ಪ್ರಮುಖ ಹೊಯ್ಸಳ ಶೈಲಿಯ ವಾಸ್ತು ಕಲಾಕೃತಿ ಎಂದೇ ಗುರುತಿಸಿಲ್ಪಟ್ಟಿರುವ ದೊಡ್ಡಗದ್ದುವಳ್ಳಿ ಲಕ್ಷ್ಮಿ ದೇಗುಲ ದಲ್ಲಿರುವ ಪ್ರಧಾನ ವಿಗ್ರಹ ಮೊನ್ನೆ ರಾತ್ರಿ ಮುರಿದು ಬಿದ್ದಿದೆ. ಆಧುನಿಕ ಯುಗ ಎಂದೇ ನಾವು ಬಿಂಬಿಸಿಕೊಂಡಿರುವ ಈ ಇಪ್ಪತ್ತೊಂದನೆಯ ಶತಮಾನದಲ್ಲಿ ಇದೆಂತಹ ನಿರ್ಲಕ್ಷ್ಯ, ಇದೆಂತಹ ದುರಂತ!
ಶಶಿಧರ ಹಾಲಾಡಿ
ಇದೆಂತಹ ಸಾಂಸ್ಕೃತಿಕ ದುರಂತ! ನಮ್ಮ ನಾಡಿನ ಹೊಯ್ಸಳ ದೇಗುಲಗಳಲ್ಲಿ ಇರುವ ಏಕೈಕ ಲಕ್ಷ್ಮಿ ದೇವಾಲಯದ ಸುಂದರ ಮತ್ತು ಐತಿಹಾಸಿಕ ವಿಗ್ರಹವು ಮೊನ್ನೆ ನಾಶವಾಗಿದೆ. ನಮ್ಮ ನಾಡಿನ ಪ್ರಮುಖ ಹೊಯ್ಸಳ ದೇಗುಲಗಳು ಎಎಸ್‌ಐ (ಆರ್ಕಿಯಾ ಲಾಜಿಕಲ್ ಸರ್ವೇ ಆಫ್ ಇಂಡಿಯಾ, ಭಾರತೀಯ ಪುರಾತತ್ವ ಸವೇಕ್ಷಣ ಇಲಾಖೆ)ದ ವಶದಲ್ಲಿರುವುದರಿಂದ ಸುರಕ್ಷಿತವಾಗಿವೆ ಎಂದು ಜನಸಾಮಾನ್ಯರು ತಿಳಿದಿದ್ದಾರೆ. ಆದರೆ, ಹಾಸನ ಜಿಲ್ಲೆಯ ದೊಡ್ಡಗದ್ದುವಳ್ಳಿಯಲ್ಲಿರುವ ಸುಂದರ ಲಕ್ಷ್ಮಿ ದೇವಿಯ ದೇಗುಲದಲ್ಲಿರುವ ಲಕ್ಷ್ಮಿವಿಗ್ರಹವು 19.11.2020 ರಂದು ರಾತ್ರಿ ನಾಶವಾಗಿದೆ.
ನಾಡಿನಲ್ಲಿ ಉಳಿದಿರುವ ವಾಸ್ತು ಮತ್ತು ಶಿಲ್ಪಗಳನ್ನು ಸುರಕ್ಷಿಸಲು ಎಎಸ್‌ಐಗೆ ಸಾಧ್ಯವಾಗುತ್ತಿಲ್ಲವೆ? ನೂರಾರು ವರ್ಷ ಹಿಂದಿನ ಅಪರೂಪದ ಮತ್ತು ಅಮೂಲ್ಯ ವಿಗ್ರಹಗಳನ್ನು ರಕ್ಷಿಸುವಲ್ಲಿ ಎಎಸ್‌ಐ ನಿರ್ಲಕ್ಷ್ಯ ತೋರುತ್ತಿದೆಯೆ? ಇದೆಂತಹ ಜವಾಬ್ದಾರಿತನ, ನಿರ್ಲಕ್ಷ್ಯತನ!
