ಹೊಸ ಕಥೆ
ವಿಶ್ವನಾಥ ಎನ್.ನೇರಳಕಟ್ಟೆ
ಆ ಹುಡುಗನ ಮನೆಯಲ್ಲೇ ತಯಾರಿಸಿದ ಒಂದು ಮುಷ್ಟಿ ಅವಲಕ್ಕಿ ತಿನ್ನುವ ಕನಸು ಅದೇಕೆ ನನಸಾಗಲಿಲ್ಲ!
ಎರಡು ತಿಂಗಳುಗಳ ಹಿಂದಿನಿಂದ ಅಂದಾಜಿಸಿದಂತೆಯೇ ಅಪ್ಪನಿಗೆ ದೂರದೂರಿಗೆ ವರ್ಗಾವಣೆ ಆದಾಗ ನನಗಂತೂ ಭರಪೂರ
ನಿರಾಸೆಯಾಗಿತ್ತು. ಆಗ ನಾನು ಮೂರನೇ ತರಗತಿ ಪಾಸಾಗಿದ್ದೆ.
ಕಳೆದೆರಡು ಬಾರಿ ವರ್ಗಾವಣೆಯಾದಾಗ ಸಂತಸದಿಂದಲೇ ಅಪ್ಪ- ಅಮ್ಮನ ಜೊತೆ ಹೊರಟುಬಂದಿದ್ದ ನನಗೆ ಈ ಸಲವಂತೂ
ಹಾಗೆಯೇ ಹೊರಟು ನಿಲ್ಲುವ ಮನಸ್ಸಿರಲಿಲ್ಲ. ಐದಾರು ಕಿಲೋಮೀಟರ್ಗಳ ಅಂತರದಲ್ಲಿ ಇದ್ದ ಅಜ್ಜಿಮನೆ, ಅಲ್ಲಿ ಪ್ರತಿ
ಸಂಜೆಯ ಆಟಕ್ಕೆ ಬರುತ್ತಿದ್ದ ಮಾವನ ಮಗ ಸಂತೋಷ, ಅವರ ಮನೆಯ ಬೆಳ್ಳಿಚುಕ್ಕೆಯ ಹೆಂಗರು, ಕಾಣುವುದಕ್ಕೆ ಸಿಂಹ
ದಂತಿದ್ದೂ ಮೃದು ಮನಸ್ಸಿನ ಟೈಗರ್ ನಾಯಿ- ಇವೆಲ್ಲವೂ ನನ್ನನ್ನು ಕಟ್ಟಿಹಾಕಿಟ್ಟ ಸಂಗತಿಗಳಾಗಿದ್ದವು.
ಆದರೂ ಅಪ್ಪ- ಅಮ್ಮನೊಡನೆ ಹೊರಡದೇ ಬೇರೆ ಆಯ್ಕೆ ಇರಲಿಲ್ಲ. ಅಳುಮೋರೆ ಮಾಡುತ್ತಲೇ ಅಜ್ಜ, ಅಜ್ಜಿ, ಮಾವ, ಅತ್ತೆ, ಸಂತೋಷನಿಗೆ ಟಾಟಾ ಮಾಡುತ್ತಾ, ಊರಿಗೆ ವಿದಾಯ ಹೇಳಿದ್ದೆ. ನಾವು ಹೊಸದಾಗಿ ಸೇರಿಕೊಂಡ ಊರು ಕುಗ್ರಾಮ ವಾಗಿತ್ತು. ಮೂಲಭೂತ ಸೌಲಭ್ಯಗಳಿರಲಿಲ್ಲ. ಕುಟುಂಬದವರಿಗೆಬರೆದ ಕಾಗದವನ್ನು ಪೋಸ್ಟ್ ಮಾಡಬೇಕಾದರೆ ಪಕ್ಕದ ಊರಿಗೆ ಹೋಗ ಬೇಕಿತ್ತು. ದೂರವಾಣಿ, ದೂರದರ್ಶನಗಳ ಸೌಲಭ್ಯವಂತೂ ಇಲ್ಲವೇ ಇಲ್ಲ. ಈ ಮೊದಲು ಪ್ರತೀ ಭಾನುವಾರ ಅಜ್ಜಿಮನೆ ಯಲ್ಲಿದ್ದ ಟಿ.ವಿ.ಯಲ್ಲಿ ಸಿನಿಮಾ ನೋಡುತ್ತಿದ್ದ ನನಗೆ ಈಗ ಭಾನುವಾರದ ಸಂಜೆ ಕಳೆಯಲು ಅಸಾಧ್ಯವೆನಿಸುವಷ್ಟು ದೀರ್ಘವಾಗಿತ್ತು.
ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರನ್ನು ಹಿಂದಿನ ದಿವಸವೇ ಮಾತಾಡಿಸಿ ಬಂದಿದ್ದ ಅಪ್ಪ ಮರುದಿನ ಬೆಳಗ್ಗೆ
ಹತ್ತೂವರೆಯ ಸುಮಾರಿಗೆ ನಾಲ್ಕನೆಯ ತರಗತಿಯಲ್ಲಿ ನನ್ನನ್ನು ಕುಳ್ಳಿರಿಸಿ, ತರಗತಿಯಲ್ಲಿದ್ದ ಶಿಕ್ಷಕಿಗೆ ಕೈಮುಗಿದು ಅವರ
ಹೈಸ್ಕೂಲಿಗೆ ಹೆಜ್ಜೆ ಹಾಕಿದ್ದರು. ನನ್ನ ಸುತ್ತಮುತ್ತ ಇದ್ದ 15-18 ಮಕ್ಕಳು ನನ್ನನ್ನೇ ನೋಡುತ್ತಿದ್ದರು. ಅನ್ಯಗ್ರಹ ಜೀವಿಯನ್ನು
ವೀಕ್ಷಿಸುವ ಕುತೂಹಲ ಆ 30-36 ಕಣ್ಣುಗಳಲ್ಲಿದ್ದವು. ಶಿಕ್ಷಕರು ಆಸಕ್ತಿಯಿಂದ ಪಾಠ ಬೋಧಿಸುತ್ತಿದ್ದರು.
ನನಗೆ ಏನೆಂದರೆ ಏನೂ ಅರ್ಥವಾಗುತ್ತಿರಲಿಲ್ಲ. ಸ್ವಭಾವತಃ ಅಂತರ್ಮುಖಿಯಾಗಿದ್ದ ನನಗೆ ತರಗತಿಯ ಒಬ್ಬ ವಿದ್ಯಾರ್ಥಿ ಯೊಂದಿಗೂ ಮಾತನಾಡುವುದಕ್ಕೆ ಸಾಧ್ಯವಾಗಲಿಲ್ಲ. ಆ ಸಂಜೆ ಮುಖ ಬಾಡಿಸಿಕೊಂಡೇ ಅಪ್ಪನ ಕೈಹಿಡಿದುಕೊಂಡು ಮನೆಗೆ
ಹೋದೆ. ಹೀಗೆಯೇ ದಿನಗಳು ಕಳೆಯುತ್ತಿದ್ದವು. ಅಪರಿಚಿತ ಶಾಲೆಗೆ, ತರಗತಿಗೆ, ಅಲ್ಲಿದ್ದ ವಿದ್ಯಾರ್ಥಿಗಳಿಗೆ ಒಗ್ಗಿಕೊಂಡಿದ್ದೆ. ಗುರುವಪ್ಪ ಎನ್ನುವ ಹುಡುಗ ನನ್ನ ಸ್ನೇಹಿತನಾದ. ಶಾಲೆಗೆ ಸೇರದೇ ತಿರುಗಾಡುತ್ತಿದ್ದ ಆತ ಶಿಕ್ಷಕರ ಒತ್ತಾಯದ ಮೇರೆಗೆ ಶಾಲೆ
ಸೇರಿಕೊಂಡಿದ್ದ. ಆತ ನನಗಿಂತ ಮೂರು ವರ್ಷ ದೊಡ್ಡವನು.
