ಮಂದಹಾಸ, ಬೆಂಗಳೂರು
ಮಾಂತ್ರಿಕ ಲೋಕದ ಕಥೆಯನ್ನು ಹೊಂದಿರುವ ಹ್ಯಾರಿ ಪಾಟರ್ ಸರಣಿಯ ಮೊದಲ ಕಾದಂಬರಿ ಪ್ರಕಟಗೊಂಡು ಇಪ್ಪತ್ತೈದು ವರ್ಷಗಳಾದವು. ಈ ಕಾಲು ಶತಮಾನದಲ್ಲಿ ಹ್ಯಾರಿ ಪಾಟರ್ ಮತ್ತು ಲೇಖಕಿ ಜೆ.ಕೆ.ರೋಲಿಂಗ್ ಪಡೆದ ಜನಪ್ರಿಯತೆ ಅಭೂತಪೂರ್ವ.
ಇಂಗ್ಲೆಂಡಿನಲ್ಲಿ ಪುಸ್ತಕ ಪ್ರಕಾಶಕನದ ಏಜೆಂಟರುಗಳು ಇರುತ್ತಾರೆ. ನೀವು ಉದಯೋನ್ಮುಖ ಲೇಖಕರಾಗಿದ್ದರೆ, ಹಿಂದೆಂದೂ ನಿಮ್ಮ ಪುಸ್ತಕ ಪ್ರಕಟವಾಗದೇ, ಪ್ರಕಟವಾಗುವುದನ್ನೇ ನೀವು ಎದುರು ನೋಡುತ್ತಿದ್ದರೆ ಈ ಏಜೆಂಟರುಗಳು ಪುಸ್ತಕ ಪ್ರಕಾಶಕರಿಗೂ ನಿಮಗೂ ಮಧ್ಯಸ್ಥಿಕೆ ವಹಿಸುತ್ತಾರೆ. ಹೆಚ್ಚು-ಕಡಿಮೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಏಜೆಂಟುಗಳಿಲ್ಲವೇ, ಹಾಗೆಯೇ ಇವರದ್ದೂ ಕೂಡ ದಳಿಯ ಕೆಲಸ.
ಎಡಿನ್ಬರ್ಗ್ ನಗರದ ಲೈಬ್ರರಿಯೊಂದರಲ್ಲಿ ಇಂತಹ ಏಜೆಂಟರುಗಳ ಸಂಪರ್ಕ ಮಾಹಿತಿ ಇರುವ ಡೈರಿಯನ್ನು ಒಬ್ಬಳು ಮಹಿಳೆ ಪದೇ ಪದೇ ಎಡತಾಕುತ್ತಿದ್ದಳು. ಚಿಣ್ಣರ ಕಾದಂಬರಿ ಯೊಂದನ್ನ ಬರೆದು ಅದರ ಪ್ರಕಾಶನಕ್ಕಾಗಿ ಪ್ರಯತ್ನಿಸುತ್ತಿದ್ದಳು. ಪ್ರಕಾಶನ ಗಾಣದೇ ಇದ್ದ ಆಕೆಯ ಕಾದಂಬರಿಯ ಹಸ್ತಪ್ರತಿಯಂತೇ, ಆಕೆಯ ಜೀವನವೂ ಅವತ್ತಿನ ಮಟ್ಟಿಗೆ ಡೋಲಾಯ ಮಾನವಾಗಿಯೇ ಇತ್ತು. ಪ್ರೀತಿಸಿ ಆದ ಮದುವೆಯು ಮುರಿದು ಬಿದ್ದಿತ್ತು.
ಒಂದು ಹೆಣ್ಣು ಮಗುವಿನ ತಾಯಿಗೆ ಅಕ್ಷರಶಃ ಜೀವನ ನಡೆಸುವುದೇ ಸವಾಲಾಗಿತ್ತು. ಅದೇ ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಬೋಧನಾ ತರಬೇತಿಯನ್ನು ಆಕೆ ನೀಡುತ್ತಿದ್ದಳಾದರೂ, ಗಿಟ್ಟುತ್ತಿದ್ದ ಕಾಸು ದೊಡ್ಡಮೊತ್ತದ್ದಾಗಿರಲಿಲ್ಲ. ಅಷ್ಟಕ್ಕೂ ಆಕೆಗೆ ಈ ಚಿಣ್ಣರ ಕಾದಂಬರಿಯ ಶುರುವಾತು ಹೊಳೆದದ್ದೂ ಒಂದು ಸೋಜಿಗದ ವಿಷಯವೇ. ಲಂಡನ್ನಿನ ರೈಲ್ವೇ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿರುವಾಗ ಒಮ್ಮೆ ರೈಲು ನಿಗದಿತ ಸಮಯಕ್ಕೆ ಬರದೇ ಸತಾಯಿಸಿತು. ಆ ಘಳಿಗೆಯಲ್ಲಿ ಆಕೆಯ ತಲೆಯಲ್ಲಿ ಕತೆಯೊಂದು ಹೊಳೆದಿತ್ತು. ಆ ಕಥೆಯನ್ನು ಮೂರು ಅಧ್ಯಾಯ ಗಳನ್ನಾಗಿ ಬರೆದದ್ದು ಆಯಿತು.
