ಆಕಸ್ಮಿಕವಾಗಿ ಕೈ ಹಿಡಿದ ರಾಜಕೀಯ ನಾಟಕ: ಮುಖ್ಯಮಂತ್ರಿ
ಮುಖ್ಯಮಂತ್ರಿ ಚಂದ್ರು ಅವರ ಹೆಸರಿನಲ್ಲಿ ಹಲವು ದಾಖಲೆಗಳಿವೆ. ನಾಟಕದಲ್ಲಿ ಮುಖ್ಯಮಂತ್ರಿಯ ಪಾತ್ರ ಮಾಡಿ, ಅದರ ಜನಪ್ರಿಯತೆಯಲ್ಲೇ ರಾಜಕೀಯ ಪ್ರವೇಶಿಸಿದ ಮುಖ್ಯಮಂತ್ರಿ ಚಂದ್ರು ಅವರು, ನಂತರವೂ ನಟನೆಯನ್ನು ಬಿಡಲಿಲ್ಲ. ನಾಟಕ ಮತ್ತು ಚಲನ ಚಿತ್ರಗಳಲ್ಲಿ ನಿರಂತರವಾಗಿ ಅಭಿನಯಿಸಿದ ಅವರು, ಇಂದಿಗೂ ಮುಖ್ಯಮಂತ್ರಿ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸುತ್ತಾರೆ. ಗಂಭೀರ ಎನಿಸಿದ್ದ ಮೂಲ ನಾಟಕವು, ಕನ್ನಡದಲ್ಲಿ ಹಾಸ್ಯಲೇಪಿತ ನಾಟಕವಾಗಿದ್ದು ಚಂದ್ರು ಅವರ ಅಭಿನಯದಿಂದ. ೧೯೮೦ರ ದಶಕದಲ್ಲಿ ಅವರ ಅಭಿನಯದ ‘ಮುಖ್ಯಮಂತ್ರಿ’ ನಾಟಕವು ಬರೆದ ದಾಖಲೆಗಳಿಗೆ ಲೆಕ್ಕವಿಲ್ಲ!
ಮುಖ್ಯಮಂತ್ರಿ ಚಂದ್ರು ಅವರು ಈಗ ತಮ್ಮ ಬದುಕಿನ ನೆನಪುಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಅವರ ಆತ್ಮಕಥೆಯ ಮೊದಲ ಭಾಗ ಎನಿಸಿದ ‘ರಂಗವನದ ಚಂದ್ರತಾರೆ’ ಹೊಸ ಪುಸ್ತಕದಲ್ಲಿ ತಮ್ಮ ಹಲವು ಅನುಭವಗಳನ್ನು ಹಾಸ್ಯಮಿಶ್ರಿತವಾಗಿ ತೆರೆದಿಟ್ಟಿ ದ್ದಾರೆ. ಅದರ ಆಯ್ದಭಾಗಗಳು ‘ವಿಶ್ವವಾಣಿ’ಯ ಓದುಗರಿಗಾಗಿ.
ಕಲಾಗಂಗೋತ್ರಿ ತಂಡದ ಪ್ರಮುಖ ನಾಟಕಗಳಲ್ಲಿ ‘ಮುಖ್ಯಮಂತ್ರಿ’ಯೂ ಒಂದು. ಇದರ ರೂವಾರಿ ಡಾ.ಬಿ.ವಿ. ರಾಜಾರಾಂ. ಈ ನಾಟಕವನ್ನು ಹುಡುಕಿ ತೆಗೆದುಕೊಂಡಿದ್ದಲ್ಲ. ಅದಾಗಲೇ ತಂಡ ಮೂರು ನಾಟಕಗಳನ್ನು ಮಾಡಿತ್ತು. ಗೆಳೆಯರೂ ಲೇಖಕರೂ ಆದ ಟಿ.ಎಸ್.ಲೋಹಿತಾಶ್ವ ಅವರು ‘ಸಮುದಾಯ’ ತಂಡದಿಂದ ಜನಪ್ರಿಯ ನಟರಾಗಿದ್ದರು. ಆಗಾಗ ಸಮುದಾಯ ರಂಗತಂಡದಲ್ಲಿ ನಾನೂ ಪಾತ್ರ ಮಾಡುತ್ತಿದ್ದು ದರಿಂದ ಲೋಹಿತಾಶ್ವ ಅವರೊಂದಿಗೆ ಗೆಳೆತನ ಬೆಳೆಯಿತು.
ಲೋಹಿತಾಶ್ವ ಅವರಿಗೆ ಖ್ಯಾತ ನಾಟಕಕಾರ ರಣಜಿತ್ ಕಪೂರ್ ವಿರಚಿತ ಹಿಂದಿಯ ‘ಮುಖ್ಯಮಂತ್ರಿ’ ನಾಟಕದ ಮಾಹಿತಿ ಸಿಕ್ಕಿತು. ಇದರ ಪ್ರತಿಯನ್ನು ತರಿಸಿಕೊಂಡು ಓದಿ, ಆಸಕ್ತಿ ಹೆಚ್ಚಿಸಿಕೊಂಡು ಕನ್ನಡಕ್ಕೆ ಅನುವಾದಿಸಿ ಕನ್ನಡದಲ್ಲಿ ಕಲಾಗಂಗೋತ್ರಿ ತಂಡಕ್ಕೆ ಮಾಡಿಸುವ ಆಸೆ ವ್ಯಕ್ತಪಡಿಸಿದರು. ರಾಜಾರಾಂ ಅವರಿಗೆ ವರ್ಷಕ್ಕೆ ೩-೪ ನಾಟಕ ಪ್ರದರ್ಶಿಸುವ ಹುಚ್ಚಿತ್ತು. ಇದಕ್ಕಾಗಿ ಲೋಹಿತಾಶ್ವ ಅವರನ್ನು ನಾಟಕ ಓದಲು ಆಹ್ವಾನಿಸಿದರು.
ನಾನು, ರಾಜಾರಾಂ, ಶ್ರೀನಿವಾಸ ಮೇಷ್ಟ್ರು ಎದುರು ಲೋಹಿತಾಶ್ವ ಅವರು ನಾಟಕ ಓದಿದರು. ಪ್ರಾಮಾಣಿಕವಾಗಿ ಹೇಳ ಬೇಕೆಂದರೆ, ಲೋಹಿತಾಶ್ವ ಅವರು ಓದಿದ್ದು ಇಷ್ಟವಾಯಿತು. ಆದರೆ ನನಗೆ ನಾಟಕ ಅರ್ಥವಾಗಲಿಲ್ಲ. ಮೌನವಾಗಿದ್ದೆ. ರಾಜಾರಾಂ ಹಾಗೂ ಶ್ರೀನಿವಾಸ ಮೇಷ್ಟ್ರಿಗೆ ನಾಟಕ ಆಡುವ ಉಮೇದು ಬಂತು. ಅವರಿಬ್ಬರ ಸಹಮತಕ್ಕೆ ಒಪ್ಪಿದೆ. ಈ ನಾಟಕ ಹಿಂದಿಯಲ್ಲಿ ಅದಾಗಲೇ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪ್ರದರ್ಶನಗೊಂಡಿತ್ತು.
ಲೋಹಿತಾಶ್ವ ಅವರು ಪ್ರೀತಿಯಿಂದ ಕರಾರು ಹಾಕಿದರು. ‘ನಿಮ್ಮ ತಂಡದಿಂದಲೇ ನಾಟಕ ಪ್ರದರ್ಶನಗೊಳ್ಳಲಿ. ಆದರೆ ನಾನು ಮುಖ್ಯಮಂತ್ರಿ ಪಾತ್ರ ಮಾಡುವೆ’ ಎಂದರು. ‘ಲೋಹಿತಾಶ್ವ ಅವರು ಮುಖ್ಯಮಂತ್ರಿ ಪಾತ್ರ ಹಾಗೂ ರಾಜಾರಾಂ ಅವರು ಪಕ್ಷದ ಅಧ್ಯಕ್ಷ ಪಾತ್ರ ಮಾಡಿದರೆ ಸೂಕ್ತ. ನಾನು ನಿರ್ದೇಶನ ಮಾಡುವೆ’ ಎಂದೆ. ಇದೆಲ್ಲ ನಡೆದುದು ೧೯೮೦ರ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ. ೧೯೮೦ರ ಡಿಸೆಂಬರ್ ೪ರಿಂದ ೧೦ರ ವರೆಗೆ ‘ಮುಖ್ಯಮಂತ್ರಿ’ ನಾಟಕದ ಸತತ ಪ್ರದರ್ಶನಗಳು ಬೆಂಗಳೂರಿನ
ರವೀಂದ್ರ ಕಲಾಕ್ಷೇತ್ರದ ಹಿಂಬದಿಯ ಸಂಸ ಬಯಲು ರಂಗಮಂದಿರದಲ್ಲಿ ನಿಗದಿಯಾಗಿದ್ದವು.
ನಂತರ ಬೆಂಗಳೂರು ವಿಶ್ವವಿದ್ಯಾಲಯದ ಡಿಡಿಎಂ ವಿಭಾಗದ ಬಸ್ ಗ್ಯಾರೇಜಿನಲ್ಲಿ ೪೫ ದಿನಗಳವರೆಗೆ ತಾಲೀಮು ನಡೆಯಿತು. ನಾಟಕದ ಪ್ರದರ್ಶನ ಇನ್ನು ಹತ್ತು ದಿನಗಳಿರುವಾಗ ನನಗೆ ಹಾಗೂ ಲೋಹಿತಾಶ್ವ ಅವರಿಗೆ ಜ್ವರ ಬಂತು. ಆಗ ಲೋಹಿತಾಶ್ವ ಅವರು ತುಮಕೂರಿನಿಂದ ನಿತ್ಯ ಬಂದು ಹೋಗುತ್ತಿದ್ದರು. ಜ್ವರ ಬಂದಾಗ ರಜೆ ಹಾಕಿ ಬೆಂಗಳೂರಿನ ಲಾಡ್ಜ್‌ನಲ್ಲಿ ಉಳಿದರು. ಅವರೊಂದಿಗೆ ನಾಟಕದ ಕುರಿತು ಚರ್ಚಿಸಲು ಅವರ ರೂಮಲ್ಲೇ ಉಳಿಯುತ್ತಿದ್ದೆ. ೩-೪ ದಿನಗಳಾದ ನಂತರ ನಾನು ವಾಸಿಯಾದೆ. ಆದರೆ ಲೋಹಿತಾಶ್ವ ಅವರಿಗೆ ಟೈಫಾಯ್ಡ್ ಆಗಿತ್ತು. ಈ ಸ್ಥಿತಿಯಲ್ಲಿ ಅವರು ಪಾತ್ರ ಮಾಡುವ ಹಾಗಿರಲಿಲ್ಲ.
ರಾಜಾರಾಂ ಅವರೊಂದಿಗೆ ಚರ್ಚಿಸಿದ ನಂತರ ನಾಟಕದ ಪ್ರದರ್ಶನವನ್ನು ಮುಂದೂ ಡೋಣವೆಂದು ಲೋಹಿತಾಶ್ವ ಅವರಿಗೆ ಹೇಳಿದೆವು. ಅವರು ಒಪ್ಪದೆ, ‘ಯಾರ ಕೈಲಾದರೂ ನನ್ನ ಪಾತ್ರ ಮಾಡಿಸಿ, ನಾಟಕ ನಿಲ್ಲುವುದು ಬೇಡ’ ಎಂದು ಹಟ ಹಿಡಿದರು. ಅಲ್ಲದೆ ‘ಮುಂದೆ ನಾನೇ ಮಾಡುವೆ’ ಎಂದರು.
