Thursday, 12th December 2024

ಆತ್ಮಘಾತಕ ಚಿಂತಕಪಡೆಯ ನಿಗೂಢ ಮೌನ

ಸಂತೋಷ ಕುಮಾರ ಮೆಹಂದಳೆ

ದೆಹಲಿಯಿಂದ ವಿಮಾನದ ಮೂಲಕ ಕೇವಲ ಒಂದು ಗಂಟೆಯ ದಾರಿ ಎನಿಸಿರುವ ಕಾಬೂಲ್‌ನಲ್ಲಿ ಬಂದೂಕು ಹಿಡಿದ ಭಯೋತ್ಪಾದಕರು ಅಧಿಕಾರ ಹಿಡಿಯಲು ಸನ್ನದ್ಧರಾಗಿದ್ದಾರೆ. ಅಮೆರಿಕದ ರಕ್ಷಣಾ ಪಡೆ ತನ್ನ ದೇಶಕ್ಕೆ ವಾಪಸಾದ ಕೆಲವೇ ದಿನಗಳಲ್ಲಿ ತಾಲಿಬಾನ್ ಭಯೋತ್ಪಾದಕರು ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದೇವೆ ಎಂದು ಘೋಷಿಸಿದ್ದಾರೆ. ಮಹಿಳೆಯರನ್ನು ಕಚೇರಿಯಿಂದ ಮನೆಗೆ ಕಳಿಸಿದ, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಗುಂಡು ಹಾರಿಸಿದ, ಸಿಕ್ಕ ಸಿಕ್ಕಲ್ಲಿ ಜನರನ್ನು ಚಚ್ಚುತ್ತಿರುವ ಬಂದೂಕುಧಾರಿಗಳನ್ನು ಕಂಡು ಬೆದರಿದ ಅಫ್ಘಾನಿಸ್ತಾನದ ಜನರು, ವಿಮಾನದ ರೆಕ್ಕೆಗಳ ಮೇಲೆ ಕುಳಿತು ತಮ್ಮ ತಾಯ್ನಾಡನ್ನು ತೊರೆದು ಪಲಾಯನ ಮಾಡುತ್ತಿದ್ದಾರೆ. ಬಂದೂಕು ಉಗುಳುವ ಗುಂಡುಗಳನ್ನು ಬಳಸಿ, ಪುರಾತನ ಕಾಲದ ಗ್ರಂಥಗಳಲ್ಲಿವೆ ಎನ್ನಲಾದ ಕಾನೂನನ್ನು ಇಪ್ಪತ್ತೊಂದನೆಯ ಶತಮಾನದಲ್ಲಿ ಜಾರಿಗೊಳಿಸಲು ಪ್ರಯತ್ನ ನಡೆಸುತ್ತಿರುವ ತಾಲಿಬಾನ್‌ನ ದುಸ್ಸಾಹಸವನ್ನು ಎಲ್ಲಾ ಚಿಂತಕರು, ಬುದ್ಧಿಜೀವಿ ಗಳು, ವಿಶ್ಲೇಷಕರು ಒಕ್ಕೊರಲಿನಿಂದ ಖಂಡಿಸಬೇಕಾದ ಅಗತ್ಯ ಇಂದಿನದು.

ಸರಿಯಾಗಿ ಮೂರು ದಶಕಗಳ ಹಿಂದೆ.. ಮುಜಾಹಿದ್ದಿನ್‌ಗಳ ಗಲಾಟೆ ವಿಪರೀತ ಮಟ್ಟ ಕ್ಕೆ ಹೋಗಿ ಈಗಿನಂತೆ ಅಫ್ಘಾನಿಸ್ತಾನ್ ಅಗ್ನಿಕುಂಡವಾಗಿತ್ತು. ದೇಶದಲ್ಲಿದ್ದ ವರಿಗಿಂತ ಓಡಿ ಹೋದವರ ಪೈಕಿ ಪೇಶಾವರ್ ಫ್ರಾಂಟಿಯರ್, ಇರಾನ್ ಮತ್ತು ಬಲೂಚಿಸ್ತಾನದಲ್ಲಿ ಏನಿಲ್ಲವೆಂದರೂ ಐದೂ ಚಿಲ್ಲರೆ ಲಕ್ಷ ಜನ ನಿರಾಶ್ರಿತರಿ
ದ್ದರು. ಇವರಿಗೆಲ್ಲ ಪಾಕಿಸ್ತಾನ ಸಾಲುಸಾಲಾಗಿ ಗಂಜಿಕೇಂದ್ರಗಳನ್ನು ತೆರೆದಿಟ್ಟು ಬಿಟ್ಟಿತ್ತು. ಅವರನ್ನೆಲ್ಲ ಸಲಹುತ್ತಿದ್ದೇನೆಂದೂ ಪಕ್ಕದ ಇಸ್ಲಾಂ ರಾಷ್ಟ್ರಕ್ಕಾಗಿ ನಾವು ಇಷ್ಟೂ ಮಾಡದಿದ್ದರೆ ಹೇಗೆ ಎಂದು ಪಾಕಿಸ್ತಾನ ಜಗತ್ತಿನ ಒಳಕೋವೆಗಳಿಗೆ ತನ್ನ ಹಿರಿಮೆರಿಕೊಳ್ಳುತ್ತಿತ್ತು.