ಹಳೆಬೀಡಿನಲ್ಲಿರುವ ವಿಶ್ವಪ್ರಸಿದ್ಧ ಹೊಯ್ಸಳ ದೇಗುಲಕ್ಕೆ ಸಾಕಷ್ಟು ಹತ್ತಿರದಲ್ಲಿ, ಸುಮಾರು 15 ಕಿಮೀ ದೂರದಲ್ಲಿರುವ ದೊಡ್ಡ ಗದ್ದುವಳ್ಳಿ ದೇಗುಲವು ಬಹಳ ಮಹತ್ವದ್ದು. ಬೇಲೂರಿನ ಚೆನ್ನ ಕೇಶವ ದೇಗುಲದ ನಿರ್ಮಾಣಕ್ಕಿಂತಲೂ ಒಂದೆರಡು ದಶಕಗಳಿ ಗಿಂತಲೂ ಮುಂಚೆಯೇ ನಿರ್ಮಾಣ ಗೊಂಡ ದೊಡ್ಡಗದ್ದುವಳ್ಳಿ ದೇಗುಲವು, ಹೊಯ್ಸಳಪೂರ್ವ ಶೈಲಿಯ ಹಲವು ಅಂಶಗಳನ್ನು ಮೈಗೂಡಿಸಿಕೊಂಡಿದೆ. ಸುಮಾರು 1114ರ ಸಮಯದಲ್ಲಿ ರಚನೆಗೊಂಡ ಈ ದೇಗುಲವು ಚತುಷ್ಕೂಟ ದೇಗುಲ ಎನಿಸಿದ್ದು, ನಾಲ್ಕು ಪ್ರಧಾನ ಗೋಪುರಗಳನ್ನು ಹೊಂದಿದೆ.
ಜತೆಯಲ್ಲೇ ದೇಗುಲದ ಆವರಣದಲ್ಲಿ ಇನ್ನೂ ಐದು ಪುಟ್ಟ ಪುಟ್ಟ ಶಿಲಾಗೋಪುರಗಳೂ ಇವೆ. ಹಸಿರು ಹೊಲಗಳ ನಡುವೆ ತಲೆ ಎತ್ತಿರುವ ಈ ದೇಗುಲವನ್ನು ದೂರದಿಂದ ನೋಡಿದರೆ ‘ಗೋಪುರಗಳ ವನ’ ದಂತೆ ಕಾಣಿಸುತ್ತದೆ. ಒಟ್ಟು ಒಂಬತ್ತು ಗೋಪುರ ಗಳನ್ನು ಹೊಂದಿರುವ ಈ ದೇಗುಲವು, ಹೊಯ್ಸಳ ರಾಜ ವಿಷ್ಣುವರ್ಧನನ ಕಾಲದಲ್ಲಿ (ಆಡಳಿತಾವಾಧಿ 1108-1152), ಆಭರಣಗಳ ವ್ಯಾಪಾರಿ ಕುಲ್ಹಣ ರಾಹುತ ಮತ್ತು ಆತನ ಪತ್ನಿ ಸಹಜಾ ದೇವಿಯವರು ಕೈಂಕರ್ಯದ ದೃಷ್ಟಿಯಿಂದ ನಿರ್ಮಿಸಿದ ಈ ದೇಗುಲವು, ಹೊಯ್ಸಳ ಶೈಲಿಯನ್ನು ಅಧ್ಯಯನ ಮಾಡುವ ನಿಟ್ಟಿನಲ್ಲೂ ಬಹಳ ಪ್ರಮುಖ.