ನಾನೇ ಆದೆ ಮುಖ್ಯಮಂತ್ರಿ!
ಆಗ ಮುಖ್ಯಮಂತ್ರಿ ಪಾತ್ರದ ಕುರಿತು ಚರ್ಚೆ ಶುರುವಾಗಿ, ರಾಜಾರಾಂ ಅವರನ್ನು ಮುಖ್ಯಮಂತ್ರಿ ಪಾತ್ರ ಮಾಡಲು ಒತ್ತಾಯಿಸಿ ದಾಗ ಅವರು ಒಪ್ಪಲಿಲ್ಲ. ಬೇರೆ ತಂಡಗಳ ಪ್ರಮುಖ ಕಲಾವಿದರ ಕುರಿತು ಚರ್ಚಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ನನ್ನ ತಲೆಗೇ ಬಂತು. ನಾಟಕ ಕೆಟ್ಟರೂ ಚಿಂತೆಯಿಲ್ಲ, ಪ್ರದರ್ಶನ ನಿಲ್ಲಿಸುವುದು ಬೇಡವೆಂದಾಯಿತು. ಭಂಡ ಧೈರ್ಯ ನನಗಿದ್ದುದರಿಂದ ಒಪ್ಪಿದೆ. ಆದರೆ ನಿರ್ದೇಶನಕ್ಕೆ ಒಪ್ಪಲಿಲ್ಲ. ರಾಜಾರಾಂ ಅವರು ಇಬ್ಬರೂ ಸೇರಿ ನಿರ್ದೇಶಿಸೋಣವೆಂದರೂ ಬೇಡವೆಂದೆ.
ಎಂಟು ಹತ್ತು ದಿನಗಳಲ್ಲಿ ನಾಟಕ ಪ್ರದರ್ಶನ ಇರುವುದರಿಂದ ನಾನು ಒಪ್ಪಲಿಲ್ಲ. ಆದರೆ ಕರಾರೊಂದು ಹಾಕಿದೆ. ಅದು
‘ಲೋಹಿತಾಶ್ವ ಅವರ ಹಾಗೆ ನನಗೆ ಪಾತ್ರ ಮಾಡಲಾಗದು. ನನ್ನದೇ ಛಾಪು ಮೂಡಿಸುವೆ. ಸಂಭಾಷಣೆ ಮರೆತರೂ ಮತ್ತೇನೋ
ಸೇರಿಸಿಕೊಂಡು ನಾಟಕ ಮುಗಿಸುವೆ. ಚೆನ್ನಾಗಿ ಬಂದರೆ ನನ್ನ ಅದೃಷ್ಟ, ಚೆನ್ನಾಗಿ ಬರದಿದ್ದರೆ ನಿಮ್ಮ ದುರದೃಷ್ಟ’ ಎಂದೆ. ಒಪ್ಪಿದರು.
ಇದೆಲ್ಲವೂ ಲೋಹಿತಾಶ್ವ ಅವರ ಒಪ್ಪಿಗೆ ಮೇರೆಗೆ ನಡೆಯಿತು. ಹೇಗೋ ನಾಟಕ ಮುಗಿಸಬೇಕೆಂಬ ಆತುರದಲ್ಲಿದ್ದೆವು. ಪೋಸ್ಟರ್ ಹಂಚಲಾಗಿತ್ತು, ಪ್ರಚಾರ ಬಿರುಸಾಗಿತ್ತು. ರಂಗತಂಡಗಳಲ್ಲಿ ಕುತೂಹಲ ಹೆಚ್ಚಿತ್ತು. ಆದರೆ ಅನಿರೀಕ್ಷಿತವಾಗಿ ನಾಟಕ ನಿಲ್ಲಿಸುವಂಥ ಪರಿಸ್ಥಿತಿ ಬಂತು. ಹೇಗೆಂದರೆ ಪ್ರೇಮಾ ಕಾರಂತರು ಹೇಳಿಕೆಯೊಂದು ನೀಡಿದ್ದರು ‘ಈ ನಾಟಕವನ್ನು ನಾನು ಮಾಡಿಸುತ್ತಿರುವೆ. ಎನ್‌ಎಸ್‌ಡಿ ಸ್ಕ್ರಿಪ್ಟ್, ಎಲ್ಲವೂ ತೀರ್ಮಾನವಾಗಿದೆ ’ಎಂದು. ಜೊತೆಗೆ ನಾಟಕ ನಿಲ್ಲಿಸಲು ಕಾನೂನಿನ ಪ್ರಕಾರ ಯತ್ನಿಸುತ್ತಾರೆನ್ನುವ ಸುದ್ದಿ ಹರಡಿತು.
ಆದರೆ ನಾಟಕ ಪ್ರದರ್ಶನಕ್ಕೆ ಎರಡು ದಿನಗಳು ಬಾಕಿ ಇತ್ತು. ಅತ್ತ ಲೋಹಿತಾಶ್ವ ಅವರಿಗೆ ಅನಾರೋಗ್ಯ. ಇತ್ತ ಪ್ರೇಮಾ ಕಾರಂತರ
ಹೇಳಿಕೆ. ಅವರು ನಾಟಕಕ್ಕೆ ತಡೆಯಾಜ್ಞೆ ತರುತ್ತಾರೆಂಬ ಆತಂಕ. ಇದರೊಂದಿಗೆ ಡಿಸೆಂಬರ್ ಚಳಿ ಮಳೆ ಬರಬಹುದೆಂಬ ಸೂಚನೆ ಇತ್ತು. ಜೊತೆಗೆ ನಾಟಕಕ್ಕೆ ನಾನು ಪೂರ್ತಿ ತಯಾರಾಗಿರಲಿಲ್ಲ. ಹೀಗಿದ್ದಾಗ ಯಾವುದೇ ರೀತಿಯಲ್ಲಿ ನಾಟಕ ಪ್ರದರ್ಶನ ನಿಂತರೆ ಒಳ್ಳೆಯದೆ, ನಾವೇ ನಿಲ್ಲಿಸಿದೆವೆಂಬ ಅಪವಾದದಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಅನುಕಂಪವೂ ಸಿಗಬಹುದು ಎಂದು ಕೊಂಡು ಕೊನೆಯ ಪ್ರಯತ್ನವೆಂದು ರಾಜಾರಾಂ ಅವರೊಂದಿಗೆ ಬಿ.ವಿ.ಕಾರಂತರ ಮನೆಗೆ ಹೋದೆವು. ಅಲ್ಲಿ ಪ್ರೇಮಾ ಕಾರಂತರ ಭೇಟಿಯೂ ಆಯಿತು. ಆರಂಭದಲ್ಲಿ ಸೌಜನ್ಯದ ಮಾತಿನ ನಂತರ ಪ್ರೇಮಾ ಅವರು ‘ನಿಮಗೆ ಯಾರು ಪರವಾನಗಿ ಕೊಟ್ಟಿದ್ದು? ನಾನು ಎನ್‌ಎಸ್‌ಡಿಯವಳು. ಇದು ಎನ್‌ಎಸ್‌ಡಿ ನಾಟಕ.
ನಿಮಗೆ ಯಾರು ಸ್ಕ್ರಿಪ್ಟ್ ಕೊಟ್ಟಿದ್ದು? ಇದರ ಪರಿಣಾಮ ಏನಾಗುತ್ತೆ ಗೊತ್ತಾ ನಿಮಗೆ?’ ಎಂದು ಗುಡುಗಿದರು. ನಾವು ಸೌಜನ್ಯದಿಂದ ‘ಸಿಟ್ಟು ಮಾಡಿಕೊಳ್ಳಬೇಡಿ ಮೇಡಮ್. ನೀವು ನಾಟಕ ಆಡಿಸುವ ಮಾಹಿತಿ ನಮಗೆ ಇರಲಿಲ್ಲ. ಸ್ವಲ್ಪ ಮುಂಚೆ ತಿಳಿಸಿದ್ದರೆ ನಿಲ್ಲಿಸುತ್ತಿದ್ದೆವು. ಎರಡೇ ದಿನದಲ್ಲಿ ಪ್ರದರ್ಶನವಿದೆ. ಈಗ ಹೇಗೆ ನಿಲ್ಲಿಸೋದು? ಈ ಪ್ರದರ್ಶನದ ನಂತರ ನೀವೂ ಮಾಡಿಸಿ’ ಎಂದೆವು. ಅವರು ಜಗ್ಗಲಿಲ್ಲ, ಬಗ್ಗಲಿಲ್ಲ.
ರಾಜಾರಾಂ ಮನಸ್ಸಿನಲ್ಲಿ ಏನಾದರಾಗಲಿ ನಾಟಕ ಮಾಡೋಣವೆಂದು. ನನ್ನ ಮನದೊಳಗೆ ಏನೇ ಆಗಲಿ, ನಾಟಕ ನಿಲ್ಲಲಿ ಎನ್ನುವುದು. ಇಷ್ಟರಲ್ಲಿ ಬಿ.ವಿ.ಕಾರಂತರಿಗೆ ಗೊತ್ತಾಗಿ ಅವರೂ ಮಾತುಕತೆಯಲ್ಲಿ ಭಾಗಿಯಾದರು. ‘ನಾಟಕ ಆಡುವ ಕುರಿತು ತಿಳಿಸಬೇಕಿತ್ತು. ಥಿಯೇಟರ್ ಕುರಿತು ಎಥಿಕ್ಸ್ ಇರಬೇಕಿತ್ತು. ಪ್ರೇಮಾ ನಿನಗೂ ಬುದ್ಧಿಯಿಲ್ಲ. ಅವರು ನಾಟಕ ಆಡಲಿ. ನೀನೂ ನಾಟಕ ಮಾಡಿಸು. ಸದ್ಯ ಅವರು ನಾಟಕ ಪ್ರದರ್ಶಿಸಲಿ. ಇಬ್ಬರೂ ಕುಳಿತು ನಾಟಕ ನೋಡೋಣ’ ಎಂದು ಹಾರೈಸಿದರು. ಆಗ ದುಃಖವಾಗಿದ್ದು ನಂಗೆ. ನಾಟಕ ಆಡಬೇಕಾದ ಅನಿವಾರ್ಯತೆಗೆ. ನಂತರ ಹಗಲುರಾತ್ರಿ ಶ್ರೀನಿವಾಸ ಮೇಷ್ಟ್ರು, ರಾಜಾರಾಂ ಅವರು ವಿಶ್ವಾಸ ತುಂಬಿ, ನಾಟಕದ ಸಂಭಾಷಣೆ ಹೇಳಿಕೊಟ್ಟರು.
ಜನ ಮೆಚ್ಚಿದ ಹಾಸ್ಯಲೇಪನ
ಆಶ್ಚರ್ಯವೆಂದರೆ ನಾಟಕ ಪ್ರದರ್ಶನದ ಏಳೂ ದಿನಗಳ ಟಿಕೆಟುಗಳು ಮಾರಾಟವಾಗಿದ್ದವು. ನಾಟಕದ ಶೀರ್ಷಿಕೆಯೇ
ಆಕರ್ಷಕವಾಗಿತ್ತು. ಆದರೆ ನನಗಿನ್ನೂ ಆಸೆಯಿತ್ತು. ಮೋಡಕವಿದ ವಾತಾವರಣವಿದ್ದು, ನಾಟಕದ ದಿನ ಮಳೆ ಬರುತ್ತದೆನ್ನುವ ನಂಬಿಕೆ. ಆದರೆ ಎಲ್ಲವೂ ಸುಳ್ಳಾಯಿತು. ರಂಗಕ್ಕೆ ಹೋಗುವುದು ದಿಟವಾಯಿತು. ಆರಂಭದ ದೃಶ್ಯದಿಂದ ಹಿಡಿದು ಕೊನೆಯ ವರೆಗೂ ಬಹುತೇಕ ನಾಟಕದ ಮಾತುಗಳನ್ನು ಮರೆತು ಸಂದರ್ಭೋಚಿತವಾಗಿ ನನ್ನ ಮಾತುಗಳನ್ನು ಸೇರಿಸಿ, ಹಾಸ್ಯಲೇಪನ ಮಾಡಿ ನಾಟಕ ಮುಗಿಸಿದೆ. ಅಂತೂ ಕ್ಲಿಕ್ ಆಯಿತು.
