Thursday, 12th December 2024

ಮುದ್ದುರಾಮನಿಗೆ ಸಹಸ್ರಚಂದ್ರ ದರ್ಶನ- ಮುಂದುವರಿದಿರುವ ಮುಕ್ತಕಗಳ ರಚನೆ

ಬೇದ್ರೆ ಮಂಜುನಾಥ ಮೈಸೂರು

ಸರಳ, ಸುಂದರ, ಸುಭಗ ಶೈಲಿಯಲ್ಲಿ ಮೂಡಿಬಂದಿರುವ ‘ಮುದ್ದುರಾಮನ ಮುಕ್ತಕ’ಗಳು ಮಹಾಕಾವ್ಯ ಸತ್ವ ಹೊಂದಿರುವ ದರ್ಶನ ಸಾಹಿತ್ಯ ಶರಧಿಯ ಅಪರೂಪದ ಮುತ್ತುಗಳಾ ಗಿವೆ. ಕವಿ ಕೆ.ಸಿ.ಶಿವಪ್ಪ ಅವರು ರಚಿಸಿದ ಮುದ್ದುರಾಮನ ವಚನಗಳ ಕನ್ನಡಕ್ಕೆ ಅಪರೂಪ, ಅನನ್ಯ. ಅವರು ರಚಿಸಿದ ಮೂವತ್ತು ಸಾವಿರ ಮುಕ್ತಕಗಳಲ್ಲಿ ಕೇವಲ ನಾಲ್ಕು ಸಾವಿರ ದಷ್ಟು ಮಾತ್ರ  ಮುದ್ದುರಾಮನ ಮನಸು, ಮುದ್ದುರಾಮನ ಬದುಕು-ಬೆಳಕು, ಮುದ್ದುರಾಮನ ಅರಿವು, ಮುದ್ದುರಾಮನ ನಲಿವು ಎಂಬ ಹೆಸರಿನ ಸಂಕಲನಗಳಾಗಿ ಪ್ರಕಟವಾಗಿದ್ದು ಉಳಿದ ಇಪ್ಪತ್ತಾರು ಸಾವಿರದಷ್ಟು ಪ್ರಕಟಣೆಯ ಹಾದಿಯಲ್ಲಿವೆ. ಬರವಣಿಗೆ ನಿರಂತರವಾಗಿ ನಡೆಯುತ್ತಿರುವುದರಿಂದ ಈ ಸಂಖ್ಯೆ ಇನ್ನೂ ಬೆಳೆಯುತ್ತಿದೆ. ಡಾ.ಕೆ. ಸಿ. ಶಿವಪ್ಪ ಅವರಿಗೆ ಇದೇ ಜುಲೈ ೨೬ಕ್ಕೆ ೮೫ ವರ್ಷಗಳು ತುಂಬುತ್ತಿವೆ (ಜನನ: ೨೭.೦೭. ೨೦೨೨). ಈಗಲೂ ಅವರು ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ, ಸಾಹಿತ್ಯ ಸೇವೆಯಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಕನ್ನಡದ ಈ ಅಪರೂಪದ ಕವಿಯ ಪರಿಚಯ ‘ವಿಶ್ವವಾಣಿ’ ಓದುಗರಿಗಾಗಿ.

ಸಾಧನೆಯ ಪರ್ವತಕೆ ಸೋಪಾನ ನೂರೆಂಟು;
ಏರಿ ಕೆಲ ಮೆಟ್ಟಿಲನು ಕುಳಿತರದು
ಸೋಲು.
ಸಾಗುತಿರಬೇಕು ನೀ ಶಿಖರ ತಲುಪುವ ತನಕ;
ಸೋತೆನೆಂದರೆ ಕೆಟ್ಟ – ಮುದ್ದುರಾಮ
ಕನ್ನಡದ ಪೂಜಾರಪ್ಪ ಹಿರೇಮಗಳೂರು ಕಣ್ಣನ್ ಅವರು ನಿತ್ಯವೂ, ಕೆ.ಶಿ.ಶಿವಪ್ಪ ರಚಿಸಿದ ಒಂದೊಂದು ಮುದ್ದುರಾಮನ
ಮುಕ್ತಕದ ವ್ಯಾಖ್ಯಾನ ಮಾಡುತ್ತಾ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅರಿವಿನ ದಾಸೋಹದಲ್ಲಿ ನಿರತರಾಗಿರುವ
ಘೋಡಗೇರಿಯ ಶಿವಾನಂದ ಮಠದ ಮಲ್ಲಯ್ಯ ಸ್ವಾಮಿಗಳು ಮುದ್ದುರಾಮ ಸ್ವಾಮೀಜಿ ಎಂದೇ ಜನಮಾನಸದಲ್ಲಿ ಚಿರಪರಿಚಿತ ರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಿತ್ಯವೂ ಮುದ್ದುರಾಮನ ಚಿತ್ರ ಚೌಪದಿ ಹಂಚಲಾಗುತ್ತಿದೆ. ಬಹುತೇಕ ಓದುಗ ರಿಗೆ ಮುದ್ದುರಾಮನ ಮುಕ್ತಕಗಳು ಒಂದಲ್ಲಾ ಒಂದು ಕಡೆ ಓದಲಿಕ್ಕೆ ದೊರೆಯುತ್ತಿವೆ. ಯೂಟ್ಯೂಬ್‌ನಲ್ಲಿ ಮುದ್ದುರಾಮನ ಮುಕ್ತಕಗಳ ವ್ಯಾಖ್ಯಾನ ಸರಣಿಯೇ ಲಭ್ಯ!

