Saturday, 14th December 2024

ಚಿಟ್ಟೆಗಳ ಹಬ್ಬ

ಚಿಟ್ಟೆಗಳ ಹಾರಾಟವನ್ನು ನೋಡುವುದೇ ಒಂದು ಕಾವ್ಯಾನುಭವ. ಬಣ್ಣದ ರೆಕ್ಕೆಗಳನ್ನು ಬಡಿ ಯುತ್ತಾ, ಬಣ್ಣದ ಹೂವುಗಳ ಮೇಲೆ ಕುಳಿತುಕೊಳ್ಳುವ ಚಿಟ್ಟೆಗಳು ದಿನವಿಡೀ ಪುಟ್ಟ ಪುಟ್ಟ ಕವನ ಗಳನ್ನು ಬರೆಯತ್ತಲೇ ಇರುತ್ತವೆ!

ಶಶಿಧರ ಹಾಲಾಡಿ

ಮಳೆಗಾಲದ ಒಂದು ದಿನ. ಸಂಜೆ ಹೊಳವಾಗಿತ್ತು. ಮಗಳನ್ನು ಕರೆದುಕೊಂಡು ಪಾರ್ಕ್‌ಗೆ ಹೋಗಿದ್ದೆ. ಅಲ್ಲಿನ ಗಿಡಗಳ ತುಂಬಾ ಕಂಬಳಿ ಹುಳುಗಳು.

‘ಕಂಬಳಿ ಹುಳ ಮೈಗೆ ತಲುಗಿದರೆ ಮೈ ತುಂಬಾ ತುರಿಕೆ ಆಗುತ್ತೆೆ, ಅದನ್ನು ಸಾಯಿಸಿ ಬಿಡೋಣ’ ಎಂದಳು ಮಗಳು. ‘ಬೇಡ ಕಣಮ್ಮಾ, ಯಾಕೆ ಗೊತ್ತಾ?’ ಎಂದು ಪ್ರಶ್ನಿಸಿದೆ. ‘ಯಾಕೆ?’ ‘ಇದೇ ಕಂಬಳಿ ಹುಳಗಳು ಇನ್ನು ಒಂದೆರಡು ವಾರಗಳಲ್ಲಿ ಚಿಟ್ಟೆಗಳಾಗಿ ಹಾರುತ್ತವೆ. ಬಣ್ಣ ಬಣ್ಣದ ಚಿಟ್ಟೆಗಳೆಂದರೆ ನಿನಗೆ ಇಷ್ಟ, ಅಲ್ಲವಾ?’ ಎಂದೆ.

‘ಹೌದಾ, ಇದೇ ಕಪ್ಪು ಕಂಬಳಿಹುಳಗಳು ಚಿಟ್ಟೆ ಆಗುತ್ತವಾ? ಹಾಗಾದರೆ, ಸಾಯಿಸುವುದು ಬೇಡ. ಚಿಟ್ಟೆ ಚಿಟ್ಟೆ, ಚಂದದ ಚಿಟ್ಟೆ’ ಎಂದ ಮಗಳು, ಕುಣಿದಾಡುತ್ತಾ, ಪಾರ್ಕ್‌ನಲ್ಲಿ ಆಟವಾಡತೊಡಗಿದಳು. ಒಂದೆರಡು ವಾರ ಗಳಲ್ಲಿ, ಆ ಪಾರ್ಕ್ ತುಂಬಾ ಪುಟಾಣಿ ಚಿಟ್ಟೆಗಳು ಹಾರಾಡತೊಡಗಿದವು! ಹಳದಿ, ಕೇಸರಿ, ನೀಲಿ ಬಣ್ಣದ ಚಿತ್ತಾರ ತುಂಬಿದ ಅವುಗಳ ರೆಕ್ಕೆಗಳೇ ಎಷ್ಟು ಚಂದ! ಕಾಡು ಹೂವೇ ಸಿಗಲಿ, ನಾಡ ಹೂವೇ ಅರಳಲಿ, ಅದರ ಮೇಲೆ ಕುಳಿತು, ಮಕರಂದ ಹೀರುತ್ತಾ ರೆಕ್ಕೆ ಬಡಿಯುವ ಆ ಚಿಟ್ಟೆಗಳನ್ನು ನೋಡುತ್ತಾ ಕೂರುವದೇ ಒಂದು ಕಾವ್ಯಾನುಭವ.

