Sunday, 15th December 2024

ಕೆನ್ನಾಯಿ ಸಂರಕ್ಷಣೆ ಹೊಸ ಮೈಲಿಗಲ್ಲು

ಸಂಡೆ ಸಮಯ

ಸೌರಭರಾವ್‌

ಜಾಗತಿಕ ಭೂಪ್ರದೇಶದ ಲೆಕ್ಕದಲ್ಲಿ ಕಡಿಮೆ ವ್ಯಾಪ್ತಿಯಲ್ಲೇ ಅನೇಕ ಮಾಂಸಾಹಾರಿ ಪ್ರಾಣಿಗಳನ್ನು ಭಾರತ ಪೋಷಿಸುತ್ತಿದೆ.
ಆದರೆ, ಈ ಮಾಂಸಾಹಾರಿ ಪ್ರಾಣಿಗಳಲ್ಲಿ ಅವೆಷ್ಟೋ ಅವಸಾನದ ಅಂಚಿನಲ್ಲಿದ್ದು, ಅವುಗಳ ಸಂಖ್ಯೆಯ ಬಗ್ಗೆ ನಿಖರವಾದ ಮಾಹಿತಿಯೂ ಇಲ್ಲ, ಮತ್ತು ಅವುಗಳ ಮೇಲ್ವಿಚಾರಣೆಗೆ ಕ್ರಮಗಳೂ ಇಲ್ಲ.

ಅಳಿವಿನಂಚಿನಲ್ಲಿರುವ ಪ್ರಪಂಚದ ಮಾಂಸಾಹಾರಿ ಪ್ರಾಣಿಗಳಲ್ಲಿ ಕೆನ್ನಾಯಿ – ಏಷಿಯಾಟಿಕ್ ವೈಲ್ಡ್ ಡಾಗ್ ಅಥವಾ ಧೋಲ್ ಕೂಡಾ ಒಂದು. ಹುಲಿಗಳಂತೆ ಮೈಮೇಲೆ ಪಟ್ಟೆಗಳಾಗಲೀ ಅಥವಾ ಚಿರತೆಗಳಂತೆ ಚುಕ್ಕೆಗಳಾಗಲೀ ಇಲ್ಲದ್ದರಿಂದ ಕೆನ್ನಾಯಿಗಳ ಸಂಖ್ಯೆಯನ್ನು ಮೇಲ್ವಿಚಾರಿಸುವುದೊಂದು ದೊಡ್ಡ ಸವಾಲು. ಅಂದಾಜಿನ ಪ್ರಕಾರ ಇಡೀ ಪ್ರಪಂಚದಲ್ಲಿ ಸುಮಾರು 1000-2000 ವಯಸ್ಕ ಕೆನ್ನಾಯಿಗಳಿರಬಹುದೆನ್ನಲಾಗಿದೆ, ಅದರಲ್ಲಿ ಬಹುಪಾಲು ಕಾಣಸಿಗುವುದು ಭಾರತದಲ್ಲೇ.

ಇತ್ತೀಚಿಗೆ ನಡೆದ ಅಧ್ಯಯನವೊಂದರಲ್ಲಿ ವೈಲ್ಡ್ ಲೈಫ್ ಕಾನ್ಸರ್ವೇಷನ್ ಸೊಸೈಟಿ-ಇಂಡಿಯಾ, ನ್ಯಾಷನಲ್ ಸೆಂರ್ಟ ಫಾರ್‌ ಬಯಲಾಜಿಕಲ್ ಸೈನ್ಸಸ್ , ಯೂನಿವರ್ಸಿಟಿ ಆಫ್ ಫ್ರೋರಿಡಾ, ಕೇರಳ ವೆಟರಿನರಿ ಅಂಡ್ ಅನಿಮಲ್ ಸೈನ್ಸಸ್ ಯೂನಿವರ್ಸಿಟಿ, ಮತ್ತು ಸ್ಟ್ಯಾನ್ಫರ್ಡ್ ಯೂನಿವರ್ಸಿಟಿಯ ವಿಜ್ಞಾನಿಗಳು, ಕೇರಳದ ಪಶ್ಚಿಮ ಘಟ್ಟಗಳಲ್ಲಿರುವ ವಯನಾಡ್ ವನ್ಯಜೀವಿ ಅಭಯಾರಣ್ಯದಲ್ಲಿ ಕೆನ್ನಾಯಿಗಳ ಸಂಖ್ಯೆ ಮತ್ತು ಸಾಂದ್ರತೆಯನ್ನು ಮೊದಲ ಬಾರಿ ಮೌಲ್ಯಮಾಪನ ಮಾಡಿದ್ದಾರೆ.

