Sunday, 24th November 2024

ದಾಹ ಮೋಹಗಳ ಆಚೆ ಬದುಕು

ಹಳ್ಳಿ ಹಕ್ಕಿ

ಪೂರ್ಣಿಮಾ ಕಮಲಶಿಲೆ

ನಮ್ಮ ಮಂಜಮ್ಮ ದೊಡ್ಡಮ್ಮ ಒಂದು ಚೂರು ಉದಾಸೀನವಿಲ್ಲದೆ ಧಾನ್ಯ ಜಪ್ಪುವ, ಗಾಳಿ ಹಿಡಿಯುವ, ಗೇರುವ, ಬೇಗುವ, ಒಣಗಿಸಿ ಜೋಪಾನಿಸುವ ಕೆಲಸ ಮಾಡುತ್ತಿದ್ದರು. ಅಪ್ಪಯ್ಯನಿಗೆ ‘ಕೊಣ್ಣೆ ಕುತ್ರೆ’ ಮಾಡಲು ಮಂಜಮ್ಮ ದೊಡ್ಡಮ್ಮ ಆಜ್ಞೆ  ಹೊರಡಿಸಿದರೆಂದರೆ, ಆ ವರ್ಷದ ಧಾನ್ಯದ ಕೆಲಸ ಪೂರ್ಣವಾದಂತೆ.

ಹಳ್ಳಿಯ ಬದುಕಿನಲ್ಲಿ ಸಾರ್ಥಕತೆ ಕಂಡು ಸವೆದುಹೋದ ಕೆಲವು ಜೀವಗಳು ನನ್ನನ್ನು ಒಮ್ಮೊಮ್ಮೆ ಕಾಡುವುದಿದೆ. ನನ್ನ ಬಾಲ್ಯ ದಲ್ಲಿ ನಮ್ಮ ಮನೆಗೆ ಬರುತ್ತಿದ್ದ, ಬಂದಾಗ ಒಂದೆರಡು ತಿಂಗಳುಗಳ ಕಾಲ ನಮ್ಮ ಮನೆಯ ಉಳಿಯುತ್ತಿದ್ದ ಅಪ್ಪಯ್ಯನ
ಸೋದರತ್ತೆ ಮಂಜಮ್ಮ ದೊಡ್ಡಮ್ಮನ ನೆನಪು ಇಂದಿಗೂ ಹಸಿ ಹಸಿಯಾಗಿದೆ.

ಎಲ್ಲರ ಜೀವನದಲ್ಲೂ ಒಬ್ಬಿಬ್ಬರಾದರೂ ಇಂತಹ ಶ್ರಮ ಏವ ಜಯತೇ ಎಂದು ನಂಬಿದ ಮಡಿ ಅಜ್ಜಿಯರು ಬಂದು ಹೋಗಿರು ತ್ತಾರೆ. ನಮ್ಮ ಮಂಜಜ್ಜಿಗೆ ಅಜ್ಜಿ ಎಂದರೆ ಸಿಟ್ಟೇ ಬರುತ್ತಿತ್ತು. ಹಾಗಾಗಿ ನಾವೆಲ್ಲ ಮಂಜಮ್ಮ ದೊಡ್ಡಮ್ಮ ಎಂದು ಕರೆಯುತ್ತಿದ್ದೆವು. ಎಣ್ಣೆಕಪ್ಪು ಬಣ್ಣದ ಉದ್ದನೆಯ ಸಣಕಲು ದೇಹ. ಬರಿ ಮೂಳೆಯ ಹಂದರ ನಮ್ಮ ಮಂಜಮ್ಮ ದೊಡ್ಡಮ್ಮನದ್ದು.

ನಾ ಕಂಡ ಲಗಾಯ್ತಿನಿಂದಲೂ ಕೆಂಪು ಸೀರೆಯನ್ನು ಬೋಳಿಸಿದ ತಲೆ ಮೇಲೆ ಹೊದ್ದು, ಕಾಯಕವೇ ಕೈಲಾಸವೆಂದು ನಂಬಿದ, ಗುಳಿಬಿದ್ದ ಕಣ್ಣುಗಳ, ಬಾಗಿದ ಬೆನ್ನಿನ, ಕಷ್ಟ ಕಷ್ಟಗಳ ಸರಮಾಲೆಯನ್ನೇ ಹಾಸು ಹೊದ್ದು ಉಂಡು ಉಟ್ಟು ದಣಿದ ಜೀವವದು.
ಮಗನ ಚಿಂತೆ, ಇಹ ತೊರೆದ ಮಗಳ ನೆನಪು, ಮನೆಯ ಸ್ಥಿತಿಗಳ ಚಿಂತೆಯಿದ್ದರೂ ಅದಕ್ಕಾಗಿ ವ್ಯಥೆ ಪಡುತ್ತಾ ಕೂರದೆ, ಉಂಡ ಮನೆಗೆ ಬೆಟ್ಟದಷ್ಟು ಕೆಲಸ ಮಾಡಿಯೇ ಸವೆದ ಜೀವ ಅವರದ್ದು.

