Saturday, 23rd November 2024

ಬೆರಳ ತುದಿಯಲ್ಲಿ ಕನ್ನಡದ ಕಂಪು

ಬೆಂ.ಶ್ರೀ.ರವೀಂದ್ರ

ಅಲರ್ ಎಂಬ ಕನ್ನಡ-ಇಂಗ್ಲಿಷ್ ನಿಘಂಟು ಇಂದು ಆನ್‌ಲೈನ್‌ನಲ್ಲಿ ದೊರೆಯುತ್ತಿದೆ. ಕಿಟ್ಟೆಲ್ ಅವರು ರಚಿಸಿದ ಕನ್ನಡ-ಇಂಗ್ಲಿಷ್ ನಿಘಂಟಿನ ವ್ಯಾಪ್ತಿಗೆ ಹೋಲಿಸಬಹುದಾದ, ‘ಅಲರ್’ ಎಂಬ ಹೆಸರಿನ ಈ ನಿಘಂಟನ್ನು ರಚಿಸಿದವರು ವಿ.ಕೃಷ್ಣ ಅವರು. ಇದನ್ನು ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡಿದವರು ಜೆಡೊಧ ಎಂಬ ಸಂಸ್ಥೆ ನಡೆಸುತ್ತಿರುವ ಮಲೆಯಾಳಿ ಮೂಲಕ ಕೈಲಾಷ್ ನಾದ್ ಅವರು. ಮೊಬೈಲ್‌ನಲ್ಲೂ ನೋಡಬಹುದಾದ ಈ ನಿಘಂಟು, ಕನ್ನಡದ ಮಟ್ಟಿಗೆ ಒಂದು ಹೊಸ ಸಾಹಸ, ಉಪಕ್ರಮ, ಸೌಲಭ್ಯ.

ಈಗ ಕ್ಷಣಕ್ಷಣಕ್ಕೆ ಕಾಲವು, ದೈನಂದಿನ ಕೆಲಸದೊಂದಿಗೆ ಸೆಣೆಸುತ್ತಿದೆ. ಹೊಸ ವಿಚಾರಗಳು, ಆವಿಷ್ಕಾರಗಳು, ಸಮಸ್ಯೆಗಳಿಗೆ
ಪರಿಹಾರಗಳು ಬೆರಳ ತುದಿಯಲ್ಲಿ ಆಗಬೇಕು. ಕೊಡುವ, ಕೊಳ್ಳುವ, ತಿಳಿಯುವ, ಕಲಿಯುವುದೆಲ್ಲ ತಡವಿಲ್ಲದೆ ಆಗಬೇಕು. ಇಲ್ಲ ದಿದ್ದರೆ ವೇಗದ ಜೀವನದಲ್ಲಿ ನಾವು ಹಿಂದೆ ಉಳಿದು ಬಿಡುತ್ತೇವೆ. ಅಂತರ್ಜಾಲವು ನಿತ್ಯ ಜೀವನವನ್ನು ಊಹಿಸದ ಎತ್ತರಕ್ಕೆ ಕೊಂಡೊಯ್ದಿದೆ. ವಿಕಿಪಿಡಿಯಾ ಮತ್ತು ಮುಕ್ತ ಜ್ಞಾನಕೋಶ ಇಲ್ಲದ ಜಗವೀಗ ಬರಡು. ಈ ಮಾತು ಭಾಷೆಗೂ ಅನ್ವಯ. ಕಾಡುವ ಪದವೊಂದರ ಅರ್ಥಕ್ಕೆ ನಿಘಂಟನ್ನು ನೋಡುತ್ತಾ ಕೂರಲು ಸಾಧ್ಯವಿಲ್ಲ.

