, ಬೆಳೆಯುತ್ತ ಅದು ಎಲ್ಲ ಕಡೆಯಿಂದ ಎರವಲು ಪಡೆದುಕೊಳ್ಳುತ್ತದೆ.

ಭಾಷೆ ಬೆಳೆಯುವುದು, ಬೆಳೆಯಬೇಕಾದ್ದು ಹಾಗೆಯೇ! ಹಾಗೆಂದು ಕನ್ನಡದಂತಹ ಭದ್ರ ಬುನಾದಿ ಇರುವ ಭಾಷೆ ತನ್ನತನ ಕಳೆದು ಕೊಂಡು ಬಿಡುತ್ತದೆ ಎಂಬ ಆತಂಕ ಬೇಡ’. ಈಗ ಭಾಷೆಗಳ ಬಗ್ಗೆ ಕುತೂಹಲದಿಂದ ಗಮನಿಸುವಾಗ ಅವರ ಮಾತುಗಳು ನನಗೆ ಅರ್ಥವಾಗುತ್ತಿವೆ. ನಮಗೆ ಯಾರಾದರೂ ಆಹ್ವಾನ ಪತ್ರಿಕೆ ಅಥವಾ ಶುಭಾ ಶಯ ಪತ್ರ ಕಳಿಸಿದರೆ, ನಾವೇನು ಮಾಡುತ್ತೇವೆ? ತುಂಬಾ ಆತ್ಮೀಯರಾದರೆ ಹೋಗು ತ್ತೇವೆ, ಕರೆ ಮಾಡುತ್ತೇವೆ.

ಆದರೆ ಪ್ರತಿ ಬಾರಿ ಈ ರೀತಿಯ ಶಿಷ್ಟಾಚಾರ ಕಷ್ಟವಾಗುತ್ತಾ ಸಾಗಬಹುದು. ಆದರೆ ಆ ಹಿರಿಯರ ವೈಖರಿಯೇ ಬೇರೆ, ಅನುಕರಣೀಯ. ಜಿ.ವಿ. ಅವರು ಪ್ರತಿ ಬಾರಿಯ ಹೊಸ ವರ್ಷದ ಕ್ಯಾಲೆಂಡರ್ ತಲುಪಿದಾಗ, ನಮ್ಮ ಕಾರ್ಯಕ್ರಮದ ಆಹ್ವಾನ ಪತ್ರಿಕೆ ತಲುಪಿದಾಗ, ಸ್ವತಃ ಕರೆ ಮಾಡಿ, ‘ನನಗೆ ನಿನ್ನ ಪ್ರತಿ ಕಾರ್ಯಕ್ರಮಕ್ಕೆ ಬರಬೇಕೆಂಬ ಆಸೆಯಮ್ಮಾ, ಆದರೆ ವಯಸ್ಸಾಗಿದೆಯಲ್ಲ, ಏನು ಮಾಡಲಿ’ ಎಂದು ಹೇಳುತ್ತಿದ್ದರು. ಅವರು ಹೀಗೆ ಪ್ರತಿ ವರ್ಷ ನನ್ನೊಡನೆ ಮಾತನಾಡುವುದೇ ನನಗೊಂದು ಅಚ್ಚರಿ ಎನಿಸುತ್ತಿತ್ತು. ಅದು ಅವರ ಮೇಲಿನ ಪ್ರೀತಿ-ಗೌರವಗಳನ್ನೂ ಹೆಚ್ಚಿಸುತ್ತಿತ್ತು. ಎಷ್ಟೇ ಆರೋಗ್ಯವಾಗಿದ್ದರೂ 100 ವರ್ಷ ದಾಟಿದ ಮೇಲೆ ಜೀವಿಸುವುದನ್ನು ನೆನೆಸಿಕೊಂಡರೆ ಭಯವೆನಿಸುತ್ತದೆ.

