Thursday, 12th December 2024

ಹಾಸ್ಟೆಲ್ ಎಂಬ ಪಾಠಶಾಲೆ

ಸುಲಲಿತ ಪ್ರಬಂಧ

ಡಾ.ಕೆ.ಎಸ್‌.ಪವಿತ್ರ

ನನ್ನ ಫ್ರೆಂಡ್ಸೆಲ್ಲಾ ‘ಪಿಯುಸಿ’ ಗೆ ಹಾಸ್ಟೆಲ್‌ಗೆ ಹೋಗಿ ಮಂಗಳೂರು-ಬೆಂಗಳೂರು ಕಾಲೇಜಿಗೆ ಸೇರ್ತಾರೆ. ನಾನು ಏನು ಮಾಡ್ಲಿ? ಇನ್ನೂ ಒಂಭತ್ತನೇ ತರಗತಿಯಲ್ಲಿರುವ ಮಗಳು ಭೂಮಿಯ ಪ್ರಶ್ನೆ.

‘ಅರೆರೆ, ನಮಗೆ ಹದಿನೇಳು ವರ್ಷಕ್ಕೆ ಮೆಡಿಕಲ್ ಸೇರುವಾಗಲೂ ಹಾಸ್ಟೆಲ್ ಎಂದರೆ ಇದ್ದ ಭಯ ಈ ಮಕ್ಕಳಿಗೆ ಹದಿನೈದಕ್ಕೇ ಇಲ್ಲವಾಗಿ ಬಿಟ್ಟಿದೆಯಲ್ಲ’ ಎಂಬ ಅಚ್ಚರಿ ನನಗೆ. ಜತೆಗೆ ನೆನಪಿನ ಬುತ್ತಿಯೂ ಬಿಚ್ಚತೊಡಗಿತ್ತು. ಮಕ್ಕಳೊಡನೆ ನನ್ನ ಹಾಸ್ಟೆಲ್ ಅನುಭವಗಳನ್ನು ಹಂಚಿಕೊಳ್ಳುತ್ತಾ ಮತ್ತೆ ಮೈಸೂರು-ಬೆಂಗಳೂರುಗಳ ಹಾಸ್ಟೆಲ್‌ ಗಳಲ್ಲಿ ನಡೆದಾಡಿದ ಸೊಗಸಿನ ದಿನಗಳು ಒಂದಾದ ಮೇಲೊಂದು ನೆನಪಿಗೆ ಬರಲಾರಂಭಿಸಿದವು.

ದ್ವಿತೀಯ ಪಿಯುಸಿಯಾದ ತಕ್ಷಣ ಮೊದಲು ಮೆಡಿಕಲ್ ಸೀಟು ಸಿಕ್ಕುವ ಒತ್ತಡ ವಾದರೆ, ಒಳ್ಳೆಯ ರ್ಯಾಂಕು ಬಂದ ತಕ್ಷಣ ನಂತರದ ಚಿಂತೆ ಹಾಸ್ಟೆಲಿನಲ್ಲಿರುವ ಬಗ್ಗೆ. ‘ರೂಂ ಮೇಟ್’ ಅಥವಾ ಹಾಸ್ಟೆಲೈಟ್ಸ್‌ ಕರೆಯುವಂತೆ ‘ರೂಮಿ’ ಯಾರು ಸಿಗ್ತಾರೋ, ರ್ಯಾಗಿಂಗ್ ಮಾಡುತ್ತಾರೋ, ಊಟ ಹೇಗಿರುತ್ತದೆಯೋ ಎಂಬ ಚಿಂತೆಗಳು. ‘ಹಾಸ್ಟೆಲ್’ ಚೆನ್ನಾಗಿದೆ ಅಥವಾ ಇಲ್ಲ ಎಂಬುದನ್ನು ಅವಲಂಬಿಸಿಯೇ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಂತೂ ತಮ್ಮ ಕಾಲೇಜನ್ನು ಆರಿಸಿಕೊಳ್ಳುವುದು ವಾಡಿಕೆ.