ವ್ಯಂಗ್ಯವೆಂದರೆ ತಾನೇ ಮೊದಲಿಗೆ ಆಗಿನ ತಾಲಿಬಾನ್ ಸರಕಾರವನ್ನೂ ಮಾನ್ಯ ಮಾಡಿತ್ತು. ಪಾಕಿಸ್ತಾನ ಪ್ರಧಾನಿ ಜಿಯಾ ಉಲ್ ಹಕ್ ನೇರವಾಗಿ ಅಪಘನ್ನರನ್ನು ಬೆಂಬಲಿಸುತ್ತಲೇ ತನ್ನದೇ ರಾಜಕೀಯ ದಾಳ ಉರುಳಿಸತೊಡಗಿದ್ದ. ಕಾರಣ ಏನೇ ಇರಲಿ ಇಸ್ಲಾಂ ಎಂದು ಅರಬ್ಬರ ಜಗತ್ತು ಬಡಿದಾಡಿದರೂ, ರಾಜಕೀಯ ವಾಗಿ ಎಷ್ಟು ಬೇಕೋ ಅಷ್ಟೆ ಧರ್ಮ ಬಳಸುವ ಅವಕಾಶವಾದಿ ರಾಜಕಾರಣವನ್ನು ಪಾಕ್ ನಡೆಸುತ್ತಿತ್ತು. ಇದೆಲ್ಲ ಗೊತ್ತಿದ್ದ ಒಸಾಮ ಬಿನ್ ಲಾಡೆನ್ ಇದೆಲ್ಲ ಬಳಸಿಕೊಂಡೆ ಮುಜಾಹಿದ್ದಿನ್‌ಗಳಿಗೆ ಸಹಾಯ ಮಾಡುತ್ತ, ಪಾಕಿಸ್ತಾನದಿಂದ ಬರುತ್ತಿದ್ದ ಆಯುಧಗಳ ಬೆಂಬಲ ದಲ್ಲಿ ಅವರನ್ನು ಅಫ್ಘಾನ್ ನೆಲದಲ್ಲಿ ಬಡಿದಾಡಲು ಬಿಡುತ್ತಿದ್ದ.
ಈ ಸಂದರ್ಭದಲ್ಲಿ ಲಾಡೆನ್ ಪ್ರೇರಿತ ಹತ್ತಾರು ಗುಂಪುಗಳು ಒಳಹೊಕ್ಕು ಗೆರಿಲ್ಲ ವಾರ್ ಮಾಡಿ ಬರುತ್ತಿದ್ದವು. ಬದುಕಿ ಬಂದವನು ನಾಯಕನಂತೆ ಕಂಗೊಳಿಸು ತ್ತಿದ್ದ.

