Thursday, 12th September 2024

prof g n Upadhya column: ದಕ್ಷಿಣದ ದೇಸಿ ದೇವರು ಖಂಡೋಬಾ

 ಪ್ರೊ. ಜಿ. ಎನ್. ಉಪಾಧ್ಯ. ಮುಂಬೈ

ಮೈಲಾರ ಅಥವಾ ಖಂಡೋಬಾ ಅಪ್ಪಟ ದೇಸಿ ದೇವರು. ಉತ್ತರ ಕರ್ನಾಟಕದ ಮೈಲಾರನು, ಮಹಾರಾಷ್ಟ್ರದಲ್ಲಿ ಖಂಡೋಬಾ ಎಂದೇ ಜನಪ್ರಿಯನಾಗಿದ್ದಾನೆ. ಮಹಾರಾಷ್ಟ್ರ ಪ್ರದೇಶದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಖಂಡೋಬಾ ದೇಗುಲಗಳಿವೆ. ಪ್ರಬಲವಾದ ಆಗಮಿಕ-ಪೌರಾಣಿಕ ಹಿಂದೂಧರ್ಮ ಮತ್ತು ಜೈನ-ಬೌದ್ಧ ನಾಸ್ತಿಕ ಧರ್ಮಗಳನ್ನು ಮೀರಿ ಈ ಪರಂಪರೆ ಉಳಿದು ಬಂದುದೊಂದು ಮಹಾ ಸೋಜಿಗ ಎಂಬುದಾಗಿ ಡಾ. ನೇಗಿನಹಾಳ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬಹು ದೇವರ ಉಪಾಸನೆ ನಮ್ಮಲ್ಲಿ ಲಾಗಾಯ್ತಿನಿಂದಲೂ ನಡೆದು ಬಂದಿದೆ. ಬಹುತ್ವ ನಮ್ಮ ದೇಶದ ಜೀವಾಳ. ಆಗಮ ಪರಂಪರೆಯ ದೇವತೆಗಳ ಜತೆ ಜತೆಗೆ ಜಾನಪದ ದೇವರು ಸಹ ಅಷ್ಟೇ ಗಡದ್ದಾಗಿ ಆರಾಧನೆ ಗೊಳ್ಳುತ್ತಾ ಬಂದಿರುವುದು ವಿಶೇಷ. ಕರ್ನಾಟಕ – ಮಹಾರಾಷ್ಟ್ರ ಇವುಗಳ ನಡುವಿನ ಬಾಂಧವ್ಯಕ್ಕೆ ಸುಮಾರು ಎರಡು ಸಾವಿರ ವರ್ಷಗಳ ಗಟ್ಟಿಯಾದ ಹಿನ್ನೆಲೆಯಿದೆ. ಈ ಉಭಯ ರಾಜ್ಯಗಳ ನಡುವಿನ ಸಂಬಂಧವನ್ನು
ನಂಟನ್ನು ಬೆಸೆಯುವಲ್ಲಿ ದೇವಾದಿದೇವತೆಗಳ ಪಾತ್ರ ಘನಿಷ್ಠವಾದುದು. ಇವತ್ತಿನ ಮಹಾರಾಷ್ಟ್ರದ ಜನಪ್ರಿಯ ದೇವರು ವಿಠ್ಠಲ, ಮಹಾಲಕ್ಷ್ಮೀ , ಖಂಡೋಬಾ, ತುಳಜಾ ಭವಾನಿ ಇವರೆಲ್ಲ ಪ್ರಾಚೀನ ಕರ್ನಾಟಕದ ಸಾಂಸ್ಕೃತಿಕ ಇತಿಹಾಸದ ಭಾಗವೇ ಆಗಿರುವುದು ಚಾರಿತ್ರಿಕ ಸತ್ಯ.

ಮೈಲಾರ, ಮಲ್ಲಯ್ಯ, ಖಂಡೋಬಾ ಎಂಬೆಲ್ಲ ಹೆಸರುಗಳಿಂದ ಗುರುತಿಸಲ್ಪಡುವ ಖಂಡೋಬಾ ದೇವರು ಮೂಲತಃ ಕರ್ನಾಟಕದ ಗ್ರಾಮದೇವತೆ. ಈ ಜಾನಪದ ದೇವರ ಪ್ರಭಾವ ವಲಯವು ಬಹಳ ವಿಸ್ತಾರವಾಗಿದೆ. ಕರ್ನಾಟಕದ ರಾಜಕೀಯ ವಲಯ, ಎಲ್ಲೆಗಳನ್ನು ಮೀರಿ ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು, ಗೋವಾ, ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಲ್ಲಿಯೂ ಈತ ಜನಪ್ರಿಯ ದೇವತೆ. ಕರ್ನಾಟಕ ಮೂಲದ ಈ ಮೈಲಾರ ಅಥವಾ ಖಂಡೋಬಾ ಕುಲದೇವರೆಂದು ವ್ಯಾಪಕವಾಗಿ ಅನ್ಯ ರಾಜ್ಯಗಳಲ್ಲಿ ಪೂಜೆಗೊಳ್ಳುವ ಪರಿ ಬೆರಗು ಹುಟ್ಟಿಸುವ ಸಂಗತಿ. ಮಹಾರಾಷ್ಟ್ರದ ಅನೇಕ ಕುಟುಂಬಗಳ, ರಾಜಮನೆತನಗಳ ಕುಲದೇವರು ಮೈಲಾರಲಿಂಗ!

