Thursday, 12th December 2024

ಗುಬ್ಬಿಯೊಂದರ ಸ್ವಗತ

ರವಿ ಮಡೋಡಿ, ಬೆಂಗಳೂರು

ಈ ಪುಟ್ಟ ಹಕ್ಕಿಯನ್ನು ಇಂಗ್ಲಿಷ್‌ನಲ್ಲಿ ಕರೆಯುವುದೇ ‘ಹೌಸ್ ಸ್ಪ್ಯಾರೋ’ ಎಂದು – ಅಂದರೆ ಮನೆ ಯಲ್ಲಿ ಇರುವ ಹಕ್ಕಿ ಎಂಬರ್ಥ. ಮನುಷ್ಯನು ಯಾವಾಗ ಮನೆಗಳನ್ನು ಕಟ್ಟಿಕೊಂಡು ವಾಸಿಸಲು ತೊಡಗಿದನೋ, ಆಗಿನಿಂದ ಅವನ ಜತೆಗಾರನಾಗಿ, ಮನೆಯ ಸಂದಿಗೊಂದಿಗಳಲ್ಲಿ, ಜಂತಿ ತೊಲೆಗಳ ಮೂಲೆಯಲ್ಲಿ, ಹಳೆ ಫೋಟೋಗಳ ಹಿಂಭಾಗದಲ್ಲಿ ಗೂಡು ಕಟ್ಟಿಕೊಂಡು, ಸಂತಾನೋತ್ಪತ್ತಿ ಮಾಡುತ್ತಾ ಬಂದಿರುವ ಗುಬ್ಬಚ್ಚಿಗಳು ಇಂದು ನೆಲೆ ಕಳೆದುಕೊಳ್ಳುತ್ತಿವೆ. ಮನುಷ್ಯನ ವಾಸಸ್ಥಳಗಳ ಸಂಖ್ಯೆ ಹೆಚ್ಚುತ್ತಿದ್ದರೂ, ಗುಬ್ಬಿಗಳ ಬದುಕು ಅತಂತ್ರವಾಗುತ್ತಿದೆ. ಈಗ ಕೆಲವು ವರ್ಷಗಳಿಂದ ಗುಬ್ಬಿ ಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ ಎಂಬ ಹುಯಿಲೆದ್ದಿತು. ಗುಬ್ಬಚ್ಚಿಗಳನ್ನು ರಕ್ಷಿಸಬೇಕು ಎಂಬ ಕಳಕಳಿ ವ್ಯಕ್ತವಾಯಿತು. ಈ ಪುಟಾಣಿ ಹಕ್ಕಿಗಳ ಸಂಕಟವನ್ನು ಜನರಿಗೆ ತಿಳಿಸಿ, ಅವುಗಳನ್ನು ರಕ್ಷಿಸು ವಂತೆ ಪ್ರೇರೇಪಿಸಲು ಮಾರ್ಚ್ ೨೦ನ್ನು ವಿಶ್ವ ಗುಬ್ಬಚ್ಚಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಪುಟ್ಟ ಹಕ್ಕಿಗಳು ನೆಮ್ಮದಿಯಿಂದ ಇರಲಿ ಎಂಬುದೇ ಎಲ್ಲರ ಆಶಯ.

