Sunday, 24th November 2024

ಅಂತರಂಗದಲ್ಲಿ ಅಂತಃಪುರ ಗೀತೆಗಳು

ಡಾ.ಕೆ.ಎಸ್.ಪವಿತ್ರ

ಬೇಲೂರಿನ ಶಿಲ್ಪಕೃತಿಗಳನ್ನು ಡಿ.ವಿ.ಜಿ.ಯವರು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಅವುಗಳ ವಿಶಿಷ್ಟತೆಯನ್ನೂ ರಸಾನುಭೂತಿಗೆ ಅನ್ವಯಿಸುತ್ತಾರೆ.
ಮೊದಲನೆಯದು ಚಿತ್ರಾಲಂಕಾರ ಅಂತಸ್ತು. ವಿವಿಧ ಜೀವರಾಶಿಗಳ ಇಡೀ ಲೋಕವ್ಯಾಪಾರ ಇಲ್ಲಿದೆ. ನಮ್ಮ ಜೀವನದಲ್ಲಿರುವ ವಿವಿಧ ಪ್ರಭಾವಗಳ ಬಗ್ಗೆ ನಮ್ಮಲ್ಲಿ ಅರಿವನ್ನು ಇದು ಜಾಗೃತವಾಗಿಸುತ್ತದೆ. ಎರಡನೆಯ ಅಂತಸ್ತು ದೇವತಾಶ್ರೇಣಿ. ದಶಾವತಾರಾದಿ ಪುರಾಣದ ಕಥೆಗಳು, ಭಗವಂತನ ಲೀಲೆಗಳು ಭಕ್ತರಲ್ಲಿ ಧ್ಯಾನವನ್ನು ಪ್ರಚೋದಿಸುತ್ತವೆ. ಈ ಎರಡೂ ಅಂತಸ್ತುಗಳ ಮೇಲಿರುವುದು ರಸಿಕ ಪ್ರಪಂಚ. ಅದು ಭಾವಾನಂದಲೋಕ. ಇಲ್ಲಿರುವ ಮದನಿಕೆಯರ ಘೋಷಣೆ ಯೆಂದರೆ ‘ಭಾವಾನಂದ’. ಶೃಂಗಾರೋಪಾಸನೆಯೇ ಇಲ್ಲಿಯ ಮುಖ್ಯ ಉದ್ದೇಶ. ಸಾತ್ವಿಕ ಶೃಂಗಾರದಿಂದ ಜೀವಕ್ಕಾಗುವ ಪ್ರಯೋಜನಗಳನ್ನು ಡಿ.ವಿ.ಜಿ. ಇಲ್ಲಿ ಹೆಸರಿಸುತ್ತಾರೆ. ಶೃಂಗಾರವು ಹೇಗೆ ಕುತೂಹಲ-ಉತ್ಸಾಹ, ಹೃದಯ ವೈಶಾಲ್ಯ, ವಿವೇಕ, ಜೀವನದಲ್ಲಿ ಗಟ್ಟಿಯಾಗುವುದು ಇವುಗಳನ್ನು ಸಾಧ್ಯವಾಗಿಸುತ್ತದೆ ಎಂಬುದನ್ನು ತಾರ್ಕಿಕವಾಗಿ ವಿವರಿಸುತ್ತಾರೆ. ಅದು ‘ಜೇನುತುಪ್ಪದಂತೆ ಸ್ವಾದುವಾದ ಔಷಧ’ ಎನ್ನುತ್ತಾರೆ.