ಆದರೆ ಪ್ರಕಾಶನದ ಗತಿಯೇನು? ಮೊದಲ ಪ್ರಕಾಶನವು ಅಷ್ಟರ ಮಟ್ಟಿಗೆ ಯಾತನಾಮಯವೇ. ಆದ ಕಾರಣಕ್ಕೇ ಆಕೆ
ಏಜೆಂಟರು ಗಳ ಮೊರೆಹೋದದ್ದು. ಆಕೆಯ ಹಸ್ತಪ್ರತಿ ೧೨ ಏಜೆಂಟರುಗಳ ಕೈಸೇರುತ್ತಾದರೂ, ಕೊನೆಗೆ ಕಸದಬುಟ್ಟಿಯಲ್ಲಿ ಮುದ್ದೆಯಾಗಿ ಬೀಳುತ್ತಿತ್ತು. ಮಾಡುವ ಕೆಲಸಕ್ಕೂ, ಬರೆದ ಬರಹಕ್ಕೂ ಕಿಮ್ಮತ್ತು ಹುಟ್ಟದ ದುರ್ಭರ ಸ್ಥಿತಿಯಲ್ಲಿದ್ದ ಜೋವಾನ್ನಾ ರೋಲಿಂಗ್ ಎಂಬ ಈ ಲೇಖಕಿಯು ೧೩ನೇ ಪ್ರಯತ್ನವಾಗಿ ತನ್ನ ಹಸ್ತಪ್ರತಿಯನ್ನ ಕ್ರಿಸ್ಟೋಫರ್ ಲಿಟಲ್ ಅನ್ನುವ ಏಜೆಂಟನ
ಬಳಿಗೆ ಕಳುಹಿಸಿ, ಪ್ರಕಾಶನವಾಗುವುದನ್ನೇ ತನ್ನ ಆಸೆಗಣ್ಣುಗಳಿಂದ ಎದುರು ನೋಡುತ್ತಿದ್ದಳು.
ಒಂದು ಸಣ್ಣ ಪ್ರಕಾಶನದ ಏಜೆನ್ಸಿಯನ್ನ ನಡೆಸುತ್ತಿದ್ದ ಕ್ರಿಸ್ಟೋಫರ್ ಲಿಟಲ್ಲನಿಗೆ ಅಂಚೆಯ ಮೂಲಕ ಈ ಹಸ್ತಪ್ರತಿ ತಲುಪಿತು.
ಲಕೋಟೆಯ ಮೇಲೆ ಜೋವಾನ್ನಾ ರೋಲಿಂಗ್ ಅಂತ ಹೆಸರಿತ್ತು. ಆಕೆ ಬರೆದ ಚಿಣ್ಣರ ಕಾದಂಬರಿಯ ಮೊದಲ ಮೂರು
ಅಧ್ಯಾಯಗಳನ್ನು ಲಿಟಲ್ಲನ ಏಜೆನ್ಸಿಯ ಮ್ಯಾನೇಜರ್ ಇವೆನ್ಸ್ಮೆಚ್ಚುತ್ತಾನಾದರೂ, ಸ್ವತಃ ಲಿಟಲ್ಲನಿಗೇ ಚಿಣ್ಣರ ಪುಸ್ತಕದಲ್ಲಿ ಕಾಸು
ಹುಟ್ಟುವುದರ ಬಗ್ಗೆ ಅಳುಕಿತ್ತು. ಏಜೆನ್ಸಿಯ ಸಾಹಿತ್ಯ ವಿಮರ್ಶಕ ಹಾವೆಲ್ ಕೂಡ ಮೆಚ್ಚಿದಾಗ ಲಿಟಲ್ಲನಿಗೆ ಒಂದು ಮಟ್ಟಿನ ವಿಶ್ವಾಸವು ಬಂತು.