ಅಮ್ಮ ಅಮ್ಮ ಎಂದು ನಿಸ್ತೇಜ ಸ್ಥಿತಿಯಲ್ಲಿ ನಾನು ಅರಚು ತ್ತಿದ್ದೆ. ಆಗಲೇ ಒಂದು ಹನಿ ಕಣ್ಣೀರು ಕಣ್ಣಿಂಚಿ ನಿಂದ ಬಸಿದು ನೆಲವನ್ನು ತಾಗಿತ್ತು. ನಮ್ಮ ಧ್ವನಿಯನ್ನೇ ಅಡಗಿ ಸಿದ ಮೇಲೆ ಯಾರಿಗೆ ಕೇಳಿಸಿತು ನಮ್ಮ
ಆಂತರ್ಯದ ದನಿ? ದುಸ್ತರದ ಬದುಕು ಮತ್ತೊಮ್ಮೆ ಎರಗುವ ಸೂಚನೆಯಿದ್ದಂತಿತ್ತು. ‘ಈ ಬದಲಾವಣೆ ಯಾಕೆ? ಯಾರಿಗೆ?’ ಎಂದು ಅಮ್ಮನನ್ನು ಕೇಳಿದೆ. ಅಮ್ಮ ಉತ್ತರಿಸ ಲಿಲ್ಲ. ಅವಳ ಮೂಕವೇದನೆ ನನ್ನ ಒಡಲಿ ನಲ್ಲಿ ಪ್ರತಿ ಫಲಿಸಿತು. ಈ ಕಷ್ಟಗಳು ಮನುಷ್ಯನಿಗೆ ಬಾರದೇ ಮರಗಳಿಗೆ ಬರುತ್ತದೆಯೋ? ಎಂದು ತನಗೆ ಕಷ್ಟ ಬಂದಾಗ ಮಾನವ ಹೇಳುತ್ತಾನೆ ಎಂದು ಅಮ್ಮ ಹೇಳುತ್ತಿದ್ದ ಮಾತುಗಳು ನೆನಪಾಯಿತು. ಆದರೆ ನಮ್ಮ ಕಷ್ಟ ವನ್ನು ಒಂದಿನಿತು ಆಲಿಸಿದ ಮನುಜನಿಗೆ, ಇವೆ ಕಷ್ಟಗಳಂತೆ ತೋರುವುದಿಲ್ಲವೇ? ಇರುವ ಒಂದು ಭೂಮಿ, ಅದು ಮಾನವರಿಗೆ ಮಾತ್ರ ಸೀಮಿತವೇ? ಹಾಗಿಲ್ಲವೆಂದರೆ ಒಮ್ಮೆ ನನ್ನ ಮಾತುಗಳನ್ನು ಆಲಿಸಿ.

ನೀವು ಮಾಡಿದ್ದು ಎಂದು ನಿಮಗೆ ಸರಿ ಅನಿಸಿದರೆ, ನಿಮ್ಮ ದಾರಿ ನಿಮಗೆ. ಇಲ್ಲವಾದರೆ ನಮ್ಮ ದಾರಿ…?
ಹೌದು ನನ್ನ ಹೆಸರು ಗುಬ್ಬಿ. ಅದೇ ನೀವು ಹಾಡುತ್ತಿರಲ್ಲ ‘ಚೀಂವ್ ಚೀಂವ್ ಗುಬ್ಬಿ’ ಎಂದರೆ ಅದು ನಾನೇ. ಕೆಲವರು ನಮ್ಮನ್ನ ಗುಬ್ಬಚ್ಚಿ ಎಂದು ಕರೆಯುವುದುಂಟು. ನಮ್ಮ ಬಳಗವನ್ನು ಗುರುತಿಸಿ, ನಮಗೆ ಬಗೆ ಬಗೆಯ ಹೆಸರನ್ನ ಇರಿಸಿದವರು ನೀವೇ. ನಿಮ್ಮೊಂದಿಗಿನ ನಮ್ಮ ಒಡನಾಟ ಬಹಳ ಹಳೆಯದು. ನಾವು ನೀವು ಅಣ್ಣ ತಮ್ಮಂದಿರಂತೆ ಬದುಕಿದವರು. ಅದೇ ನೀವು ಹೇಳುವ ಹುಟ್ಟುತ್ತ ಹುಟ್ಟುತ್ತ ಅಣ್ಣ ತಮ್ಮಂದಿರು ಬೆಳೆಯುತ್ತ ಬೆಳೆಯುತ್ತ ದಾಯಾದಿಗಳು ಎಂಬಂತಲ್ಲ.

