Wednesday, 11th December 2024

Shridharamurthy N S column: ವಿದ್ವತ್ತಿನ ಮೇರು ಪರ್ವತ

ಒಡನಾಟ

ಶ್ರೀಧರಮೂರ್ತಿ ಎನ್.ಎಸ್

ಎಸ್.ಕೆ.ರಾಮಚಂದ್ರರಾವ್ ಅವರಿಗೆ ಒಂದು ಅಭಿನಂದನಾ ಗ್ರಂಥ ರೂಪಿಸುವ ಪ್ರಸ್ತಾಪ ಬಂದಿತು. ಬೇಡವೇ ಬೇಡ ಎಂದು ಮೊಂಡು ಹಿಡಿದವರನ್ನು ಹೇಗೋ ಒಪ್ಪಿಸಿದ್ದಾಗಿತ್ತು. ಆದರೆ ಒಂದೇ ವಾರದಲ್ಲಿ ಬೇಡ ಎಂದು ಬಿಟ್ಟರು. ಅವರ ಗುರುಗಳು ಕನಸಿನಲ್ಲಿ ಬಂದು ಇದೇನೋ ಹುಚ್ಚಾಟ ಎಂದರಂತೆ!

ನನ್ನ ಜೀವನದಲ್ಲಿ ದೊರಕಿದ ಪುಣ್ಯಗಳಲ್ಲಿ ಮುಖ್ಯವಾದದ್ದು ಪ್ರೊ.ಎಸ್.ಕೆ.ರಾಮಚಂದ್ರ ರಾವ್ ಅವರ ಬಳಿಯ ಶಿಷ್ಯತ್ವ . ಅದು ದೊರಕಿದ್ದೂ ಆಕಸ್ಮಿಕವಾಗಿ. ಈಶಾವಾಸ್ಯ ಉಪನಿಷತ್ತಿನ ಒಂದು ಶ್ಲೋಕದ ಕುರಿತು ಅನುಮಾನಕ್ಕಾಗಿ ಅವರನ್ನು ಭೇಟಿ ಮಾಡಿದ್ದೆ. ಅವರು ಇಡೀ ಉಪನಿಷತ್ತಿನ ಸಾರವನ್ನೇ ವಿವರಿಸಿದ್ದಲ್ಲದೆ. ಮುಂದೆ ನನಗೆ ಉಪನಿಷತ್ತಿನ ತರಗತಿಗಳನ್ನೇ ತೆಗೆದುಕೊಂಡರು. ಅವರು ಬರೀ ಉಪನಿಷತ್ತನ್ನು ಮಾತ್ರ ಕಲಿಸಲಿಲ್ಲ. ಬದುಕಿನ ಸೂಕ್ಷ್ಮಗಳನ್ನು ಕೂಡ ಕಲಿಸಿದರು. ‘ಮಲ್ಲಿಗೆ’ ಮಾಸತ್ರಿಕೆಯಲ್ಲಿ ನಾನಿದ್ದಾಗ ‘ವೇದಾಂತದ ಕತೆಗಳು’ ಎಂಬ ಮಾಲಿಕೆಯನ್ನೇ ಬರೆದು ಕೊಟ್ಟರು. ಅದರ ಪ್ರತಿ ಕಂತುಗಳನ್ನು ಅವರ ಮನೆಗೆ
ಹೋಗಿ ಪಡೆದು ಕೊಂಡು ಬರುತ್ತಿದ್ದಾಗ ದೊರಕಿದ ಉಪದೇಶ ಗಳು ನನ್ನ ಬದುಕಿಗೆ ನಿರಂತರ ಬೆಳಕಾದವು. ಕಥನದ್ದು ಒಂದು ನೆಲೆಯಾದರೆ ಅದರ ಹಿಂದಿನ ತಾತ್ವಿಕತೆಯದು ಇನ್ನೊಂದು ನೆಲೆ.

