Thursday, 12th December 2024

ಯಾರೀ ಆಭರಣ ಸುಂದರಿ ?

ಡಾ.ಎಸ್.ಶಿಶುಪಾಲ

ಈ ಹಾವಿನಿಂದ ಮನುಷ್ಯನಿಗೆ ಅಪಾಯವಿಲ್ಲ, ಇದು  ವಿಷ ರಹಿತ ಹಾವು. ಜತೆಗೆ, ಇದು ಇಲಿಗಳನ್ನು ಹಿಡಿಯುವುದರ ಮೂಲಕ, ರೈತರಿಗೆ ಸಹಾಯವನ್ನೇ ಮಾಡುತ್ತದೆ.

ಹಾವುಗಳು ಕಾಲುಗಳಿಲ್ಲದ ಸರೀಸೃಪ ಜಾತಿಗೆ ಸೇರಿದ ಪ್ರಾಣಿಗಳಾಗಿವೆ. ಎಲ್ಲಾ ಹಾವುಗಳು ಶೀತರಕ್ತ ಪ್ರಾಣಿಗಳು ಮತ್ತು ಮಾಂಸಾಹಾರಿಗಳು. ಹಾವುಗಳಲ್ಲಿ ಸಾಕಷ್ಟು ವೈವಿಧ್ಯವನ್ನು ಕಾಣಬಹುದು. ಅವುಗಳ ಆಕಾರ ಮತ್ತು ಗಾತ್ರಗಳಲ್ಲಿ ವಿವಿಧತೆ ಯನ್ನು ನೋಡಬಹುದು.

ವಿಶ್ವದಲ್ಲಿ ಮೂರು ಸಾವಿರಕ್ಕೂ ಅಧಿಕ ಪ್ರಭೇದಗಳನ್ನು ಹೊಂದಿರುವ ಈ ಗುಂಪು ತನ್ನದೇ ವಿಶಿಷ್ಟ ಜೀವನಶೈಲಿಯನ್ನು ಅಳವಡಿಸಿಕೊಂಡಿವೆ. ಕೆಲವು ವಿಷಕಾರಿಯಾಗಿದ್ದರೆ ಹೆಚ್ಚಿನವು ವಿಷರಹಿತವಾಗಿರುತ್ತವೆ. ಅತೀ ಶೀತದ ಧ್ರುವ ಪ್ರದೇಶಗಳನ್ನು ಬಿಟ್ಟರೆ ವಿಶ್ವದ ನೆಲ ಮತ್ತು ಜಲ ಪ್ರದೇಶಗಳನ್ನು ಆವರಿಸಿಕೊಂಡಿವೆ ಹಾವುಗಳು.

ಸಮುದ್ರ, ಕೆರೆ, ನದಿ, ಮರ-ಗಿಡ ಮತ್ತು ನೆಲದ ಒಳಗೆ ಬದುಕುವ ಸಾಮರ್ಥ್ಯ ಇವುಗಳಲ್ಲಿದೆ. ಭಾರತದಲ್ಲಿ ಸುಮಾರು ೨೭೦ ಪ್ರಭೇದ ದ ಹಾವುಗಳನ್ನು ಗುರುತಿಸಲಾಗಿದೆ. ತಮ್ಮ ಕ್ಷಮತೆಯ ಆಧಾರದ ಮೇಲೆ ಅವು ಸೂಕ್ತ ಬೇಟೆಯನ್ನು ಅರಸುತ್ತವೆ. ವಿಷವಿಲ್ಲದ ಹಾವುಗಳು ಮಿಕವನ್ನು ಗಟ್ಟಿಯಾಗಿ ಸುತ್ತಿಕೊಂಡು ಉಸಿರುಕಟ್ಟಿಸಿ ತಿಂದರೆ ವಿಷಯುಕ್ತ ಹಾವುಗಳು ತಮ್ಮ ಬೇಟೆಗೆ ಸಾಕಷ್ಟು ಪ್ರಮಾಣದ ವಿಷವುಣಿಸಿ ಪ್ರe ತಪ್ಪಿಸಿ ತಿಂದು ಜೀರ್ಣಿಸಿ ಕೊಳ್ಳುತ್ತವೆ. ಹಾವುಗಳ ಬಣ್ಣಗಳಲ್ಲಿ ಉನ್ನತ ಶ್ರೇಣಿಯ ಮಾರ್ಪಾಡು ಗಳನ್ನು ಕಾಣಬಹುದು. ಹೆಚ್ಚಿನ ಹಾವುಗಳಲ್ಲಿ ಚರ್ಮದ ಬಣ್ಣವು ಅವು ವಾಸಿಸುವ ಪರಿಸರಕ್ಕೆ ಸೂಕ್ತವಾಗಿರುತ್ತವೆ.

