Wednesday, 9th October 2024

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ !

ಹೊರೆಯಾಲ ದೊರೆಸ್ವಾಮಿ

ಮೈಸೂರು ಸಂಸ್ಥಾನದಲ್ಲಿ ಕ್ವಿಟ್ ಇಂಡಿಯಾ ಚಳುವಳಿ

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿರುವ ಅಪೂರ್ವ ಸಂದರ್ಭದಲ್ಲಿ ನಾವಿಂದು ಇದ್ದೇವೆ. ಬ್ರಿಟಿಷರು ಭಾರತದ ಸಂಪತ್ತನ್ನು ದೋಚುವ ಉದ್ದೇಶದಿಂದ, ದಬ್ಬಾಳಿಕೆಯ ಆಡಳಿತ ನಡೆಸಿ, ಹತ್ತಾರು ದಶಕಗಳ ಕಾಲ ಇಲ್ಲಿನ ಸಂಪನ್ಮೂಲಗಳನ್ನು ತಮ್ಮ ದೇಶಕ್ಕೆ ಸಾಗಿಸಿದರು. ಯುರೋಪಿನ ಒಂದು ಸಾಮಾನ್ಯ ದೇಶವಾಗಿದ್ದ ಇಂಗ್ಲೆಂಡ್, ತನ್ನ ಈ ದಬ್ಬಾಳಿಕೆಯ ಆಡಳಿತದಿಂದಾಗಿ, ಭಾರತದಿಂದ ಸಾಗಿಸಿದ ಐಶ್ವರ್ಯವನ್ನು ಬಳಸಿಕೊಂಡು, ‘ಸೂರ್ಯ ಮುಳಗದ ಸಾಮ್ರಾಜ್ಯ’ ಎಂಬ ಬಿರುದನ್ನು ಪಡೆದುಕೊಂಡಿತು. ನಮ್ಮ ದೇಶದ ಲಕ್ಷ ಲಕ್ಷ ಜನರನ್ನು ಹಸಿವಿಗೆ ತಳ್ಳಿ, ಇಂಗ್ಲೆಂಡ್ ಅಭಿವೃದ್ಧಿ ಹೊಂದಿತು. ಬ್ರಿಟಿಷ ರನ್ನು ಭಾರತ ದಿಂದ ತೊಲಗಿಸಲು ಅನೇಕ ಹೋರಾಟಗಳು ನಡೆದವು. 1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಯಾರು ಕಾರಣ ಎಂಬ ಜಿಜ್ಞಾಸೆ ನಡೆಯುತ್ತಲೇ ಇದೆ. ಸುಭಾಷ್ ಚಂದ್ರ ಬೋಸ್ ಅವರ ಹೋರಾಟ, ಮುಂಬಯಿಯ ನೌಕಾಪಡೆಯ ದಂಗೆ ಮೊದಲಾದ ಘಟನೆಗಳಿಗೆ ಬೆದರಿ ಅವರಾಗಿಯೇ ಭಾರತವನ್ನು ಬಿಟ್ಟು ಹೋದರು ಎಂಬ ವಾದವೂ ಇದೆ. ಅದೇನೇ ಇದ್ದರೂ, 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯು ಒಂದು ಪ್ರಮುಖ ವಿದ್ಯಮಾನ. ಆ ಸಂದರ್ಭದಲ್ಲಿ ಮೈಸೂರು ಸಂಸ್ಥಾನದಲ್ಲಿ 150ಕ್ಕೂ ಹೆಚ್ಚು ಜನರನ್ನು ಪೊಲೀಸರು ಗುಂಡಿಟ್ಟು ಸಾಯಿಸಿದರು! ಈಸೂರು ಎಂಬ ಗ್ರಾಮವೊಂದರಲ್ಲೇ ಐದು ಜನರು ಗಲ್ಲು ಶಿಕ್ಷೆಗೆ ಗುರಿಯಾಗಿ, ಪ್ರಾಣತ್ಯಾಗ ಮಾಡಿದರು. ನಮ್ಮ ರಾಜ್ಯದಲ್ಲಿ ನಡೆದ ಕ್ವಿಟ್ ಇಂಡಿಯಾ ಹೋರಾಟದ ಪಕ್ಷಿನೋಟ ಇಲ್ಲಿದೆ.

ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಎರಡು ಘಟನೆಗಳು ಪ್ರಮುಖವೆನಿಸುತ್ತವೆ. ಮೊದಲನೆಯದು 1857ನೆಯ ಇಸವಿಯಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ. ಎರಡನೆಯದು 1942ನೆಯ ಆಗಸ್ಟ್ 9 ರಂದು ಪ್ರಾರಂಭವಾದ ಕ್ವಿಟ್ ಇಂಡಿಯ ಅಥವ ಚಲೇ ಜಾವ್ ಚಳುವಳಿ. ಇದನ್ನೇ ಕನ್ನಡದಲ್ಲಿ ‘ಬ್ರಿಟಿಷರೇ ದೇಶ ಬಿಟ್ಟು ತೊಲಗಿ’ ಎಂದು ಹೇಳುವುದು.

1857ನೆಯ ಇಸವಿಯ ಪ್ರಥಮ ಸ್ವಾತಂತ್ರ್ಯಸಂಗ್ರಾಮ ಬಹುಪಾಲು ಭಾರತದ ದೇಶೀಯ ಸೈನಿಕರ ಹೋರಾಟ ಆಗಿತ್ತು. ಮಧ್ಯ ಭಾರತ ಮತ್ತು ಉತ್ತರ ಭಾರತಕ್ಕೆ ಸೀಮಿತವಾಗಿತ್ತು. ಆದರೆ, ಕ್ವಿಟ್ ಇಂಡಿಯ ಚಳುವಳಿ ಅಖಿಲ ಭಾರತದ ವ್ಯಾಪ್ತಿಯಲ್ಲಿತ್ತು ಮತ್ತು ವಿದ್ಯಾರ್ಥಿಗಳು, ಕಾರ್ಮಿಕರು, ಶ್ರೀಸಾಮಾನ್ಯರು ಇದರಲ್ಲಿ ಪಾಲ್ಗೊಂಡರು. ಆದರೆ ಆಯಾ ಪ್ರಾಂತಗಳ ಪೊಲೀಸರು ಮತ್ತು ಸೈನಿಕರು ಚಳುವಳಿಗಾರರ ಮೇಲೆ ಹಲ್ಲೆ ನಡೆಸಿದರು, ಅಶ್ರುವಾಯು ಪ್ರಯೋಗ ಮಾಡಿದರು, ಗುಂಡು ಹಾರಿಸಿದರು ಮತ್ತು ಸಹಸ್ರ ಸಹಸ್ರ ಸಂಖ್ಯೆಯ ಚಳುವಳಿಗಾರರನ್ನು ಸೆರೆಮನೆಗೆ ತಳ್ಳಿದರು.

ಇದೊಂದು ವಿರೋಧಾಭಾಸವೇ ಆಗಿದೆ. ಮೊದಲನೆಯ ಸ್ವಾತಂತ್ರ್ಯಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಭಾರತೀಯ ಮೂಲದ ಸೈನಿಕರು ತಿರುಗಿಬಿದ್ದಿದ್ದರು. ಎರಡನೆಯ ದೇಶಾದ್ಯಂತ ಹೋರಾಟದಲ್ಲಿ ಸ್ವದೇಶಿಯ ಸೈನಿಕರು ಮತ್ತು ಪೊಲೀಸರು ಪ್ರತಿಭಟನೆ ಮಾಡುತ್ತಿದ್ದ ಸ್ವದೇಶಿ ಜನರ ವಿರುದ್ಧವೇ ತಿರುಗಿ ಬಿದ್ದರು.
ಎರಡನೆಯ ಮಹಾಯುದ್ಧ 1939-45ರ ಕಾಲ. ಇದು ಎರಡನೆಯ ಮಹಾಯುದ್ಧ ಘಟಿಸಿದ ಸಂದರ್ಭ. ಜಗತ್ತಿನ ಪ್ರಮುಖ ರಾಷ್ಟ್ರಗಳು ಎರಡು ಬಣಗಳಾಗಿ ವಿಭಜನೆಗೊಂಡವು.