ಏಜೆಂಟರು ಮಧ್ಯಸ್ಥಿಕೆ ವಹಿಸುತ್ತಾರೇಯೇ ಶಿವಾಯ್ ಪ್ರಕಾಶನದ ಖಾತ್ರಿಯನ್ನೇನು ನೀಡುವುದಿಲ್ಲವಲ್ಲ? ರೋಲಿಂಗಳ ಚಿಣ್ಣರ ಕಾದಂಬರಿಯನ್ನ ಪ್ರಕಟಿಸಲು ಲಿಟಲ್ ಹಲವಾರು ಖ್ಯಾತ ಪ್ರಕಾಶಕರ ಮೊರೆ ಹೋದನಾದರೂ, ಒಪ್ಪಿದವರು ಮಾತ್ರ ಒಬ್ಬರೂ ಇರಲಿಲ್ಲ. ಪೆಂಗ್ವಿನ್, ಹಾರ್ಪರ್ ಕಾಲ್ಲಿನ್ಸ್ ಆದಿಯಾಗಿ ಎಲ್ಲರೂ ತಿರಸ್ಕರಿಸಿದವರೇ. ಅಷ್ಟರಲ್ಲಿ ಆಗತಾನೇ ಚಾಲ್ತಿಗೊಂಡಿದ್ದ ಬ್ಲೂಮ್ಸ್‌ಬರಿ ಅನ್ನುವ ಪ್ರಕಾಶನ ಸಂಸ್ಥೆಯೊಂದು ಪ್ರಕಟಣೆಗೆ ಒಪ್ಪಿ ಒಡಂಬಡಿಕೆಯನ್ನು ಮಾಡಿಕೊಂಡಿತು. ಅಷ್ಟರಲ್ಲಿ ಲಿಟಲ, ಜೋವಾನ್ನಾ ರೋಲಿಂಗ್‌ಗೆ ಒಂದು ಷರತ್ತು ವಿಽಸಿದ್ದ. ಜೋವಾನ್ನಾ ರೋಲಿಂಗ್ ಎಂಬ ಸೀನಾಮಧೇಯವನ್ನು ಇಟ್ಟು ಪುಸ್ತಕ ಪ್ರಕಟಿಸುವ ಬದಲು, ಜೆ.ಕೆ. ರೋಲಿಂಗ್ ಎಂಬ ಹೆಸರಿಟ್ಟರೆ ಚಿಣ್ಣರು ಈ ಕಾದಂಬರಿಯ ಕರ್ತೃವು ಪುರುಷನೆಂದು ಭಾವಿಸಿಯಾರು ಮತ್ತು ಅದು ಪುಸ್ತಕದ ಮಾರಾಟಕ್ಕೆ ಸಹಾಯವಾದೀತೆಂದು ಭಾವಿಸಿದ್ದ.
ಕೊನೆಗೂ ೧೯೯೭ರಲ್ಲಿ ‘ದ ಫಿಲಾಸಫರ್ಸ್ ಸ್ಟೋರ್ಮ್’ ಎಂಬ ಹೆಸರಿನ ಆ ಚಿಣ್ಣರ ಕಾದಂಬರಿ ಲೋಕಾರ್ಪಣೆಗೊಂಡಿತು. ಅದಷ್ಟೇ ಅಲ್ಲದೇ ಚಿಣ್ಣರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯೂ ಆಯಿತು. ಆ ಕಾದಂಬರಿ ಯಾವುದೆಂದು ನೀವೆಲ್ಲ ಈಗಾಗಲೇ ಊಹಿಸಿಯೇ ಇರುತ್ತೀರಿ. ಅದೇ ಹ್ಯಾರಿ ಪಾಟರ್ ಸರಣಿಯ ಮೊದಲ ಕಾದಂಬರಿ. ಹ್ಯಾರಿ ಪಾಟರ್ ಕಾದಂಬರಿ ಸರಣಿಗಳನ್ನು ಕೇವಲ ಚಿಣ್ಣರ ಕಾದಂಬರಿಯೆಂದು ಕರೆದರೆ ಒಂದೋ ನೀವು ಹ್ಯಾರಿ ಪಾಟರ್ ಕಾದಂಬರಿಯನ್ನು ಓದಿಲ್ಲ ಅಂತ ಅರ್ಥ,
ಇಲ್ಲವೇ ನಿಮಗೆ ಅದು ಅರ್ಥವಾಗಿಲ್ಲ ಅಂತ ಅರ್ಥ.