‘ಅಂತಃಪುರ ಗೀತೆಗಳು’ ಎಂಬ ಪುಸ್ತಕದ ಬಗ್ಗೆ ಕೇಳುವುದಕ್ಕೆ ಮುನ್ನ, ಡಿ.ವಿ.ಜಿ.ಯವರ ಬಗ್ಗೆ ತಿಳಿದುಕೊಳ್ಳುವ ಮೊದಲೇ ‘ಏನೀ ಮಹಾನಂದವೇ’ ಎಂಬ ಪ್ರಸಿದ್ಧ
ಗೀತೆಯನ್ನು ಹಲವು ಬಾರಿ ಕೇಳಿ ಮೊದಲೆರಡು ಸಾಲುಗಳು ನನಗೆ ಬಾಯಿಪಾಠವಾಗಿದ್ದವು. ಸುಮಾರು ಒಂಭತ್ತನೇ ತರಗತಿಯಲ್ಲಿದ್ದಾಗ, ಅಪ್ಪ ಅಧ್ಯಕ್ಷರಾಗಿದ್ದ ಶಿವಮೊಗ್ಗೆಯ ಭಾರತೀಯ ವೈದ್ಯಕೀಯ ಸಂಘದ ಕಾರ್ಯಕ್ರಮಕ್ಕಾಗಿ, ಆಗಷ್ಟೇ ಸೀನಿಯರ್ ಭರತನಾಟ್ಯ ಮುಗಿಸಿದ್ದ ನಾನು ಒಂದು ನೃತ್ಯ ಮಾಡಬೇಕಾಗಿ
ಬಂತು.

ನಮ್ಮ ಭರತನಾಟ್ಯದ ತಮಿಳು ಪದಂ- ವರ್ಣಂಗಳು ಸಾಮಾನ್ಯರಿಗೆ ರುಚಿಸುತ್ತಿರಲಿಲ್ಲ. ದೇವರನಾಮಗಳು ‘ಮಾಮೂಲು’ ಎಂದು ಆ ಸಮಯದಲ್ಲಿ ನಮ್ಮ ಭಾವನೆ! ಹಾಗಾಗಿ ಕನ್ನಡದಲ್ಲಿರುವ, ನರ್ತಿಸಬಲ್ಲ, ಜನರಿಗೆ ಪ್ರಿಯವಾಗುವ ಕ್ಯಾಸೆಟ್‌ಗಳನ್ನು ಹುಡುಕಿದಾಗ ಸಿಕ್ಕದ್ದು ‘ಅಂತಃಪುರ ಗೀತೆಗಳು’ ಕ್ಯಾಸೆಟ್. ಅದರಿಂದ ‘ನೃತ್ಯ ಹಾಸಿನಿ’ ಎಂಬ ಹಾಡನ್ನು ಆರಿಸಿಕೊಂಡೆ, ನರ್ತಿಸಿದೆ. ಆದರೂ ಆಗ ಅಂತಃಪುರ ಗೀತೆಗಳ ಅಂತರಂಗ ವನ್ನು ಶೋಧಿಸುವಷ್ಟು ಪ್ರಬುದ್ಧತೆ ನನಗಿರಲಿಲ್ಲ.

‘ಅಂತಃಪುರ ಗೀತೆಗಳ’ ಬಗ್ಗೆ ಬಹಳಷ್ಟು ನೃತ್ಯರೂಪಕಗಳು ನರ್ತನ ಜಗತ್ತಿನಲ್ಲಿ ಬಂದಿವೆ. ಬಿಡಿ ಬಿಡಿಯಾಗಿ, ಇಡಿಯಾಗಿ, ತಮ್ಮ ಶಾಂತಲೆಯ ಕಲ್ಪನೆಯೊಂದಿಗೆ ಡಿ.ವಿ.ಜಿ. ಯವರ ಗೀತೆಗಳನ್ನು ಬೆಸೆದು, ಹೊಯ್ಸಳ ಕಥೆಯ ಜೊತೆಗೆ ಈ ಗೀತೆಗಳನ್ನು ಹೆಣೆದು ಹೀಗೆ ವಿವಿಧ ಸಾಧ್ಯತೆಗಳನ್ನು ಕಲಾವಿದರು ತೋರಿಸಿದ್ದಾರೆ. ಸಂಗೀತ ದಲ್ಲಿಯೂ ಅಷ್ಟೆ, ನೀವು ಅಂತರ್ಜಾಲದಲ್ಲಿ ಕೆದಕಿದರೆ ಕನಿಷ್ಟ ಐದು ಅಂತಃಪುರ ಗೀತೆಗಳನ್ನು ಆಧರಿಸಿದ ಗೀತ ಸಂಕಲನಗಳು, ಯೂಟ್ಯೂಬ್‌ನಲ್ಲಿ ವಿವಿಧ ಕಲಾವಿದರು ಹಾಡಿದ, ವಿವರಿಸಿದ ಪ್ರತ್ಯೇಕ ಗೀತೆಗಳು ಸಿಕ್ಕುತ್ತವೆ.

