Saturday, 14th December 2024

ಕರೋನಾ ರೂಪದ ಕಾರುಣ್ಯ

ರಾಘವೇಂದ್ರ ಮಂಗಳೂರು

ಮೊದಲಿನಿಂದಲೂ ಸೋಷಿಯಲ್ ಡಿಸ್ಟನ್ಸ್ ಕಾದುಕೊಂಡಿದ್ದ ಆತನಿಗೆ, ಅದನ್ನು ತೊರೆಯಲು ಸಾಧ್ಯವಾಗಿದ್ದು ಹೇಗೆ?

ಕಣ್ಣುಗಳು ತನ್ನಷ್ಟಕ್ಕೆ ತಾನೇ ಅಪ್ರಯತ್ನವಾಗಿ ಮುಚ್ಚಿಕೊಳ್ಳುತ್ತಿವೆ. ಪರಿಸ್ಥಿತಿ ಕೈ ಮೀರಿ ಹೋಗುವಂತಿದೆ. ನಾನು ಸೋತೆ’ ಎಂದು ಹೇಳುವದಕ್ಕಾದರೂ ಕಣ್ಣು ತೆಗೆಯಲೇಬೇಕು. ಇಲ್ಲದಿದ್ದರೆ ನನ್ನ ಆತ್ಮಕ್ಕೆ ಶಾಂತಿ ಸಿಗೋದಿಲ್ಲ.
***
ಯಾರೋ ಆಂಬುಲೆನ್ಸ್ ಗೆ ಕರೆ ಮಾಡಿ ಕರೆಸಿದಂತಿದೆ. ಮನೆ ಮುಂದೆ ನಿಂತಿದೆ. ಯಾರ ಮಾತುಗಳೂ ಸ್ಪಷ್ಟವಾಗಿ ಕೇಳುತ್ತಿಲ್ಲ. ಸ್ಟ್ರೆಚರ್ ಮೇಲೆ ನನ್ನನ್ನು ಮಲಗಿಸಿಕೊಂಡು ಆಂಬುಲೆನ್ಸ್ ಹತ್ತಿಸಬೇಕಾದ್ರೆ ಅತೀ ಕಷ್ಟದಿಂದ ಕಣ್ಣು ತೆಗೆದು ನೋಡಿದೆ. ಡ್ರೈವರ್ ಸೀಟಿನ ಮೇಲೆ ಮಲ್ಲಿಕಾರ್ಜುನ… ಪರಿಚಯವಿದ್ದ
ಮುಖ ಅಂತ ಸಮಾಧಾನವಾದರೂ ಸರಿಯಾಗಿ ಒಂದು ತಿಂಗಳ ಹಿಂದೆ ನಡೆದ ಘಟನಾವಳಿಗಳು ಕಣ್ಣ ಪರದೆಯ ಮುಂದೆ ಸಾಲಾಗಿ ಬಂದು ದುಃಖ ಮಡುಗಟ್ಟಿತು.

ನಮ್ಮ ಕಾಲೋನಿಯಲ್ಲಿ ನಾನು ಒಂದು ರೀತಿಯ ಪ್ರತ್ಯೇಕ ದ್ವೀಪ. ಉದ್ಯೋಗದಿಂದ ರಿಟೈರ್ ಆದ, ಮೇಲೆ ಹಗಲೂ ರಾತ್ರಿ ಮನೆಯಲ್ಲೇ ಇರತೊಡಗಿದೆ. ವರುಷದಲ್ಲಿ ಹೆಚ್ಚು ಕಡಿಮೆ ಆರು ತಿಂಗಳು ನನ್ನ ಹೆಂಡತಿ ಅಮೇರಿಕದಲ್ಲಿರುವ ಮಕ್ಕಳು ಮೊಮ್ಮಕ್ಕಳೊಂದಿಗೆ ಇರುತ್ತಾಳೆ. ನನಗೆ ಬಾ ಎಂದು ಹಲವಾರು ಬಾರಿ ಮಕ್ಕಳು ಕರೆದಾಗಲೂ ನನಗೆ ತಾಯಿ ನಾಡು ಬಿಟ್ಟು ಹೋಗೋಕೆ ಮನಸಿಲ್ಲ. ನಾನು ನಳಪಾಕ ಪ್ರವೀಣನಾದು ದರಿಂದ ಊಟಕ್ಕೆ ಸಮಸ್ಯೆ ಇರಲಿಲ್ಲ. ಪ್ರತಿ ದಿನ ಆರೋಗ್ಯದ ಕಡೆಗೆ ಗಮನ ಹರಿಸೋದು ಮತ್ತು ಪುಸ್ತಕಗಳನ್ನು ಓದುವದು ನನ್ನ ನೆಚ್ಚಿನ ಹವ್ಯಾಸ.