ಇದರ ಶಿಲ್ಪಿಯ ಹೆಸರು ಮಲ್ಲೋಜ ಮಾಣಿಯೋಜ ಎಂದು ಶಾಸನವೊಂದು ಹೇಳಿದೆ. ಈ ದೇಗುಲವು ಶಿಲಾ ಜಗತಿಯ ಮೇಲೆ ನಿರ್ಮಾಣಗೊಂಡಿಲ್ಲ. ಜತೆಗೆ, ಹೊಯ್ಸಳ ಶೈಲಿಯ ನಂತರದ ದೇಗುಲಗಳಲ್ಲಿ ಕಾಣಿಸುವಂತೆ, ಅತಿ ಹೆಚ್ಚಿನ ಶಿಲಾ ವಿಗ್ರಹಗಳ
ಅಲಂಕಾರವೂ ಇಲ್ಲಿಲ್ಲ. ನೆರಳು ಬೆಳಕಿನ ವಿನ್ಯಾಸದಲ್ಲಿ ಸುಂದರವಾಗಿ ಕಾಣಿಸುವಂತೆ ಗೋಪುವನ್ನು ನಿರ್ಮಿಸಲಾಗಿದ್ದು, ಚತುಷ್ಕೂಟ ದೇಗುಲವಾಗಿದ್ದರಿಂದ ನಾಲ್ಕು ಗೋಪುರಗಳು ಒಂದರ ಪಕ್ಕ ಒಂದು ಬಹು ಸುಂದರವಾಗಿ ಕಾಣಿಸುತ್ತವೆ.
ಇಲ್ಲಿನ ಗೋಪುರಗಳು ಕದಂಬ ನಾಗರ ಶೈಲಿಯಲ್ಲಿವೆ. ಹೊಯ್ಸಳರ ಲಾಂಛನ ಎನಿಸಿರುವ ಸಳನು ಹುಲಿಯನ್ನು ಕೊಲ್ಲುತ್ತಿರುವ ಶಿಲ್ಪವು ಸುಕನಾಸಿಯಲ್ಲಿ ಸ್ಪಷ್ಟವಾಗಿ ಕಾಣಿಸುವುದು ವಿಶೇಷ. ಜತೆಗೆ, ಈ ದೇಗುಲವು ಹೆಚ್ಚಿನ ಹಾನಿಗೆ ಒಳಗಾಗದೇ, ಸಾಕಷ್ಟು ಸುಸ್ಥಿತಿಯಲ್ಲಿ ಉಳಿದುಕೊಂಡಿರುವುದು ವಿಶೇಷ.
ಲಕ್ಷ್ಮಿಯ ಅಪರೂಪದ ದೇಗುಲ
ಮುಖ್ಯ ಗರ್ಭಗೃಹದಲ್ಲಿ ಮೂರು ಅಡಿ ಎತ್ತರದ ಲಕ್ಷ್ಮಿಯ ಸುಂದರ, ಶಿಲಾವಿಗ್ರಹವಿದ್ದು, ಈ ನಿಟ್ಟಿನಲ್ಲಿ ಇದೊಂದು ಅಪರೂ
ಪದ ದೇಗುಲ. ಇತರ ಮೂರು ಗರ್ಭಗೃಹಗಳಲ್ಲಿ ಕಾಳಿ, ವಿಷ್ಣು ಮತ್ತು ಭೂತನಾಥ ಲಿಂಗಗಳಿದ್ದು, ಹಲವು ದೇವತೆಗಳ ಸಂಗಮ
ಎನಿಸಿದೆ ಈ ಶಿಲಾ ದೇಗುಲ. ಎದುರಿನಲ್ಲೇ ಎರಡು ಬೃಹತ್ ಗಾತ್ರದ ಆರು ಅಡಿ ಎತ್ತರದ ನಗ್ನ ಶಿಲಾ ವಿಗ್ರಹಗಳಿದ್ದು, ಅವುಗಳನ್ನು
ಬೇತಾಳ ಎಂದು ಹೆಸರಿಸಲಾಗಿದೆ. ದೇಗುಲದ ಒಳಗೆ ಇರುವ ಈ ನಗ್ನವಿಗ್ರಹಗಳು, ನೋಡಲು ತುಸು ಭಯ ಹುಟ್ಟಿಸುವ ಬೇತಾಳ ಗಳ ವಿಗ್ರಹಗಳು ಇನ್ನೆಲ್ಲೂ ಕಾಣಲು ಸಿಗದ ಅಪರೂಪದ ಶಿಲ್ಪಗಳು.