ಮದನಿಕಾ ಮಾರ್ಗಂ
ನಾನು ನೇರವಾಗಿ ಪೂರ್ಣ ಪ್ರಮಾಣದ ಅಂತಃಪುರ ಗೀತೆಗಳನ್ನೇ ಆಧರಿಸಿದ್ದ ಡಾ. ವಸುಂಧರಾ ದೊರೆಸ್ವಾಮಿ ಯವರ ‘ವಿದ್ಯುನ್ಮದನಿಕಾ’ ಎಂಬ ನೃತ್ಯ ರೂಪಕದಲ್ಲಿ ಭಾಗಿಯಾಗಿದ್ದೆ. ಜಕ್ಕಣಾಚಾರಿಯ ಪಾತ್ರ ಕಲ್ಲು ಕಡೆದು ನನ್ನನ್ನು ‘ಮುರಾಜ ಮೋದೆ’ ಎಂಬ ಮದನಿಕೆ ಯಾಗಿಸುವವರೆಗೆ ಒಂದೇ ಭಂಗಿಯಲ್ಲಿ ನಿಂತಿರಬೇಕಾದ ಕಲ್ಲಿನ ವಿಗ್ರಹದ ಕಷ್ಟ ಅನುಭವಿಸಿದ್ದೆ!

ನಂತರ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಕಾರದಲ್ಲಿ ‘ಮದನಿಕಾ ಮಾರ್ಗಂ’ ಎಂಬ ಭರತನಾಟ್ಯ ಮಾರ್ಗವನ್ನು ಅಂತಃಪುರ ಗೀತೆಗಳನ್ನು ಆಧರಿಸಿ ನಾನು ಸಂಯೋಜಿಸಿದ್ದೆ. ಒಟ್ಟಿನಲ್ಲಿ ಡಿ.ವಿ.ಜಿ.ಯವರ ‘ಅನ್ತಃಪುರಗೀತೆ’ ಎಂಬ 175 ಪುಟಗಳ, 60 ಪದ್ಯಗಳ ‘ಪುಟ್ಟದು’ ಎಂದೇ ಕರೆಯಬಹುದಾದ ಈ ಪುಸ್ತಕ ಇಷ್ಟೆಲ್ಲಾ ಕಲಾವಿದರನ್ನು ಪ್ರೇರೇಪಿಸಿದೆ ಎನ್ನುವುದು ಅರಿವಾಗುತ್ತದೆ. ಒಬ್ಬ ಸಂಶೋಧಕಿಯಾಗಿ ನಾನು ಕಲಿತಿರುವ ಬಹುಮುಖ್ಯ ಅಂಶವೆಂದರೆ ವಿಶೇಷವಾಗಿ ಕಲಾಪ್ರಕಾರಗಳ ಸಂಶೋಧನೆಯಲ್ಲಿ ಪುಸ್ತಕಗಳ ಮುನ್ನುಡಿ, ಬೆನ್ನುಡಿ, ಮಾಹಿತಿಯ ಲೇಖನಗಳನ್ನು ಆಯಾ ಕೃತಿ ಗಳನ್ನು ಅರ್ಥಮಾಡಿಕೊಳ್ಳಲು, ಬಹುಮುಖ್ಯ ಎನ್ನುವುದು. ಮೊದಲೆಲ್ಲಾ ನಾನು ವಿದ್ಯಾರ್ಥಿಯಾಗಿದ್ದಾಗ, ಪುಸ್ತಕ ಓದುವ ಆತುರದಿಂದ ಮುನ್ನುಡಿಯನ್ನು ಹಾರಿಸಿ ನೇರವಾಗಿ ಪುಸ್ತಕದ ಮುಖ್ಯಭಾಗ ಎಂದು ನಂಬುವ ‘ಟೆಕ್ಸ್ಟ್’ ಅನ್ನಷ್ಟೇ ಓದಿದ್ದಿದೆ. ಆದರೆ ಈಗ ಕಾದಂಬರಿ ಓದುವಾಗಲೂ ಬೆನ್ನುಡಿ-ಮುನ್ನುಡಿ-ಕವರ್‌ಪೇಜ್ ಮೇಲಿನ ಯಾವುದಾದರೊಂದು ಹೇಳಿಕೆ – ಚಿತ್ರ ಎಲ್ಲವನ್ನೂ ಓದುವ ಅಭ್ಯಾಸವಾಗಿ ಹೋಗಿದೆ!