ಗಂಭೀರವಾದ, ರಾಜಕೀಯ ಕುರಿತ ನಾಟಕವು ನನ್ನ ತಪ್ಪಿನಿಂದ ಹಾಸ್ಯಭರಿತ ನಾಟಕವಾಗಿ ಪ್ರದರ್ಶನ ಕಂಡಿತು. ಇದರಿಂದ ನಾಟಕದ ನಡುವೆ ನಗುವಿನ ಅಲೆ. ಮುಗಿದ ಮೇಲೆ ಚಪ್ಪಾಳೆಗಳ ಸುರಿಮಳೆ. ಇದು ಒಂದು ಪ್ರಯೋಗಕ್ಕಲ್ಲ, ಎಲ್ಲ ಪ್ರದರ್ಶನಗಳಿಗೂ ಸಿಕ್ಕಿತು. ನಾಟಕದ ಕುರಿತು ಎಲ್ಲ ಪತ್ರಿಕೆಗಳಲ್ಲಿ ಒಳ್ಳೆಯ ಸದ್ದಾಯಿತು. ಪ್ರಶಂಸೆಯ ಸುರಿಮಳೆ. ಮೊದಲ ಪ್ರದರ್ಶನಕ್ಕೆ ಬಂದಿದ್ದ ಲೋಹಿತಾಶ್ವ ಅವರು ಬೆನ್ನು ತಟ್ಟಿದರು. ನಂತರ ಅವರು ‘ಒಂದು ಮಾತು’ ಎಂದರು. ಏನು ಎಂದು ಅವರತ್ತ ನೋಡಿದೆವು. ‘ಇದು ನಾನು ಬರೆದ ನಾಟಕವಲ್ಲ. ನಿಮ್ಮಿಷ್ಟದ ನಾಟಕ. ತುಂಬಾ ಗಂಭೀರವಾದ ನಾಟಕವನ್ನು ಕೊಂದಿದ್ದೀರಿ. ಆದರೆ ಪಂಚ್ ಡೈಲಾಗ್ ಮೂಲಕ ಚಪ್ಪಾಳೆ ಹೊಡೆಸಿಕೊಂಡಿದ್ದೀರಿ. ಜನ ಮೆಚ್ಚಿದ್ದು, ಮುಂದುವರಿಸಿಕೊಂಡು
ಹೋಗಿ’ ಎಂದು ಹೇಳಿದರು.
‘ಮುಂದೆ ನೀವೇ ಮಾಡಬೇಕಲ್ಲ? ಎಂದೆ. ‘ಈ ರೀತಿ ಮಾಡಲು ನನ್ನಿಂದ ಸಾಧ್ಯವಿಲ್ಲ. ಮಾಡುವುದೂ ಇಲ್ಲ. ನೀವೆ ಮುಂದುವರಿಸಿ, ಒಳ್ಳೆಯದಾಗಲಿ’ ಎಂದು ಹಾರೈಸಿದರು. ಬಿ.ವಿ.ಕಾರಂತರು, ಪ್ರೇಮಾ ಕಾರಂತರು ನಾಟಕವನ್ನು ಪೂರ್ಣ ನೋಡಿ ರಂಗದ ಮೇಲೆ ಬಂದು ಮೆಚ್ಚುಗೆಯಾಡಿ ‘ನಿಲ್ಲಿಸಬೇಡಿ, ಮುಂದುವರಿಸಿ’ ಎಂದರು. ಅಲ್ಲದೆ ಬಿ.ವಿ.ಕಾರಂತರು ಪ್ರೇಮಾ ಅವರಿಗೆ ‘ನಿಂದೇನಾದರೂ ತಕರಾರು ಇದೆಯಾ?’ ಎಂದು ಕೇಳಿದರು. ನಗುತ್ತ ಅವರು ‘ಚೆನ್ನಾಗಿದೆ. ಜನ ಮೆಚ್ಚಿದ್ದಾರೆ. ನೀವೇ ಮಾಡಿ’ ಎಂದು ಬೆನ್ನು ತಟ್ಟಿದರು. ಹವ್ಯಾಸಿ ತಂಡಗಳ ಕಲಾವಿದರು ವೀಕ್ಷಿಸಿ ಅನಿವಾರ್ಯವಾಗಿ ಸಂತೋಷಪಡುವಂತಾಯಿತು.
೧೯೮೧ರ ಏಪ್ರಿಲ್ ೧ ಹಾಗೂ ೨ರಂದು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯವರು ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ನಾಟಕೋತ್ಸವ ಏರ್ಪಡಿಸಿದ್ದರು. ಮುಖ್ಯವಾಗಿ ಹಿಂದಿಯ ಅದರಲ್ಲೂ ಎನ್‌ಎಸ್‌ಡಿಯ ‘ಮುಖ್ಯಮಂತ್ರಿ’ ನಾಟಕ ನಮ್ಮ
ನಾಟಕಕ್ಕಿಂತ ಚೆನ್ನಾಗಿತ್ತು. ನಮ್ಮದು ಎರಡು ಗಂಟೆಯ ಅವಧಿಯದ್ದಾದರೆ ಅವರದು ಮೂರು ಗಂಟೆಯದು. ರಾಜಕೀಯ
ತಲ್ಲಣವನ್ನು ಗಂಭೀರವಾಗಿ ಕೊಂಡೊಯ್ದು ಮುಗಿಸಿದ್ದರು. ನಗುವುದಕ್ಕೆ ಎಲ್ಲೂ ಆಸ್ಪದವಿರಲಿಲ್ಲ.
ನಮ್ಮ ಇಡೀ ತಂಡ ನಾಟಕ ನೋಡಿತು. ಅವರದು ರಿಯಲಿಸ್ಟಿಕ್ ರಂಗ ಪರಿಕರವಾದರೆ ನಮ್ಮದು ನಾಟಕೀಯ ರಂಗ ಪರಿಕರವಿತ್ತು. ಬಿ.ವಿ.ಕಾರಂತರು ದೆಹಲಿ ತಂಡಕ್ಕೆ ನಮ್ಮ ನಾಟಕ ತೋರಿಸಲು ಹೇಳಿದರು. ಹೇಗೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವನ್ನು ನಾಟಕವಾಡಲು ಕಾದಿರಿಸಿದ್ದೆವು. ಇದರಲ್ಲೇ ಅವರಿಗೆ ಬಿಟ್ಟುಕೊಟ್ಟೆವು. ಮಾರನೆಯ ಬೆಳಿಗ್ಗೆ ನಮ್ಮ ನಾಟಕ ಪ್ರದರ್ಶಿಸಿದೆವು. ನಾಟಕ ನೋಡಿದ ಆ ಇಡೀ ತಂಡ ಬೆರಗಾಯಿತು. ಅವರೊಂದಿಗೆ ನಮ್ಮ ಕನ್ನಡದ ಪ್ರೇಕ್ಷಕರು ನಾಟಕ ನೋಡಲು ಅವಕಾಶ ನೀಡಿದ್ದೆವು.
ಯಾಕೆ ಇಷ್ಟೊಂದು ನಗುತ್ತಾರೆಂದು ಅವರಿಗೆ ಅಚ್ಚರಿ. ನಾಟಕದ ನಂತರ ‘ನಮ್ಮದು ಗಂಭೀರ. ನಿಮ್ಮದು ಮನರಂಜನೀಯ’ ಎಂದು ನಕ್ಕರು. ರಂಗಕರ್ಮಿ ಜಿ.ವಿ.ಶಿವಾನಂದ್ ಅವರ ಪುತ್ರಿ ಪದ್ಮಶ್ರೀ, ಅವರ ಪತಿ ಜೋಸೆಲ್ಕರ್ ಅವರು ಕೈ ಮುಗಿದು, ‘ಮಾತು ಅರ್ಥವಾಗಲಿಲ್ಲ. ಆದರೆ ನಿಮ್ಮ ಅಭಿನಯ ಅಮೋಘ, ಅದ್ಭುತ’ ಎಂದರು. ಹಿಂದಿಯಲ್ಲಿ ಅವರು ಮುಖ್ಯಮಂತ್ರಿ ಪಾತ್ರ ಮಾಡಿದ್ದರು. ಈ ನಾಟಕದ ಮೂಲ ರಚನೆಕಾರ ರಣಜಿತ್ ಕಪೂರ್ ಅವರು ಬೆಂಗಳೂರಿಗೆ ಬಂದಿದ್ದರು. ಆಗ ಬಿ.ವಿ.ರಾಜಾರಾಂ, ನಾನು ಹಾಗೂ ಇತರರು ಭೇಟಿಯಾಗಿ ಪರವಾನಗಿ ಪಡೆಯದೆ ನಾಟಕ ಮಾಡಿದ್ದಕ್ಕೆ ಕ್ಷಮೆ ಕೇಳಿದೆವು. ನಂತರ ಗೌರವಧನ ನೀಡಿ ಮುಂದೆ ಪ್ರದರ್ಶಿಸಲು ಅವಕಾಶ ಕೇಳಿದೆವು.
ಒಂದೇ ದಿನ ಎರಡು ಪ್ರದರ್ಶನ
ಬೆಳಗಾವಿಯಲ್ಲಿ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನ ನಿಗದಿಯಾಗಿತ್ತು. ಇಷ್ಟೊತ್ತಿಗೆ ನಾನು ಶಾಸಕನಾಗಿ, ಜನಪ್ರಿಯ ನಟನಾಗಿ, ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸುತ್ತ ಹೀಗೆ ಒತ್ತಡದಲ್ಲಿ ಕೆಲಸ ಮಾಡುವಾಗಲೂ ರಂಗಭೂಮಿ ಮೇಲಿನ ಅಪಾರ ಪ್ರೀತಿ ಯಿಂದ ನಾಟಕ ಒಪ್ಪಿಕೊಂಡಿದ್ದೆ. ದೂರದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದರೂ ನಾಟಕವಾಡುತ್ತಿದ್ದೆ. ಹೀಗೆ ಬೆಳಗಾವಿ ಯಲ್ಲಿನ ಪ್ರದರ್ಶನಕ್ಕೆ ಮುನ್ನಾದಿನ ಚಿಕ್ಕಮಗಳೂರಿನಲ್ಲಿ ಸಿನಿಮಾವೊಂದರ ಶೂಟಿಂಗ್‌ದಿಂದ ಬಿಡಿಸಿಕೊಂಡು ರಾತ್ರಿ ಪ್ರಯಾಣಿಸಿ
ಬೆಳಗಾವಿ ತಲುಪಿದೆ. ನಾಟಕದ ನಂತರ ರಾತ್ರೋರಾತ್ರಿ ಚಿಕ್ಕಮಗಳೂರು ತಲುಪಬೇಕಿತ್ತು. ನಮ್ಮ ತಂಡ ಬೆಂಗಳೂರಿನಿಂದ ಪ್ರದರ್ಶನದ ಹಿಂದಿನ ದಿನ ಮೆಟಾಡೋರ್ ವಾಹನದಲ್ಲಿ ಹೊರಟು ಬೆಳಗಾವಿ ತಲುಪಿತ್ತು. ಬೆಳಿಗ್ಗೆ ತಂಡ ಸೇರಿಕೊಂಡೆ. ತಂಡದವರಿಗೆ ಮತ್ತು ನನಗೆ ಸರಿಯಾಗಿ ನಿದ್ದೆಯಿರಲಿಲ್ಲ.