ಬ್ರಿಟನ್, ಅಮೆರಿಕ, ರಷ್ಯಾ ಈ ಮುಂತಾದ ದೇಶಗಳು ಮಿತ್ರ ರಾಷ್ಟ್ರಗಳೆಂದು, ಜರ್ಮನಿ, ಜಪಾನ್, ಇಟಲಿ ಈ ಕೆಲವಾರು ರಾಷ್ಟ್ರಗಳು ಶತ್ರು ರಾಷ್ಟ್ರಗಳಾಗಿ
ದ್ದವು. ಬ್ರಿಟನ್ನಿನ ವಸಾಹತು ರಾಷ್ಟ್ರವಾಗಿ ಭಾರತವಿದ್ದಿತು. ಜಪಾನ್ ದೇಶವು ಭಾರತದತ್ತ ತನ್ನ ಕಣ್ಣು ಹಾಯಿಸಿತು. ಆಗ ಶತ್ರು ರಾಷ್ರವನ್ನು ಎದುರಿಸಲು ಬ್ರಿಟಿಷ್ ಸರ್ಕಾರವು ದೇಶದ ಸ್ವಾತಂತ್ರ್ಯಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಸಂಸ್ಥೆಯ ನಾಯಕರ ಸಹಕಾರಕ್ಕಾಗಿ ವಿನಂತಿಸಿತು. ಆದರೆ, ದೇಶದ ಬಹು ಜನರ ಪ್ರತಿನಿಽಯಾಗಿದ್ದ ಕಾಂಗ್ರೆಸ್ ಸಂಸ್ಥೆಯ ಮುಂದಾಳುಗಳು ಕೆಲವೊಂದು ಷರತ್ತುಗಳನ್ನು ಇರಿಸಿದರು.

ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯಲಭ್ಯವಾಗದೆ ಹಾಗೂ ಭಾರತದ್ದೇ ಆದ ರಾಷ್ಟ್ರೀಯ ಸರ್ಕಾರ ರಚನೆಯಾಗದೆ ಭಾರತೀಯರು ಯಾವುದೇ ರೀತಿಯಲ್ಲಿ ಬ್ರಿಟೀಷ ರಿಗೆ ಯುದ್ಧದ ನೆರವು ನೀಡಲು ಸಿದ್ಧರಿಲ್ಲವೆಂದು ತಿಳಿಸಿದರು. ಬ್ರಿಟಿಷರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಯಾವುದೇ ರೀತಿಯ ಒಪ್ಪಂದ ಆಗಲಿಲ್ಲ. ಆ ಹೊತ್ತಿ ನಲ್ಲೆ ಮಿತ್ರ ರಾಷ್ಟ್ರಗಳ ಕೈ ಮೇಲಾಗಿ ಬ್ರಿಟಿಷರು ಕಂಗಾಲಾದರು. ಜಪಾನ್ ದೇಶದ ಸೈನಿಕರು ಭಾರತದ ಬಾಗಿಲ ಬಳಿ ಬಂದು ನಿಂತರು. ಆ ಸಂದರ್ಭದಲ್ಲಿ
ಬ್ರಿಟಿಷರಿಗೆ ಭಾರತೀಯರ ಸಹಕಾರ ಅತ್ಯಗತ್ಯವಾಗಿತ್ತು.