ನನಗೆ ಆತ ಸ್ನೇಹಿತನಾದದ್ದು ಆಕಸ್ಮಿಕವೇ. ನನ್ನ ಪಕ್ಕದಲ್ಲಿ ಕುಳಿತು ಕೊಳ್ಳುವ ದಾಮೋದರ ಎನ್ನುವ ಹುಡುಗನ ಬ್ಯಾಗಿನಲ್ಲಿದ್ದ
ಪೆನ್ಸಿಲ್ ಕಳೆದುಹೋಗಿತ್ತು. ಅವನ ಸಮೀಪದಲ್ಲಿ ಕುಳಿತ ತಪ್ಪಿಗೆ ಆರೋಪ ನನ್ನ ಮೇಲೆ ಬಂದಿತ್ತು. ‘ಮೇಷ್ಟ್ರ ಮಗನಾಗಿ ಕಳ್ಳತನ
ಮಾಡುತ್ತೀಯಾ? ಇರು ನಿನ್ನ ತಂದೆಗೆ ಹೇಳುತ್ತೇನೆ’ ಎಂದು ಜೋರು ಮಾಡುತ್ತಿದ್ದ ಟೀಚರ್ ಮಾತಿಗೆ ಹೆದರಿ ನನ್ನ ಗಂಟಲು
ಕಟ್ಟಿಹೋಗಿತ್ತು. ನಾನು ಸುಮ್ಮನೆ ಕುಳಿತು ಭಯಪಡುತ್ತಿದ್ದುದನ್ನು ಕಂಡ ಟೀಚರ್ ನಾನೇ ತಪ್ಪಿತಸ್ಥನೆಂದು ನಿರ್ಧರಿಸಿಯೂ ಆಗಿತ್ತು.
ಅಷ್ಟರಲ್ಲಿ ಈ ಗುರುವಪ್ಪ ಹೇಳಿದ ‘ಅವನಲ್ಲ ಟೀಚರ್ ಕದ್ದದ್ದು. ಗಣೇಶ ಕದ್ದದ್ದು. ನಾನು ನೋಡಿದ್ದೇನೆ’ ಎಂಬ ಮಾತು
ನನ್ನನ್ನು ಬಚಾವ್ ಮಾಡಿತ್ತು. ಹೀಗೆ ನನ್ನನ್ನು ಉಳಿಸಿದ ಗುರುವಪ್ಪ ನನಗೆ ತುಂಬಾ ಮೆಚ್ಚುಗೆಯಾಗಿದ್ದ. ನನ್ನ ಮತ್ತು ಅವನ ಸ್ನೇಹ ಬೆಳೆಯಿತು.. ಅವನ ತಂದೆ ಭೈರ ನಮ್ಮ ಮನೆಯ ಕೂಲಿ ಕೆಲಸಕ್ಕೆ ಆಗಾಗ ಬರುತ್ತಿದ್ದ. ಶಾಲೆಯಲ್ಲಿ ನನ್ನ ಜತೆಗೇ
ಆಡುತ್ತಿದ್ದ ಗುರುವಪ್ಪ ನಮ್ಮ ಮನೆಗೆ ಬಂದರೆ ಅಂಗಳ ದಾಟಿ ಈಚೆ ಕಾಲಿಡುತ್ತಿರಲಿಲ್ಲ. ಅವನ ಜೊತೆಗೆ ಬೆರೆಯದಂತೆ
ನನ್ನಮ್ಮನೂ ತಡೆಯುತ್ತಿದ್ದರು. ಯಾಕೆ ಹೀಗೆ ಎನ್ನುವುದು ನನಗೆ ಅರ್ಥವಾಗುತ್ತಿರಲಿಲ್ಲ.