ಜಗತ್ತಿನ ಪ್ರಮುಖ ಭಾಷೆಗಳು ತಂತ್ರಾಂಶವನ್ನೂ, ಅಂತರಜಾಲವನ್ನು ಸಮರ್ಥವಾಗಿ ಉಪಯೋಗಿಸಿ, ಬೆಳೆಯುತ್ತಿವೆ. ಹಾಗಾದರೆ ಕನ್ನಡದ ಕಥೆಯೇನು? ಕನ್ನಡವೇನು ಹಿಂದೆ ಬಿದ್ದಿಲ್ಲ. ಬೆರಳ ತುದಿಯಲ್ಲಿ ಕನ್ನಡಾರ್ಥದ ಘಮವೀಗ ಅರಳುತ್ತಿದೆ. ಐದು ವರ್ಷದ
ಹಿಂದೆ ಪ್ರಕಟವಾದ ವಿ. ಕೃಷ್ಣ ಅವರ ಕನ್ನಡ – ಇಂಗ್ಲೀಷ್ ನಿಘಂಟು, ಅಲರ್ (Alar) ಎಂಬ ಹೆಸರಿನಿಂದ ಅಂತರ್ಜಾಲದಲ್ಲಿ ಸಿಕ್ಕುತ್ತದೆ. ಮೂರು ಬೃಹತ್ ಸಂಪುಟಗಳು, 4,750 ಪುಟಗಳು, 1,60,000 ಮುಖ್ಯ ಉಲ್ಲೇಖಗಳು, 6,000 ಉಪ ಉಲ್ಲೇಖಗಳು, 2,50,000 ಇಂಗ್ಲೀಷ್ ಸಮನಾರ್ಥಕಗಳು, ಸಂವಾದಿ ಅರ್ಥವಿವರಣೆಗಳು.

ಸರಾಸರಿ ಐದರಿಂದ ಆರು ಇಂಗ್ಲಿಷ್ ಉಲ್ಲೇಖಗಳು, ಕೆಲವೆಡೆಯಲ್ಲಿ ಮುವ್ವತ್ತರಿಂದ ನಲವತ್ತರವರೆಗೂ, ಒಂದು ಪದ ನುಡಿಗಟ್ಟಿನ ಭಾಗವಾಗಿದ್ದರೆ ಅಲ್ಲಿ ಇಂಗ್ಲೀಷಿನ ಸಂವಾದಿ ನುಡಿಗಟ್ಟು, ಯಾವುದೇ ಪದ ಗಾದೆಯಲ್ಲಿ ಪ್ರಮುಖವಾಗಿ ಬಳಕೆಯಾಗಿದ್ದರೆ ಸಂವಾದಿಯಾದ ಇಂಗ್ಲೀಷಿನ ಗಾದೆಯೂ ಬೆರಳ ತುದಿಯಲ್ಲಿಯೇ, ಒಂದು ಪದದ ಎಲ್ಲ ಅರ್ಥಛಾಯೆಗಳೂ ಇಂಗ್ಲೀಷ್‌ನಲ್ಲಿ ದೊರಕುವಂತೆ ‘ಅಲರ್’ ನಿಘಂಟು ರೂಪಿತವಾಗಿವೆ.

ಉದಾಹರಣೆಗೆ, ಅಂಕ ಮತ್ತು ಗತಿ ಎನ್ನುವ ಪದಗಳು. ಅಂಕ, ಪದಕ್ಕೆ ನೇರವಾಗಿ 42 ಅರ್ಥಗಳು, ಸಂವಾದಿಯಾಗಿ ಇನ್ನೂ 21 ಪದಗಳು, ಅವುಗಳ ಅರ್ಥ, ನುಡಿಗಟ್ಟುಗಳು, ಉಪಯೋಗವಾಗುವ ಗಾದೆಗಳು. ಅಂತೆಯೇ ಗತಿ ಪದಕ್ಕೆ 21 ಅರ್ಥಗಳು, 20 ಸಂವಾದಿ ಪದಗಳು. ಹೀಗೆ ಅರ್ಥ ವಿಸ್ತಾರ. ಸಸ್ಯಗಳ ಹೆಸರು ಬಂದಾಗ ಅವುಗಳ ವೈಜ್ಞಾನಿಕ ಹೆಸರನ್ನೂ ಹೆಸರಿಸಲಾಗಿದೆ. ಹೀಗೆಯೇ ಪ್ರಾಣಿಗಳ ಹೆಸರುಗಳೂ ಸಹ ಉಲ್ಲೇಖಗೊಂಡಿವೆ. ಅನೇಕ ಅಧ್ಯಯನ ಶಿಸ್ತುಗಳಲ್ಲಿ ಬಳಕೆಯಾಗುವ ಅರ್ಥಗಳನ್ನೂ ಈ ನಿಘಂಟು ಒಳಗೊಂಡಿದೆ.

