Thursday, 12th December 2024

ಎಚ್ ಎನ್‌ ಎಂಬ ತೆರೆದ ಮನ

ಎಲ್.ಪಿ.ಕುಲಕರ್ಣಿ, ಬಾದಾಮಿ

ಇಂದು ಪದ್ಮಭೂಷಣ ಡಾ.ಎಚ್. ನರಸಿಂಹಯ್ಯನವರ 101 ನೇ ಜನ್ಮದಿನ. ಎಚ್.ಎನ್. ಎಂದೇ ಜನಪ್ರಿಯರಾಗಿದ್ದ ಅವರು ಹಲವು ಪತ್ರಿಕೆಗಳಿಗೆ ಬರೆಯುತ್ತಿದ್ದ ಲೇಖನಗಳು ‘ತೆರೆದ ಮನ ’ ಎಂಬ ಹೆಸರಿನ ಕೃತಿರೂಪ ಪಡೆದಿವೆ. ಅವರ ಆತ್ಮಕತೆ ಧಾರಾ ವಾಹಿ ರೂಪದಲ್ಲಿ ಪ್ರಕಟಗೊಂಡು, ‘ಹೋರಾಟದ ಹಾದಿ’ ಎಂಬ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಹೊರ ಬಂತು. ಅವರ ವೈಚಾರಿಕ ಲೇಖನಗಳನ್ನೊಳಗೊಂಡ ‘ತೆರೆದ ಮನ’ ಪುಸ್ತಕದಲ್ಲಿ ನಮೂದಾದ ಕೆಲವು ವಿಚಾ ರಗಳು ಮನನೀಯ. ಅವುಗಳನ್ನಿಲ್ಲಿ ಹಂಚಿಕೊಳ್ಳಲಾಗಿದೆ. 

ಸರಳ ಜೀವನಕ್ಕೆ ಹೆಸರಾದ ನರಸಿಂಹಯ್ಯನವರು ಪಾಲಿಸಿಕೊಂಡ ಜೀವನಧರ್ಮ ಎಂದರೆ ಎಲ್ಲವನ್ನೂ ವಿಚಾರವಾದದ ದೃಷ್ಟಿಯಲ್ಲಿ ನೋಡುವುದು. ನಮ್ಮ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಅವರು ತೀವ್ರವಾಗಿ ಪ್ರಶ್ನಿಸುತ್ತಿದ್ದರು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಇರಬೇಕು ಎಂಬುದು ಅವರ ಅಚಲ ನಂಬಿಕೆ ಯಾಗಿತ್ತು. ಅವರು ತಮ್ಮ ಪುಸ್ತಕ ದಲ್ಲಿ ಬರೆದ ಕೆಲವು ವಿಚಾರಗಳನ್ನು ಓದುವುದರ ಮೂಲಕ, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಲು ಸಾಧ್ಯ.

ಐನ್‌ಸ್ಟೀನ್ ಮತ್ತು ದೇವರು
‘ಐನ್‌ಸ್ಟೀನ್ ಅವರು ಅತಿಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು ಮಾತ್ರವಲ್ಲ, ನಿಜವಾದ ಮಾನವತಾವಾದಿಯೂ ಹೌದು. ವಿಜ್ಞಾನ ಮತ್ತು ಧರ್ಮ ಹಾಗೂ ಧರ್ಮ ಸಂಬಂಽ ವಿಷಯಗಳ ನಡುವೆ ವಾಗ್ವಾದಗಳು ಹುಟ್ಟಿಕೊಂಡಾಗಲೆಲ್ಲ, ಕಟ್ಟಾ ಧಾರ್ಮಿಕರು ಕೂಡ, ವಿಜ್ಞಾನವು ಅಪರಿಪೂರ್ಣವೆಂಬ ತಮ್ಮ ನಿಲುವಿನ ಸಮರ್ಥನೆಗೆಂದು ಅವರ ಹೆಸರನ್ನು ಎಳೆದು ತರುತ್ತಾರೆ. ಅವರ
ಹೇಳಿಕೆಗಳನ್ನು ಉದ್ಧರಿಸುವುದರ ಮೂಲಕ, ಅವರು ಆಳವಾದ ಧಾರ್ಮಿಕ ನಂಬಿಕೆಗಳಿದ್ದ ವ್ಯಕ್ತಿಯೆನ್ನುವುದನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ.