ಮೈಲಾರ ಅಥವಾ ಖಂಡೋಬನ ಪ್ರಭಾವ ಕಾವೇರಿಯಿಂದ ಗೋದಾವರಿ ಪ್ರಾಂತವನ್ನು ಮೀರಿ ವ್ಯಾಪಿಸಿರುವುದು ಅಚ್ಚರಿಯ ಅಂಶ. ಕರ್ನಾಟಕದಲ್ಲಿ ಬೀದರ್‌ನ ಪೆಂಬೇರ, ಮೈಲಾರ, ಯಾದಗಿರಿ, ದೇವರ ಹಿಪ್ಪರಗಿ, ಗುಡೂರು, ಆನೆಗೊಂದಿ, ರಾಣೆಬೆನ್ನೂರು, ಹಿರೇಮೈಲಾರ, ದೇವರಗುಡ್ಡ,, ಬೀಳಗಿ ಹೀಗೆ ವಿವಿಧ ಕಡೆ ಮುನ್ನೂರೈವತ್ತಕ್ಕೂ ಹೆಚ್ಚು ದೊಡ್ಡ – ಸಣ್ಣ ಮೈಲಾರ ದೇವಾಲಯಗಳಿವೆ. ಕರ್ನಾಟಕದಿಂದ ಒಂದು ಕಾಲದಲ್ಲಿ ಮಹಾರಾಷ್ಟ್ರಕ್ಕೆ ವಲಸೆ ಬಂದ ಈ ದೇವತೆಗೆ ಇವತ್ತು ಮಹಾರಾಷ್ಟ್ರದಲ್ಲಿ ಸುಮಾರು ನಾಲ್ಕುನೂರಕ್ಕೂ ಹೆಚ್ಚು ಆರಾಧನ ಕೇಂದ್ರಗಳಿರುವುದು ವಿಶೇಷ!ಮಹಾರಾಷ್ಟ್ರದ ಜೆಜೂರಿ, ಪಾಲಿ, ನಳದುರ್ಗ, ಮಾಲೆಗಾಂಮ್, ನೇವಾಸೆ, ಸತಾರಾ, ಧಾಮಣಟೇಕ ಮೊದಲಾದ ಕಡೆ, ಕೊಂಕಣ ಹಾಗೂ ವಿದರ್ಭ ಪ್ರಾಂತವೂ ಸೇರಿದಂತೆ ಖಂಡೋಬಾನ ಉಪಾಸನೆ ದೊಡ್ಡ ಮಟ್ಟದಲ್ಲಿ ನಡೆಯುತ್ತಾ ಬಂದಿರುವುದು ಗಮನಾರ್ಹ ಸಂಗತಿ.

ಆದಿಮ ಸಂಸ್ಕೃತಿಯ ಪ್ರತೀಕ
ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಸೇವುಣರು, ರಟ್ಟರು, ಮರಾಠಾ ದೊರೆಗಳು, ಅವರ ಸಾಮಂತರು, ಪೇಶ್ವೆಗಳು, ಹೋಳ್ಕರ್ ಮನೆತನ ಮೊದಲಾದವರು ಮೈಲಾರಲಿಂಗನಿಗೆ ದತ್ತಿ ದಾನಗಳನ್ನು ಬಿಟ್ಟ ಅಂಶ
ಇತಿಹಾಸದಲ್ಲಿ ದಾಖಲಾಗಿದೆ. ಕನ್ನಡ, ಮರಾಠಿ ಶಿಷ್ಟ ಹಾಗೂ ಜಾನಪದ ಸಾಹಿತ್ಯದಲ್ಲಿಯೂ ಮೈಲಾರನ ಕುರಿತು ಸಮೃದ್ಧವಾದ ಮಾಹಿತಿ ಲಭ್ಯವಿದೆ. ಮೈಲಾರ ಪೌರಾಣಿಕ ಹಿನ್ನೆಲೆಯಿರುವ ದೇವರಲ್ಲ. ಇವನು ಜನಮಾನಸದ ದೈವ. ಆತ ಕುಲ ಸಂಕೇತದ ಆದಿಮ ಸಂಸ್ಕೃತಿಯ ಪ್ರತೀಕ. ಮಾಳಚಿ ಅವನ ಪತ್ನಿ. ಖಂಡೋಬಾ ಭಂಡಾರಪ್ರಿಯ. ಮೈಲಾರ ಏಳು ಕೋಟಿ ಸೈನ್ಯವನ್ನು ಹೊಂದಿದ್ದನಂತೆ. ತಿರುಪತಿ ತಿಮ್ಮಪ್ಪನ ಸಾಲ ಸಹ ಏಳು ಕೋಟಿ. ಅದನ್ನು ಆತ ಮೈಲಾರನಿಗೆ ಕೊಟ್ಟಿದ್ದನಂತೆ. ಎಂತಲೇ ಈ ದೇವರಿಗೆ ಏಳು ಕೋಟಿ ಎಂಬ ಹೆಸರು ಬಂತು.