‘ಎಂದು ನಮ್ಮ ಜೀವ ಹೋಗಬಹುದು?’ ಎಂದು ನಿರೀಕ್ಷಿಸುವುದು ಸುಲಭವಲ್ಲ. ಬಹುಶಃ ಜಿ.ವಿ. ಅವರಂಥ ಪ್ರಬುದ್ಧ-ಜ್ಞಾನಿಗೆ ಮಾತ್ರ ಸಾವಿನ ಬಗ್ಗೆ ಯೋಚಿಸದೆ ಪ್ರತಿದಿನವನ್ನು ಬಾಳುವುದು ಸಾಧ್ಯ. ಅದಕ್ಕೆ ಅಪಾರ ಜೀವನ ಶ್ರದ್ಧೆಯ ಅಗತ್ಯವೂ ಇದೆ. ಯೋಗಾಯೋಗವೆಂಬಂತೆ ಇತ್ತೀಚೆಗೆ ಕಳೆದ ತಿಂಗಳಿನಲ್ಲಿ ಜಿ.ವಿ. ಅವರನ್ನು ನೆನೆಸಿಕೊಳ್ಳುವ, ಮಾತನಾಡುವ ಸಂದರ್ಭಗಳು ಮೇಲಿಂದ ಮೇಲೆ ಒದಗಿ ಬಂದಿದ್ದವು.

ಮೊದಲ ಭೇಟಿ
ನಾನು, ಮೊದಲ ಬಾರಿ ಜಿ.ವಿ.ಯವರನ್ನು ಭೇಟಿಯಾದ ಸಂದರ್ಭವೇ. ‘ಸೃಜನಶೀಲತೆ ಮತ್ತು ಮಾನಸಿಕ ಆರೋಗ್ಯ’ದ ಬಗೆಗಿನ ಚರ್ಚೆಗಾಗಿ. ಅಂದು ನಾನು ಅವರನ್ನು ಕೇಳಿದ ಪ್ರಶ್ನೆಗಳಿಂದ ಆಯ್ದ ಅಂಶಗಳನ್ನು ಆಗಾಗ್ಗೆ ಉಪನ್ಯಾಸ- ಸಂದರ್ಶನಗಳಲ್ಲಿ-ಬರಹಗಳಲ್ಲಿ ಉಪಯೋಗಿಸುತ್ತಲೇ ಇದ್ದೇನೆ. ಮೊನ್ನೆ ಮಂಗ ಳೂರು ಆಕಾಶವಾಣಿಯ ಸಂದರ್ಶನದಲ್ಲಿಯೂ ಅವರನ್ನು ನೆನಪಿಸಿಕೊಂಡಿದ್ದೆ.

ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಲಲಿತ ಪ್ರಬಂಧವೊಂದನ್ನು ಬರೆದವರ ಹೆಸರು ‘ಜಿ.ವಿ. ಅರುಣ’, ಎಂದಿತ್ತು. ಜಿ.ವಿ. ಅವರ ಪುತ್ರ ‘ಅರುಣ್ ಸರ್’ ಅವರಿಗೆ ಫೋನಾಯಿಸಿದೆ. ‘ಸರ್, ನೀವು ಬರೀತೀರಿ ಅಂತಲೇ ನನಗೆ ಗೊತ್ತಿರ್ಲಿಿಲ್ಲ’ ಎಂದೆ. ಅವರೆಂದರು ‘ನಾನು  ಬರೆಯೋದು ಬಿಟ್ಟು 40 ವರ್ಷಗಳೇ ಆಗಿದ್ದವು. ಅಣ್ಣ ಮೊನ್ನೆ ನನ್ನ ಬರ್ತ್‌ಡೇಗೆ ಏನು ಕೊಡ್ತೀಯ ಎಂದರು. ‘ನೀನು ಬರೀತಾನೇ ಇಲ್ವಲ್ಲ’ ಅಂತ ಬೇಸರ ಪಟ್ಕೊಂಡ್ರು. ಅದಕ್ಕೆ ಈವರೆಗೆ ಬರೆದ ಲಲಿತ ಪ್ರಬಂಧಗಳನ್ನೆಲ್ಲ ಸೇರಿಸಿ, ಒಂದು ಇ-ಬುಕ್ ಮಾಡಿ ಅವರಿಗೆ ಕೊಟ್ಟೆ. ಅವರಿಗೆ ಖುಷಿಯೇನೋ ಆಯ್ತು. ಆದರೆ ಆ ಮೇಲೆ ‘ಅಮ್ಮನಿಗೆ?’ ಅಂತ ಕೇಳಿದ್ರು!