ಗಹನವಾದ ಈ ತಾತ್ವಿಕತೆಯನ್ನು ಅವರಷ್ಟು ಪರಿಣಾಮಕಾರಿಯಾಗಿ ಹೇಳುವವರು ಇನ್ನೊಬ್ಬರಿಲ್ಲವೇನೋ. (ಇದನ್ನು ಅವರ ಮಗ ಸುದರ್ಶನ್ ಪುಸ್ತಕ ರೂಪದಲ್ಲಿಯೂ ತಂದರು.) ಶಿಷ್ಯರಿಗೆ ಪ್ರೀತಿಯ ಗುರುಗಳಾದ ರಾಯರು, ತಪ್ಪು ಕಂಡಾಗ ಅಷ್ಟೇ ಕಠಿಣರಾಗುತ್ತಿದ್ದರು. ಯಾರೇ ತಪ್ಪು ಮಾಡಲಿ, ತಮ್ಮ ತಣ್ಣಗಿನ ಸ್ವರದಲ್ಲಿಯೇ ಅದನ್ನು ಖಚಿತವಾಗಿ ಹೇಳುತ್ತಿದ್ದರು. ಅವರ ಬರಹಗಳಲ್ಲಿಯೂ ಅಷ್ಟೇ, ಎಲ್ಲಿಯೂ ವೈಭವೀಕರಣ,
ಕೊಂಕು ಇಲ್ಲವೇ ಇಲ್ಲ. ಇಂತಹ ತಪ್ಪನ್ನು ನಾವು ಮಾಡಿದಾಗಲೂ ಮುಲಾಜಿಲ್ಲದೆ ತರಾಟೆಗೆ ತೆಗೆದು ಕೊಳ್ಳುತ್ತಿದ್ದರು. ಅವರಿಗೆ ಒಂದು ಅಭಿನಂದನಾ ಗ್ರಂಥ ರೂಪಿಸುವ ಪ್ರಸ್ತಾಪ ಬಂದಿತು.

ಬೇಡವೇ ಬೇಡ ಎಂದು ಮೊಂಡು ಹಿಡಿದವರನ್ನು ಹೇಗೋ ಒಪ್ಪಿಸಿದ್ದಾಗಿತ್ತು. ಆದರೆ ಒಂದೇ ವಾರದಲ್ಲಿ ಇಲ್ಲವೆಂದು ಬಿಟ್ಟರು. ಅವರ ಗುರುಗಳು ಕನಸಿನಲ್ಲಿ ಬಂದು ಇದೇನೋ ಹುಚ್ಚಾಟ ಎಂದರಂತೆ! ಅಭಿನವ ಗುಪ್ತ ಮತ್ತು ನಾದ ಮಾರ್ಗದ ಕುರಿತು ನನಗೆ ಅನೇಕ ಸೂಕ್ಷ್ಮಗಳನ್ನು ಅವರು ಕಲಿಸಿದರು. ಸಂಗೀತದಲ್ಲಿ ಕೂಡ ಅವರಿಗೆ ಅಪಾರ ವಿದ್ವತ್ತು. ವಕ್ರರಾಗಗಳ ಕುರಿತು ಒಮ್ಮೆ ಅವರು ನನ್ನ ಬಳಿ ಎರಡು ಗಂಟೆಗಳ ಮಾತನಾಡಿದ್ದು ನನ್ನ ಪೂರ್ವಜನ್ಮದ ಸುಕೃತವೇ ಸರಿ!