ಈ ಏಳು ಸಂಖ್ಯೆ ಮತ್ತೆ ಮತ್ತೆ ಮಲ್ಲಾರಿ ಮಹಾತ್ಮೆಯಲ್ಲಿ ಸಹ ಬಂದು ಹೋಗಿದೆ. ಕನ್ನಡ ಭಕ್ತರಂತೆ ಮರಾಠಿ ಭಕ್ತರಿಗೂ ‘ಏಳ್ ಕೋಟ್ ಏಳ್ ಕೋಟ್ ಉಘೇ ಮಲ್ಲಾರ್’ ಎಂಬ ಸಾಲು ಬಲು ಇಷ್ಟ. ಈ ಕಾರಣಿಕ ಮೈಲಾರನ ಭಕ್ತರನ್ನು ಗೊರವರು, ಗುರವ್, ವಾಘೇ ಎಂದೆಲ್ಲ ಮಹಾರಾಷ್ಟ್ರದಲ್ಲಿ ಕರೆಯಲಾಗುತ್ತದೆ. ಧನಗರ್, ಕುರುಬ, ಗೊಲ್ಲ, ಕೋಲಿ,ಗೌಳಿ, ಗೊರವ, ಲಿಂಗವಂತ ಮೊದಲಾದ ದೊಡ್ಡ ದೊಡ್ಡ ಜನ ಸಮುದಾಯಗಳ ಆರಾಧ್ಯ ದೈವ ಖಂಡೋಬಾ. ಜುಂಜಪ್ಪ, ವೀರಭದ್ರ, ಎಲ್ಲಮ್ಮಸಂಪ್ರದಾಯಗಳ ಜೊತೆಗೂ ಈ ದೇವರ ನಂಟಿದೆ. ಹೀಗೆ ಬಹು ಸಂಸ್ಕೃತಿಯ ಹಿನ್ನೆಲೆಯಿರುವ ಕರ್ನಾಟಕದ ಮೈಲಾರ ಮಹಾರಾಷ್ಟ್ರ ದಲ್ಲಿ ಖಂಡೋಬಾನಾದ ಕಥೆ ಬಹುರೋಚಕ. ಖಂಡೋಬಾನ ಮೂಲಚೂಲಗಳ ಕುರಿತು ಆಸಕ್ತಿ ತಳೆದು ಮೊದಲು ಅಧ್ಯಯನ, ಸಂಶೋಧನೆಗೆ ತೊಡಗಿದ ಹಿರಿಮೆ ಮರಾಠಿ ವಿದ್ವಾಂಸರಿಗೆ ಸಲ್ಲುತ್ತದೆ.

ಮಹಾರಾಷ್ಟ್ರದಲ್ಲಿ ‘ಖಂಡೋಬಾ’, ಕರ್ನಾಟಕದಲ್ಲಿ ‘ಮೈಲಾರ’ ಹೆಸರಿನಿಂದ ಕರೆಯಿಸಿಕೊಳ್ಳುವ ಈ ದೇವರು ಎರಡೂ ರಾಜ್ಯಗಳ ಸಂಸ್ಕೃತಿ ಸಾಮರಸ್ಯದ ಪ್ರತೀಕನಾಗಿದ್ದಾನೆ. ‘ಮಲ್ಲಾರಿ ಮಾರ್ತಾಂಡ ಭೈರವ’ ಎಂಬುದು ಸಂಸ್ಕೃತ ಹೆಸರು. ಕುರುಬ-ರಾಮೋಶಿ ಜನರಿಂದ ಬ್ರಾಹ್ಮಣರವರೆಗೆ ಎಲ್ಲ ಕುಲಜಾತಿಗಳ ಜನರು ಆರಾಽಸುವುದು ಈ ದೇವರ ಜನಪ್ರಿಯತೆಗೆ ನಿದರ್ಶನವೆನಿಸಿದೆ. ವಿಠ್ಠಲ ಮಹಾರಾಷ್ಟ್ರದ ಉಪಾಸ್ಯ ದೇವತೆಯಾದರೆ, ಖಂಡೋಬಾ ಕುಲದೇವತೆ. ಖಂಡೋಬಾ ಅಥವಾ ಮೈಲಾರನು ಶಿವನ ಮಾರ್ತಾಂಡ ಭೈರವನ ಅವತಾರ ಎಂಬ ನಂಬಿಕೆ ಮಹಾರಾಷ್ಟ್ರದಲ್ಲಿ ಇವತ್ತಿಗೂ ಚಾಲ್ತಿಯಲ್ಲಿದೆ ಎಂಬುದನ್ನು ಮಹಾ ರಾಷ್ಟ್ರದ ಖ್ಯಾತ ಸಂಶೋಧಕ ರಾ. ಚಿಂ. ಡೇರೆ ಅವರು ತಮ್ಮ ‘ದಕ್ಷಿಣದ ದೇಸಿ ದೇವರು ಖಂಡೋಬಾ’ ಕೃತಿಯಲ್ಲಿ ಆಧಾರ ಸಮೇತ ತೋರಿಸಿಕೊಟ್ಟಿದ್ದಾರೆ. ಈ ಉಭಯ ರಾಜ್ಯಗಳ ಸಂಘರ್ಷವನ್ನು ಸ್ನೇಹವನ್ನಾಗಿಸಿದ ದೇವರು ನಮ್ಮ ಮೈಲಾರ!