ರದಿದ್ದವರು ಅಕ್ಷತ ಕನ್ನೆಯರ ಸರದಾರರು(?). ಎಲ್ಲರಿಗೂ ಆಯುಧ ಮತ್ತು ಊಟೋಪಚಾರ ಇತ್ಯಾದಿ ಲಾಡೆನ್‌ನ ಮುಂದಾಳತ್ವದಲ್ಲಿ ನಡೆಯುತ್ತಿತ್ತಲ್ಲ. ಹಾಗೆ ಬಿಟ್ಟರೆ ಅದೆಲ್ಲದರ ಕ್ರೆಡಿಟ್ಟು ಕೊನೆಗೆ ಅವನಿಗೇ ದಕ್ಕುತ್ತದೆ. ಬದಲು ತನ್ನ ಹೆಸರು ಮುಸ್ಲಿಂ ರಾಷ್ಟ್ರಗಳಲ್ಲಿ ಜನಜನಿತವಾಗಬೇಕು ಎಂಬ ನಯವಂಚಕತನ ದಿಂದಾಗಿ ಪಾಕ್ ಎರಡು ಪ್ರಮುಖ ಈಡು ಹೊಡೆದುಬಿಟ್ಟಿತ್ತು. ಒಂದು ಅಪಘನ್ ಮುಜಾಹಿದ್ದಿನ್‌ಗಳಿಗೆ ಆಯುಧ ಸಹಾಯ ದಕ್ಕುವಂತೆ ಮಾಡಿ ಅದೆಲ್ಲ ಸಹಾಯ ತಾನು ಮಾಡುತ್ತಿದ್ದೇನೆನ್ನುವ ಕ್ರೆಡಿಟ್ ತೆಗೆದುಕೊಳ್ಳುವುದು.

ಎರಡನೆಯದ್ದು ಯಾರೇ ಉಳಿದರೂ ಇವತ್ತಲ್ಲ ನಾಳೆ ರಷ್ಯಾ ವಾಪಸ್ಸು ಹೋಗಲೇ ಬೇಕಲ್ಲವೇ..? ಆಗ ಇದ್ದುದರಲ್ಲಿ ಯಾರೋ ಒಬ್ಬಾತನನ್ನು ನಾಯಕನನ್ನು ಆರಿಸಿ ಅಪಘನ್ ಸರ್ಕಾರದಲ್ಲಿ ಆಂತರಿಕ ಹಸ್ತಕ್ಷೇಪಕ್ಕೆ ಅವಕಾಶ ಉಳಿಸಿಕೊಂಡು, ಅಲ್ಲಿ ತಮ್ಮ ಕೈಗೊಂಬೆಯಾಗಿರುವ ಸರಕಾರ ಸ್ಥಾಪಿಸಿಕೊಳ್ಳುವುದು. ಹೀಗೆ ದೂರಗಾಮಿ ನೆಲೆಯಲ್ಲಿ ಯೋಚಿಸಿದ ಪಾಕಿಸ್ತಾನ ಬೇರೆಬೇರೆ ಬುಡಕಟ್ಟುಗಳ ಪ್ರಮುಖ ಏಳು ನಾಯಕರಿಗೆ ಮುಜಾಹಿದ್ದಿನ್ ಕಮಾಂಡರ್‌ಗಳೆಂದು ಹೆಸರಿಸಿ
ಅವರಿಗೊಂದು ವಜನು ಸೃಷ್ಟಿಸಿತು. ಆ ಹೆಸರಿನಡಿಗೆ ನಿಲ್ಲುವ ನಾಯಕನ ದೌಲತ್ತೇ ಬೇರೆ ಎನ್ನುವಂತೆ ಅದನ್ನೊಂದು ಪದವಿಯನ್ನಾಗಿ ಬದಲಾಯಿಸಿತು.

ಹಿಂದಿರುಗಿ ಹೋದ ರಷ್ಯಾ
ಆಗ ಹಾಗೆ ಕಮಾಂಡರ್ ರೂಪದಲ್ಲಿ ಎದ್ದು ನಿಂತವರೇ ಅಹಮ್ಮದ್ ಮಸೂದ್ ಶಾ, ಗುಲ್ಬುದ್ದಿನ್ ಹೆಕ್ಮತ್ಯಾರ್(ಹಿಸ್ಟ್ -ಏ-ಇಸ್ಲಾಮಿ ಪಕ್ಷದ ನಾಯಕ. ಈಗಿನ ತಾಲಿಬನ್ ಸರಕಾರದಲ್ಲೂ ಪಾಲುದಾರ ಜತೆಗೆ ಆಗಿನ ತಾಲಿಬಾನ್‌ನ ಪ್ರಧಾನಿಯಾಗಿ ಸ್ವತಃ ದೇಶದ ಮೇಲೆ ರಾಕೆಟ್ ಲಾಂಚರ್ ಮೂಲಕ ದಾಳಿ ಮಾಡಿಸಿದ ಖ್ಯಾತಿ ಇವನದ್ದು), ಬಹಾರುದ್ದಿನ್ ರಬ್ಬಾನಿ, ಹೇರಾತ್‌ನ ಇಸ್ಮಾಯಿಲ್ ಖಾನ್, ಮಝಾರ್ ಈ ಶರಿಫನ ರಶೀದ್ ದೋಸ್ತುಂ, ಹಾಜಿ ಖದೀರ್ ಮತ್ತು
ಯೂನುಸ್ ಖಾಲಿಸ್ಸ್.

