ಲಹರಿ
ನಳಿಟಿ ಟಿ.ಭೀಮಪ್ಪ
ಅಂತೂ ಇಂತೂ ಆಟೋ ಸಿಕ್ಕಾಗ, ಟ್ವೆಂಟಿ-ಟ್ವೆಂಟಿಯಲ್ಲಿ ಆರ್‌ಸಿಬಿ ಗೆದ್ದಷ್ಟೇ ಖುಷಿ. ಹೊರಲಾರದೆ ಹೊತ್ತು ತಂದಿದ್ದ ತುಂಬಿದ ಚೀಲಗಳನ್ನು, ನಮ್ಮೆಲ್ಲರ ಸೋತು ಕಂಗೆಟ್ಟ ಮುಖವನ್ನು ಚಕ್ ಎಂದು ಸ್ಕ್ಯಾನ್ ಮಾಡಿ, ಇನ್ನೂರೈವತ್ತು ಎಂದ ಆಟೋ ಡ್ರೈವರ್!
ಇತ್ತೀಚೆಗೆ ಬೆಂಗಳೂರಿಗೆ ಹೋದಾಗ, ಚಿಕ್ಕಪೇಟೆಗೆ ಹೋಗಿ ಚೆನ್ನಾಗಿ ಶಾಪಿಂಗ್ ಮಾಡಿ ಬರೋಣ ಬನ್ನಿ ಎಂದು ತಂಗಿ ಹಾಗೂ ತಮ್ಮನ ಹೆಂಡತಿಯನ್ನು ಕರೆದೆ. ನಮ್ಮ ರಾಜಾಜಿನಗರದಿಂದ ಚಿಕ್ಕಪೇಟೆ ಹತ್ತಿರ ಇರುವು ದರಿಂದ ಆಟೋದಲ್ಲಿ ಹೋಗುವುದು ಸುಲಭ, ಅಲ್ಲಿಂದ ಬರುವುದೇ ತಲೆನೋವು ಎಂದು ಅವರಿಬ್ಬರು ತಲೆತಿವಿದು ಹೇಳಿದರೂ ತಲೆಗೆ ಹೋಗಿರಲಿಲ್ಲ. ಜೊತೆಗೆ ಅಲ್ಲಿಗೆ ಹೋದ ಮೇಲೆ ಒಂದು ದಿನ ಪೂರ್ತಿ ಹೋಗುತ್ತದೆ ಎಂದಾಗ, ಬೇಗ ಬೇಗ ಖರೀದಿ ಮಾಡಿ ಬಂದುಬಿಡೋಣ, ಟೈಮ್ ವೇಸ್ಟ್ ಮಾಡೋದೇ ಬೇಡಾ, ಹತ್ತಿರವಿದ್ದರೆ ಇನ್ನೂ ಒಳ್ಳೆಯದಲ್ವ ಎಂದಾಗ ಅವರು ಕನಿಕರದಿಂದ ನನ್ನೆಡೆಗೆ ನೋಡಿದ್ದರು.
ಸರಿ ರಾಜಾಮಾರ್ಕೆಟ್ ಎಂದು ಹೇಳಿ ಆಟೋದಲ್ಲಿ ಕುಳಿತು ಅಲ್ಲಿ ತೆಗೆದುಕೊಳ್ಳಬೇಕಾದ ಬಟ್ಟೆ, ಫ್ಯಾನ್ಸಿ ಒಡವೆ, ಗಿಫ್ಟ್ ಎಲ್ಲ ಲೆಕ್ಕಾಚಾರ ಹಾಕಿಕೊಂಡು ಕೂತಿದ್ದೆ. ಕೇವಲ ಹತ್ತೇನಿಮಿಷದಲ್ಲಿ ರಾಜಾಮಾರ್ಕೆಟ್‌ನಲ್ಲಿ ಇಳಿಸಿದ. ಆಟೋ ಮೀಟರ್ ಬರೀ ಅರವತ್ತು ತೋರಿಸಿದಾಗ, ಅಬ್ಬಾ ನಮ್ಮೂರಲ್ಲಿ ಇಷ್ಟು ದೂರಕ್ಕೆ ಕನಿಷ್ಟ ನೂರರಿಂದ ನೂರಿಪ್ಪತ್ತು ರೂಪಾಯಿಯಾದರೂ ಕೇಳುತ್ತಿದ್ದರು, ಬೆಂಗಳೂರಿನಲ್ಲಿ ಇಷ್ಟು ಕಡಿಮೆಯಾ ಎಂದು ಖುಷಿ ಖುಷಿಯಿಂದಲೇ ಕೊಟ್ಟಿದ್ದೆ.