ಸರಳ, ಸುಂದರ, ಸುಭಗ ಶೈಲಿಯಲ್ಲಿ ಮೂಡಿಬಂದಿರುವ ಮುದ್ದುರಾಮನ ಮುಕ್ತಕಗಳು ಮಹಾಕಾವ್ಯ ಸತ್ವ ಹೊಂದಿರುವ ದರ್ಶನ ಸಾಹಿತ್ಯ ಶರಽಯ ಅಪರೂಪದ ಮುತ್ತು ಗಳಾಗಿವೆ.

ಕೆ.ಸಿ.ಶಿವಪ್ಪ ರಚಿಸಿದ ಮೂವತ್ತು ಸಾವಿರ ಮುಕ್ತಕಗಳಲ್ಲಿ ಕೇವಲ ನಾಲ್ಕು ಸಾವಿರದಷ್ಟು ಮಾತ್ರ ಮುದ್ದುರಾಮನ ಮನಸು, ಮುದ್ದುರಾಮನ ಬದುಕು-ಬೆಳಕು, ಮುದ್ದುರಾಮನ ಅರಿವು, ಮುದ್ದುರಾಮನ ನಲಿವು ಎಂಬ ಹೆಸರಿನ ಸಂಕಲನಗಳಾಗಿ ಪ್ರಕಟವಾಗಿದ್ದು ಉಳಿದ ಇಪ್ಪತ್ತಾರು ಸಾವಿರದಷ್ಟು ಪ್ರಕಟಣೆಯ ಹಾದಿಯಲ್ಲಿವೆ. ಬರವಣಿಗೆ ನಿರಂತರವಾಗಿ ನಡೆಯುತ್ತಿರುವುದರಿಂದ ಈ ಸಂಖ್ಯೆ ಇನ್ನೂ ಬೆಳೆಯುತ್ತಿದೆ.

ಬಹುಶಃ ಅವೆಲ್ಲವನ್ನೂ ಒಂದೇ ಗ್ರಂಥರೂಪದಲ್ಲಿ ಪ್ರಕಟಿಸಿದರೆ ಕನ್ನಡದ ಬೃಹತ್ ದರ್ಶನ ಸಾಹಿತ್ಯ ಸಂಕಲನವಾಗಿ ಹೊರಹೊಮ್ಮುವುದರಲ್ಲಿ ಎರಡು ಮಾತಿಲ್ಲ! ಇಷ್ಟೆಲ್ಲಾ ಮುಕ್ತಕಗಳನ್ನು ತಪಸ್ಸಿನಂತೆ ರಚಿಸುತ್ತಲೇ ಇರುವ ಮಾಗಿದ ಮನಸ್ಸಿನ ಸಂತ, ಕನ್ನಡದ ಗೀತಗೋವಿಂದ ಎಂದೆನಿಸಿರುವ ರಾಧಾ-ಮಾಧವ ರಚಿಸಿ ಕನ್ನಡದ ಜಯದೇವ ಎಂದು ಖ್ಯಾತರಾಗಿರುವ, ಎರಡು ಸಾವಿರಕ್ಕೂ ಹೆಚ್ಚು ಒಲವಿನ ಗೀತೆಗಳನ್ನು ರಚಿಸಿರುವ ಅಮರ ಪ್ರೇಮಿ, ಡಾ. ಕೆ. ಸಿ. ಶಿವಪ್ಪ ಅವರಿಗೆ ಇದೇ ಜುಲೈ ೨೬ಕ್ಕೆ ೮೫ ವರ್ಷಗಳು ತುಂಬುತ್ತಿವೆ (ಜನನ: ೨೭.೦೭.೨೦೨೨).

‘ವೀರನಾರಯಣನೆ ಕವಿ ಲಿಪಿಗಾರ ಕುವರವ್ಯಾಸ’ ಎಂದಂತೆ ‘ನಿನದಲ್ಲ ಪದಪುಂಜ ಯಾರದೋ ಕರುಣೆ ಅದು; ಬರಿ ನಿಮಿತ್ತವೋ ನೀನು – ಮುದ್ದುರಾಮ’ ಎಂದು ಶಿವಪ್ಪನವರು ವಿನಯದಿಂದ ನುಡಿಯುತ್ತಾರೆ.

ವಯಸು ಬಲಿತಂತೆಲ್ಲ ಮಾಗಿ ನಿಲುವುದು ಬದುಕು; ಬಾಳ ಗುರುತರ ಕೊಡುಗೆ ಅನುಭವದ ಗರಿಮೆ. ಎಸಗಿದಾ ಕೊನೆ ತಪ್ಪೆ ನಿನ್ನ ಜೀವನ ಗುರುವೊ! ಉಸಿರು ಕಲಿಕೆಯ ಮಂತ್ರ – ಮುದ್ದುರಾಮ

‘ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಶಿವಪ್ಪನವರ ಮುದ್ದುರಾಮನ ಮನಸು ಕೃತಿಗೆ ಸೂರ್ತಿಯೊದಗಿಸಿದೆಯೆ ಹೊರತು, ಇದು ಅದರ ಛಾಯೆಯೂ ಅಲ್ಲ, ಅನುಕರಣೆಯೂ ಅಲ್ಲ.