ಸ್ನೇಹಿತರಾಗಿ, ಯಾವುದೇ ಮನಸ್ತಾಪಗಳಿಲ್ಲದೇ ಅನ್ಯೋನ್ಯ ವಾಗಿ ಜೀವನ ಸಾಗಿಸಿಕೊಂಡು ಬಂದವರು ನಾವು. ನಿಮ್ಮ ಬಗೆಗೆ ನಮಗೂ ಕೂಡ ಪ್ರೀತಿಯಿದೆ. ಗೌರವವಿದೆ. ನಿಮ್ಮ ಸಾಧನೆಗಳನ್ನು ನೋಡುವಾಗ ಹೆಮ್ಮೆ ಎನಿಸುತ್ತದೆ. ಒಂದು ಕಾಲದಲ್ಲಿ ಇತರ ಪ್ರಾಣಿಗಳಂತೆ ಬದುಕಿದ ನೀವು ಈಗ ಎಷ್ಟು ಎತ್ತರಕ್ಕೆ ಬೆಳೆದಿದ್ದೀರಿ. ನಮಗೆ ಖುಷಿಯೆನಿಸುತ್ತದೆ. ಅಷ್ಟು ಬೆಳೆದಿದ್ದರೂ ಕೂಡ ನಮ್ಮನ್ನ ಕೈಬಿಡದೇ, ನಮ್ಮನ್ನ ನಿಮ್ಮ ಜೊತೆ ಜೊತೆಯಲ್ಲಿ ಬದುಕುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಿರಿ.

ನಮ್ಮೆಲ್ಲರನ್ನು ಸಂತೋಷಗೊಳಿಸುವುದಕ್ಕೆ ವರುಷಕ್ಕೆ ಒಂದು ದಿನ ‘ವಿಶ್ವ ಗುಬ್ಬಚ್ಚಿ ದಿನ’ ಆಚರಿಸಿ, ಅದ
ಮೂಲಕ ನಮ್ಮ ಮೇಲೆ ಮನುಜಕುಲದ ಪ್ರೀತಿ ಹೆಚ್ಚಳಗೊಳ್ಳುವಂತೆ ಮಾಡಿದ್ದು ನೀವೇ ತಾನೆ! ಬೇರೆ ಹಕ್ಕಿ ಪಕ್ಷಿಗಳಂತೆ ನಾವು ಕಾಡಿನಲ್ಲಿ ಬದುಕುವವರಲ್ಲ. ಅಲ್ಲಿನ ಬದುಕು ನಮಗೆ ಅಸಾಧ್ಯ. ನಾವು ವಾಸಿಸುವುದು ನಿಮ್ಮಗಳ ಜತೆಯಲ್ಲಿ. ನಮ್ಮ ಜೀವನಗಾಥೆ ಅದು ನಿಮ್ಮ ಜೀವನದ ಮಧ್ಯೆದಲ್ಲಿಯೇ. ನಿಮ್ಮ ಮಣ್ಣಿನ ಗೋಡೆಯಲ್ಲಿ, ಅಟ್ಟದಲ್ಲಿ, ಹುಲ್ಲಿನ ಜೊಪಡಿಯಲ್ಲಿ, ಕೊಟ್ಟಿಗೆಯಲ್ಲಿ, ಮನೆಯ ಕೊಗಳುಗಳಲ್ಲಿ, ತೋಟದ ಮನೆಯಲ್ಲಿ, ಮನೆ ಎದುರಿನ ಮರಗಳಲ್ಲಿ, ಮನೆಯ ಗಡಿಯಾರದಲ್ಲಿ ಹೀಗೆ ನಿಮ್ಮ ಮನೆಯ ಸುತ್ತಮುತ್ತಲಿನ ಜಾಗದಲ್ಲಿ, ನಮಗೆ ಅನುಕೂ ಲವಾಗುವ ಸ್ಥಳಗಳಲ್ಲಿ ನಾವು ನಮ್ಮ ಗೂಡನ್ನ ಕಟ್ಟಿಕೊಂಡು ವಾಸವಾಗಿರು ತ್ತೇವೆ.