ಹಾಗೆ, ಪದೇ ಪದೇ ಉದ್ಧರಿಸಲಾಗುವ ಒಂದು ಮಾತೆಂದರೆ, ‘ಧರ್ಮವಿಲ್ಲದ ವಿಜ್ಞಾನ ಕುಂಟು ಮತ್ತು ವಿಜ್ಞಾನವಿಲ್ಲದ ಧರ್ಮ ಕುರುಡು ’ ಎನ್ನುವುದು. ಆದರೆ ಧರ್ಮ ಎಂದರೇನು? ಐನ್‌ಸ್ಟೀನ್ ರ ಪ್ರಕಾರ ಧರ್ಮದ ಪರಿಕಲ್ಪನೆ ಯಾವ ರೀತಿಯದು? ನಮಗೆ ಈ ವಿಷಯಗಳ ತಿಳಿವಳಿಕೆ ಅಗತ್ಯವಾದುದು. ಏಕೆಂದರೆ ಧರ್ಮವನ್ನು ಕುರಿತ ಹಲವು ನಿರ್ವಚನಗಳಿವೆ. ಅಷ್ಟೇ ಅಲ್ಲ, ಧರ್ಮದ ಬಗ್ಗೆ ಪರಸ್ಪರ ವಿಭಿನ್ನವಾದ ಸಿದ್ಧಾಂತಗಳೂ ಇವೆ.

ನಮಗೆ ತಿಳಿದಿರುವಂತೆ, ಎಲ್ಲ ಸಾಂಪ್ರದಾಯಿಕವಾದ ಧರ್ಮಗಳ ಕೇಂದ್ರದಲ್ಲಿ ದೇವರ ಪರಿಕಲ್ಪನೆಯಿದೆ. ದೇವರು ಮತ್ತು ಅದರ
ಮುಂದುವರಿಕೆಯಾಗಿ ಧರ್ಮವನ್ನು ಕುರಿತಂತೆ, ಐನ್‌ಸ್ಟೀನ್ ಅವರ ವಿಚಾರಗಳು, ಈ ಹೇಳಿಕೆಯಿಂದ ಸಾಕಷ್ಟು ಸ್ಪಷ್ಟವಾಗುತ್ತವೆ:
ಕೆಟ್ಟದಕ್ಕೆ ಶಿಕ್ಷೆ ಕೊಟ್ಟು, ಒಳ್ಳೆಯದಕ್ಕೆ ಪ್ರತಿಫಲ ನೀಡುವ ಮತಧರ್ಮಶಾಸಗಳ ದೇವರಲ್ಲಿ ನನಗೆ ನಂಬಿಕೆಯಿಲ್ಲ.

ನಾನು ಜಗತ್ತಿನಲ್ಲಿರುವ ಎಲ್ಲ ವಸ್ತುಗಳ ಕ್ರಮಬದ್ಧ ಸಂಯೋಜನೆ ಹಾಗೂ ಸಮನ್ವಯಗಳ ಮೂಲಕವೇ ತನ್ನ ಇರುವಿಕೆಯನ್ನು ತೋರಿಸಿಕೊಳ್ಳುವ ‘ಸ್ಪಿನೋಜಾ ’ನ ದೇವರನ್ನು ನಂಬುತ್ತೇನೆ. ಮನುಷ್ಯ ಜೀವಿಗಳ ವರ್ತನೆ ಹಾಗೂ ಭವಿಷ್ಯದ ಬಗ್ಗೆ ತಲೆಕೆಡಿಸಿ ಕೊಳ್ಳುವ ದೇವರನ್ನು ನಾನು ನಂಬುವುದಿಲ್ಲ. ಸ್ಪಿನೋಜಾ ಒಬ್ಬ ಡಚ್ ತತ್ವಜ್ಞಾನಿ ದೇವರು ಮತ್ತು ಧರ್ಮಕ್ಕೆ ಸಂಬಂಧಿಸಿದಂತೆ ಅವನ ಅಸಾಂಪ್ರದಾಯಕ ದೃಷ್ಟಿಕೋನಕ್ಕಾಗಿ, ಆಮ್‌ಸ್ಟರ್‌ಡಂನ ಸಿನಗಾಗ್‌ನವರು ಅವನಿಗೆ ಹಿಂಸೆ ಕೊಟ್ಟು ಅವನನ್ನು ಮತ ದಿಂದ ಹೊರಹಾಕಿದ್ದರು.