ನನಗೆ ಬೇಕಾದ್ದು ತರಿಸಿಕೊಳ್ಳುವದಕ್ಕೆ ಹೇಗೂ ಆನ್‌ಲೈನ್ ಅಂತೂ ಇದ್ದೇ ಇವೆ. ಹೀಗಾಗಿ ಕಾಲೋನಿಯಲ್ಲಿ ಯಾರಿದ್ದಾರೆ ಎಂದು ತಿಳಿದುಕೊಳ್ಳುವ ಆಸಕ್ತಿ
ಇರಲಿಲ್ಲ.. ಮತ್ತು ನನಗದು ಬೇಕೂ ಆಗಿರಲಿಲ್ಲ. ನನ್ನ ಮನೆಯ ಮೇಲಿನ ಪೋರ್ಷನ್ ನ್ನು ಮಲ್ಲಿಕಾರ್ಜುನನಿಗೆ ಕೊಟ್ಟಿದ್ದೆ. ಆತ ಆಂಬುಲೆನ್ಸ್ ಡ್ರೈವರ್ ಆಗಿ ಕೆಲಸ
ಮಾಡುತ್ತಿದ್ದ. ಪ್ರತಿ ತಿಂಗಳ ಬಾಡಿಗೆ ಆತ ಕೊಡುವ ಸಮಯದಲ್ಲಿ ಅಥವಾ ನಾನು ಗಿಡಗಳಿಗೆ ನೀರು ಹಾಕುವ ಸಂದರ್ಭದಲ್ಲಿ ಒಂದು ಅಥವಾ ಎರಡು ಮಾತುಗಳು ಬಿಟ್ಟರೆ ಮತ್ತೆ ನನಗೂ ಆತನಿಗೂ ಸಂಬಂಧವಿಲ್ಲ. ಅಲ್ಲದೇ ಯಾರೂ ನನ್ನೊಂದಿಗೆ ಹೆಚ್ಚು ಮಾತನಾಡುವ ಸಲುಗೆ ಕೊಡುತ್ತಿರಲಿಲ್ಲ.

ಹೆಂಡತಿ ಮತ್ತು ಸ್ಕೂಲಿಗೆ ಹೋಗುವ ಮಗನೊಂದಿಗೆ ಇರುತ್ತಿದ್ದನು ಮಲ್ಲಿಕಾರ್ಜುನ ಮನೆಯಲ್ಲಿ…ಆತನ ಮಗನ ಹೆಸರು… ನನಗೆ ಗೊತ್ತಿಲ್ಲ… ತಿಳಿದುಕೊಳ್ಳ ಬೇಕೆಂಬ ಕುತೂಹಲವೂ ಇಲ್ಲ… ಕರೋನಾ ಈಗಷ್ಟೇ ಕಬಂಧ ಬಾಹುಗಳನ್ನು ಚಾಚುತಿತ್ತು… ಸರ್ಕಾರ ಕೂಡ ಕಠಿಣ ಲಾಕ್‌ಡೌನ್ ಜಾರಿ ಮಾಡಿತ್ತು. ಊರಲ್ಲಿ
ಕೂಡ ಅಲ್ಲಲ್ಲಿ ಕೇಸುಗಳು ಜಾಸ್ತಿ ಆಗತೊಡಗಿದವು. ಹೆಚ್ಚಿನ ಜನ ಮನೆ ಬಿಟ್ಟು ಹೊರ ಬರುತ್ತಿರಲಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಮಹಾ ಮಾರಿಗೆ ಬಲಿಯಾದ ಸುದ್ದಿ ಬರುತಿತ್ತು. ಹಾಗೆ ನೋಡಿದರೆ ಮಲ್ಲಿಕಾರ್ಜುನ ಒಬ್ಬನೇ ಇಡೀ ಕಾಲೋನಿಯಲ್ಲಿ ಸದಾ ಬಿಜಿ ಇದ್ದದ್ದು.