ಶಿಖರದ ಛಾವಣಿಯಲ್ಲಿ ತಾಂಡವೇಶ್ವರನ ಶಿಲ್ಪವನ್ನೂ ಕೆತ್ತಲಾಗಿದೆ. ಪುರಾತತ್ವ ಇಲಾಖೆ ನೇರ ಹೊಣೆ ದೊಡ್ಡಗದ್ದುವಳ್ಳಿಯ ಅಪರೂಪದ ಈ ಲಕ್ಷ್ಮಿ ವಿಗ್ರಹವು ಎರಡು ತುಂಡಾಗಲು ಕಾರಣಗಳು ಏನೇ ಇರಲಿ, ಅವೆಲ್ಲದಕ್ಕೂ ಭಾರತೀಯ ಪುರಾತತ್ವ ಸರ್ವೇ ಕ್ಷಣ ಇಲಾಖೆಯೇ (ಎಎಸ್‌ಐ) ನೇರ ಹೊಣೆ ಎಂಬುದರಲ್ಲಿ ಅನುಮಾನವಿಲ್ಲ. ನಿಧಿಯ ಆಸೆಗೆ ಯಾರೋ ದುರುಳರು ಈ ಹಾನಿ ಯನ್ನು ಮಾಡಿದ್ದರೂ, ಆ ನಿರ್ಲಕ್ಷ್ಯವೂ ಎಎಸ್‌ಐ ಹೊಣೆ. ಅಥವಾ, ವಿಗ್ರಹದ ಪೀಠ ಸಡಿಲಗೊಂಡಿದ್ದು, ಬಿದ್ದು, ವಿಗ್ರಹ ತುಂಡಾ ಗಿದ್ದರೂ ಅದಕ್ಕೆ ಎಎಸ್‌ಐ ಹೊಣೆ.
ಏಕೆಂದರೆ, ಅಂತಹ ಲೋಪದೋಷಗಳನ್ನು ಕಾಲದಿಂದ ಕಾಲಕ್ಕೆ ಸರಿಪಡಿಸುವುದೇ ಆ ಇಲಾಖೆಯ ಮುಖ್ಯ ಕರ್ತವ್ಯವಲ್ಲವೆ? ಆದರೆ, ದೊಡ್ಡಗದ್ದುವಳ್ಳಿಯಲ್ಲಿ ಖಾಯಂ ಕಾವಲುಗಾರನನ್ನೂ ನೇಮಕ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದು ನಿಜ ವಾಗಿದ್ದಲ್ಲಿ, ನಮ್ಮ ನಾಡಿನ ಅಪರೂಪದ ಶಿಲ್ಪಗಳಿಗೆ ರಕ್ಷಣ ನೀಡಬೇಕಾದ ಎಎಸ್ ಐ ಸಂಪೂರ್ಣ ವಿಫಲವಾಗಿದೆ ಎಂದೇ ಅರ್ಥ.
ಹಾಗಾದರೆ, ದೊಡ್ಡಗದ್ದುವಳ್ಳಿಯಂತಹ ಅಪರೂಪದ ಐತಿಹಾಸಿಕ ತಾಣಗಳಿಗೆ ಸೂಕ್ತ ರಕ್ಷಣೆ ಕೊಡುವವರು ಯಾರು? ಹೊಯ್ಸಳ
ಶೈಲಿಯ ಪ್ರಸಿದ್ಧ ದೇಗುಲವೊಂದರ ಪ್ರಮುಖ ವಿಗ್ರಹವೇ ಭಗ್ನಗೊಳ್ಳುವಂತಹ ಸ್ಥಿತಿಯಲ್ಲಿ ನಾವಿಂದು ಇದ್ದೇವೆ ಎಂದರೆ, ಇದನ್ನು
ಸಾಂಸ್ಕೃತಿಕ ದುರಂತ ಅಲ್ಲದೆ ಬೇರೇನೆಂದು ಕರೆಯಬೇಕು?