ಜೀವಮಾನ ಪರ್ಯಂತ ಅವನನ್ನು ಪೀಡಿಸಿದರು. ಐನ್‌ಸ್ಟೀನ್ ಅವರ ಮೇಲಿನ ಹೇಳಿಕೆಯಿಂದ, ಅವರ ಕಲ್ಪನೆಯ ದೇವರಿಗೂ ಮನುಷ್ಯನ ವ್ಯವಹಾರಗಳಿಗೂ ಯಾವುದೇ ಸಂಬಂಧವಿಲ್ಲವೆಂಬ ಸಂಗತಿಯು ಸ್ಪಷ್ಟವಾಗಿ ಮನದಟ್ಟಾಗುತ್ತದೆ. ಅವರ ಪ್ರಕಾರ ಧರ್ಮವು ಯಾವುದೇ ದೈವೀ ಅಧಿಕಾರವನ್ನು ಅವಲಂಬಿಸಿದೆ, ಸಂಪೂರ್ಣವಾಗಿ ನೈತಿಕವಾಗಿತ್ತು. ಸಹಜವಾಗಿಯೇ ನೈತಿಕ ವಾಗಿತ್ತು. ಸಹಜ ವಾಗಿಯೇ ಈ ಮಾತಿಗಳು ಬಹಳ ಮುಖ್ಯವಾದವು. ದೇವರನ್ನು ಒಂದೇ ಸಮನೆ, ತಮ್ಮ ವಾಣಿಜ್ಯವ್ಯವಹಾರಗಳಿಗೆ ಬಳಸುತ್ತಾ ಬಂದಿರುವ ಜನರಿಗೆ, ಐನ್‌ಸ್ಟೀನ್‌ರ ಹೆಸರೆತ್ತುವ ಯಾವ ಅಧಿಕಾರವೂ ಇಲ್ಲ.

ದೇವರು, ಧರ್ಮಗಳನ್ನು ಕುರಿತು ತಮ್ಮ ಒರಟಾದ, ಅಪಾಯಕಾರೀ ಸಿದ್ಧಾಂತಗಳ ಸಮರ್ಥನೆಗೆ, ಆ ಮಹಾವಿಜ್ಞಾನಿಯ ಹೆಸರನ್ನು ಉಪಯೋಗಿಸಿಕೊಳ್ಳಯವುದು ಅನ್ಯಾಯವೂ ಹೌದು.’ ಅಷ್ಟೇ ಅಲ್ಲ ಎಚ್.ಎನ್. ಅವರು ತಮ್ಮ ಈ ಬರವಣಿಗೆ ಯನ್ನು ಮುಂದುವರಿಸುತ್ತಾ, ಐನ್‌ಸ್ಟೀನ್ ರ ಬದುಕನ್ನು ರೂಪಿಸಿದ ಎರಡು ಹೇಳಿಕೆಗಳನ್ನು ಮೆಚ್ಚಿದ್ದಾರೆ.

? ಸಾಮಾನ್ಯ ಮನುಷ್ಯರು ಸಾಧಿಸಬಯಸುವ ಆದರ್ಶಗಳಾದ ಆಸ್ತಿ ಪಾಸ್ತಿ, ಸುಖಭೋಗ ಮತ್ತು ಬಹಿರಂಗದ ಯಶಸ್ಸುಗಳು,
ಮೊದಲಿನಿಂದಲೂ ಬಹಳ ತುಚ್ಛವೆಂದು ನನಗೆ ತೋರಿದೆ.
? ಯಶಸ್ಸನ್ನು ಸಂಪಾದಿಸಿದ ಮನುಷ್ಯನಾಗಲು ಪ್ರಯತ್ನಿಸಬೇಡ. ಮೌಲ್ಯಗಳಿಗೆ ಬೆಲೆಕೊಡುವ ಮನುಷ್ಯನಾಗು.

ಧರ್ಮ ಮತ್ತು ಅಧ್ಯಾತ್ಮ
ಆಧ್ಯಾತ್ಮಿಕತೆ ಧರ್ಮದ ತಿರುಳು ಎಂದು ಎಚ್.ಎನ್ ಅವರು ಹೇಳುತ್ತಿದ್ದರು. ‘ಅದು ಮೂಲಭೂತವಾಗಿ ನೀತಿ ಸಂಹಿತೆ. ವೈಚಾರಿಕ ಮನೋಧರ್ಮವನ್ನು ಹೊಂದಿರುವುದು, ಆಧ್ಯಾತ್ಮವಾದಿಯಾಗಲು ಸಹಾಯಕವಾಗುತ್ತದೆ. ವಿಜ್ಞಾನ ಹಾಗೂ ತಂತ್ರಜ್ಞಾನದ ಈ ಯುಗದಲ್ಲಿ ಕೂಡ ಮೂಢನಂಬಿಕೆಗಳಿಗೆ ಪ್ರಾಧಾನ್ಯ ದೊರೆಯುತ್ತಿದೆ. ಅರ್ಥಹೀನವಾದ ಸಂಪ್ರದಾಯಗಳನ್ನು ನಾವು ಈಗಲೂ ಯಾಂತ್ರಿಕವಾಗಿ ಅನುಸರಿಸುತ್ತಿದ್ದೇವೆ.