ಮೈಕೈ ನೋವು, ಸುಸ್ತು ಇತ್ತು. ಆದರೂ ನಿದ್ದೆ ಮಾಡದೆ ತಾಲೀಮು ನಡೆಸಿದೆವು. ಇದರ ಮಧ್ಯೆ ಕಾಯಂ ಆಗಿ ಪಾತ್ರ ಮಾಡುತ್ತಿದ್ದ ಕೆಲ ಕಲಾವಿದರು ಗೈರುಹಾಜರಿಯಿಂದಾಗಿ ಹೊಸ ಕಲಾವಿದರಿದ್ದರು. ಹೀಗಾಗಿ ತಾಲೀಮು ಅನಿವಾರ್ಯವಾಗಿತ್ತು. ಬೆಳಗಾವಿಯ ರಂಗಮಂದಿರದ ಅಷ್ಟೂ ಸೀಟುಗಳ ಟಿಕೆಟುಗಳು ಮಾರಾಟವಾಗಿದ್ದವು. ಸಂಜೆ ಆರೂವರೆಗೆ ಪ್ರದರ್ಶನ ಶುರುವಾಗಬೇಕಿತ್ತು. ಆದರೆ ಗಲಾಟೆಯೋ ಗಲಾಟೆ. ಕಾರಣ – ಇನ್ನೊಂದು ಪ್ರದರ್ಶನಕ್ಕಾಗುವಷ್ಟು ಪ್ರೇಕ್ಷಕರು ನೆರೆದು ಟಿಕೆಟುಗಳಿಗಾಗಿ ಕಾದಿದ್ದರು.
ಸಂಘಟಕರಿಗೂ ಅವರಿಗೂ ವಾಗ್ವಾದ ನಡೆದಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ನನ್ನ, ರಾಜಾರಾಂ ಹಾಗೂ ಸಂಘಟಕರೊಂದಿಗೆ ಸಂಧಾನ ನಡೆಸಿದರು. ಇದರ ಪರಿಣಾಮ, ಇನ್ನೊಂದು ಪ್ರದರ್ಶನಕ್ಕೆ ಬೇಡಿಕೆ ಇಟ್ಟರು. ಜನರ ಅಭಿಮಾನಕ್ಕೆ ಸೋತು ಆಯೋಜಕರ ಮತ್ತು ರಾಜಾರಾಂ ಅವರ ಸಮಸ್ಯೆ ಬಗೆಹರಿಸಲು ಅನಿವಾರ್ಯವಾಗಿ ಒಪ್ಪಿಕೊಂಡೆ.
ಸಂಜೆ ಆರೂವರೆಯಿಂದ ರಾತ್ರಿ ಒಂಬತ್ತೂವರೆಗೆ ಒಂದು ಪ್ರದರ್ಶನದ ನಂತರ ಒಂಬತ್ತೂವರೆಗೆ ಮತ್ತೊಂದು ಪ್ರದರ್ಶನವಿತ್ತು. ಅಭಿನಯಿಸಲು ಕಷ್ಟವಲ್ಲ. ಆದರೆ ಪ್ರಯಾಣದ ಆಯಾಸ, ಸರಿಯಾಗಿ ಸಿಗದ ವಿಶ್ರಾಂತಿ ಮರೆತು ಪ್ರೇಕ್ಷಕರ ಪ್ರೀತಿಗೆ ಸೋತೆ. ಮೊದಲ ಪ್ರದರ್ಶನದ ನಂತರ ಊಟ ಮಾಡಿ ಮತ್ತೊಂದು ಪ್ರದರ್ಶನ ನೀಡಿದೆ. ಸಿನಿಮಾದಲ್ಲಿ ದುಡ್ಡು ಸಿಗುತ್ತದೆ. ಆದರೆ ರಂಗಭೂಮಿಯಲ್ಲಿ ಶ್ರಮದೊಂದಿಗೆ ತೃಪ್ತಿ ಸಿಗುತ್ತದೆ. ಮರುದಿನ ಬೆಳಿಗ್ಗೆ ಚಿಕ್ಕಮಗಳೂರು ತಲುಪಿ ಚಿತ್ರೀಕರಣದಲ್ಲಿ
ಪಾಲ್ಗೊಂಡೆ.
ಹೆಂಡದ ಲಾರಿ ಏರಿದ್ದು
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಹಾಗೂ ಚಿಗಟೇರಿ ನಂತರ ಬಾಗಲಕೋಟೆ ಜಿಲ್ಲೆಯ ಇಲಕಲ್ಲದಲ್ಲಿ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಯಥಾಪ್ರಕಾರ ಸುಸಜ್ಜಿತವಲ್ಲದ ಮೆಟಾಡೋರ್‌ನಲ್ಲಿ ಕಲಾವಿದರೊಂದಿಗೆ ನಾನೂ ಹೊರಟೆ. ಇಲಕಲ್ಲದಲ್ಲಿ ಪ್ರದರ್ಶನ ಯಶಸ್ವಿಯಾಗಿ ಅಲ್ಲಿಂದ ಹಗರಿಬೊಮ್ಮನಹಳ್ಳಿಗೆ ಹೊರಟೆವು. ಅಲ್ಲಿಯೂ ಹೌಸ್-ಲ್. ಅಲ್ಲಿಯೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಚಿಗಟೇರಿಗೆ ಹೊರಟೆವು. ಕಡಿಮೆ ಬಾಡಿಗೆಯ ಮೆಟಾಡೋರ್ ಇಪ್ಪತ್ತು ಕಲಾವಿದರನ್ನು ಹೊತ್ತುಕೊಂಡು ಹೊರಟಿತ್ತು. ಅದರ ಮೇಲೆ ನಾಟಕದ ಪರಿಕರಗಳಿದ್ದವು (ಸೌಂಡ್, ಲೈಟ್, ಹಾಸಿಗೆ, ದಿಂಬು ಇತ್ಯಾದಿ). ಇದು ಪ್ರತಿ ಪ್ರವಾಸದ ಪದ್ಧತಿ. ಸಂಜೆಯ ಹೊತ್ತು ತಿಂಡಿ ಮುಗಿಸಿಕೊಂಡು ಚಿಗಟೇರಿಯತ್ತ ಪ್ರಯಾಣಿಸುವಾಗ ಮೆಟಾಡೋರ್‌ನ ಬೆಲ್ಟ್ ಜಾಯಿಂಟ್ ಮುರಿದು ನಿಯಂತ್ರಣಕ್ಕೆ ಬಾರದೆ ಮೋರಿಗೆ ಗುದ್ದಿತು. ಗುದ್ದಿದ ರಭಸಕ್ಕೆ ಮೆಟಾಡೋರ್‌ನ ಅರ್ಧ ಭಾಗ ಮೋರಿ ಮೇಲೆ ನಿಂತಿತು. ನಮ್ಮ ಭಯ ಹೆಚ್ಚಿತು. ಗಾಡಿಯ ಒಳಗಿದ್ದೇವೆ.
ಪರಿಕರಗಳೆಲ್ಲ ಗ್ರಿಲ್ ಸಮೇತ ಹಳ್ಳದಲ್ಲಿ ಬಿದ್ದಿದ್ದವು. ಅಲುಗಾಡಲೂ ಭಯ. ಅನುಭವಿ ಚಾಲಕ ‘ಹೆಂಗಿದ್ದೀರಿ ಹಾಗೆ ಕೂತೀರಿ.
ಗಾಡಿ ಬೀಳದ ಹಾಗೆ ಪ್ರಯತ್ನಿಸುವೆ’ ಎಂದು ಭರವಸೆ ನೀಡಿದ. ಅಲ್ಲಾಡಿದರೆ ಗಾಡಿಯು ಯಾವ ಗಳಿಗೆಯಲ್ಲಾದರೂ ಹಳ್ಳಕ್ಕೆ ಬೀಳುವ ಸಂಭವವಿತ್ತು. ಖ್ಯಾತ ರಂಗನಟಿ ಭಾರ್ಗವಿ ನಾರಾಯಣ ಸೇರಿ ಇತರ ಕಲಾವಿದರು ತುಂಬಾ ಹೆದರಿದ್ದರು.
ಮೆಟಾಡೋರ್‌ನ ಹಿಂದೆ ಹೋದ ಚಾಲಕ, ಅದನ್ನು ಹಿಡಿದುಕೊಂಡು ‘ಮೂವರು ಮಾತ್ರ ನಿಧಾನವಾಗಿ ಇಳಿದು ಬನ್ನಿ’ ಎಂದರು. ಮೂವರು ಇಳಿದು ಚಾಲಕನೊಂದಿಗೆ ಗಾಡಿ ಮುಂದಕ್ಕೆ ಬೀಳದ ಹಾಗೆ ಹಿಡಿದುಕೊಂಡರು. ನಂತರ ನಿಧಾನವಾಗಿ ಒಬ್ಬೊಬ್ಬರೆ
ಇಳಿದೆವು. ಇಳಿದು ಕೆಳಗೆ ನೋಡಿದರೆ ಮೈ ಜುಮ್ಮೆಂದಿತು. ಹದಿನೈದು ಅಡಿಗೂ ಅಧಿಕ ಆಳವಾದ ಹಳ್ಳ. ಕಲ್ಲುಮುಳ್ಳುಗಳು ಬೇರೆ. ಬಿದ್ದಿದ್ದರೆ ನಾವು ಉಳಿಯುವುದು ಕಷ್ಟವಿತ್ತು. ಬಳಿಕ ಎಲ್ಲರೂ ಸುಧಾರಿಸಿಕೊಂಡೆವು.
ಮುಂದೇನು ಮಾಡಬೇಕೆಂದು ತೋಚಲಿಲ್ಲ. ಕಲಾವಿದರೆಲ್ಲ ಸೇರಿ ಪರಿಕರಗಳನ್ನು ಹೊತ್ತು ತಂದರು. ಮೆಟಾಡೋರ್ ಬಿಟ್ಟು
ಬೇರೆ ಗಾಡಿಯಲ್ಲಿ ಪ್ರಯಾಣಿಸಬೇಕಿತ್ತು. ಆಗ ಮೊಬೈಲು -ನುಗಳೂ ಇರಲಿಲ್ಲ. ಅಷ್ಟೊತ್ತಿಗೆ ರಾತ್ರಿ ಹತ್ತಾಗಿತ್ತು. ಚಿಗಟೇರಿಯಲ್ಲಿ ಹನ್ನೊಂದು ಗಂಟೆಗೆ ನಾಟಕವಿತ್ತು. ಅದು ಜಾನಪದ ತಜ್ಞರಾಗಿದ್ದ ಮುದೇನೂರು ಸಂಗಣ್ಣ ಅವರ ಊರು. ನಮ್ಮ ಬಳಿಯಿದ್ದ ಕುಡಿಯುವ ನೀರೆಲ್ಲ ಖಾಲಿ. ತಿನ್ನಲು ಏನೂ ಇಲ್ಲ. ಯಾವುದಾದರೂ ವಾಹನ ಬರುತ್ತದೆಂದು ಕಾದೆವು. ದೂರದಲ್ಲಿ ವಾಹನ ವೊಂದರ ಲೈಟುಗಳು ಕಾಣಿಸಿದಾಗ ಸ್ವಲ್ಪ ಜೀವ ಬಂದ ಹಾಗಾಯಿತು.