ಮಂಜಮ್ಮ ದೊಡ್ಡಮ್ಮ ಮಡಿ ಹೆಂಗಸು. ಬಹಳ ಚೊಕ್ಕ ಮತ್ತು ಶಿಸ್ತಿನ ಕೆಲಸ ಅವರದ್ದು. ಮೈಮಂಡೆಯನ್ನು ಬಹಳ ಸ್ವಚ್ಚವಾಗಿ ಇಟ್ಟುಕೊಳ್ಳುತ್ತಿದ್ದರು. ಅವರ ದಿನಚರಿಯೆ ವಿಭಿನ್ನ. ಬೆಳಿಗ್ಗೆ ಎದ್ದೊಡನೆ ಮಾವಿನೆಲೆಯಲ್ಲಿ ಹಲ್ಲುಜ್ಜಿ, ಒಂದು ಮೈತೊಳೆಯುವ ತುಂಡು ಸೀರೆ ಉಡುತ್ತಿದ್ದರು. ಉಟ್ಟ ಸೀರೆಯನ್ನು ಒಗೆದು ಮಡಿ ಒಣಗಿಸುವ ಜಾಗದಲ್ಲಿ ಒಣಗಿಸಿ, ಬಿಸಿನೀರ ಸ್ನಾನ ಮಾಡಿ ಕೊಂಡು ಬಂದು, ಮುನ್ನಾದಿನ ಒಣ ಗಿಸಿದ ಸೀರೆಯುಡುತ್ತಿದ್ದರು. ಅವರು ರವಿಕೆ ಲಂಗ ಹಾಕುತ್ತಿರಲಿಲ್ಲ.

ಒಳಸುತ್ತು ಹಾಕಿ ಸೀರೆ ಉಟ್ಟು ನೆರಿಗೆ ಹಿಡಿದು ಗಂಟು ಹಾಕಿ ಮೇಲೆ ಸಿಕ್ಕಿಸಿಕೊಂಡು, ಸೆರಗನ್ನು ತಲೆ ಮೇಲೆ ಹೊದ್ದು ಮೈಮುಚ್ಚಿ ಕೊಂಡರೆ ಮುಗಿಯಿತು. ಇಷ್ಟೇ ಅವರ ದಿರಿಸು. ನಂತರ ದೇವರಿಗೆ ನಮಿಸಿ, ದೇವರ ಪೂಜೆಗೆ ಹೂವು ತುಳಸಿ ಕೊಯ್ದಿಟ್ಟು ಅಡುಗೆ ಮನೆಯ ಕೆಲಸಕ್ಕೆ ಅಮ್ಮನಿಗೆ ನೆರವಾಗುತ್ತಿದ್ದರು. ಅಷ್ಟರಲ್ಲಿ ಅಪ್ಪಯ್ಯ ಪೂಜೆಗೆ ಬರುತ್ತಿದ್ದರು. ಪೂಜೆ ಮುಗಿದ ಮೇಲೆ ತೀರ್ಥ ಸ್ವೀಕರಿಸಿ, ಗಂಧ ಹಚ್ಚಿಕೊಂಡು ಮತ್ತೆ ಅಡುಗೆ ಮನೆಯತ್ತ ಬರುತ್ತಿದ್ದರು.