ಜೀವನ ಸಮಸ್ಯೆಗಳನ್ನು ಎದುರಿಸುವಲ್ಲಿ ಶಿಕ್ಷಣ ಪಡೆದವರು, ವಿಜ್ಞಾನಿಗಳು ಮತ್ತಿತರರು ಬಹಳ ಸಂದರ್ಭಗಳಲ್ಲಿ ವೈಚಾರಿಕ
ದೃಷ್ಟಿಕೋನವನ್ನು ವ್ಯಕ್ತಪಡಿಸುವುದಿಲ್ಲ. ತತ್ವಜ್ಞಾನದ ಪ್ರಾಧ್ಯಾಪಕ ಬದುಕಿನಲ್ಲಿ ತತ್ವಜ್ಞಾನಿ ಆಗಿರುವುದು ಅಪರೂಪ. ಇದೇ ರೀತಿ ವಿಜ್ಞಾನದ ಪ್ರಾಧ್ಯಾಪಕ ಅಥವಾ ವಿಜ್ಞಾನಿ ಕೂಡ ಬದುಕಿನ ಸಮಸ್ಯೆಗಳನ್ನು ಎದುರಿಸುವಾಗ ವೈಜ್ಞಾನಿಕ ಮನೋ
ಧರ್ಮವನ್ನು ವ್ಯಕ್ತಪಡಿಸುವುದು ಅಪರೂಪ. ಪ್ರಯೋಗಶಾಲೆ ಯಲ್ಲಿ ವಿಚಾರವಾದಿಯಾದ ವಿಜ್ಞಾನಿ ದಿನನಿತ್ಯದ ಬದುಕಿನ
ಸಮಸ್ಯೆಗಳನ್ನು ಎದುರಿಸುವಲ್ಲಿ ವಿಚಾರವನ್ನು ಪೂರ್ತಿಯಾಗಿ ಮರೆಯುತ್ತಾನೆ.

ನಮಗೆ ಗೊತ್ತಿರುವಂತೆಯೇ ಅನೇಕ ವಿಜ್ಞಾನಿಗಳು ಹಸ್ತಸಾಮುದ್ರಿಕ ಹಾಗೂ ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆಯನ್ನು ಹೊಂದಿರುತ್ತಾರೆ. ಕೆಲವು ವಿಜ್ಞಾನಿಗಳು ಅತೀಂದ್ರಿಯ ಶಕ್ತಿಯನ್ನು ಹೊಂದಿರುವೆವೆಂದು ಹೇಳಿಕೊಳ್ಳುತ್ತಿರುವುದನ್ನು ಕುರುಡಾಗಿ ಅನುಸರಿಸುವುದುಂಟು. ನಮ್ಮ ದೇಶದಲ್ಲಿ ಮೂಢನಂಬಿಕೆಗಳು ಸಾಕಷ್ಟಿವೆ. ಭಯ ಮತ್ತು ಅಜ್ಞಾನಗಳೇ ಮೂಢನಂಬಿಕೆಗಳಿಗೆ ಮೂಲಕಾರಣ. ಇವು ಆತ್ಮ ವಿಶ್ವಾಸವನ್ನು ನಾಶಮಾಡುವುದಲ್ಲದೆ, ಸ್ವತಂತ್ರ ಆಲೋಚನೆಗೆ ಧಕ್ಕೆ ತರಯತ್ತದೆ.’ ಎಂಬುದು ಅವರ ನಿಲವು.

‘ಆಧ್ಯಾತ್ಮಿಕತೆಗೆ ಬೇಕಾದ ಮೊದಲ ಸಿದ್ಧತೆ ನಿರ್ಭಯ. ಹೇಡಿಯು ಎಂದಿಗೂ ನೀತಿಯನ್ನು ಹೊಂದಿರಲಾರ ಎಂಬುದು ಗಾಂಧಿಜಿ ಯವರ ಅಭಿಪ್ರಾಯ. ನಮಗೆ ತಿಳಿದಂತೆ ಅಭೀಃಎಂಬುದು ಉಪನಿಷತ್ತಿನ ಮುಖ್ಯ ಸೂತ್ರ. ಸ್ವಾಮಿ ವಿವೇಕಾನಂದರು ಹೇಳುವಂತೆ ಮೂಢನಂಬಿಕೆ ಮನುಷ್ಯನ ದೊಡ್ಡ ಶತ್ರು. ಮತಾಭಿಮಾನ ಅದಕ್ಕಿಂತಲೂ ಕೀಳು, ಪರಿಶುದ್ಧನಾಗಿರು, ಮೂಢನಂಬಿಕೆಗಳನ್ನು ತೊರೆದು ಪ್ರಕೃತಿಯ ಮಾಧುರ್ಯವನ್ನು ಗುರುತಿಸು. ಆದರೆ ಧರ್ಮದ ಅಂತರಂಗಿಕ, ವಾಸ್ತವಿಕ, ಆಧ್ಯಾತ್ಮಿಕ ಸಾರವನ್ನು ಮರೆತು ಅದರ ಬಾಹ್ಯಸ್ವರೂಪವನ್ನು ಕಪಿಮುಷ್ಟಿಯಿಂದ ಒತ್ತಿಹಿಡಿದು, ಎಂದೆಂದಿಗೂ ಬಿಡದ ಮಾನವ ಮತ್ತು ದೇಶಕ್ಕೆ ಧಿಕ್ಕಾರ ಎಂಬುದು ಕೂಡ ವಿವೇಕಾನಂದರ ಅಭಿಪ್ರಾಯ.