ಏಳು ಕೋಟಿ ಕಥೆ
ಮೈಲಾರ ಲಿಂಗದ ಸಂಪ್ರದಾಯ ದಲ್ಲಿ ಅನೇಕ ಕಥೆಗಳು, ಐತಿಹ್ಯಗಳು, ನಂಬಿಕೆ, ಆಚರಣೆಗಳು ಚಾಲ್ತಿಯಲ್ಲಿವೆ. ಹೆಚ್ಚಿನ ಕಡೆಗಳಲ್ಲಿ ಏಳು ಕೋಟಿ ಕಥೆ ಒಂದೇ ಮಾದರಿಯಲ್ಲಿ ಕಾಣಸಿಗುತ್ತದೆ. ಅದು ಮೈಲಾರ ದೇವರ ಮದುವೆಗೆ ಸಂಬಂಧ ಪಟ್ಟದ್ದು. ಮೈಲಾರನ ಹೆಂಡತಿ ಗಂಗವ್ವ ಅಥವಾ ಗಂಗಿ ಮಾಳವ್ವ, ಮಾಳಸಾ ಇವಳು ತಿರುಪತಿ ತಿಮ್ಮಪ್ಪನ ಮಗಳು. ನಮ್ಮ ಮಾಳವ್ವ ಮಹಾರಾಷ್ಟ್ರದಲ್ಲಿ ಮಾಳಸಾದೇವಿ! ‘ಮೈಲಾರ ಲಿಂಗ
ಖಂಡೋಬಾ, ಒಂದು ಸಾಂಸ್ಕೃತಿಕ ಅಧ್ಯಯನ‘ ಎಂಬ ಶೋಧ ಕೃತಿ ರಚನೆ ಮಾಡಿದ ಡಾ. ನೇಗಿನಹಾಳ ಅವರು ಸಹ ಈ ಕಥೆ ಎಲ್ಲೆಡೆ ಸಣ್ಣ ಪುಟ್ಟ ವ್ಯತ್ಯಾಸದೊಂದಿಗೆ ಬಳಕೆಯಲ್ಲಿ ಇರುವುದನ್ನು ತೋರಿಸಿ
ಕೊಟ್ಟಿದ್ದಾರೆ. ಆ ಕಥೆ ಹೀಗಿದೆ.

ಗಂಗಿ ಮಾಳಮ್ಮನ ಲಗ್ನ
ಮೈಲಾರಲಿಂಗಪ್ಪನಿಗೆ ಲಗ್ನವಾಗಬೇಕೆಂಬ ಬಯಕೆ ಉಂಟಾಯಿತು. ತನ್ನ ಊರಾದ (ಮೈಲಾರದಿಂದ) ಹೊರಟು ಬಳ್ಳಾರಿ ದೇಶಕ್ಕೆ ಬಂದ. ಅಲ್ಲಿನ ತನ್ನ ಭಕ್ತರನ್ನು ‘ಇಲ್ಲಿ ಯಾರಲ್ಲಾದರೂ ಹೆಣ್ಣುಂಟೆ ?’ ಎಂದು
ಕೇಳಿದ. ಅವರು ’ತಿರುಪತಿ ತಿಮ್ಮಪ್ಪನಲ್ಲಿ ಹೆಣ್ಣು ಇವೆ. ಹೋಗಿ ಕೇಳು’ ಎಂದು ಹೇಳಿದರು. ಅವರ ಮಾತಿನಂತೆ ಈ ಗೊರವಯ್ಯ ತಿರುಪತಿಗೆ ಹೋದ. ತಿರುಪತಿಯಲ್ಲಿ ತಿಮ್ಮಪ್ಪ ತನ್ನ ಏಳು ಅಂತಸ್ತಿನ ಅರಮನೆಯ ಮೇಲ್ಮಾಳಿಗೆಯಲ್ಲಿ ಇದ್ದ. ಇವನು ಬಾಗಿಲಲ್ಲಿ ನಿಂತು ಗಂಟೆ ಬಾರಿಸಿದ, ಡಮರು ಹೊಡೆದ. ಗೊರವಯ್ಯ ಬಾಗಿಲಿಗೆ ಬಂದು ನಿಂತುದು ತಿಮ್ಮಪ್ಪನ ಹೆಣ್ಣು ಮಕ್ಕಳಿಗೆ ತಿಳಿಯಿತು. ಯಾವನೋ ಗೊರವ ಭಿಕ್ಷೆಗೆ ಬಂದಿದ್ದಾನೆ. ಅವನಿಗೆ ಅದನ್ನು ನೀಡಿ ಕಳಿಸಿರಿ ಎಂದು ಅವರು ತಮ್ಮ ತಮ್ಮಲ್ಲಿ ಹೇಳಿಕೊಂಡರು. ಹೊರಗೆ ಬಂದು ನೀಡಲು ಯಾರೂ ತಯಾರಾಗಲಿಲ್ಲ. ಕೊನೆಗೆ ‘ಹಿರಿಯ ಮಗಳು ಗಂಗಮ್ಮ’ ಗೊರವನಿಗೆ ಭಿಕ್ಷೆ ನೀಡಲು ಮುಂದಾದಳು. ಕೈಯಲ್ಲಿ ಮೊರ, ಅದರ ತುಂಬ ಮುತ್ತು ರತ್ನ ತುಂಬಿ ತಕ್ಕೊಂಡು ಹೊರಗೆ ಬಂದಳು.