ಅಲ್ಲಿಂದ ಚಿಕ್ಕಪೇಟೆಯ ಒಳಗೆ ನಡೆದುಕೊಂಡು ಹೋಗುವಾಗ ಜನಸಾಗರವನ್ನು ನೋಡಿ ಗಾಬರಿಯಾಗಿತ್ತು. ಅದರಲ್ಲೂ ಎಂತೆಂತಹ ಮಾಡರ್ನ್ ಡ್ರೆಸ್ ಹಾಕಿದ ಕೆಲವರು ಹಳ್ಳಿಯ ಜನ ಸಂತೆಯ ಸಾಮಾನಿನ ಗಂಟನ್ನು ತಲೆಯ ಮೇಲಿಟ್ಟುಕೊಳ್ಳುವ ಹಾಗೊಂದು, ಕಾಂಗರೂ ರೀತಿ ಹೊಟ್ಟೆಯ ಮುಂದೊಂದು ಚೀಲ ಮತ್ತು ಸಾಮಾನುಗಳನ್ನು ಹೊತ್ತು ತರುವುದನ್ನು ನೋಡಿದ ನನಗೆ, ಅಲ್ಲಲ್ಲಿ ನಿಂತಿದ್ದ ಆಟೋಗಳಲ್ಲಿ ಹತ್ತಿ ಹೋದರಾಯ್ತಪ್ಪ, ಅದ್ಯಾಕೆ ಇಷ್ಟಿಷ್ಟರಲ್ಲೇ ಉಳಿಸಿ ಜೋಕರ್ ತರಹ ಹೊತ್ತುಕೊಂಡು ಹೋಗುತ್ತಾರೋ ಎಂದು ಮನಸೊಳಗೇ ನಕ್ಕಿದ್ದೆ. ನಮ್ಮದೂ ಶಾಪಿಂಗ ಶುರುವಾಯಿತು ನೋಡಿ. ಅದೆಷ್ಟು ರಶ್ಸು ಎಂದರೆ, ಆಮೆಯಂತೆ ಕೈಕಾಲು ಎಲ್ಲ ಮುದುರಿಕೊಂಡು ಹೋಳು ಮಗ್ಗುಲಾಗಿ ಅಕ್ಕ ಪಕ್ಕ, ಹಿಂದೆ ಮುಂದೆ ಜನರನ್ನು ಭುಜಕ್ಕೆ ಭುಜ ತಾಗಿಸುತ್ತ ಸವರುತ್ತಲೇ ಸಾಗಬೇಕು.
ಆದರೆ ಚಿಕ್ಕಪೇಟೆಯೆಂಬ ಮಾಯಾಂಗನೆಯಲ್ಲಿ ಸಿಗದ ಸಾಮಾನುಗಳೇ ಇಲ್ಲ ಎನ್ನಬಹುದು. ಇದನ್ನು ಕೊಳ್ಳೋದಾ, ಅದನ್ನು ಕೊಳ್ಳೋದಾ ಎಂದು ನಿರ್ಧರಿಸಲಾಗದೆ, ಎಲ್ಲವನ್ನೂ ಕೊಂಡಿದ್ದಾಯ್ತು. ಪುಣ್ಯಕ್ಕೆ
ಜಿಪೇ, ಫೋನ್‌ಪೇ ಇರುವುದರಿಂದ ಹಣ ಪಾವತಿಸಲು ತುಂಬ ಅನುಕೂಲ. ಹಣ ಕಾಯುವ ಗೊಡವೆ ಇಲ್ಲ, ಮೊಬೈಲ್ ಒಂದನ್ನು ಸರಿಯಾಗಿ ಕಾದರೆ ಸಾಕು. ಇದರಲ್ಲಿ ಲಕ್ಷಗಟ್ಟಲೆ ಹಣ ಸೋಯ್ ಅಂತಾ ಖರ್ಚಾದರೂ ಏನೇನೂ ಸಂಕಟವಾಗುವುದಿಲ್ಲ. ಮೆಸೇಜುಗಳೆಲ್ಲ ಗಂಡನ ಫೋನಿಗೆ ಹೋಗುವುದರಿಂದ ಅವರಿಗೆ ಎದೆಬಡಿತ ಹೆಚ್ಚಾಗುತ್ತಿರುತ್ತದೆ ಬಿಡಿ. ಅದೇ, ನಮ್ಮ ಕೈಯ್ಯಿಂದ ಸಾವಿರ ರೂಪಾಯಿ ನೋಟುಗಳನ್ನು ಎಣಿಸಿ ಕೊಡುವಾಗ ಹೊಟ್ಟೆಯೆಲ್ಲ ಉರಿಯುತ್ತಿರುತ್ತದೆ.