ಇಂತಹ ವಿಶಿಷ್ಟ ಗುಂಪಿನ ವಿಶೇಷ ಪ್ರಭೇದವೆಂದರೆ ಆಭರಣ ಹಾವು. ಆಂಗ್ಲಭಾಷೆಯಲ್ಲಿ ಕಾಮನ್ ಟ್ರಿನ್ಕೆಟ್ ಸ್ನೇಕ್ (Common Trinket Snake) ಎಂದು ಮತ್ತು ಪ್ರಾಣಿ ಶಾಸ್ತ್ರೀವಾಗಿ ಸಿಲೋಗ್ನಾತಸ್ ಹೆಲೆನಾ ಹೆಲೆನಾ ಎಂದೂ ಕರೆಯುವರು. ತೆಳುವಾದ ಉದ್ದ ದೇಹ. ಹುಟ್ಟುವಾಗ ೨೫ ಸೆಂ.ಮೀ. ಉದ್ದವಿದ್ದು, ;ಪೂರ್ತಿ ಬೆಳೆದಾಗ ೭೦ ಸೆಂ.ಮೀ. ಇರುತ್ತದೆ.

ಗರಿಷ್ಟ ಉದ್ದ ೧೬೮ ಸೆಂ.ಮೀ. ತಲುಪಬಹುದು. ಬಣ್ಣ ತಿಳಿಕಂದು ಅಥವಾ ಗಾಢ ಕಂದು. ಕುತ್ತಿಗೆಯ ಮೇಲೆ ಎರಡು ಕಪ್ಪು ಪಟ್ಟಿ. ದೇಹದ ಮುಂಭಾಗದಲ್ಲಿ ತಿಳಿ ಬಣ್ಣದ ಗೆರೆ ಅಥವಾ ಮಚ್ಚೆಗಳು. ದೇಹದ ಹಿಂಭಾಗದಲ್ಲಿ ನಿರ್ದಿಷ್ಟವಾದ ಕಡು-ಕಂದು ಅಥವಾ ಕಪ್ಪು ಗೆರೆಗಳು ಬಾಲದ ತುದಿಯವರೆಗೆ ಹಬ್ಬಿರುತ್ತವೆ. ದೇಹದ ಕೆಳಭಾಗ ಹೊಳೆಯುವ ಬಿಳಿ ಬಣ್ಣದ್ದು.

ಅವಾಸ ಸ್ಥಳ/ಆಹಾರ/ಸಂತಾನಾಭಿವೃದ್ಧಿ: ಹಗಲು ಮತ್ತು ರಾತ್ರಿಯಲ್ಲೂ ಚುರುಕಾಗಿರುವ ಹಾವು. ಬೇಸಿಗೆ ಕಾಲದಲ್ಲಿ
ಗೆದ್ದಲುಗಳ ಹುತ್ತ, ಕಲ್ಲು ಬಂಡೆಗಳ ಕೆಳಗೆ ಅಥವಾ ಕೊರಕಲುಗಳಲ್ಲಿ ಕಾಣಸಿಗುತ್ತವೆ. ತಂಪಾಗಿರುವ ಪ್ರದೇಶಗಳಲ್ಲಿ, ಕುರುಚಲು ಪೊದೆಗಳು ಅಥವಾ ಎಲೆಯಿರುವ ಮರಗಳಲ್ಲಿ ವಾಸಿಸುತ್ತವೆ. ಆಹಾರಕ್ಕಾಗಿ ಇಲಿ, ಅಳಿಲು, ಹಲ್ಲಿ, ಕಪ್ಪೆ ಮತ್ತು ಹಾವುಗಳನ್ನು ತಿನ್ನುತ್ತವೆ. ಸಂತಾನಾಭಿವೃದ್ಧಿ ಸಮಯ ನಿಗದಿತವಿಲ್ಲ. ಹೆಣ್ಣು ಹಾವು ಸುಮಾರು ೦೬ ರಿಂದ ೧೨ ಮೊಟ್ಟೆಗಳನ್ನಿಡುತ್ತದೆ.