ಆಗ ಅವಳನ್ನು ಕಂಡು ಬೆರಗಾದ ಮೈಲಾರ ‘ಏನು ಹೆಣ್ಣು,ಎಂಥಾ ಚೆಲುವಿದೆ ? ಇವಳನ್ನು,ಬಿಡಬಾರದು’ ಎಂದು ಮನದಲ್ಲಿ ನಿರ್ಧರಿಸಿದ. ಅವಳು ಹೊರಕ್ಕೆ ಬಂದು ಇವನ ಜೋಳಿಗೆಗೆ ಭಿಕ್ಷೆ ನೀಡುತ್ತಿದ್ದಂತೆ ಅವಳ ಕೈ ಹಿಡಿದು ಬಿಟ್ಟ. ಗೊರವಯ್ಯನ ಈ ಆಟ ನೋಡಿ ಗಂಗಮ್ಮ ಚೀರಿಕೊಂಡಳು. ಮಗಳು ಚೀರಿದ್ದು ತಿಮ್ಮಪ್ಪನಿಗೆ ಕೇಳಿತು. ಏಳನೆಯ ಅಂತಸ್ತಿನಿಂದ ಆತ ಬಡಿಗೆ ಊರುತ್ತ ಕೆಳಗಿಳಿದು ಬಂದ. ನೋಡುತ್ತಾನೆ. ಮೈಲಾರದ ಗೊರವಯ್ಯ! ಇದೇನೆಂದು ವಿಚಾರಿಸಿದಾಗ ‘ಇವಳನ್ನು ಕೊಟ್ಟು ನನಗೆ ಲಗ್ನ ಮಾಡು’ ಎಂದ ಆತ. ತಿಮ್ಮಪ್ಪ ವಿಚಾರದಲ್ಲಿ ಬಿದ್ದ. ಇವನೋ ಹರಕು ಕೋರಿಯ ಮುರುಕು ಬೆತ್ತದ ಒಡಕು ದೋಣಿಯ ಗೊರವ, ಇಂಥವನಿಗೆ ತಾನು ಮಗಳನ್ನು ಕೊಡುವುದೇ? ಆದರೆ ಹಾಗೆ ಬಾಯಿಬಿಟ್ಟು ಹೇಳಲಾರ. ಇಲ್ಲೆಂದು ಹೇಳಿದರೆ ಗೊರವಯ್ಯ ಸಾಪಳಿಸಿ ಹೋಗುತ್ತಾನೆ. ಏನು ಮಾಡುವುದು? ತಿಮ್ಮಪ್ಪನಿಗೆ ಒಂದು ವಿಚಾರ ಹೊಳೆಯಿತು. ಇವನು ಕೊಡಲಾರದಷ್ಟು ‘ತೆರವು’ ಕೇಳಿದರಾಯಿತು ತಾನೆ ತಿರುಗಿ ಹೋಗುತ್ತಾನೆ ಎಂದು ಅಂದು ಕೊಂಡು ‘ಏಳುಕೋಟಿ ಹೊನ್ನು ತೆರವು ಕೊಡುವುದಾದರೆ ನಿನಗೆ ನನ್ನ ಮಗಳನ್ನು ಕೊಡುತ್ತೇನೆ’ ಎಂದು ಹೇಳಿದ.

ಅದಕ್ಕೆ ಗೊರವಯ್ಯ ಒಪ್ಪಿ,‘ನನ್ನೂರು ಇಲ್ಲಿಂದ ಮುನ್ನೂರು ಹರದಾರಿ, ಅಲ್ಲಿಗೆ ಹೋಗಿ ಬರುವುದರಲ್ಲಿ ಆಷಾಢಮಾಸ ಬರುತ್ತದೆ, ಆಷಾಢದಲ್ಲಿ ನನ್ನ ಲಗ್ನವಿಲ್ಲ. ಲಗ್ನವಾಗಿ ನನ್ನೂರಿಗೆ ಹೋದ ಮೇಲೆ ನಿನ್ನ ತೆರವಿನ ಹಣ ಮುಟ್ಟಿಸುತ್ತೇನೆ ’ ಎಂದು ಹೇಳಿದ. ತಿಮ್ಮಪ್ಪ ನಿರ್ವಾಹವಿಲ್ಲದೆ ಒಪ್ಪಿದ.

ಸಾಲ ನೀಡಿದ ತಿಮ್ಮಪ್ಪ
ಇನ್ನು ಲಗ್ನ ಮಾಡಬೇಕಾದರೆ ಈತನಿಗೆ ಯಾರೂ ಇಲ್ಲ. ಲಗ್ನದ ಕಾರ್ಯ ನಿಭಾಯಿಸುವುದು ಹೇಗೆ? ಎಂದು ತಿಮ್ಮಪ್ಪ ಸಮಸ್ಯೆ ಎತ್ತಿದ. ಗೊರವಯ್ಯ ‘ಈಗ ನೀನೆ ಕೈಯಿಂದ ಹಣ ಹಾಕಿ ಲಗ್ನಮಾಡು, ನಾನು ನನ್ನೂರಿಗೆ ಹೋದ ಮೇಲೆ ಆದರ ಅಸಲು ಬಡ್ಡಿ ಎಲ್ಲ ತೀರಿಸುತ್ತೇನೆ’ ಎಂದ. ಬಡ್ಡಿಯ ಆಸೆಗಾಗಿ ತಿಮ್ಮಪ್ಪ ಒಪ್ಪಿ ಲಗ್ನದ ಸಿದ್ದತೆಗೆ ತೊಡಗಿದ.