ಕಲಾವಿದೆಯರೊಂದಿಗೆ ನಾನು ಮುಂದೆ ನಿಂತು ಕೈ ಮಾಡಿದೆವು. ನಮ್ಮ ಪುಣ್ಯಕ್ಕೆ ಚಾಲಕ ನಿಲ್ಲಿಸಿದಾಗ ನಮ್ಮ ಕಷ್ಟ ವಿವರಿಸಿದೆವು. ಆತ ಕರೆದುಕೊಂಡು ಹೋಗಲು ಒಪ್ಪಿದ. ಅದು ಹೆಂಡ ಸಾಗಿಸುತ್ತಿದ್ದ ಲಾರಿಯಾಗಿತ್ತು. ಕಲಾವಿದೆಯರೆಲ್ಲ
ಕ್ಯಾಬಿನ್ನಿನಲ್ಲಿ ಕೂತರು. ನಾವೆಲ್ಲ ಹಿಂದೆ ಲಾರಿ ಹತ್ತಿ ಹೆಂಡದ ಪಿಪಾಯಿಗಳ ಬಳಿ ನಿಂತೆವು. ಆದರೆ ಆಸರೆಗೆ ಪಿಪಾಯಿ ಬಾಯಿಗೆ ತುರುಕಿದ್ದ ಈಚಲು ಟೊಂಗೆಯನ್ನು ಹಿಡಿದುಕೊಂಡು ನಿಲ್ಲಬೇಕಾಯಿತು. ಲಾರಿ ಹೊರಟಾಗ ನಮ್ಮ ಮೈಮೇಲೆ ಹೆಂಡ ಚಿಮ್ಮುತ್ತಿತ್ತು. ವಾಸನೆ ಬೇರೆ. ಕಷ್ಟವಾದರೂ ಅನಿವಾರ್ಯ. ಹೀಗೆ ಹೊರಟಾಗ ಸಿಕ್ಕ ಹಳ್ಳಿಯೊಂದರಲ್ಲಿ ಚಾಲಕನ ಸಹಾಯದಿಂದ
ಮತ್ತೊಂದು ವಾಹನ ಏರ್ಪಾಟು ಮಾಡಿ ಉಳಿದ ಕಲಾವಿದರನ್ನು ಹಾಗೂ ಪರಿಕರ ತರಲು ವ್ಯವಸ್ಥೆಯಾಯಿತು.
ನಿಧಾನವಾಗಿ ಹೊರಟ ಲಾರಿ ಚಿಗಟೇರಿ ತಲುಪಿದಾಗ ರಾತ್ರಿ ಎರಡೂವರೆ. ಹೆಂಡದ ಲಾರಿಯಿಂದ ನಾವು ಇಳಿಯುವುದು ಕಂಡ ಅಲ್ಲಿನವರು ಅನುಮಾನ ಪಡಲಿಲ್ಲ. ಆದ ಘಟನೆಯನ್ನು ಮುದೇನೂರು ಸಂಗಣ್ಣ ಅವರಿಗೆ ವಿವರಿಸಿದೆವು. ಆಮೇಲೆ ಒಂದು ಗಂಟೆಯಾದ ಮೇಲೆ ಇನ್ನೊಂದು ವಾಹನದಲ್ಲಿ ಉಳಿದ ಕಲಾವಿದರು ಬಂದರು. ಆಗ ಮುದೇನೂರು ಸಂಗಣ್ಣ ಅವರು ನೆರೆದಿದ್ದ ಜನರಿಗೆ ನಡೆದ ಘಟನೆ ವಿವರಿಸಿ ಬೆಳಗಿನ ಜಾವ ‘ಮೂರೂವರೆಗೆ ನಾಟಕ ಶುರುವಾಗುತ್ತದೆ. ಶಾಂತವಾಗಿರಿ’ ಎಂದು ಹೇಳಿದರು.
ಬಳಿಕ ಸ್ನಾನ ಮಾಡಿ ಸಿದ್ಧರಾದೆವು. ಮೂರೂಮುಕ್ಕಾಲಿಗೆ ನಾಟಕ ಶುರುವಾಗಿ ನಸುಕಿನ ಐದೂವರೆಗೆ ಮುಗಿಯಿತು. ಪ್ರೇಕ್ಷಕರ ಜೋರಾದ ಚಪ್ಪಾಳೆ, ಶಿಳ್ಳೆ, ಕೇಕೆ ಕೇಳಿ ಕಷ್ಟ ಮರೆತೆವು. ಆಮೇಲೆ ಬೆಳಗಿನ ಜಾವ ಬಿಸಿ ಬಿಸಿ ಒಬ್ಬಟ್ಟಿನ ಊಟ ಮಾಡಿ, ವಿಶ್ರಾಂತಿ ಪಡೆದು ಬೆಳಿಗ್ಗೆ ತಿಂಡಿ ತಿಂದು ಬೆಂಗಳೂರಿಗೆ ಬೇರೊಂದು ವಾಹನದಲ್ಲಿ ಹೊರಟೆವು. ಆದರೆ ಕೆಟ್ಟ ಮೆಟಾಡೋರ್ ಹಾಗೂ ಚಾಲಕನನ್ನು ಮರೆಯದೆ ಜೊತೆಯಲ್ಲೇ ಕರೆದುಕೊಂಡು ಬಂದೆವು.
ತೀರಿಹೋದ ಸಂಘಟಕರು
೧೯೮೯ರಲ್ಲಿ ಬೆನ್‌ಫಿಟ್ ಷೋಗಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನಕ್ಕೆ ಒಪ್ಪಿದ್ದೆ. ನಂತರ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಆಗ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪಽಸಿದ್ದೆ. ಹೀಗೆ ಚುನಾವಣೆಯಿಂದಾಗಿ ನಾಟಕ ಪ್ರದರ್ಶನದ ದಿನಾಂಕ ಬದಲು ಮಾಡಲು ಮನವಿ ಮಾಡಿಕೊಂಡೆವು. ಸಂಘಟಕರಾದ ಸುರೇಶ್ ಅವರು ಟಿಕೆಟ್ ಮಾರಾಟ ಮಾಡಿದ್ದರು. ಆದರೂ ನಮ್ಮ ಮಾತಿಗೆ ಒಪ್ಪಿ ಚುನಾವಣೆ ನಂತರ ಎರಡು ಪ್ರದರ್ಶನಗಳಿಗೆ
ಸಜ್ಜಾಗಿದ್ದರು.
ಇದರಿಂದ ಒಂದೇ ದಿನ ಎರಡು ಪ್ರದರ್ಶನಗಳಿಗೆ ಒಪ್ಪಿಕೊಂಡೆವು. ಆದರೆ ಬಿರುಗಾಳಿ, ಮಳೆಯಿಂದ ಟೂರಿಂಗ್ ಟಾಕೀಸಿನ ತಗಡುಗಳೆಲ್ಲ ಹಾರಿ ಹೋಗಿ ಬಯಲು ರಂಗಭೂಮಿಯಾಯಿತು. ಸುರಿಯುವ ಮಳೆಯಿಂದಾಗಿ ನಾಟಕ ಆಡಲಾಗಲಿಲ್ಲ. ಇದರಿಂದ ಕಂಗಾಲಾದ ಸುರೇಶ್ ಅವರು ಅಳುವುದು ಕಂಡು ‘ಅಳಬೇಡ, ಮತ್ತೆ ನಾಟಕ ಆಡುತ್ತೇವೆ. ನಷ್ಟವಾಗದ ಹಾಗೆ ನೋಡಿಕೊಳ್ಳುತ್ತೇವೆ’ ಎಂದು ಭರವಸೆ ಕೊಟ್ಟೆವು. ಮತ್ತೊಮ್ಮೆ ಕೊಟ್ಟ ದಿನಾಂಕಗಳು ಬರುವ ಹೊತ್ತಿಗೆ ಸುರೇಶನೇ ತೀರಿಕೊಂಡರು.
ಕೆಲದಿನಗಳ ನಂತರ ಭದ್ರಾವತಿಗೆ ಹೋಗಿ ಸುರೇಶ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಅಲ್ಪಸ್ವಲ್ಪ ಹಣಕಾಸಿನ ನೆರವಾದೆವು. ಈ ಘಟನೆ ನಮ್ಮನ್ನು ಅನೇಕ ಬಾರಿ ಕಾಡಿದೆ.
(ಮುಖ್ಯಮಂತ್ರಿ ಚಂದ್ರು ಅವರ ಆತ್ಮಕಥೆ ‘ರಂಗವದನದ ಚಂದ್ರತಾರೆ’ಯನ್ನು ಮೈಸೂರಿನ ಕವಿತಾ ಪ್ರಕಾಶನವು ಪ್ರಕಟಿಸಿದ್ದು, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಳೆ ಲೋಕಾರ್ಪಣೆಗೊಳ್ಳಲಿದೆ.)
ಶಿವಮೊಗ್ಗದಲ್ಲಿ ಮಳೆ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಬಯಲಲ್ಲಿ ನಾಟಕ ಏರ್ಪಾಡಾಗಿತ್ತು. ಸುಮಾರು ಎರಡು ಸಾವಿರ ಪ್ರೇಕ್ಷಕರು ಸೇರಿದ್ದರು.
ಜೋರು ಮಳೆಯಿಂದ ನಾಟಕದ ಸೆಟ್, ಮೈಕು ಹಾಳಾದವು. ಪ್ರೇಕ್ಷಕರ ಒಕ್ಕೊರಲಿನಿಂದ ‘ಎಷ್ಟು ಹೊತ್ತಾದರೂ ಕಾಯುತ್ತೇವೆ, ಕಾಲೇಜಿನ ಕಾರಿಡಾರಿನಲ್ಲೇ ನಾಟಕವಾಡಿ’ ಎಂದು ಒತ್ತಾಯಿಸಿದರು. ‘ಮತ್ತೊಮ್ಮೆ ನಾಟಕ ಪ್ರದರ್ಶಿಸುತ್ತೇವೆ, ಪರಿಕರ ಹಾಳಾಗಿದೆ, ಮೈಕು ಕೆಟ್ಟಿದೆ’ ಎಂದರೂ ಕೇಳಲಿಲ್ಲ. ಕೊನೆಗೆ ಪ್ರೇಕ್ಷಕರೇ ಮೈಕು, ಲೈಟು ತಂದರು. ಕಾರಿಡಾರಿನಲ್ಲಿ ಒಂದೇ ಮೈಕಿನೆದುರು ನಾಟಕ ಆಡಿದೆವು. ಇದೆಲ್ಲ ‘ಮುಖ್ಯಮಂತ್ರಿ’ ನಾಟಕದ ಮೇಲಿನ ಅಭಿಮಾನ ಜೊತೆಗೆ ಆ ಪಾತ್ರದ ನಾನು ಜನಪ್ರಿಯ ನಟನಾಗಿರುವು ದರೊಂದಿಗೆ ಮಾತು ಕೇಳಲು, ಮೂತಿ ನೋಡಲು ಮುಗಿಬಿದ್ದರು. ಅವರಿಗೆ ನಿರಾಸೆ ಮಾಡಲಿಲ್ಲ.