ನಾನು ಹಾಸ್ಟೆಲ್ಲಿಗೆ ಕಾಲಿಡುವಾಗ ಅದಾಗಲೇ ನನ್ನಕ್ಕ ಮಣಿಪಾಲದ ಕೆ.ಎಂ.ಸಿ. ಹಾಸ್ಟೆಲ್‌ಗೆ ಹೋಗಿ 3 ವರ್ಷಗಳಾಗಿದ್ದವು. ಮಧ್ಯೆ ಮಧ್ಯೆ ನಾನೂ ಅಕ್ಕನನ್ನು ನೋಡಲು ಹೋಗಿ ಅಲ್ಪಸ್ವಲ್ಪ ಹಾಸ್ಟೆಲ್ ರುಚಿ ನೋಡಿದ್ದೆ. ಅದು ಮಣಿಪಾಲದ ಖಾಸಗೀ ಕಾಲೇಜಿನ ಹಾಸ್ಟೆಲ್. ಅಕ್ಕನ ವ್ಯಕ್ತಿತ್ವವೂ ಅಷ್ಟೆ. ಸುಲಭವಾಗಿ ಎಲ್ಲರೊಡನೆ ಬೆರೆಯುವ, ತಮಾಷೆಯ ಮನೋಧರ್ಮ, ಎಣ್ಣೆೆ ಬಳಿದು ಕೊಂಡು, ಒಂದು ಬಿಗಿ ಜಡೆ ಹಾಕಿ, ‘ಗೌರಮ್ಮ’ಗಳಾಗಿ, ಹವಾಯಿ ಚಪ್ಪಲಿ ಧರಿಸಿ ಕಾಲೇಜಿಗೆ ಬನ್ನಿ ಎಂದರೆ ಅಕ್ಕ-ಅಕ್ಕನ ಸ್ನೇಹಿತೆ ಯರು ಆರಾಮಾಗಿ ನಗುತ್ತಾ ಹೋಗಿ ಬರುತ್ತಿದ್ದರು.

ಬಹು ಬೇಗ ರ್ಯಾಗಿಂಗ್ ಅವರಿಗೆ ಮುಗಿದೇ ಹೋಗಿತ್ತು. ಊಟಕ್ಕೆ ನಾಲ್ಕು ರೀತಿಯ ‘ಮೆಸ್’. ಒಂದು ಬೇಸರವಾದರೆ ಇನ್ನೊಂದಕ್ಕೆ
ಸೇರಬಹುದು. ಆದರೂ ಅಕ್ಕ ಪ್ರತಿ ಬಾರಿ ಮನೆಗೆ ಬಂದಾಗ ಮೊದಲು ಕೇಳು ತ್ತಿದ್ದದ್ದು ಬಾಲ್ಯದಿಂದ ನಾವೆಲ್ಲರೂ ದ್ವೇಷಿಸುತ್ತಿದ್ದ ತಿಂಡಿ ‘ಉಪ್ಪಿಟ್ಟು’! ಅಲ್ಲಿಯವರೆಗೆ ಮನೆಯಲ್ಲಿ ‘ಆ ತಿಂಡಿ, ಈ ತಿಂಡಿ, ಅದು ಬೇಡ, ಇದು ಬೇಡ’ ಎನ್ನುತ್ತಿದ್ದ ಅಕ್ಕ ಒಮ್ಮೆಲೇ ‘ಅಮ್ಮ’ನಷ್ಟು ಒಳ್ಳೆಯ ಅಡಿಗೆ ಮಾಡುವವರೇ ಇಲ್ಲ ಎಂಬಂತೆ ಆಡತೊಡಗಿದ್ದು ನನಗೆ ಆಶ್ಚರ್ಯ ಮೂಡಿಸಿತ್ತು.