ಇದಾಗಿ ಇಪ್ಪತ್ತು ವರ್ಷಗಳಾಗಿವೆ. ನಾವೆಲ್ಲರೂ ಈಗ ಫ್ಲಾಟ್ ವಾಸಿಗಳಾಗಿ, ಬೆಂಗಳೂರಿನ ನಾಗರಿಕ ಕಟ್ಟು ಪಾಡುಗಳ ಶಿಶುಗಳಾಗಿದ್ದೇವೆ. ನಮ್ಮ ನಿವಾಸಿಗಳ ಸಂಘದ ವಾಟ್ಸಾಪ್ ಗುಂಪಿನಲ್ಲಿ ಒಂದು ದಿನ, ಯಾರೋ ಒಬ್ಬರು ಒಂದು ಗಾಬರಿ ಇಮೋಜಿ ಜತೆ ಸಂದೇಶ ಹಾಕಿದ್ದರು ‘ಅಯ್ಯಯ್ಯೋ, ಐದನೆಯ  ಮಹಡಿಯ ಬಾಲ್ಕನಿಯಂತಹ ಜಾಗದಲ್ಲಿ ಕಂಬಳಿ ಹುಳಗಳಿವೆ. ನಮ್ಮ ಮಕ್ಕಳು ಅಲ್ಲಿಗೆ ಹೋದರೆ ಮೈತುಂಬಾ ಗಂಧೆ ಗಳಾಗುತ್ತವೆ. ಮಕ್ಕಳಿಗೆ ಭಯ ಆಗುತ್ತಿದೆ!’ ಕೆಲವೇ ನಿಮಿಷಗಳಲ್ಲಿ ಅದಕ್ಕೆ ಉತ್ತರವಾಗಿ ಹತ್ತಾರು ನಿವಾಸಿ ಗಳು ಪಟಪಟನೆ ಸಂದೇಶ ತೂರಿದರು. ‘ಕಂಬಳಿ ಹುಳನಾ? ಅಪಾಯ! ಮಕ್ಕಳು ಮುಟ್ಟಿದರೆ ಮೈತುಂಬಾ ದದ್ದುಗಳು ಏಳುತ್ತವೆ’ ‘ಮಕ್ಕಳು ಅಲ್ಲಿಗೆ ಹೋಗಲು ಬಿಡಬೇಡಿ, ಕಂಬಳಿಹುಳಗಳಿಂದ ಅಪಾಯವಿದೆ’ ‘ಈಗ ಕರೋನಾ ಲಾಕ್‌ಡೌನ್ ಇದೆ, ಮಕ್ಕಳಿಗೆ ಬೇರೆಲ್ಲೂ ಆಟವಾಡಲು ಜಾಗವಿಲ್ಲ. ಐದನೆಯ ಮಹಡಿಯ ಬಾಲ್ಕನಿ ಯಲ್ಲಿರುವ ನೂರಾರು ಕಂಬಳಿ ಹುಳಗಳಿಂದ ಮಕ್ಕಳಿಗೆ ಅಪಾಯವಿದೆ’ ‘ಮಳೆ ಬಂದು, ಆ ಗೋಡೆ ಯಲ್ಲೆಲ್ಲಾ ನೀರಿನ ಪಸೆ. ಬಾಲ್ಕನಿಯ ಕೈಪಿಡಿ ಗೋಡೆಯ ತುಂಬಾ ಕಂಬಳಿ ಹುಳಗಳಿವೆ ತಕ್ಷಣ ಅವುಗಳನ್ನು ತೆಗೆಸಿ. ಇಲ್ಲ ವಾದರೆ ನಮ್ಮ ಮಕ್ಕಳಿಗೆ ಕಷ್ಟವಾಗುತ್ತದೆ’ ಎಂದು ಫೋಟೋ ಸಹ ಹಾಕಿದ್ದರು. ಪುಟಾಣಿ ಕಂಬಳಿ ಹುಳಗಳು ಆ ಫೋಟೋದಲ್ಲಿದ್ದದ್ದು ನಿಜ.