ಇದೊಂದು ಭಾವ ಭಾವನೆ ಚಿಂತನೆ ನೀತಿಸಂಹಿತೆ ಜೀವನ ಮೌಲ್ಯಗಳ ತವನಿಧಿಯಾಗಿದೆ. ಶಿವಪ್ಪನವರ ಲೋಕಾನುಭವ ವ್ಯಾಪ್ತಿ
ಯನ್ನು ಗಮನಿಸಿದಾಗ ಆಶ್ಚರ್ಯವಾಗುತ್ತದೆ. ಒಂದೊಂದು ಚೌಪದಿಯೂ ಲೋಕದ ಹೃದಯವನ್ನು, ಬದುಕಿನ ಪುಟಗಳನ್ನು,
ಮನುಷ್ಯ ಮನುಷ್ಯರ ಹಾಗೂ ಲೋಕ ಮತ್ತು ಮನುಷ್ಯರ ನಡುವಣ ಸಂಬಂಧವನ್ನು ಬಿಚ್ಚಿ ತೋರಿಸುತ್ತವೆ. ಸಾವಿರಾರು ವರ್ಷ ಗಳಿಂದ ಕವಿಗಳು, ಋಷಿಗಳು, ಸಂತರು, ತತ್ವಜ್ಞರು, ವಿಜ್ಞಾನಿಗಳು, ಚಿಂತಕರು ಲೋಕ ಮತ್ತು ಬದುಕುಗಳ ರಹಸ್ಯ ವನ್ನರಿಯು ವಲ್ಲಿ, ಹುಡುಕುವಲ್ಲಿ ನಿರತರಾಗಿದ್ದಾರೆ.

ಬದುಕಿನ ರಹಸ್ಯ ಕೈಗೆಟು ಕುವಂತೆ ತೋರಿದರೂ ಅದು ಮೃಗಜಲದಂತೆ ಮುಂದೆ ಮುಂದೆ ಹರಿಯುತ್ತದೆ. ಬದುಕನ್ನು ಅರ್ಥಮಾಡಿಕೊಳ್ಳಲು, ತಮ್ಮ ಅನುಭವವನ್ನು ಇತರರಿಗೆ ಹಂಚಿಕೊಳ್ಳಲು ಸಾವಿರಾರು ಚೌಪದಿಗಳ ಮೂಲಕ ಶಿವಪ್ಪನವರು ಪ್ರಯತ್ನಿಸಿದ್ದಾರೆ. ಮಹಾಕಾವ್ಯದ ಗುರಿಯೂ ಇದೇನೇ ಎಂಬುದನ್ನು ಯಾರೂ ಮರೆಯಲಾಗದು,’ ಎಂದಿದ್ದಾರೆ ಪ್ರೊ. ದೇಜಗೌ.

ಕನ್ನಡದ ಗೀತಗೋವಿಂದ ರಾಧಾ-ಮಾಧವ

ಕೆ.ಸಿ.ಶಿವಪ್ಪನವರು ೩೩ ಗೀತೆಗಳುಳ್ಳ, ನಾಲ್ಕು ಕ್ಯಾಸೆಟ್‌ಗಳ ಒಂದು ಸಂಪುಟ (ಮ್ಯೂಸಿಕ್ ಆಲ್ಬಂ) ಹೊರಬಂದಾಗ ಕನ್ನಡದ ಗೀತಗೋವಿಂದವಾಗಿ ಹರಿದದ್ದು ರಾಧಾ-ಮಾಧವ ಒಲವಿನ ಧಾರೆ! ಇಂಪಾದ ಗಾಯನ, ಅಪರೂಪದ ರೇಖಾಚಿತ್ರಗಳಿಂದೊ ಡಗೂಡಿ ಮುದ್ರಣಗೊಂಡು ೧೯೯೭ರಲ್ಲಿ ಬಿಡುಗಡೆಗೊಂಡ ಗೀತೆಗಳು ಓದುಗರನ್ನು, ಕೇಳುಗರನ್ನು ಒಟ್ಟಿಗೆ ಹಿಡಿದಿಟ್ಟವು.

ಮತ್ತೆ ಮತ್ತೆ ಕೇಳಬೇಕೆನಿಸುವ, ಜಯದೇವನ ಅಷ್ಟಪದಿಗಳ ಛಾಯೆಯನ್ನು ಕನ್ನಡದ ಓಘಕ್ಕೆ ತಕ್ಕಂತೆ ಒಲವಿನ ಗೀತೆಗಳಾಗಿ ಮರುಸೃಷ್ಟಿಸಿದ ಕೀರ್ತಿ ಶಿವಪ್ಪನವರಿಗೆ ಸೇರಬೇಕು.
ಸಾಕು ಇನಿಯನೆ ಸರಸ ಸವಿನುಡಿ
ನಗುತ ನೀ ಇರು ಅನುದಿನ.
ನೀನು ನಾನೇ, ನಾನು ನೀನೇ
ಎನಿತು ನೂತನ ಭಾವನೆ! (ನೀನು – ನಾನು)
ತುಟಿಯ ತೆರೆಯೆ ರುಚಿಯ ಜೇನು
ಇನಿಯನಮಿತ ಹರುಷಕೆ.
ನಯನ ತೆರೆಯೆ ಮಂದಹಾಸ
ಕುಸುಮ ಸ್ವಪ್ನ ಮೋದಕೆ. (ನಿತ್ಯ ಚೆಲುವು)
‘ಬೆಳುದಿಂಗಳಲ್ಲಿ ನಲಿವ ರಾಧೆ, ಕೊಳಲ ತುಟಿಗೆತ್ತಿದ ಕೃಷ್ಣ, ಅರಳಿ ಪರಿಮಳ ಬೀರುವ ಪುಷ್ಪಗಳು, ಅಂಥ ಹೂಗಳಿಗಿಂತ
ನವಿರಾದ ಭಾವಗಳು ಈ ಗೀತಗಳಲ್ಲಿವೆ. ಪ್ರಕೃತಿ ಸೌಂದರ್ಯದ ಆವರಣದಲ್ಲಿ ಮಂಜುಳ ನಿನಾದಗಳ ಉತ್ಸವ ಹೊರಡುತ್ತದೆ.
ಮೃದು ಕೋಮಲ ಮುರಳೀನಾದದ ಇಂಪಿಗೆ ಮನಸೋತು ರಾಧೆ ಕೃಷ್ಣನ ಬಳಿಗೆ ಇಲ್ಲಿನ ಬಹುತೇಕ ಕವನಗಳಲ್ಲಿ ಕೋಲ್ಮಿಂಚಾಗಿ ಬರುತ್ತಾಳೆ. ಕೃಷ್ಣ ರಾಧೆಯರ ಸರಸ ಸಲ್ಲಾಪಗಳು ಎಲ್ಲೋ ದೂರದಲ್ಲಿ ಕೇಳಿದ ಇನಿದನಿಯಂತೆ ಕಿವಿಗೆ ಬೀಳುತ್ತವೆ.

