Sunday, 15th December 2024

ಲಾಕ್‌ಡೌನ್‌ನಿಂದ ಲಸಿಕೆಯವರೆಗೆ

ಡಾ.ಕೆ.ಎಸ್‌.ಚೈತ್ರಾ

ಕಳೆದ ಒಂದು ವರ್ಷದ ಅವಧಿಯು ಐತಿಹಾಸಿಕ. ಹಿಂದೆಂದೂ ಕಾಣದಂತಹ ಲಾಕ್‌ಡೌನ್, ವೈರಸ್ ಸೋಂಕಿನ ಭಯಕ್ಕೆ ನಾವೆಲ್ಲರೂ ಸಾಕ್ಷಿಯಾದೆವು. ಲಾಕ್‌ಡೌನ್ ಸಂದರ್ಭದಲ್ಲಿ ಕರೋನಾ ಕುರಿತ ಮಾಹಿತಿಯನ್ನು ಪ್ರತಿ ದಿನ ಜನರಿಗೆ ನೀಡುವಂತಹ ದೂರದರ್ಶನ ಕಾರ್ಯಕ್ರಮ ವನ್ನು ನಡೆಸಿಕೊಟ್ಟ ವೈದ್ಯೆೆಯೊಬ್ಬರು ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ನಿರ್ಜನ ಬೀದಿಗಳಲ್ಲಿ ದಿನನಿತ್ಯ ಸಂಚರಿಸಿ, ದೂರದರ್ಶನ ಕಚೇರಿ ತಲುಪಿ, ತುಸು ಭಯದಿಂದಲೇ ಸಂದರ್ಶನ ನಡೆಸುತ್ತಿದ್ದ ಅವರ ಅನುಭವ ಬಹು ಅಪರೂಪದ್ದು.

ಸರಿಯಾಗಿ ಒಂದು ವರ್ಷದ ಹಿಂದೆ, ಅಂದರೆ 2020 ರ ಫೆಬ್ರವರಿಯಲ್ಲಿ ಕರೋನಾ ಬಗ್ಗೆೆ ಅಲ್ಲಲ್ಲಿ ಕೇಳಿ-ಓದಿ ಕುತೂಹಲ ಮೂಡಿದ್ದು ನಿಜವಾದರೂ, ಮೊದಮೊದಲಿಗೆ ಆತಂಕವಾಗಿರಲಿಲ್ಲ. ಎಲ್ಲಕ್ಕಿಂತ ಸುರಕ್ಷಿತವಾದ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಾವಿದ್ದೇವೆ ಎಂಬ ಅಹಂಕಾರವೂ ಅದಕ್ಕೆ ಕಾರಣವಾಗಿರಬಹುದು!

ಆದರೆ ಪ್ರಕೃತಿಯ ಮುಂದೆ ನಾವೆಷ್ಟು ಅಲ್ಪರು ಎಂದು ತಿಳಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಕರೋನಾ ಸೋಂಕು ಹರಡಬಹುದೆಂಬ ಸುದ್ದಿಯು ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿತು, ಇತಿಹಾಸದಲ್ಲಿ ಎಂದೂ ಕಾಣದಂತಹ ಬಿಗಿ ಲಾಕ್‌ಡೌನ್ ಜಾರಿಗೆ ಬಂತು, ಬೆಂಗಳೂರಿನ ಮತ್ತು ರಾಜ್ಯದ ಎಲ್ಲಾ ಊರುಗಳ ಬೀದಿಗಳು ನಿರ್ಜನವಾದವು. ಲಾಕ್‌ಡೌನ್ ಸಮಯದಲ್ಲಿ ದಂತವೈದ್ಯೆಯಾಗಿ, ನೃತ್ಯ ಶಿಕ್ಷಕಿಯಾಗಿ ವೃತ್ತಿ – ಪ್ರವತ್ತಿಗಳಿಗೆಲ್ಲ ಕೆಲ ಕಾಲ ನಿವೃತ್ತಿಯೇ ಗತಿಯಾ ಗಿತ್ತು !