ಒಮ್ಮೆ ಆತನನ್ನು ಕರೆದು ನೇರವಾಗಿ ‘ನಮ್ಮ ಮನೆ ಕೂಡಲೇ ಖಾಲಿ ಮಾಡು’ ಎಂದೆ. ನನ್ನ ಮಾತು ಕೇಳಿ ಆತ ಶಾಕ್ ಆಗಿದ್ದು ಆತನ ಮುಖಭಾವ ಹೇಳುತ್ತಿತ್ತು.
‘ನೋಡು ನೀನು ನನಗೇನೂ ಇಷ್ಟವಿಲ್ಲದ ವ್ಯಕ್ತಿ ಅಲ್ಲ….. ನೀನು ಯಾವ ವಿಷಯಕ್ಕೂ ನನಗೆ ತೊಂದರೆ ಕೊಟ್ಟಿಲ್ಲ… ಹಾಗೆ ನೋಡಿದರೆ ನೀನು ನಿರುಪದ್ರ ಜೀವಿ!…. ಆದರೆ ಪ್ರಾಕ್ಟಿಕಲ್ ಆಗಿ ಆಲೋಚನೆ ಮಾಡು.. ನನಗೋ ವಯಸ್ಸಾಗಿದೆ. ನಿನ್ನ ವೃತ್ತಿಯಲ್ಲಿ ಸದಾ ರಿಸ್ಕ್ ಇದೆ. ಅಕಸ್ಮಾತ್ ಆಗಿ ನಿನ್ನಿಂದ ನನಗೆ ಕರೋನ ಬಂದರೆ ಏನು ಮಾಡುವುದು? ನಾನೋ ಹತ್ತಿರ ಯಾರೂ ಇರದ ಏಕಾಕಿ ಜೀವಿ’ ‘ಸಾರ್.. ಈ ಲಾಕ್‌ಡೌನ್ ಸಮಯದಲ್ಲಿ ಇದ್ದಕ್ಕಿದ್ದಂತೆ ಮನೆ
ಖಾಲಿ ಮಾಡಿದರೆ ನಾನು ಕುಟುಂಬದೊಂದಿಗೆ ರೋಡಿಗೆ ಬಂದು ಜೀವನ ಮಾಡಬೇಕಾಗುತ್ತೆ.

ಸ್ವಲ್ಪ ಯೋಚನೆ ಮಾಡಿ ಸಾರ್’ ಗೋಗರೆದ ಮಲ್ಲಿಕಾರ್ಜುನ ಬಿಕ್ಕುತ್ತಾ. ‘ನಾನು ಒಂದಲ್ಲ ಎರಡು ಬಾರಿ ಆಲೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿರುವೆ… ಬೇಗ ಖಾಲಿ ಮಾಡು ಅಷ್ಟೇ’ ಎಂದೆ ಸಿಡುಕುತ್ತಾ. ಆಚೀಚೆಗಿನ ಒಬ್ಬಿಬ್ಬರು ಮಲ್ಲಿಕಾರ್ಜುನನ ಪರವಾಗಿ ಮಾತನಾಡುವದಕ್ಕೆ ಬಂದರು. ಆದರೆ ಗಟ್ಟಿಯಾಗಿ ಹೇಳೋದಕ್ಕೆ
ಅವರಿಗೆ ಧೈರ್ಯ ಸಾಲಲಿಲ್ಲ. ಕಾರಣ ನಾನು ಕರೋನಾ ಬರುವದಕ್ಕೆ ಮುಂಚೆಯಿಂದ ಜೀವನದಲ್ಲಿ ಅಳವಡಿಸಿದ್ದ ಸೋಶಿಯಲ್ ಡಿಸ್ಟೆನ್ಸ್!