ಸಂಜೆಯ ತನಕ ಎಲ್ಲ ಕಡೆ ಓಡಾಡಿ ಕೊಳ್ಳುವ ಹೊತ್ತಿಗೆ ಒಬ್ಬೊಬ್ಬರ ಕೈಯ್ಯಲ್ಲೂ ದೊಡ್ಡ ದೊಡ್ಡ ಎರಡು ಬ್ಯಾಗುಗಳು. ಇದರ ನಡುವೆಯೇ ಹೊಟ್ಟೆ ಹಸಿದಿದ್ದರಿಂದ ಅಲ್ಲೇ ಕಿರುಬೆರಳಿನ ಗಾತ್ರದ ಸಂದಿಯಲ್ಲಿ ಬಿಸಿಬಿಸಿ ಜಾಮೂನು, ದಹಿವಡಾ ಆರ್ಡರ್ ಮಾಡಿ, ಹೋಗುವವರು, ಬರುವವರು ತಿನ್ನುತ್ತಿದ್ದ ನಮ್ಮ ಮೊಣಕೈಯ್ಯನ್ನು ಪುಶ್ ಪುಲ್ ತರಹ ತಳ್ಳುತ್ತಲೇ ಇರುವುದರ ನಡುವೆ, ನಿಂತಲ್ಲೇ ಸರ್ಕಸ್ ಮಾಡುತ್ತ ತಿಂದಿದ್ದಾಯಿತು. ಅಲ್ಲೇ ಪಕ್ಕದಲ್ಲಿ ಸ್ಟೂಲ್‌ಕೆಳಗೆ ಕೈಕಾಲು ಹೊರಚಾಚಿ ಮಲಗಿದ್ದ ನಾಯಿಯನ್ನು ತುಳಿದು, ಅದು ನೋವಿನಿಂದ ಜೋರಾಗಿ ಬೊಗಳಿ ಕಚ್ಚಬೇಕೆಂದರೂ ಹೊರಬರಲು ಸಾಧ್ಯವಾಗದಷ್ಟು ಸ್ಥಳಾಭಾವ ಇದ್ದುದರಿಂದ ಬಚಾವ್. ಹಾಗೆ ನಡೆಯುತ್ತಲೇ ಎಲ್ಲಿ ಒಬ್ಬರಿಗೊಬ್ಬರು ತಪ್ಪಿಸಿಕೊಂಡು ಹೋಗುತ್ತೇವೆಯೋ ಎನ್ನುವ ಭಯದಲ್ಲೇ ಇರುವಂತಾಗಿತ್ತು.
ಫೋನ್ ಕಿವಿಗಿಡುವುದಿರಲಿ, ಕೈಯ್ಯಲ್ಲಿ ಹತ್ತಾರು ಕವರ್‌ಗಳನ್ನು ಹಿಡಿದು ಹಗ್ಗದ ಮೇಲಿನ ನಡಿಗೆಯ ರೀತಿ ಜನಗಳ ನಡುವೆ ಬ್ಯಾಲೆನ್ಸ್ ಮಾಡುತ್ತಿದ್ದುದರಿಂದ, ವ್ಯಾನಿಟಿ ಬ್ಯಾಗಿನಿಂದ ಹೊರತೆಗೆಯುವುದೇ ದುಸ್ತರ ವಾಗಿತ್ತು. ಇನ್ನು ಕಾಲ್ ಗೀಲ್ ಬಂದರೆ ಕೇಳಿಸುವುದಂತೂ ಅಸಾಧ್ಯ. ಅಕಸ್ಮಾತ್ ಕೇಳಿಸಿದರೂ ಚಲ್ ಹಟ್ ಆಮೇಲೆ ನೋಡಿದರಾಯ್ತು ಎನ್ನುವ ಭಾವ. ಮಾಡಿದವರು ಅದೆಷ್ಟು ಬೈಯ್ದುಕೊಂಡರೋ ಅಂದು
ಯಾರಿಗ್ಗೊತ್ತು. ಕೊನೆಗೆ ಒಂದು ಅಂಗಡಿಯಲ್ಲಿ ದೊಡ್ಡ ಗೋಣೀಚೀಲದಂತಹ ಚೀಲವನ್ನು ಇಸ್ಕೊಂಡು, ಅದರಲ್ಲಿ ಕೋಳಿಗಳನ್ನೆಲ್ಲ ಬುಟ್ಟಿಯೊಳಗೆ ಹಾಕಿ ಮುಚ್ಚುವ ಹಾಗೆ, ಚಿಕ್ಕ ಪುಟ್ಟ ಕವರ್‌ಗಳನ್ನೆಲ್ಲ ಅದರೊಳಗೆ ಹಾಕಿ, ಬಿಗಿಯಾಗಿ ದಾರ ಕಟ್ಟಿ ಬಾಯಿ ಬಂದ್‌ಮಾಡಿ ಎರಡು ದೊಡ್ಡ ದೊಡ್ಡ ಚೀಲಗಳನ್ನು ಹೊತ್ತು ನಡೆದಿದ್ದಾಯ್ತು.