ಈ ಏಳು ಜನರನ್ನು ಪಾಕಿಸ್ತಾನ ಗೆರಿಲ್ಲಾ ಯುದ್ಧತಂತ್ರಕ್ಕೆ ರೂಪಿಸಿ, ಅಮೆರಿಕಕ್ಕೆ ಕೊಡುತ್ತಿದ್ದ ಆಯುಧ, ಹಣವನ್ನು ಈಜಿಪ್ತ ಮೂಲಕ ತನ್ನ ಖಜಾನೆಗೆ ಸೇರಿಸಿ ಕೊಂಡು ರಣತಂತ್ರದ ತರಬೇತಿ ಯನ್ನೂ ಅಮೇರಿಕೆಯ ಕ್ಯಾಪ್ಟನ್ ಗಳಿಂದಲೇ ಕೊಡಿಸಿದ್ದರು. ಎರಡು ದಶಕಗಳ ಹೋರಾಟ ಫಲಕಾರಿಯಾಗದೆ ಆಗ ರಷ್ಯಾ ಹಿಂದಿರುಗುತ್ತಿದ್ದಂತೆ, ಈ ಏಳೂ ಜನ ಕಮಾಂಡರ್‌ಗಳು ಅಪಘಾನಿಸ್ತಾನವನ್ನು ಹಂಚಿಕೊಂಡು ಹರಿದು ತಿಂದುಬಿಟ್ಟರು. ಮತ್ತೊಮ್ಮೆ ಇದ್ದಬದ್ದವರೆಲ್ಲ ಪಾಕಿಸ್ತಾನ ಮತ್ತು ಇರಾನ್ ಸರಹದ್ದಿಗೆ ಓಡಿಹೋಗಿಬಿಟ್ಟಿದ್ದರು ಈಗಿನಂತೆ. ಆಗಲೂ ಈ ಕಮಾಂಡರ್‌ ಗಳ ದಾದಾಗಿರಿಯ ಸರಕಾರವನ್ನು ಮಾನ್ಯ ಮಾಡಿದ್ದು ಪಾಕಿಸ್ತಾನ. ಆದರೆ ಇದೆಲ್ಲ ಸೈರಿಸಲಾಗದೆ ಸರಹದ್ದಿನಲ್ಲಿದ್ದ ಲಕ್ಷಾಂತರ ಸಮೂಹ ಇತ್ತಲ್ಲ. ಅದನ್ನೆ ಲಾಡೆನ್ ಮತ್ತೊಮ್ಮೆ ಸಂಘಟಿಸಿದ್ದ. ಹೀಗೆ ಓಡಿ ಬಂದಿದ್ದ ಸಮೂಹ ಮುಜಾಹಿದ್ದಿನ್‌ಗಳ ವಿರುದ್ಧ ತಿರುಗಿ ಬಿದ್ದಿತ್ತು.

ಆ ಸಮೂಹವೇ ಆಗಿನ ತಾಲಿಬಾನ್.

ಈ ತಾಲಿಬಾನ್ ಮುಲ್ಲಾ ಓಮರ್‌ನ ನೇತೃತ್ವದಲ್ಲಿ ಲಾಡೆನ್ ಮತ್ತು ಪಾಕಿಸ್ತಾನ ಬೆಂಬಲಿತ ಗುಂಪಾಗಿ ಈ ಬಾರಿ ಮುಜಾಹಿದ್ದಿನ್ ಮೇಲೆ ದಾಳಿ ಸಂಘಟಿಸಿ ಗೆದ್ದು ಅಧಿಕಾರ ಹಿಡಿದಿತ್ತು. ಆದರೆ ತಾಲಿಬಾನ್ ಕಾಲದಲ್ಲಿ ಅಪಘನ್ ಪರಿಸ್ಥಿತಿ ಯಾವ ಮಟ್ಟಿಗೆ ಭಯಾನಕವಾಗಿ ಹೋಯಿತೆಂದರೆ ವಿಶ್ವಸಂಸ್ಥೆ ಮನವಿ ಮಾಡಿ ನ್ಯಾಟೊ ಪಡೆಗಳ ಮೂಲಕ ಆ ದೇಶವನ್ನು ನಿಯಂತ್ರಿಸಬೇಕಾಯಿತು. ಹಾಗಾಗಿ ತಾನು ಬೆಳೆಸಿದ ಮತಾಂಧ ರಕ್ಕಸರನ್ನು ಹಣಿಯಲು ಅಮೇರಿಕ ತಾನೇ ನೇತೃತ್ವ ವಹಿಸಬೇಕಾಗಿ ಬಂದಿದ್ದು ಕುಚ್ಯೋದ್ಯದ ಇತಿಹಾಸ. ಇದಕ್ಕೆ ತೆಗೆದುಕೊಂಡ ಕಾಲಾವಧಿ ಸುದೀರ್ಘ ಎರಡು ದಶಕಗಳು ಮತ್ತು ಮಾಡಿದ ಖರ್ಚು ಅರವತೈದು ಲಕ್ಷ ಕೋಟಿ ಡಾಲರ್ ಗಳು. ಕೊನೆಗೂ ಅಪಘಾನಿಸ್ತಾನದಲ್ಲಿ ಹೆಂಗಸರು ನಿಟ್ಟುಸಿರು ಬಿಟ್ಟು ಬದುಕತೊಡಗಿದ್ದರು.