ಅವನೊಮ್ಮೆ ಬೇಸರದಿಂದ ಮುಖ ಚಿಕ್ಕದು ಮಾಡಿಕೊಂಡ ದಿನ ನನಗಿವತ್ತೂ ನೆನಪಿದೆ. ಅಂದು ನಮ್ಮ ಮನೆಯಲ್ಲಿ ಬೆಳಗ್ಗೆಯೇ ಸಿಹಿ ಅವಲಕ್ಕಿ ಮಾಡಿದ್ದರು. ಮಧ್ಯಾಹ್ನ ಊಟಕ್ಕೆ ಮನೆಗೆ ಹೋಗುತ್ತಿದ್ದೆ. ಅಂದು ಸಂಬಂಧಿಕರೊಬ್ಬರ ಮದುವೆಗೆ ಅಪ್ಪನೂ ಅಮ್ಮನೂ ಹೋದದ್ದರಿಂದ, ನನ್ನ ಕೈಯ್ಯಲ್ಲಿ ಊಟದ ಬುತ್ತಿಯನ್ನಿರಿಸಿ ಶಾಲೆಗೆ ಕಳುಹಿಸಿದ್ದರು. ಬೆಳಗ್ಗೆ ಮಾಡಿದ್ದ ಸಿಹಿ
ಅವಲಕ್ಕಿ ಬುತ್ತಿಯಲ್ಲಿತ್ತು. ಮಧ್ಯಾಹ್ನ ಶಾಲೆಯ ವರಾಂಡದಲ್ಲಿ ಕುಳಿತವನು ಉಳಿದ ಮಕ್ಕಳಂತೆಯೇ ಬುತ್ತಿ ಬಿಚ್ಚಿ ಊಟಕ್ಕೆ
ಸಿದ್ಧನಾದೆ. ಒಂದು ಮುಷ್ಟಿ ಅವಲಕ್ಕಿ ತೆಗೆದು ಇನ್ನೇನು ಬಾಯೊಳಗೆ ಇರಿಸಬೇಕು, ಗುರುವಪ್ಪ ಕೈ ಚಾಚಿದ.
ನಾನೂ ಕೊಟ್ಟೆಬಿಡುತ್ತಿದ್ದೆನೇನೋ, ಅಮ್ಮ ಬೆಳಗ್ಗೆ ಹೇಳಿದ ಮಾತು ನೆನಪಾಯಿತು- ‘ನೀನೊಬ್ಬನೇ ತಿನ್ನು. ಆ ಗುರುವಪ್ಪ ಕೇಳಿದರೆ ಕೊಡುವುದಕ್ಕೆಲ್ಲಾ ಹೋಗಬೇಡ. ಅವಕ್ಕೆಲ್ಲಾ ಇಂತಹ ಆಹಾರ ತಿನ್ನುವ ಯೋಗ್ಯತೆಯೆಲ್ಲಿದೆ?’ ಗುರುವಪ್ಪನೆಡೆಗೆ ಚಾಚಿದ್ದ ನನ್ನ ಕೈ ಹಿಂದಕ್ಕೆ ಮರಳಿ ಬಂತು. ‘ಇಲ್ಲ, ನಿನಗೆ ಕೊಟ್ಟರೆ ನನಗೆ ಸಾಕಾಗುವುದಿಲ್ಲ’ ಗುರುವಪ್ಪನಲ್ಲಿ ಸುಳ್ಳು ಹೇಳಿದ ನಾನು ಅವಲಕ್ಕಿ ತಿಂದುಮುಗಿಸಿದೆ.
ಕೈಚಾಚಿ ಆಸೆಕಣ್ಣುಗಳಿಂದ ನೋಡುತ್ತಿದ್ದ ಗುರುವಪ್ಪನ ಮುಖ ಚಿಕ್ಕದಾಗಿತ್ತು. ಅವನಿಗೆ ನಿರಾಶೆಯಾಗಿತ್ತು. ಆ ದಿವಸ ಆತ ನನ್ನ ಜೊತೆಗೆ ಹೆಚ್ಚು ಮಾತನಾಡಲಿಲ್ಲ. ನಾನು ಕೇಳಿದ್ದಕ್ಕೆಲ್ಲಾ ಹ್ಞ, ಹ್ಞೂ ಅಷ್ಟೇ. ಇದಾಗಿ ತಿಂಗಳು ಕಳೆದಿರಲಿಲ್ಲ. ಆ ಸಂಜೆ ತರಗತಿ ಮುಗಿಸಿ ಹೊರಡುವಾಗ ಗುರುವಪ್ಪ ಸಂತಸದಿಂದ ಬೀಗುತ್ತಾ ಹೇಳಿದ- ‘ಇವತ್ತು ನಮ್ಮ ಮನೆಯಲ್ಲಿ ಅವಲಕ್ಕಿ ಮಾಡ್ತಾರೆ ಗೊತ್ತಾ’.