ಕೊನೆಗೂ ನಾಲ್ಕೈದು ದಿನಗಳಲ್ಲಿ ಮಲ್ಲಿಕಾರ್ಜುನ ಮನೆ ಖಾಲಿ ಮಾಡಿದ. ನಮ್ಮ ಕಾಲೋನಿಯ ಮೂಲೆಯಲ್ಲಿ ಇರುವ ಮನೆಗೆ ಕುಟುಂಬದೊಂದಿಗೆ ಶಿಫ್ಟ್ ಆದ… ಹೊಸ ಮನೆಗೆ ಹೋದ ಎರಡು ವಾರಗಳಲ್ಲಿ ಅವನ ಇಡೀ ಕುಟುಂಬಕ್ಕೆ ಕರೋನ ಪಾಸಿಟಿವ್ ಬಂತು ಎನ್ನುವ ಸುದ್ದಿ ಬಂತು. ಈಗ ನನ್ನ ಮನಸಿನ ಮೂಲೆಯಲ್ಲಿ ಚೂರು ಪಾರು ಉಳಿದಿದ್ದ ಗಿಲ್ಟಿ ಫೀಲಿಂಗ್ ಕೂಡ ಹೋಗಿ… ನಾನು ಮಾಡಿದ್ದೇ ಸರಿ ಎಂದು ಸಮಾಧಾನಗೊಂಡೆ.
***

ದಿನ ದಿನಕ್ಕೂ ಕರೋನ ಹಾವಳಿ ಹೆಚ್ಚಾಯಿತು. ನಾನು ಮತ್ತಷ್ಟು ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡೆ. ಮನೆಗೆ ಬೇಕಾದ ಕಿರಾಣಿ, ತರಕಾರಿ, ಸ್ಯಾನಿಟಿಜರ್, ಮಾಸ್ಕ್ ಎಲ್ಲವನ್ನೂ ಖರೀದಿಸಿಟ್ಟುಕೊಂಡೆ. ನಮ್ಮ ಮನೆಗೆ ಯಾರೂ ಬರುತ್ತಿದ್ದಿಲ್ಲವಾದ್ದರಿಂದ ಸಮಸ್ಯೆ ಇರಲಿಲ್ಲ. ಯಾರಾದರೂ ಅಕಸ್ಮಾತ್ ಆಗಿ ಬಂದರೆ ನನ್ನ ಕೋಪ ಮಾತ್ರ ನೆತ್ತಿಗೇರುತ್ತಿತ್ತು.