ಲಗ್ನಕ್ಕೆ ನಿನ್ನ ಸಂಬಂಧಿಗಳು ಯಾರಾದರೂ ಬರುವವರು ಇದ್ದಾರೆಯೇ? ಎಂದು ತಿಮ್ಮಪ್ಪ ಕೇಳಿದ. ಗೊರವಪ್ಪ ಸಮೀಪದ ಗುಡ್ಡದ ತುದಿಯ ಮೇಲೆ ನಿಂತು ತನ್ನ ತಂಗಿಯರನ್ನು ನೆನೆದ. ಆಗ ಸವದತ್ತಿಯ ಎಲ್ಲಮ್ಮ,
ಹೊನ್ನತ್ತಿಯ ಹೊನ್ನಮ್ಮ, (ಚಂದ್ರ)ಗುತ್ತಿಯ ಗುತ್ತವ್ವರ ಕವಡೆಗಳು ಅಲುಗಾಡಿದವು. ತಮ್ಮ ಅಣ್ಣ ಮೈಲಾರ ಯಾಕೋ ನೆನಪು ಮಾಡಿಕೊಂಡಿದ್ದಾನೆ ಎಂದು ಅವರೆಲ್ಲ ಯೋಚನೆ ಮಾಡಿ ಕವಡೆ ಹಾಕಿ
ನೋಡಿದರು. ಕೊನೆಗೆ ಅವರೆಲ್ಲ ಬಂದು, ಕ್ರಮದಂತೆ ಲಗ್ನವಾಗಿ ತಿಮ್ಮಪ್ಪ ತನ್ನ ಮಗಳನ್ನು ಕಳುಹಿಸಿ ಕೊಡಲು ಸಿದ್ಧನಾದ. ದಿಬ್ಬಣ ಮದುಮಕ್ಕಳು ಸಮೇತ ಮೈಲಾರಕ್ಕೆ ಬಂತು. ತಿಮ್ಮಪ್ಪ ಹಣದ ವಿಷಯ ಪ್ರಸ್ತಾಪ ಮಾಡಿ ಹಿಂದಿರುಗಿಸು ಎಂದಾಗ, ಭಾರತ ಹುಣ್ಣಿಮೆಯ ಜಾತ್ರೆಯ ಕಾಣಿಕೆ ಹಣದಿಂದ ಸಾಲ ತೀರಿಸುವೆ ಎಂದು ಸಮಾಧಾನ ಹೇಳುತ್ತಾನೆ.

ಭಾರತ ಹುಣ್ಣಿಮೆಯ ಕಾಣಿಕೆಯಲ್ಲೂ ಸಾಲ ತೀರಲಿಲ್ಲ. ತಿಮ್ಮಪ್ಪ ಸಿಟ್ಟಾದಾಗ ಱಗುಡಿಸಲು ಸುತ್ತ ಇರುವ ಐನೂರು ಹುಣಸೆಮರ ಉಂಟು. ಗಿಡ ಹಣ್ಣು ಬಿಟ್ಟಾಗ ಮಾರಿ ಸಾಲ ಮುಟ್ಟಿಸಿಕೊಳ್ಳುೞ ಎನ್ನುತ್ತಾನೆ.
ಹುಣಸೆ ಮರ ಹಣ್ಣಾಗುವ ಸಮಯಕ್ಕೆ ತಿಮ್ಮಪ್ಪ ಮತ್ತೆ ಮೈಲಾರಕ್ಕೆ ಬಂದ. ಆದರೆ ಹುಣಸೆ ಪೂರ್ತಿ ಹಣ್ಣಾಗದೆ ದೋರೆಯಾಗಿತ್ತು. ಹೀಗಾಗಿ ಅಲ್ಲಿಯ ತನಕ ಮಗಳ ಮನೆಗೆ ಹೋಗಿ ಬರುವುದು ವಾಸಿ ಎಂದು ಹೋಗುತ್ತಾನೆ. ಅಲ್ಲಿ ಪುಷ್ಕಳ ಊಟ ಮಾಡಿ ನಿದ್ದೆ ಹೋಗುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಮೈಲಾರ ಬಂದು ತಿಮ್ಮಪ್ಪನನ್ನು ಎಬ್ಬಿಸಿದ. ಱಏಳು, ಎಷ್ಟು ಹೊತ್ತು ಮಲಗಿದಿ, ನನಗೊಂದು ಕನಸು ಬಿದ್ದಿತ್ತು. ನೀನು ಹುಣಸೆ ಮರವನ್ನೆಲ್ಲ ಬಡಿದು ಮಾರಿ, ಹಣ ಕಟ್ಟಿಕೊಂಡು ನಿನ್ನ ಗಿರಿಗೆ ಹೋದಂತೆ ತೋರಿತು. ಮಾರಾಯ, ಹೆಚ್ಚಿನ ನನ್ನ ಹಣ ನನಗೆ ಕೊಟ್ಟು ಹೋಗುೞ ಎಂದ. ಅದನ್ನು ಕೇಳಿದಾಗ ತಿಮ್ಮಪ್ಪ ಹೌಹಾರಿಹೋದ. ಇಬ್ಬರೂ ಸೇರಿ ಹುಣಸೆ ಮರದ ಸಮೀಪ ಬಂದು ನೋಡುತ್ತಾರೆ, ಅಲ್ಲೇನಿದೆ ? ಎಲ್ಲ ಮರಗಳು ಬೋಳು. ತಿಮ್ಮಪ್ಪ ಕೂಗಾಡಿದ. ಜನ ಸೇರಿದರು. ಱತಾನು ಮಗಳ ಮನೆಯಲ್ಲಿ ಉಂಡು ಮಲಗಿದ್ದೆ.