ಅಧ್ಯಯನಕ್ಕಾಗಿ ವಿಜ್ಞಾನಿಗಳು ವಯನಾಡ್ ಅಭಯಾರಣ್ಯದ 350 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಕ್ಷೇತ್ರ ಸಮೀಕ್ಷೆ ಗಳನ್ನು ಕೆನ್ನಾಯಿಗಳ ಮಲವನ್ನು ಸಂಗ್ರಹಿಸಿದರು. ಮಲದ ಮಾದರಿಗಳಿಂದ, ‘ಸಿಂಗಲ್ ನ್ಯೂಕ್ಲಿಯೋಟೈಡ್ ಪಾಲಿಮಾರ್ಫಿ ಸಮ್ಸ್’ (ಎಸ್‌ಎನ್‌ಪಿ) ಒಳಗೊಂಡ ಅಣುಸಂಬಂಧಿ (ಮಾಲಿಕ್ಯುಲರ್) ವಿಧಾನ ಬಳಸಿ ಪ್ರತಿಯೊಂದು ಕೆನ್ನಾಯಿಯನ್ನು ಪ್ರತ್ಯೇಕವಾಗಿ ಗುರುತಿಸಲು ಡಿಎನ್‌ಎ ಹೊರತೆಗೆದರು.

ಡಿಎನ್‌ಎ ರೂಪದಲ್ಲಿ ಪ್ರತ್ಯೇಕ ಪ್ರಾಣಿಯ ಬಗ್ಗೆ ಮಾಹಿತಿಯನ್ನು ಮಲ ಹೊಂದಿರುತ್ತದೆ, ಮತ್ತು ಡಿಎನ್ ಎಯಿಂದ ಪ್ರತ್ಯೇಕ ಪ್ರಾಣಿಯನ್ನು ಗುರುತಿಸಲು ಎಸ್‌ಎನ್ ಪಿಗಳು ಸಹಾಯ ಮಾಡುತ್ತವೆ. ಸ್ಪೇಶಿಯಲ್ ಕ್ಯಾಪ್ಚರ್ -ರೀಕ್ಯಾಪ್ಚರ್ ಎಂಬ ಸಂಖ್ಯಾಶಾಸ್ತ್ರದ ಸಂಕೀರ್ಣ ಮಾದರಿಗಳ ಜೊತೆ ಈ ಮಾಹಿತಿಯನ್ನು ಸೇರಿಸಿ ಸಂಶೋಧಕರು ಕೆನ್ನಾಯಿಗಳ ಸಂಖ್ಯೆಯನ್ನು ಮತ್ತು ಅಭಯಾರಣ್ಯದ ವ್ಯಾಪ್ತಿಯಲ್ಲಿ ಅವುಗಳ ಸಾಂದ್ರತೆಯನ್ನು ಅಂದಾಜು ಮಾಡಿದ್ದಾರೆ.

ಪ್ರತಿ 100 ಚದರ ಕಿಲೋಮೀಟರಿಗೂ 12 ರಿಂದ 14 ಪ್ರತ್ಯೇಕ ಕೆನ್ನಾಯಿಗಳಿದ್ದು, ಒಟ್ಟು ಅಭಯಾರಣ್ಯದ ವ್ಯಾಪ್ತಿಯಲ್ಲಿ ಸುಮಾರು 50 ಪ್ರತ್ಯೇಕ ಕೆನ್ನಾಯಿಗಳಿವೆ ಎಂದು ಸಂಶೋಧನೆಯ ಫಲಿತಾಂಶದಿಂದ ಅವುಗಳ ಸಾಂದ್ರತೆ ಹೆಚ್ಚಿದೆಯೆಂದು ತಿಳಿದು ಬಂದಿದೆ. ಅಭಯಾರಣ್ಯದ ಕಡಿಮೆ ಎತ್ತರದ ಪ್ರದೇಶಗಳಲ್ಲಿ ಮತ್ತು ಇದ್ದುದರಲ್ಲಿ ಶುಷ್ಕ, ಒರಟಾದ ಪ್ರದೇಶಗಳಲ್ಲಿ ಕೆನ್ನಾಯಿಗಳ ಆಹಾರವಾದ ಬಲಿಪ್ರಾಣಿಗಳ ಸಾಂದ್ರತೆ ಹೆಚ್ಚಾಗಿರುವುದರಿಂದ, ಕೆನ್ನಾಯಿಗಳ ಸಾಂದ್ರತೆಯೂ ಈ ಪ್ರದೇಶಗಳಲ್ಲಿ ಹೆಚ್ಚಾಗಿರು ವುದು ತಿಳಿದುಬಂದಿದೆ.