ಹಾಗಾಗಿ ಈ ಇಬ್ಬರ ನಡುವೆ ಸಂಧಾನವನ್ನೇರ್ಪಡಿಸಲು ಬ್ರಿಟನ್ನಿನ ಸರ್ಕಾರ ಸ್ಟಾಫರ್ಡ್ ಕ್ರಿಪ್ಸ್ ಎಂಬುವವನ ನೇತೃತ್ವದಲ್ಲಿ ಭಾರತಕ್ಕೆ ಆಯೋಗವೊಂದನ್ನು ಕಳಿಸಿತು. ಇದೇ ಇತಿಹಾಸ ಪ್ರಸಿದ್ಧವಾದ ಕ್ರಿಪ್ಸ್ ಆಯೋಗ. ಭಾರತೀಯರ ಹೋರಾಟದ ಬಗ್ಗೆ ಅನುಕಂಪ ಹೊಂದಿದ್ದ ಕ್ರಿಪ್ಸ್ ಕೆಲವೊಂದು ಸಲಹೆ ಸೂಚನೆಗಳನ್ನು ಕಾಂಗ್ರೆಸ್ ಮುಂದಾಳುಗಳ ಮುಂದೆ ಇರಿಸಿದನು. ಭಾರತಕ್ಕೆ ಪ್ರತ್ಯೇಕವಾದ ಒಕ್ಕೂಟ ರಚಿಸಲು ಅವಕಾಶ, ಹೊಸ ಸಂವಿಧಾನ ರಚಿಸಲು ಅನುಮತಿ ಹಾಗೂ
ಪ್ರಾಂತೀಯ ಸಂಸ್ಥಾನಗಳು ಅಗತ್ಯ ಬಿದ್ದರೆ ತಮ್ಮ ಸ್ವಂತಿಕೆಯನ್ನು ಕಾಪಾಡಿಕೊಳ್ಳುವುದು ಈ ಮುಂತಾದವಾಗಿತ್ತು. ಆದರೆ, ಕಮ್ಯುನಿಸ್ಟ್ ಪಕ್ಷವಾಗಲಿ, ಮುಸ್ಲಿಂ ಲೀಗ್ ಆಗಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘವಾಗಲಿ ಇದರಲ್ಲಿ ಭಾಗವಹಿಸಲಿಲ್ಲ ಮತ್ತು ಕಾಂಗ್ರೆಸ್ ನಾಯಕರು ಕ್ರಿಪ್ಸ್‌ನ ಸಲಹೆ ಸೂಚನೆಗಳನ್ನು
ಸಂಪೂರ್ಣವಾಗಿ ತಿರಸ್ಕರಿಸಿ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯಮಾತ್ರ ಪರಿಹಾರವೆಂದು ಪಟ್ಟು ಹಿಡಿದರು.

ಕ್ರಿಪ್ಸ್ ಆಯೋಗ ವಿಫಲಗೊಂಡು ವಾಪಸ್ಸು ಬ್ರಿಟನ್ನಿಗೆ ತೆರಳಿತು. ಆನಂತರ ಕಾಂಗ್ರೆಸ್ ಸಮಿತಿಯು ಗಾಂಧೀಜಿಯವರ ಮುಂದಾಳತ್ವದಲ್ಲಿ 1942ರ ಆಗಸ್ಟ್ ರಂದು ಬೊಂಬಾಯಿ ಯಲ್ಲಿ ಸಭೆ ಸೇರಿ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವೆ ಅಂತಿಮ. ಅದಲ್ಲದ ಯಾವ ಸಲಹೆ ಸೂಚನೆಯನ್ನು ಒಪ್ಪಲಾಗುವುದಿಲ್ಲ ಎಂದು ನಿಲುವು ತಳೆದು, ಬ್ರಿಟಿಷರನ್ನು ಭಾರತದಿಂದ ಹೊರದಬ್ಬುವ ಇತಿಹಾಸ ಪ್ರಸಿದ್ಧವಾದ ‘ಕ್ವಿಟ್ ಇಂಡಿಯ’ ಚಳುವಳಿಯ ನಿರ್ಣಯವನ್ನು ಕೈಗೊಂಡಿತು. ಇದೊಂದು ಎದೆಗಾರಿಕೆಯ ನಿರ್ಣಯ. ಅದಕ್ಕಾಗಿ ‘ಮಾಡು ಇಲ್ಲವೆ ಮಡಿ’ ಎಂಬ ಘೋಷಣೆಯನ್ನು ದೇಶದ ಮುಂದಿರಿಸಿತು.