ಗಿಡಗಳನ್ನು ತಾನು ಬಡಿಯಲೇ ಇಲ್ಲ. ಇವನೇ ಏನೋ ಮೋಸಮಾಡಿದ್ದಾನೆೞ ಎಂದು ಗೋಳಾಡಿದ. ಱಈತ ಹಗಲು-ರಾತ್ರಿೞ ಎನ್ನದೆ ಗಿಡ ಕಾಯುತ್ತ ಅಲ್ಲಿಯೇ ಇದ್ದಾನೆ. ಬೇರೆ ಯಾರು ಬಂದು ಬಡಿಯುತ್ತಾರೆ ? ಈತ ಎಲ್ಲ ಬಡಿದುಕೊಂಡು ಹೆಚ್ಚಿನ ನನ್ನ ಹಣ ಕೊಡದೆ ಮೋಸಮಾಡಿದ್ದಾನೆ.ೞ ಎಂದು ಗೊರವಯ್ಯ ಪ್ರತಿಯಾಗಿ ಆಪಾದಿಸಿದ.

ಬುದ್ಧಿವಂತರಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ವಾದವಿವಾದ ನಡೆಯಿತು. ಕೊನೆಯಲ್ಲಿ ತಿಮ್ಮಪ್ಪ ಱನನ್ನ ಏಳುಕೋಟಿ, ಹಣ ತಿಂದು ಹಾಕಿದೆ. ಇನ್ನು ಮುಂದೆ ನೀನು ಱಏಳು ಕೋಟಿ. ಏಳುಕೋಟಿೞ ಎಂದು ಹೇಳುತ್ತ ತಿರುಗುತ್ತ ಹೋಗು, ನಿನಗೆ ಬಡತನ ಎಂದೂ ತಪ್ಪದಿರಲಿೞ ಎಂದು ಶಾಪಕೊಟ್ಟು ಹೋದನಂತೆ! ಈತ ಱಪುಕ್ಕಟೆ ಹೆಣ್ಣು ತಂದು ಬಿಟ್ಟೆ. ತಿಮ್ಮಪ್ಪಗೆ ಬುದ್ಧಿ ಕಲಿಸಿದೆೞ ಎಂದು ಮನದಲ್ಲಿ ನಕ್ಕನಂತೆ. ಇದು ತಿಮ್ಮಪ್ಪನ ಮೈಲಾರನ ದುಡ್ಡಿನ ವ್ಯವಹಾರ, ವೃತ್ತಾಂತ. ಇದೇ ಕಥೆಯ ಬೇರೆ ಬೇರೆ ಪಾಠಗಳು ಮಹಾರಾಷ್ಟ್ರದಲ್ಲೂ ಚಾಲ್ತಿಯಲ್ಲಿವೆ.

ಖಂಡೇರಾಯ
ಮೈಲಾರ ದೇವರ ಸಂಪ್ರದಾಯದಲ್ಲಿ ಹೆಗ್ಗಡೆ ಮುಖ್ಯನಾಗಿದ್ದು ಈತ ತಿಮ್ಮಪ್ಪ ಎಂಬ ನಂಬಿಕೆ ಸಹ ಜಾನಪದರದು. ಇಲ್ಲಿ ಖಡ್ಗಕ್ಕೆ ವಿಶೇಷ ಪ್ರಾಧಾನ್ಯವಿದ್ದು ಅಂಥ ಮೂರ್ತಿಯನ್ನು ಖಂಡೇರಾಯ ಎಂದೂ ಕರೆಯಲಾಗುತ್ತದೆ. ಈ ಕಾರಣದಿಂದ ಮೈಲಾರ ದೇವರನ್ನು ಮಹಾರಾಷ್ಟ್ರದಲ್ಲಿ ಖಂಡೋಬಾ ಎಂದು ಕರೆದು ಪೂಜಿಸುವ ಪರಂಪರೆ ರೂಢಿಗೆ ಬಂದಿದೆ. ರಾಕ್ಷಸರನ್ನು ಖಂಡನ ಮಾಡಿದ್ದರಿಂದ ಈತ
ಖಂಡೇರಾಯ. ಖಂಡೆಯ ಎಂದರೆ ಕನ್ನಡದಲ್ಲಿಯೂ ಖಡ್ಗ ಎಂದೇ ಅರ್ಥ. ಈತ ಆಶ್ವಾರೋಹಿ.