ಇದು ಇತ್ತೀಚಿಗೆ ನನ್ನಲ್ಲಿ ಆದ ಬದಲಾವಣೆ. ಒಂದು ವಾರದ ಹಿಂದೆ ಶುರುವಾದ ನೆಗಡಿ -ಕೆಮ್ಮು – ಜ್ವರ ಕಡಿಮೆ ಆಗಲಿಲ್ಲ. ಕರೋನಾ ಟೆಸ್ಟ್ ಪಾಸಿಟಿವ್ ಬಂತು.
ಮನೆಯಲ್ಲಿ ಎಲ್ಲ ಸೌಲಭ್ಯವಿದ್ದುದರಿಂದ ಹೋಮ್ ಕ್ವಾರಂಟೈನ್ ನಲ್ಲಿ ಇರಬಹುದೆಂದರು. ಆಗಿನಿಂದ ಬದಲಾವಣೆ ಶುರುವಾಯಿತು, ಕರೋನಾದಿಂದ ಅಲ್ಲ ನಮ್ಮ ಕಾಲೋನಿಯಿಂದ… ಒಬ್ಬೊಬ್ಬರೇ ಬಂದು ಬಾಗಿಲು ಬಡಿವರು.. ನನಗೆ ಧೈರ್ಯ ಹೇಳುವರು. ಅವರ ಫೋನ್ ನಂಬರ್‌ಗಳನ್ನು ಕೊಟ್ಟುಹೋದರು. ಸಮಯಕ್ಕೆ ಸರಿಯಾಗಿ ಟಿಫಿನ್ – ಊಟದ ಸರಬರಾಜು ಮಾಡಿದರು. ಎಲ್ಲರೂ ನಾವು ನಿಮ್ಮ ಜೊತೆ ಇದ್ದೇವೆ, ಯಾವುದಕ್ಕೂ ಚಿಂತೆ ಮಾಡಬೇಡಿರಿ ಎಂದು ಸಮಾಧಾ ನಿಸಿದರು. ಮನುಷ್ಯ ಮನುಷ್ಯರ ಮಧ್ಯೆ ಇರುವ ಮಾನವೀಯತೆ, ಮಧುರ ಸಂಬಂಧ, ಪ್ರೀತಿ , ಸಂತೋಷಗಳ ಬೆಲೆ ಈಗ ನನಗೆ ಗೊತ್ತಾಯಿತು. ನನ್ನ ಕಷ್ಟ ಕಾಲದಲ್ಲಿ ಸ್ಪಂದಿಸಿದ ಇವರು ಕಾಲೋನಿಯ ನಿವಾಸಿಗಳಲ್ಲ ಬದಲಾಗಿ ನನ್ನ ಆತ್ಮ ಬಂಧುಗಳು ಎಂದು ತಡವಾಗಿ ಜ್ಞಾನೋದಯವಾಯಿತು. ಈಗ ಮನಸಿಗೆ ಗೊತ್ತಾಯಿತು. ಇಷ್ಟು ದಿನ ಎಲ್ಲರನ್ನು ದೂರ ಇಟ್ಟದ್ದಕ್ಕೆ ಪಶ್ಚಾತ್ತಾಪವಾಯಿತು. ಮೊದಲಿನಂತೆ ನಾನು ಒಂಟಿ ಜೀವ ಅಲ್ಲ.

ನನ್ನ ಹಿಂದೆ ಅನೇಕ ಹಿತೈಷಿಗಳು ಇದ್ದಾರೆ. ಎಲ್ಲಕ್ಕಿಂತ ಮನುಷ್ಯ ಸಂಭಂದದ ಅನುಬಂಧ ಗೊತ್ತಾಗಿದೆ. ಕನಿಷ್ಠ ಅವರ ಸಲುವಾಗಿಯಾದರೂ ಕಣ್ಣುಗಳು
ತೆರೆಯಬೇಕಾಗಿದೆ. ಅವರಿಗೆ ಕೃತಜ್ಞತೆ ಸಲ್ಲಿಸುವದಕ್ಕಾದರು ನಾನು ಬದುಕಬೇಕಾಗಿದೆ.
***

ಐಸಿಯುದಿಂದ ವಾರ್ಡಿಗೆ, ಅಲ್ಲಿಂದ ಮನೆಗೆ ಬಂದೆ. ಕಾಲೋನಿಯವರೆಲ್ಲ ಮಾತನಾಡಿಸಲು ಬಂದರು. ‘ಕರೋನ ವಿರುದ್ದ ಹೋರಾಡಿ ಜಯಶಾಲಿಯಾದ ವೃದ್ಧ’
ಎಂದು ದಿನಪತ್ರಿಕೆಯಲ್ಲಿ ಬಂದಂತಹ ಲೇಖನವನ್ನು ನನಗೆ ಸಂತೋಷದಿಂದ ತೋರಿಸುವುದಕ್ಕಾಗಿಯೇ ಬಹಳ ಜನ ಬಂದರು. ಕರೋನಾ ವಿರುದ್ಧ ನಾನು ಜಯಗಳಿಸಲಿಲ್ಲ. ಇಲ್ಲಿಯ ಜನರು ನನ್ನ ಮೇಲೆ ತೋರಿದ ಪ್ರೀತಿ ವಿಶ್ವಾಸದಿಂದ ನಾನು ಕರೋನಾದಿಂದ ಮುಕ್ತನಾದೆ. ನೀವು ನನ್ನ ಹಿತೈಷಿಗಳಷ್ಟೇ ಅಲ್ಲ, ನಿಜವಾದ ಬಂಧುಗಳು ಎಂದು ಮುಕ್ತ ಮನಸಿನಿಂದ ಹೊಗಳಿದೆ.