ಇದೆಲ್ಲಾ ಕಂಡು ನಾನೊಂದು ಸಂದೇಶ ಬಿಟ್ಟೆ. ‘ಕಂಬಳಿ ಹುಳಗಳೇ ಮುಂದೆ ಚಿಟ್ಟೆಗಳಾಗುತ್ತವೆ.  ಅವು ಗಳಿಂದಲೇ ಪರಾಗ ಸ್ಪರ್ಶ. ಮಕ್ಕಳಿಗೆ ತಿಳಿಹೇಳಬೇಕು. ಪರಿಸರದ ವಿಚಾರ ತಿಳಿಸಲು ಇದೊಂದು ಒಳ್ಳೆಯ ಅವಕಾಶ. ಕಂಬಳಿ ಹುಳಗಳನ್ನು ಕೊಲ್ಲುವುದು ಬೇಡ’.

ಆದರೆ, ಅಲ್ಲಿದ್ದ ಕಂಬಳಿ ಹುಳ ತೆಗೆಸಬೇಕೆಂದು ಇನ್ನಷ್ಟು ಮನವಿ ಬಂದವು. ನಂತರ ವೈಯಕ್ತಿಕವಾಗಿ ಏನಾದರೂ ಚರ್ಚೆ ನಡೆಯಿತೋ ಗೊತ್ತಿಲ್ಲ. ನಮ್ಮ ನಿವಾಸಿಗಳ ಸಂಘದ ಪದಾಧಿಕಾರಿಗಳು ಒಂದು ಸಂದೇಶ ಹಾಕಿದರು ‘ಸುಮಾರು ಕಂಬಳಿಹುಳಗಳಿಂದ ತೊಂದರೆ ಕಂಡು ಬಂದಿದೆ. ಅವುಗಳನ್ನು ನಿವಾರಿಸಲು ಪೆಸ್‌ಟ್‌ ಕಂಟ್ರೋಲ್‌ನವರಿಗೆ ತಿಳಿಸಿದ್ದೇವೆ’. ಒಂದೆರಡು ದಿನಗಳಲ್ಲಿ ಪೆಸ್‌ಟ್‌‌ಕಂಟ್ರೋಲ್ ನವರು ಬಂದು, ತಮ್ಮ ಕೆಲಸವನ್ನು ಮುಗಿಸಿದರು!

ಇದಾಗಿ ಒಂದೆರಡು ವಾರಗಳು ಕಳೆದಿವೆ. ನಮ್ಮ ಫ್ಲಾಟ್ ಸುತ್ತಲೂ ಇರುವ ಕೈತೋಟದಲ್ಲಿ ನಾಲ್ಕೆೆಂಟು ಚಿಟ್ಟೆಗಳು ಹಾರಾಡುತ್ತಿವೆ! ಲಂಟಾನಾ ಇರಲಿ, ಶಂಕಪುಷ್ಪವೇ ಇರಲಿ, ಚುರುಕಾಗಿ ಹಾರುತ್ತಾ ಮಕರಂದ ಸಂಗ್ರಹಿಸುತ್ತಿವೆ! ತಮ್ಮ ಬಣ್ಣ ರೆಕ್ಕೆಗಳಿಂದಲೇ ನಸುನಗುತ್ತಾ, ನಾವು ಬಳಿಸಾರಿದರೆ, ಮೆಲ್ಲಗೆ ತೇಲುತ್ತಾ ಸಾಗಿ
ಪಕ್ಕದ ಹೂವಿನ ಮೇಲೆ ಕುಳಿತು, ಪರಾಗ ಸ್ಪರ್ಶ ಕ್ರಿಯೆ ಮುಂದುವರಿಸುತ್ತಿವೆ.

ಸಣ್ಣಗೆ ಹನಿಯುತ್ತಿರುವ ಮಳೆಯ ನಡುವೆಯೇ, ಅತ್ತಿಿಂದಿತ್ತ ಹಾರಾಡುವ ಬಣ್ಣದ ಚಿಟ್ಟೆಗಳ ನೋಟ, ಮನಸ್ಸಿ ನಲ್ಲಿ ಸಂತಸದ ಅಲೆಗಳನ್ನು ಏಳಿಸುತ್ತಿವೆ. ಈ ಜಗತ್ತು ತನ್ನ ಚಲನಶೀಲತೆಯನ್ನು ಇನ್ನೂ ಉಳಿಸಿಕೊಂಡಿದೆ! ಗೆಳೆಯ ಕೆ.ಪಿ.ಸತ್ಯನಾರಾಯಣ ಅವರು ಹಾಸನದಿಂದ ಕೆಲವು ಫೊಟೋಗಳನ್ನು ಕಳಿಸಿದ್ದರು. ಹಾಸನದಲ್ಲಿ ಅವರ ಮನೆಯ ಮುಂದಿನ ಖಾಲಿ ಜಾಗದಲ್ಲಿದ್ದ ಗಿಡಗಳ ಮೇಲೆ ಬಣ್ಣ ಬಣ್ಣದ ಚಿಟ್ಟೆಗಳ ಹಾರಾಟ. ಆ ಸುಂದರ ನೋಟವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸಂಭ್ರಮದಿಂದ ಎಲ್ಲರೊಡನೆ ಹಂಚಿಕೊಂಡಿದ್ದಾರೆ.