ಅವಲಕ್ಕಿ ತಿನ್ನುವುದಕ್ಕೆ ಇಷ್ಟೊಂದು ಸಂತಸಪಡುವ ಅವಶ್ಯಕತೆ ಇದೆಯಾ ಎಂದು ನನಗೆ ಅಚ್ಚರಿಯಾಗಿತ್ತು.
ಆಮೇಲೆ ವಿಚಾರಿಸಿದಾಗ ತಿಳಿದದ್ದಿಷ್ಟು- ಅವರು ತಮ್ಮಲ್ಲಿ ಬೆಳೆದ ಭತ್ತದಲ್ಲಿಯೇ ಒಂದಷ್ಟು ಪ್ರಮಾಣದ ಭತ್ತದಿಂದ ಅವಲಕ್ಕಿ
ತಯಾರಿಸುತ್ತಾರೆ. ಹೀಗೆ ತಮ್ಮ ಮನೆಯಲ್ಲಿಯೇ ತಯಾರಿಸುವ ಅವಲಕ್ಕಿ ಬಗ್ಗೆ ಗುರುವಪ್ಪ ನನ್ನಲ್ಲಿ ಹೇಳಿದ್ದ. ತಿಂಗಳಿಗೊಮ್ಮೆ
ದಿನಸಿ ಅಂಗಡಿಯಿಂದ ಅವಲಕ್ಕಿ ತರುವುದನ್ನು ಮಾತ್ರವೇ ಕಂಡು ಗೊತ್ತಿದ್ದ ನನಗೆ ಮನೆಯಲ್ಲಿಯೇ ತಯಾರಿಸಿರುವ
ಅವಲಕ್ಕಿಯನ್ನು ಕಾಣುವ, ತಿನ್ನುವ ಕುತೂಹಲ. ‘ನಾಳೆ ನನಗೊಂದಿಷ್ಟು ಅವಲಕ್ಕಿ ತೆಗೆದುಕೊಂಡು ಬಾ ಗುರುವಪ್ಪ’
ಎಂದೆ. ‘ನಿನಗೆ ಅವಲಕ್ಕಿ ಕೊಟ್ಟರೆ ನಮಗೆ ಸಾಕಾಗುವುದಿಲ್ಲ’ ಎಂದು ಹೇಳಿ ಮುಯ್ಯಿ ತೀರಿಸಿದ ಖುಷಿಯಲ್ಲಿ ಕಣ್ಣು ಹೊಡೆದು, ಮೂತಿ ತಿರುಗಿಸಿ ನಗಾಡಿದ್ದ. ಬಾಯಿಮಾತಿಗೆ ಹಾಗೆ ಹೇಳಿದ್ದರೂ ಮರುದಿನ ಬ್ಯಾಗಿನಲ್ಲಿ ಅವಲಕ್ಕಿ ತಂದಾನೆಂಬುದು ನನ್ನ ನಿರೀಕ್ಷೆಯಾಗಿತ್ತು.