ಸ್ವಾಮಿ ರಂಗನಾಥಾನಂದ ಅವರು ತಮ್ಮ ಬದಲಾಗುತ್ತಿರುವ ಸಮಾಜಕ್ಕೆ ಬೇಕಾದ ಸಾರ್ವಕಾಲಿಕ ಮೌಲ್ಯಗಳು ಎಂಬ ಪುಸ್ತಕ ದಲ್ಲಿ ಗಂಭೀರವಾದ ಉದ್ದೇಶಗಳಿಗೆ, ಕಾರಣಗಳಿಗೆ ಪದೇ ಪದೇ ಪ್ರಶ್ನಿಸುವ ಹಾಗೂ ದೊರೆತ ಉತ್ತರಗಳನ್ನು ಪರೀಕ್ಷಿಸಿ ಖಚಿತ ಪಡಿಸಿಕೊಳ್ಳುವ ಮನೋಧರ್ಮವು ಯೋಚನಾ ಪ್ರಪಂಚದಲ್ಲಿ ಹಾಗೂ ಕಾರ್ಯಶೀಲತೆಯಲ್ಲಿ ಮುನ್ನುಗ್ಗುವ ಚುರುಕು ಶಕ್ತಿ ಯನ್ನು ಕೊಡಬಲ್ಲದು ಎಂದು ಹೇಳಿದ್ದಾರೆ.’

ಕ್ರಿಕೆಟ್ ಕುರಿತು ಎಚ್.ಎನ್.
‘ಕ್ರಿಕೆಟ್ ಆಡುವ ದೇಶಗಳೆಲ್ಲಾ ಸಾಮಾನ್ಯವಾಗಿ ಹಿಂದುಳಿದ ದೇಶಗಳು. ಹಲವು ತುಂಬಾ ಬಡದೇಶಗಳೂ ಹೌದು. ಈ ಆಟ
ಪ್ರಪಂಚದಲ್ಲಿ ವೈಜ್ಞಾನಿಕ, ಕೈಗಾರಿಕಾ ಕ್ಷೇತ್ರದಲ್ಲಿ ಮಹೋನ್ನತ ಸ್ಥಾನವನ್ನು ಗಳಿಸಿರುವ ಮತ್ತು ಕ್ರಾಂತಿಗೆ ಹೆಸರಾದ ಯಾವ
ದೇಶಗಳಿಗೂ ಹಬ್ಬದೆ ಇರುವುದು ತುಂಬಾ ಅರ್ಥಪೂರ್ಣವಾಗಿದೆ. ಪ್ರಪಂಚದಲ್ಲಿಯೇ ಅತ್ಯಂತ ಬಲಿಷ್ಠವಾದ, ಮುಂದುವರಿದ ಅಮೆರಿಕಾ ದೇಶದೊಳಕ್ಕೆ ಕ್ರಿಕೆಟ್ ಪ್ರವೇಶ ಮಾಡಲು ಸಾಧ್ಯವಾಗಿಲ್ಲ.

ಕೈಗಾರಿಕಾ ಕ್ಷೇತ್ರದಲ್ಲಿ ಅಮೆರಿಕಾ ದೇಶವನ್ನೇ ಮಣ್ಣು ಮುಕ್ಕಿಸುವ, ಕಾಲದ ಬೆಲೆಯನ್ನೂ ಅರಿತ, ಮುಷ್ಕರ ಹೂಡುವುದಕ್ಕೂ ಪುರುಸೊತ್ತಿಲ್ಲದ, ಅಸಾಮಾನ್ಯ ದೇಶವಾದ ಜಪಾನ್‌ನಲ್ಲಿ ಕ್ರಿಕೆಟ್ ಗಂಧವೇ ಇಲ್ಲ. ಮಾನವ ಕೋಟಿಗೆ ‘ಸ್ವಾತಂತ್ರ್ಯ, ಸಮಾನತೆ, ಸೋದರತ್ವ’ ಎಂಬ ಕ್ರಾಂತಿಕಾರಕ ಸಂದೇಶಕೊಟ್ಟ, ಇಂಗ್ಲೆಂಡಿನಲ್ಲಿ ಬಾರಿಸಿದ ಚೆಂಡು ಬೀಳುವಷ್ಟು ಸಮೀಪದಲ್ಲಿ ಕೇವಲ ಒಂದು ಕಾಲುವೆ ಆಚೆ ಇರುವ ಫ್ರಾನ್ಸ್ ದೇಶದಲ್ಲಿ ಇಲ್ಲಿಯತನಕ ಬ್ಯಾಟ್ ಮತ್ತು ಚೆಂಡು ಅಸ್ಪೃಶ್ಯ.