ಆದರೆ ದೂರದರ್ಶನ ನಿರೂಪಕಿಯಾಗಿ ಇಂಥ ಸಮಯದಲ್ಲಿ ಕಾರ್ಯಕ್ರಮ ನಿರ್ವಹಿಸಿದ್ದು ಹೊಸ ಅನುಭವ. ಬೇರೆಲ್ಲ ಕಡೆ ಕರೋನಾ ಬಗ್ಗೆ ‘ಮರಣ ಮೃದಂಗ ’ ‘ರುದ್ರ ತಾಂಡವ’ ಎಂಬ ಅತಿರಂಜಿತ ವರದಿಗಳು ಬಿತ್ತರವಾಗುತ್ತಿದ್ದಾಗ ದೂರದರ್ಶನದಲ್ಲಿ, ಯಾವುದೇ ಟಿ.ಆರ್.ಪಿಗಾಗಿ ಅಲ್ಲದೇ (ಮನರಂಜನೆ ಮುಖ್ಯವಲ್ಲ) ಜನರಿಗೆ ವೈಜ್ಞಾನಿಕ, ನಿಖರ ಮಾಹಿತಿ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಲುಪಿಸಲು, ಪ್ರತಿದಿನವೂ ಕರೋನಾ ವಿಶೇಷ ಮಾಲಿಕೆಯನ್ನು ನಾಲ್ಕು ತಿಂಗಳ ಕಾಲ ಹಮ್ಮಿಕೊಳ್ಳಲಾಗಿತ್ತು.

ಹಿರಿಯ ವೈದ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಚಿವರು, ಪೋಲಿಸ್ ಅಧಿಕಾರಿಗಳು, ಆಯುಕ್ತರು, ಸೇವಾ ಕ್ಷೇತ್ರದ
ಸಿಬ್ಬಂದಿ ಹೀಗೆ ವಿವಿಧ ಕ್ಷೇತ್ರಗಳ ಪರಿಣತರು ಕರೋನಾ ಪರಿಣಾಮ ಮತ್ತು ಅದನ್ನು ನಿರ್ವಹಿಸಲು ತಂತಮ್ಮ ಇಲಾಖೆ ಕೈಗೊಂಡಿ ರುವ ಕ್ರಮಗಳ ಕುರಿತು ದಿನವೂ ನೇರ ಪ್ರಸಾರದ ಕಾರ್ಯಕ್ರಮಗಳಲ್ಲಿ ಜನರ ಪ್ರಶ್ನೆಗಳಿಗೆ ಉತ್ತರಿಸು ತ್ತಿದ್ದರು. ವೈದ್ಯ ಕ್ಷೇತ್ರದ ಲ್ಲಿದ್ದು, ಎರಡು ದಶಕಗಳ ಅನುಭವ ಹೊಂದಿರುವು ದರಿಂದ ಕಾರ್ಯಕ್ರಮ ನಿರ್ವಹಣೆಗೆ ನನ್ನನ್ನು ಕೇಳಿದ್ದರು.

ವೈದ್ಯ ವಿಜ್ಞಾನದ ಬರಹ, ಉಪನ್ಯಾಸ, ಕಾರ್ಯಕ್ರಮ ನಿರ್ವಹಣೆ ಇವೆಲ್ಲವೂ ನನ್ನ ವೃತ್ತಿಯ ಭಾಗವೇ ಎಂದು ಭಾವಿಸಿರುವುದರಿಂದ ಇದು ನನಗೆ ಹೆಮ್ಮೆಯೇ! ಆದರೆ ಮನೆಯಲ್ಲಿ ವೃದ್ಧ ಅತ್ತೆ-ಮಾವ, ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು  ಇರುವು ದರಿಂದ ಸ್ವಲ್ಪ ಆತಂಕ. ಧೈರ್ಯದಿಂದ ಎಂದು ಮೀಡಿಯಾ ಪಾಸ್ ಪಡೆದು, ದೂರದರ್ಶನದ ಕಾರಿನಲ್ಲಿ ಕುಳಿತು ಕಾರ್ಯಕ್ರಮಕ್ಕೆ ಹೋಗುವಾಗ ಕಿಟಕಿಯಿಂದ ಕಂಡ ನಿರ್ಜನ ರಸ್ತೆಗಳು, ಅಲ್ಲಲ್ಲಿ ಕಾಣುವ ಖಾಕಿ ಮುಸುಕು ಧಾರಿಗಳು ಭಯ ಹುಟ್ಟಿಸಿ, ಉಸಿರೂ ದೊಡ್ಡ ಶಬ್ದ ಎನ್ನುವ ಭಾವನೆ.