ದೇವರಾಜ ಅರಸು ಹೋಲಿಕೆ
ಮುಖ್ಯಮಂತ್ರಿ ಪಾತ್ರವನ್ನು ನಾನೇ ಮಾಡಬೇಕೆಂದು ತೀರ್ಮಾನವಾದಾಗ ಉಳಿದ ಮುಂದಿನ ದಿನಗಳಲ್ಲಿ ಗೌರವ ಉಳಿಸಿಕೊಳ್ಳಲು ಗಂಭೀರವಾಗಿ ತೆಗೆದುಕೊಂಡೆ. ಪಾತ್ರಕ್ಕೆ ಒಂದು ರೂಪ ಕೊಡಲು ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಪೈಕಿ ದೇವರಾಜ ಅರಸು
ಅವರು ಈ ಪಾತ್ರಕ್ಕೆ ಹೆಚ್ಚು ಹೋಲಿಕೆಯಾಗುತ್ತಾರೆಂದು ಭಾವಿಸಿ ಅವರ ನಡೆ, ನುಡಿ ಅಳವಡಿಸಿಕೊಂಡೆ. ಕಚ್ಚೆ ಪಂಚೆ, ಉದ್ದನೆಯ ಜುಬ್ಬ, ಮೇಲೊಂದು ಶಾಲು, ಧೀಮಂತವಾಗಿ ನಿಲ್ಲುವ ಎದೆಗಾರಿಕೆ, ನಿಷ್ಠುರವಾದಿ, ಸಾಹಿತ್ಯಾಭಿಮಾನಿ – ಈ ಎಲ್ಲ ಗುಣಗಳು ಮುಖ್ಯಮಂತ್ರಿ ಪಾತ್ರಕ್ಕಿದ್ದವು. ಈ ಪಾತ್ರ ಗೆದ್ದ ನಂತರ ಅದುವರೆಗೆ ಬೆಂಗಳೂರಿನ ರಂಗತಂಡಗಳಲ್ಲಿ ಐದಾರು ಚಂದ್ರುಗಳಿದ್ದರು. ಗುರುತಿಸಲು ಮುಖ್ಯಮಂತ್ರಿ ಪಾತ್ರದ ಚಂದ್ರು ಎಂದು ಬರೆಯುತ್ತಿದ್ದ ಪತ್ರಿಕೆಗಳವರು ‘ಮುಖ್ಯಮಂತ್ರಿ
ಚಂದ್ರು’ ಎಂದು ಪ್ರಕಟಿಸಿದರು. ಅದೇ ಹೆಸರು ಉಳಿಯಿತು. ಈ ನಾಟಕದ ಬಲದಿಂದಲೇ ಶಾಸಕನಾಗಿದ್ದು ಇತಿಹಾಸ.
ಭತ್ತ ಬೇಯಿಸಿ, ಎರಡು ದಿನ ಒಣಗಿಸಿ, ಮೂರನೆಯ ದಿನ ಹಲ್ಲರ್‌ಗೆ ಹಾಕಿ ಮನೆಯಲ್ಲೇ ತಯಾರಿಸುವ ಕೊಚ್ಚಿಗೆ ಅಕ್ಕಿಯನ್ನು ಕಾಣಲು ಅಪ್ಪಯ್ಯ ಹಾಕಿದ ಮ್ಮ ಅಪ್ಪಯ್ಯ ಮನೆಯ ಹತ್ತಿರವೇ ಅಕ್ಕಿಮಿಲ್ಲು ಸ್ಥಾಪಿಸಿದ ಸಾಹಸ ರೋಚಕ ಎನಿಸುತ್ತದೆ. ಆ
ಎಂಬತ್ತು ತೊಂಬತ್ತರ ದಶಕದಲ್ಲಿ ಅಕ್ಕಿ ಮಿಲ್ಲಿನ ಸಾಹುಕಾರರೆಂದರೆ ಅವರು ದೊಡ್ಡ ಹಿಡುವಳಿದಾರರೂ, ಹೇರಳ ದುಡ್ಡಿದ್ದವರಾಗಿರಬೇಕಿತ್ತು. ಆದರೆ ನಮ್ಮ ಅಪ್ಪಯ್ಯನ ಬಳಿ ಇದ್ದದ್ದು ನಾಲ್ಕೆಕರೆ ಜಮೀನು ಮತ್ತು ಖಾಲಿ ಕೈ. ಆದರೆ ಮನದೊಳಗೊಂದು ಅಗಾಧ ಛಲ ಮತ್ತು ಯಾವ ಕಠಿಣ ಕೆಲಸವನ್ನೂ ಮಾಡಿಯೇ ತೀರುವ ತೋಳ್ಬಲ ಅವರಿಗೆ ಭಗವಂತ ಕರುಣಿಸಿದ್ದ. ನಮ್ಮ ಮನೆಯಲ್ಲಿ ಮೂರು ಬೇಸಾಯದ ಜಮೀನು. ವಾರಾಹಿ ನದಿಗೆ ಆ ಕಾಲದ ಅಪ್ಪಯ್ಯ ಹರಸಾಹಸ ಪಟ್ಟು ಪಂಪ್ ಅಳವಡಿಸಿದ್ದರಿಂದ ನೀರಿಗೆ ಬರವಿಲ್ಲದ ಭೂಮಿ ನಮ್ಮದಾಗಿತ್ತು.
ಮೂರು ಬೇಸಾಯ, ಅಡಿಕೆ ತೋಟ, ಧಾನ್ಯದ ಬಿತ್ತನೆ, ಮೆಣಸಿನ ಹಿತ್ತಲು, ತರಕಾರಿಬೆಳೆ, ಹೂದೋಟ ಹೀಗೆ ಎಲ್ಲವನ್ನೂ ಶ್ರಮವಹಿಸಿ ಬೆಳೆಸುತ್ತಿದ್ದ, ಕೆಲಸಕ್ಕೆ ಬರವಿರದ ಬಾಲ್ಯ ನಮ್ಮದು. ಈ ಮೂರು ಬೇಸಾಯದಲ್ಲಿ ಬೆಳೆದ ಭತ್ತವನ್ನು
ಹಾಲಾಡಿಯ ಅಕ್ಕಿ ಮಿಲ್ಲಿಗೋ, ಜನ್ನಾಡಿಯ ಅಕ್ಕಿ ಮಿಲ್ಲಿಗೋ ಎತ್ತಿನಗಾಡಿ ಅಥವಾ ಟೆಂಪೊದಲ್ಲಿ ತೆಗೆದುಕೊಂಡು ಹೋಗಿ ಅಕ್ಕಿ
ಮಾಡಿಸುಕೊಂಡು ಬರುವ ಕ್ರಮವಿತ್ತು. ಹೀಗೆ ಒಂದು ವರ್ಷ ಬೆಳ್ತಿಗೆ ಅಕ್ಕಿ ಮಾಡಿಸಲು ಹಾಕಿದ್ದ ಭತ್ತ ಬೆಳೆದದ್ದು ಹೆಚ್ಚಾದ
ಕಾರಣದಿಂದಲೋ, ಅಥವಾ ಮಿಲ್ಲಿನವರ ನಿರ್ಲಕ್ಷ್ಯದಿಂದಲೋ ಕಡಿ ಅಕ್ಕಿಯಾಗಿ ಮನೆಗೆ ಬಂತು.
ಅದು ಒಂದೆರಡು ಚೀಲವಲ್ಲ! ಬರೋಬ್ಬರಿ ಇಪ್ಪತ್ತು ಚೀಲ ಬೆಳ್ತಿಗೆ ಕಡಿಯಕ್ಕಿ. ಒಂದು ವರ್ಷವಿಡೀ ತಿಂಡಿಗೆ, ಅನ್ನಕ್ಕೆ
ಉಪಯೋಗಿಸುವ, ದಾಸ್ತಾನು ಮಾಡಿ ಇಡುವ ಬೆಳ್ತಿಗೆ ಅಕ್ಕಿ, ಈ ರೀತಿ ಕಡಿಕಡಿಯಾಗಿ ಬಂದರೆ ಏನು ಮಾಡುವುದು? ಆಗೆಲ್ಲಾ ಮಿಲ್ಲಿನಿಂದ ಅಕ್ಕಿ ಮಾಡಿಸಿಕೊಂಡು ತಂದ ತಕ್ಷಣ ಮನೆಯ ಜಗುಲಿಯಲ್ಲಿ ಹರವಿ, ನಂತರ ಗೇರಿ, ಕಲ್ಲು ನೆಲ್ಲು ಎಲ್ಲಾ ಬೇರ್ಪಡಿಸಿ, ಮೊದಲಿಗೆ ಇಡೀ ಅಕ್ಕಿಯ ಮೂಟೆಗಳನ್ನು ಮಾಡಿ ಬೆಚ್ಚಗಿನ ಕೋಣೆಯಲ್ಲಿ ದಾಸ್ತಾನು ಮಾಡುವುದು.
ಎರಡನೇಯದು ಅರ್ಧ ಕಡಿಯಕ್ಕಿ. ಈ ಅಕ್ಕಿಗೆ ಕಳಿ (ಮೇಣದ ಅಂಶ) ಕಡಿಮೆ. ದೋಸೆಗೆ ಇಡ್ಲಿಗೆ ಇದನ್ನು ಉಪಯೋಗಿಸುವುದು ಕ್ರಮವಾಗಿತ್ತು. ಇನ್ನು ರವೆಕಡಿಯಕ್ಕಿ. ಇದು ಈಗಿನ ಇಡ್ಲಿ ರವೆ ಗಾತ್ರದ್ದು. ಇದನ್ನು ಅಕ್ಕಿ ಉಪ್ಪಿಟ್ಟು ಮಾಡಲು ಉಪಯೋಗಿಸುತ್ತಿದ್ದರು. ಕೊನೆಯದು ತಲೆಕಡಿಯಕ್ಕಿ. ಅಂದರೆ ಈ ಅಕ್ಕಿಯಲ್ಲಿ, ಕಲ್ಲು, ಉಮಿ ಇದೆ ಇರುತ್ತಿತ್ತು. ಇದನ್ನು ದನದ ಅಕ್ಕಚ್ಚಿಗೆ ಹಾಕುತ್ತಿದ್ದರು. ಈ ತರ ಪರಿಪರಿಯಾಗಿ ಇರಬೇಕಾದ ಅಕ್ಕಿಯ ಸ್ಥಿತಿ ಪೂರ್ತಿ ಅರ್ಧಕಡಿಯಾದರೆ ಏನು ಮಾಡುವುದು? ಅಪ್ಪಯ್ಯನಿಗೆ ಅಕ್ಕಿ ನೋಡಿ ಬೇಸರ ಮತ್ತು ಕೋಪ ಜೊತೆಯಾಯ್ತು. ಆದರೆ ಏನು ಮಾಡುವುದು. ಕಾಲ ಮಿಂಚಿಯಾಯ್ತಲ್ಲ.