ಅಂಗೈ ಅಗಲದ ಜಾಗ. ಒಣಗಿದ ಬಿಳಿ ಹುಲ್ಲು, ಸಣ್ಣ ಕಡ್ಡಿ, ಕಸಗಳೇ ನಮ್ಮ ಮನೆಗೆ ಬೇಕಾದ ವಸ್ತುಗಳು. ಅಲ್ಲಿಯೇ ನಮ್ಮ ಪುಟ್ಟ ಸಂಸಾರವನ್ನು ಸಾಗಿಸುತ್ತೇವೆ. ಮನೆಯ ಸುತ್ತಲಿನ ಕ್ರಿಮಿ ಕೀಟಗಳನ್ನ ತಿಂದು ಒಂದರ್ಥದಲ್ಲಿ ನಿಮ್ಮ ಮನೆಯನ್ನು ಸ್ವಚ್ಛವಾಗಿಡುವಂತೆ ಮಾಡುತ್ತೇವೆ. ಒಮ್ಮೊಮ್ಮೆ ನಾಲಿಗೆ ರುಚಿಗೆ, ಬಯಸಿದರೆ ಅಮ್ಮ ಒಣಗಿಸಿಟ್ಟ ಕಾಳುಕಡಿಯನ್ನು ಕದ್ದು ತಿನ್ನುತ್ತೇವೆ. ಹಾಗಂತ ಅದೊಂದು ಆಕ್ಷೇಪಾರ್ಹ ತಪ್ಪು ಎಂದು ನೀವು ಭಾವಿಸಿ ನಮ್ಮನ್ನು ಓಡಿಸಿದವರಲ್ಲ. ಒಂದು ದಿನವೂ ಹಾಳಾದ ಗುಬ್ಬಿ ಎಂದು ನಮ್ಮನ್ನು ಬೈದಿದನ್ನು ನಾವು ಕಂಡಿಲ್ಲ.

ತಿಂದರೆ ತಿನ್ನಲಿ. ಮನೆಯ ಮಕ್ಕಳಂತೆ ಅಲ್ಲವೇ ಎಂಬ ನಿಮ್ಮ ಭಾವದ ಕಾರಣದಿಂದಲೇ ಹೀಗೆ ಹತ್ತಾರು
ವರುಷದಿಂದ ನಿಮ್ಮ ಜತೆಗೆ ಅಲ್ಲಿಯೇ ನೆಲಸಿರುವುದು. ಬೆಳಗಾದರೆ ನಮಗೊಂದು ಅನಿರ್ವಚನೀಯ ಆನಂದ.
ಮಿಸುನಿಯಂತೆ ಹೊಳೆಯುವ ದಿವಾಕರನ ದಿವ್ಯದೀಪ್ತತೆಯಲ್ಲಿ ಮನೆಯ ತುಂಬೆಲ್ಲ ಓಡಾಡಿ, ಚೀಂವ್ ಚೀಂವ್ ರಾಗದಿಂದ ಹಾಡಿ, ನಿಮ್ಮನ್ನು ನವನವೋನ್ಮೇಷಶಾಲಿನಿಯಾಗಿ ಸುವುದು ನಮ್ಮ ಹೊಣೆಯಂದು ಭಾವಿಸಿ ಕೂಜಿತವನ್ನು ಮಾಡುತ್ತೇವೆ. ಆಗ ನಿಮ್ಮ ಮೊಗದದಲ್ಲಿ ಮೂಡುವ ಹರ್ಷದ ಹೊನಲನ್ನು ಕಂಡು ನಾವು ಒಳಗೊಳಗೆ ಸಂತೋಷ ಪಡುತ್ತೇವೆ.

ಇನ್ನು ನಿಮ್ಮ ಮನೆಯ ಚಿಕ್ಕ ಮಕ್ಕಳು ನಮಗೆ ಬಹಳ ಆಪ್ತರು. ಅವರೇ ನಮ್ಮ ಮಿತ್ರರು. ಅವರು ನಮ್ಮನ್ನ ಮುಟ್ಟಬೇಕು ಎಂದು ಬಯಸಿದಾಗ, ಅವರೊಂದಿಗೆ ತುಂಟಾಟವನ್ನಾಡಿ ಅವರನ್ನು ಮುದಗೊಳಿಸುತ್ತೇವೆ. ಇನ್ನೂ ಅವರು ಊಟವನ್ನು ಮಾಡದಿzಗ, ಸುಮ್ಮನೆ ಅವರ ಮುಂದೆ ನಲಿನಲಿದು ಕುಪ್ಪಳಿಸಿ ಅವರನ್ನ ರಂಜಿಸುತ್ತೇವೆ. ನೀವು ಗಂಡ-ಹೆಂಡತಿ ಜಗಳ ಮಾಡುವಾಗ ಸಂಸಾರವೆಂದರೆ ಗುಬ್ಬಿಗಳ ಹಾಗೆ ಇರಬೇಕು ಎಂಬ ತಿಳಿ ಆದರ್ಶವನ್ನು ತಿಳಿಸುವುದಕ್ಕೆ ನಮ್ಮ ಅಪ್ಪ-ಅಮ್ಮ ಹಾಗೆ ನಟಿಸಿದ್ದು ಇದೆ.