ಆಸ್ಪತ್ರೆ ನೆನಪಿಸುವ ಸನ್ನಿವೇಶ
ದೂರದರ್ಶನ ಕಚೇರಿಯಲ್ಲೂ ವಿಭಿನ್ನ ವಾತಾವರಣ. ಸದಾ ನಗುಮುಖದಿಂದ ಸ್ವಾಗತಿಸುವ ಸಿಬ್ಬಂದಿ, ಈಗ ಮಾಸ್ಕ್, ಗ್ಲೌಸ್ ಧರಿಸಿ ರೊಬೊಟ್‌ಗಳಂತೆ ಉಷ್ಣತೆ ಅಳೆದು, ಸಾನಿಟೈಸರ್ ಹಾಕಿ ಕಳಿಸುತ್ತಿದ್ದರು. ಒಳಗಡೆಯೂ ಜನರ ಓಡಾಟ, ಮಾತು-ಕತೆ ಇಲ್ಲ. ಸದಾ ಗಿಜಿಗುಡುವ, ಹರಟೆ-ನಗುವಿನ ಅಡ್ಡಾ, ಕ್ಯಾಂಟೀನ್ ಸಂಪೂರ್ಣ ಬಂದ್. ಪರಸ್ಪರ ಅಂತರ ಕಾಪಾಡಬೇಕು ಎಂಬ ಉದ್ದೇಶದಿಂದ ಪ್ರಸಾಧನ ಕೋಣೆಯೂ (ಮೇಕಪ್ ರೂಂ) ಖಾಲಿ. ಆಗಾಗ್ಗೆೆ ಸಿಗುತ್ತಿದ್ದ ಇತರ ಸಹೋದ್ಯೋಗಿಗಳ ಭೇಟಿಯಿಲ್ಲ.

ಅಕಸ್ಮಾತ್ ಎದುರಾದರೂ ಹೆದರುತ್ತಲೇ ‘ಹೇಗಿದ್ದೀರಿ?’ ಎಂಬ ಚುಟುಕಾದ ಪ್ರಶ್ನೆ. ಅತ್ತ ನೋಡಿದರೆ, ಸುದ್ದಿಮನೆಯಿಂದ ಬರೀ
ಸೋಂಕಿತರು, ಶಂಕಿತರು, ಸತ್ತವರ ಅಂಕಿ-ಅಂಶಗಳು. ದೂರದರ್ಶನದ ಸ್ಟುಡಿಯೋದಲ್ಲಿ ಕುರ್ಚಿ, ಟೇಬಲ್, ಮೈಕ್ ಎಲ್ಲವನ್ನೂ ಸಾನಿಟೈಸ್ ಮಾಡಿ ಒಂಥರಾ ಆಸ್ಪತ್ರೆಯ ಅನುಭವ. ಏಸಿ ಆಫ್ ಮಾಡಿದ್ದರಿಂದ ಪ್ರಖರ ಲೈಟ್ ಹಾಕಿದೊಡನೆ ಮಾಸ್ಕ್‌ ‌ನಲ್ಲಿ
ಬೇಯುವ ಅನುಭವ. ಸಂದರ್ಶನಕ್ಕೆ ಬರುವ ಅತಿಥಿಗಳೊಡನೆ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ.

ಮುಖ ಸರಿಯಾಗಿ ನೋಡದೇ, ಬಾಯಿ ಕಾಣದೇ ದೂರ ನಿಂತು ಮಾತನಾಡು ವುದು ಹೇಗೆ? ಇದೆಲ್ಲದರ ನಡುವೆಯೂ ಕಾರ್ಯಕ್ರಮ ಶುರುವಾಗುವ ಒಂದು ನಿಮಿಷ ಮೊದಲು ಮಾಸ್ಕ್‌‌ ತೆಗೆದು ಮುಖ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ, ಅಂತರ
ಕಾಪಾಡಿಕೊಂಡು ಯಾವುದೇ ವಿರಾಮ ಇಲ್ಲದೇ ಒಂದು ಗಂಟೆ ಕಾರ್ಯಕ್ರಮ ನಡೆಸುವುದು ನಿಜಕ್ಕೂ ಸವಾಲಿನ ಕೆಲಸ. ತೆರೆಯ ಮೇಲೆ ಕಾಣುವವರು ಒಬ್ಬರೋ ಇಬ್ಬರೋ. ಆದರೆ ಅದರ ಯಶಸ್ಸಿಗೆ, ನಿರ್ದೇಶಕರು, ಕಾರ್ಯಕ್ರಮ ನಿರ್ಮಾಪಕರು, ಸಹಾಯಕರು, ಕ್ಯಾಮೆರಾದವರು, ಕಂಪ್ಯೂಟರ್-ಫೋನ್ ಆಪರೇಟರ್ ಇವರೆಲ್ಲರ ಶ್ರಮ ಅಪಾರ. ಟೀಂವರ್ಕ್‌ನಲ್ಲಿ ಇವೆಲ್ಲವೂ ಸರಿಯಾಗಿ ನಡೆದರೂ ಕೆಲವು ಬಾರಿ ಕೊನೇ ಘಳಿಗೆಯಲ್ಲಿ ಅತಿಥಿಗಳು ಬರದಿರುವ ಸಂದರ್ಭ ಗಳೂ ಎದುರಾದವು. ಹೇಗೋ ಅದನ್ನೆಲ್ಲಾ ನಿಭಾಯಿಸಿ ತಿಂಗಳು ಗಟ್ಟಲೇ ಕರ್ತವ್ಯ ನಿಭಾಯಿಸಿದ ತೃಪ್ತಿ ನಮ್ಮದು.