ಆದರೆ ಮರುದಿನ ಆತ ಅವಲಕ್ಕಿ ತಂದಿರಲಿಲ್ಲ. ಅವನ ಮನೆಗೇ ಹೋಗಿ ತಿಂದರಾಯಿತು ಎಂದು ಅಂದುಕೊಂಡ ಮರುಕ್ಷಣವೇ ಅಮ್ಮನಿಗೆಲ್ಲಿಯಾದರೂ ವಿಷಯ ಗೊತ್ತಾದರೆ ಎಂಬ ಭಯ ಕಾಡಿತು. ಬೆನ್ನಿಗೇ ಅಮ್ಮ ಬೆಳಗ್ಗೆ ಹೇಳಿದ ಮಾತು ನೆನಪಾಯಿತು- ‘ಸಂಜೆ ದೇವಸ್ಥಾನಕ್ಕೆ ಹೋಗಿ ಹರಕೆ ತೀರಿಸಿ ಬರುತ್ತೇನೆ. ನಾನು ಬರುವುದು ಒಂದರ್ಧ ಗಂಟೆ ತಡ ಆಗಬಹುದು. ಶಾಲೆಯಿಂದ ಬಂದು ಇಲ್ಲೇ ಅಂಗಳದಲ್ಲಿ ಕೂತುಕೋ. ಎಲ್ಲಿಯೂ ತಿರುಗಾಡುವುದಕ್ಕೆ ಹೋಗಬೇಡ’. ಆ ದಿನ ಸಂಜೆಯೇ ಗುರುವಪ್ಪನ ಮನೆಗೆ ಹೋಗಿ ಒಂದು ಮುಷ್ಟಿ ಅವಲಕ್ಕಿ ಮೆಲ್ಲುವುದೆಂದು ನಿಶ್ಚಯಿಸಿದೆ.
ಸಂಜೆ ಶಾಲೆ ಬಿಟ್ಟಮೇಲೆ ಗುರುವಪ್ಪನ ಜತೆ ಹೊರಟೆ. ಯಾವತ್ತೂ ಅವನ ಮನೆಯೆದುರನ್ನು ತಲುಪುತ್ತಿದ್ದಂತೆಯೇ ಕೈಬೀಸಿ ಹೊರಡುವ ನಾನು ಅಂದು ಅವನೊಟ್ಟಿಗೆ ಅವನ ಮನೆಯಂಗಳಕ್ಕೆ ಬಂದದ್ದು ಅವನಿಗೆ ಆಶ್ಚರ್ಯ ಹುಟ್ಟಿಸಿತ್ತು. ಅವರ ಮನೆಯ ನಾಯಿ ನನ್ನನ್ನು ನೋಡಿ ಒಂದೇ ಸಮನೆ ಬೊಗಳುತ್ತಿತ್ತು. ಅದನ್ನು ಬೈದು ಸುಮ್ಮನಾಗಿಸಿದ ಗುರುವಪ್ಪ ನನ್ನೆಡೆಗೆ ಪ್ರಶ್ನಾರ್ಥಕವಾಗಿ ನೋಡಿದ. ‘ನಿನ್ನ ಮನೆಯಲ್ಲಿ ಮಾಡಿದ ಅವಲಕ್ಕಿ ತಿನ್ನಬೇಕಿತ್ತು ಗುರುವಪ್ಪ’ ಎಂದೆ.
ಅವನೆಲ್ಲಿ ಕೊಡುವುದಿಲ್ಲ ಎನ್ನುತ್ತಾನೋ ಎಂಬ ಹೆದರಿಕೆ ನನ್ನಲ್ಲಿತ್ತು. ‘ಸರಿ ಬಾ’ ಎಂದು ನಗುತ್ತಲೇ ಕರೆದ. ಪುಟ್ಟ ಮನೆ. ಒಳಕೋಣೆಗೆ ಕರೆದೊಯ್ದ. ಅಲ್ಲೊಂದು ಗುಡಾಣದಲ್ಲಿ ಅವಲಕ್ಕಿಯನ್ನು ತುಂಬಿಸಿಟ್ಟಿದ್ದರು. ನಾನು ಒಂದು ಮುಷ್ಟಿ ಅವಲಕ್ಕಿ ಯನ್ನು ಕೈಗೆತ್ತಿಕೊಂಡೆ. ಬಾಯಿಯೊಳಕ್ಕೆ ಹಾಕಿಕೊಳ್ಳಲು ತಯಾರಾದೆ. ಅಷ್ಟರಲ್ಲಿ ಗುರುವಪ್ಪನ ಅಮ್ಮನ ಬೊಬ್ಬೆ ಕೇಳಿಸಿತು- ‘ನೀವು ನಮ್ಮಲ್ಲಿ ತಿನ್ನಬಾರದು ಧಣಿ. ನಿಮ್ಮ ಮನೆಯವರಿಗೆ ವಿಷಯ ಗೊತ್ತಾದರೆ ನಮ್ಮ ಕಥೆ ಅಷ್ಟೇ’.