ಈ ಹೋರಾಟವು ಅಹಿಂಸಾತ್ಮಕವಾಗಿರಬೇಕೆಂಬುದು ಕಾಂಗ್ರೆಸ್ ಹಾಗೂ ಗಾಂಧೀಜಿಯವರ ಅಭಿಪ್ರಾಯವಾಗಿತ್ತು. ಸರಕಾರವು 1942ರ ಆಗಸ್ಟ್ 9ರಂದು ಬೆಳಗ್ಗೆ ಭಾರತೀಯ ಮುಂದಾಳುಗಳಾದ ಗಾಂಧೀಜಿ, ಅಬ್ದುಲ್ ಕಲಾಂ ಆಜಾದ್, ನೆಹರು, ರಾಜೇಂದ್ರ ಪ್ರಸಾದ್ ಮುಂತಾದವರನ್ನು ಬಂಧಿಸಿ ಸೆರೆಮನೆಗೆ ತಳ್ಳಿತು. ಈ ಸುದ್ದಿ ದೇಶಾದ್ಯಂತ ಹರಡಿ ಜನರನ್ನು ರೊಚ್ಚಿಗೇಳಿಸಿತು. ಪರಿಣಾಮ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಕಾರ್ಮಿಕರು, ಜನಸಾಮಾನ್ಯರು ಹರತಾಳವೆ ಮೊದಲಾದ ಪ್ರತಿಭಟನೆಗಳಲ್ಲಿ ತೊಡಗಿಕೊಂಡರು. ಪ್ರಾರಂಭದಲ್ಲಿ ಅಹಿಂಸಾತ್ಮಕ ನೆಲೆಯಲ್ಲಿಯೇ ಚಳುವಳಿ ಮುಂದುವರೆಯಿತು. ಕ್ರಮೇಣ ಅದು ಹಿಂಸಾರೂಪವನ್ನು ತಳೆಯಿತು.

ಮೈಸೂರು ಸಂಸ್ಥಾನದಲ್ಲಿ

ಮೈಸೂರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು 18-08-1942ರಂದು ಸಭೆ ಸೇರಿ ಕ್ವಿಟ್ ಇಂಡಿಯ ಘೋಷಣೆಯ ಬಗ್ಗೆ ಮುಂದಿನ ಕಾರ್ಯಕ್ರಮವನ್ನು ರೂಪಿಸ ಬೇಕೆಂದು ತೀರ್ಮಾನಿಸಿತು. ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಸರಕಾರದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಕೂಡದು ಎಂದು ನಿರ್ಣಯಿಸಿ ಕ್ವಿಟ್ ಇಂಡಿಯ ಚಳುವಳಿಗೆ ತನ್ನ ಬೆಂಬಲನ್ನು ಸಾರಿತು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಕಾರ್ಮಿಕರು, ಶ್ರೀಸಾಮಾನ್ಯರು ಹಾಗೂ ಕಾಂಗ್ರೆಸ್ ಕಾರ್ಯ ಕರ್ತರು ಮೈಸೂರು ಸಂಸ್ಥಾನದ ಎಲ್ಲ ಕಡೆ ಪ್ರತಿಭಟನೆಗೆ ಧುಮುಕಿದರು. ‘ಬ್ರಿಟಿಷರೆ ಭಾರತವನ್ನು ಬಿಟ್ಟು ತೊಲಗಿ’ ಎಂಬ ಘೋಷಣೆ ಮೊಳಗಿತು. ಹರತಾಳಗಳು ನಡೆದವು.

ಪತ್ರಿಕೆಗಳ ಮೇಲೆ ದಾಳಿ
ಪತ್ರಿಕೆಗಳು ಈ ಚಳುವಳಿಗೆ ಬೆಂಬಲವಾಗಿ ನಿಂತವು. ಪರಿಣಾಮ ಸರ್ಕಾರವು ಪತ್ರಿಕಾಲಯಗಳ ಮೇಲೆ ದಾಳಿ ಮಾಡಿತು. ತಾಯಿನಾಡು ಸಂಪಾದಕರಾದ ಪಿ.ಆರ್.ರಾಮಯ್ಯ, ವಿಶ್ವಕರ್ನಾಟಕದ ಟಿ.ಟಿ.ಶರ್ಮ ಮತ್ತು ಸಿದ್ಧವನಳ್ಳಿ ಕೃಷ್ಣಶರ್ಮ, ಜನವಾಣಿ ಸಂಪಾದಕರಾದ ಬಿ.ಎನ್.ಗುಪ್ತಾ ಇವರುಗಳನ್ನು ಬಂಧಿಸಿ ಸೆರೆಮನೆಯಲ್ಲಿಡಲಾಯಿತು. ಕೆಲವು ಕಾಲ ಪತ್ರಿಕೆಗಳ ಪ್ರಕಟಣೆ ನಿಂತು ಹೋಯಿತು.