ನಾನು ಮೆಡಿಕಲ್ ಕಾಲೇಜು ಸೇರಿ ಕಾಲಿಟ್ಟಿದ್ದು ಮೈಸೂರು ಮೆಡಿಕಲ್ ಕಾಲೇಜಿನ ‘ಪ್ರಿನ್ಸೆಸ್’ ರಸ್ತೆಯಲ್ಲಿರುವ ‘ರಾಜ ಕುಮಾರಿ’ ಯರ ಹಾಸ್ಟೆಲಿಗೆ. ನಮ್ಮ ಮೈಸೂರಿನಲ್ಲಿ ಎಲ್ಲವೂ ರಾಜ-ರಾಣಿ-ರಾಜಕುಮಾರಿಮಯ. ಆದರೆ ಖಾಸಗಿ ಕಾಲೇಜಿಗೆ ಹೋಲಿಸಿದರೆ ನಮ್ಮದು ಬಡವರ ಹಾಸ್ಟೆಲ್. ಯಾವಾಗಲೂ ಓದುವ, ‘ಕುಡುಮಿ’ ಗಳ ಹಾಸ್ಟೆೆಲ್.

ಹಾಸ್ಟೆಲಿನ ಸ್ನಾನಾಯಣ
ಹಾಸ್ಟೆಲಿನದೇ ಒಂದು ಪುಟ್ಟ ಜಗತ್ತು. ಕೆಲವು (ಬೆರಳೆಣಿಕೆಯಷ್ಟು) ಜನ ಮಾತ್ರ ಬೆಳಿಗ್ಗೆ ಎದ್ದು ಓದುವವರು. ಉಳಿದವರೆಲ್ಲಾ ನಿಶಾಚರಿಗಳು. ಅವರವರ ಅಭ್ಯಾಸಕ್ಕನುಗುಣವಾಗಿ ‘ಬಾತ್‌ರೂಂ’ ಗಳು ಮಾತ್ರ ಸದಾ ‘ಬಿಸಿ’. ಅದರಲ್ಲಿಯೂ ಗೀಸರ್‌ಗಳು ಕೆಟ್ಟು ಹೋಗುವುದು, ಗೀಸರ್ ರೂಮಿಗೆ ‘ವಾರ್ಡನ್’ ಬೀಗ ಹಾಕಿಟ್ಟು ಬಿಡುವುದು, ವಾರ್ಡನ್ ತಲೆ ಕೆಡುವಂತೆ ಜಾಣ ತರಳೆ(ಲೆ)ಯರು ಆ ಬೀಗ ತೆಗೆದು ತಮ್ಮದೇ ‘ಪರ್ಸನಲ್’ ಬೀಗ ಹಾಕಿಟ್ಟು ಬಿಡುವುದು, ಬಾತ್‌ರೂಂನೊಳಗೆ ತಮ್ಮ ಬಕೆಟ್ ಮೊದಲೇ ಇಟ್ಟು ‘ಸ್ನಾನ’ ರಿಸರ್ವ್ ಮಾಡುವುದು, ಒಂದೇ ಎರಡೇ ಮುಗಿಯದ ಸ್ನಾನಾಯಣ!