ನಾನು ಅವಲಕ್ಕಿ ತಿನ್ನಲೇ ಬಾರದೆನ್ನುವ ರೀತಿಯಲ್ಲಿ ನನ್ನಿಂದ ಎರಡಡಿಗಳ ದೂರದಲ್ಲಿ ನಿಂತು ಅವರು ಬೊಬ್ಬೆ ಹೊಡೆಯು ತ್ತಿದ್ದರು. ಜೊತೆಗೆ ಗುರುವಪ್ಪನಿಗೂ ಬೈಯ್ಯುತ್ತಿದ್ದರು. ಯಾಕೆ ಅವಲಕ್ಕಿ ತಿನ್ನಬಾರದೆಂಬುದು ನನಗೆ ಅರ್ಥವಾಗಲಿಲ್ಲ. ಒಂದು ಮುಷ್ಟಿ ಅವಲಕ್ಕಿಯನ್ನು ಮತ್ತೆ ಗುಡಾಣಕ್ಕೆ ಸುರಿದು ಮನೆಯಿಂದ ಹೊರಬಂದೆ. ನಾನು ಹೊರಬರುವಾಗ ಗುರುವಪ್ಪನ ತಾಯಿ
ಗೋಡೆಗೆ ಅಂಟಿ ನಿಂತಿದ್ದರು, ನಾನು ಅವರನ್ನು ಸ್ಪರ್ಶಿಸಬಾರದೆನ್ನುವ ರೀತಿಯಲ್ಲಿ.
ತಾವು ಮುಟ್ಟಬಾರದು ಎಂಬ ಭಾವನೆ ಅವರಲ್ಲಿತ್ತು. ಅವರ ಮನೆಯ ಅವಲಕ್ಕಿ ತಿನ್ನಲಾರದ, ಅವರಿಂದ ಮುಟ್ಟಿಸಿಕೊಳ್ಳಲಾರದ ನಾನೂ ಒಂದರ್ಥದಲ್ಲಿ ಮುಟ್ಟಿಸಿಕೊಳ್ಳದವನೇ ಆಗಿದ್ದೆ! ಒಂದು ಮುಷ್ಟಿ ಅವಲಕ್ಕಿ ತಿನ್ನುವ ನನ್ನ ಆಸೆಯಂತೂ ಮಣ್ಣು ಪಾಲಾಗಿತ್ತು. ಆ ರಾತ್ರಿ ನನಗೆ ಕನಸೊಂದು ಬಿತ್ತು. ನನ್ನ ಬುತ್ತಿಯಲ್ಲಿದ್ದ ಸಿಹಿ ಅವಲಕ್ಕಿಯನ್ನು ಹಂಚಿಕೊಂಡು, ನಾನೂ ಗುರುವಪ್ಪನೂ ಬುತ್ತಿಯನ್ನು ಖಾಲಿ ಮಾಡಿದಂತೆ… ಅವನ ಮನೆಯ ಗುಡಾಣದ ಅವಲಕ್ಕಿಯನ್ನು ಮುಷ್ಟಿ ಪೂರಾ ತುಂಬಿ ಕೊಂಡು ನಾನು ತಿಂದಂತೆ… ಹೀಗೆ ನಾವು ತಿನ್ನುತ್ತಿರುವುದನ್ನು ಅವನಮ್ಮನೂ ನನ್ನಮ್ಮನೂ ನೋಡಿ, ಮನಃಪೂರ್ವಕವಾಗಿ ನಕ್ಕಂತೆ…ಕನಸು ಕಾಣುತ್ತಿದ್ದ ನನ್ನ ಮುಖದಲ್ಲಿ ಸಂತಸದ ನಗು.