ಕಾಲು, ಕೈ ಎಲ್ಲ ನೋವು ಬಂದು ಅಲ್ಲಲ್ಲಿ ನಿಂತಿರುವ ಆಟೋಗಳನ್ನೆಲ್ಲ ರಾಜಾಜಿನಗರ ಬರ‍್ತೀಯೇನಪ್ಪಾ ಎಂದರೆ, ಮದುವೆಗೆ ಹೆಣ್ಣು ನೋಡಲು ಹೋದಾಗ, ಕನ್ಯಾ ಒಪ್ಪಿಗೆ ಆಗದಿದ್ದವರಂತೆ ನಮ್ಮ ಲೋಕೇಷನ್ ಕೇಳಿ ತಲೆತಿರುಗಿಸುವವರೇ. ಮೀಟರ್ ಮೇಲೆ ಅಷ್ಟು ಕೊಡ್ತೀವಿ, ಇಷ್ಟು ಕೊಡ್ತೀವಿ ಅಂದ್ರೂ ತಾರಮ್ಮಯ್ಯ ಎಂದು ಕೈಯಾಡಿಸಿಬಿಟ್ಟರು. ಓಲಾ, ಊಬರ್ ಯಾರೂ ಅಷ್ಟು ಹತ್ತಿರದ ಲೋಕೇಶನ್‌ಗೆ ಅಕ್ಸೆಪ್ಟ್ ಮಾಡಲೇ
ಇಲ್ಲ. ಆಟೋಗಾಗಿ ಅಲ್ಲಲ್ಲಿ ಅಡ್ಡ ಸಿಗುತ್ತಿದ್ದ ಪೋಲೀಸರ ಸಹಾಯ ಪಡೆದರೆ ಹೇಗೆ ಎನ್ನುವ ಹುಂಬ ಪ್ರಶ್ನೆಯನ್ನು ಅವರ ಮುಂದಿಟ್ಟೆ. ‘ಅಯ್ಯೋ, ಪೋಲೀಸರು ಹತ್ತಿಸಿದಾಗ ಸುಮ್ಮನೆ ಹತ್ತಿಸಿಕೊಳ್ಳುತ್ತಾರೆ, ಒಂದಷ್ಟು ದೂರ ಕರೆದುಕೊಂಡು ಹೋಗಿ, ನಮಗೆ ಬೇರೆ ಕೆಲಸ ಇದೆ ಇಳಿದುಕೊಳ್ಳಿ ಎಂದು ಇಳಿಸಿಬಿಡುತ್ತಾರೆ’ ಎಂದಾಗ ಪೆಚ್ಚಾಗಿದ್ದೆ.
ಚೀಲಗಳನ್ನು ಹಿಡಿದು ಕೈ ಸೋತು ಕೊನೆಗೆ ಎಲ್ಲರೂ ತಲೆಯ ಮೇಲೆ, ಹೊಟ್ಟೆಯ ಮುಂದೆ ಹಿಡಿದು ‘ಎಲ್ಲೀ ನಮ್ಮ ಆಟೋಮರಿಯು..’ ಎಂದು ಅರಸುತ್ತಾ, ಕನಿಷ್ಟ ಐವತ್ತು ಆಟೋಗಳನ್ನಾದರೂ ವಿಚಾರಿಸಿ, ಹೆಚ್ಚೂ ಕಡಿಮೆ ಒಂದು ಕಿಲೋಮೀಟರ್‌ನಷ್ಟು ನಡೆದು ಮಾರ್ಕೆಟ್‌ನಿಂದ ಹೊರಗೆ ಬಂದಿದ್ದೆವು. ಮತ್ಯಾವುದೋ ಒಂದು ಫ್ಯಾಮಿಲಿ ಕೊಂಡ ಸಾಮಾನುಗಳನ್ನೆಲ್ಲ ತಳ್ಳುಗಾಡಿಯಲ್ಲಿ ದೂಡಿಸಿಕೊಂಡು ಬಂದು ಕಾರಿಗೆ ಸಾಗಿಸಿ ದ್ದನ್ನು ನೋಡಿ ಬುದ್ಧಿವಂತರೆನಿಸಿದ್ದು ಸುಳ್ಳಲ್ಲ. ಕೊನೆಯಲ್ಲಿ ಒಬ್ಬ ಆಟೋದವರಾದರೂ ಬರಲು ಒಪ್ಪಿದರೆ ಸಾಕಪ್ಪಾ ಎನ್ನುವಷ್ಟು ಸುಸ್ತಾಗಿ, ದೇವರಿಗೆ ಹರಕೆ ಹೊರುವುದಷ್ಟೇ ಬಾಕಿಯಿತ್ತು.