ಪ್ರತಿಬಾರಿ ಮನೆಗೆ ಬಂದೊಡನೆ ಬಟ್ಟೆ ನೆನೆಸಿ ಬಿಸಿಲಲ್ಲಿ ಒಣಗಿಸಿ, ಬಿಸಿ ನೀರಲ್ಲಿ ತಲೆ ಸ್ನಾನ ಮಾಡಿದರೂ ಮನದಲ್ಲೇ ‘ಇಂದು ಸಂದರ್ಶನಕ್ಕೆ ಬಂದಿದ್ದ ಯಾರಿಗಾದರೂ ಸೋಂಕು ಇದ್ದರೆ?’ ಎಂದು ಒಳಗೊಳಗೇ ನಡುಗಿದ್ದೂ ಇದೆ. ಪ್ರತಿಯೊಬ್ಬರಿಗೂ
ಇನ್ನೊಬ್ಬರ ಮೇಲೆ ಸಂಶಯ; ಕೆಮ್ಮಿದರೆ ಖಳನಾಯಕ, ಸೀನಿದರೆ ವಿಲನ್! ಈ ನಡುವೆ ಕೇಂದ್ರದಲ್ಲಿ ಯಾರಿಗೋ ಕರೋನಾ ಇದ್ದುದ್ದರ ಪರಿಣಾಮ ಎಲ್ಲರಿಗೂ ಪರೀಕ್ಷೆ ಮಾಡಿಸಿ ನೆಗೆಟಿವ್ ಬಂದರೂ, ಹೊರಗೆ ಅನೇಕ ಪರಿಚಿತರ, ಆತ್ಮೀಯರ ಸಾವು-ನೋವು ಸಂಭವಿಸಿತು.

ಜನರಲ್ಲಿ ಧೈರ್ಯ ತುಂಬಿದ ಕ್ಷಣ
ನಮ್ಮೆಲ್ಲರ ಶ್ರಮಕ್ಕೆ ಸಾರ್ಥಕತೆ ಸಿಕ್ಕಿದ್ದು ಜನಸಾಮಾನ್ಯರ ಪ್ರತಿಕ್ರಿಯೆಯಿಂದ. ‘ಚಂದನ ದೂರದರ್ಶನ ನೋಡಿದ್ರೆೆ ಮಾತ್ರ ಹೆದರಿಕೆಯಾಗೋಲ್ಲ’ ‘ಸೋಂಕು ಬರದೇ ಇರುವ ಹಾಗೆ ಯಾವ ರೀತಿ ಎಚ್ಚರ ವಹಿಸಬೇಕು? ಅಂತ ಚಂದನ ನೋಡಿದರೆ ಗೊತ್ತಾಗುತ್ತೆ.’ ‘ಬೇರೆಯ ವರು ಹೇಳೋ ಹಾಗೆ ಈಗ್ಲೇ ಸಾಯ್ತೀವಿ ಅನ್ನಿಸಲ್ಲ’ ಇಂತಹ ಪ್ರತಿಕ್ರಿಯೆ ದೊರೆತಾಗ ಮನದಲ್ಲಿ ತೃಪ್ತಿ. ಇದು ನಿಜಕ್ಕೂ ದೂರದರ್ಶನದ ನಮ್ಮ ಕಾರ್ಯಕ್ರಮಗಳು, ಕರೋನಾ ಕುರಿತ ಚರ್ಚೆಗಳು ಜನರಿಗೆ ಸಮೀಪವಾದದ್ದಕ್ಕೆ ಸಾಕ್ಷಿ ಯಾಗಿತ್ತು.