ಅಧ್ಯಕ್ಷರೇ ಪರಾರಿ
ಇದೆಲ್ಲಾ ಆದ ಎರಡು ದಶಕಗಳ ನಂತರ, ಎಂದರೆ ಮೊನ್ನೆ ಮೊನ್ನೆ 15 ಆಗಸ್ಟ್ 2021ರಂದು ಅಫ್ಘಾನಿಸ್ತಾನ ಅಧ್ಯಕ್ಷ ಘನಿ, ನುಗ್ಗಿ ಬಂದ ತಾಲಿಬಾನಿಗಳಿಗೆ ದೇಶ ಬಿಟ್ಟುಕೊಟ್ಟು ರಹಸ್ಯ ಬಾಗಿಲಿನ ಮೂಲಕ ಹೊರನಡೆದು ಎಮಿರೇಟ್ಸ್ ಸೇರಿಕೊಂಡಿದ್ದಾನೆ. ಆದರೆ ಸತತ ಇಪ್ಪತ್ತು ವರ್ಷವಾದರೂ ಮೂಲೆಗುಂಪಾಗದೆ ತಾಲಿಬಾನ್‌ಗಳು ತಮ್ಮ ಉದ್ದೇಶ ಮತ್ತು ಪಾನ್ ಇಸ್ಲಾಮಿಸಂನ್ನು ಉಸಿರಾಡುತ್ತಿದ್ದರೆಂದರೆ ಅವರ ಬೆಂಬಲ, ಧರ್ಮಾಂಧತೆ ಎಂಥದ್ದಿರಬೇಕು ಊಹಿಸಿ. ಜೊತೆಗೆ ಅರ್ಧದಷ್ಟು ಅಫ್ಘಾನಿಸ್ತಾನ ಕೈ ವಶ ಮಾಡಿಕೊಳ್ಳುತ್ತಿದ್ದಂತೆ ಮೊದಲು ಡಿಕ್ಲೇರ್ ಮಾಡಿದ ಕಾನೂನೆಂದರೆ ಮಹಿಳೆಯರ ಮೇಲಿನ ನಿರ್ಬಂಧ ಹಾಗು ಅಪಘನ್‌ ನಲ್ಲಿ ಷರಿಯಾ ಕಾನೂನು.