ಒಟ್ಟಿನಲ್ಲಿ ನಮ್ಮಿಬ್ಬರ ಅನುಬಂಧ ಎಲ್ಲರಿಗೂ ಮಾದರಿಯಾಗಿ, ಮನೆ ಮನಸ್ಸುಗಳು ಶಾಂತವಾಗಿರಲಿ ಎನ್ನು ವುದು ನಮ್ಮ ಭಾವನೆ. ಒಟ್ಟಿನಲ್ಲಿ ನಿಮ್ಮ ಸಾಂಗತ್ಯದ ಹೊರತಾದ ಬದುಕು ಅದು ನಮಗಿಲ್ಲ!

ಬದಲಾದಿರೆ ನೀವು?: ಇತ್ತೀಚೆಗೆ ನೀವು ಬದಲಾಗಿದ್ದಿರೋ ಎಂಬ ಸಂಶಯ ಒಡಮೂಡುತ್ತಿದೆ. ನಿಮ್ಮನ್ನು ನೀವು
ಬೆಳಸಿಕೊಳ್ಳುವುದಕ್ಕೆ ನಮ್ಮಗಳ ಸ್ಥಾನವನ್ನು ಅತಿಕ್ರಮಿಸಿದ್ದಿರೋ ಎಂಬ ಅನುಮಾನ. ಅಮ್ಮ ಹೇಳುವ ಹಾಗೆ ಈ ಊರು ಸಾಕಷ್ಟು ಬದಲಾಗಿದೆ. ಮರಗಳನ್ನು ಕಡಿದು ಕಾಂಕ್ರೀಟ್ ಕಾಡು ನಿರ್ಮಿಸುತ್ತಿದ್ದಿರಿ. ಮನೆಗಳನ್ನು ಬೀಳಿಸಿ, ದೊಡ್ಡ ದೊಡ್ಡ ರಸ್ತೆಗಳು, ಕಟ್ಟಡಗಳು ಸೃಷ್ಟಿಯಾಗುತ್ತಿದೆ. ವಾಹನ, ಕಾರ್ಖನೆ ಇತ್ಯಾದಿಗಳ ಮಾಲಿನ್ಯ ದಿಂದ ನಮಗೆ ಉಸಿರಾಡುವುದು ಕಷ್ಟವಾಗುತ್ತಿದೆ.

ತಂಗಾಳಿಯ ಸವಿಯನ್ನು ಮರೆತು ಎಷ್ಟೋ ದಿನಗಳು ಸಂದಿವೆ. ನಮ್ಮನ್ನ ಬಾಧಿಸುತ್ತಿರುವ ಮತ್ತೊಂದು ಸಮಸ್ಯೆಯೆಂದರೆ ಅದು ಆಹಾರದ ಕೊರತೆ. ದಿನವೆಲ್ಲ ಅಲೆದರು ಒಪ್ಪತ್ತಿನ, ಊಟ ಕುಡಿಯುವ ನೀರು ಸಿಗುತ್ತಿಲ್ಲ. ಸಿಕ್ಕರೂ ಅದು ಪ್ಲಾಸ್ಟಿಕ್ ಮಿಶ್ರಿತವಾಗಿದೆ. ಕಲುಷಿತವಾಗಿರುತ್ತದೆ. ಅದೇನೋ ಮೊಬೈಲ್’ಗಳ ಟವರ್‌ಗಳಂತೆ. ಅದು ಹೊರಸುವ ವಿಕಿರಣಗಳು ನಮ್ಮನ್ನ ನಿಸ್ತೇಜಗೊಳಿಸುತ್ತಿದೆ. ನಮ್ಮ ಲೈಂಗಿಕ ಆಸಕ್ತಿ ಯನ್ನು, ಪುಂಸ್ತ್ವವನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ.