ಭಂಡಾರ ಪ್ರಿಯ
ಮೈಲಾರ ಅಥವಾ ಖಂಡೋಬಾ ದೇವರು ಭಂಡಾರ ಪ್ರಿಯ. ಭಂಡಾರ ಎಂದರೆ ಅರಿಸಿನದ ಪುಡಿ. ಈ ದೇವರ ಉತ್ಸವ, ಜಾತ್ರೆಗಳಲ್ಲಿ ಭಕ್ತ ಗಡಣ ಹಳದಿಯ ಓಕುಳಿಯಲ್ಲಿ ಮಿಂದೇಳುತ್ತದೆ. ಇದು ಈ ಸಂಪ್ರದಾಯದ ವಿಶೇಷಗಳಲ್ಲಿ ಒಂದು. ದೇವರನ್ನು ಭಕ್ತರು ಱಖಂಡುಗ ಭಂಡಾರದೊಡೆಯೞ ಎಂದೂ ಭಂಡಾರಕ್ಕೆ ಇವನೇ ಱಆದಿಕರ್ತೞ ನೆಂದೂ ಜನಪದ ಹಾಡುಗಳಲ್ಲಿ ವರ್ಣಿಸಿದ್ದಾರೆ. ಶಿವನು ಲಿಂಗರೂಪದಲ್ಲಿ ಭೂಲೋಕ ದಲ್ಲಿ ಅವತರಿಸಿದಾಗ ಅವನ ಜೊತೆಗೆ ಭಂಡಾರವೂ ಹುಟ್ಟಿತೆಂದೂ ಅದರಿಂದಲೇ ದೇವತೆಗಳು ಋಷಿಗಳು ಸೇರಿ ಅವನನ್ನು ಪೂಜಿಸಿದರೆಂದೂ ಕತೆಗಳು ಪ್ರಚಲಿತವಾಗಿವೆ. ಮೈಲಾರಲಿಂಗನ ಭಕ್ತರ ನಂಬಿಕೆಯಲ್ಲಿ ಭೂಲೋಕದಲ್ಲಿ ಮೊದಲು ಹುಟ್ಟಿದ್ದೇ ಭಂಡಾರ. ಆದ್ದರಿಂದ ದೇವರ ಪೂಜೆಗೂ ತಮ್ಮ ನಿತ್ಯ ನೈಮಿತ್ತಿಕ ಕಾರ್ಯ ಗಳಿಗೂ ಭಂಡಾರ ಉಪಯೋಗಿಸಬೇಕು ಎಂದು ಅವರು ಭಾವಿಸುತ್ತಾರೆ. ಅದನ್ನೇ ಎಲ್ಲ ದೇವಾಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಳಸುವ ಕ್ರಮವಿದೆ. ಶಿವಲಿಂಗವನ್ನು ಭಂಡಾರದಿಂದ ಪೂಜಿಸುವ ಕ್ರಮ ಮೈಲಾರಲಿಂಗ ಪರಂಪರೆಯಲ್ಲಿ ಇದೆ. ಮಾಳಸಾ ದೇವಿಯ ಆರಾಧನೆ ಪೂರ್ತಿ ಜಾನಪದ
ಹಿನ್ನೆಲೆಯನ್ನು ಹೊಂದಿದೆ. ಬೇಟೆ ಸಂಸ್ಕೃತಿ ಹಾಗೂ ಕೃಷಿ ಸಂಸ್ಕೃತಿಗಳ ಸಂಗಮ ಈ ದೇವರ ಆರಾಧನೆಯಲ್ಲಿ ಕಂಡು ಬರುತ್ತದೆ.

ಕಾಡಿನ ಸಂಸ್ಕೃತಿ ನಾಡಿನ ಸಂಸ್ಕೃತಿಯಾಗಿ ಪರಿವರ್ತಿಸುತ್ತಿರುವ ಹಂತದ ಆಚರಣೆಗಳು ಇಲ್ಲಿ ಸನ್ನಿಹಿತವಾಗಿವೆ. ಎಂದರೆ ಬೇಟೆಗಾರ ಮತ್ತು ಹೈನುಗಾರ ಸಂಸ್ಕೃತಿಯ ಅಂಶಗಳು ಸ್ಪಷ್ಟವಾಗಿವೆ. ಕೃಷಿಕ ಸಂಸ್ಕೃತಿಯ
ಅಂಶಗಳು ಇಲ್ಲಿ ಕಡಿಮೆ ಪ್ರಮಾಣದಲ್ಲಿವೆ. ವೀರಗೆಲಸ, ಬೇಟೆ, ಭಂಡಾರ ಇವು ಬೇಟೆಗಾರಿಕೆಯ ಪ್ರಧಾನ ಅಂಶಗಳು. ತುಪ್ಪ, ಕೋರಿ ಮುಂತಾದವು ಹೈನುಗಾರಿಕೆಯವು .ಇತರೆಲ್ಲ ಸಂಕೇತಗಳು ಮೊದಲ ವಿಭಾಗಕ್ಕೆ ಸಲ್ಲುತ್ತವೆ. ಪ್ರದೇಶವ್ಯಾಪ್ತಿ ಕಾಲವ್ಯಾಪ್ತಿ, ಸಂಕೇತ ವೈವಿಧ್ಯ ಮತ್ತು ಆಚರಣಾ ವೈವಿಧ್ಯಗಳನ್ನು ಗಮನಿಸಿದರೆ ಆಗಮಿಕ ಮತ್ತು ಪೌರಾಣಿಕ ಸಂಸ್ಕೃತಿಗಿಂತ ಹಿಂದಿನ ಕಾಲಕ್ಕೆ ಸೇರಿದ ಪದರಗಳು ಇಲ್ಲಿ ಹರಡಿರುವುದು ನಿಶ್ಚಯ.

ಪ್ರಬಲವಾದ ಆಗಮಿಕ-ಪೌರಾಣಿಕ ಹಿಂದೂಧರ್ಮ ಮತ್ತು ಜೈನ-ಬೌದ್ಧ ನಾಸ್ತಿಕ ಧರ್ಮಗಳನ್ನು ಮೀರಿ ಈ ಪರಂಪರೆ ಉಳಿದು ಬಂದುದೊಂದು ಮಹಾ ಸೋಜಿಗ ಎಂಬುದಾಗಿ ಡಾ. ನೇಗಿನಹಾಳ ಅವರು ಅಭಿಪ್ರಾಯ
ಪಟ್ಟಿದ್ದಾರೆ. ಮೈಲಾರ ಅಥವಾ ಖಂಡೋಬಾ ದೇವರು ಅಪ್ಪಟ ದೇಸಿ ದೇವರು. ಹೀಗಾಗಿ ಈ ದೇವರು ಭಾಷೆಗಳ ಗಡಿಯನ್ನು ಮೀರಿ ಸರ್ವವ್ಯಾಪಿಯಾಗಿ ಇಂದಿಗೂ ಕಂಗೊಳಿಸುತ್ತಿದ್ದಾನೆ.

Leave a Reply

Your email address will not be published. Required fields are marked *