ಕೆಲವೊಮ್ಮೆಯಂತೂ 4 ಗಂಟೆಗೆ ಎದ್ದು ಬಿಸಿನೀರು ಹಿಡಿದು ತಲೆಸ್ನಾನ ಮಾಡುವ ಫಜೀತಿ. ಆಗಂತೂ ದಿನನಿತ್ಯ ದೀಪಾವಳಿ!
ಮನೆಯಲ್ಲಿದ್ದು ‘ನನ್ನದು’ ‘ನನ್ನದು’ ಎಂದು ಜಗಳವಾಡುವುದು ನಮಗೆಲ್ಲರಿಗೂ ಅಭ್ಯಾಸವಾಗಿರುತ್ತದೆ ತಾನೆ? ಹಾಸ್ಟೆಲ್ಲಿಗೆ ಬಂದರೆ ಇಲ್ಲಿ ಎಲ್ಲವೂ ಎಲ್ಲರದ್ದೂ! ‘ಜೋ ತೇರಾ ಹೈ ವೋ ಮೇರಾ ಹೈ’! ಮತ್ತೊಬ್ಬರ ಸೀರೆ/ದುಪ್ಪಟ್ಟಾ /ಪೆನ್ನು/ನೋಟ್ಸ್ ಇತ್ಯಾದಿ ಇತ್ಯಾದಿ ಎರವಲು ಪಡೆದುಕೊಂಡ ಮೇಲೆ ನಮ್ಮದನ್ನು ನೀಡದಿರುವುದಾದರೂ ಹೇಗೆ? ನನ್ನಂತಹ ಶಿಸ್ತಿನ ಪ್ರಾಣಿಗೆ ಇದು ಸ್ವಲ್ಪ ಇರಿಸು-ಮುರಿಸು ಎನಿಸಿದರೂ ಕ್ರಮೇಣ ಹೊಂದಿಕೊಂಡು ಎರವಲು ಕೊಟ್ಟೆ -ಪಡೆದೆ.

ಟ್ರಿಂಗ್ ಟ್ರಿಂಗ್ ಫೋನಾಯಣ
ಹಾಸ್ಟೆಲ್ಲಿಗೆ ರಾಜ್ಯದ ಎಲ್ಲೆಡೆಯಿಂದ, ದೇಶದ ಹಲವೆಡೆಯಿಂದ ಬಂದಿರುತ್ತಿದ್ದೆವು. ಆಗಿನ್ನೂ ಮೊಬೈಲ್ ಇರಲಿಲ್ಲ. ಇಡೀ
ಹಾಸ್ಟೆಲ್ಲಿಗೆ ಇದ್ದದ್ದು ಒಂದೇ ಫೋನು, ಒಂದೇ ಟಿ.ವಿ. ಆ ಫೋನೋ ಯಾವಾಗಲೂ ಗುಣಗುಣಿಸುತ್ತಲೇ ಇರುತ್ತಿತ್ತು. ತಮ್ಮ ಮನೆಯವರ /ಫ್ರೆಂಡಿನ ಕರೆಗೆ ಕಾಯುತ್ತಿರುವ ಹುಡುಗಿಯರು ಅಲ್ಲೇ ಪುಸ್ತಕ ಹಿಡಿದು ಕುಳಿತಿರುತ್ತಿದ್ದರು. ಆ ವೇಳೆಗೆ ಬರುವ ಇತರರ ಫೋನಿಗೆ ಹೋಗಿ ಕೂಗಿ ಕರೆಯುವ ಕೆಲಸ ಅವರದೇ ಆಗಿರುತ್ತಿತ್ತು. ಹುಡುಗಿಯ ಹೆಸರು, ರೂಂ ನಂ. ರಾಗವಾಗಿ ಕರೆಯು ವುದೇ ಒಂದು ಮಜಾ. ‘ತರಳೆ (ಲೆ)’ಯರು ಕೆಲವೊಮ್ಮೆ ‘ಏಪ್ರಿಲ್ ಫೂಲ್’ ಮಾಡಲು ಫೋನ್ ಬರದಿದ್ದರೂ  ಕೂಗಿ ಬಿಡುತ್ತಿದ್ದರು.

ಸ್ನೇಹಿತರೊಡನೆ ಮಾತನಾಡುವ ಸ್ನೇಹಿತೆಯರು ಗಂಟೆಗಟ್ಟಲೆ ಮಾತನಾಡುವುದು, ತಮ್ಮ ಮನೆಯಿಂದ ಕರೆ ಬಂದರೆ ಎಂಬ ಆತಂಕದಿಂದ ಚಡಪಡಿಸುತ್ತಾ ಇತರರು ಶತಪಥ ತಿರುಗುವುದು ಇವೆಲ್ಲವೂ ಇಂದು ಮೊಬೈಲ್ ಯುಗದಲ್ಲಿ ‘ಇದಾಗಿದ್ದ ಶತಮಾನಗಳ ಹಿಂದೆ’ ಎಂದೆನಿಸುವ ಹಾಗೆ ನೆನಪಾಗುತ್ತವೆ. ಕುಡುಮಿಗಳಾದ ನಮ್ಮ ಹಾಸ್ಟೆಲಿನಲ್ಲಿ ಜೋರಾಗಿ ಹೆಜ್ಜೆಯಿಟ್ಟರೆ ‘ಶ್…’ ಎಂಬ ಸದ್ದು ಕೇಳಿಸುತ್ತಿತ್ತು.