ಮೈಸೂರು ಸಂಸ್ಥಾನದ ಬಿನ್ನೀಮಿಲ್ಸ್, ಕೈಸರ್-ಇ-ಹಿಂದ್-ಮಿಲ್ಸ್, ಕೃಷ್ಣ ವೀವಿಂಗ್ ಮಿಲ್ಸ್, ರಾಜಾ ಮಿಲ್, ಮಿನರ್ವ ಮಿಲ್, ಮೈಸೂರಿನ ಕೃಷ್ಣರಾಜೇಂದ್ರ ಮಿಲ್ಸ್, ದಾವಣಗೆರೆ ಮಿಲ್ಸ್, ಸರ್ಕಾರಿ ಎಲೆಕ್ಟ್ರಿಕ್ -ಕ್ಟರಿ, ಬೆಂಗಳೂರು ಸರ್ಕಾರಿ ಸಾಬೂನು ಫ್ಯಾಕ್ಟರಿ, ಗ್ಲಾಸ್ ಫ್ಯಾಕ್ಟರಿ, ಭದ್ರಾವತಿಯ ಕಬ್ಬಿಣದ ಫ್ಯಾಕ್ಟರಿ,
ಭದ್ರಾವತಿಯ ಮೈಸೂರು ಪೇಪರ್ ಮಿಲ್ಸ್, ಬೆಂಗಳೂರಿನ ಎಚ್.ಎ.ಎಲ್, ಕೊಲಾರದ ಚಿನ್ನದ ಗಣಿ(ಕೆ.ಜಿ.ಎಫ್) ಇಲ್ಲಿನ ಸುಮಾರು ಒಟ್ಟು 82000 ಜನ ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಕೆ.ಜಿ.ಎಫ್.ನಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪೊಲೀಸರ ಗುಂಡಿಗೆ ಆರು ಜನ ಕಾರ್ಮಿಕರು ಸ್ಥಳದಲ್ಲೆ ಮೃತರದಾರು ಮತ್ತು ಹಲವರು ಗಾಯಗೊಂಡರು.
ಕಾಂಗ್ರೆಸ್ ನಾಯಕರಾದ ತಾಳೆಕೆರೆ ಸುಬ್ರಮಣ್ಯ, ಸರ್ದಾರ್ ವೆಂಕಟರಾಮಯ್ಯ, ಎ.ಜಿ.ರಾಮಚಂದ್ರರಾವ್, ಎಂ.ವಿ.ಕೃಷ್ಣಪ್ಪ, ಎಚ್.ಎಸ್.ದೊರೆಸ್ವಾಮಿ, ಕೆ.ಟಿ.ಭಾಷ್ಯಂ ಈ ಮುಂತಾದವರು ವಳುವಳಿಯ ನೇತೃತ್ವವನ್ನು ವಹಿಸಿ ಸೆರೆಮನೆವಾಸ ಅನುಭವಿಸಿದರು. ಬೆಂಗಳೂರು, ದಾವಣಗೆರೆ, ಮೈಸೂರು, ತುಮಕೂರು, ಹಾಸನ ಈ ಮುಂತಾದ ಕಡೆ ಪ್ರತಿಭಟನಾಕಾರರು ರೈಲ್ವೆ ನಿಲ್ದಾಣಗಳ ಮೇಲೆ ಮುತ್ತಿಗೆ ಹಾಕಿದರು.