ಮನಸ್ಸು ಹರ್ಷಗೊಳ್ಳುತ್ತದೆ. ಅಭಿನಯವೂ ಸೇರಿದಾಗ ಈ ಗೀತಗಳ ಅರ್ಥ ಎತ್ತರಕ್ಕೆ ಹೋಗುತ್ತದೆ. ರಾಧಾ-ಕೃಷ್ಣರ ಒಲುಮೆ ಯನ್ನು ಕುರಿತ ಈ ನೂರು ಗೀತೆಗಳ ನಿಜವಾದ ಹೊಸತನ ಇರುವುದು ವಸ್ತುವಿನಲ್ಲಲ್ಲ, ಅದರ ಅಭಿವ್ಯಕ್ತಿಯಲ್ಲಿ, ಪದ ಲಾಲಿತ್ಯ, ಇಂಪಾದ ದನಿ, ನಿರ್ಮಲವಾದ ಸಂತೋಷ ಈ ಕೃತಿಯ ಪ್ರಮುಖ ಲಕ್ಷಣಗಳಾಗಿವೆ,’ ಎಂದಿದ್ದಾರೆ ಒಲವಿನ ಕವಿ ಕೆ. ಎಸ್. ನರಸಿಂಹಸ್ವಾಮಿ.

ಕಾಲ ಕಾಲಕೆ ನುಡಿಸು ಮುರಳಿಯ ಅಂತರಂಗದ ನಂಟಿಗೆ.

ಜೀವ ಬೆರೆಯಲಿ ಬಯಲಿನೊಂದಿಗೆ ನಾದ ನಲುಮೆಯ ನಿಯತಿಗೆ. (ಎಚ್ಚರ)

‘ಶಿವಪ್ಪನವರ ರಾಧಾಮಾಧವ ಒಂದು ಪದಾಮೃತ ಸಮುದ್ರವೇ. ಅವರ ಕವಿತೆಗಳು ಸಂಕ್ಷಿಪ್ತವಾದ ಭಾವೋದ್ರೇಕ ವಿವರಗಳು; ಬಾಹ್ಯಾಭಿವ್ಯಕ್ತಿಯಲ್ಲಿ ಹನಿಗಳು, ಅಭ್ಯಂತರ ಪ್ರಕೃತಿಯಲ್ಲಿ ಸಾಗರೋಪಮವಾದುವು. ಅನುಭವ ವ್ಯಕ್ತಿಗತವಾದುದು; ಆದರೆ ಅದರ ಭಾವಗಾಂಭೀರ್ಯ, ರಸಬಂಧನಾ ಭಿನಿವೇಶನ ಸರ್ವಸಾಧಾರಣವಾದುದು. ಸಂಗ್ರಹವಾದ ಭಾವ ವಿಸ್ತತವಾಗಲು, ಘನೀಭೂತವಾದ ರಸ ದ್ರವೀಭೂತವಾಗಿ ಹರಿಯಲು ಗೇಯಗುಣ ನೆರವಾಗುತ್ತದೆ.

ಇದು ಭಾವ ಭಾವನೆ ಕಲ್ಪನೆ ಅಭಿವ್ಯಕ್ತಿ ಎಲ್ಲ ದೃಷ್ಟಿಗಳಿಂದಲೂ ಶ್ರೇಷ್ಠ ಆಧ್ಯಾತ್ಮಿಕ ಪ್ರೇಮಗೀತೆಗಳ ಸಂಕಲನ. ಅoಂಡ, ನಿರ್ಮಲ, ದೈವೀಪ್ರೇಮದ ವಿಶ್ವರೂಪ ದರ್ಶನ ಇಲ್ಲಿದೆ. ಇಲ್ಲಿ ಪ್ರೇಮವೇ ಪರಮಾರ್ಥವಾಗಿ ಕಾಣಿಸಿಕೊಳ್ಳುತ್ತದೆ. ಇಲ್ಲಿನ ಪ್ರೇಮ
ಕಾಮವಲ್ಲ; ರಾಧಾಮಾಧವರು ರತಿ ಮನ್ಮಥರಲ್ಲ. ಭಾವುಕರ ಹೃದಯಗಳನ್ನು ಸೆಳೆದುಕೊಳ್ಳುವ ಒಲುಮೆ-ಚೆಲುವುಗಳ
ಪ್ರತೀಕಗಳು’ ಎಂದಿದ್ದಾರೆ ಸಾ. ಕೃ. ರಾಮಚಂದ್ರರಾಯರು.