ಕಲ್ಲಿಗೆ ಜೀವ ಕೊಟ್ಟಿದ್ದಾರೆ
ಹಾಗೆ ಓದುವಾಗ ‘ಅಂತಃಪುರ ಗೀತೆ’ ಪುಸ್ತಕದಲ್ಲಿ ಸಿಗುವ ಮಾಹಿತಿ ಬಹು ಮುಖ್ಯ. ‘ಡಿವಿಜಿ ಕೃತಿ ಶ್ರೇಣಿ’ ಎಂಬ ಪುಸ್ತಕ ವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಎರಡೂ ಸೇರಿ ಹೊರ ತಂದಿವೆಯಷ್ಟೆ. ಸಂಪಾದಕರಾಗಿ ಡಾ. ಹಾ.ಮಾ. ನಾಯಕ ಅವರು ಬರೆದ ಮುನ್ನುಡಿ ಈ ಮಾಲಿಕೆಯಾಗಿದೆ. ಅವರು ಹೇಳಿರುವ ಮಾತುಗಳು ಗಮನಾರ್ಹ.

‘ಶ್ರೀ ಚೆನ್ನಕೇಶವ ಅನ್ತಃಪುರ ಗೀತೆ’ 1950ರಲ್ಲಿ ಪ್ರಕಟಗೊಂಡಿತು. ತನ್ನ ‘ಸುಂದರ’ ಪ್ರಕಟಣೆಗಾಗಿ ಹೆಸರಾದ ಎ.ಆರ್. ಕೃಷ್ಣಶಾಸಿಗಳಿಂದ ‘ಇತ್ತೀಚಿನ ಕನ್ನಡ ಸಾಹಿತ್ಯದಲ್ಲಿ ತುಂಬ ಸುಂದರವಾದ ಕಾವ್ಯ ಮತ್ತು ಪುಸ್ತಕ’ ಎಂಬ ಮೆಚ್ಚುಗೆಗೆ ಪಾತ್ರವಾಗಿತ್ತು. ಹಾಲು ಬಣ್ಣದ ಆರ‍್ಟ್ ಕಾಗದದಲ್ಲಿ ಮುದ್ರಿತವಾದ ಚೆಲುವಿನ ಪುಸ್ತಕವಾಗಿತ್ತು. ‘ಕಲ್ಲಿನಲ್ಲಿ ಕಡೆದ ಈ ಮೋಹಕ ಸುಂದರಿಯರನ್ನು ಡಿವಿಜಿ ಇಲ್ಲಿ ಮಾತಿನಲ್ಲಿ ಕೆತ್ತಿದ್ದಾರೆ. ಕಲ್ಲಿಗೆ ಜೀವ ಕೊಟ್ಟಿದ್ದಾರೆ’ ಎನ್ನುತ್ತಾರೆ ಡಾ. ಹಾ.ಮಾ. ನಾಯಕ್ ಅವರು.