ಪ್ರಾಕೃತಿಕ ನಡವಳಿಕೆ: ಸಾಮಾನ್ಯವಾಗಿ ಸಾದು ಸ್ವಭಾವದ ಹಾವು. ಕೆಣಕಿದಾಗ ತನ್ನ ದೇಹವನ್ನು “ಎಸ್”ಕ್ಕೆ ವಿನ್ಯಾಸಗೊಳಿಸಿ ಕೊಂಡು, ಎದ್ದು ನಿಲ್ಲುತ್ತಾ ಬಾಯಿ ಕಳಚಿಕೊಂಡು ಆಕ್ರಮಣ ಮಾಡುತ್ತದೆ. ಇದು ವಿಷರಹಿತ ಹಾವು. ಆದ್ದರಿಂದ ಅಕಸ್ಮಾತ್
ಕಚ್ಚಿದರೆ ಯಾವುದೇ ತೊಂದರೆಯಿಲ್ಲ. ಸೆರೆಯಿಂದ ಬಿಡಿಸಿ ಕೊಂಡಾಗ ವಿಚಿತ್ರವಾಗಿ ‘ಟಾಟಾ’ ಹೇಳಿದಂತೆ ಬಾಲವನ್ನು ಅಲ್ಲಾಡಿ ಸುತ್ತಾ ಓಡಿಹೋಗುತ್ತದೆ.

ವಿಸ್ತರಣೆ: ಜಮ್ಮು, ಕಾಶ್ಮೀರ, ಲಡಾಖ್ ಮತ್ತು ಮಣಿಪುರವನ್ನು ಹೊರತುಪಡಿಸಿ ಭಾರತದೆಲ್ಲೆಡೆ ವಾಸಿಸುತ್ತವೆ. ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ ದೇಶಗಳಲ್ಲೂ ಕಾಣ ಸಿಗುತ್ತವೆ. ಈ ಆಭರಣ ಹಾವನ್ನು ವನಸುಂದರಿಯೆಂತಲೂ ಕರೆಯುತ್ತಾರೆ. ಭಾರತದಲ್ಲಿ ಸುಂದರವಾಗಿರುವ ಹಾವುಗಳಲ್ಲಿ ಇದೊಂದು. ನಾಗರ ಹಾವಿನಂತೆ ಹೆಡೆ ಇದಕ್ಕೆ ಇಲ್ಲದೇ ಇದ್ದರೂ, ಕೋಪ ಬಂದಾಗ ತನ್ನ ತಲೆಯನ್ನು ಚಪ್ಪಟೆ ಮಾಡಿಕೊಂಡು ಎದುರಿಸಿ ನಿಲ್ಲಬಲ್ಲದು. ನಗರೀಕರಣ, ಕೈಗಾರಿಕೀಕರಣ ಮುಂತಾದವು ಗಳಿಂದ ದಿನೇ ದಿನೇ ಆವಾಸ ಸ್ಥಾನಗಳ ಕೊರತೆ ಯುಂಟಾಗಿ ಇವುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದೆ.

ಮಾನವನ ಹೆದರಿಕೆ ಮತ್ತು ಮೂಢನಂಬಿಕೆಗಳಿಗೂ ತುತ್ತಾಗಿವೆ ಈ ಪಾಪದ ಹಾವುಗಳು. ಆಹಾರ ಸರಪಳಿಯಲ್ಲಿ ಉನ್ನತ ಹಂತದ ಬಳಕೆದಾರನಾದ ಇವುಗಳ ಪ್ರಕೃತಿ ಸಮತೋಲನಕ್ಕೆ ಆಧಾರ. ಮಾನವನ ಬೆಳೆಯನ್ನು ಇಲಿಗಳಿಂದ ಸಂಪೂರ್ಣ ನಾಶವಾಗದಂತೆ ತಡೆಯುವಲ್ಲಿ ಹಾವುಗಳು ಮಹತ್ವಪೂರ್ಣ. ಪರಿಸರದಲ್ಲಿ ಪ್ರತಿಯೊಂದು ಜೀವಿಯ ಪಾತ್ರವನ್ನು ಮನಗಂಡಾಗ ಮಾತ್ರ ಅವುಗಳ ಬಗ್ಗೆ ಗೌರವ ಮೂಡುವುದು. ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಅಭಿವೃದ್ಧಿ ಎಂಬ ಮರೀಚಿಕೆಯ ಹಿಂದೆ ಓಡುತ್ತಿರುವ ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿ ಮಾಡುವುದು ಇಂದಿನ ಅನಿವಾರ್ಯತೆ.

(ಚಿತ್ರಗಳು: ಲೇಖಕರವಯ)