ಎರಡನೆಯ ಯುದ್ಧದಲ್ಲಿ ಬೆಂದು ಬೂದಿಯಾಗಿ ಆ ಬೂದಿಯಿಂದಲೇ ಪುನರ್ಜನ್ಮ ಪಡೆದು, ಆತ್ಮವಿಶ್ವಾಸದಿಂದ ಅಗಾಧ
ಪ್ರಗತಿಯನ್ನು ಸಾಽಸಿ, ಜಗತ್ತಿನ ಅತ್ಯುತ್ತಮ ರಾಷ್ಟ್ರಗಳಿಗೆ ಸಾಟಿಯಾಗಿ ನಿಂತಿರುವ ಈಗಿನ ಎರಡು ಜರ್ಮನಿಗಳಲ್ಲಿಯಾಗಲಿ, ಪೂರ್ವಜನ್ಮದ ಒಂದೇ ಜರ್ಮನಿಯನ್ನಾಗಲೀ ಎಂದೂ ಕ್ರಿಕೆಟ್ ಗಾಳಿ ಬೀಸಿಲ್ಲ. ಕ್ರಾಂತಿಗೆ ತೌರುಮನೆಯಾದ ರಷ್ಯಾ ದೇಶದಲ್ಲಿ ಕ್ರಿಕೆಟ್ ತೀರಾ ಅಪರಿಚಿತ. ಅಗಾಧ ಸಮಸ್ಯೆಗಳನ್ನು ಅನೇಕ ಆಘಾತಗಳ ಪ್ರವಾಹದಿಂದ ಬಿಡಿಸಿಕೊಂಡು ಗಜರಾಜನಂತೆ ಹೆಮ್ಮೆ ಯಿಂದ ನಿಂತಿರುವ, ಪ್ರಪಂಚದಲ್ಲಿಯೇ ಜನಬಾಹುಳ್ಯದಿಂದ ಕೂಡಿರುವ ಚೈನಾ ದೃಷ್ಟಿ ಕ್ರಿಕೆಟ್ ಕಡೆ ಎಂದೂ ಹರಿದಿಲ್ಲ.

ಹರಿಯುವ ಸೂಚನೆಗಳಂತೂ ಇಲ್ಲವೆ ಇಲ್ಲ. ಯುರೋಪ್ ಖಂಡದ ಉಳಿದ ಯಾವ ರಷ್ಟ್ರದಲ್ಲೂ ಕ್ರಿಕೆಟ್ ಸುದ್ದಿಯೇ ಇಲ್ಲ.
‘ಈ ಎಲ್ಲಾ ದೇಶಗಳಲ್ಲಿಯೂ ಕಾಲಕ್ಕೆ, ದುಡಿಮೆಗೆ ತುಂಬಾ ಮಹತ್ವವುಂಟು. ಹಲವಾರು ದಿನ ಸತತವಾಗಿ ಒಂದು ಆಟವನ್ನು
ನೋಡುವಷ್ಟು ಬಿಡುವಾಗಲಿ, ವ್ಯವಧಾನವಾಗಲಿ ಅಥವಾ ಮನೋಬಲವಾಗಲಿ ಇಲ್ಲ. ಆದರೆ ನಮ್ಮ ದೇಶದಲ್ಲಿ ಈ ಆಟಕ್ಕೆ
ಮಿತಿ ಮೀರಿದ ಪ್ರೋತ್ಸಾಹ ವೃತ್ತಪತ್ರಿಕೆಗಳಿಂದ ಮತ್ತು ಪ್ರತಿಷ್ಠಿತ ವರ್ಗಗಳಿಂದ ಸಿಕ್ಕಿದೆ.