ಮಿಲ್ಲಿನವರು ‘ನಿಮ್ಮ ಭತ ಒಂದು ವಾರದ ಬೆಳೆ ಜಾಸ್ತಿಯಾದ್ದರಿಂದ ಅಕ್ಕಿ ಕಡಿಯಾಯ್ತು. ಬೆಂತಕ್ಕಿ ಮಾಡುದಾರೆ ಮುಂಬೆಳ್ಸ್ ಕೊಯ್ಲ ಮಾಡ್ಕ್’ ಎಂದೇನೊ ಹೇಳಿ ನುಣುಚಿಕೊಂಡರು. ಆ ವರ್ಷದ ಮತ್ತೊಂದು ಬೇಸಾಯದ ಭತ್ತ ಕೊಚ್ಚಕ್ಕಿ ಮಾಡಿಸಲು ಅದೇ ಮಿಲ್ಲಿಗೆ ಹಾಕಿದ್ದರು. ಭತ್ತ ಅಕ್ಕಿಯಾಗಿ ಮನೆಗೆ ಬಂತು. ಅದು ಅರೆಬೇವು ಕೊಚ್ಚಕ್ಕಿ ಆಗಿ ಮನೆಯ ಚಾವಡಿ ಸಿಂಗರಿಸಿತು. ಅರೆಬೇವು ಅಕ್ಕಿ ಅಂದರೆ, ಭತ್ತ ಸರಿಯಾಗಿ ಬೇಯಿಸದೇ ಅಕ್ಕಿ ಮಾಡುವುದು. ಇದು ಸ್ವಲ್ಪ ಅಡ್ಡವಾಸನೆ ಕೂಡ ಇರುತ್ತದೆ. ಅನ್ನವಂತೂ ಬಲು ಸಪ್ಪೆ. ಅಲ್ಲದೇ ಸ್ವಲ್ಪ ಬೆಂದರೂ ಗಂಜಿಯೇ ಆಗುವ ಬಿಳಿಯಕ್ಕಿ.
ಇದನ್ನು ನೋಡಿ ಅಪ್ಪಯ್ಯನ ತಾಳ್ಮೆಯ ಕಟ್ಟೆ ಒಡೆಯಿತು. ಇನ್ನು ಇವರ ಮಿಲ್ಲಿನಲ್ಲಿ ಅಕ್ಕಿ ಮಾಡಿಸುವುದಿಲ್ಲ. ವರ್ಷದ
ಕೂಳಿಗೆ ಕಂಟಕ ಬಂತಲ್ಲ ಎಂದು ಕೂಗಾಡಿದರು. ಅದೇ ಮರುವರ್ಷ ನಮ್ಮ ಮನೆಯಲ್ಲಿ ಅಕ್ಕಿ ಗಿರಣಿ ಆರಂಭಿಸುವುದೆಂದು ನಿರ್ಧಾರವಾಯ್ತು. ಕೈಯಲ್ಲಿ ಹತ್ತು ರೂಪಾಯಿ ಬಂಡವಾಳ ಇಲ್ಲ. ಅಕ್ಕಿ ಮಿಂದರೆ ಸುಮ್ಮನೆ ಆಗ್ತದಾ? ಕಟ್ಟಡ, ಭತ್ತ ಬೇಯಿಸುವ ಕೊಪ್ಪರಿಗೆ, ನೀರಿನ ವ್ಯವಸ್ಥೆ, ಒಣಗಿಸಲು ಬಿಸಿಲು ಬೀಳುವ ಅಂಗಳ, ಡೀಸೆಲ್ ಇಂಜನ್, ಹಲ್ಲರ್, ತ್ಯಾಜ್ಯ ಹೋಗಲು ಜಾಗ! ಅಬ್ಬಬ್ಬಾ ಎಣಿಸಿಯೇ ಅಮ್ಮ ಬೆವರಿದಳು. ಅಪ್ಪಯ್ಯನಿಗೆ ಬುದ್ದಿ ಹೇಳಿದಳು.
‘ಸಾಲ ಮಾಡಿ ಈ ಸಾಹಸಕ್ಕೆ ಕೈ ಹಾಕಬೇಡಿ. ನಮ್ಮ ಮಿಲ್ಲಿಗೆ ಭತ್ತ ತಂದುಕೊಡುವವರು ಯಾರು? ಮಿಲ್ಲಿನ ಕೆಲಸ ಕಾರ್ಯ, ಭತ್ತ ಬೇಯಿಸಿ ಒಣಗಿಸುವ ಕೆಲಸಕ್ಕೆ ತುಂಬಾ ಜನ ಆಳುಗಳು ಬೇಕಾಗ್ತಾರೆ. ಈ ಪ್ರೊಜೆಕ್ಟ್ ಕೈಬಿಡಿ’ ಎಂದು ದುಂಬಾಲು ಬಿದ್ದರೂ. ಅಪ್ಪ ಕೇಳಲಿಲ್ಲ. ನಮ್ಮದು ಕಲ್ಲಿನ ಗೋಡೆಯ ಮಣ್ಣು ಗಾರೆಯ ಉಪ್ಪರಿಗೆ ಮನೆ. ಅದರ ಹಿಂದೆ ದನದ ಕೊಟ್ಟಿಗೆ. ಕೊಟ್ಟಿಗೆ ಪಕ್ಕದಲ್ಲಿ ಒಂದಿಷ್ಟು ಜಾಗವಿತ್ತು. ಅದೇ ಜಾಗದಲ್ಲಿ ಅಕ್ಕಿ ಮಾಡುವ ಹಲ್ಲರ್ ಹುಗಿದರು. ಅದಕ್ಕೆ ಎರಡು ಮೀಟರ್ ದೂರದಲ್ಲಿ ಒಂದು ಡೀಸೆಲ್ ಇಂಜಿನ್ನನ್ನು ಸ್ಥಾಪಿಸಲಾಯಿತು. ಆ ಇಂಜಿನ್ ಸ್ಟಾರ್ಟ್ ಮಾಡಲು ಒಂದು ದೊಡ್ಡ ಹ್ಯಾಂಡಲ್ . ಆ ಇಂಜಿನ್‌ನಿಂದ ಹಲ್ಲರ್ ವರೆಗೆ ಒಂದು ದಪ್ಪ ಬೆಲ್ಟ್.
ಈ ಇಂಜಿನ್ ಸ್ಟಾರ್ಟ್ ಮಾಡಿದರೆ ಭಯಂಕರ ಶಬ್ದ. ಇಡೀ ಮನೆ ಅಡಿದ ಅನುಭವ. ಕೊಟ್ಟಿಗೆಯಲ್ಲಿದ್ದ ದನ ಕರುಗಳು,
ನಾಯಿ ಬೆಕ್ಕುಗಳು ಮಿಲ್ಲು ಆರಂಭವಾದ ದಿನಗಳಲ್ಲಿ ಕಂಗೆಟ್ಟು ಕೂಗುತ್ತಿದ್ದವು. ಅಂತಹ ಸದ್ದು ಕೇಳಿ ಎಲ್ಲರೂ ನಮ್ಮ ಮಿಲ್ಲು
ನೋಡಲು, ಅಕ್ಕಿ ಮಾಡುವುದನ್ನು ಕಾಣಲು ಬಂದರು. ಇನ್ನು ಮನೆಯ ಹೊರಗಿನ ಪುಟ್ಟ ಅಂಗಳದ ಬದಿಗಿದ್ದ ಮರಗಳನ್ನೆಲ್ಲ ಕಡಿದು, ನೆರಳು ರಹಿತ ದೊಡ್ಡ ಅಂಗಳ ನಿರ್ಮಾಣವಾಯಿತು. ಹತ್ತು ಮುಡಿ ಭತ್ತ ಹಿಡಿಯುವ ದೊಡ್ಡ ಕೊಪ್ಪರಿಗೆ ಬಂತು.
ಅದರೊಳಗೆ ಹಾಕುವ ಕಣ್ಣು ಕಣ್ಣು ಕಬ್ಬಿಣದ ಅಂತರ, ಕೊಪ್ಪರಿಗೆ ಹೂಡಲು ದೊಡ್ಡ ಒಲೆ, ನೀರು ತುಂಬಿಸಲು ಟ್ಯಾಂಕಿ ವ್ಯವಸ್ಥೆ, ಪೈಪ್ ಲೈನ್ ಎಲ್ಲಾ ಮಾಡಿಸಿ ಅಂತೂ ಅಕ್ಕಿ ಗಿರಣಿಯ ವ್ಯವಸ್ಥೆ ಆಯ್ತು. ಭತ್ತ ಬೇಯಿಸಿದ ನಂತರ ಅದರ ನೀರನ್ನು ಹೊರಗೆ ಬಿಡುವ ವ್ಯವಸ್ಥೆಯೂ ಆಯ್ತು. ಈ ನೀರು ಸರಿಯಾಗಿ ವಿಲೇವಾರಿ ಮಾಡದಿದ್ದರೆ ಆ ಪರಿಸರ ಪೂರ್ತಿ ತೆಳಿ ಕೊಳೆತ ವಾಸನೆ ಬರುತ್ತದೆ. ನಮ್ಮ ಮನೆಯ ತೀರಾ ಹಿಂಭಾಗದಲ್ಲಿ ಈ ವ್ಯವಸ್ಥೆ ಮಾಡಿದರು. ಆ ವಠಾರಕ್ಕೆ ನಾವ್ಯಾರೂ ಹೋಗುತ್ತಿರಲಿಲ್ಲ. ಅಷ್ಟು ವಾಸನೆಯ ಜಾಗವದು. ಒಂದು ಶುಭ ಮುಹೂರ್ತದಲ್ಲಿ ನಮ್ಮ ಮನೆಯ ಭತ್ತ ಕೊಪ್ಪರಿಗೆ ಅಲಂಕರಿಸಿತು.
ಕೊಪ್ಪರಿಗೆಗೆ ಭತ್ತ ಮುಳುಗುವಷ್ಟು ನೀರು ತುಂಬಿಸಲಾಯಿತು. ಆ ದಿನ ಸಂಜೆ ಉಮಿ ಬಳಸಿ ಸತತ ಮೂರು ಗಂಟೆ ಉರಿ ಹಾಕಲಾಯ್ತು. ಭತ್ತ ಬೇಯಿಸುವ ಕಾಯಕ ಧ್ಯಾನ ಮಾಡಿದಂತೆ. ಒಂದೊಂದೆ ಹಿಡಿ ಉಮಿಯನ್ನು ಎರಡು ಮೂರು ಗಂಟೆ ಒಲೆಯೊಳಗೆ ಎಸೆಯುತ್ತಾ ಬೇಯಿಸಿ ಮುಚ್ಚಿಡಬೇಕು. ಈಗ ಭತ್ತ ಅರ್ಧ ಬೆಂದು ಸುತ್ತಲೂ ಪರಿಮಳ ಬರುತ್ತದೆ. ಮರುದಿನ ಬೆಳಗಿನ ಜಾವ ಪುನಃ ಒಂದು ಗಂಟೆ ಇದೇ ರೀತಿ ಉರಿ ಹಾಕಿ ಭತ್ತ ಬೇಯಿಸಬೇಕು. ಈಗ ಭತ್ತ ಪೂರ್ತಿ ಒಡೆದು ಒಳಗಿನಿಂದ
ಅನ್ನವಾಗಿ ಅರಳುತ್ತದೆ.ಒಂದೆರಡು ಗಂಟೆಗಳ ಬಳಿಕ ಈ ಕೊಪ್ಪರಿಗೆಯ ತಳಭಾಗದಲ್ಲಿ ಇಟ್ಟ ಒಂದು ತೂತಿನ ಮುಚ್ಚಳ
ತೆಗೆಯಬೇಕು. ಆಗ ಭತ್ತ ಬೆಂದ ನೀರೆಲ್ಲ ಹೊರಹೋಗುತ್ತದೆ.