ನಿಘಂಟು ಪದಗಳ ಅರ್ಥಗಳನ್ನು ಗುರುತಿಸುತ್ತ ಅವುಗಳ ಚರಿತ್ರೆಯನ್ನೂ ಸರಿಸುಮಾರು ಕಟ್ಟಕೊಡುತ್ತದೆ. ಪದಗಳ ಅರ್ಥದ ಜತೆಗೆ ಗಾದೆಗಳನ್ನೂ ಒದಗಿಸುವುದರಿಂದ ಕನ್ನಡ ಭಾಷೆಯನ್ನಾಡುವ ಜನವರ್ಗದ ಸಾಮಾಜಿಕ ಚರಿತ್ರೆಯನ್ನೂ ಕಟ್ಟಿಕೊಡುತ್ತದೆ. ವಿಶೇಷವಾಗಿ ಅನುವಾದಕರಿಗೆ, ಕನ್ನಡವನ್ನು ಅಧ್ಯಯನ ಮಾಡುತ್ತಿರುವ ಇತರ ಭಾಷೆಯ ಸಂಶೋಧಕರಿಗೆ, ಕುತೂಹಲಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಹದಿನೆಂಟು ವರ್ಷಗಳ ಪರಿಶ್ರಮ
ನಿಘಂಟುಕಾರ, ಕೃಷ್ಣ ಅವರು, ವಾಣಿಜ್ಯ ಶಾಸ್ತ್ರ ಪದವೀಧರರು. ಅವರ ಹಿರಿಯ ಸಹೋದ್ಯೋಗಿಯ ಸಲಹೆಯಂತೆ, ಇಂಗ್ಲೀಷ್ ಪದಗಳನ್ನು ಪರಿಚಯ ಮಾಡಿಕೊಳ್ಳಲು ನಿಘಂಟಿನ ಓದನ್ನು ಆರಂಭಿಸಿ, ನಂತರದಲ್ಲಿ ಕನ್ನಡದ ಸಮಾನಾರ್ಥಕ ಪದಗಳನ್ನು ಬರೆದುಕೊಳ್ಳಲು ಆರಂಭಿಸಿದರು.

ಅದೇ ಒಂದು ಗೀಳಾಗಿ, ನಿಘಂಟಿನ ರಚನೆಗೆ ಕಾರಣವಾಯಿತು. 18 ವರ್ಷಗಳ ಕಾಲ ಕನ್ನಡದ ಪದಗಳು, ನುಡಿಗಟ್ಟುಗಳು, ಗಾದೆಗಳನ್ನು ಸಂಗ್ರಹಿಸಿ, ಹೆಚ್ಚು ಕಡಿಮೆ ಮೂವತ್ತು ವರ್ಷ ಶ್ರಮವಹಿಸಿ ನಿಘಂಟನ್ನು ಸಿದ್ದಗೊಳಿಸಿದ್ದಾರೆ. ಹಳೆಗನ್ನಡದಿಂದ ಆಧುನಿಕ ಕಾಲದವರೆಗೆ ಉಲ್ಲೇಖಗಳ ವ್ಯಾಪ್ತಿ ಇಲ್ಲಿದೆ.