ಇತ್ತ ಇಂಥ ಸಮಯದಲ್ಲೂ ಸಮಯಸಾಧಕತನ ತೋರುವ ಪಾಕಿಸ್ತಾನ ಭಯೋತ್ಪಾದನೆ ಉಚ್ಛಾಟನೆಗೆ ಬೆಂಬಲ ಎನ್ನುತ್ತಲೆ, ಅಮೇರಿಕೆಯ ಜತೆಗೆ ಕೈ ಸೇರಿಸುತ್ತಲೇ ಉಗ್ರ ಸಂಘಟನೆಗಳನ್ನು ಮಾನ್ಯ ಮಾಡುವ ಮೂಲಕ ತನ್ನ ಎಂದಿನ ಚಾಳಿಯನ್ನು ಮುಂದುವರೆಸಿದೆ. ಆಗಿರುವ ಅಘಾತಕಾರಿ ಬೆಳವಣಿಗೆ ಎಂದರೆ
ಈ ಬಾರಿ ಚೀನಾ ಬಹಿರಂಗವಾಗಿ ತಾಲಿಬಾನ್‌ಗೆ ಮನ್ನಣೆ ನೀಡುವ ಮಾತಾಡುತ್ತಿವೆ. ಇತ್ತ ರಷ್ಯಾ ಕೂಡಾ ಏನಾದರೂ ಮಾಡಿಕೊಳ್ಳಿ ಎಂದು ತೆಪ್ಪಗೆ ಮೌನ ಸಮ್ಮತಿ ನೀಡಿದ್ದು ಎದ್ದು ಕಾಣುತ್ತಿದೆ. ಜಗತ್ತಿನ ಸರ್ವಶಕ್ತ ರಾಷ್ಟ್ರಗಳು ಹೀಗೆ ಭಯೋತ್ಪಾದಕ ಸರಕಾರವೊಂದನ್ನು ಮಾನ್ಯ ಮಾಡುವ ಮೂಲಕ ಏನನ್ನು ಸಾಧಿಸಲು ಹೊರಟಿವೆ ಎಂದರೆ, ಈ ಎಲ್ಲ ದೇಶಗಳಿಗೆ ಆಗಬಹುದಾದ ಆರ್ಥಿಕ ಲಾಭ ಲೆಕ್ಕಾಚಾರ ಹೊರತು ಬೇರೇನಿಲ್ಲ.

ಭ್ರಷ್ಟತೆಯೇ ವೈಫಲ್ಯಕ್ಕೆ ಕಾರಣ?  
ಹಿಂದೆಯೂ ಅಮೆರಿಕ ಆಯುಧ ಮಾರಾಟ ಮಾಡಿತ್ತು. ಇಲ್ಲದಿದ್ದರೆ ಈಗಲೂ ಆಗಲೂ ಯಾವ ಸ್ವಯಂ ಉತ್ಪಾದನೆಯೇ ಇಲ್ಲದ ಈ ತಾಲಿಬ್ ಉಗ್ರರಿಗೆ ಎಲ್ಲಿಂದ ಹಾಗೆ ಲೆಕ್ಕ ತಪ್ಪಿ ಗುಂಡು ಹಾರಿಸುವಷ್ಟು ಸಾಮಗ್ರಿ ದೊರೆಯುತ್ತದೆ? ತಮಾಷೆ ಎಂದರೆ ಕೇವಲ ಅರವತ್ತು ಚಿಲ್ಲರೆ ಸಾವಿರ ಇರುವ ತಾಲಿಬ್ ಉಗ್ರರು ಎರಡೂವರೆ ಲಕ್ಷ ಸೈನ್ಯವನ್ನು ಸರಿಯಾಗಿ ಗುಂಡೂ ಹಾರಿಸದೆ ಮಣಿಸಿಬಿಟ್ಟಿದ್ದಾರೆ. ಸರಿಯಾಗಿ ಎದುರಿಸಿದ್ದರೆ ತಿಂಗಳುಗಳ ಕಾಲ ಬಡಿದಾಡಿದರೂ ತಾಲಿಬ್ ಕಾಲೂರಿ
ನಿಲ್ಲಲಾಗದಂತೆ ವಾರ್‌ಸ್ಟ್ರಾಟಜಿ ರೂಪಿಸಬಹುದಾಗಿದ್ದ ಕಾಲದಲ್ಲಿ ಎಲ್ಲ ದೇಶಗಳೂ ಅಪಘನ್ ಕೈಬಿಟ್ಟವು. ವಿಪರೀತ ಭ್ರಷ್ಟತೆ ಅಪಘನ್‌ಗೆ ಮುಳುವಾಗಿದೆ.