‘ನಿಮ್ಮ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವೆ?’ಎಂದೆ ಒಂದಿಬ್ಬರನ್ನು ಉದ್ದೇಶಿಸಿ. ‘ಅಷ್ಟು ದೊಡ್ಡ ಮಾತು ಯಾಕೆ ಸಾರ್? ಈಗ ನೀವು ನಮ್ಮ
ಕುಟುಂಬದ ಸದಸ್ಯರಲ್ಲೊಬ್ಬರು. ನೀವು ವಯಸಿನಲ್ಲಿ ಹಿರಿಯರು. ನಮ್ಮ ಜೊತೆ ಪ್ರತಿ ದಿನ ವಾಕಿಂಗ್ ಗೆ ಬನ್ನಿ. ಮಕ್ಕಳೊಂದಿಗೆ ಮಗುವಾಗಿ. ನಮ್ಮೊಂದಿಗೆ ಬೆರೆತು ಬದುಕಿ ಸಾಕು.’ ಕಾಲೋನಿಯ ಎಲ್ಲರೂ ಪುಟ್ಟ ಮಕ್ಕಳಂತೆ ಸಂಭ್ರಮಿಸಿದರು.

‘ಹೌದು… ಮಲ್ಲಿಕಾರ್ಜುನ ಕಾಣುತ್ತಿಲ್ಲ?’ ‘ಅವನು ಕಂಡರೆ ನನ್ನ ಹತ್ತಿರ ಬರಲು ಹೇಳಿ. ಮತ್ತೆ ನಮ್ಮ ಮಹಡಿಯ ಮೇಲಿನ ಮನೆಗೆ ಮೊದಲಿನಂತೆ ಬಂದು
ವಾಸಿಸಲು ಹೇಳಿ. ಈ ತಂದೆಯಂತಹ ನನ್ನನ್ನು ಕ್ಷಮಿಸಲು ತಿಳಿಸಿ….ಪ್ಲೀಸ್ ಎಂದು ಗೋಗರೆದೆ. ‘ಚೆನ್ನಾಗಿ ಹೇಳಿದಿರಿ ಸಾರ್. ಮಲ್ಲಿಕಾರ್ಜುನನಿಗೆ ನಿಮ್ಮ
ಮೇಲೆ ಎಳ್ಳಷ್ಟು ಕೋಪವಿಲ್ಲ. ಹಾಗೇ ನೋಡಿದರೆ ಸಾವು ಬದುಕಿನ ಮಧ್ಯೆ ಹೋರಾಡುವಾಗ ನಿಮಗೆ ಪ್ಲಾಸ್ಮಾ ಕೊಟ್ಟು ಜೀವ ಉಳಿಸಿದ್ದೇ ಅವನು. ನೀವು ಆಸ್ಪತ್ರೆಯಲ್ಲಿ ಇದ್ದಷ್ಟು ದಿನ ನಿಮ್ಮ ಸಮಾಚಾರ ಗೊತ್ತಾಗುತ್ತಿದ್ದುದೇ ಮಲ್ಲಿಕಾರ್ಜುನ ನಿಂದ. ಸದ್ಯ ಡ್ಯೂಟಿ ಮೇಲಿದ್ದಾನೆ. ಇಲ್ಲದಿದ್ದರೆ ನಿಮ್ಮನ್ನು ಬಿಟ್ಟು ಇರುತ್ತಿದ್ದನೆ’ ಎಂದರು ಕಾಲೋನಿಯ ನಿವೃತ್ತ ಶಿಕ್ಷಕರೊಬ್ಬರು.

ಈ ಸಾರಿ ಕೂಡ ನನ್ನ ಕಣ್ಣುಗಳು ಅಪ್ರಯತ್ನವಾಗಿ ಮುಚ್ಚತೊಡಗಿದವು. ಆದರೆ, ಅನಾರೋಗ್ಯದಿಂದ ಅಲ್ಲ, ಆನಂದ ದಿಂದ, ಆನಂದ ಭಾಷ್ಪಗಳಿಂದ ಕಣ್ಣು ತುಂಬಿ ಬಂದದ್ದರಿಂದ.