ಕ್ರಿಕೆಟ್ ಆಟ ನೋಡುವುದು, ಅದರ ವಿಷಯ ಮಾತನಾಡುವುದು, ಕಾಮೆಂಟರಿ ಕೇಳುವುದು ಇವೆಲ್ಲಾ ಹಲವರಲ್ಲಿ ಒಂದು ಸೋಗು ಆಗಿದೆ. ಕ್ರಿಕೆಟ್ ಜನಪ್ರೀಯ ಆಗುವುದಕ್ಕೆ ಅಂಧಾನುಕರಣೆಯೂ ಒಂದು ಪ್ರಬಲವಾದ ಕಾರಣ. ಇಂಗ್ಲೆಂಡ್ ನ ಪ್ರಸಿದ್ಧ ನಾಟಕಕಾರ ಜಾರ್ಜ್ ಬರ್ನಾರ್ಡ್ ಷಾ, ‘ಹನ್ನೊಂದು ಜನ ಮೂರ್ಖರ ಆಟವನ್ನು ಹನ್ನೊಂದು ಸಾವಿರ ಮೂರ್ಖರು ನೋಡುತ್ತಾರೆ’ ಎಂದು ಕಟುವಾಗಿ ಕ್ರಿಕೆಟ್ ಆಟವನ್ನು ಟೀಕಿಸಿದ್ದರು. ಅವರ ಕಾಲದಲ್ಲಿ ಕ್ರಿಕೆಟ್ ಕಾಮೆಂಟರಿ ಇರಲಿಲ್ಲ. ಇದ್ದಿದ್ದರೆ ಆ ಹನ್ನೊಂದು ಸಾವಿರ ಹನ್ನೊಂದು ಮೂರ್ಖರ ಜೊತೆಗೆ ಅಸಂಖ್ಯಾತ ಮಂದಿ ಕಾಮೆಂಟರಿ ಕೇಳುವವರೂ ಸೇರಿ ಹೋಗುತ್ತಿ ದ್ದರು.’

ಲೇಖನದ ಕೊನೆಯಲ್ಲಿ ಎಚ್.ಎನ್ ಅವರು ‘ಈ ಲೇಖನದ ಉದ್ದೇಶ, ಕ್ರಿಕೆಟ್ ಆಟವನ್ನು ದೂಷಿಸುವುದಾಗಲೀ, ಅವಹೇಳನ
ಮಾಡುವುದಾಗಲೀ ಅಲ್ಲ. ನಮ್ಮ ದೇಶಕ್ಕೆ, ನಮ್ಮ ಪರಿಸ್ಥಿತಿಗೆ ಯಾವುದು ಹೊಂದುತ್ತದೆಯೋ ಅಂತಹುದನ್ನು ನಾವು
ಒಪ್ಪಬೇಕು. ಅಪ್ರಿಯವಾದ ಸತ್ಯವನ್ನು ಹೇಳುವ ಅಭ್ಯಾಸ ಮಾಡಿಕೊಳ್ಳಬೇಕು. ಕ್ರಿಕೆಟ್ ಆಟದ ಗುಣಾವಗುಣಗಳನ್ನು,
ಸಾಧಕ ಬಾಧಕಗಳನ್ನು ಯಾವ ಭಾವಾವೇಶವೂ ಇಲ್ಲದೆ, ನಿರ್ವಿಕಾರ ಮನೋಭಾವದಿಂದ ತಾರ್ಕಿಕವಾಗಿ ಪರಿಶೀಲಿಸೋಣ’
ಎಂಬುದಾಗಿ ಬರೆಯುತ್ತಾರೆ.

ಪವಾಡ ಬಯಲು ಅಭಿಯಾನ
೧೯೭೨ ರಲ್ಲಿ ಎಚ್.ಎನ್. ಅವರು ಬೆಂಗಳೂರು ವಿವಿಯ ಕುಲಪತಿಗಳಾಗಿ ನೇಮಕಗೊಂಡರು. 1973 ರಲ್ಲಿ ಒಂದು ದಿನ ವಿ.ಕೆ.ಗೋಕಾಕರ ಮೂಲಕ ಸಾಯಿಬಾಬಾ ತಂಗಿರುವ ವೈಟ್‌ಫೀಲ್ಡ್ ನ ಆಶ್ರಮದಲ್ಲಿ ಭೇಟಿ ಮಾಡುತ್ತಾರೆ. ಅಲ್ಲಿಯೇ ಎಚ್.ಎನ್. ಅವರು ಬಾಬಾ ಅವರನ್ನು ಕೆಣಕುವ ಭಾಷಣ ಮಾಡುತ್ತಾರೆ. ಈ ಘಟನೆ ಮುಂದೆ ದೊಡ್ಡ ವಾದವಿವಾದವಾಗಿ ಪರಿವರ್ತನೆ ಯಾಯಿತು. ‘ಸಾಯಿಬಾಬಾ ಅವರು ಬೂದಿ, ಉಂಗುರ ಮತ್ತು ವಾಚುಗಳ ಸೃಷ್ಟಿ ಮಾಡಿಕೊಡುವ ಬದಲು ಕುಂಬಳಕಾಯಿ ಸೃಷ್ಟಿಸಿ ಕೊಡಬೇಕು’ ಎಂದು ಎಚ್.ಎನ್. ಪಟ್ಟು ಹಿಡಿದರು.