ಈಗ ಪುಸ್ತಕವನ್ನು ಗಮನಿಸೋಣ. ಪುಸ್ತಕದ ಪೂರ್ತಿ ಹೆಸರು ನಾನು ಮೊದಲು ಅಂದುಕೊಂಡಿದ್ದಂತೆ, ಈಗಲೂ ಬಹುಜನ ಭಾವಿಸಿರುವಂತೆ ‘ಅನ್ತಃಪುರಗೀತೆ’ ಯಲ್ಲ. ಅದು ನಿಜವಾಗಿ ‘ಶ್ರೀ ಚನ್ನಕೇಶವ ಅನ್ತಃಪುರ ಗೀತೆ’. ಡಿ.ವಿ.ಜಿ. ಯವರ ಸಂಸ್ಕೃತ ಜ್ಞಾನವೂ ಸಂಸ್ಕೃತದಲ್ಲಿ ಬರೆಯುವ ‘ಅನ್ತಃಪುರ’ ವನ್ನೇ ಉಪಯೋಗಿಸಿರಬೇಕು. ಮುನ್ನುಡಿ 1 ಮತ್ತು 2 ರಲ್ಲಿ ಚಿತ್ರಪಟಗಳು, ಶಿಲ್ಪಗಳ ಬಗ್ಗೆ ಡಿ.ವಿ.ಜಿ.ಯವರು ಸಹಜವಾಗಿ ಒತ್ತು ನೀಡಿದ್ದಾರೆ. ‘ಎಷ್ಟು ಓದಿದರೂ ನೋಡಿದ್ದಕ್ಕೆ ಸಮನಾಗದು. ಹೋಗಿ ನೋಡ ಬೇಕು -ತೆರೆದ ಕಣ್ಣಿಂದ ನೋಡಬೇಕು’ ಎನ್ನುವ ಅವರ ಮಾತುಗಳು ಈ ಗೀತೆಗಳನ್ನು ಹಾಡುವ- ನರ್ತಿಸುವ ಕಲಾ ವಿದರೂ ಒಮ್ಮೆಯಾದರೂ ಅಲ್ಲಿಗೆ ಹೋಗಿ ನೋಡಬೇಕು ಎಂಬ ಸೂಚನೆಯೂ ಹೌದು.

ಎರಡನೆಯ ಬಾರಿ ಪ್ರಕಟವಾದಾಗ ‘ಬೇಲೂರು ಗುಡಿ’, ಸೌಂದರ್ಯೋಪಾಸನೆ’, ‘ಹಾಡುಗರಲ್ಲಿ ಬಿನ್ನಹ’ ಎಂಬ ಮೂರು ಪ್ರಬಂಧಗಳನ್ನು ಡಿ.ವಿ.ಜಿ. ಹೊಸದಾಗಿ ಸೇರಿಸಿದ್ದಾರೆ. ಪ್ರಸಿದ್ಧ ವಿದ್ವಾಂಸರಾಗಿದ್ದ ಡಾ. ಜಿ. ವರದರಾಜ ರಾಯರು ಈ ಕವಿತೆಗಳ ಹಳೆಗನ್ನಡ-ಸಂಸ್ಕೃತ ಶಬ್ದಗಳಿಗೆ ಶಬ್ದಾರ್ಥಕೋಶವೊಂದನ್ನು ಮಾಡಿರು ವುದು ವಿಶೇಷ. ನೃತ್ಯ -ಸಂಗೀತ ಕಲಾವಿದರಿಗೆ ಈ ಮೂರೂ ಪ್ರಬಂಧಗಳು ವಿಶೇಷವಾಗಿ ಉಪಯುಕ್ತ. ಆದರೆ ಹಾಗೆಯೇ ಕವಿತೆಗಳನ್ನು ಸುಮ್ಮನೆ ಓದಿ ಕೊಂಡಾಗಲೂ ಇವುಗಳನ್ನು ಓದಿಕೊಂಡಿದ್ದರೆ ಅವು ಆಸ್ವಾದನೆಯನ್ನು ಮತ್ತಷ್ಟು ಸಾಧ್ಯವಾಗಿಸುತ್ತವೆ.

ಡಿ.ವಿ.ಜಿ.ಯವರು ಇಡೀ ದೇವಸ್ಥಾನದ ಶಿಲ್ಪಕೃತಿಗಳನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಅವುಗಳ ವಿಶಿಷ್ಟತೆ ಯನ್ನೂ ರಸಾನುಭೂತಿಗೆ ಅನ್ವಯಿಸುತ್ತಾರೆ. ಮೊದಲನೆಯದು ಚಿತ್ರಾಲಂಕಾರ ಅಂತಸ್ತು. ವಿವಿಧ ಜೀವರಾಶಿಗಳು ಇಡೀ ಲೋಕವ್ಯಾಪಾರ ಇಲ್ಲಿದೆ. ನಮ್ಮ ಜೀವನದಲ್ಲಿರುವ ವಿವಿಧ ಪ್ರಭಾವಗಳ ಬಗ್ಗೆ ನಮ್ಮಲ್ಲಿ ಅರಿವನ್ನು ಇದು ಜಾಗೃತವಾಗಿಸುತ್ತದೆ. ಎರಡನೆಯ ಅಂತಸ್ತು ದೇವತಾಶ್ರೇಣಿ. ದಶಾವತಾರಾದಿ ಪುರಾಣದ ಕಥೆಗಳು, ಭಗವಂತನ ಲೀಲೆಗಳು ಭಕ್ತರಲ್ಲಿ
ಧ್ಯಾನವನ್ನು ಪ್ರಚೋದಿಸುತ್ತವೆ.