ಆಮೇಲೆ ಈ ಭತ್ತವನ್ನು ದೊಡ್ಡ ಕಬ್ಬಿಣದ ಸಟ್ಟುಗದಿಂದ ತೆಗೆದು ಬೆತ್ತದ ಹೆಡಿಗೆಯಲ್ಲಿ ತುಂಬಿಸಿ, ಸೆಗಣಿ ಗುಡಿಸಿ ಸ್ವಚ್ಚಗೊಳಿಸಿದ
ಕಣ (ಅಂಗಳ)ಕ್ಕೆ ತಂದು ದೂರದಲ್ಲಿ ಸುರಿಯಬೇಕು. ನಂತರ ಕೈಗೋರಿಯಿಂದ ತೆಳುವಾಗಿ ಸಮತಟ್ಟಾಗಿ ಹರಡಬೇಕು. ಇಷ್ಟು
ಕೆಲಸ ಬೆಳಗಿನ ಎಂಟುಗಂಟೆಯೊಳಗೆ ಮುಗಿಯಬೇಕು. ಬಿಸಿಲೇರುವ ಮೊದಲು ಈ ಕೆಲಸವಾಗದಿದ್ದರೆ ಆಮೇಲೆ ಭತ್ತ ಒಣಗುವುದಿಲ್ಲ. ಕೆಲಸ ಮಾಡುವವರು ಬಿಸಿಲಿನಲ್ಲಿ ಒಣಗಬೇಕಾಗುತ್ತದೆ.
ಸಂಜೆಯವರೆಗೆ ಈ ಭತ್ತವನ್ನು ಮುಟ್ಟುವಂತಿಲ್ಲ. ನಾಯಿ,ಬೆಕ್ಕು, ದನ ಈ ಅಂಗಳದತ್ತ ಸುಳಿಯದಂತೆ, ಮಂಗಗಳು ದಾಳಿ ಇಡದಂತೆ ಕಾಯಬೇಕು. ಮಳೆ ಬರುವ ಮುನ್ಸೂಚನೆ ಇದ್ದರೆ ಕೂಡಲೇ ಭತ್ತ ರಾಶಿ ಮಾಡಿ ಮುಚ್ಚಿಡಬೇಕು. ಒಂದು ದಿನದ ಬಿಸಿಲಿನ ನಂತರ ಸಂಜೆ ಭತ್ತವನ್ನು ಉದ್ದನೆಯ ಏರಿ ಏರಿ ಮಾಡಿ ಮುಚ್ಚಿಡುತ್ತಾರೆ. ಮರುದಿನ ಬೆಳಗ್ಗೆ ಎಂಟುಗಂಟೆಯೊಳಗೆ ಪುನಃ ಈ ಭತ್ತದ ಏರಿಯನ್ನು ಹರಡಿ ಒಣಗಿಸಬೇಕು. ಎರಡನೇ ದಿನ ಬಿಸಿಲೇರಿದಂತೆ ಹಲ್ಲುಗೋರಿಯಿಂದ ಆಗಾಗ ಭತ್ತವನ್ನು
ಮುಗುಚುತ್ತಾ ಇರಬೇಕು. ಈ ಎರಡನೇ ದಿನ ರಾತ್ರಿ ಭತ್ತವನ್ನು ಹನಿ (ಇಬ್ಬನಿ) ಎರಗಲು ಬಿಡುತ್ತಾರೆ.
ಮೂರನೇ ದಿನ ಪುನಃ ಬಿಸಿಲಿನಲ್ಲಿ ಒಣಗಿದ ಭತ್ತವು ಗಟ್ಟಿಯಾಗಿ ರಾಶಿ ಮಾಡುವಾಗ ಝಲ್ ಗಲ್ ಎಂದು ವಿಶಿಷ್ಟ ಸದ್ದು ಮಾಡುತ್ತದೆ. ಈ ಭತ್ತ ಹಲ್ಲರ್ ಒಳಗೆ ಸೇರುತ್ತದೆ. ಮೊದಲ ಪಾಲಿಶ್‌ಗೆ ಭತ್ತದ ತೊಗಲು ಉಮಿ ಹಾರಿ ಹೋಗುತ್ತದೆ. ಇದೇ ಉಮಿಯನ್ನು ಪುನಃ ಭತ್ತ ಬೇಯಿಸಲು ಉಪಯೋಗಿಸುತ್ತಾರೆ. ಎರಡನೇ ಪಾಲಿಶ್ ಗೆ ಕೆಂಪಕ್ಕಿ ಲಭಿಸುತ್ತದೆ. ಈ ಕೆಂಪು ಕೊಚ್ಚಕ್ಕಿ ಹಳ್ಳಿಗರ ಅಚ್ಚುಮೆಚ್ಚು. ಮೂರನೇ ಪಾಲಿಶ್‌ಗೆ ಸತ್ವ ಇಲ್ಲದ ಹೊಂಬಣ್ಣದ ಅಕ್ಕಿ ಮಾಡಬಹುದು.
ಹಲ್ಲರ್‌ನ ಮೇಲ್ಬಾಗದಲ್ಲಿ ಒಂದು ಕೊಳವೆಯ ಮೂಲಕ ಉಮಿ ಹೊರಗೆ ಹಾರುತ್ತದೆ. ಅಕ್ಕಿ ಮಾಡುವವರ ಮುಖ ಮೈಗೆಲ್ಲ ತೌಡಿನ ಅಭಿಷೇಕ. ಹಲ್ಲರ್ ಮುಂಭಾಗದಲ್ಲಿ ಇಡುವ ಹೆಡಿಗೆಗೆ ಅಕ್ಕಿ ಬೀಳುತ್ತದೆ. ಹಲ್ಲರ್ ಹಿಂಭಾಗದಲ್ಲಿ ತೌಡಿನ ಶೇಖರಣೆ ಆಗುತ್ತದೆ. ಭತ್ತ ಒಣಗಿಸಲು, ಅದನ್ನು ರಾಶಿ ಮಾಡಲು, ಮಿಲ್ಲಿನೊಳಗೆ ರವಾನಿಸಲು, ಹಲ್ಲರ್‌ನೊಳಗೆ ತುಂಬಲು, ಅಕ್ಕಿ ಚೀಲ
ಮಾಡಲು ಕನಿಷ್ಠ ಮೂರ್ನಾಲ್ಕು ಜನ ಬೇಕೆ ಬೇಕು. ಇದನ್ನೆ ಅಮ್ಮ, ನಾವು ನಾಲ್ವರು ಮಕ್ಕಳು ಮಾಡುತ್ತಿದ್ದೆವು. ಅಪ್ಪಯ್ಯ
ಹಲ್ಲರ್‌ಗೆ ಭತ್ತ ತುಂಬುವ ಕೆಲಸ, ಕೊಪ್ಪರಿಗೆಗೆ ಭತ್ತ ತುಂಬಿ ಬೇಯಿಸುವ ಕೆಲಸ ಮಾಡುತ್ತಿದ್ದರು.
ಕೆಲವೊಮ್ಮೆ ಅಪ್ಪಯ್ಯನಿಗೆ ಬಿಡುವಿಲ್ಲದಿzಗ ರಾಮ ಎಂಬ ಒಬ್ಬ ಆಳು, ಬಾಬಿ, ಗೌರಿ ಎಂಬಿಬ್ಬರು ಆಳುಗಳು ಈ ಎ ಕೆಲಸಗಳಿಗೆ
ಸಹಾಯ ಮಾಡುತ್ತಿದ್ದರು. ನಮ್ಮೂರಿನ ಕೆಲವು ಮನೆಯವರು ಸಹ ನಮ್ಮ ಮಿಲ್ಲಿನಲ್ಲಿ ಅಕ್ಕಿ ಮಾಡಿಸಿಕೊಂಡು ಹೋಗುತ್ತಿದ್ದರು.
ಅಕ್ಕಿ ಮಾಡುವ ದಿನಗಳಲ್ಲಿ ನಾವೆಲ್ಲ ಶಾಲೆಗೆ ಹೋದಾಗ ಅಮ್ಮನಿಗೆ ಮೈಮಂಡೆ ಕೆಲಸz ರಾಶಿ. ಮಳೆ ಬರುವ ಸೂಚನೆ ಇದ್ದರಂತೂ ಅಷ್ಟು ದೊಡ್ಡ ಅಂಗಳದ ಭತ್ತ ರಾಶಿ ಮಾಡುವ ಕಾಯಕ ಬಹಳ ಕಷ್ಟ. ಅಮ್ಮನಿಗೆ ಒಂದೆಡೆ ಕಾಲುನೋವು.
ಸೊಂಟವಂತೂ ಶೋಭಾನೆ ಆಗುತ್ತಿತ್ತು. ಕೆಲಸ ಮಾಡದಿದ್ದರೆ ಹಾಳಾಗುವುದಲ್ಲ ಎಂಬ ಸಂಕಟ. ಹತ್ತು ವರ್ಷ ನಾವು ಮಿಲ್ಲಿನ ಮಾಲಿಕರಾಗಿzವು. ಆಮೇಲೆ ಸ್ಟೋನ್‌ಲೆಸ್ ಅಕ್ಕಿ ಮಾರುಕಟ್ಟೆಯಲ್ಲಿ ದೊರೆಯಲು ಆರಂಭವಾಯ್ತು. ಬೇಸಾಯ ಮಾಡುವವರು
ಕಡಿಮೆಯಾದರು. ಅಪ್ಪಯ್ಯನ ಉಮೇದು ಕಡಿಮೆಯಾಗುತ್ತಾ ಬಂತು. ಅಪ್ಪಯ್ಯನ ಯುವ ಮಿತ್ರ ಹೆಮ್ಮಾಡಿಯ ಚಂದ್ರ
ಭಟ್ರು ಅಕ್ಕಿ ಮಿಲ್ಲಿನ ಅಷ್ಟೂ ಸಲಕರಣೆಗಳನ್ನು ಖರೀದಿಸಿ, ಹೆಮ್ಮಾಡಿಯಲ್ಲಿ ಅಕ್ಕಿ ಗಿರಣಿ ಆರಂಭಿಸಿದರು.
ಅಕ್ಕಿ ಮಿಲ್ಲಿನಿಂದ ಲಾಭವಂತೂ ಆಗಲಿಲ್ಲ. ಆದರೆ ಚಿಕ್ಕವಳಿದ್ದಾಗಲೇ ಯಾಂತ್ರಿಕ ಜಗತ್ತಿನ ಪರಿಚಯವಾಯ್ತು. ಯಂತ್ರಗಳು ಕೆಲಸ ಮಾಡಿದರೂ ಅದರ ಹಿಂದೆ ಮಾನವ ಶ್ರಮ ಎಷ್ಟು ಬೇಕೆಂಬ ಅರಿವಾಯ್ತು. ಆ ಕಾಲದಲ್ಲಿ ಹಳ್ಳಿಯಲ್ಲಿ ರೈತನೊಬ್ಬ , ಕೈಯಲ್ಲಿ ಪುಡಿಕಾಸು ಇರದೆ, ಕೈ ಸಾಲ ಮಾಡಿಕೊಂಡು, ಯಾವುದೇ ಸಬ್ಸಿಡಿ ಇಲ್ಲದೆ, ತನ್ನ ಛಲದಿಂದ ಸಣ್ಣ ಉದ್ಯಮ ಆರಂಭಿಸಿ ಹಲವಾರು ಯುವಕರಿಗೆ ಸ್ಪೂರ್ತಿಯ ಸೆಲೆಯಾದ ರೀತಿ, ಮಿಲ್ ಸ್ಥಾಪಿಸಲು ಅಪ್ಪಯ್ಯಮಾಡಿದ ಸಾಹಸದ ಕುರಿತು ಹೆಮ್ಮೆ ಇಂದಿಗೂ ಇದೆ.