ಹಾಲ್ ಬಿಸ್ನೀರ್
ಮಂಜಿ ದೊಡ್ಡಮ್ಮ ದೇವರ ಧ್ಯಾನ, ಜಪ, ತಪ ಎಂದು ಸಮಯ ಕಳೆದವರಲ್ಲ. ಬೆಳಗಿನ ಉಪಾಹಾರಕ್ಕೆ ಮೊಸರವಲಕ್ಕಿ, ಉಪ್ಪಿಟ್ಟು, ದೋಸೆ, ಕಡುಬು ಹೀಗೆ ಎಂತದಾದರೂ ಚೂರು ಹೊಟ್ಟೆಗೆ ಹಾಕಿಕೊಂಡು, ಒಂದುಲೋಟ ಜೀರಿಗೆ ಹಾಲ್ನೀರ್
ಕುಡಿದರೆ ಮತ್ತೆ ಮಧ್ಯಾಹ್ನದ ಊಟದವರೆಗೆ ನೀರು, ಮಜ್ಜಿಗೆ ನೀರನ್ನಷ್ಟೇ ಸೇವಿಸುತ್ತಿದ್ದವರು. ಮಧ್ಯಾಹ್ನ ಒಂದೇ ಊಟ, ಸಂಜೆಗೆ ಮತ್ತೆ ಬೆಳಗಿನಂತೆ ಇಷ್ಟೇ ಇಷ್ಟು ಫಲಾಹಾರ. ಇದ್ದರೆ ಒಂದು ಬಾಳೆಹಣ್ಣು ತಿನ್ನುತ್ತಿದ್ದರು. ಸಣ್ಣ ಲೋಟದಲ್ಲಿ ಹಾಲ್ ಬಿಸ್ನೀರ್ ಕುಡಿದರೆ ಮುಗಿಯಿತು.

ಹೆಚ್ಚೆಂದರೆ ತಿಥಿ ಮನೆ ಯೂಟ, ಹೋಳಿಗೆ, ಲಾಡು, ಜಿಲೇಬಿ, ಹಳ್ಳಿಯ ತಿಂಡಿಗಳಾದ ದೋಸೆ ಇಡ್ಲಿ, ಹಬ್ಬದ ಅಡುಗೆ ಊಟ ಮಾಡಿದ್ದೇ ಅವರ ಜೀವನದ ಮಹಾ ಆಹಾರಗಳಿರಬಹುದು. ಬೆಳಗಿನ ಫಲಾಹಾರ ಮುಗಿದೊಡನೆ ತೋಟದ ಕಡೆ ಹೋಗಿ ಅಡಿಕೆ ಹಾಳೆಗಳನ್ನು ತಂದು ಹಾಳೆಕಡ್ಡಿ ಮಾಡಿ ಭಾರ ಹೇರಿಟ್ಟು ಎರಡು ಮೂರು ದಿನದ ತರುವಾಯ ಕಟ್ಟು ಕಟ್ಟಿ ಇಡುತ್ತಿದ್ದರು.

ಹಿಡಿಸೂಡಿ ಮಾಡುವುದು. ಭತ್ತ, ಅಕ್ಕಿ ಗೇರುವುದು, ಬತ್ತಿ ಹೊಸೆಯುವುದು, ಬಾಳೆ ಹಗ್ಗ ಮಾಡುವುದು ಇವುಗಳಲ್ಲಿ ಯಾವು ದಾದರೂ ಒಂದಿಷ್ಟು ಬೆಳಗಿನ ಕೆಲಸ ಮಾಡಿಯೇ ಮಧ್ಯಾಹ್ನದ ಊಟಕ್ಕೆ ಹಾಜರಾಗುತ್ತಿದ್ದರು.

ಹಾಳೆಕಡ್ಡಿ ಮಾರಿದ ದುಡ್ಡು
ಅಪ್ಪಯ್ಯ ಕುಂದಾಪುರಕ್ಕೆ ಶನಿವಾರದ ಸಂತೆಗೆ ಹೊರಟರೆ, ಅಪ್ಪಯ್ಯನ ಬಳಿ ಅವರು ಮಾಡಿಟ್ಟ ಹಾಳೆಕಡ್ಡಿಯ ಕಟ್ಟು,ಬಾಳೆ
ಹಗ್ಗದ ಕಟ್ಟು, ಹಿಡಿಸೂಡಿಗಳನ್ನೆಲ್ಲ ಕೊಟ್ಟು ಸಂತೆಯಲ್ಲಿ ಮಾರಿಬರಲು ಹೇಳುತ್ತಿದ್ದರು. ಆ ವಸ್ತುಗಳನ್ನು ಮಾರಿ ಬಂದ ಐದು
ಹತ್ತು ರೂಪಾಯಿಗಳನ್ನು ಅಪ್ಪಯ್ಯ ಮಂಜಮ್ಮ ದೊಡ್ಡಮ್ಮನಿಗೆ ತಂದುಕೊಡುತ್ತಿದ್ದರು. ಅದಷ್ಟೇ ಅವರ ಬಳಿ ಇರುತ್ತಿದ್ದ ಆಸ್ತಿ!