‘ಅಚ್ಚ ಕನ್ನಡ ಪದಗಳಲ್ಲದೆ ಸಂಸ್ಕೃತ, ಪ್ರಾಕೃತ, ಅರೇಬಿಕ್, ಪರ್ಷಿಯನ್, ಇಂಗ್ಲೀಷ್ ಮೊದಲಾದ ಹಲವು ಭಾಷೆಗಳಿಂದ ಸ್ವೀಕರಿಸಿ ತನ್ನವನ್ನಾಗಿ ಮಾಡಿಕೊಂಡು ಬೆಳೆಯುತ್ತಿರುವ ಶಿಷ್ಟ ಕನ್ನಡ, ಆಡು ಕನ್ನಡ, ಹಳೆ ಕನ್ನಡ, ನಡು ಕನ್ನಡ ಈ ಎಲ್ಲಾ ಪ್ರಭೇದದ ಹಂತಗಳ ಎಲ್ಲಾ ಪದಗಳಿಗೆ ಇಂಗ್ಲೀಷಿನಲ್ಲಿ ಅರ್ಥಗಳನ್ನು ನೀಡುವಲ್ಲಿ ಅವರು ಪಟ್ಟಿರುವ ಶ್ರಮ ಅಪಾರ’ ಎಂದಿ ದ್ದರು ಖ್ಯಾತ ಸಂಶೋಧಕ ಡಾ.ಚಿದಾನಂದ ಮೂರ್ತಿ.

ಇಷ್ಟೆಲ್ಲಾ ಸಾಧನೆಯ ಗರಿಮೆಯನ್ನು ದೊರಕಿಸಿಕೊಂಡ ಈ ನಿಘಂಟು 2015 ರಲ್ಲಿ ಪ್ರಕಟವಾದರೂ (ಪ್ರಕಾಶಕರು : ಕರ್ನಾಟಕ ಸಾಹಿತ್ಯ ಪರಿಷತ್ತು) ಕನ್ನಡದ ಜನರಿಗೆ ಸುಲಭವಾಗಿ ಸಿಕ್ಕಿರಲಿಲ್ಲ. ಹಾಗಾದರೆ, ಈಗಿನ ಅಂತರ್ಜಾಲ ನಿಘಂಟು ಹೇಗೆ ಸಾಧ್ಯ ವಾಯಿತೆಂಬುದು ಕುತೂಹಲಕಾರಿ.

2012 ರಲ್ಲಿ, ಬೆಂಗಳೂರಿಗೆ ಬಂದು, ‘ಜೆಡೊಧ’ ಎಂಬ ಷೇರು ದಲ್ಲಾಳಿ ಸಂಸ್ಥೆಯನ್ನು ಸ್ಥಾಪಿಸಿದ್ದ ಮಲೆಯಾಳಿ ಹುಡುಗ ಕೈಲಾಷ್ ನಾದ್ ಅವರು 2010 ರಿಂದಲೇ, ‘ಒಲಮ್’ ಎಂಬ ಇಂಗ್ಲೀಷ್ – ಮಲೆಯಾಳಂ ಹಾಗೂ ಮಲೆಯಾಳಂ – ಮಲೆಯಾಳಂ ನಿಘಂಟ ನ್ನು ಅಂತರಜಾಲದಲ್ಲಿ ಅನುಕ್ಷಣ (ಆನ್‌ಲೈನ್) ರೂಪದಲ್ಲಿ ತಂದಿದ್ದರು.

ಷೇರು ದಲ್ಲಾಳಿಯಾದರೂ ಸಾಹಿತ್ಯದ ತುಡಿತವಿದ್ದ ಕೈಲಾಷ್ ನಾದ್ ಕನ್ನಡದಲ್ಲೂ ಇಂತಹ ಕಾರ್ಯ ಮಾಡಬೇಕೆಂಬ ಉತ್ಸಾಹ ದಿಂದ ಸೂಕ್ತ ಕನ್ನಡ ನಿಘಂಟಿನ ಹುಡುಕಾಟದಲ್ಲಿದ್ದರು. ಇದ್ದಕ್ಕಿದಂತೆ ಒಂದು ದಿನ, ಅವರ ಸಹೊದ್ಯೋಗಿಯ ಮೂಲಕ ಕೃಷ್ಣ ಅವರ ನಿಘಂಟಿನ ಬಗ್ಗೆ ವಿಷಯ ತಿಳಿಯಿತು. 2018 ರಲ್ಲಿ ಕೃಷ್ಣ ಅವರನ್ನು ಸಂಪರ್ಕಿಸಿ ನಿಘಂಟನ್ನು ಆಮೂಲಾಗ್ರವಾಗಿ ಪರಿಶೀಲಿಸಿದರು.