ಹಾಗೆ ನೋಡಿದರೆ ಇದೆಲ್ಲ ಮುಂದುವರಿದ ಮತ್ತು ಪಾಕಿಸ್ತಾನ ಪ್ರೇರಿತ ಅತಿದೊಡ್ಡ ವ್ಯೂಹವಲ್ಲದೇ ಬೇರೇನಲ್ಲ. ರಾಜಕೀಯ ಆಶ್ರಯವಿಲ್ಲದೇ, ಅಂತರಾಷ್ಟ್ರೀಯ ಸಮೂಹ ಬೆಂಬಲವಿಲ್ಲದೆ ಉಗ್ರರ ಗುಂಪು, ಸಂಪೂರ್ಣ ದೇಶವನ್ನು ಕೇವಲ ಎರಡೇ ತಿಂಗಳ ಅವಽಯಲ್ಲಿ ತೆಕ್ಕೆಗೆ ತೆಗೆದುಕೊಳ್ಳುತ್ತದೆನ್ನುವುದನ್ನು ಯಾವನೂ ನಂಬಲಾರ. ಜೊತೆಗೆ ಅಪಘಾನಿಸ್ತಾನದ ವಿಸ್ತಾರವೇ ಅದೆಷ್ಟು ದೊಡ್ಡದಿದೆ ಎಂದರೆ ಕೂಚು ತೆಗೆದರೆ ತಿಂಗಳೂ ಸಾಲಲಿಕ್ಕಿಲ್ಲ. ಹೀಗಿದ್ದಾಗ ಪ್ರತಿ ಪ್ರಾಂತ್ಯ,
ಪ್ರಾವಿನ್ಸಿಗಳನ್ನು ಕೇವಲ ವಾರ, ದಿನಗಳ ಲೆಕ್ಕದಲ್ಲಿ ಒಳಗೆ ಆಕ್ರಮಿಸಿ ಬಿಡುವುದೆಂದರೆ ಹುಡುಗಾಟವೇ? ಅದರಲ್ಲೂ ಅಪಘಾನಿಸ್ತಾನದ ಸೈನ್ಯವೇನೂ ಕಡಿಮೆ ಇರಲಿಲ್ಲ. ಅಧ್ಯಕ್ಷ ಘನಿ ಬೆಂಬಲಿತ ಸೈನದ ಸಂಖ್ಯೆ ಎರಡು ಲಕ್ಷಕ್ಕೂ ಮಿಗಿಲು.

ಹಾಗಿದ್ದಾಗ ಕಾಬೂಲ್ ವಶಕ್ಕೆ ಎರಡು ತಿಂಗಳು ಎಂದ ಅಂತರಾಷ್ಟ್ರೀಯ ಲೆಕ್ಕಾಚಾರದ ಗಡವು ಮೀರಿ ಕೇವಲ ಎರಡೇ ದಿನದಲ್ಲಿ ರಾಜಧಾನಿ ವಶ ಹಾಗು ಅದರ ಮಂತ್ರಿಮಂಡಲದ ಸಚಿವನೊಬ್ಬ ಎರಡೂ ಕಡೆಗೂ ಸಂಧಾನಕಾರನಾಗಿ ಪಾತ್ರವಹಿಸಿರುವುದು ನೋಡಿದರೆ ಆಗಿರಬಹುದಾದ ಸಾಧ್ಯತೆ ಎಂದರೆ ತಮ್ಮ ಪಕ್ಕದಲ್ಲೊಂದು ಅಪ್ಪಟ ಷರಿಯತ್ ಇಸ್ಲಾಂ ರಾಷ್ಟ್ರ ಇರಬೇಕೆನ್ನುವುದನ್ನು ಇಚ್ಛಿಸುವ ಪಾಕಿಸ್ತಾನ ಮೊದಲೇ ಅಮೆರಿಕ ಕಾಲ್ದೆಗೆಯುವ ಸುಳಿಗೆ ಸ್ಪಂದಿಸಿ ಐ.ಎಸ್.ಐ.
ಮೂಲಕ ಪ್ರತಿ ಜಿಲ್ಲಾವಾರು, ಪ್ರಾಂತ್ಯವಾರು ಕಮಾಂಡರ್ ಗಳನ್ನು ತನ್ನ ಕಡೆಗೆ ತಿರುಗಿಸಿಕೊಂಡಿದೆ.