ಎಸ್.ಕೆ. ರಾಮಚಂದ್ರರಾವ್ ೧೯೨೫ರ ಸೆಪ್ಟೆಂಬರ್ ೪ರಂದು ಹಾಸನದಲ್ಲಿ ಜನಿಸಿದರು.(ಇದು ಅವರ ಜನ್ಮ ಶತಮಾನೋತ್ಸವದ ವರ್ಷ) ಅವರ ತಂದೆ ಶ್ರೀ ಕೃಷ್ಣ ನಾರಾಯಣರಾವ್ ಕಾವೇರಿ ನದಿ ತೀರದ ಹನಸೋಗೆ ಗ್ರಾಮಕ್ಕೆ ಸೇರಿದವರು. ಅವರ ತಾಯಿ ಕಮಲಾಬಾಯಿ ಅಂದಿನ ಮೈಸೂರು ಸಂಸ್ಥಾನದ ಸಾರ್ವಜನಿಕ ಇಲಾಖೆಯ ಡೆಪ್ಯುಟಿ ಡೈರೆಕ್ಟರ್ ಆಗಿದ್ದ ಕೆ. ನಾರಾಯಣರಾವ್ ಅವರ ಪುತ್ರಿ. ಬೆಂಗಳೂರಿನಲ್ಲಿದ್ದ ಈ ತಾತನ ಮನೆಯಲ್ಲಿಯೇ ರಾಮಚಂದ್ರರಾವ್ ಅವರ ಪ್ರಾರಂಭಿಕ ವಿದ್ಯಾಭ್ಯಾಸ ನೆರವೇರಿತು. ತಮ್ಮ ತಾತನವರು ನಿಧನರಾದ ಕಾರಣ ಹನ್ನೆರಡು ವಯಸ್ಸಿನ ಬಾಲಕ ರಾಮಚಂದ್ರರಾವ್ ತಮ್ಮ ತಂದೆ ತಾಯಿಯರಿದ್ದ ನಂಜನ ಗೂಡಿಗೆ ಬಂದು ಅಲ್ಲಿಯ ಪಾಠಶಾಲೆಯಲ್ಲಿ ತಮ್ಮ ಸಂಸ್ಕೃತಾಭ್ಯಾಸವನ್ನು ಮುಂದುವರೆಸಿದರು. ಅದಾದ ಒಂದು ವರ್ಷದಲ್ಲಿ ಅವರಿಗೆ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಚಂದ್ರಶೇಖರ ಭಾರತಿ ಸ್ವಾಮಿಗಳ ದರ್ಶನ ದೊರಕಿ, ಅವರ ಬದುಕಿನ ಮೇಲೆ ಹೊಸದಾದ ಬೆಳಕನ್ನೇ ತಂದಿತು. ಈ ಪ್ರಸಂಗವನ್ನು ವರ್ಣಿಸುವಾಗ ನಮ್ಮನ್ನು ಆ ಕಾಲಕ್ಕೇ ಕರೆದು ಕೊಂಡು ಹೋಗುತ್ತಿದ್ದರು. ಚಂದ್ರಶೇಖರ ಭಾರತಿಗಳ ಕುರಿತು ಅಧಿಕೃತ ವ್ಯಕ್ತಿಚಿತ್ರ ವನ್ನೂ ಅವರು ರಚಿಸಿದ್ದಾರೆ. ಮುಂದೆ ಶಂಕರಾಚಾರ್ಯರ ಪ್ರಸ್ತಾನತ್ರಯವನ್ನು ಅವರು ಬಹುಕಾಲ ಅಭ್ಯಾಸ ಮಾಡಿದರು.

ರಾಮಚಂದ್ರರಾವ್ ತಮ್ಮ ಹೈಸ್ಕೂಲಿನ ವಿದ್ಯಾಭ್ಯಾಸದ ನಂತರ ಮೈಸೂರಿನ ಯುವರಾಜಾ ಕಾಲೇಜು ಹಾಗೂ ಮಾನಸ ಗಂಗೋತ್ರಿಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿ ಮನಃ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಂದಿನ ದಿನಗಳಲ್ಲಿ  ತಮ್ಮ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ. ಎಂ. ಹಿರಿಯಣ್ಣ, ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಪ್ರೊ. ರಾಘವಾಚಾರ್, ಪ್ರಾಕೃತ ಹಾಗೂ ಸಂಗೀತ ಶಾಸ್ತ್ರ ಬೋಧಕರಾಗಿದ್ದ ರಾಳಪಲ್ಲಿ ಅನಂತಕೃಷ್ಣ ಶರ್ಮ ಅವರ ಕುರಿತು ರಾಮಚಂದ್ರ ರಾವ್ ಅವರಿಗೆ ಅಪಾರ ಅಭಿಮಾನ ಮತ್ತು ಭಕ್ತಿಭಾವಗಳಿತ್ತು, ಅವರೆಲ್ಲರ ಸಾರವನ್ನು ಹೀರಿದ ಮೂರ್ತರೂಪವಾಗಿ ಎಸ್.ಕೆ.ಆರ್. ನಮಗೆ ದೊರಕಿದ್ದರು. ಪದವಿ ಪಡೆದ ನಂತರ ರಾಮಚಂದ್ರರಾಯರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಇಂಡಸ್ಟ್ರಿಯಲ್ ಸೈಕಾಲಜಿ ವಿಭಾಗದಲ್ಲಿ ರಿಸರ್ಚ್‌ ಅಸಿಸ್ಟೆಂಟ್ ಹುದ್ದೆಗೆ ಸೇರಿ ಅಲ್ಲಿ ಡಾಕ್ಟರ್ ಎನ್. ಎಸ್. ಶ್ರೀನಿವಾಸ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡಿದರು.