ಗಮನಾರ್ಹ ಅಂಶವೆಂದರೆ, ವಯನಾಡಿನಲ್ಲಿ ಹುಲಿಗಳ ಸಂಖ್ಯೆಯ ಸಾಂದ್ರತೆಯೂ ಹೆಚ್ಚೇ ಇದೆ (ಇತ್ತೀಚೆಗೆ ದೇಶದಾದ್ಯಂತ ನಡೆದಿರುವ ಸಮೀಕ್ಷೆಗಳ ಪ್ರಕಾರ ಪ್ರತಿ 100 ಚದರ ಕಿಲೋಮೀಟರಿಗೂ 11-12 ಪ್ರತ್ಯೇಕ ಹುಲಿಗಳು). ಸಾಕಷ್ಟು ಬಲಿ ಪ್ರಾಣಿ ಗಳಿದ್ದರೆ, ಆವಾಸಸ್ಥಾನ ಒಳ್ಳೆಯ ಸ್ಥಿತಿಯಲ್ಲಿದ್ದರೆ ಮತ್ತು ಕಾರ್ಯನಿರತ ಸಂರಕ್ಷಣೆ ಜಾರಿಯಲ್ಲಿದ್ದರೆ, ಅಳಿವಿ ನಂಚಿನಲ್ಲಿ ರುವ ಈ ಎರಡೂ ದೊಡ್ಡ ಬೇಟೆಪ್ರಾಣಿಗಳ ಸಂಖ್ಯಾಸಾಂದ್ರತೆ ಹೆಚ್ಚಾಗಿ ಇರಬಹುದು ಎಂದು ಇದರಿಂದ ತಿಳಿದುಬಂದಿದೆ.

ಕೆನ್ನಾಯಿಗಳ ವ್ಯಾಪ್ತಿಕ್ಷೇತ್ರದಲ್ಲಿ ಅವುಗಳ ಸಂಖ್ಯೆ ಐತಿಹಾಸಿಕವಾಗಿ ಸ್ಥಿರವಾಗಿ ಇಳಿಮುಖವಾಗುತ್ತಾ ಬಂದಿದ್ದು, ಅವುಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಲು ತೆಗೆದುಕೊಳ್ಳಬೇಕಿರುವ ಕ್ರಮಗಳಿಗೆ ಅವುಗಳ ಸಂಖ್ಯಾಸಂದ್ರತೆಯನ್ನು ಪ್ರದೇಶಾ ನುಸಾರವಾಗಿ ಮೊದಲು ತಿಳಿಯಬೇಕಾದ ಅಗತ್ಯವಿದೆ.

ಒಟ್ಟಾರೆಯಾಗಿ, ವಯನಾಡು ವನ್ಯಜೀವಿ ಅಭಯಾರಣ್ಯ (ಜೊತೆಗೆ ಅಕ್ಕಪಕ್ಕದ ಸಂರಕ್ಷಿತ ಅರಣ್ಯಗಳು) ಪಶ್ಚಿಮ ಘಟ್ಟಗಳಲ್ಲಿ ಕೆನ್ನಾಯಿಗಳ ಸಂಖ್ಯೆಗೆ ಒಂದು ಸ್ಥಳೀಯ ಭದ್ರ ನೆಲೆಯಾಗಿದೆ ಎಂದು ಈ ಹೊಸ ಅಧ್ಯಯನ ತಿಳಿಸಿಕೊಟ್ಟಿದೆ. ಈ ಅಧ್ಯಯನದ ಭಾಗವಾಗಿ ಅಭಿವೃದ್ಧಿಪಡಿಸಿದ ವಿಧಾನಗಳನ್ನು ವಿಸ್ತಾರವಾಗಿ ಬಳಸಬಹುದಾದ್ದರಿಂದ ಮತ್ತು ಮಹತ್ವದ ಪ್ರದೇಶಗಳಲ್ಲಿ (ಪಶ್ಚಿಮ ಘಟ್ಟಗಳು, ಮಧ್ಯ ಭಾರತ ಮತ್ತು ಈಶಾನ್ಯ ಭಾರತ) ಇದನ್ನು ಅವುಗಳ ಅಳತೆಗೆ ತಕ್ಕಂತೆ ಹಿಗ್ಗಿಸಿ ಅಳವಡಿಸಬಹು ದಾದ್ದರಿಂದ, ಕೆನ್ನಾಯಿಗಳ ಸಂರಕ್ಷಣಾ ಕೆಲಸಗಳಿಗೆ ಮತ್ತು ಮೇಲ್ವಿಚಾರಣೆಗೆ ಸಹಾಯವಾಗುತ್ತದೆ.

ಈ ಅಧ್ಯಯನ ‘ಬಯಲಾಜಿಕಲ್ ಕಾನ್ಸರ್ವೇಷನ್’ ಎಂಬ ವಿಜ್ಞಾನ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಅಧ್ಯಯನ ನಡೆಸಿದ ವಿಜ್ಞಾನಿಗಳ ಹೆಸರುಗಳು: ಅರ್ಜುನ್ ಶ್ರೀವತ್ಸ, ರಯನ್ ಜಿ. ರಾಡ್ರಿಗೆಸ್, ಕೊಕ್ ಬೆನ್ ಟೋಹ್, ಅರುಣ್ ಝಖಾರಿಯ, ರಯನ್ ಡಬ್ಲ್ಯೂ. ಟೇಲರ್, ಮದನ್ ಕೆ. ಓಲಿ, ಮತ್ತು ಉಮಾ ರಾಮಕೃಷ್ಣನ್.