ಮ್ಯಾಜಿಕ್ ವಿದ್ಯೆ ಕಲಿಯಲು ಮಾಯಾ ನಗರವೊಂದಕ್ಕೆ ಬರುವ ಮಕ್ಕಳ ಕತೆಯ ವಸ್ತುವನ್ನು ಇಟ್ಟುಕೊಂಡು ಅದಕ್ಕೊಂದು ಪತ್ತೆದಾರಿ ಕತೆಯ ಎಳೆಕೊಟ್ಟು ಬರೆದ ಈ ಸರಣಿಯ ಮೂಲಧಾತು ನಿಂತಿರುವುದೇ ಪ್ರೀತಿ, ಸ್ನೇಹಗಳೆಂಬ ಸಾತ್ವಿಕಗುಣಗಳ ಬಲದಲ್ಲಿ. ಮತ್ತು ಮೋಸ, ವಂಚನೆಗಳೆಂದ ಥಾಮಸಗುಣಗಳ ಅಧಃಪತನದಲ್ಲಿ. ಆದಕಾರಣವೇ ಕಥಾವಸ್ತು ಹಾಗೂ ನಿರೂಪಣೆ ಈ ಕಾದಂಬರಿಯನ್ನ ವಯಸ್ಸಿನ ಭೇಧವಿಲ್ಲದೇ ಎಲ್ಲರೂ ಓದುವಂತೆ ಮಾಡಿದೆ.
ನಂತರ, ಈ ಸರಣಿಯು ಸಿನಿಮಾ ರೂಪವನ್ನೂ ಪಡೆದು, ಜನಪ್ರಿಯತೆ ಗಳಿಸಿತು, ರೋಲಿಂಗ್ ಎಂಬ ಅದ್ಭುತ ಪ್ರತಿಭೆ ಆ ಕತೆ ಯನ್ನ ಹೆಣೆದದ್ದು ಮತ್ತು ಅದನ್ನು ಸರಣಿಯ ರೂಪದಲ್ಲಿ ಪ್ರಸ್ತುತ ಪಡಿಸಿದ್ದು ಮಾತ್ರ ಅದ್ಭುತವಾಗಿ. ಸರಣಿಯು ಬೆಳೆದಂತೆ ಪದಪ್ರಯೋಗದಲ್ಲಿ ಒಂದು ಬಗೆಯ ಪ್ರೌಢತೆಯು ಕಂಡು ಬರುತ್ತದೆ. ಕತೆಯಲ್ಲಿಯೂ ಪಾತ್ರಗಳ ಹಾಗು ನಿರೂಪಣೆಯ ಮಾಗು ವಿಕೆ ಕಂಡು ಬರುತ್ತದೆ.
ಇವತ್ತಿಗೆ ಹ್ಯಾರಿ ಪಾಟರ್ ಅನ್ನುವುದು ಸಾರ್ವಕಾಲಿಕ ಶ್ರೇಷ್ಠ ಕಾದಂಬರಿ ಸರಣಿಗಳಲ್ಲಿ ಒಂದು ಎಂಬುದು ಎಲ್ಲರೂ ಒಪ್ಪುವ ಮಾತು. ಇಂದು ಜೆ.ಕೆ.ರೋಲಿಂಗ್ ಜಗತ್ತಿನ ಅತಿ ಶ್ರೀಮಂತ ಲೇಖಕಿ. ಹ್ಯಾರಿ ಪಾಟರ್ ಓದದ, ಹ್ಯಾರಿ ಪಾಟರ್ ಸಿನಿಮಾ ನೋಡದ
ಬಾಲ್ಯವನ್ನ ಬಾಲ್ಯವೆಂದೇ ಪರಿಗಣಿಸೆವು ಎಂಬುದು ಖಟ್ಟರ್ ಹ್ಯಾರಿ ಪಾಟರ್ ಅಭಿಮಾನಿಗಳ ಅಂಬೋಣ. ಹ್ಯಾರಿ ಪಾಟರ್‌ನ
ಮಾಯಾಲೋಕವು ಚಿಣ್ಣರ ಕೈಗೆ ಸಿಕ್ಕಿ ೨೫ ವರ್ಷಗಳಾದವು. ಇಂತಹ ಸಂದರ್ಭದಲ್ಲಿ ಈ ಸುಂದರ ಕಾದಂಬರಿ ಸರಣಿಯು ನಮ್ಮೆಲ್ಲರ ನೆನಕೆಗೆ ಯೋಗ್ಯ.