ನಮ್ಮನ್ನ ಬರಡಾಗಿಸಿ, ಸಂತಾನ ಹೀನತೆಯಿಂದ ನಮ್ಮ ಸಂಸಾರವೇ ಅನಾಯಕವಾಗುತ್ತಿದೆ. ನಮ್ಮ ತಾಯ್ತನದ ಸುಖ ಮರೀಚಿಕೆಯಾಗಿದೆ. ನಾವು ವಾಸಿಸುವುದಕ್ಕೆಂದು ಕಟ್ಟಿಕೊಳ್ಳುವ ಗೂಡುಗಳಿಗೆ ಸ್ಥಳವಿಲ್ಲ. ಹಿಂದೆಲ್ಲ ನಿಮ್ಮ ಮನೆಯಲ್ಲಿಯೇ ನಮಗೆ ಇರುವುದಕ್ಕೆ ಅವಕಾಶ ಸಿಗುತ್ತಿತ್ತು. ಆದರೆ ಈಗ ನಾವು ಗಲೀಜು ಎಂಬ ಕಾರಣಕ್ಕೆ ನಿಮ್ಮ ಮನೆಯ ಬಾಲ್ಕನಿಯಲ್ಲಿ ನಮ್ಮನ್ನ ಸೇರಿಸುತ್ತಿಲ್ಲ. ಒಂದೊಮ್ಮೆ ಮನೆಗಳು ಸಿಕ್ಕರೂ, ಅದು ಶಾಶ್ವತವಲ್ಲ. ಈಗ ಹಲವು ವರುಷಗಳ ಹಿಂದೆ ಒಂದು ಮನೆಯಲ್ಲಿ ವಾಸವಾಗಿದ್ದೆವು.

ಆ ಮನೆಯವರು ಮನೆಯನ್ನು ಕೆಡವಿ ದೊಡ್ಡ ಕಟ್ಟಡ ನಿರ್ಮಿಸುವುದಕ್ಕೆ ಮುಂದಾದಾಗ, ಅಲ್ಲಿಂದ ಎದ್ದು ಯಾವುದೋ ಮರವನ್ನು ಸೇರಿಕೊಂಡೆವು. ಈಗ ಸ್ವಲ್ಪ ದಿನದ ಹಿಂದೆ ಆ ಮರವನ್ನು ಕೆಡವಿ ರಸ್ತೆ ನಿರ್ಮಿಸಿದಾಗ ಮತ್ತೆ ಅಲ್ಲಿಯೂ ನಿಲ್ಲಲಾಗದೆ ಬೇರೆ ಸ್ಥಳವನ್ನು ಆಶ್ರಯಿಸಬೇಕಾಯಿತು. ಹೀಗೆ ಹಲವು ವರುಷಗಳಿಂದ ಎಲ್ಲಿಯೂ ಸ್ಥಿರವಾಗಿ ನಿಲ್ಲಲಾಗದೆ ನಮ್ಮ ನೆಲೆಯನ್ನು ಕಳೆದುಕೊಳ್ಳುತ್ತಿದ್ದೇವೆ.

ನಿಮ್ಮ ಅಭಿವೃದ್ದಿಯ ಹೆಸರಿನಲ್ಲಿ ಇಂದು ನಮ್ಮ ಎಷ್ಟೋ ತತ್ತಿಗಳು ನಾಶವಾಗಿದೆ ಎನ್ನುವುದಕ್ಕೆ ದುಖಃ ವಾಗುತ್ತದೆ. ನಮ್ಮ ತತ್ತಿಗಳು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದನ್ನ ಕಂಡಾಗ ಹೃದಯವೇ ಕಿತ್ತು ಬರುತ್ತದೆ. ಈಗಿರುವ ನಮ್ಮ ಮನೆಯ ಸ್ಥಳದಲ್ಲಿ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಬರುತ್ತಿರುವ ವಾರ್ತೆಯನ್ನು ಕೇಳಿ ನಾವೆಲ್ಲ ಬೆಚ್ಚಿಬಿದ್ದಿದ್ದೇವೆ. ಮುಂದೇನು, ಮುಂದೆಲ್ಲಿಗೆ ಸಾಗುವುದು ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಉತ್ತರ
ಸುಲಭವಾಗಿಲ್ಲ. ಇದನೆಲ್ಲ ನೋಡುವಾಗ ಈಗ ಈ ಬದುಕು ಯಾಕೆಂದು ಅನ್ನಿಸುತ್ತಿದೆ? ಇಂಥ ಬದುಕು
ಅನಿವಾರ್ಯವೇ ಎಂಬಂತಾಗಿದೆ.