ಅಂತೂ ಇಂತೂ ಆಟೋ ಸಿಕ್ಕಾಗ, ಟ್ವೆಂಟಿ-ಟ್ವೆಂಟಿಯಲ್ಲಿ ಆರ್ ಸಿಬಿ ಗೆದ್ದಷ್ಟೇ ಖುಷಿಯಾಗಿತ್ತು. ಹೊರಲಾರದೆ ಹೊತ್ತು ತಂದಿದ್ದ ತುಂಬಿದ ಚೀಲಗಳನ್ನು, ನಮ್ಮೆಲ್ಲರ ಸೋತು ಕಂಗೆಟ್ಟ ಮುಖವನ್ನು ಚಕ್ ಎಂದು ಸ್ಕ್ಯಾನ್ ಮಾಡಿ, ಇನ್ನೂರೈವತ್ತು ಎಂದ. ಮಾರಾಯ ಸದ್ಯ ಒಪ್ಪಿದ್ನಲ್ಲ ಎಂದು ಸರಕ್ ಅಂತ ತೂರಿ ಕುಳಿತುಬಿಟ್ಟೆವು. ಅಂತೂ ಮನೆಗೆ ಬರುವಷ್ಟರಲ್ಲಿ ಸುಸ್ತೋಸುಸ್ತು. ಮನೆಗೆ ಬಂದ ನಂತರವೇ ಗೊತ್ತಾಗಿದ್ದು, ಅದ್ಯಾರೋ ಸಂಬಂಧಿಕರು ಮದುವೆಗೆ ಕರೆಯಲು ಬಂದು, ನಮ್ಮ ಬರುವಿಕೆಗಾಗಿ ಶಬರಿ ಕಾಯುವಂತೆ ಕಾದು, ನಿರಾಶರಾಗಿ ವಾಪಾಸು ಹೋಗಿದ್ದು. ಅದಕ್ಕಾಗಿಯೇ ನಮ್ಮ ಮೂರೂ ಜನರ ಮೊಬೈಲ್‌ಗಳಲ್ಲಿ ಅಸಂಖ್ಯಾತ ಮಿಸ್ ಕಾಲ್‌ಗಳು ದಾಖಲಾಗಿದ್ದು ಎಂದು ಗೊತ್ತಾಯಿತು. ಬಾಯಿಬಿಟ್ಟರೆ ಬಣ್ಣಗೇಡು ಎಂದು ಸುಮ್ಮನೆ ಬೈಸಿಕೊಂಡಿದ್ದಾಯ್ತು.
ಮತ್ತೆ ಚಿಕ್ಕಪೇಟೆಯ ಕಡೆ ತಲೆ ಹಾಕಿ ಮಲಗಿದರೆ ಕೇಳಿ ಎಂದಿದ್ದೆ. ರಾತ್ರಿಯೆಲ್ಲ, ಅಯ್ಯೋ ಆ ಸಾಮಾನು ತೊಗೋಬೇಕಿತ್ತು, ಈ ಸಾಮಾನು ಬಿಟ್ಟು ಬರಬಾರದಾಗಿತ್ತು ಎಂದೆಲ್ಲ ತಲೆಯಲ್ಲೇ ಮತ್ತೊಂದು ಹೊಸ ಪಟ್ಟಿ ಸಿದ್ಧವಾಗಿತ್ತು. ಮಾರನೆಯ ದಿನ ಎಲ್ಲರಿಗಿಂತ ಮುಂಚೆ ಮತ್ತೊಮ್ಮೆ ಶಾಪಿಂಗ್‌ಗೆ ತಯಾರಾಗಿದ್ದವಳನ್ನು ಎಲ್ಲರೂ ಅಚ್ಚರಿಯಿಂದ ನೋಡತೊಡಗಿದರು.