ರಸಿಕ ಪ್ರಪಂಚ
ಈ ಎರಡೂ ಅಂತಸ್ತುಗಳ ಮೇಲಿರುವುದು ರಸಿಕ ಪ್ರಪಂಚ. ಅದು ಭಾವಾನಂದಲೋಕ. ಇಲ್ಲಿರುವ ಮದನಿಕೆಯರ ಘೋಷಣೆಯೆಂದರೆ ‘ಭಾವಾನಂದ’. ‘ಶೃಂಗಾ ರೋಪಾಸನೆ’ ಯೇ ಇಲ್ಲಿಯ ಮುಖ್ಯ ಉದ್ದೇಶ. ‘ಸಾತ್ವಿಕ ಶೃಂಗಾರ’ ದಿಂದ ಜೀವಕ್ಕಾಗುವ ಪ್ರಯೋಜನಗಳನ್ನು ಡಿ.ವಿ.ಜಿ. ಇಲ್ಲಿ ಹೆಸರಿಸುತ್ತಾರೆ. ಶೃಂಗಾರವು ಹೇಗೆ ಜೀವನದಲ್ಲಿ ಕುತೂಹಲ-ಉತ್ಸಾಹ, ಹೃದಯ ವೈಶಾಲ್ಯ, ವಿವೇಕ, ಜೀವನದಲ್ಲಿ ಗಟ್ಟಿಯಾಗುವುದು ಇವುಗಳನ್ನು ಸಾಧ್ಯವಾಗಿಸುತ್ತದೆ ಎಂಬುದನ್ನು ತಾರ್ಕಿಕ ವಾಗಿ ವಿವರಿಸುತ್ತಾರೆ. ಅದು ‘ಜೇನುತುಪ್ಪದಂತೆ ಸ್ವಾದುವಾದ ಔಷಧ’ ಎನ್ನುತ್ತಾರೆ.

ಸಾಹಿತ್ಯ – ನೃತ್ಯಗಳಲ್ಲಿ ‘ಶೃಂಗಾರ’ ವನ್ನು ‘ರಸಗಳ ರಾಜ’ ಎನ್ನಲಾಗುತ್ತದೆಯಷ್ಟೆ. ಹಾಗಾಗಿಯೇ ‘ಅಂತಃಪುರಗೀತೆ’ಗಳನ್ನು ನೃತ್ಯ ಕಲಾವಿದರು ತಕ್ಷಣ ತಮ್ಮ
ಅಂತರಂಗಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚು. ಆದರೆ ನೃತ್ಯಕ್ಕೆ ಅಗತ್ಯವಾಗಿ ಬೇಕಾದ ಸಂಗೀತ ಸಂಯೋಜನೆ ಮಾಡುವಾಗ ಡಿ.ವಿ.ಜಿ. ಯವರ ಸೂಚನೆ ಗಳನ್ನು ಗಮನಿಸದೆ ಹೋದರೆ ಅದು ಅನ್ಯಾಯವೇ ಮಾಡಿದಂತೆ. ಅವರ ಮಾತುಗಳಲ್ಲೇ ಹೇಳಬಹುದಾದರೆ ‘ಈ ಗೀತೆಗಳಿಗೆ ಮುಖ್ಯವಾಗಿ ಬೇಕಾದ್ದು ಲಾಲಿತ್ಯ, ಪಾಂಡತ್ಯವಲ್ಲ. ಹೆಚ್ಚಿನ ಶಾಸ್ತ್ರಕಾರ್ಯಕ್ಕೆ ಇಲ್ಲಿ ಅವಕಾಶ ಸಾಲದು.