ಹೃದಯ ಸೂರೆಗೊಂಡ ರಾಗರತಿ

೧೯೮೦ರ ದಶಕದಲ್ಲಿ ಒಲುಮೆ ಗೀತೆಗಳ ಕ್ಯಾಸೆಟ್‌ಗಳಿಗೆ ಭಾರೀ ಬೇಡಿಕೆ. ಕನ್ನಡ ಭಾವಗೀತೆಗಳು ಜನಮನ ಸೂರೆಗೊಂಡ
ಹೊಸತರಲ್ಲಿ ಕಾಲೇಜುಗಳಲ್ಲಿ, ಹಾಸ್ಟೆಲ್‌ಗಳಲ್ಲಿ, ಟೀ ಅಂಗಡಿಗಳಲ್ಲಿ ಮೂಡಿಬರುತ್ತಿದ್ದ ಪ್ರೇಮಗೀತೆಗಳನ್ನು ಆಲಿಸದ
ಯುವಕ ಯುವತಿಯರು ನತದೃಷ್ಟರೇ ಸರಿ!

ಹದಿಹರೆಯದ ಹಸಿಬಿಸಿ ಪ್ರೇಮನಿವೇದನೆಗೆ ಬಳಕೆಯಾಗುತ್ತಿದ್ದದ್ದು ಈ ಗೀತೆಗಳ ಸಾಲುಗಳೇ! ಅದರಲ್ಲೂ ಎಸ್.ಪಿ.  ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಪಿ. ಶೈಲಜಾ ಅವರ ದನಿಗಳಲ್ಲಿ ಮೂಡಿಬಂದ, ಶಿವಪ್ಪ ವಿರಚಿತ ‘ರಾಗರತಿ’ ಕ್ಯಾಸೆಟ್‌ನ ಎಲ್ಲ ಹಾಡುಗಳು ನಾಲಿಗೆಯ ಮೇಲೆ ನಲಿದಾಡುತ್ತಾ, ಕಾಲೇಜು ಕಾರಿಡಾರ್ ಗಳಲ್ಲಿ ಹರಿದಾಡುತ್ತಿದ್ದ ದಿನಗಳನ್ನು ನೆನೆಸಿಕೊಂಡರೆ ಈಗಲೂ ಹೃದಯ ಪುಳಕಗೊಳ್ಳುತ್ತದೆ. ಒಂದೊಂದು ಹಾಡೂ ಹಾಡಲ್ಲ, ಭಾವನೆಗಳ ಸ್ರೋತವೇ ಆಗಿದ್ದು ಜುಗಲ್‌ಬಂದಿಯಾಗಿ
ನಲಿದದ್ದೂ ಇದೆ!

ನೀ ನಡೆವ ಹಾದಿಯಲಿ
ತಲೆಗೆ ನಿರಿ ಕೊಡೆಯಾಗಿ
ಹಿತ ನೆರಳ ತರುವಾಸೆ;
ನೀ ನಿದ್ದೆ ಹೋದಾಗ
ಮೆತ್ತನೆಯ ದಿಂಬಾಗಿ
ತೋಳ ಚಾಚುವ ಆಸೆ. (ನನಗಾಸೆ)

ಗೆಳತಿ ಮುನಿಸಿಕೊಳ್ಳುವುದು, ಗೆಳೆಯ ಗೋಗರೆದು ಮುನಿಸು ತೊರೆಯಲು ಹೇಳುವುದಕ್ಕೆ ರಾಗರತಿಯ ಗೀತೆಯನ್ನೇ ಬಳಸಿದವರು ಹಲವರು!

ಮುನಿಯದಿರು ಓ ಗೆಳತಿ ಬಹುಕಾಲ ನನ್ನೊಡನೆ ಮನವನದ ಹೂ ಬಾಡಿ ಮುದುರುವುದು ಸರಸರನೆ.
ನಾವೇನು ತಾರೆಗಳೆ ಸಾವಿರದ ರವಿಶಶಿಯೆ? ಕಾಲನಿಗೆ ಎದುರಾದ ಮಕುಟಗಳ ನಾನರಿಯೆ. (ಜೀವಸಖಿ)

ಮುಗ್ಧ ಪ್ರೇಮಿಯ ಸವಿಗನಸಿನ ಕವನ ಹದಿಹರೆಯದವರ
ಕನಸಿನಲ್ಲೂ ಕಾಡಿದ್ದು ಸುಳ್ಳಲ್ಲ!
ಕನಸುಗಳ ಕಾಣುತ್ತ ಮುಗುದೆಮನ ಅರಳಿರಲು
ಅಬ್ಬರದ ಬಿರುಸೇಕೆ ಕಲ್ಪನೆಯ ರಸಲತೆಗೆ? (ರಸಲತೆ)
ಮುಗುದೆ ಮಲಗಿಹಳು ಬಾಚಿ ಬಯಕೆಗಳ,
ನೆನೆದು ನೆಪುಗಳ ನಾಚಿ ನಸುನಗುತ. (ಅನುರಾಗ)

ಅನುರಾಗದ ಧಾರೆ ರಾಗರತಿ ಸಂಕಲನದಲ್ಲಿನ ೪೬ ಗೀತೆಗಳಲ್ಲಿ ಆಯ್ದ ಕೆಲವನ್ನು ಕ್ಯಾಸೆಟ್ ಮತ್ತು ಎಲ್.ಪಿ. ರೂಪದಲ್ಲಿ
ಪ್ರಕಟಿಸಿದ ಲಹರಿ ಸಂಸ್ಥೆಯ ಹಾಡುಗಳನ್ನು ಯೂಟ್ಯೂಬ್‌ನಲ್ಲಿ ಈಗ ಆಲಿಸಬಹುದು.