ಅಂಚೆ ಕಛೇರಿ, ಹೆಂಡದಂಗಡಿಗಳ ವಿರುದ್ಧ ಪಿಕೆಟಿಂಗ್ ನಡೆಸಿದರು. ಪೊಲೀಸರು ಲಾಠಿ ಛಾರ್ಜ್ ಮಾಡಿದರು, ಅಶ್ರುವಾಯು ಸಿಡಿಸಿದರು, ಗುಂಡು ಹಾರಿಸಿದರು, ಪ್ರತಿಭಟನಾಕಾರರನ್ನು ಸಹಸ್ರ ಸಂಖ್ಯೆಯಲ್ಲಿ ಸೆರೆಮನೆಗೆ ತಳ್ಳಿದರು.

150 ಸಾವು

ಬೆಂಗಳೂರು, ದಾವಣಗೆರೆ ಮೊದಲಾದ ಕಡೆ, ದಾಖಲೆಗಳ ಪ್ರಕಾರ 150 ಪ್ರತಿಭಟನಾಕಾರರು ಗುಂಡೇಟಿಗೆ ಬಲಿಯಾದರು. ಅದೇ ರೀತಿ ಮೈಸೂರು ನಗರದ ಪ್ರಸಿದ್ಧ ಹ್ಯಾಮಿಲ್ಟನ್ ಸತ್ಯಾಗ್ರಹ ನಡೆದು ಅನೇಕ ಜನ ಪೊಲೀಸರ ಹಲ್ಲೆಗೆ ಒಳಗಾದರು. ಕ್ವಿಟ್ ಇಂಡಿಯ ಚಳುವಳಿಯು ಮೈಸೂರು ಸಂಸ್ಥಾನದ ಅನೇಕ ಹಳ್ಳಿ ಗಳಲ್ಲೂ ಪ್ರತಿಧ್ವನಿಸಿತು. ಈ ಪೈಕಿ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮತ್ತು ಶಿವಮೊಗ್ಗ ಜಿಲ್ಲೆಯ ಈಸೂರು ಸತ್ಯಾಗ್ರಹ ಪ್ರಮುಖವಾದವು.

ಶ್ರವಣಬೆಳಗೊಳ
ಶ್ರವಣಬೆಳಗೊಳದಲ್ಲಿ ನಡೆದ ಸಂತೆ ಪಿಕೆಟಿಂಗ್ ಅನ್ನು ಮಟ್ಟ ಹಾಕಲು ಪೊಲೀಸರು ಬಲ ಪ್ರಯೋಗ ಮಾಡಿದರು. ಹಿಂಸೆಗೆ ಪ್ರತಿಹಿಂಸೆಯಾಯಿತು. ಇದರಿಂದ ಚಳುವಳಿಯ ಕಾವು ಶ್ರವಣಬೆಳಗೊಳದ ಸುತ್ತಲಿನ ಗ್ರಾಮೀಣ ವಲಯಗಳಿಗು ಹಬ್ಬಿತು. ಪ್ರತಿಭಟನಾಕಾರರು ಆ ಪ್ರದೇಶಗಳ ಅಂಚೆ ಕಛೇರಿಗಳನ್ನು, ಪೊಲೀಸ್ ಸ್ಟೇಷನ್‌ಗಳನ್ನು ನಾಶಪಡಿಸಿದರು. ಪೊಲೀಸರು ಚಳುವಳಿಗಾರರ ಮೇಲೆ ಗುಂಡು ಹಾರಿಸಿ, ಹಲವಾರು ಜನರನ್ನು ಬಂಽಸಿ ಸೆರೆಮನೆಗೆ ತಳ್ಳಿದರು.