ದಿನಗಳು ವಾರಗಳಾದವು, ವಾರಗಳು ತಿಂಗಳುಗಳಾಗಿ ವರ್ಷವೂ ಮುಗಿಯಿತು. ಹೊಸ ವರ್ಷಕ್ಕೆ ಹೊಸ ಸುದ್ದಿ; ಕರೋನಾ ತಡೆಯುವ ಲಸಿಕೆ ಲಭ್ಯ! ಜನವರಿ 16 ರಂದು ಪ್ರಪಂಚದಲ್ಲಿಯೇ ಅತಿ ದೊಡ್ಡ ಲಸಿಕಾ ಅಭಿಯಾನಕ್ಕೆ ದೆಹಲಿಯಲ್ಲಿ ಚಾಲನೆ ನೀಡಲಾಯಿತು. ಅದೇ ದಿನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಸಿಕಾ ಅಭಿಯಾನಕ್ಕೆ ರಾಜ್ಯದ  ಮುಖ್ಯಮಂತ್ರಿ ಯವರು ಚಾಲನೆ ನೀಡಿದರು. ಆ ಐತಿಹಾಸಿಕ ಅಭಿಯಾನದ ನೇರ ಪ್ರಸಾರದ ವೀಕ್ಷಕ ವಿವರಣೆ ಮತ್ತು ತದನಂತರದ ವರದಿಗೆ ಧ್ವನಿ ನೀಡಿದ ಹೆಮ್ಮೆ ನನ್ನದು. ಆ ದಿನ ಕಾರ್ಯಕ್ರಮ ಮಾಡುವಾಗ ಮನಸ್ಸಿನಲ್ಲಿ ಮಿಶ್ರ ಭಾವನೆಗಳು. ಕರೋನಾ ಬಂತು;
ಬದುಕಿನಲ್ಲಿ ಒಂದಷ್ಟು ಕಳೆಯಿತು, ಮತ್ತೊಂದಿಷ್ಟು ಕೂಡಿಸಿತು. ಆದರೆ ಕಲಿತಿದ್ದೇನು? ಹೊಸ ಸುರಕ್ಷಾ ಕ್ರಮಗಳೊಂದಿಗೆ ರೋಗಿಗಳ ಚಿಕಿತ್ಸೆ, ಟಿ.ವಿ.ಗೆ ಸ್ವತಃ ಮೇಕಪ್ ಮಾಡಿಕೊಳ್ಳುವುದು, ಮಾಹಿತಿ ಸಂಗ್ರಹಿಸಿ ವೈದ್ಯಕೀಯ ಲೇಖನ-ಉಪನ್ಯಾಸ-ಕಾರ್ಯಕ್ರಮ ನಿರ್ವಹಣೆ, ಆನ್ ಲೈನ್ ಡಾನ್ಸ್‌ ಕ್ಲಾಸ್ ಮತ್ತು ತಾಳ್ಮೆ!

ದಂತವೈದ್ಯೆಯಾದ ನಾನು ಈಗಾಗಲೇ ಲಸಿಕೆಯ ಮೊದಲ ಡೋಸ್ ಪಡೆದದ್ದಾಗಿದೆ. ಕರೋನಾದ ಹೆಸರಲ್ಲಿ, ಕಳೆದ ಹನ್ನೆರಡು ತಿಂಗಳುಗಳಲ್ಲಿ ಲಾಕ್‌ಡೌನ್‌ನಿಂದ ಲಸಿಕೆಯವರೆಗೆ ಕ್ರಮಿಸಿದ ಈ ಹಾದಿ ಸುಲಭವೇನಲ್ಲ. ಈ ಹಾದಿಯನ್ನು ಕ್ರಮಿಸುತ್ತಾ, ಲಾಕ್‌ ಡೌನ್ ಆರಂಭದ ದಿನಗಳಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡುತ್ತಾ, ಜನರೊಂದಿಗೆ ಸ್ಪಂದಿಸುತ್ತಾ ಕಲಿತ ಪಾಠ ಮರೆಯುವಂಥದ್ದೂ ಅಲ್ಲ!