ಯಾರ ಬಳಿಯೂ ಒಂದು ಪೈಸೆ ಹಣ ಕೇಳುತ್ತಿರಲಿಲ್ಲ. ಅವರ ಮನೆ ಮೊಳಹಳ್ಳಿಯಿಂದ ನಮ್ಮ ಮನೆಗೆ (ಹತ್ತು ಕಿಮೀ) ಬರಲು
ಬಸ್ಸಿಗೆ ಕೊಡಲು, ತಲೆಕೂದಲು ಕತ್ತರಿಸಲು ಬರುವ ಕ್ಷೌರಿಕನಿಗೆ ಕೊಡಲು ಆ ಹಣ ಉಪಯೋಗಿಸುತ್ತಿದ್ದರು. ಅವರು ಊಟ ತಿಂಡಿಗೆ ಬಾಳೆಲೆಯನ್ನೇ ಉಪಯೋಗಿಸುತ್ತಿದ್ದರು. ಬಟ್ಟಲೂಟ ಮಾಡಿದವರೇ ಅಲ್ಲ. ಊಟವಾದ ನಂತರ ಅಡುಗೆಮನೆಯನ್ನು ಒಪ್ಪ ಓರಣವಾಗಿಡಲು ಅಮ್ಮನಿಗೆ ಸಹಕರಿಸಿ ತುಸು ವಿರಮಿಸುತ್ತಿದ್ದರು.

ಮಧ್ಯಾಹ್ನದ ನಂತರ ಧಾನ್ಯ ಕಿತ್ತು ಒಣಗಿಸಿದ ಅಂಗಳಕ್ಕೆ ಹೋಗುತ್ತಿದ್ದರು. ನಾವು ಶಾಲೆಗೆ ರಜೆ ಇದ್ದರೆ ಅವರೊಂದಿಗೆ ಧಾನ್ಯ ಒಣಗಿಸಿದ ಅಂಗಳಕ್ಕೆ ಹೋಗುತ್ತಿದ್ದೆವು. ಅವರು ಒಣಗಿದ ಗಿಡಗಳಿಂದ, ಉದ್ದು, ಹುರುಳಿ, ಹೆಸರು ಇತ್ಯಾದಿ ಧಾನ್ಯಗಳನ್ನು ಬೇರ್ಪಡಿಸಿ, ಅವುಗಳನ್ನು ಗಾಳಿಹಿಡಿದು, ಕೊಣ್ಣೆ ಬೇರೆ ಧಾನ್ಯ ಬೇರೆ ಮಾಡಿ, ಗೇರಿ, ಕಲ್ಲು ನೆಲ್ಲನ್ನೆಲ್ಲ ತೆಗೆದು ವಾಗಾಯ್ತು ಮಾಡಿದರೆಂದರೆ ಆ ವರ್ಷ ಧಾನ್ಯದ ಬೆಳೆಯ ಕೆಲಸ ಮುಗಿದಂತೆ.

ಒಂದು ಚೂರು ಉದಾಸೀನವಿಲ್ಲದೆ ಆ ಧಾನ್ಯ ಜಪ್ಪುವ, ಗಾಳಿ ಹಿಡಿಯುವ, ಗೇರುವ, ಬೇಗುವ, ಒಣಗಿಸಿ ಜೋಪಾನಿಸುವ ಕೆಲಸ ಮಾಡುತ್ತಿದ್ದರು. ಅಪ್ಪಯ್ಯನಿಗೆ ಕೊಣ್ಣೆ ಕುತ್ರೆ ಮಾಡಲು ಮಂಜಮ್ಮ ದೊಡ್ಡಮ್ಮ ಆಜ್ಞೆ ಹೊರಡಿಸಿದರೆಂದರೆ, ಆ ವರ್ಷದ ಧಾನ್ಯದ ಕೆಲಸ ಪೂರ್ಣವಾದಂತೆ. ಕಣ್ಣಿಗೆ ಕತ್ತಲಾಗುವವರೆಗೆ ಧಾನ್ಯ ಕೀಳುವುದು, ಅಂಗಳದ ಕೆಲಸ ಮಾಡಿ ಮನೆಗೆ ಬಂದು ಸ್ನಾನ ಮಾಡಿ, ದೇವರಿಗೆ ನಮಿಸಿ, ಫಲಾಹಾರ ಸ್ವೀಕರಿಸಿ, ಅಂಗಳದಲ್ಲಿ ಕುಳಿತು ಚಪ್ಪರ ಹಾಕಲು, ಹಪ್ಪಳ ಒಣಗಿಸಲು ತೆಂಗಿನ ಮಡಲು ನೇಯುವುದು, ನಮಗೂ ನೇಯಲು ಹೇಳಿಕೊಡುವುದು, ಹುಣ್ಣಿಮೆಯ ದಿನಗಳದರೆ ಕೊಯ್ದ ಗzಯ ಕೂಳೆ ಕೀಳುವುದು ಇವನ್ನೆಲ್ಲ ಮಾಡಿ, ಮತ್ತೆ ಕೈಕಾಲು ತೊಳೆದು ರಾತ್ರಿ ಎಂಟು ಗಂಟೆಯೊಳಗೆ ಚಾವಡಿಯ ತಲೆಯಲ್ಲಿ ಸ್ವಚ್ಚ,ಶುಭ್ರವಾದ ಚಾಪೆ, ಹೊದಿಕೆ, ಹಾಸುವ ಬಟ್ಟೆಯನ್ನು ಹಾಕಿಕೊಂಡು ಮಲಗುತ್ತಿದ್ದರು.