ಈಸೂರು
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು ಈ ದೃಷ್ಟಿಯಿಂದ ಅತಿ ಹಲ್ಲೆಗೆ ಒಳಗಾದ ಹಳ್ಳಿ. ಕ್ವಿಟ್ ಇಂಡಿಯ ಚಳುವಳಿ ಮೊದಲು ಸಣ್ಣ ಪ್ರಮಾಣದಲ್ಲಿ ಆರಂಭವಾಗಿ ಶಾಲಾ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದರು. ಅವರು ಗಾಂಧಿ ಟೋಪಿಯನ್ನು ಹಾಕಿಕೊಂಡು ಕೈಯಲ್ಲಿ ರಾಷ್ಟ್ರ ಧ್ವಜವನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಊರಿನಲ್ಲಿ ಸುತ್ತಿದರು. ಆನಂತರ ಊರಿನ ಪಟೇಲರು, ಶಾನುಭೋಗರು ತಮ್ಮ ಕೆಲಸಗಳಿಗೆ ರಾಜೀನಾಮೆ ಕೊಡಬೇಕೆಂದು ಪ್ರತಿಭಟಿಸಿದರು. ಈ ಸುದ್ದಿ ಸರಕಾರಕ್ಕೆ ತಲುಪಿ ಸಣ್ಣ ಅಧಿಕಾರಿಗಳ ಗುಂಪೊಂದು ಪೊಲೀಸರೊಂದಿಗೆ ಈಸೂರಿಗೆ ಬಂದಿತು. ಈಸೂರಿನ ಜನತೆ ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದಾಗ ಪೊಲೀಸಿನವರು ಹಲ್ಲೆ ಮಾಡಿದರು. ಹಿಂಸೆ ಪ್ರತಿಹಿಂಸೆಗೆ ದಾರಿಯಾಯಿತು. ಆ ಸಂದರ್ಭ ದಲ್ಲಿ ಅಮಲ್ದಾರರ, ಸಬ್‌ಇನ್ಸ್ಪೆಕ್ಟರ್ ಸತ್ತು ಹೋದರು.

ಶಿವಮೊಗ್ಗ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಯನ್ನು ಈಸೂರಿಗೆ ತಂದು ಹಳ್ಳಿಗರ ಮೇಲೆ ಯದ್ವಾತದ್ವಾ ಹಿಂಸೆ ನಡೆಸಿದರು. ಸಣ್ಣ ಮಕ್ಕಳನ್ನೂ ಬಿಡದೆ ಹಿಂಸಿಸಿದರು. ಆನಂತರ ಬಂಧಿಸಿದ ಜನರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅಲ್ಲಿ ವಿಚಾರಣೆ ನಡೆದು ಪ್ರತಿ ಭಟನಾಕಾರರ ಪೈಕಿ 11 ಜನಕ್ಕೆ ಮರಣದಂಡನೆಯನ್ನು ಅನೇಕರಿಗೆ ಜೀವಾವಽ ಶಿಕ್ಷೆಯನ್ನು ವಿಧಿಸಲಾಯಿತು. ಅಂತಿಮವಾಗಿ ಶಿಕ್ಷೆಗೊಳಗಾದವರು ಹೈಕೋರ್ಟ್‌ ನಲ್ಲಿ ಮನವಿ ಮಾಡಿಕೊಂಡಾಗ ಐದು ಜನರಿಗೆ ಮರಣದಂಡನೆ ಹಾಗೂ 28 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆ ಐದು ಮಂದಿಯನ್ನು ಬೆಂಗಳೂರಿನ ಕೇಂದ್ರ ಸೆರೆಮನೆಯಲ್ಲಿ ಗಲ್ಲಿಗೇರಿಸಲಾಯಿತು.

ಹೀಗೆ ಕ್ವಿಟ್ ಇಂಡಿಯ ಚಳುವಳಿಯ ನಡೆ ಅಹಿಂಸೆಯಿಂದ ಹಿಂಸೆ-ಪ್ರತಿಹಿಂಸೆಗೆ ತಿರುಗಿ ಅನೇಕ ದೇಶಾಭಿಮಾನಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು, ಬದುಕಿನ ಸಮಸ್ತವನ್ನು ಕಳೆದುಕೊಂಡರು. ನೂರಾರು ಮಂದಿ ಪೊಲೀಸರ ಗುಂಡೇಟಿಗೆ ಬಲಿಯಾದರು. ಈ ಕ್ವಿಟ್ ಇಂಡಿಯ ಚಳುವಳಿ ಮುಂದೆ 1947ರ ಆಗಸ್ಟ್ ೧೫ರ ಸ್ವಾತಂತ್ರ್ಯಘೋಷಣೆಗೆ ಅಸ್ತಿಭಾರಹಾಕಿತು ಎಂಬುದು ಇಲ್ಲಿ ಮನನೀಯ