ಯಾರಿಗೂ ಲೆಕ್ಕಿಸದೆ ಜೋರಾಗಿ ಮ್ಯೂಸಿಕ್ ಹಾಕಿ ಗದ್ದಲ ಮಾಡುವವರೂ ಇದ್ದರು. ಆದರೆ ಕೆಲವೊಮ್ಮೆ ಇಂಥ ಇಬ್ಬರು ವಿರುದ್ಧ -ಜೋರು ‘ಪಾರ್ಟಿ’ಗಳಿಗೆ ಯುದ್ಧವೇ ಆರಂಭವಾಗುತ್ತಿತ್ತು. ‘ಮೆಸ್ಸಿನ ಬಾಗಿಲೇ’ ನಮ್ಮ ‘ನೋಟೀಸ್ ಬೋರ್ಡ್’. ಅದರ ಮೇಲೆ
‘ಲಿಖಿತ’ ಯುದ್ಧವೂ ಆರಂಭವಾಗುತ್ತಿತ್ತು. ಒಂದು ಪಾರ್ಟಿ ‘ಬೆದರಿಕೆ’ ಬರೆದರೆ, ಮತ್ತೊಂದು ಪಾರ್ಟಿ ಅದನ್ನು ಯಾವಾಗಲೋ ಕಿತ್ತೊಗೆಯುತ್ತಿತ್ತು. ಬೆದರಿಕೆ ಹಾಕಿದ್ದ ಪಾರ್ಟಿ ಬೆದರದೆ ‘ನಮಗೇನು ಪೇಪರ್‌ಗೆ ಬರವಿಲ್ಲ’ಎಂಬ ಇನ್ನೊಂದು ‘ನೋಟೀಸ್’ ಹಾಕು ತ್ತಿತ್ತು. ಕಾವ್ಯಮಯ ವಾಗಿ ವಿಶ್ಲೇಷಾರ್ಥಗಳಿಂದ, ಪ್ರಾಸಬದ್ಧವಾಗಿ ಬರೆಹಗಳು / ಕಾದುವವರಿಗೂ, ಓದುವವರಿಗೂ ಇಬ್ಬರಿಗೂ ಮಜಾ!

ವಾರ್ಡನ್ ಮೇಲೆ ವಾರ್
ಮಧ್ಯೆ ಮಧ್ಯೆ ಈ ಎರಡೂ ಪಾರ್ಟಿಗಳೂ ಒಟ್ಟಾಗಿ, ವಾರ್ಡನ್ ಮೇಲೆ ‘ವಾರ್’ಗೆ ಮುಂದಾಗುತ್ತಿದ್ದರು. ಮೆಸ್ಸಿನ ಕಂಟ್ರಾಕ್ಟರ್‌ಗೆ
ಹೆದರಿಸುತ್ತಿದ್ದರು. ‘ತಿಂಡಿ ಹಂಚಲು ಇಡುತ್ತಿದ್ದ ಟೊಮ್ಯಾಟೋ ಬಾತ್‌ನ ಬಕೆಟ್ಟಿಗೆ ಇಡೀ ಬಕೆಟ್ಟೇ ಹೇಗೆ ಕಸದ ಬುಟ್ಟಿಗೆ ಬಂದು
ಬಿದ್ದಿದೆ’ ಎಂಬುದನ್ನು ‘ಪ್ರಾತ್ಯಕ್ಷಿಕೆ’ಯ ಮೂಲಕ ವಿವರಿಸುತ್ತಿದ್ದರು.