ಇಲ್ಲಿನ ಗೀತೆಗಳಲ್ಲಿ ಶಿಲ್ಪಿ ವಿಗ್ರಹದಲ್ಲಿ ಮೂಡಿಸಿರುವ ‘ರೂಪಭಾವ’, ಅಂಗ -ಭಂಗಿಗಳನ್ನು ಮಾತಿನ ಮೂಲಕ ಹೊರಡಿಸುವ ‘ವಾಕ್ಯ ಭಾವ’, ರಾಗ ಪ್ರವಾಹವನ್ನು ವ್ಯಕ್ತಪಡಿಸುವ ‘ಗಾನ ಭಾವ’ ಈ ಮೂರೂ ಹೊಂದಿಕೊಂಡು ಬರಬೇಕು’. ಅಷ್ಟೇ ಅಲ್ಲ ‘ಗೀತೆಯ ನುಡಿಗಳನ್ನು ಮತ್ತೆ ಮತ್ತೆ ಹಾಡಿ, ಬಾಯಿಪಾಠ ಮಾಡಿಕೊಂಡು, ನೆನಪಿನಿಂದಲೇ ಹಾಡಿದಾಗಲೇ ಅದು ‘ಸಂಗೀತ’ ಎನಿಸಿಕೊಳ್ಳುತ್ತದೆ’ ಎನ್ನುತ್ತಾರೆ. ಇವೆಲ್ಲವೂ ಡಿ.ವಿ.ಜಿ. ಹೇಳಿದ್ದು ‘ಅಂತಃಪುರ ಗೀತೆ’ಗಳ ಬಗೆಗಿರಬಹು
ದಾದರೂ ಸಂಗೀತ ರಚನೆಗಳಿಗೆಲ್ಲಕ್ಕೂ ಇವು ಅನ್ವಯವಾಗುವಂತಹವೇ.

ಪಾದಾಂಗುಳಿಯೇ ಮದನಿಕೆ
‘ಶೃಂಗಾರ’ ದ ಸಂಭ್ರಮವೇ ಇಲ್ಲಿಯ ಗೀತೆಗಳನ್ನು ವಿಶಿಷ್ಟವಾಗಿಸುತ್ತವೆ. ಸುಮಬಾಣ, ರತಿ ಮನ್ಮಥ, ಮನ್ಮಥನ ಬಗೆಗಿನ ಕವಿತೆಗಳು ನಾವು ‘ಕಾಮ’ ವನ್ನು ನೋಡುವ ದೃಷ್ಟಿಯನ್ನು ವಿಶಾಲವಾಗಿಸುತ್ತವೆ. ಶಿಲ್ಪವನ್ನು ನೋಡದೆ ಈ ಗೀತೆಗಳನ್ನು ಸವಿಯುವುದು ಕಷ್ಟ. ನರ್ತಿಸುವುದಂತೂ ಮತ್ತೂ ಕಷ್ಟ. ಉದಾಹರಣೆಗೆ ‘ಕಾಲುಂಗುರ ನೆವವೇ’ ಎಂಬ ಗೀತೆಯ ‘ಪಾದಾಂಗುಳೀಯೆ’ ಎಂಬ ಮದನಿಕೆಯನ್ನು ನೋಡೋಣ.

ತನ್ನ ಎಡ ಪಾದವನ್ನೆತ್ತಿ ನಿಂತಿರುವ ‘ಮದನಿಕೆ’ ಯನ್ನು ಕವಿ ‘ಕಾಲಂಗುರ ನೆನವೆ-ಚಾರು ವಾಮಾಂಗೆ ಚಾರೆಯುಂಗುರವನ್ನು’ ಎಂದು ಕೇಳುವಲ್ಲಿ ‘ಎಡಪಾದ’ ವನ್ನೆತ್ತಿರುವ ವಿಗ್ರಹ, ಕೆಳಗೆ ಪುಟ್ಟ ಸಖಿಯ ವಿಗ್ರಹ ಕಾಲುಂಗುರ ತೊಡಿಸುತ್ತಿರುವುದನ್ನು ಗಮನಿಸದಿದ್ದರೆ ಕವಿತೆಗೆ ನ್ಯಾಯವನ್ನು ಒದಗಿಸದಂತಾಗುವುದಿಲ್ಲ. ‘ಮುಕುರ ಮುಗ್ಧೆ’ – ‘ದರ್ಪಣ ಸುಂದರಿ’ ಎಂದು ಪ್ರಸಿದ್ಧವಾದ, ಅನ್ತಃಪುರ ಗೀತೆಯ ಮುಖಪುಟವಾಗಿರುವ ಜಗದ್ವಿಖ್ಯಾತ ಶಿಲಾಬಾಲಿಕೆಯನ್ನು ನೋಡಿದಾಗಲೂ ಅಷ್ಟೆ.