ತಲೆದಿಂಬು ಇಟ್ಟುಕೊಳ್ಳುವ ಅಭ್ಯಾಸವೂ ಇರಲಿಲ್ಲ. ಮಲಗಿದಾಗ ತಲೆಯ ಪಕ್ಕ ಒಂದು ಪುಟ್ಟ ಬ್ಯಾಟರಿ, ಒಂದು ಒಣ ಪಂಚೆ ಇಟ್ಟುಕೊಳ್ಳುತ್ತಿದ್ದರು. ರಾತ್ರಿ ಬಚ್ಚಲಿಗೆ ಹೋಗಲು ಬ್ಯಾಟರಿ, ಬಚ್ಚಲಿನಲ್ಲಿ ಕಾಲುತೊಳೆದುಕೊಂಡು ಬಂದು ಆ ತಲೆಬದಿ ಯಲ್ಲಟ್ಟು ಕೊಂಡ ಪಂಚೆಯಲ್ಲಿ ಕೈಕಾಲು ವರೆಸಿಕೊಂಡು ಮತ್ತೆ ಮಲಗುತ್ತಿದ್ದರು. ಹೆಚ್ಚು ಮಾತೇ ಆಡದ ಮಂಜಮ್ಮ ದೊಡ್ಡಮ್ಮನಿಗೆ ಅಪ್ಪಯ್ಯ ನೆಂದರೆ ಬಲುಪ್ರೀತಿ, ಆಗಾಗ ಅಪ್ಪಯ್ಯನ ಮನಸ್ಥಿತಿ ನೋಡಿಕೊಂಡು ಸುಖ ಕಷ್ಟ ಹೇಳಿಕೊಂಡು ಹಗುರಾಗುತ್ತಿದ್ದರು. ಅಪ್ಪ ಯ್ಯನೂ ಅವರ ಅತ್ತೆಯ ಬಳಿ ಸಲಹೆ ಸೂಚನೆ ಪಡೆ ಯುತ್ತಿದ್ದರು.

ಹಾಳು ಹರಟೆಯ ಹಂಗಿಲ್ಲದೆ, ದೇವರು ದೇವರು ಎಂಬ ಅತಿಭಕ್ತಿ ಇಲ್ಲದೆ ಕೆಲಸ ಮಾಡಿದ್ದಕ್ಕೆ ಊಟ ಮಾಡುತ್ತಿದ್ದ ಮಂಜಮ್ಮ ದೊಡ್ಡಮ್ಮನ ಜೀವನವೇ ಸೋಜಿಗ. ಅವರಿಗೆ ನಾಯಿ, ಬೆಕ್ಕುಗಳೆಂದರೆ ಆಗುತ್ತಿರಲಿಲ್ಲ. ದನಕರುಗಳೆಂದರೆ, ಹಳ್ಳಿಯ ಬದುಕೆಂದರೆ ಅಪಾರ ಪ್ರೀತಿ. ಬದುಕಿನಲ್ಲಿ ಒಂದೆರಡು ಬಾರಿ ಬೆಂಗಳೂರಿಗೆ ಹೋಗಿ ಬಂದದ್ದೇ ಅವರ ಮಹಾಪ ಯಣವೆನ್ನಬಹುದು. ಅದರಿಂದಾಚೆಗೆ ಅವರು ಹಾಲಾಡಿ ಪೇಟೆ ಕಂಡವರೂ ಅಲ್ಲ, ಕೊಡಿ ಹಬ್ಬಕ್ಕೆ ಹೋದವರು ಅಲ್ಲ. ಎಲ್ಲಿರುವೆನೊ ಅದೇ ಕಾಶೀ, ಈ ನೆಲೆನಿಂತ ಮನೆಯಂಗಳವೇ ವಾರಣಾಸಿ ಎಂದು ನಂಬಿದವರು ಮಂಜಮ್ಮ ದೊಡ್ಡಮ್ಮ.