ಅದಕ್ಕೇ ಈಗ ಆ ಪುಸ್ತಕವನ್ನು ಪ್ರಕಟಣೆ ಮಾಡಲಾಗ್ತಾ ಇದೆ’. ಹೀಗಿದೆ ಜಿ.ವಿ. ಅವರ ಅಕ್ಷರ ಪ್ರೀತಿ ! ಜಿ.ವಿ. ಅವರ ಬಗ್ಗೆ ಜನರ ವೈಯಕ್ತಿಕ ಡಿ.ಪಿ., ವೈಯಕ್ತಿಕ ಫೇಸ್‌ಬುಕ್‌ಗಳಲ್ಲಿ ಹರಿದು ಬರುತ್ತಿರುವ ಫೋಟೋಗಳು, ಇವುಗಳನ್ನು ನೋಡಿ ದರೆ ಅವರ ಬಗೆಗಿನ ಜನರ ಅಭಿಮಾನ, ಪ್ರೀತಿ ಮನವರಿಕೆಯಾಗುತ್ತದೆ. ಹಾಗೆಯೇ ಯಾವುದೇ ಪಂಥದ ಪತ್ರಿಕೆಗಳೂ ಅವರನ್ನು ಬಿಟ್ಟಿಲ್ಲ,  ಆದರಿಸುತ್ತಲೇ ಇವೆ, ಎನ್ನುವುದೇ ವಿಶೇಷ.

ಅವರನ್ನು ಕೊನೆಯವರೆಗೆ ಕ್ರಿಯಾಶೀಲವಾಗಿಡಲು, ಆರೋಗ್ಯವಾಗಿಡಲು, ಬಹು ಜನರಿಗೆ ದೊರಕದ ಉತ್ತಮ ಕೌಟುಂಬಿಕ ಪರಿಸರ ನೀಡಿದ ಮಗ 70ರ ಹರೆಯದ ಯುವಕ ಜಿ.ವಿ. ಅರುಣ್ ಮತ್ತು ಸೊಸೆ ಹೇಮಾ ಅವರನ್ನು ಇಡೀ ಸಮಾಜ ವಂದಿಸಲೇ ಬೇಕು. ಕನ್ನಡದ ಆಸ್ತಿಯನ್ನು ಇಷ್ಟು ದೀರ್ಘಕಾಲ ನೋಡಿಕೊಳ್ಳುವುದು ಸುಲಭವಲ್ಲ!

ಜಿ.ವಿ. ಇಲ್ಲದ ಈ ಹೊತ್ತಿನಲ್ಲಿ ಅವರಿಗೆ ಎಷ್ಟೇ ವಯಸ್ಸಾಗಿರಲಿ, ‘ಒಂದಲ್ಲ ಒಂದು ದಿನ ಹೋಗಲೇಬೇಕಾಗಿತ್ತು, 108 ವರ್ಷವಾ ಗಿತ್ತು’ ಎಂದುಕೊಂಡರೂ, ಮನಸ್ಸಿಗೆ ವಿಷಾದ ಆವರಿಸುತ್ತದೆ. ಜಿ.ವಿ.ಯವರ ಪ್ರಿಯ ಕವಿ ಪಂಪ. ಪಂಪ ಬರೆದ ಕಾವ್ಯ ಆದಿ ಪುರಾಣವೆಂದರೆ ಅವರಿಗೆ ಬಹು ಇಷ್ಟ. ‘ಕನ್ನಡ ಜೈನ ಕಾವ್ಯಗಳನ್ನು ಓದಿದವರು ಸಾವಿಗೆ ಹೆದರಬಾರದು, ದುಃಖಿಸಬಾರದು. ಮತ್ತೊಂದು ಭವದ ಪ್ರವೇಶ ಎಂದು ಭಾವಿಸಿ ತಮ್ಮ ಕೆಲಸ ಮುಂದುವರಿಸಬೇಕು’ ಎಂಬ ಅವರದೇ ಮಾತುಗಳನ್ನು ನೆನೆಸಿ ಕೊಂಡರೆ ಮತ್ತೆ ಜಿ.ವಿ. ಯವರ ಕನ್ನಡ ಕಟ್ಟುವ ಕೆಲಸಗಳು ನಮ್ಮನ್ನು ಕೈಬೀಸಿ ಕರೆಯಲಾರಂಭಿಸುತ್ತವೆ !