ಒಲವಿನ ಕವಿ ಶಿವಪ್ಪ
‘ನನ್ನ ಮೊದಲ ಹತ್ತಾರು ವರ್ಷಗಳ ಅವಽಯಲ್ಲಿ ರಚಿತವಾದ ಕವಿತೆಗಳಿಗೆ ವಸ್ತುವೆಂದರೆ ಒಲುಮೆ. ಒಲವದೇನೆಂಬುದು
ತಾರ್ಕಿಕವಾಗಿ ದನಿ ಎತ್ತಿ ಒದರಾಡುವ ಕೂಗಾಟ-ಕಿರುಚಾಟದ ಅಭಿವ್ಯಕ್ತಿಯಲ್ಲ. ಅದೊಂದು ಉಲ್ಲಾಸಕೆಡೆಮಾಡುವ ರಾಗಾಲಾಪ, ಸುಹೃದ್ ಸಲ್ಲಾಪ; ನೇಹನಂಬಿಕೆ, ಬಾಂಧವ್ಯ ಬೆಸುಗೆಯ ಸಬಲ ಕೊಂಡಿ. ಅದು ಸಾಧನೆಗೆ ಸೂರ್ತಿ, ಜೀವಂತಿಕೆಗೆ ಸಂಜೀವಿನಿ. ಕತ್ತಲೆಯ ಜಗತ್ತಿನಲ್ಲೊಂದು ನಂದದ ನಂದಾದೀಪ. ಮನಸು ಕುಗ್ಗಿದಾಗ, ಜೀವ ಸೋತಾಗ ಸಾಂತ್ವನ ನೀಡುವ ನೆಚ್ಚಿನ ಸಂಗಾತಿ, ಆತ್ಮೀಯ ಒಡನಾಡಿ. ಒಲುಮೆ ರಾಗ ಮಿಡಿದಾಗ ಸದನ ನಂದಗೋಕುಲ.

ಚೆಲುವು ಎಲ್ಲೊ ನಲಿವು ಅಲ್ಲಿ! ಈ ಹೊತ್ತಿನಲ್ಲಿ ಬಡವಾದ ಶ್ವಾಸಕ್ಕೆ ಪ್ರಾಣತುಂಬುವ ವಿಶ್ವಾಸದ ವಸ್ತುವೆಂದರೆ ಒಲುಮೆ. ಇದು
ನವಋತುವಿನ ವಸಂತ ಕೋಗಿಲೆಯ ಇಂಚರ; ಚೆಲುವಿನ ಚಿಲುಮೆಯ ಉದ್ಗಾರ.. ಆ ಬಗೆಯ ಉತ್ಕಟ ಪ್ರೀತಿಯೇ ಅಲ್ಲಲ್ಲಿ ಕಂಡಕಂಡ ಕಾಗದದ ತುಣುಕುಗಳ ಮೇಲೆ ಕುಳಿತಲ್ಲಿ, ನಿಂತಲ್ಲಿ ಕವನದ ರೂಪದಲ್ಲಿ ಹೊರಹೊಮ್ಮಿತು. ಎಲ್ಲೊ ಒಂದು
ಕೊಂಬೆಯ ಮೇಲೆ ನನ್ನದೂ ಒಂದು ದನಿಯಾಯಿತು,’ ಎನ್ನುತ್ತಾರೆ ಒಲವನ್ನೇ ಉಸಿರಾಡುವ ಕವಿ ಶಿವಪ್ಪನವರು.

‘ತೀವ್ರವಾಗಿ ಪ್ರೀತಿಸುವ ಮನಸ್ಸು ಮಾತ್ರ ಪ್ರೇಮಗೀತೆಗಳನ್ನು ಬರೆಯಬಲ್ಲುದು’ ಎನ್ನುವ ಡಿ.ಆರ್. ನಾಗರಾಜ್ ಅವರ ಮಾತನ್ನು ಸಮರ್ಥಿಸುವಂತೆ ಒಲುಮೆ ಕುರಿತ ೫೦೪ ಕವಿತೆಗಳು ಕೆ.ಸಿ.ಎಸ್. ಸಮಗ್ರಕಾವ್ಯದ ಮೊದಲ ಸಂಪುಟ ದಲ್ಲಿವೆ. ಎರಡನೆಯ ಸಂಪುಟ ಜೀವನ, ಚಿಂತನ, ಪ್ರಕೃತಿ, ದೈವ ಹಾಗೂ ಅನುಭಾವ ಕುರಿತ ೫೮೧ ಕವಿತೆಗಳನ್ನು ಒಳಗೊಂಡಿದೆ. ಹೀಗೆ ಒಟ್ಟು ೧೦೮೫ ಕವಿತೆಗಳು ಎರಡು ಸಂಪುಟಗಳ ೧೫೨೪ ಪುಟಗಳಲ್ಲಿ ಕಾಣಿಸಿಕೊಂಡಿವೆ. ಇತ್ತೀಚಿನ ವರ್ಷಗಳಲ್ಲಿ ರಚಿತವಾಗಿರುವ ಸುಮಾರು ೫೦೦-೬೦೦ ಕವಿತೆಗಳು ಸಂಪುಟ ೩ ರಲ್ಲಿ ಅಡಕಗೊಳ್ಳಲು ಕಾಯುತ್ತಿವೆ!