ನಿಘಂಟಿನಲ್ಲಿ ಅಡಕವಾಗಿರುವ ಪಾಂಡಿತ್ಯಪೂರ್ಣವಾದ,  ಆಳವಾದ ದತ್ತಾಂಶದ ವಿಸ್ತಾರ ಕೈಲಾಷ್ ನಾದ್ ಅವರನ್ನು ಬೆರಗು ಗೊಳಿಸಿತು. ಕೃಷ್ಣ ಅವರ ಒಪ್ಪಿಗೆಯನ್ನು ಪಡೆದು ಮುಕ್ತಜ್ಞಾನಕೋಶ (ಓಪನ್ ಸೋರ್ಸ್) ವಾಗಿ, https://alar.ink ವಿಳಾಸದ ಮೂಲಕ ‘ಅಲರ್’ ಬಿಡುಗಡೆಯಾಗಿದೆ. ಕೈಲಾಷ್ ನಾಧ್ ಅವರ ಆಸಕ್ತಿ, ಬೃಹತ್ ನಿಘಂಟನ್ನು ಅಂತರ್ಜಾಲಕ್ಕೆ ಪರಿವರ್ತಿಸಿದ ಜೆರೊಧ.ಟೆಕ್ ಸಂಸ್ಥೆಯ ಆಸ್ಥೆ ಮತ್ತು ಸಾಹಸದಿಂದ ‘ಅಲರ್’ ಈಗಿನ ರೂಪ ಪಡೆಯಿತು.

ಕಿಟೆಲ್ ರಚಿಸಿದ ಒಂದು ಶತಮಾನದ ತರುವಾಯ ರಚಿತವಾಗಿರುವ ಆ ವ್ಯಾಪ್ತಿಯ ನಿಘಂಟು ಇದು ಎನ್ನುವುದು ಒಂದು ಬಗೆ ಯಲ್ಲಿ ಹೆಮ್ಮೆಯನ್ನೂ ಹಾಗೆಯೇ ಕನ್ನಡ ಭಾಷೆಗೆ ಇಂತಹ ನಿಘಂಟನ್ನು ಪ್ರಕಟಿಸಲು ಇಷ್ಟೊಂದು ಕಾಲ ಬೇಕಾಯಿತಲ್ಲ ಎಂಬ ವಿಷಾದವನ್ನೂ ಮೂಡಿಸುತ್ತದೆ. ಈ ಮಹತ್ಸಾಧನೆಯು ವಿ. ಕೃಷ್ಣ ಅವರ ಆಸಕ್ತಿ, ಶ್ರದ್ಧೆ, ವಿದ್ವತ್ ಮತ್ತು ಅಗಾಧ ಪರಿಶ್ರಮವನ್ನು ನಮ್ಮ ಮುಂದಿಡುತ್ತದೆ. ಕನ್ನಡಿಗರ ಚರವಾಣಿಯಲ್ಲಿ ಅಲರ್ ರಾರಾಜಿಸಲಿ. ಶುದ್ಧಗನ್ನಡ, ಸರಿಗನ್ನಡ ಕನ್ನಡ ನಾಡವರ ನುಡಿ ಯಲ್ಲಿ ಅಲರಿಸಲಿ.