ದಯಮಾಡಿ ನಮಗೊಂದು ತಿಳಿಸಿಕೊಡಿ. ಈ ಗುಬ್ಬಿಗಳ ಮೇಲೆ ಯಾಕೆ ನಿಮ್ಮ ಬ್ರಹ್ಮಾಸ್ತ್ರ? ಕೇವಲ ಇದು ನಮಗೊಬ್ಬರಿಗಲ್ಲ. ಪರಿಸರದ ಸಕಲ ಜೀವಿಗಳ ಪ್ರಶ್ನೆಯಾಗಿದೆ. ಇಂದು ‘ವಿಶ್ವ ಗುಬ್ಬಿ ದಿನ’ ಅಂತೆ! ನಮ್ಮಂತಹ ಪುಟಾಣಿ ಜೀವಿಗಳಿಗೆ ಆಶ್ರಯವೇ ಇಲ್ಲದ ಮೇಲೆ ಇದು ಯಾವ ರೀತಿಯ ಗುಬ್ಬಿ ದಿನ? ನಿಮ್ಮ ಆಚರಣೆ ಹಿಂದಿನ ಕಾರಣ ನಮಗಿನ್ನೂ ಅರ್ಥವಾಗುತ್ತಿಲ್ಲ. ನಾವು ನಿಮಗೆ ವ್ಯವಹಾರಿಕವಾಗಿ ಸಹಾಯವಾಗದೆ ಇರಬಹುದು. ಆದರೆ ಪ್ರಪಂಚದ ಜೀವ ಸಂಕುಲದ ಸರಪಳಿಯಲ್ಲಿ ನಮಗೂ ಒಂದು ಸ್ಥಾನವಿದೆಯಲ್ಲ.

ನಮ್ಮ ಸ್ಥಾನವನ್ನು ಕಸಿಯುವುದು ಸರಿಯೇ? ಪ್ರಕೃತಿ ನಿಮ್ಮ ಬದುಕಿನ ಭಾಗವಲ್ಲ. ನಾವೆಲ್ಲ ಪ್ರಕೃತಿಯ ಭಾಗ
ಎಂಬ ಇನ್ನೂ ಸತ್ಯ ಅರಿವಾಗಿಲ್ಲವೇ . ಒಮ್ಮೇಲೆ ನಮಗೆ ಮರಣವಾದರೆ ನಾವು ಹೆದರುವುದಿಲ್ಲ. ಅದು ಬಂದು
ಹೋಗುತ್ತದೆ. ಆದರೆ ಈಗಿರುವ ಪ್ರತಿಕ್ಷಣದ ಸಾವಿನ ಭಯ ಮಾತ್ರ ಅದು ಹಿಂಸಿಸಿ ಕೊಲ್ಲುತ್ತಿದೆ. ನಿತ್ಯ ನೀವುಗಳೇ
ಹೊಡೆದಾಡಿ ಸಾಯುವಾಗ ನಮ್ಮ ಸಾವು ನಿಮಗೆ ಬಾಧಿಸದೆ ಇರಬಹುದು. ಆದರೆ ನಮ್ಮಗಳದ್ದು ಸಹ ಒಂದು ಜೀವ ಮತ್ತು ಜೀವನ ಇದೆ. ಅದು ನಿರ್ಜೀವ ಕಲ್ಲಲ್ಲ ಎಂಬುದು ಮಾತ್ರ ನೆನಪಿರಲಿ.