ಶಿಸ್ತಿನ ಪುಸ್ತಕ ಸೇವಕ ಶಿವಪ್ಪ
೨೬.೦೭.೧೯೩೭ರಲ್ಲಿ ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯ ಶಾಲಾ ಮಾಸ್ತರರಾಗಿದ್ದ ಕೆ.ಪಿ. ಚಿಕ್ಕವೀರಯ್ಯ – ಶಿವಮ್ಮ ದಂಪತಿಗಳಿಗೆ ರಾಮಸಮುದ್ರದಲ್ಲಿ ಜನಿಸಿದ ಮಗ ಕೂಸಣ್ಣ, ಚಿಕ್ಕಂದಿನಲ್ಲಿಯೇ ತಾಯಿಯಿಲ್ಲದ ತಬ್ಬಲಿಯಾದರೂ, ಅಜ್ಜಿ ಮತ್ತು ತಂದೆಯ ಆರೈಕೆಯಲ್ಲಿ ಬೆಳೆದರು. ಚಾಮರಾಜನಗರದ ಪ್ರೌಢಶಾಲೆಯ ವ್ಯಾಸಂಗ ಮುಗಿಸಿ ಮೈಸೂರಿನ ಯುವರಾಜ, ಮಹಾರಾಜ ಕಾಲೇಜುಗಳಲ್ಲಿ ಆರು ವರ್ಷಗಳ ಕಾಲ ಬಿಎಸ್‌ಸಿ (ಆನರ‍್ಸ್), ಎಂಎಸ್‌ಸಿ ಪದವಿ, ಜೊತೆಗೆ -ಂಚ್ ಮತ್ತು ಸೋಷಿಯಲ್ ಸೈನ್ಸ್ ಡಿಪ್ಲೊಮಾ ಗಳಿಸಿದರು.

ಡಾ.ಪಿ.ಎಸ್. ಸಂಪತ್ಕುಮಾರಾಚಾರ್ಯರಿಂದ ಸಂಸ್ಕೃತ, ಚಕ್ರವರ್ತಿ ರಾಜಗೋಪಾಲಾಚಾರ‍್ಯರಿಂದ ಹಿಂದಿ, ತಂದೆಯಿಂದ ಪಡೆದುಕೊಂಡ ಸಾಹಿತ್ಯ ಪ್ರೀತಿ ಮತ್ತು ಕಾವ್ಯ ವ್ಯಾಸಂಗದ ಆಸಕ್ತಿ ಬೆಳೆಸಿಕೊಂಡು ಜಗದ್ಗುರು ಶಿವರಾತ್ರಿ ರಾಜೇಂದ್ರ ಸ್ವಾಮಿ ಗಳವರ ಕೃಪಾಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಬೆಳೆದ ಶಿವಪ್ಪನವರು ಮೈಸೂರಿನ ತರಬೇತಿ ಮಹಾವಿದ್ಯಾಲಯದಲ್ಲಿ
ಹಿಂದಿ ಅಧ್ಯಾಪಕರಾಗಿ ಸೇವೆ ಆರಂಭಿಸಿದರು.

ಮುಂದೆ ಮದರಾಸಿನಲ್ಲಿನ ಕೇಂದ್ರ ಚರ್ಮ ಸಂಶೋಧನಾಲಯದಲ್ಲಿ ಉದ್ಯೋಗಕ್ಕೆ ಸೇರಿದಾಗ, ಭಾರತೀಯ ತೊಗಲಿನ ಇತಿಹಾಸ ಕುರಿತು ಪಿ.ಎಚ್.ಡಿ. ಅಧ್ಯಯನಕ್ಕಾಗಿ ಹೆಸರು ನೋಂದಾಯಿಸಿದರೂ ಅಧ್ಯಯನ ಅರ್ಧಕ್ಕೇ ನಿಂತದ್ದು ಚರ್ಮ ಉದ್ಯಮ ಕ್ಷೇತ್ರಕ್ಕೆ ಆದ ನಷ್ಟವೇ ಸರಿ. ೧೯೬೯ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ನಿರ್ದೇಶಕರಾಗಿ ಸೇವೆಗೆ ಸೇರಿ ಪ್ರಕಾಶನ ಕ್ಷೇತ್ರದಲ್ಲಿ, ಶೈಕ್ಷಣಿಕ-ಸಾಂಸ್ಕೃತಿಕ-ಸಾಮಾಜಿಕ ಸಂಸ್ಥೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಜನಪ್ರಿಯರಾದರು.

ಕನ್ನಡ ಸಂಸ್ಕೃತಿ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. ಆಕಾಶವಾಣಿಯ ಹೂಮಳೆ ಕಾರ್ಯಕ್ರಮಕ್ಕಾಗಿ ಲೇಖನ, ರೂಪಕಗಳ ರಚಿಸಿದ್ದೇ ಅಲ್ಲದೆ ಚಿಂತನ, ಯುವವಾಣಿ, ನವಸುಮ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಇವರನ್ನು ಮುಖ್ಯವಾಗಿ ಪ್ರೇಮ ಕವಿ, ಗೇಯ ಕವಿ, ಅನುಭಾವ ಕವಿ ಎಂದೇ ಗುರುತಿಸಲಾಗುತ್ತದೆ.

ಚಲನಶೀಲ – ಚಿಂತನಶೀಲ
ಸ್ನಿಗ್ದ ಮಂದಹಾಸ, ಸದಾ ಚಟುವಟಿಕೆಯ, ಶಿಸ್ತಿನ ಸರಳ ಜೀವನ ನಡೆಸುತ್ತಿರುವ ಶಿವಪ್ಪನವರು ಮೈಸೂರಿನ ಕನಕದಾಸ ನಗರದಲ್ಲಿ ನೆಲೆಸಿದ್ದು ಸಾಹಿತ್ಯಾಸಕ್ತರಿಗೆ, ಯುವಜನರಿಗೆ, ಜಿಜ್ಞಾಸುಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಆಧ್ಯಾತ್ಮಿಕ ಸಾಧಕರೊಡನೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಆತ್ಮೀಯತೆಯ ಮೂರ್ತಿವೆತ್ತಂತಿರುವ ಶಿವಪ್ಪನವರು ಭಾರತದ ಹಲವು ರಾಜ್ಯಗಳಲ್ಲಿ, ಅಮೆರಿಕಾ, ಯೂರೋಪಿನ ಹಲವು ರಾಷ್ಟ್ರಗಳು, ಮೆಕ್ಸಿಕೊ, ಸಿಂಗಾಪುರ್, ಇಂಡೋನೇಷ್ಯಾ, ಮೊದಲಾದ
ದೇಶಗಳಲ್ಲಿ ಸಂಚರಿಸಿದ್ದಾರೆ.