ಚೀನಾ ಬೆಂಬಲ

ದುರಂತ ಮತ್ತು ಅನಾಹುತಕಾರಿ ಬೆಳವಣಿಗೆ ಎಂದರೆ ಇದ್ದಕ್ಕಿದ್ದಂತೆ ಚೀನಾ, ತಾಲಿಬ್ ಪರವಾಗಿ ನಿಂತದ್ದು. ಇವೆಲ್ಲದರ ಪರಿಣಾಮ ಭಾರತದ ಮೇಲಾಗುತ್ತದೆ ಯಾದರೂ, ಟೆನ್ಷನ್ ಹೊರಗಿನಿಂದ ಆಕ್ರಮಣ ಆಗಬಹುದಾದ ತಾಲಿಬ್ ಅಥವಾ ಇನ್ನಾವುದೇ ಉಗ್ರರದ್ದಲ್ಲ. ಅದನ್ನು ಹಿಮ್ಮೆಟ್ಟಿಸಲು ಮತ್ತು ಮುಟ್ಟಿ ನೋಡಿ ಕೊಳ್ಳುವ ಈಡು ಹೊಡೆಯಲು ಹದಿನೈದು ಲಕ್ಷದ ಹತ್ತಿರವಿರುವ ಭಾರತೀಯ ಸೈನ್ಯ ಸದಾ ಸಿದ್ಧ. ಹಿಂದೊಮ್ಮೆ ಕಾರ್ಗಿಲ್ ನೆತ್ತಿಯ ಮೇಲೂ ಹತ್ತಿ ಕೂತಿದ್ದ ಇವರು ಹೊಡೆತ ತಿಂದು ಹಿಂದೆ ಸರಿದದ್ದು ಇತಿಹಾಸ.ಆದರೆ ಸಮಸ್ಯೆ ಎಂದರೆ ದೇಶದೊಳಗೇ ಇದ್ದು ನಿಧಾನಕ್ಕೆ ತಾಲಿಬ್‌ಗಳಿಗೂ ಮನ್ನಣೆ ತೋರುವಂತೆ ವರ್ತಿಸುವ, ಸೂಚನೆ ನೀಡುತ್ತಿರುವ ತಳಸ್ಪರ್ಷಿ ಧೋರಣೆಯ ‘ಬಹುತ್ವ’ದ ಚಿಂತಕರದ್ದು.

ತಾಲಿಬಾನ್ ಮಹಿಳೆಯರ ಧ್ವನಿಯನ್ನು ಅಡಗಿಸುತ್ತಿರುವ ವಿರುದ್ಧ ಇಲ್ಲಿವರೆಗೂ ಇಂಥಾ ಅಕಾಲ ಸಾಹಿತ್ಯ ಸೃಷ್ಟಿಸುವ ಕೆಲವು ‘ಬುದ್ಧಿ ಜೀವಿ’ಗಳು ಹೇಳಿಕೆ ನೀಡಿ ಖಂಡಿಸಿದ್ದು ಇದೆಯಾ? ಎಲ್ಲಿ ಹೋದರು ಕ್ಯಾಂಡೆಲ್ ಟೀಮು, ಎಲ್ಲಿದ್ದಾರೆ ಟೌನ್‌ಹಾಲ್‌ಲ್ಲಿ ಕೂರುವ ಚಿಂತಕರು? ದೇಶದೊಳಗೆ ಎಲ್ಲೋ ಆಗುವ ಒಂದು ಅಪರಾಧದ ಎಳೆ ಹಿಡಿದು ದೇಶದುದ್ದಕ್ಕೂ ಟೂಲ್‌ಕಿಟ್ ರೀಲೀಸ್ ಮಾಡುವ ಬಾಯ್ಬಡಕರು ಯಾಕೆ ಸೆಗಣಿ ನೀರು ಬಿದ್ದ ಕಾಡತೂಸಿನಂತಾಗಿದ್ದಾರೆ? ಈಗ ಅಪಘನ್ ಹೆಂಗಸರ ಮಾನವೀಯತೆ ಬಗ್ಗೆ ಗ್ರೇಟ್ ಥನ್‌ಬರ್ಗು, ನೀಲಿ ಚಿತ್ರಗಳ ರಾಣಿ ಮೊದಲಾದವರಿಗೆ ನೆನಪಾಗುತ್ತಿಲ್ಲವಾ? ಎಲ್ಲಿದ್ದಾರೆ ಕವನ ಬರೆದು ಬಂದೂಕಿನ ನಳಿಕೆ ಬಿಟ್ಟು ಈ ಬಾರಿ ತಮ್ಮ ಧ್ವನಿಗೇ ತಾಲಿಬ್‌ಗಳ ಗೂಡು ಕಟ್ಟಿಸಿಕೊಂಡಿರುವ ‘ದೇಶ ಪ್ರೇಮಿ’ಗಳು? ದೇಶದ ಪ್ರಧಾನಿ ಮತ್ತು ನಾವು ನೀವೆಲ್ಲ ಈಗ ಅನಗತ್ಯ ಹೋರಾಡ ಬೇಕಿರುವುದು ಇವರ ಜತೆಗೆ ಹೊರತಾಗಿ, ಹೊರಗಿನ, ಆಯುಧ ಹಿಡಿದ ಶತ್ರು ಒಂದು ಲೆಕ್ಕವೇ ಇಲ್ಲ.