ಟಿ.ವಿ. ನೋಡುವಾಗಲೂ ಚಿಕ್ಕ ಚಿಕ್ಕ ಜಗಳಗಳು, ಸರ್ಕಾರಿ ಹಾಸ್ಟೆಲಾದ್ದರಿಂದ ಇದ್ದಿದ್ದು ಒಂದು ಟಿ.ವಿ. ನ್ಯಾಷನಲ್ ಛಾನೆಲ್
ಮಾತ್ರ. ಕೊನೆಯ ವರ್ಷದಲ್ಲಿ ಸೋನಿ, ಜೀ ಅಂತ ಛಾನಲ್ ಗಳು ಬಂದ ನೆನಪು. ಪ್ರಸಿದ್ಧ ಸಿನಿಮಾ, ಹಾಡುಗಳ ‘ಟಾಪ್ 10’, ‘ಮಿಸ್ ಯೂನಿವರ್ಸ್’ ಸ್ಪರ್ಧೆಗಳು ಪ್ರಸಾರವಾಗುವಾಗ ಕುರ್ಚಿಗಳೆಲ್ಲಾ ‘ರಿಸರ್ವ್ಡ್‌ ‌’! ಊಟದ ತಟ್ಗಳನ್ನೇ ಇಟ್ಟು ‘ಬುಕ್’ ಮಾಡುವುದೇ ಅಭ್ಯಾಸ. ಪರೀಕ್ಷೆಗೆ ಬರಬಹುದಾದ ಕಿರು ಟಿಪ್ಪಣಿ ಶಾರ್ಟ್ ನೋಟ್ಸ್‌, ಮುಖ್ಯ ಪ್ರಶ್ನೆಗಳನ್ನು ಸೀನಿಯರ್‌ಗಳ ಪಠ್ಯ ಪುಸ್ತಕಗಳನ್ನು ನೋಡಿ ‘ಮಾರ್ಕ್’ ಮಾಡುವ ಕೆಲಸವನ್ನು ಹುಡುಗಿಯರು ಮಾಡುತ್ತಿದ್ದದ್ದು ಈ ಸಮಯದಲ್ಲಿಯೇ.

ಮಧ್ಯೆ ಯಾರಾದರೂ ಬಂದು ಟಿ.ವಿ.ಯ ಮುಂದೆ ನಿಂತುಬಿಟ್ಟರೆ ‘ನೀನು ಪಾರದರ್ಶಕವಾಗಿಲ್ಲ’ ಓ ಎಂಬ ಕೂಗು! ಸಧ್ಯ ‘ಛಾನೆಲ್‌ಗಳ’ ಕೊರತೆಯಿಂದ ಛಾನೆಲ್ ಜಗಳ ನಮ್ಮ ಮನೆಗಳಲ್ಲಿ ನಡೆಯುತ್ತಿದ್ದಂತೆ ಹಾಸ್ಟೆಲ್‌ನಲ್ಲಿ ಸಾಧ್ಯವಿರಲಿಲ್ಲ! ಹಾಸ್ಟೆಲ್ ಕೌಶಲಗಳು ಹಾಲು ಕಾಯಿಸುವುದು, ತಡರಾತ್ರಿ ಮ್ಯಾಗ್ಗಿ ಮಾಡುವುದು, ಬ್ಯಾಂಕಿಗೆ ಹೋಗಿ ದುಡ್ಡು ತೆಗೆಯುವ-ತುಂಬುವ ವ್ಯವಹಾರ ನಡೆಸುವುದು, ನಾವು ಮನೆಯ ನೆನಪಾಗಿ ಅಳುವಾಗ ಸಮಾಧಾನ ಮಾಡುವ ಸೀನಿಯರ್ ಹುಡುಗಿಯರು, ನಾವು
ಸೀನಿಯರ್‌ಗಳಾದಾಗ ನಮ್ಮ ಜೂನಿಯರ್‌ಗಳಿಗೆ ಸಮಾಧಾನ ಮಾಡುವುದು, ಪ್ರತಿವರ್ಷ ಸೀನಿಯರ್‌ಗಳಿಗೆ ಫೇರ್ ವೆಲ್ ಪಾರ್ಟಿ ಮಾಡುವ ಅನುಭವ, ಜೂನಿಯರ್‌ಗಳಿಂದ ಭಾವನಾತ್ಮಕ ಫೇರ್‌ವೆಲ್ ಪಡೆಯುವುದು ಹೀಗೆ ಜೀವನಕ್ಕೆ ಬೇಕಾಗುವ ಕೌಶಲ ಗಳನ್ನು ಕಲಿತದ್ದೇ ನಾನು ಹಾಸ್ಟೆಲ್‌ನಲ್ಲಿ.