೮೫ ವಸಂತಗಳನ್ನು ಪೂರೈಸುತ್ತಿರುವ, ಈಗಲೂ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವ, ಸಾಹಿತ್ಯ ದಾಸೋಹ
ನಡೆಸಿರುವ ಕೆ.ಸಿ. ಶಿವಪ್ಪನವರಿಗೆ ನೂರ್ಕಾಲ ಬಾಳಿರೆಂದು ಶುಭ ಹಾರೈಸೋಣ.

ಕನಸ ಮಾರುವ ಚೆಲುವ, ಹಾಡ ನಿಲ್ಲಿಸಬೇಡ
ರಾಗದೆಳೆ ನೂಲುತಿರು, ಸಿರಿಗನಸ ಹಂಚುತಿರು (ರಾಗದೆಳೆ)

ಕೆ. ಸಿ. ಶಿವಪ್ಪ ಅವರ ಕೃತಿಗಳು
ರಾಗರತಿ, ಅನುರಾಗ, ರಾಧಾಮಾಧವ, ಚಿತ್ತಿಭಿತ್ತಿ, ಚಿತ್ತವೃತ್ತಿ, ಚಿತ್ರಾಂಬರ, ಚೆಂಬೆಳಕು, ಚಿದಾನಂದ, ಚೆಲುವೆ, ಚಂದ್ರಿಕೆ, ಚಾರುಲತೆ, ಚಿತ್ರಪತ್ರ (೧೨ ಕವನ ಸಂಕಲನಗಳು – ಎರಡು ಸಮಗ್ರ ಕಾವ್ಯ ಸಂಪುಟ ಗಳು), ಮುದ್ದುರಾಮನ ಮನಸು, ಮುದ್ದುರಾಮನ ಬದುಕು-ಬೆಳಕು, ಮುದ್ದುರಾಮನ ಅರಿವು, ಮುದ್ದುರಾಮನ ನಲಿವು (೪ ಚೌಪದಿ ಸಂಕಲನಗಳು), ಬದುಕಿ ಗೊಂದು ಭರವಸೆ – ೧೦೮ ಪ್ರಬಂಧಗಳು, ಚಿತ್ತ ಚಿತ್ತಾರ – ೮೧ ನೈಜ ಕಥೆಗಳು (ವ್ಯಕ್ತಿತ್ವ ವಿಕಸನ ಕೃತಿಗಳು), ಜೀವಸತ್ವಗಳು, ಬೆಡಗಿನ ಬಾಟಿಕ್, ಭೂಮಿ, ಶುಕ್ರದೆಸೆ (ಅನುವಾದ), ಹೋಮಿ ಭಾಭಾ (ಕನ್ನಡ/ಇಂಗ್ಲಿಷ್/ಹಿಂದಿ ಭಾಷೆಗಳಲ್ಲಿ ಜೀವನ
ಚರಿತ್ರೆ), ಬಾಳಬಣ್ಣ (ಆಕಾಶವಾಣಿ ಚಿಂತನಗಳು), ಪಂಚತಂತ್ರದ ಕಥೆಗಳು, ವಿನಯ ಕನ್ನಡ ಭಾರತಿ ಕೃತಿಗಳ ಜೊತೆಗೆ ಹಲವು ಕೃತಿಗಳ ಸಂಪಾದಕರಾಗಿದ್ದಾರೆ. ಇನ್ನೂ ಹಲವು ಕೃತಿಗಳನ್ನು ಸಂಪಾದಿಸಿ, ರಚಿಸಿದ್ದಾರೆ. ಇದೀಗ ೮೫ನೇ ವಯಸ್ಸಿನಲ್ಲಿ ಪ್ರಭುಶಂಕರ್ ಅವರ ಸಮಗ್ರ ಸಂಪುಟಗಳ ಸಂಪಾದನೆ ಮಾಡಿದ್ದಾರೆ.

ಪ್ರಶಸ್ತಿ, ಗೌರವಗಳು
ಡಿ.ವಿ.ಜಿ. ಮುಕ್ತಕ ಸಾಹಿತ್ಯ ಪ್ರಶಸ್ತಿ, ಕುಲಪತಿ ಕೆ.ಎಂ. ಮುನ್ಷಿ ಸನ್ಮಾನ, ರಮಣಶ್ರೀ ಶರಣ ಪ್ರಶಸ್ತಿ, ಬಸವ ವೇದಿಕೆಯ ವಚನ ಸಾಹಿತ್ಯಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸುವರ್ಣ ಗೌರವ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ, ದಶಮಾನೋತ್ಸವ ಹೊಯ್ಸಳ ಪ್ರಶಸ್ತಿ, ಭಾರತ ಸರ್ಕಾರದ ಎಕ್ಸೆಲೆನ್ಸ್ ಇನ್ ಪ್ರಿಂಟಿಂಗ್ ಅವಾರ್ಡ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ದಸರಾ ಕವಿಗೋಷ್ಠಿಗಳ ಅಧ್ಯಕ್ಷತೆ, ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ
ಕೆ.ಸಿ. ಶಿವಪ್ಪನವರು ಭಾಜನರಾಗಿದ್ದಾರೆ.