ಇದೇ ಸಮಯದಲ್ಲಿಯೇ ಜೈನ ಬೌದ್ಧ ಧರ್ಮಗಳ ಕುರಿತೂ ಆಳವಾದ ಅಧ್ಯಯನ ನಡೆಸಿದರು. ಎಸ್ ಕೆ ರಾಮಚಂದ್ರ ರಾವ್ ಅವರಿಗೆ ಶಾಲಾ ದಿನಗಳಲ್ಲೇ ಚಿತ್ರಕಲೆ ಮತ್ತು ಶಿಲ್ಪಕಲೆಗಳಲ್ಲಿ ಆಸಕ್ತಿ ಉಂಟಾಗಿತ್ತು. ಹೀಗಾಗಿ ಮೇಣ, ಸಾಬೂನು ಮುಂತಾದವುಗಳಲ್ಲಿ ಶಿಲ್ಪಗಳನ್ನು ಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು. ಪೆನ್ಸಿಲ್ ಮತ್ತು ಚಾರ್‌ಕೋಲ್‌ನಲ್ಲಿ ಚಿತ್ರಬಿಡಿಸುವ ಕಲೆ ಕೂಡಾ ಅವರಿಗೆ ಹಸ್ತಗತವಾಗಿತ್ತು. ಖ್ಯಾತ ಕಲಾವಿದ ವೆಂಕಟಪ್ಪನವರ ಶಿಷ್ಯತ್ವ ಕೇಳಿದಾಗ ‘ಪೂರ್ಣ ಪ್ರಮಾಣದಲ್ಲಿ’ ಚಿತ್ರಕಲೆ ಕಲಿಯಲು ಬರಬೇಕೆಂಬ ಶರತ್ತು ಇಟ್ಟಿದ್ದರಿಂದ ಸಾಧ್ಯವಾಗಲಿಲ್ಲ.

೧೯೫೪ರಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸಂಸ್ಥೆ ಪ್ರಾರಂಭಗೊಂಡಾಗ ಆ ಸಂಸ್ಥೆಯ‌ ನಿರ್ದೇಶಕ ಹುದ್ದೆಯನ್ನು ವಹಿಸಿದ್ದ ಡಾ.ಎಂ.ವಿ.ಗೋವಿಂದಸ್ವಾಮಿ ಅವರು ಪ್ರೊ.ಎಸ್. ಕೆ ರಾಮಚಂದ್ರರಾವ್ ಅವರಿಗೆ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಹುದ್ದೆಯ ಆಹ್ವಾನ ನೀಡಿದರು. ಇಲ್ಲಿನ ಪಠ್ಯ ಬೋಧನೆಗಳಲ್ಲಿ ಭಾರತೀಯ ತತ್ವಚಿಂತನೆಗಳ ವಿಚಾರವೂ ಒಳಗೊಂಡಿತ್ತು. ಇದರಿಂದ ಪ್ರೇರಿತರಾದ ರಾಯರು ೧೯೬೨ರ ವರ್ಷದಲ್ಲಿ ‘ದಿ ಡೆವೆಲಪ್ಮೆಂಟ್ ಆಫ್ ಸೈಕಲಾಜಿಕಲ್ ಥಾಟ್ ಇನ್ ಇಂಡಿಯಾ’‌ ಎಂಬ ಗ್ರಂಥವನ್ನು ರಚಿಸಿದರು. ಪ್ರೊ.ಎಂ.ವಿ.ಗೋವಿಂದಸ್ವಾಮಿ ಅವರ ನಿಧನಾನಂತರದಲ್ಲಿ ಪ್ರೊ. ಎಸ್ ಕೆ ರಾಮಚಂದ್ರ ರಾವ್ ಅವರು ಡಿಪಾಟ್ಮೆಂಟ್ ಆಫ್ ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರ ಜವಾಬ್ದಾರಿಯನ್ನು ನಿರ್ವಹಿಸಿದರು. ಮಿಥಿಕ್ ಸೊಸೈಟಿಯಲ್ಲಿಯೂ ಕ್ರಿಯಾಶೀಲರಾಗಿದ್ದ ಅವರು ಅಲ್ಲಿನ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ‌ ಭಾರತೀಯ ದರ್ಶನ ಶಾಸಗಳ ಮೇಲೆ ಬೆಳಕು ಚೆಲ್ಲುವ ಹಲವಾರು ವಿದ್ವತ್ಪೂರ್ಣ ಲೇಖನಗಳನ್ನು ಪ್ರಕಟಿಸಿದರು.