ಕನ್ನಡದ ಮೊದಲ ನಿಘಂಟು
ಹತ್ತನೆಯ ಶತಮಾನದ ‘ರನ್ನಕಂದ’ ಕನ್ನಡದ ಪ್ರಥಮ ನಿಘಂಟು. ಅಂದಿನ ದಿನಮಾನಕ್ಕೆ ಅಗತ್ಯವಾದ ಸಂಸ್ಕೃತ- ಕನ್ನಡ ನಿಘಂಟುಗಳು ಕಾಲಾನುಕ್ರಮದಲ್ಲಿ ಬಂದವು. ಬ್ರಿಟಿಷರು, ಸ್ಥಳೀಯರೊಂದಿಗೆ ಸಂವಹಿಸಲು, ಸುಗಮ ಆಡಳಿತ ನಡೆಸಲು ದೇಶೀಯ ಭಾಷೆಯನ್ನು ಬಳಸಲು ಆಯಾ ಭಾಷೆಯ ನಿಘಂಟುಗಳ ಅಗತ್ಯವನ್ನು ಕಂಡುಕೊಂಡರು.

ಹಾಗಾಗಿ 19-20 ನೆಯ ಶತಮಾನದಲ್ಲಿ ಮಿಷನರಿಗಳು, ಇಲ್ಲಿನ ಭಾಷೆಯನ್ನು ಕಲಿತು ಸಂಶೋಧನೆ, ಸಾಹಿತ್ಯ ನಿರ್ಮಾಣ, ನಿಘಂಟುಗಳ ರಚನೆಯಲ್ಲಿ ತೊಡಗಿಕೊಂಡರು. ಅವರಿಗೆ ಅನುಕೂಲವಾಗುವ ಜತೆ, ಅವರ ಅಧ್ಯಯನದಿಂದ ದೇಸಿ ಭಾಷೆಗಳು ತಮ್ಮಲ್ಲಿ ಅಡಗಿದ್ದ ಅಪಾರ ಭಾಷಾ ಸಂಪತ್ತನ್ನು ಕಂಡುಕೊಳ್ಳಲು ಸಾಧ್ಯವಾಯಿತು. ಕನ್ನಡಕ್ಕೆ ಪ್ರಾತಸ್ಮರಣೀಯರಾದ ರೆವೆರೆಂಡ್ ಕಿಟ್ಟಲ್ ಅವರ ಕನ್ನಡ – ಇಂಗ್ಲೀಷ್ ನಿಘಂಟು ಈ ದಿಸೆಯಲ್ಲಿ ಬಹು ದೊಡ್ಡ ಕಾಣಿಕೆ.

ಕೋಟ್‌

ನಿಘಂಟುಗಳು ಯಾವುದೇ ಭಾಷೆಯ ಸತ್ವವನ್ನು, ಶ್ರೀಮಂತಿಕೆಯನ್ನು ಕನ್ನಡಿ ಹಿಡಿದು ತೋರಿಸುತ್ತವೆ. ಅದನ್ನು ತಯಾರಿಸುವ
ವಿದ್ವಾಂಸರ ಶ್ರಮ, ದುಡಿಮೆ ಮತ್ತು ಸಮರ್ಪಣಾ ಭಾವಕ್ಕೆೆ ನಾಡು ಗೌರವ ಕೊಡಬೇಕು. ನಿಘಂಟು ರಚನೆ ಎನ್ನುವುದು ಕನ್ನಡ ವನ್ನು ಕಟ್ಟುವ ಕೆಲಸದಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತವೆ. ನನ್ನ ಅನುಭವದಲ್ಲಿ ಇಷ್ಟು ವಿಸ್ತಾರವಾದ ಕನ್ನಡ – ಇಂಗ್ಲೀಷ್ ನಿಘಂಟನ್ನು ಯಾರೂ ತಯಾರು ಮಾಡಿಲ್ಲ. ವಿಶ್ವವಿದ್ಯಾಲಯಗಳು,  ಸಂಸ್ಥೆಗಳು ಸಾಮೂಹಿಕವಾಗಿ ಯತ್ನಿಸಬಹುದಾದ ಒಂದು ದೊಡ್ಡ ನಿಘಂಟನ್ನು ಕೃಷ್ಣ ಅವರೊಬ್ಬರೇ ರಚಿಸಿರುವುದು ಅದ್ಭುತವಾದ ಸಾಹಸ.
– ಪ್ರೊ.ಜಿ.ವೆಂಕಟಸುಬ್ಬಯ್ಯ