ಶೂನ್ಯದಿಂದ ಏನನ್ನೂ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂಬ ಏಕೈಕ ವೈಜ್ಞಾನಿಕ ನಂಬಿಕೆ ಮಾತ್ರ ಅವರ ಪರವಾಗಿತ್ತು! ಪವಾಡಗಳು ಮತ್ತು ಮೂಢನಂಬಿಕೆಗಳ ವಿರುದ್ಧ ಅವರ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದ ಒಂದು ಸಮಿತಿ ಸಾಮಾಜಿಕ ವಲಯ ದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತು. ಸಮಿತಿ ಅಧ್ಯಕ್ಷರಾಗಿ ಮತ್ತು ಬೆಂಗಳೂರು ವಿ.ವಿ ಕುಲಪತಿಯಾಗಿ ಎಚ್.ಎನ್. ಅವರು 1976ರ ಜೂನ್ 2 ರಿಂದ ಜುಲೈ 5 ರ ನಡುವಿನ ಅವಧಿಯಲ್ಲಿ ಸಾಯಿಬಾಬಾ ಅವರಿಗೆ ಮೂರು ಪತ್ರಗಳನ್ನು ಬರೆದು ಪವಾಡ ಪರೀಕ್ಷೆಗೆ ಅನುಮತಿ ನೀಡಬೇಕು ಎಂದು ಕೋರಿದರು. ಆದರೆ ಸಾಯಿಬಾಬಾ ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಆ ಪತ್ರಗಳನ್ನು ಎಚ್.ಎನ್. ಪತ್ರಿಕೆಗಳಿಗೆ ಬಿಡುಗಡೆ ಮಾಡಿದರು. ಫಲವಾಗಿ, ಸಾಯಿಬಾಬಾ ಅವರ ಪ್ರಭಾವ ಮುಂಕಾಯಿತು.

ಆರ್ಥಿಕ ಅಸಮಾನತೆಯ ಬಗ್ಗೆ, ಶೋಷಣೆಯ ಬಗ್ಗೆ, ಸಾಮಾಜಿಕ ಅನ್ಯಾಯದ ಬಗ್ಗೆ ರಹಸ್ಯ ಧರ್ಮದ ಬಗ್ಗೆ ಹಾಗೂ ಮೂಢ ನಂಬಿಕೆಗಳ ಬಗ್ಗೆ ಪ್ರತಿಭಟಿಸುವುದು ಸುಸಂಸ್ಕೃತ ಹಾಗೂ ಆಧ್ಯಾತ್ಮವಾದಿಯ ಕರ್ತವ್ಯವಾಗಬೇಕು. ಮನುಷ್ಯನ ಇತಿಹಾಸದಲ್ಲಿ ಉದ್ದಕ್ಕೂ ಕಂಡುಬಂದಿರುವ ಪ್ರವೃತ್ತಿ ಶೋಷಣೆ. ನಾಗರಿಕ-ಅನಾಗರಿಕ ಪ್ರಪಂಚದಲ್ಲಿ ಕಂಡುಬರುತ್ತಿರುವ ವ್ಯತ್ಯಾಸ ಸ್ವಲ್ಪ.

***

ಬುದ್ಧಿವಂತರು ಕಮ್ಮಿ ಬುದ್ಧಿವಂತನನ್ನು ಎಲ್ಲ ಹಂತದಲ್ಲಿ ಶೋಷಣೆಗೆ ಗುರಿಪಡಿಸುವುದನ್ನು ಕಾಣಬಹುದು. ದೇವರು ಧರ್ಮ, ಜನಾಂಗ, ಜಾತಿ, ವರ್ಣ, ಸ್ವಹಿತಾಸಕ್ತಿ, ಆರ್ಥಿಕ ಸಿದ್ಧಾಂತಗಳು ಯಾವಾಗಲೂ ಶೋಷಣೆಯ ಸಾಧನಗಳಾಗಿವೆ. ನಮ್ಮ ದೇಶದಲ್ಲಿ ಕಂಡುಬರುತ್ತಿರುವ ದರಿದ್ರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗೆ ಶೋಷಣೆ ಮುಂತಾದವುಗಳೇ ಮುಖ್ಯ ಕಾರಣ ವಾಗಿವೆ.
– ಎಚ್. ನರಸಿಂಹಯ್ಯ