೧೯೬೫ರ ವರ್ಷದಲ್ಲಿ ತಮ್ಮ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸೇವೆಯಿಂದ ಹೊರಬಂದ ರಾಮಚಂದ್ರರಾಯರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ‌ ಹಲವಾರು ವಿದ್ಯಾಸಂಸ್ಥೆಗಳಲ್ಲಿ ಮನಃಶಾಸ್ತ್ರ, ತತ್ವಶಾಸ್ತ್ರ, ಭಾರತೀಯ ದರ್ಶನ ಶಾಸ್ತ್ರಗಳನ್ನು ಬೋಧಿಸುವುದರ ಜೊತೆಗೆ ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ನಾಡಿಗೆ ಅವರ ಪ್ರವಚನ ಮತ್ತು ಬರಹದ ಬೆಳಕು ಈ ಮೂಲಕ ದೊರಕಿತು. ನಾನು ಎರಡು ಕೆಲಸಗಳನ್ನು ಮಾಡ ಬೇಕು ಎಂಬ ಆಗ್ರಹ ಅವರದಾಗಿತ್ತು. ಒಂದು ಸದ್ಗುರು ಶಂಕರಲಿಂಗ ಭಗವಾನರ ಉಪದೇಶಗಳ ವಿಶ್ಲೇಷಣೆ , ಇನ್ನೊಂದು ಚಿತ್ರಗೀತೆಗಳಲ್ಲಿ ಬಳಕೆಯಾಗಿರುವ ರಾಗಗಳ ವಿಶ್ಲೇಷಣೆ. ಇವೆರಡನ್ನೂ ಅವರ ಜೀವಿತ ಕಾಲದಲ್ಲಿ ಮಾಡಲಾಗಲಿಲ್ಲವೆನ್ನುವ ಕೊರಗು ನಿರಂತರವಾಗಿ ಕಾಡುತ್ತಲೇ ಇರುತ್ತದೆ. ಕೊನೆಯ ದಿನಗಳಲ್ಲಿ ಎಸ್.ಕೆ.ಆರ್.
ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಅವರನ್ನು ನೋಡಲು ಹೋದಾಗ ‘ಏನು ಸರ್, ಹೀಗೆ ಹಾಸಿಗೆ ಹಿಡಿದು ಬಿಟ್ಟಿರಿ’ ಎಂದರೆ ‘ನಾನು ಮಾಡಿದರೂ ಪರಿಪೂರ್ಣವಾಗಿಯೇ ಮಾಡುವನು’ ಎಂದರು. ಅಂತಹ ಹೊತ್ತಿನಲ್ಲಿಯೂ ಅವರ ಹಾಸ್ಯಪ್ರಜ್ಞೆ ಪ್ರಖರವಾಗಿಯೇ ಇತ್ತು! ನಮ್ಮ ಕಾಲದ ವಿಸ್ಮಯ ಎನ್ನಿಸಿ ಕೊಂಡಿದ್ದ ಎಸ್.ಕೆ.ಆರ್, ೨೦೦೬ರ ಫೆಬ್ರುವರಿ ೨ರಂದು ಈ ಲೋಕವನ್ನಗಲಿದರು.