ಕಲಿಯಬೇಕಾದ ಕೋರ್ಸು ಮನೆ ಇರುವ ಊರಿನಲ್ಲೇ ಇದ್ದರೂ ಬೇರೆ ಊರಿಗೆ ಹೋಗಿ ಕನಿಷ್ಟ ಒಂದೆರಡು ವರ್ಷಗಳ ಕಾಲ ಹಾಸ್ಟೆಲ್‌ನಲ್ಲಿ ಇದ್ದರೆ ನಮ್ಮ ವ್ಯಕ್ತಿತ್ವ ಹೆಚ್ಚು ಸಹನಶೀಲವಾಗುತ್ತದೆ ಎನಿಸುತ್ತದೆ. ಮೊದಲ ವರ್ಷದಲ್ಲಿ ಹದಿನೈದು ದಿನಗಳಿ ಗೊಮ್ಮೆ ಎರಡೇ ದಿನಕ್ಕೆ ಶಿವಮೊಗ್ಗೆಗೆ ಓಡಿ ಬರುತ್ತಿದ್ದ, ಅಮ್ಮನಿಂದ ಬೈಸಿಕೊಳ್ಳುತ್ತಿದ್ದ ನನಗೆ ಕೊನೆಯ ವರ್ಷಕ್ಕೆ ಬರುವಾಗ ಅಮ್ಮನೇ ಫೋನ್ ಮಾಡಿ ‘ಎಷ್ಟು ತಿಂಗಳಾಯಿತು ಬಂದು!

ಬೇಸರ ಬಂದಿದೆ, ಮನೆಗೆ ಬರಬಾರದೆ?’ ಎಂದು ಹೇಳುವ ಹಾಗೆ ಆಯಿತೆಂದರೆ?! ಈಗಲೂ ಮಕ್ಕಳು-ಪತಿಯೊಂದಿಗೆ ಯಾವಾಗ ಲಾದರೊಮ್ಮೆ ಕಲಹವಾದಾಗ ನಾನು ಹೇಳುವುದಿದೆ, ‘ನಾನು ಹಾಸ್ಟೆಲಿಗೆ ಹೋಗಿ ಬಿಡ್ತೀನಿ ನೋಡ್ತಾ ಇರಿ! ’. ಅಂದರೆ ನನ್ನ ಮಟ್ಟಿಗೆ ಹಾಸ್ಟೆಲ್ ಎಂದರೆ ಅಂದು ಇದ್ದ ‘ಹೋಂ ಸಿಕ್’ ಎಂಬ ಭಾವನೆಯೀಗ ಹಾಸ್ಟೆಲ್ ಎಂದರೆ ‘ಸ್ನೇಹಿತರು, ಆರಾಮ,
ನನ್ನದೇ ಖಾಸಗೀತನ, ಸ್ವಾವಲಂಬಿತನ’ ಎಂಬ ಭಾವನೆಯಾಗಿ ಬದಲಾಗಿದೆ ಎಂದಲ್ಲವೆ !