ಚಿಟ್ಟೆಗಳು ಎಂದಿನಂತೆ ತಮ್ಮ ಚೆಲ್ಲಾಟದಲ್ಲಿ ತೊಡಗಿಕೊಂಡಿವೆ. ತಮ್ಮ ಪಾಡಿಗೆ ಈ ಜಗತ್ತಿಗೆ ಬಣ್ಣದ ಸಿಂಚನ
ಮಾಡುತ್ತಾ, ಭರವಸೆಯ ಹಾರಾಟವನ್ನು ಮುಂದುವರಿಸಿವೆ. ಚಿಟ್ಟೆಗಳ ಹಬ್ಬಕ್ಕೆ ಜಯವಾಗಲಿ!

ಚಿಟ್ಟೆಗಳ ವಲಸೆ
ಹಗುರ ದೇಹದ ಚಿಟ್ಟೆಗಳು ಸಾವಿರಾರು ಮೈಲಿ ದೂರ ವಲಸೆ ಹೋಗುವುದು ಪ್ರಕೃತಿಯ  ವಿಸ್ಮಯಗಳ ಲ್ಲೊೊಂದು. ಅಮೆರಿಕದ ಮೊನಾರ್ಕ್ ಚಿಟ್ಟೆಗಳು 4,000 ಮೈಲಿ, ಬ್ರಿಟಿಷ್ ಪೈಂಟೆಡ್ ಲೇಡಿ ಚಿಟ್ಟೆಗಳು 9,000 ಮೈಲಿ ವಲಸೆ ಹೋಗಿ ಸಂತಾನೋತ್ಪತ್ತಿ ಮಾಡಿ ವಾಪಸಾಗುತ್ತವೆ!

ಹಾರುತ್ತಾ ಹೋಗುವ ತಲೆಮಾರು ಒಂದಾದರೆ, ಅದೇ ಜಾಗಕ್ಕೆ ವಾಪಸಾಗುವ ಚಿಟ್ಟೆಗಳು ಬೇರೊಂದೇ ತಲೆಮಾರಿನವು! ನಮ್ಮ ಪಶ್ಚಿಮ ಘಟ್ಟಗಳಲ್ಲೂ ಸಾವಿರಾರು ಚಿಟ್ಟೆಗಳು ಸ್ಥಳೀಯವಾಗಿ ಮತ್ತು ಪೂರ್ವ ಘಟ್ಟಗಳಿಗೆ ವಲಸೆ ಹೋಗುತ್ತವೆ. ಆದರೆ, ಈ ಪ್ರಾಕೃತಿಕ ವಿಸ್ಮಯದ ಪೂರ್ಣ ಅಧ್ಯಯನದ ವಿವರಗಳು ನಮ್ಮ
ಜನರನ್ನು ಇನ್ನೂ ತಲುಪಿಲ್ಲ. ಪ್ರತಿ ವರ್ಷ ಸೆಪ್ಟೆೆಂಬರ್- ಡಿಸೆಂಬರ್ ಅವಧಿಯಲ್ಲಿ, ಡಾರ್ಕ್ ಬ್ಲೂ ಟೈಗರ್, ಡಬಲ್ ಬ್ರಾಾಂಡೆಡ್ ಬ್ರೌನ್ ಕ್ರೌ ಎಂಬ ಹೆಸರಿನ ಚಿಟ್ಟೆಗಳ ಗುಂಪು ಮೈಸೂರು- ಬೆಂಗಳೂರು ಮೂಲಕ ವಲಸೆ ಹೋಗುತ್ತವೆ!