ಕನ್ನಡಿಗೂ ಶೃಂಗಾರಕ್ಕೂ ಇರುವ ಸಂಬಂಧ, ಶೃಂಗಾರದಲ್ಲಿ ಒಂದಾಗುವ ಪತಿ-ಪತ್ನಿಯರು-ಪ್ರಿಯತಮ-ಪ್ರಿಯತಮೆಯರು ತಾವೇ ಒಬ್ಬರಿಗೊಬ್ಬರು ‘ಕನ್ನಡಿ’ ಯಾಗಬೇಕಾದ ಅವಶ್ಯಕತೆಯನ್ನೂ ತನ್ನ ಕಲ್ಪನೆಯಲ್ಲಿ ಕಲಾವಿದೆ ವಿಸ್ತರಿಸಲು ಸಾಧ್ಯ. ಇದನ್ನೇ ಇನ್ನಷ್ಟು ಅಧ್ಯಾತ್ಮದ ಭಾಷೆಯಲ್ಲಿ ಹೇಳುವ ಡಿ.ವಿ.ಜಿ. ಕೊನೆಯ ಗೀತೆಯಲ್ಲಿ ಅದ್ವೈತಯೋಗ – ‘ಕೇಶವ ವೇದ’ ವನ್ನಾಗಿಸುತ್ತಾರೆ. ಆಸೆ, ಆಸೆ ಮೂಡಿಸುವವರು, ಆಸೆ ಪಡುವರು ಮೂರೂ ಒಂದೇ ಆಗುವುದು ‘ಶೃಂಗಾರ’ ದಿಂದ ಸಾಧ್ಯವೆನಿಸುತ್ತದೆ. ಕಳವಳ ಕಳೆದು ನೆಮ್ಮದಿಗೆ ದಾರಿಯಾಗುತ್ತದೆ!

ಅಂತಃಪುರ ಗೀತೆಗಳ ಅಂತರಂಗದಲ್ಲಿ ಶೃಂಗಾರವೂ ದೈವತ್ವಕ್ಕೇ ದಾರಿಯಾಗುತ್ತದೆ. ಪು.ತಿ.ನ. ಅವರ ರೀತಿ, ಡಿ.ವಿ.ಜಿ. ಯವರ ಕಾವ್ಯವೂ ಜೀವನ ಪ್ರೀತಿ ಯಿಂದ, ಜೀವನ ಶ್ರದ್ಧೆಯಿಂದ, ತೃಪ್ತ ಮನಸ್ಸಿನಿಂದ ಸೃಷ್ಟಿಯಾದದ್ದು. ಪ್ರೌಢಶಾಲೆ ಮುಗಿಸುವ ಹೊತ್ತಿಗಾಗಲೇ ಮದುವೆಯಾಗಿದ್ದ ಡಿ.ವಿ.ಜಿ.ಯವರು ‘ಗೃಹಸ್ಥ ಜೀವನವೇ ಒಂದು ಜೀವಶಿಕ್ಷಣ’ ಎಂಬುದನ್ನು ಸ್ವಾನುಭವದಿಂದಲೇ ಹೇಳಿರಬಹುದು. ಹಲವು ಕಷ್ಟಗಳ ನಡುವೆಯೂ ಜೀವನದ ವಿಮುಖತೆಯಿಂದಲ್ಲದೆ, ಜೀವನ ಪ್ರೀತಿಯಿಂದ ಕಾವ್ಯವು ಹುಟ್ಟುತ್ತದೆ ಎಂಬುದು ಗಮನಾರ್ಹ. ಅಂದ ಮೇಲೆ ಇಂಥ ಕಾವ್ಯದಿಂದ ಜೀವನಪ್ರೀತಿ -ಕಲಾಪ್ರೇಮ ಹುಟ್ಟುವುದರಲ್ಲಿ ಅಚ್ಚರಿ ಯೇನು!