ಕಳವಾದ ವಿಷ್ಣು
ಸುಮಾರು ನಲವತ್ತು ವರ್ಷಗಳ ಹಿಂದೆ ಇಲ್ಲಿದ್ದ ವಿಷ್ಣುವಿನ ಸುಂದರ ವಿಗ್ರಹವು ಕಳವಾಗಿತ್ತು. ಇದೂ ಸಹ ಎಎಸ್‌ಐ ಅವರ ಸುಪರ್ದಿಗೆ ಬಂದ ನಂತರವೇ ನಡೆದ ಕಳವು. ಆ ಜಾಗದಲ್ಲಿ ಇಂದು ಕಾಲಭೈರವನ ಮೂರ್ತಿ ಇಡಲಾಗಿದೆ. 1958ರಲ್ಲಿ ಈ ಆಲಯ ವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಲಾಗಿದ್ದು, ಇದರ ಸಂರಕ್ಷಣೆ, ಉಸ್ತುವಾರಿ ಎಲ್ಲವೂ ಕೇಂದ್ರ ಸರಕಾರದ ಅಧೀನ ದಲ್ಲಿರುವ ಎಎಸ್‌ಐ ಅಥವಾ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಗೇ ಸೇರುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಇಲ್ಲಿನ ಸುಂದರ ವಿಷ್ಣು ಕಳುವಾಗಿದೆ ಎಂದರೆ, ನಮ್ಮವರಿಗೆ ಇಂತಹ ವಾಸ್ತು ಕಲಾಕೃತಿಗಳ ಮೇಲೆ ಇರುವ ನಿರಭಿಮಾನ ಎದ್ದು ತೋರುತ್ತದೆ.
ನಾಶಗೊಂಡ ಲಕ್ಷ್ಮಿ
19.11.2020ರ ರಾತ್ರಿ ಇಲ್ಲಿನ ಗರ್ಭಗುಡಿಯಲ್ಲರುವ ಲಕ್ಷ್ಮಿ ವಿಗ್ರಹ ನಾಶಗೊಂಡ ವಿದ್ಯಮಾನ ನಿಜಕ್ಕೂ ದುರದೃಷ್ಟಕರ. 20ರಂದು ಬೆಳಿಗ್ಗೆ ಸ್ಥಳೀಯ ಅರ್ಚಕರು ಬಂದು ನೋಡಿದಾಗ, ಲಕ್ಷ್ಮಿ ವಿಗ್ರಹವು ಬೋರಲಾಗಿ ಬಿದ್ದ ಸ್ಥಿತಿಯಲ್ಲಿದ್ದು, ಮಧ್ಯದಲ್ಲಿ ತುಂಡಾ ಗಿದ್ದು ಕಂಡುಬಂದಿದೆ. ಕೆಲವು ಕಾಲದಿಂದ ಇದರ ಪೀಠವು ಸಡಿಲಗೊಂಡಿದ್ದು, ಈ ವಿಚಾರವನ್ನು ಹಳೆಬೀಡಿನಲ್ಲಿರುವ ಎಎಸ್‌ಐ ಗಮನಕ್ಕೆ ತರಲಾಗಿದ್ದರೂ, ಆ ಇಲಾಖೆಯು ದಿವ್ಯ ನಿರ್ಲಕ್ಷ್ಯವನ್ನು ತೋರಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಜತೆಯಲ್ಲೇ, ನಿಧಿಯ ಆಸೆಗೆ ಈ ವಿಗ್ರಹವನ್ನು ನಾಶಪಡಿಸಲು ಯತ್ನಿಸಲಾಯಿತು ಎಂಬ ಕೋನದಲ್ಲೂ ತನಿಖೆ ಆಗಬೇಕು ಎಂದು ನಾಡಿನ ಅಸಂಖ್ಯಾತ ವಾಸ್ತು ಪ್ರೇಮಿಗಳು, ಕಲಾಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.