ಚಿನ್ನ ಬೆಳ್ಳಿ ಬಹುದೂರ 
ಅತ್ಯಂತ ಸರಳ ಜೀವನ ಅವರದ್ದು. ಒಂದಿನಿತು ಚಿನ್ನ, ಬೆಳ್ಳಿಯ ಚೂರು ಅವರ ಮೈಮೇಲಿರಲಿಲ್ಲ. ಆಭರಣಗಳನ್ನು
ಧರಿಸಿದವರಲ್ಲ. ಚಪ್ಪಲಿ ಹಾಕಿದವರೂ ಅಲ್ಲ. ವರ್ಷಕ್ಕೆ ಎರಡು ಕೆಂಪು ಚೌಕುಳಿ ಸೀರೆ, ಒಂದೆರಡು ಪಾಣಿ ಪಂಚೆ ಇವಿಷ್ಟೇ ಅವರ
ದಿನಚರಿಯ ವಸ್ತುಗಳು.

ವೈಶಾಖದ ದಿನಗಳಲ್ಲಿ ಹಪ್ಪಳ ಸೆಂಡಿಗೆ ಮಾಡಲು ಬಹಳ ಶ್ರಮಿಸುತ್ತಿದ್ದರು. ಹಲಸಿನ ಸೊಳೆ ಬಿಡಿಸುವುದು, ಹಪ್ಪಳ ಕುಟ್ಟುವುದು, ಒಣಗಿಸುವುದು, ಕಟ್ಟುಕಟ್ಟುವುದು ಇವೆಲ್ಲವನ್ನೂ ಕ್ರಮವಾಗಿ ಮಾಡುತ್ತಿದ್ದರು. ಅವರ ಕೆಲಸವೆಂದರೆ ನಾಜೂಕು. ಮಾಡಿದ ಕೆಲಸದಲ್ಲಿ ಲೋಪ ಹುಡುಕಲು ಅಸಾಧ್ಯ. ಪಾತ್ರೆ ಬೆಳಗಲಿ, ಬಟ್ಟೆ ಒಗೆಯಲಿ, ಧಾನ್ಯ ಬೀಸಲಿ, ಹಿಟ್ಟು ಕಡೆಯಲಿ, ಸಗಣಿ ಗುಡಿಸಲಿ, ಎಲ್ಲವೂ ಪರಿಪೂರ್ಣ. ಕೆಲಸವೆಂದರೆ ಅದರಲ್ಲೇ ತಲ್ಲೀನರು, ಅದೇ ಧ್ಯಾನ. ದೇಶ ಸುತ್ತಿದವರೂ ಅಲ್ಲ, ಕೋಶ ಓದಿದವರೂ ಅಲ್ಲ.

ಇಂತಹ ಸರಳ ಜೀವನ ನಡೆಸಿದ ಅದೆಷ್ಟೋ ಜೀವಗಳು ಹಳ್ಳಿಯ ಹುಟ್ಟಿ ಹಳ್ಳಿಯ ಬೆಳೆದು, ಹಳ್ಳಿಯ ಮಣ್ಣಾಗಿ ಹೋದದ್ದು ಇತಿಹಾಸ. ಇವರೆಲ್ಲರ ಒಡನಾಟದೊಂದಿಗೆ ಬೆಳೆದದ್ದರಿಂದಲೇ ನಮ್ಮ ಬಾಲ್ಯವು ಶ್ರೀಮಂತವಾಗಿತ್ತು. ಇಂತಹ ಹಿರಿಯರಿಂದಾಗಿ ಬದುಕೆಂದರೆ ದಾಹ ಮೋಹಗಳ ಸುಳಿಗೆ ಸಿಲುಕದೆ ಕಾಯಕ ಮಾಡುತ್ತಾ ಖುಷಿಪಡಬೇಕೆಂಬುದು ತಿಳಿಯಿತು.